ಅಭಯ

ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ –  “ಅಭಯ”
ಲೇಖಕರು : ರಮೇಶ್ ಶೆಟ್ಟಿ ರೆಂಜಾಳ

ಆ ರಾತ್ರಿ ನಿದ್ದೆಯಲ್ಲಿ ಆಣತಿಯೊಂದು ಕೇಳಿಬಂತು, “ಈಶ, ಈ ಬಾರಿ ನಿನ್ನ ಹಾಜರಾತಿ ಅಗತ್ಯ…” ಯಾರದ್ದು ಆ ಧ್ವನಿ? ಕನಸೋ, ಸ್ಮರಣೆಯೊ? 

ಮರು ಬೆಳಿಗ್ಗೆ,”ಈ ಬಾರಿ ಡಿಸೆಂಬರಲ್ಲಿ ಬೆರ್ಕೆಯಲ್ಲಿ ನೇಮ ಇದೆಯಂತೆ,” ತಂಗಿ ವಿಭಾ ಫೋನಲ್ಲಿ ಹೇಳಿದ ಕ್ಷಣ,ರಾತ್ರಿಯ ಅಗೋಚರ ಆಣತಿ ನೆನಪಾಗಿ ಈಶನೆದೆ ಲಘುವಾಗಿ ಕಂಪಿಸಿತು. “ಹೌದೆ? ಯಾರು ಆಯೋಜಿಸುತ್ತಿದ್ದಾರೆ? ನಿಖರ ದಿನಾಂಕ ಗೊತ್ತೆ?” ನಿಶ್ಚಲ ಸ್ವರದಲ್ಲಿ ವಿಚಾರಿಸಿದ. 

ವಿಭಾ ಉತ್ತರಿಸಿದಳು, “ಇನ್ನೂ ಪುರೋಹಿತರು ದಿನ ನಿಗದಿ ಮಾಡಿಲ್ಲ; ಆದರೆ ಸೋಮೇಶನ ಹರಕೆಯ ನೇಮವಂತೆ.” ಫೋನ್ ಕಟ್ ಆದರೂ, “ಬೆರ್ಕೆಯಲ್ಲಿ ನೇಮ” ಎಂಬ ಆ ಒಂದು ಮಾತು ಈಶನ ಕಿವಿಗಳಲ್ಲಿ ಪಾಡ್ಡನದ ಧ್ವನಿಯಂತೆ ಮರುಕಳಿಸುತ್ತಿತ್ತು.ವರ್ಷಗಳಿಂದ ಊರಿಗೆ ಹೋಗಿರಲಿಲ್ಲ. ಆದರೆ ಈ ಬಾರಿ ಅದೇನೋ ಮತ್ತೆ ಮತ್ತೆ ಕೂಗಿ ಕರೆದಂತಿದೆ! ವರ್ಷದ ಕೊನೆಯಲ್ಲಿ ಟ್ರೈನ್ ಟಿಕೆಟ್ ಸಿಗುವುದು ಅಸಾಧ್ಯವೆಂದು ಮನವರಿಕೆಯಾಗಿ ತಕ್ಷಣ ಆನೈನ್ ಟಿಕೆಟ್ ಬುಕ್ ಮಾಡಿದ ಈಶ. ಹಿರಿ ಸೋದರ ಶಂಭಣ್ಣನ ಮನೆಯಲ್ಲಿ ಒಡಹುಟ್ಟಿದವರು ಜೊತೆಯಾದಾಗ ಈಶನೇ ನೇಮದ ವಿಷಯವೆತ್ತಿ ಅವರನ್ನೂ ಆಗಮಿಸುವಂತೆ ಆಹ್ವಾನಿಸಿದ. ತಮ್ಮ ಜಯ ಮತ್ತು ತಂಗಿ ವಿಭಾ, ‘ನಾವು ಪ್ರಯತ್ನಿಸುವೆವು’ ಎಂದರೆ ಶಂಭಣ್ಣ ಮಾತ್ರ ‘ನೋಡೋಣ..’ ಎಂದು ಸುಮ್ಮನಾದ. 

*** 

ಕುಟುಂಬದ ಹಿರಿಯರು ಬಾಳಿ ಬದುಕಿದ ಬೆರ್ಕೆ ಮನೆಯೊಂದು ನೆನಪುಗಳ ಹೂವಿನ ತೋಟ! ಈಶ ಜನಿಸಿದ ವರ್ಷವೇ ಅರ್ಥಾತ್ 58 ವರ್ಷಗಳ ಹಿಂದೆ ಆತನ ಮುತ್ತಜ್ಜಿ ನಿರ್ಮಿಸಿದ ಮನೆಯದು! ಮುಖ್ಯ ಬಾಗಿಲೆದುರು ದೊಡ್ಡ ಚಾವಡಿ, ಅಲ್ಲೊಂದು ದೈವ ಮಂಚ; ಪಕ್ಕದಲ್ಲಿ 1 ಕೋಣೆ, ಮೇಲೆ ಅಟ್ಟ, ಎದುರಿಗೆ ಸಮಕೋನದಲ್ಲಿ ಜಗಲಿ, ಜಗಲಿಗಂಟಿ 2 ಅಡುಗೆ ಕೋಣೆಗಳು,ಜಗಲಿಯ ಮಹಡಿ ಮೇಲೆ 1 ಅಟ್ಟ ಮತ್ತೆರಡು ಕೋಣೆಗಳು, ಚಾವಡಿಯ ಎಡಬದಿಯಲ್ಲೊಂದು ಪಡಸಾಲೆ, ಅದಕ್ಕೆ ಹೊಂದಿಕೊಂಡಂತೆ ಸಮಕೋನದಲ್ಲೊಂದು ಹಟ್ಟಿ ಮತ್ತು ಸ್ನಾನದ ಕೊಠಡಿ..ಹೀಗೆ ಅಂದಿಗೆ ವಿಶಾಲವಾದ ಹೆಂಚಿನ ಮನೆಯಾಗಿತ್ತದು. ಮುತ್ತಜ್ಜಿಯ 4 ಹೆಣ್ಮಕ್ಕಳಲ್ಲಿ ಇಬ್ಬರ ಸಂಸಾರ ಇಲ್ಲೇ ವಾಸವಾಗಿದ್ದರೆ,ಇನ್ನಿಬ್ಬರಿಗೆ ಬೇರೆಯೇ ಮನೆ ಮಾಡಿ ಕೊಟ್ಟಿದ್ದರು,ಆ ಕಾಲಕ್ಕೆ ಶ್ರೀಮಂತೆಯೇ ಆಗಿದ್ದ ಈಶನ ಮುತ್ತಜ್ಜಿ! ಹಿರಿಯ ಮಗ ಮುದ್ದಣ ಮನೆಯ ಯಜಮಾನರಾದರು. ಕಿರಿ ಮಗ ಸಾಂಬ ಮುಂಬೈ ಸೇರಿಕೊಂಡರು.ಈಶನ ಮುತ್ತಜ್ಜಿ ಕುಟುಂಬವು ಪಂಜುರ್ಲಿ ದೈವವನ್ನು ನಂಬಿಕೊಂಡು ಬಂದಿದ್ದು ಚಾವಡಿಯಲ್ಲಿ ಅದಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟಿದ್ದರಿಂದ ಬೆರ್ಕೆಯೇ ಕುಟುಂಬದ ಮುಖ್ಯಮನೆಯಾಗಿ ಆನಂತರದ 4 ಪೀಳಿಗೆಗೂ ಉಳಿದುಕೊಂಡಿದೆ. ಮುತ್ತಜ್ಜಿಯ 2ನೇ ಮಗಳಾದ ಅಚ್ಚಮ್ಮನ ಹಿರಿಮಗಳು ನಳಿನಾಕ್ಷಿಯ ಮಗನಾಗಿದ್ದಾನೆ ಈಶ. ಪ್ರಾಥಮಿಕ ಶಿಕ್ಷಣದವರೆಗೆ ಸಹೋದರರೊಂದಿಗೆ ಚಿಕ್ಕಮ್ಮನ ಮಕ್ಕಳ ಸಹಿತ ಅಲ್ಲೇ ನೆಲೆಸಿದ್ದರಿಂದ ಬೆರ್ಕೆಯೆಂದರೆ ಈಶನಿಗೆ ವಿಶೇಷ ಆಸ್ಥೆ . ಅದೀಗ ಶಿಥಿಲಾವಸ್ಥೆಯಲ್ಲಿದೆ.ಅದನ್ನು ಜೀರ್ಣೋದ್ಧಾರ ಮಾಡಿ ಹೊಸ ಮನೆ ನಿರ್ಮಿಸಿ ಕೊಡುವವರು ಯಾರು?ಎನ್ನುವುದು ಈಶನ ಮನವನ್ನು ಸದಾ ಕೊರೆಯುತ್ತಿರುವ ಯಕ್ಷಪ್ರಶ್ನೆ! ಬೆರ್ಕೆಯ ಹಳೆ ಕಟ್ಟಡ ಕೆಡಹಿ ಹೊಸ ರೂಪು ರಂಗು ನೀಡಿ ಪುಟ್ಟದಾದರೂ ಚೊಕ್ಕ ತಾರಸಿ ಮನೆ ಕಟ್ಟಬೇಕು ಎನ್ನುವುದು ಈಶನ ಮನದಿಂಗಿತ. ಆದರೆ ಎಲ್ಲರನ್ನೂ ಒಗ್ಗೂಡಿಸುವ ಹೊಣೆ ಹೊರುವಷ್ಟು ಸಂಘಟನಾ ಚತುರತೆ ತನಗಿಲ್ಲ ಎನ್ನುವುದೇ ಆತನ ಕೊರಗು. ಹಾಗಾಗಿ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದನಾತ. 

******* 

ನೇಮದ ದಿನ ಈಶ, ಅಮ್ಮ ಹಾಗೂ ತಮ್ಮ, ತಂಗಿಯರೊಂದಿಗೆ ಬೆರ್ಕೆಗೆ ಆಗಮಿಸಿದ್ದ. ಶಂಭಣ್ಣ ಮಾತ್ರ ಮುಂಬೈಯ ತನ್ನ ಹೊಟೇಲಲ್ಲಿ ಕೆಲಸದವರು ಕಡಿಮೆ ಇದ್ದುದರಿಂದ ಬರಲಾಗದೆ ಮುಂಗಡ ಖರೀದಿಸಿದ್ದ ರೈಲು ಟಿಕೆಟ್ ಕೂಡಾ ಕ್ಯಾನ್ಸಲ್ ಮಾಡಿಸಿದ್ದ! 

ಬೆರ್ಕೆಯಲ್ಲಿ ಪಂಜುರ್ಲಿಯ ಮಂಚದ ಕೆಳಗೆ ಕೇಪುಳದೆಸಳುಗಳು ಬಿದ್ದಿದ್ದವು. ನಳಿನಾಕ್ಷಿ ಅಮ್ಮ ಮಂಚದತ್ತ ಕಣ್ಣು ಹಾಯಿಸಿ ಉಸುರಿದರು,“ನೋಡು ಈಶ…ಈ ಮಂಚದ ಮುಂಭಾಗದಲ್ಲೇ ನಿನ್ನ ಹುಟ್ಟು ಆಯಿತು.” ಈಶ ಕಣ್ಣು ಮುಚ್ಚಿಕೊಂಡ. “ಹೌದಮ್ಮ, ಆದರೆ ಈಗ ಈ ಮನೆಯೇ ಉಸಿರಾಡುತ್ತಿಲ್ಲ!”. 

ರಾತ್ರಿ ಬಯಲಿನಲ್ಲಿ ವನಭೋಜನದ ರೀತಿ ಕುಟುಂಬಿಕರೆಲ್ಲರ ಊಟ ಮುಗಿದು, ಚಾವಡಿಯಿಂದ ನೇಮ ನಡೆಯುವ ವಿಶಾಲ ಅಂಗಳಕ್ಕೆ ಭಂಡಾರ ಇಳಿದಾಗ ಸಮಯ ಎಂಟಾಗಿತ್ತು. ಕುಟುಂಬದ ಪಂಜುರ್ಲಿ ಪಾತ್ರಿಯು ಎಣ್ಣೆ-ಬೂಳ್ಯ ಸ್ವೀಕರಿಸಿದ ಕ್ಷಣ,ದೈವ ಮೈಮೇಲೆ ಏರಿತು.ಅವನ ಕಣ್ಣುಗಳಲ್ಲಿ ಮಿಂಚು,ಮೈಯಲ್ಲಿ ಅಗ್ನಿ! 

ಈಶ ವೀಡಿಯೋ ತೆಗೆದು ಫ್ಯಾಮಿಲಿ ಗ್ರೂಪ್‌ಗೆ ಕಳುಹಿಸಿದ. 

ಅದೇ ಕ್ಷಣ ಮುಂಬೈಯ ಶಂಭಣ್ಣನ ಮೊಬೈಲ್ ಕಂಪಿಸಿತು.ವೀಡಿಯೋ ಓಪನ್ ಮಾಡಿದ ಆತ ನಡುಗಿದ. ಕ್ಯಾಮೆರಾ ಕಣ್ಣಿನಲ್ಲಿ ಪಂಜುರ್ಲಿ ನೇರವಾಗಿ ನೋಡುತ್ತಿದ್ದಂತಿತ್ತು! ವೀಕ್ಷಿಸಿದ ಶಂಭಣ್ಣ ಎಷ್ಟು ಹೊತ್ತಿಗೆ ಭಂಡಾರ ಇಳಿಯಿತೆಂದು ಈಶನನ್ನು ವಿಚಾರಿಸಿದ. ‘ಈಗಷ್ಟೇ..’ ಎಂದುತ್ತರಿಸಿ ಈಶ ಮೊಬೈಲ್ ಸ್ತಬ್ಧವಾಗಿಸಿದ. ಇದಾಗಿ 1 ಗಂಟೆಯ ಬಳಿಕ ನೇಮ ಆರಂಭವಾಯಿತು. ‘ಗಗ್ಗರ ದೀಪೆ’ ಎಂದು 3 ಬಾರಿ ಉಚ್ಚರಿಸಿ ಕುಟುಂಬದ ಮಟ್ಟಾರ ಪಂಜುರ್ಲಿ ಗಗ್ಗರ ಸೇವೆ ಕೈಗೊಂಡಾಗ, ಅದುರುವ ಭೂತಾವೇಶ ಉಚ್ಛಾಯ ಸ್ಥಿತಿಗೇರಿತು. ನೋಡುಗ ದೈವ ಭಕ್ತರ ಮೈ ರೋಮಾಂಚನಗೊಂಡಿತು.ಕೆಲವರ ಮೈಮೇಲೆ ದೈವಾವೇಶ ಬಂದು ಕೆಳಗುರುಳಿ ಅಬ್ಬರಿಸತೊಡಗಿದರು. ಮೊತ್ತೇಸರರೂ, ಮಧ್ಯಸ್ಥರೂ ಸಾಂತ್ವನ ನುಡಿದ ಬಳಿಕ ಅವರು ಯಥಾಸ್ಥಿತಿಗೆ ಮರಳಿದರು! ಗಗ್ಗರ ಸೇವೆಯ ಬಳಿಕ ಭೂತವು ಅಣಿ ಕಟ್ಟಿ, ವರಾಹ ಮುಖವಾಡ ಧರಿಸಿ, ಪಾಡ್ಡನ ಸಹಿತ ಗೈದ ದೈವನರ್ತನ, ವಿನೂತನ ಶೈಲಿ ಹಾಗೂ ವೈವಿಧ್ಯತೆಗಳೊಂದಿಗೆ ನೆರವೇರಲ್ಪಟ್ಟು ನೆರೆದ ಮಂದಿಯ ಚಿತ್ತಾಕರ್ಷಣೆ ಹಾಗೂ ಭಯ ಭಕ್ತಿ ಪೂರ್ಣ ದೈವೀಕ ಮನರಂಜನೆಗೆ ಕಾರಣವಾಯಿತು. ಕುಟುಂಬಿಕರಿಂದ ಹರಕೆಯ ಕಾಣಿಕೆ ದೈವಕ್ಕೆ ಸಲ್ಲಿಸಿದ ಬಳಿಕ ಕುಟುಂಬಿಕರ ಅಹವಾಲುಗಳನ್ನು ದೈವದೆದುರು ಉಸುರುವ ಸಂದರ್ಭ..ಈಶನ ಚಿಕ್ಕಿಯ ಹಿರಿಮಗ ರವಿ, ತನ್ನ ಮೇಲೆ ‘ಮುರಿಯ’ ಹಾಕಿರುವ ಬಗ್ಗೆ ಕುಟುಂಬದೊಳಗಿನ ಅಜ್ಞಾತ ಸಂಬಂಧಿಕರ ಮೇಲೆ ಆರೋಪ ಹೊರಿಸಿದ.”ನಾನು ಕಳೆದ 10 ವರ್ಷಗಳಿಂದ ನೇಮ ಆಯೋಜಿಸಿಕೊಂಡು ಬಂದಿದ್ದೇನೆ. ಆದ್ದರಿಂದ ಕುಟುಂಬ ಕೂಟದೊಳಗೆ ನನ್ನ ಪ್ರಭಾವ ಹೆಚ್ಚಿದೆ. ಇದರ ಲಾಭವೆತ್ತಿ ಬೆರ್ಕೆಯ ಆಸ್ತಿ ಪಾಲಿನಲ್ಲಿ ನನ್ನಜ್ಜಿಯ ಪಾಲಿಗೆ ಹೆಚ್ಚು ಜಾಗ ಬರೆಯಿಸಿದ್ದೇನೆಂದು ದಾಯಾದಿಗಳಲ್ಲಿ ಕೆಲವರು ನನಗೆ ಶಾಪ ಹಾಕಿದ್ದಾರೆಂದು ಜೋಯಿಸರು ಹೇಳಿದ್ದಾರೆ. ಅದರಿಂದ ನನಗೆ ನರದೋಷವುಂಟಾಗಿ ಸರ್ಜರಿ ಮಾಡಿಸಬೇಕಾಯಿತು. ಮುದ್ದಣಜ್ಜರು ಆಸ್ತಿಯನ್ನು ಪಾಲುಮಾಡುವಾಗ ಅವರ ಮಕ್ಕಳು- ಮೊಮ್ಮಕ್ಕಳಿಗೆ ಅಗ್ರ ಪಾಲಿತ್ತಿದ್ದಾರೆ. ಉಳಿದ 4 ಎಕ್ರೆಗಳನ್ನು 4 ಪಾಲು ಮಾಡಿ ಅವರ ಸೋದರಿ ಮಕ್ಕಳಿಗೆ ನೀಡಿದ್ದಾರೆ. ಕುಟುಂಬದ ಮನೆಯನ್ನು ಮಾತ್ರ ನಮ್ಮಜ್ಜಿಯ ಮಕ್ಕಳಾದ ಅಮ್ಮ, ದೊಡ್ಡಮ್ಮ ಮತ್ತು ಮಾವನ ಹೆಸರಿಗೆ ಬರೆಸಿದ್ದಾರೆ.

ಆಗ ಅವರೇ ಆದೇಶಿಸಿರುವಂತೆ ನಾನು ಮತ್ತು ದೊಡ್ಡಮ್ಮನ ಮಗ ಶಂಭಣ್ಣ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದೇವೆ. ಆಗಲೇ ತಮಗೂ ಹಕ್ಕು ಬೇಕೆಂದು ಇತರ ಯಾರಾದರೂ ಮುಂದೆ ಬರುತ್ತಿದ್ದರೆ ಅವರ ಹೆಸರು ಸೇರಿಸುವುದಕ್ಕೆ ನಮ್ಮದೇನೂ ತಕರಾರಿರಲಿಲ್ಲ. ಈಗ ಮುದ್ದಣಜ್ಜನವರು ತೀರಿ ಐದಾರು ವರ್ಷಗಳಾದ ನಂತರ ಈ ರೀತಿ ಶಾಪ ಹಾಕುವುದು ಎಷ್ಟು ಸರಿ? ಇದಕ್ಕೆ ನೀನೇ ಒಂದು ಪರಿಹಾರ ನೀಡಬೇಕು’ ರವಿ ಪಂಜುರ್ಲಿಯೆದುರು ತನ್ನ ವಾದ ಮಂಡಿಸಿದ. ಆ ಕ್ಷಣ ಈಶನ ಅಜ್ಜಿಯ ತಂಗಿಯ ಮಗಳಾದ ಶೀಲ ಚಿಕ್ಕಿಯವರು ಪ್ರತಿಕ್ರಿಯಿಸಿ,” ಮನೆಯಲ್ಲಿ ನಮಗೂ ಪಾಲು ಸಿಗಬೇಕಾಗಿತ್ತು. ನಮ್ಮ ತಾಯಿಯೂ ಇಲ್ಲಿದ್ದರು. ಆಸ್ತಿ ಪಾಲು ಮಾಡುವಾಗ ನಾವಿರದಿದ್ದರೇನಾಯಿತು? ಈಗ ನಮಗೆ ನೀನೇ ನ್ಯಾಯ ದೊರಕಿಸಿಕೊಡಬೇಕು ಪಂಜುರ್ಲಿ” ಎಂದು ಹಕ್ಕಿನ ಪ್ರಶ್ನೆಯೆಸೆದು,”ನಾವೇನೂ ಯಾರಿಗೂ ಶಾಪ ಹಾಕಿಲ್ಲ’ ಎಂದೂ ಸೇರಿಸಿದರು. ‘ಕುಂಬಳ ಕಾಯಿ ಕಳ್ಳ ಹೆಗಲು ಮುಟ್ಟಿಕೊಂಡ’ ಎಂದು ನೆರೆದವರು ಗೊಳ್ಳನೆ ನಕ್ಕರು! 

ಆಸ್ತಿ ಪಾಲಿಗೆ ಎಲ್ಲರೂ ಬರುತ್ತಾರೆ. ಕುಟುಂಬದ ಕಾರ್ಯ ಕಲಾಪಗಳಿಗೆ ಯಾರೂ ಬರುವುದಿಲ್ಲ. 4 ದಿನಗಳ ಮೊದಲಷ್ಟೇ ಮಾವ ಹರಕೆಯಾಟವನ್ನು ಆಡಿಸಿದಾಗ ಕುಟುಂಬಸ್ಥರೆಲ್ಲರೂ ಹಾಜರಿರಲಿಲ್ಲ. ಇವತ್ತಿನ ನೇಮದಲ್ಲೂ ಕೆಲವರು ಬಂದಿಲ್ಲ. 

ಕುಟುಂಬದ ಕೆಲಸ-ಚಟುವಟಿಕೆಗಳಲ್ಲಿ ಭಾಗಿಯಾಗದೆ ಕೇವಲ ಮನೆಯ ಹಕ್ಕಿಗಾಗಿ ಕಿತ್ತಾಡುವುದು ಎಷ್ಟು ಸಮ? ಇದನ್ನೆಲ್ಲಾ ಕುಟುಂಬದ ಪಂಜುರ್ಲಿಯಾದ ನೀನೇ ಸರಿ ಪಡಿಸಬೇಕು..” ರವಿ ಪುನಃ ತನ್ನ ಮಾತುಗಳನ್ನು ಮಧ್ಯಸ್ಥರ ಸಮಕ್ಷಮ ಹೊರ ಹಾಕುತ್ತಲೇ ಪಂಜುರ್ಲಿ ದೈವ ಓsssವ್..’ ಎಂದು ಒಕ್ಕಣಿಗೆ ಕೊಟ್ಟು ಎಲ್ಲರೂ ಸುಮ್ಮನಾಗುವಂತೆ ಸೂಚನೆಯಿತ್ತಿತು. ನನ್ನ ಕುಟುಂಬದಲ್ಲಿ ಒಗ್ಗಟ್ಟು ಇಲ್ಲದಿರುವ ಮಾತು ತಾನೇ ಮಧ್ಯಸ್ಥರೇ..ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಅಲ್ಲವೇ.. ಆಸ್ತಿಯಲ್ಲಿ ಸಮಪಾಲು ಸಿಕ್ಕಿಲ್ಲವೆಂಬ ತಕರಾರು ತಾನೇ…” 

ಹೌದು ಮಟ್ಟಾರ ಪಂಜುರ್ಲಿ, ನೀನೇ ಸೂಕ್ತದಾರಿ ತೋರಿಸಬೇಕು..” ಮಧ್ಯಸ್ಥರು ಭಯ ಭಕ್ತಿಯಿಂದ ಉತ್ತರಿಸಿದರು. ” ಮನೆಯಲ್ಲಿ ಪಾಲು ಕೇಳುವ ಮೊದಲು ಇವರು ನನ್ನ ಚಾವಡಿಯ ಅವಸ್ಥೆಯನ್ನು ನೋಡಿರುವರೇ..ನನ್ನ ತಂಗಿ ವರ್ತೆಗೆ ಮನೆಯ ಹೊರಭಾಗದಲ್ಲಿ ಹೊಸ ಸ್ಥಾನ ಕಟ್ಟಿ ಕೊಟ್ಟಿದ್ದೇನೋ ಸರಿಯೇ..ಆದರೆ ಒಳಚಾವಡಿಯಲ್ಲಿರುವ ನನ್ನ ಚಾವಡಿಯ ಜೀರ್ಣೋದ್ಧಾರಕ್ಕೆ ಇನ್ನೆಷ್ಟು ಸಮಯ ಕಾಯಬೇಕು?ಮೊದಲು ಹೊಸ ಚಾವಡಿ ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಲಿ. ಎಲ್ಲರೂ ಸೇರಿ ನೆಮ್ಮದಿಯ ತಾಣ ಕಲ್ಪಿಸಿಕೊಡಲಿ. ಅಲ್ಲಿಯವರೆಗೆ ನನಗೆ ಯಾವುದೇ ರೀತಿಯ ನೇಮ ಬೇಡ. ಈ ಮಾತಿಗೆ ಎಲ್ಲರ ಅಭಿಪ್ರಾಯವನ್ನು ತಿಳಿಸಲು ಕುಟುಂಬಿಕರೆಲ್ಲರನ್ನೂ ಈಗಲೇ ಇಲ್ಲಿ ಬರಹೇಳಿ ಮಧ್ಯಸ್ಥರೇ..” ತಕ್ಷಣ ಈಶನ ಮುತ್ತಜ್ಜಿಯ 4 ಹೆಣ್ಮಕ್ಕಳ ವಂಶಿಕರು ಪಂಜುರ್ಲಿಯ ಮುಂದೆ ಆಯಾ ಗುಂಪುಗಳಾಗಿ ನಿಂತರು. ಎಲ್ಲರೂ ಒಗ್ಗೂಡಿ ನನಗೊಂದು ನವೀನ ಚಾವಡಿ ನಿರ್ಮಿಸುವಿರಿ ತಾನೆ?” ಪಂಜುರ್ಲಿ ಉವಾಚ. 

“ನಿನ್ನ ಇಚ್ಛೆಯಂತಾಗಲಿ ಪಂಜುರ್ಲಿ. ನಾಳೆಯೇ ನಾವೆಲ್ಲಾ ಚರ್ಚಿಸಿ ಕಾರ್ಯಗತಗೊಳಿಸಲು ಮುಂದಾಗುತ್ತೇವೆ. ಅನಂತರ ನ್ಯಾಯಸಮ್ಮತ ನಮಗೆ ಸಿಗಬೇಕಾಗ ಜಾಗ ಮಾತ್ರ ಸಮಪಾಲಲ್ಲಿ ಸಿಗುವಂತಾಗಬೇಕು…ನೀನೇ ಕಾಪಾಡಬೇಕು” ಶೀಲ ಚಿಕ್ಕಿ ಮುಂದಾಳತ್ವ ವಹಿಸಿ ಮಾತುಕೊಟ್ಟರು. ರವಿಯೂ ಸರಿಯೆಂದ. ” ಓsssವ್…ಎಲ್ಲರ ಒಪ್ಪಿಗೆ ಸಿಕ್ಕ ಹಾಗಾಯಿತಲ್ಲವೇ ಮಧ್ಯಸ್ಥರೇ..?” ಪಂಜುರ್ಲಿ ದೃಢೀಕರಿಸಿಕೊಂಡು ತನ್ನ ಅಭಯದ ಮಾತು ಮುಂದುವರಿಸಿತು, 

“ನಿಮಗೆಲ್ಲರಿಗೂ ನ್ಯಾಯ ಸಮ್ಮತ ಸಮಪಾಲಿನ ವ್ಯವಸ್ಥೆಯನ್ನು ಮುಂದಿನ ಗಗ್ಗರ ಸೇವೆಯಲ್ಲಿ ನವೀನ ಚಾವಡಿಯಲ್ಲಿ ನಾನು ನೋಡಿಕೊಳ್ಳುತ್ತೇನೆ. ಸದ್ಯ ನನ್ನ ಆದೇಶ ಪಾಲಿಸಲು ನನ್ನ ಸಮಕ್ಷಮ ಹಾಜರಿರುವ ನೀವೆಲ್ಲರೂ ಸರ್ವ ಸಮ್ಮತದಿಂದ ಒಪ್ಪಿಕೊಂಡಿದ್ದೀರಿ. ಇಲ್ಲಿ ಈಗ ಹಾಜರಿರದವರನ್ನು ಕರೆದು ತಂದು ನಿಲ್ಲಿಸುವ ಅಭಯ ನನ್ನದಾಗಿದೆ. ಸರಿ, ನಾನೀಗ ಮಾಯಲೋಕ ಸೇರಿಕೊಳ್ಳಲು ಅನುಮತಿ ಕೋರುತ್ತೇನೆ” ಪಂಜುರ್ಲಿ ಹಿಂಗಾರದ ಹೂವಿನೆಸಳ ಅಭಯ ನೀಡಿ ಮೊತ್ತೇಸರರ ಕೋರಿಕೆಯಂತೆ ಪರಕಾಯಪ್ರವೇಶ ಮುಕ್ತವಾಗಿ ಅಂತರ್ಧಾನಯಿತು! ಇದೆಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ 1ಗಂಟೆಯಾಗಿತ್ತು ಮತ್ತು ಆಗಲೇ ಮುಂದೆ ನಡೆಯಲಿರುವ ‘ವರ್ತೆ’ ಭೂತದ ನೇಮಕ್ಕೆ ತೆಂಬರೆ- ಪಾಡ್ಡನದೊಂದಿಗೆ ‘ನಲಿಕೆ’ಯ ಪಾತ್ರಧಾರಿಯ ಬಣ್ಣದ ವೇಷ ತಯಾರಾಗುತ್ತಿತ್ತು. 

10 ನಿಮಿಷದ ಬಳಿಕ ನೇಮದಂಗಣದಿಂದ ದೂರದಲ್ಲಿ ಕಾರಿನ 2 ಹೆಡ್ ಲೈಟುಗಳು ಮಿನುಗುತ್ತಿರುವುದು ಕಂಡಿತು. ಯಾರೋ ಸ್ಥಳೀಯರು ನೇಮಕ್ಕೆ ತಡವಾಗಿ ಆಗಮಿಸುತ್ತಿರಬಹುದೆಂದು ಈಶ ಊಹಿಸುತ್ತಿರಲು ಸನಿಹ ಬಂದೇ ಬಿಟ್ಟ ಕಾರಿನಿಂದ ಇಳಿದವನು ಶಂಭಣ್ಣ! 

ನೇಮದ ಅಂಗಳಕ್ಕೆ ಕಾಲಿಟ್ಟವನೇ ಎಲ್ಲರಿಗೂ ವಂದಿಸಿ ಆಸೀನನಾದ ಕ್ಷಣ ಅಂಗಳದ ತುಂಬೆಲ್ಲಾ ಅಚ್ಚರಿಭರಿತ ಮುಖಗಳ ಗುಸು ಗುಸು ಪಿಸುಮಾತು ರಿಂಗುಣಿಸಿತು,” ಅಲ್ಲ ಮಾರಾಯ್ಕೆ ಮಟ್ಟಾರ ಪಂಜುರ್ಲಿ ಕುಟುಂಬದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸದವರನ್ನು ಕರೆತಂದು ನಿಲ್ಲಿಸುವ ಭರವಸೆಯಿತ್ತ 15 ನಿಮಿಷದೊಳಗೆ ಇವ ಬಂದಿದ್ದಾನೆಂದರೆ ದೈವ ತನ್ನ ಕಾರ್ಣಿಕ ತೋರಿಸಲಾರಂಭಿಸಿದೆ.!” 

ಅಚ್ಚರಿಯ ಅಂಶವೆಂದರೆ,ಈಶ ವಾಟ್ಸಪ್ ನಲ್ಲಿ ಹರಿಯಬಿಟ್ಟಿದ್ದ ವೀಡಿಯೋ ನೋಡಿದ ಬಳಿಕ, ಶಂಭಣ್ಣನ ಮನದಾಳದಲ್ಲಿ ತಾನು ಹೇಗಾದರೂ ಇಂದಿನ ನೇಮಕ್ಕೆ ಹಾಜರಿರಲೇ ಬೇಕೆಂಬ ಜಾಗೃತಿ ಮೂಡಿತ್ತು! ಆದ್ದರಿಂದ ತನ್ನ ಮ್ಯಾನೇಜರ್ ಗೆ ತಿಳಿಸಿ ಆನ್ ಲೈನ್ ನಲ್ಲಿ ಸಿಕ್ಕ ವಿಮಾನದ ಟಿಕೆಟ್ ಪಡೆದು ತಕ್ಷಣವೇ ಊರಿಗೆ ಹೊರಟು ರಾತ್ರಿ ಈ ಹೊತ್ತಿಗೆ ತಲುಪಿದ್ದ..! 

ಅದೇನೇ ಇದ್ದರೂ ಎಲ್ಲರೂ ಅಂದುಕೊಂಡಂತೆ ಮರುದಿನದ ಕುರಿತಂಬಿಲದ ಬಳಿಕ ಕುಟುಂಬಸ್ಥರು ಸೇರಿ ವರ್ಷವೊಂದರೊಳಗೆ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ಪಂಜುರ್ಲಿಯ ಚಾವಡಿ ಸಹಿತ ಬೆರ್ಕೆಯ ಮನೆ ನಿರ್ಮಿಸುವ ನಿರ್ಣಯ ಕೈಗೊಳ್ಳಲಾಯಿತು.ಅದಕ್ಕೆ ಶಂಭಣ್ಣ ಮತ್ತು ರವಿಯ ಮುಂದಾಳತ್ವವೆಂದೂ ನಿರ್ಧಾರವಾಯಿತು.. ಕುಟುಂಬದ ಹೊಸ ಮನೆಯ ನಿರ್ಮಾಣದ ಬಗ್ಗೆ ಈಶನ ಮನವನ್ನು ಕೊರೆಯುತ್ತಿದ್ದ ಪ್ರಶ್ನೆಗೆ ಸುಲಲಿತವಾಗಿ ಪರಿಹಾರ ಸೂಚಿಸಿದ ಕುಟುಂಬ ದೈವಕ್ಕೆ ಮನಸ್ಸಿನಲ್ಲೇ ವಂದಿಸಿದ ಈಶ. 

*** 

ಇದಾಗಿ 6 ತಿಂಗಳ ತನಕ ಯಾರೂ ‘ಚ’ಕಾರವೆತ್ತದಿರಲು ಇನ್ನಷ್ಟು ಕಾಯಲಾಗದೆ ಈಶ ಊರಿನ ಬಿಲ್ಡರ್ ರಾಕೇಶರಲ್ಲಿ ಮಾತಾಡಿ ಇತರರೊಡನೆ ಸಮಾಲೋಚನೆ ನಡೆಸಿದ ಬಳಿಕ ಒಟ್ಟು ಖರ್ಚಿನಲ್ಲಿ ಶಂಭಣ್ಣ ಮತ್ತು ರವಿ ತಲಾ 30% ನೀಡುವುದೆಂದೂ,ಉಳಿದ 40% ನ್ನು ಈಶ,ವಿಭಾ ಮತ್ತು ಜಯ ಭರಿಸುವುದೆಂದೂ ನಿರ್ಣಯವಾಯಿತು.ಇತರ ಕುಟುಂಬ ಸದಸ್ಯರು ಒಂದಿಲ್ಲೊಂದು ನೆಪ ಹೇಳಿ ಹಿಂದೆ ಸರಿದರು! ಪುರೋಹಿತರಲ್ಲಿ ದಿನ ಕೇಳಿ ಭೂತದ ಮಣೆಯ ‘ಚರ’ ಮಾಡಲಾಯಿತು ಮತ್ತು ಹಳೆಯ ಮನೆ ಕೆಡವಿ ಪಂಚಾಂಗ ಹಾಕುವಾಗ ಮೊದಲ ಕಂತು ಕಟ್ಟಲು ರಾಕೇಶ್ ಬೇಡಿಕೆಯಿಟ್ಟರು. ತಕ್ಕಂತೆ ಶಂಭಣ್ಣ,ಈಶ,ವಿಭಾ ಮತ್ತು ಜಯ ತಮ್ಮ ಪಾಲಿನ ಹಣವಿತ್ತರು. ರವಿ ತಾನು ನಂತರ ನೀಡುವುದಾಗಿ ಜಾರಿಕೊಂಡ. ಬಳಿಕದ ದಿನಗಳಲ್ಲಿ ರವಿ ಮೊಬೈಲ್ ಕರೆ ಎತ್ತದಿದ್ದಾಗ ಸಂಶಯಾಸ್ಪದವೆನಿಸಿತು. ಆತನ ಪತ್ನಿಗೆ ಶಂಭಣ್ಣ ಫೋನಾಯಿಸಲು ಆಕೆ,ರವಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿರುವುದರಿಂದ ಆತ ಹಿಂಜರಿದಿರುವುದಾಗಿ ತಿಳಿಸಿದಳು! ಇನ್ನೊಂದಾರು ತಿಂಗಳಲ್ಲಿ ಮನೆ ಪೂರ್ತಿ ನಿರ್ಮಾಣವಾಗಿ ಗೃಹ ಪ್ರವೇಶವಾದರೂ ರವಿ ನಯಾ ಪೈಸೆ ನೀಡಲಿಲ್ಲ! ಗೃಹ ಪ್ರವೇಶದಂದು ಆತ ಬಂದಿದ್ದರೂ ಆತನ ವರ್ತನೆ ಉದ್ಧಟತನದ್ದಾಗಿತ್ತು. ತಾನು ಕುಟುಂಬಕ್ಕಾಗಿ ಖರ್ಚು ಮಾಡಿದಷ್ಟೂ ನಷ್ಟ ಅನುಭವಿಸಿದ್ದರಿಂದ ನನಗೆ ದೈವವೂ ಬೇಡ, ಕುಟುಂಬವೂ ಬೇಡವೆಂದು ದೂರವೇ ಉಳಿದ. 

ರಾಕೇಶರು ಈಗ ಪೂರ್ತಿ ಹಣಕ್ಕೆ ಬೇಡಿಕೆಯಿಡಲು ಆತ ಕವಡೆ ಕಾಸೂ ಬಿಚ್ಚಲಿಲ್ಲ! ಅನ್ಯವಿಧಿಯಿಲ್ಲದೆ, “ಮುಂದೆ ದೈವ ನೋಡಿಕೊಳ್ಳುತ್ತದೆ” ಎಂದು ಶಂಭಣ್ಣನೇ ರವಿಯ 30%ಪಾಲು ಕೂಡಾ ಭರಿಸಿದನು. ಇದಾಗಿ 3 ತಿಂಗಳಲ್ಲಿ ಕುಟುಂಬದ “ಮುಡುಪಿನ ಹಣ’ವನ್ನು ಕುಟುಂಬಸ್ಥರೆಲ್ಲಾ ಸೇರಿ ತಿರುಪತಿಗೆ ಕೊಂಡೊಯ್ಯುವಾಗ ಮಾತ್ರ ರವಿ ಮುಂದಾಳತ್ವ ವಹಿಸಿದ. ಆಗ ಶಂಭಣ್ಣ ಸೋದರರಿಗೆ ಆತನ ಹುನ್ನಾರ ನಿಚ್ಚಳವಾಯಿತು. ಮನೆ ನಿರ್ಮಾಣಕ್ಕೆ ತನ್ನ ಪಾಲಿನ ಹಣ ನೀಡದೆ ಹೋದ ಮರ್ಯಾದೆಯನ್ನು ಮರಳಿ ಪಡೆದು ತಾನು ಕುಟುಂಬ ಸದಸ್ಯರೆದುರು ಜನಪ್ರಿಯತೆ ಗಳಿಸಿಕೊಳ್ಳಲು ಆತನೀಗ ಮುಂದಾಳತ್ವ ವಹಿಸಿದ್ದ! ದೈವದ ಚಾವಡಿಗೆ ಹಣ ನೀಡಲು ಹಿಂಜರಿದಾತ ಈಗ ಕುಟುಂಬಸ್ಥರೆದುರು ಮಿಂಚಲು ಬಂದರೆ ದೈವ ಬಿಡುವುದೆ?!ಎನ್ನುವುದು ಈಶ ಸೋದರರ ನಂಬಿಕೆಯಾಗಿತ್ತು. ಇನ್ನು ರವಿಯ ಸಹವಾಸವೇ ಬೇಡವೆಂದು ಮುಡುಪು ಕೊಂಡೊಯ್ಯಲು ಅವರು ಜೊತೆಯಾಗಲಿಲ್ಲ.ಅವರಿಗೆ ದೈವದ ಅಭಯದ ಮೇಲೆ ಭಕ್ತಿ ಭರವಸೆಯಿತ್ತು. ಅಂತೆಯೇ ನಂಬಿದವರಿಗೆ ಇಂಬು ನೀಡುವ ಪಂಜುರ್ಲಿ- ವರ್ತೆ ತಮ್ಮ ತೀರ್ಪನ್ನು ಇತ್ತೇ ಬಿಟ್ಟರು. ತಿರುಪತಿಗೆ ಆಯ್ದ ಕುಟುಂಬ ಸದಸ್ಯರೊಂದಿಗೆ ಟ್ಯೂರಿಸ್ಟ್ ಬಸ್ಸಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನ ನೆಲಮಂಗಲದ ಸನಿಹ ಬಸ್ಸು ಗಂಭೀರ ಅಪಘಾತಕ್ಕೀಡಾಯಿತು! ಇತರರಿಗೆ ಅಲ್ಪ ಪ್ರಮಾಣದ ಹಾನಿಯಾಗಿ ರವಿಗೆ ಮಾತ್ರ ಗಂಭೀರ ರೂಪದ ಗಾಯವಾಗಿತ್ತು! ಆತನ ಕೈಕಾಲುಗಳು ಮುರಿದು 3 ತಿಂಗಳು ಆಸ್ಪತ್ರೆವಾಸ ಅನುಭವಿಸಬೇಕಾಯಿತು. ಆದರೂ ಸಂಪೂರ್ಣ ವಾಸಿಯಾಗಲು ಅಸಾಧ್ಯವಾಯಿತು.ಮುಂಚಿನಂತಾಗದೆ ವಾಕರ್ ಸಹಾಯ ಪಡೆದು ನಡೆಯುವಂತಾಯಿತು.ಈಗ ರವಿಗೆ ತಪ್ಪಿನ ಅರಿವಾಗಿ ತನ್ನ ವಾಗ್ದಾನ ಪ್ರಕಾರ 30% ಮನೆ ನಿರ್ಮಾಣ ಖರ್ಚಿನ ಹಣವನ್ನು ಶಂಭಣ್ಣನಿಗೆ ನೀಡಿ ತಪ್ಪಾಯಿತೆಂದು ಕ್ಷಮೆ ಕೋರಿದ. 

ಹೊಸ ಮನೆ ನಿರ್ಮಾಣದ ಬಳಿಕ ನವಚಾವಡಿಯಲ್ಲಿ ವರ್ತೆ-ಪಂಜುರ್ಲಿಗೆ ತಾನೇ ನೇಮ ನೀಡುವುದಾಗಿ ಘೋಷಿಸಿದ. ನಂತರದ 2 ತಿಂಗಳಲ್ಲಿ ನಡೆದ ನೇಮಕ್ಕೆ ಹಾಜರಾಗುವಾಗ ವಾಕರ್ ರಹಿತನಾಗಿ ರವಿ ನಡೆದುಕೊಂಡು ಬಂದಿದ್ದ! ದೈವದ ಚಾವಡಿ ಮತ್ತು ಬೆರ್ಕೆಯ ಹೊಸ ಮನೆ ನಿರ್ಮಾಣದ ಖರ್ಚಿಗೆ ಇತರ ಯಾವುದೇ ಕುಟುಂಬ ಸದಸ್ಯರು ಪಾಲು ನೀಡಲು ಮುಂದಾಗದ ಕಾರಣ ಈ ಬಾರಿಯ ನೇಮದಲ್ಲಿ ಶೀಲಾ ಚಿಕ್ಕಿಯಾದಿಯಾಗಿ ಅವರ್ಯಾರೂ ಮನೆ ಮತ್ತು ಜಾಗದ ಪಾಲಿನ ಬಗ್ಗೆ ಚಕಾರವೆತ್ತಲಿಲ್ಲ. ಕುಟುಂಬದ ಪಂಜುರ್ಲಿಯಿತ್ತ ಅಭಯ ಸುಳ್ಳಾಗಲಿಲ್ಲ! 

****** ಶುಭಂ****** 

ಕೆಲವು ತುಳು ಶಬ್ದಾರ್ಥಗಳು. 

ಚರ:- ಭೂತ ದೈವದ ಮಂಚವನ್ನು ಕ್ರಮಪ್ರಕಾರ ಮನೆಯ ಚಾವಡಿಯಿಂದ ಪುರೋಹಿತರ ಸಮಕ್ಷಮ ತೆಗೆದು ತಾತ್ಕಾಲಿಕವಾಗಿ ಹಲಸಿನ ಮರದಲ್ಲಿ ಸಂರಕ್ಷಿಸಿಡುವುದು. 

ಮುಡುಪು:- ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಕುಟುಂಬಸ್ಥರು ಸಂಗ್ರಹಿಸಿದ ಹಣದ ಕುಡಿಕೆ. 

ನೇಮ:- ತುಳುವ ಸಮುದಾಯದಲ್ಲಿ ಮುಸ್ಸಂಜೆಯಿಂದ ಮುಂಜಾನೆಯವರೆಗೆ ನಡೆಯುವ ದೈವಿಕ ಸಮಾರಂಭ. ಇಲ್ಲಿ ದೈವದ ಆತ್ಮವು ತಾತ್ಕಾಲಿಕವಾಗಿ ತನ್ನ ಕಾಯದೊಳಗೆ ಆಕ್ರಮಿಸಿಕೊಳ್ಳಲು ದೈವ ಪಾತ್ರಿಯು ಮಾಧ್ಯಮವಾಗಿ ಬಣ್ಣ, ವೇಷ -ಭೂಷಣಗಳೊಂದಿಗೆ ಕಾರ್ಯನಿರ್ವಹಿಸುತ್ತಾನೆ. 

ಅಣಿ:- ದೈವವು ತನ್ನ ಸೊಂಟ ಹಾಗೂ ತಲೆಯ ಹಿಂಭಾಗ ಧರಿಸುವ ಬೆಳ್ಳಿ ಸಾಮಾಗ್ರಿ ಸಹಿತ ಅಗಲವಾದ ಅರ್ಧಚಂದ್ರಾಕಾರದ ವೇಷಭೂಷಣ. 

ಪಾಡ್ಡನಗಳು:-ದೈವಗಳ ಹುಟ್ಟು,ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ತುಳು ಕಥನ-ಕವನಗಳು. 

ಎಣ್ಣೆಬೂಳ್ಯ:- ದೈವದ ವೇಷ ಧರಿಸಲು ಆರಂಭಿಸುವ ಮುನ್ನ ಪಾತ್ರಧಾರಿ ಮೊತ್ತೇಸರರಿಂದ ಸಾಂಕೇತಿಕವಾಗಿ ಎಣ್ಣೆ- ವೀಳ್ಯ ಪಡೆದು ಅನುಮತಿ ಕೋರುವ ಪದ್ಧತಿ. 

ತೆಂಬರೆ:- ಡೋಲನ್ನು ಹೋಲುವ ಅದಕ್ಕಿಂತ ಚಿಕ್ಕ ಗಾತ್ರದ, ಕೋಲಿನಿಂದ ಬಡಿದು ವಾದಿಸುವ ವಾದ್ಯ ಸಾಧನ. 

ಮುರಿಯ:-ಶಾಪ. 

***** 

Leave a Comment

Your email address will not be published. Required fields are marked *

Scroll to Top