ಲೇಖಕರು : ಮೈತ್ರಿ ಶೇಷಾದ್ರಿ
ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ – ಆಸ್ಪತ್ರೆ!!! ಅಪ್ಸತ್ರೆ???
ಆಸ್ಪತ್ರೆ!!! ಅಪ್ಸತ್ರೆ???
ಆರೋಗ್ಯವೇ ಭಾಗ್ಯ..ಫ್ರೀ ಆಗಿ ಸಿಗೋ ಆರೋಗ್ಯಕ್ಕೆ ದುಡ್ಡು ಯಾಕೆ ಖರ್ಚು ಮಾಡ್ಬೇಕು ಹೇಳಿ..ಹುಟ್ಟು ಸಾವು ಎರಡಕ್ಕೂ ಸಾಕ್ಷಿಯಾಗೋದು ಸಾಮಾನ್ಯ ಆಸ್ಪತ್ರೆನೇ ಅಲ್ಲವೇ ,ಈಗ ಹೀಗೊಂದು ಕಥೆ ಶುರುವಾಗೋದು ಬ್ಯಾಡರಕೊಪ್ಪಲಿನ ಜಿಲ್ಲಾಸ್ಪತ್ರೆ ಇಂದಾನೆ…
ಬ್ಯಾಡರಕೊಪ್ಪಲಿನ ಬಡ್ಕಣ್ಣ..ತಮಟೆ ಬಡಿಯೋದ್ರಲ್ಲಿ ಫೇಮಸ್ ಊರಲ್ಲಿ ಯಾರೇ ಶಿವನ ಪಾದ ಸೇರಿದ್ರೂ ತಮಟೆ ಬಡಿಯೋ ಕಾಯಕ ಇವನಿಗೆ ಹಿರಿಯರಿಂದ ಬಂದ ಬಳುವಳಿ…ಇಂತಿಪ್ಪ ನಮ್ಮ ಬಡ್ಕಣ್ಣನಿಗೆ ಅವನ ,ಅಪ್ಪ ಸತ್ರೆ!! ಇನ್ನೆಷ್ಟು .. ಬಡ್ಕೋಬೇಡ ಹೇಳಿ.. ಬಡ್ಕಾ ಮತ್ತು ಮೆಂತ್ಯ ಜಿಗರಿ ದೋಸ್ತ್..
ಒಂದು ದಿನ….
ಮೆಂತ್ಯ: ಲೆ ಲ್ ಲೇ .ಅಯ್ಯೋ ನಿನ್ನ .. ಬಡ್ಕ ಜಲ್ದಿ ಬಾರ್ಲಾ ಇತ್ತ..
ಬಡ್ಕಾ: ಯಾಕ್ಲಾ ಮೆಂತ್ಯ..ಏನ್ ವಿಷ್ಯ.. ಯಕಿಂಗಾಡೀಯೇ,, ಬರ್ತೀನಿ ತಡ್ಕ ಒಸಿ ಗದ್ದೆಗೆಲ್ಲ ನೀರು ಹಾಯಿಸಿ ಬತೀನು
ಮೆಂತ್ಯ: ಅದ್ಕೆಲ್ಲ ಟೈಮ್ ಇಲ್ಲಲೇ. ಪ್ಯಾಟೆ ಆಸ್ಪತ್ರೆಲೀ, ನಿಮ್ಮಪ್ಪ ಸತ್ತಾನಂತೋ ಮಾರಾಯ !!ಅದ್ಕೆ ಬುಲಾವ್ ಬಂದೈತೆ ಬಾರ್ಲ ಬಿರ್ರನೇ..
ಬಡ್ಕ: ಏನು ನಮ್ಮಪ್ ಸತ್ನಂತ.. ನಿನ್ಗೇನಾದ್ರೂ ಗ್ಯಾನ ನೆಟ್ ಗೈತೋ ಎಂಗೆ..ನಿನ್ನೆ ತಂಕ ಸಂದಾಗಿದ್ದವ ಅಧೇಂಗೆ ಸಾಯ್ತಾನೋ..(ಬಾಯಿ ಬಾಯಿ ಬಡಿದುಕೊಳ್ಳುತ್ತ) ಅಯ್ಯೋ ಶಿವನೇ ಯಾಕಿಂಗ್ ಮಾಡಿದ್ಯೋ ದೇವರೇ..ಅಯ್ಯೋ ನಾನೀಗ ಏನ್ ಮಾಡ್ಲಿ..
…ಮೆಂತ್ಯ ತಮಟೆ ತಗ ಬರ್ಲಾ ಪ್ಯಾಟೆಗೆ 😅
ಮೆಂತ್ಯ: ಲೇ ನಿನ್ನ..ತಲೆ ನೆಟ್ಟಗೈತ ನಿಂಗೆ ಅಪ್ಪ ಸತ್ತವ್ಯನೆ ನೋಡಾಕ ಹೋಗ್ಬೇಕು ಬಿರ್ರನೆ ಬರ್ಲಾ ಅಂದ್ರೆ ತಮಟೆ ತಗಬೇಕಂತೆ.. ಥೂ ನಿನ್ನ್ ಬುದ್ಧಿಗಿಷ್ಟು..ಮೋಟಾರ್ ತಂದಿವ್ನಿ ಹಿಂದೆ ಬೇಗ ಕೂತ್ಕಾ ಹೊರಡಾವ..
ಬಡ್ಕ: (ದಾರೀಲಿ ಹೋಗೋವಾಗ)
ಅವ್ವ ಸೀತಕ್ಕ ..ನಮ್ಮಪ್ಪ ಸತ್ನಂತೆ ಕಣಕ್ಕ ..ನಾನು ತಬ್ಲಿ ಆಗೋದೇ ಕಣವ್ವ..(ಜೋರಾಗಿ ಅಳುತ್ತಾ)
ಅಯ್ಯೋ ಜೊಲ್ಯ ಕೇಳಿದ್ಯೆನೊ ಸುದ್ದಿಯ ನಮ್ಮಪ್ಪ ಶಿವನ್ ಪಾದ ಸೇರಿದನಂತೆ ಇನ್ಮ್ಯಾಕೆ ನೀನೆ ನಮ್ಮಪ್ ಇದ್ದಂಗೆ..ಅಯ್ಯೋ ಶಿವನೇ …
ಮೆಂತ್ಯ: ಅಯ್ಯಾ ಅಯ್ಯಾ ಲೇ,, ಬಡ್ಕ ಒಂದೇ ಸಮ ಬಡ್ಕಬೇಡ ಸುಮ್ಕಿರ್ಲ .. ಆ ಜೊಲ್ಯಾಂಗ್ ಇನ್ನೂ ಲಗ್ನ ನೇ ಆಗಿಲ್ಲ ಅವನು ನಿಂಗೆ ಅಪ್ಪನಾ..ಆಯ್ತು ಬಿಡು..
ಬಡ್ಕ: ಮೆಂತ್ಯ ಅಲ್ಲ ಕಣೋ ..ಅಪ್ಪ ಪ್ಯಾಟೆ ಹೋದಾವ್ ಅಲ್ ಹೆಂಗೆ ಸತ್ತ ..
ಮೆಂತ್ಯ: ಪ್ಯಾಟೆ ಆಸ್ಪತ್ರೆ ಇಂದ ಸುದ್ದಿ ಬಂದದೆ ನಾವೀಗ ಅಲ್ಲಿಗೆ ಹೋಗ್ಬೇಕು.
ಬಡ್ಕ: ಆಸ್ಪತ್ರೆ ..ಆಸ್ಪತ್ರೆಲ್ಲಿ ಯಾಕ್ಲಾ ಸತ್ತ .ಅಯ್ಯೋ ನಾನೇನು ಪಾಪ ಮಾಡಿನಿ…ಊರಲ್ಲಿ ಮನೇಲಿ ಎಲ್ಲಿ ಬೇಕಾದ್ರೂ ಬಿದ್ದು ಸತ್ತಿದ್ರೆ ಯಾರು ಬ್ಯಾಡ ಅಂತಿದ್ರು..ಆ ಪ್ಯಾಟೆ ಆಸ್ಪತ್ರೆಗೆ ಹೋಗಿ ಸಾಯ್ಬೇಕಿತ್ತಾ ಅಯ್ಯಯ್ಯೋ..ಬ್ಯಾಡ ಈ ದುಃಖ್ ಯಾವ ಶತೃಗೂ ಬ್ಯಾಡ..
ಮೆಂತ್ಯ: ಬಡ್ಕ ನೋಡು ಇದೇ ಆಸ್ಪತ್ರೆ..ಬಾ ನರ್ಶಮ್ಮನ ಕೇಳುವ..
ಅವ್ವ..ಅವ್ವ ಇಲ್ಲಿ ಒಬ್ರು ಸತಿದ್ದಾರೆ ಅಂತ ಸುದ್ದಿ ಬಂತು ಅವರು ನಮ್ಮವರು..ಈಗ ಎಲ್ಲಿದ್ದಾರೆ ಹೇಳ್ತೀರ??
ನರ್ಸ್: ನಗುತ್ತಾ…ಅಯ್ಯೋ ಯಾರೀ ನೀವು ಇದು ಆಸ್ಪತ್ರೆ ,,ಇಲ್ಲಿ ದಿನಾ ಹತ್ತು ಇಪ್ಪತ್ತು ಜನ ಸಾಯ್ತಾರೆ ಯಾರೋಂತ ಹೇಳೋದು .. ಅವರ್ ಹೆಸರು ಕುಲ ಗೋತ್ರ ಏನಾದ್ರೂ ಇದ್ರೆ ಕೊಡಿ ನೋಡ್ತೀನಿ..
ಬಡ್ಕ: ನರಸಮ್ಮ ಅಷ್ಟು ಜನ ದಿನಾಗ್ಲೂ ಸತ್ರೆ ..ಅವರಿಗೆಲ್ಲ ಇಲ್ಲಿ ತಮಟೆ ಹೊಡೆಯೂರು ಯಾರು..!?
ಮೆಂತ್ಯ: ಲೇ ಬಡ್ಕ ಸುಮ್ನಿರಾ ಲೇ..ಇವರ ಅಪ್ಪನೆ ತೀರ್ಕಂಡಿರಾದು ಕಣವ್ವ..ನಮ್ದು ಬ್ಯಾಡರಕೊಪ್ಪಲು ..ಇವನಪ್ಪ ಸುಮ್ಕ ಅಂತ ಊರಿಂದ ಹುಷಾರಾಗಿ ಬಸ್ ಹತ್ಕಂಡು ಬಂದವ ಈಗ ಇಲ್ಲಿ ಬಂದು ಸತ್ತೊಗವನ್ನೆ ಅಂತ ಹೇಳ್ತಾ ಅವ್ರೆ ಒಸಿ ನೋಡಿ ನರಸಮ್ಮ ..ಅದೇನಾಗದೆ ಅಂತವಾ
ನರ್ಸ್: ಸರಿ ..ಇಲ್ಲೇ ಕೂತೀರಿ ಬರ್ತೀನಿ.. ಹಾ ನಿಮ್ಮ ತಂದೆ ಹೆಸರು ಸುಮ್ಕಾ ಅಂತನಾ..ಅವರಿಗೆ ಅಂದಾಜು ವಯಸ್ಸು ಎಷ್ಟಾಗಿತ್ತು..
ಬಡ್ಕ: ನಮ್ಮಪ್ಪ ಬ್ರಿಟೀಷರ ಕಲ್ದಿಂದಾನೂ ತಮಟೆ ಹೊಡ್ಕಂಡು ಬಂದವ್ನೆ ..ಈಗ ಅಂದ್ರೆ ಒಂದು 60, 65 ಅಂತಿಟ್ಕಳಿ..ಹುಸಾರಾಗಿದ್ದ ನಮ್ಮಪ್ಪಾ ಅಯ್ಯೋ ನನ್ ಬಿಟ್ಟ್ ಹಿಂಗ್ ಹೋಗ್ತಾನೆ ಅಂಕಂಡಿರ್ಲಿಲ್ಲ..
ನರಸಮ್ಮ: ಏನಂದ್ರಿ ಬ್ರಿಟಿಷ್ ಕಾಲದವರ ..ಮತ್ತೆ ಹೆಂಗ್ರಿ 60,65 ಆಗತ್ತೆ ಕಮ್ಮಿ ಅಂದ್ರು ನಿಮ್ಮ ತಂದೆ ಗೆ 85 90 ವರ್ಷ ಆಗಿರತ್ತೆ ಬಿಡಿ..ಆಯ್ತು ಇಲ್ಲೇ ಕೂತಿರಿ ಚೆಕ್ ಮಾಡಿ ನೋಡೋಣ ,ಸಿಕ್ರೆ body identify ಮಾಡಿ ತಗೊಂಡು ಹೋಗಿ..
ಮೆಂತ್ಯ: ಹಂಗೆ ಆಗಲಿ ನರಸವ್ವ.. ಬಡ್ಕಾ ಬಾರ್ಲಾ ಇಲ್ಲೇ ಕಾಯವ ನರಸವ್ವ ಕರೆಯೋಗoಟ ಬಾ ಬಾ..
ನರ್ಸ್: ಇವರೇ ..ಇಲ್ಲಿ ಹಾ ಇಲ್ಲಿ ಬನ್ನಿ ..ನೋಡಿ ಇದು ಶವಾಗರ ಇಲ್ಲಿ.. ಎಲ್ಲ ತೀರಿ ಹೋಗಿರೋ
ಬಾಡಿಗಳನ್ನ ಮನೆಯವರು ಬಂದು ತಗೊಂಡು ಹೋಗೋವರೆಗೆ ಇಟ್ಟಿರುತಿವಿ ..ಈಗ ನಿಮ್ಮ ತಂದೆ ಬಾಡಿ ಯಾವುದು ಅಂತ ನೋಡಿ ಹೇಳಿ ..ಒಳಗೆ ನಡೀರಿ..
ಬಡ್ಕಾ: ಏನಾಲಾ !!? ಮೆಂತ್ಯ ಇದು ಹಿಂಗೇ..ಎಲ್ಲ ಹೆಣಗಳು ಬಿದ್ದವೇ ಎಂಗಲಾ ಇದರಾಗೆ ನಮ್ ಸುಮ್ಕಾ ಯಾರು ಅಂತ ಹೇಳದು.. ಅಯ್ಯಾ ಬ್ಯಾಡಪ್ಪ ಈ ಸಿಕ್ಷೆ..
ಮೆಂತ್ಯ: ನೋಡ್ಲಾ ಬರ್ಲಾ ಇನ್ನೇನ ಮಾಡಿಯೇ ನೀನು .. ಸುಮ್ಕೆ ಹಂಗೆ ಮುಖ ನೋಡಿ ಗುರ್ತು ಹಿಡಿವಾ ಬಾ ..ನೀನು ಮೂಗು ಮುಚ್ಕ ವಾಸನೆ ಗಿಸ್ನೆ ಏನೂ ಬರಕಿಲ್ಲ ನೋಡೀಗ ನಾನಿಲ್ವ ಒಸಿ ಧೈರ್ಯ ತಂಕ..
ಕೆಲ ಹೊತ್ತಿನ ನಂತರ…..
ಮೆಂತ್ಯ: ನರಸವ್ವ ನರಸವ್ವ..
ನರಸವ್ವ: ಏನ್ರೀ ಬಾಡಿ ಸಿಕ್ತಾ ..
ಬಡ್ಕಾ: ಅಯ್ಯೋ ಸಿವನೆ .. ಇಲ್ಲಪ್ಪೋ ಇಲ್ಲ ನಮ್ಮಪ್ಪ ಇಲ್ಲಿ ಮಲಗಿಲ್ಲ …ಎಲ್ಲಿ ಅನಾಥವಾಗಿ ಸಾಯೋಕೆ ಹೋದನೋ ಯಪ್ಪಾ.. ಇನ್ನು ನನ್ನ ಕೈಲಿ ಇಲ್ಲಿ ಇರಾಕ್ ಆಗಾಕಿಲ್ಲ …ಏನೋ ಒಂಥರಾ ದಿಗಿಲು ಆಗ್ತಾ ಐತೆ…ಮೆಂತ್ಯ ಏನಲ ಮಾಡೋದು..
ಮೆಂತ್ಯ: ಏ ಬಡ್ಕಾ ಅಲ್ಲಿ ನೋಡ್ಲಾ.. ನಮ್ ಸೀನಪ್ಪಗೌಡ್ರು ಊರ್ನೂರು ಜೊತೆ ಬರ್ತಾ ಅವ್ರೇ…
ಬಡ್ಕಾ: ಉಂ ಹೌದೌದು..ಇಲ್ಲಿಗೆ ಬರ್ತಾ ಅವ್ರೇ ..??
ಸೀನಪ್ಪ: ಓಹ್ ಮೆಂತ್ಯ ಬಡ್ಕಾ ಏನ್ರಲಾ ನೀವಿಲ್ಲಿ .. ಏನ್ ವಿಸ್ಯಾ..
ಬಡ್ಕಾ: ಗೌಡ್ರೆ .. ಅಯ್ಯೋ ಏನು ಅಂತ ಯಾವ ಬಾಯಿನಾಗೆ ಹೇಳಾದು ನಮ್ ಅಪ್ಪ ಈ ಆಸ್ಪತ್ರೇನಾಗೆ ಸತ್ನಂತೆ..ಆದ್ರೆ ಅವ್ನ ಹೆಣ ಮಾತ್ರ ಸಿಕ್ತಿಲ್ಲ ಈಗ ಏನ್ ಮಾಡಾದು ಗೌಡ್ರೆ ದಿಕ್ಕೇ ತೋಚದಂಗೆ ಆಗೈತೆ .. ಅಯ್ಯೋ ಸಿವನೆ..(ಅಳುತ್ತಾ)
ಮೆಂತ್ಯ: ಇಂಥ ಸಮಯದಾಗೆ ನೀವು ದ್ಯಾವ್ರು ಬಂದ ಹಾಗೆ ಬಂದಿದೀರಿ ನೀವೇ ಏನಾರ ಮಾಡಿ ಸುಮ್ಕನ್ ಹುಡುಕಿಸಿ ಕೊಟ್ರೆ,,, ಪಾಪ.. ಇಲ್ನೋಡಿ ಈ ಬಡ ಜೀವ ಬಡ್ಕಾ,ಆಗಿಂದ ಬಡಕಳಾದನ್ನ ನೋಡಕ್ ಆಗಕಿಲ್ಲ..ನಿಮಗೂ ಪುಣ್ಯ ಬರ್ತೈತೆ..
ಸೀನಪ್ಪ: ಹುಂ ಕಣ್ರಪ್ಪ.. ಪುಣ್ಯ ಅಂತೂ ಬರ್ಲಿಕ್ಕೆ ಬೇಕು , ಅಲ್ನೋಡು ನಿಮ್ಮಪ್ಪ ಸುಮ್ಕಾ ಅಲ್ವೆನ್ಲಾ ಸತ್ತೋನು ಎದ್ದು ಬಂದಂಗೆ , !! ಅವ್ನು ನಮ್ ಜೊತೆಗೇ ಊರಿಂದ ಬಂದವ್ನೆ ,!! ಯಾರಲ ಯೋಳಿದು ಸತ್ತ ಅಂತವಾ ಗುಂಡು ಕಲ್ಲಿದಂಗೆ ಇಲ್ಲೇ ಅವ್ನೇ.. ಥತ್ ನಿನ್ನಾ..ನನ್ ಸಂಕಟ ನಂಗೆ ಈ ಐಕಳಿಗೆ ಬೇರೆ ಕ್ಯಾಮೆ ಇಲ್ಲ ..ಬಿಡ್ರುಲ ದಾರಿಯ ..
(ಆಶ್ಚರ್ಯ ಆನಂದ ಎರಡನ್ನೂ ಪ್ರದರ್ಶಿಸುತ್ತಾ)
ಬಡ್ಕಾ: ಅರೆ ಇಸ್ಕಿ ಲೆ ಲೆ ಮೆಂತ್ಯ ನಿನ್ನ ಕತೆ ಮುಗೀತು ಅನ್ನಕ..ಯಾಕ್ಲಾ ಸುಳ್ಳು ಸುಳ್ಳು ಸುದ್ದಿ ತಂದು ಯೋಳಿದು ನೋಡ್ಲಾ ಎನ್ಗವ್ನೇ ನಮ್ಮಪ್ಪ..
ಮೆಂತ್ಯ: ಓ…ಹೌದಲ್ವಾ .!!.. ಇಲ್ಲಲಾ ..ನಾನು ಬಸ್ಯಾನ ಅಂಗಡಿನಾಗೆ ಕೂತಿದ್ನಾ, ಆಗ ಬಸ್ಯ ಪೋನ್ ನಾಗೆ ಯಾರ್ ಜೊತೆಗೋ ಮಾತಾಡ್ತಾ ..ಸುಮ್ಕಾ ಆಸ್ಪತ್ರೇಲಿ ಕೂತಿದ್ದೋನು ಹಂಗೆ ಪ್ರಾಣ ಬಿಟ್ಟ ಅಂದ ಕಣ್ಲಾ ..ಅದ್ಕೆ ಒಂದೇ ಉಸ್ರಿಗೆ ನಿಂಗೆ ತಿಳಿಸುವ ಅಂತಾ ಓಡ್ಕಂಡು ಬಂದೆ..
ಬಸ್ಯ: ಹುಂ ಅದ್ಕೆ ಹಿಂದೆ ಮುಂದೆ ಏನೂ ಕೇಳ್ದೆ ಅಲ್ಲಿಂದ ಹೆಂಗೆ ಓಟ ಕಿತ್ತ ಅಂದ್ರೆ ,,ಆಗಲೇ ಅನ್ಕಂಡೆ ಏನೋ ಎಡವಟ್ಟು ಆಯ್ತದೆ ಅಂತ .. ಇಲ್ಲಿ ಕೇಳ್ರೋ ,,ನಾನು ಪೋನ್ ನಾಗೆ ಮಾತಾಡಿದ್ದು ಸೀನಪ್ಪ ಗೌಡ್ರು ಅಪ್ಪ , ಈರಪ್ಪ ಗೌಡರ ಬಗ್ಗೆ ,,,ಆಸ್ಪತ್ರೆಗೆ ಅಂತ ಓದವರು ಡಾಕ್ಟ್ರು ಬರಾಕು ಮುಂಚೆನೇ ಬೆಂಚ್ ಮ್ಯಾಗೆ, ಸುಮ್ಕಾ ಕೂತಿದ್ರಂತೆ ಅಲ್ಲೇ ಪ್ರಾಣ ಬಿಟ್ರoತೆ ಅಂತವಾ.. . ಇದನ್ನ ಅರ್ಧಬರ್ಧ ತಿಳ್ಕಂಡು ನೋಡು, ಸುಮ್ಕ ಅನ್ನದಾನ ಮಾತ್ರ ಕೇಳ್ಕೊಂಡು ಈಟ್ ಪಜೀತಿ ಮಾಡವ್ನೇ ..
ಮೆಂತ್ಯ: ಹಂಗಾ.. ಅಯ್ಯೋ ನಂದೇ ತಪ್ಪಾತು..ಈರಪ್ಪೂರು ತೀರ್ಕಂಡ್ರ.. ಅದ್ಕೆ ಅನ್ಕಂಡೆ ಊರಿನೋರೆಲ್ಲ ಯಾಕ್ ಇಲ್ಲಿಗೆ ಬರ್ತಾ ಅವ್ರೇ ಅಂತ ..
ಬಡ್ಕಾ: ಥೂ ನಿನ್ನ ಆತುರಗೆಟ್ಟ ಬುದ್ಧಿಗಿಷ್ಟು..ಗೌಡ್ರೆ.. ನಮ್ ಈರಪ್ಪ ಗೌಡ್ರು ಸಿವನ್ ಪಾದ ಸೇರವ್ರೇ..ಅವರನ್ನ ಎಲ್ಲ ಸೇರಿ ಊರಿಗ್ ಕರ್ಕ ಬನ್ನಿ .ನಾನು ನಮ್ಮಪ್ಪ ಮುಂದು ಹೋಗಿ ತಮಟೆ ಹೊಡ್ಯಾಕೆ ಸಿದ್ಧ ಮಾಡ್ತೀವಿ ..
ಐ …ಯಪ್ಪೋ..ಯಪ್ಪಾ . ಆ ಬೀಡಿ ಬಿಸಾಕು…ನೀನು ಹೋದೆ ಅಂಕಂಡು ಬ್ಯಾಡ ನನ್ ಗೋಳು ,,ಎಲ್ಲ ದಾರಿನಾಗೆ ಏಳ್ತೀನಿ ಬಾ ಹೋಗವಾ ..ಆದ್ರೆ ಇಲ್ನೋಡು.. ಒಂದು ವಿಸ್ಯ ನೆಪ್ಪಿರ್ಲಿ.. ನೀನು ಮಾತ್ರವಾ ಯಾವುದೇ ಕಾರಣಕ್ಕೂ ಆಸ್ಪತ್ರೇಲಿ ಮಾತ್ರ ಸಾಯಿಬೇಡ ಗೊತ್ತಾತಾ…ಇದೆ ನನ್ ಕಡೆ ಆಸೆ .. ಏನು..ಬಾ ಬಾ …ಮೆಂತ್ಯ ..ಬರ್ಲಾ ನೀನೂ ಬಿರ್ನೆ ಊರಿಗೆ ಹೋಗವಾ ..
(ಇಲ್ಲಿಗೆ ಬಡ್ಕಾ ಬಾಯಿ ಬಡ್ಕೊಳ್ಳೋದು ನಿಲ್ಸಿ ತಮಟೆ ಬಡಿಯೋಕೆ ಶುರು ಮಾಡಿದ ಊರಿನ ದೊಡ್ಡ ಮನುಷ್ಯ ಸೀನಪ್ಪ ಗೌಡ್ರು ತಂದೆ ಈರಪ್ಪ ಗೌಡ್ರು ಆಸ್ಪತ್ರೇಲಿ ತೀರಿ ಹೋಗಿದ್ರು ಅವರನ್ನ ಇಡೀ ಊರಿನ ಜನ ಗೌರವದಿಂದ ಬೀಳ್ಕೊಟ್ಟಿತ್ತು .. ಸುಮ್ಕಾ ಬಡ್ಕಾ ತಮಟೆ ಸದ್ದು ಮೆರವಣಿಗೆಯೊಂದಿಗೆ ಸಾಗಿತ್ತು..)