ಕೇವಿಕೊಪ್ಪ 

VIVIDLIPI – ಕಥಾಸಂಭ್ರಮ 2025 ಸಣ್ಣ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ

ಕಥೆ: ಕೇವಿಕೊಪ್ಪ 
ಲೇಖಕರು : ಜಯರಾಮಾಚಾರಿ 

ಆಗುಂಬೆಯ ಸಮೀಪದ ಕೇವಿಕೊಪ್ಪ ಎಂಬ ಕುಗ್ರಾಮದಲ್ಲಿ ಆ ಊರಿಗೆ ಪರಿಚಯವೇ ಇಲ್ಲದ ಆ ಊರಿನವನಲ್ಲದ ‘ರಿಚರ್ಡ್ ಡೇವಿಡ್’ ಎಂಬ ವ್ಯಕ್ತಿ, ಅರ್ಧಕ್ಕೆ ಕಟ್ಟಿ ಹಾಗೇ ಬಿಟ್ಟಿದ್ದ ಪಾಳುಮನೆಗೆ ಬಂದಿರುವುದು ಗೊತ್ತಾಗಿದ್ದು ಕೇವಲ ಸೌಮ್ಯ ನಾಯಕ್ ಎಂಬ ಉದ್ದ ಜಡೆಯ ಹುಡುಗಿಗೆ ಮಾತ್ರ.

**

ಕೇವಿಕೊಪ್ಪ ಸುಮಾರು ನಲವತ್ತು ಮನೆಗಳ ಚಿಕ್ಕ ಊರು. ನಲವತ್ತು ಮನೆಗಳಲ್ಲಿ ಅರ್ಧಕ್ಕೂ ಮೀರಿದ ಹೆಚ್ಚಿನ ಮನೆಗಳಲ್ಲಿ ವಯಸ್ಸಾದ ದಂಪತಿಗಳು, ಅವರು ಸಾಕಿಕೊಂಡಿರುವ ಹಸುಗಳು, ಕುರಿಗಳು ಇಲ್ಲವೇ ಕೋಳಿಗಳು. ಜೊತೆಗೆ ತರಕಾರಿ ಮತ್ತು ಹೂವಿಗೆಂದು ಹಿತ್ತಲಲ್ಲಿ ಬೆಳೆದಿರುವ ಗಿಡಗಳು, ಬಳ್ಳಿಗಳು ಅಷ್ಟೇ ಇವೆ. ಆ ಮನೆಗಳಲ್ಲಿ ಮಕ್ಕಳೇ ಇಲ್ಲ. ಮಕ್ಕಳೆಲ್ಲ  ಚೆನ್ನಾಗಿ ಓದಿ ಉದ್ಯೋಗಕ್ಕೋ, ಉನ್ನತ ಶಿಕ್ಷಣಕ್ಕಾಗಿಯೋ ಬೆಂಗಳೂರು, ಮುಂಬೈ, ಬೇರೆ ದೇಶದ ದಾರಿ ಹಿಡಿದುಬಿಟ್ಟಿದ್ದಾರೆ. ಮನೆಯ ವೃದ್ಧರು ತಮ್ಮ ಮಿಕ್ಕ ಜೀವನವನ್ನು ಮಕ್ಕಳು ಬರುವ ದಾರಿಯನ್ನ ನೋಡುತ್ತಾ, ಕಾಯುತ್ತ ಕಳೆಯುತ್ತಿದ್ದಾರೆ. ಅವರೆಲ್ಲರ ಬಳಿ ಮಕ್ಕಳು ಕೊಡಿಸಿದ ಸ್ಮಾರ್ಟ್ ಫೋನುಗಳು, ಮಕ್ಕಳು ಕಟ್ಟಿಸಿದ ಮನೆಗಳು, ಮಕ್ಕಳೇ ರೀಚಾರ್ಜ್ ಮಾಡುವ ಟಾಟಾ ಸ್ಕೈ ಕೇಬಲ್ಲುಗಳು ಇವೆ. ಆದರೆ ಮನೆಯಲ್ಲಿ ಮಕ್ಕಳಿಲ್ಲ. ರೀಚಾರ್ಜ್ ಮಾಡಿಸದ ದಿನಗಳಲ್ಲಿ “ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ, ಬೀದಿ ಬೀದಿಯನಲೆದು ನೋಡಿ ಬರುವೆ” ಎನ್ನುವ ಹಾಡು ಹಳೆಯ ರೇಡಿಯೋಗಳಲ್ಲಿ ಕೇಳಿಸಿಕೊಳ್ಳುತ್ತಾರೆ. ವಾರಕ್ಕೊಮ್ಮೆ ಒಂದು ಅಥವಾ ಎರಡು ಸಲ ವಿಡಿಯೋ ಕಾಲ್ ಗಳಲ್ಲಿ ಮಕ್ಕಳ ಮುಖ, ಮೊಮ್ಮಕ್ಕಳ ಮುಖ ನೋಡುತ್ತಾ ನೋಡುತ್ತಾ ಕಾಲಗಳು ಉರುಳಿಹೋಗುತ್ತಿವೆ. 

ಬೆರಳೆಣಿಕೆಯ ಮಿಕ್ಕ ಮನೆಗಳಲ್ಲಿ ಮಕ್ಕಳಿದ್ದಾರೆ. ಅವರೆಲ್ಲ ಇಲ್ಲೇ ಓದಿ ಪಾಸಾಗದೆ, ವಿದ್ಯೆ ತಲೆಗೆ ಹತ್ತದೆ, ಓದುವ ವಯಸ್ಸಲ್ಲೇ ಶೋಕಿಗೆ ಬಿದ್ದು ಇಲ್ಲೇ ಉಳಿದುಹೋದವರು. ರೇಷನ್ ಅಂಗಡಿ, ಜೆರಾಕ್ಸ್ ಶಾಪ್, ಪಾನ್ ಬೀಡಾ ಶಾಪ್, ಆಟೋ ಓಡಿಸೋದು ಈ ತರದ ಕೆಲಸಗಳನ್ನು ಮಾಡುತ್ತಾ ಊರನ್ನು ಊರಾಗಿ ಇಟ್ಟಿದ್ದಾರೆ. ಹಾಗೆ ಉಳಿದವರಲ್ಲಿ ಹುಡುಗಿಯರು ಇದ್ದಾರೆ. ಅವರಿಗೆಲ್ಲ ಸಿಟಿಯ, ಬೇರೆ ದೇಶದ ಗಂಡುಗಳನ್ನು ಹುಡುಕುತ್ತಿದ್ದಾರೆ. ಇಲ್ಲೇ ಉಳಿದ ಗಂಡುಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಹಾಗೆ ನೋಡಿದರೆ ಇನ್ನೊಂದು ದಶಕದಲ್ಲಿ ಆ ಊರಿನಲ್ಲಿ ಯುವಕರೇ ಇರುವುದಿಲ್ಲ! ಕೇವಿಕೊಪ್ಪ ಅಪ್ಪನ ಶಾಪಕ್ಕೆ ತುತ್ತಾದ ಯಯಾತಿಯಂತೆ ವೃದ್ಧರ ಕೊಪ್ಪವಾಗಿಬಿಡುತ್ತದೆ.  

ಹೀಗೆ ವೃದ್ಧರೇ ತುಂಬಿಕೊಂಡಿರುವ ಈ ಊರಿನಲ್ಲಿ ಅಂತಹ ವಿಶೇಷವೇನು ಜರುಗುವುದಿಲ್ಲ. ಮುಪ್ಪು ಸುರಿಯುವ ಊರಿನಲ್ಲಿ, ರಕ್ತ ಕುದಿಯದ ಜೀವಗಳಲ್ಲಿ ಸಂಭ್ರಮವೆಲ್ಲಿರುತ್ತದೆ? ಅಕಾಲದ ಮಧ್ಯಾಹ್ನಕ್ಕೆ ಮಳೆ ಹೊಯ್ದಂತೆ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದಷ್ಟೇ. ಯಾವುದರಲ್ಲೂ ಅಷ್ಟೊಂದು ಆಸಕ್ತಿ ಇಲ್ಲದ,  ಮೌನದ ಕೊಂಪೆಯಾಗಿರುವ ಕೇವಿಕೊಪ್ಪದಲ್ಲಿ ಊರಿಗೆ  ಹೊಸಬನಾದ ರಿಚರ್ಡ್ ಡೇವಿಡ್ ಬಂದಿದ್ದು ಗೊತ್ತಾಗಿದ್ದು ಮಾತ್ರ ಸೌಮ್ಯ ನಾಯಕ್ ಎಂಬ ಹುಡುಗಿಗೆ.

ಸೌಮ್ಯ ನಾಯಕ್ ಹರಯವನ್ನು ಹೊತ್ತುಕೊಂಡಿರುವ ಹದಿನೆಂಟರ ಹುಡುಗಿ. ಊರಿಗೆ ಗೊತ್ತಿಲ್ಲದ ರಿಚರ್ಡ್ ಡೇವಿಡ್ ಆಗಮನ ಈ ಹುಡುಗಿಗಷ್ಟೇ ತಿಳಿಯಲು ಕೂಡ ಸಕಾರಣವಿದೆ. ಸೌಮ್ಯ ನಾಯಕ್ ಬರಹಗಾರ್ತಿ. ಬರೆಯುತ್ತಾಳೆ. ‘ನೀನು ಬರೆಯುವುದಾದರೆ ನಿನ್ನ ಮೈ ಕಣ್ಣಾಗಿರಬೇಕು, ನಿನ್ನ ಸುತ್ತ ಮುತ್ತ ಏನು ನಡೆಯುತ್ತದೆ ಎಂದು ನೋಡುತ್ತಿರಬೇಕು. ಊರಿನ ಕೊನೆ ಮನೆಯಲ್ಲಿನ ನಿಟ್ಟುಸಿರು ಕೂಡ ನಿನ್ನ ಕಿವಿಗೆ ಕೇಳಬೇಕು’ ಎಂದು ಕುಪ್ಪಳ್ಳಿಯಲ್ಲಿ ನಡೆದ ಕಥಾ ಕಮ್ಮಟದಲ್ಲಿ ಹಿರಿಯ ಕತೆಗಾರ್ತಿ ಜಾನಕಿರಾಮ್ ಹೇಳಿದ್ದರು. ಅದನ್ನು ಕಿವಿಯ ಜೊತೆ ಮನಸಿಗೂ ಹಾಕಿಕೊಂಡವಳು ಸೌಮ್ಯ. ಅವತ್ತಿನಿಂದ ತನ್ನ ಊರಿನಲ್ಲಿ ಹಣ್ಣಾದ ಹಳದಿ ಎಲೆಯೊಂದು ಮರದಿಂದ ನೆಲಕ್ಕೆ ಉದುರಿದರೂ ಕೂಡ ಅದರ ಸಪ್ಪಳ ಆಕೆಗೆ ಗೊತ್ತಾಗುತ್ತದೆ. ಆದರೆ ಆಕೆ ಬರೆಯುತ್ತಾಳೆ ಎನ್ನುವುದು ಇಡೀ ಊರಿಗಿರಲಿ, ಅವಳ ಅಪ್ಪಯ್ಯ- ಅಮ್ಮ- ಮಾವನಿಗೂ ಕೂಡ ಗೊತ್ತಿರಲಿಲ್ಲ. 

ಆಕೆ ‘ಘಟ್ಟದ ಹುಡುಗಿ’ ಎಂಬ ಕಾವ್ಯನಾಮದಿಂದ ಬರೆಯುತ್ತಾಳೆ.

ಆಗುಂಬೆಯ ಚಿನ್ಮಯಿ ‘ಲಿಪಿ’ ಎಂಬ ವೇದಿಕೆಯಲ್ಲಿ ದೊಡ್ಡ ಹೆಸರು. ಇನ್ನೂ ಇಪ್ಪತ್ತರ ಚಿಗುರು ಮೀಸೆಯವನು. ಕೋವಿಡ್ ಸಮಯದಲ್ಲಿ ಮನೆಯಲ್ಲೇ ಉಳಿದುಹೋದ ಹುಡುಗ ಹುಡುಗಿಯರಿಗೆ ಟಿಕ್ ಟಾಕ್, ರೀಲ್ಸು ಹುಚ್ಚು ಹತ್ತಿದಾಗ, ಈ ಚಿನ್ಮಯಿ ತಾನು ಬರೆದ ಕವಿತೆಗಳನ್ನ ರೀಲ್ಸ್ ಮಾಡಿ ಹಾಕುತ್ತಿದ್ದ. ಅದರಿಂದಲೇ ಅವನಿಗೆ ವಯಸ್ಸಿಗೆ ಬಂದ ಹುಡುಗರ ಹುಡುಗಿಯರ ದೊಡ್ಡ ಹಿಂಬಾಲಕರು ಸಿಕ್ಕರು. ಅದೇ ಸಮಯಕ್ಕೆ ಬರಹಗಾರರಿಗೆಂದೇ ಶುರುವಾದ ‘ಲಿಪಿ’ ವೇದಿಕೆಯಲ್ಲಿ ‘ಆಗುಂಬೆ ಚಿನ್ಮಯಿ’ ಎಂಬ ಖಾತೆ ತೆರೆದು, ಅವನ ಹೆಸರಿನ ಕೆಳಗೆ ‘ಘಟ್ಟದವನು’ ಎಂದು ಹಾಕಿಕೊಂಡು ಪ್ರೀತಿ ಪ್ರೇಮ ಪ್ರಣಯದ ಬರಹ ಬರೆಯುತ್ತಿದ್ದ, ಅವನಿಂದ ಸ್ಫೂರ್ತಿ ಪಡೆದ ಸೌಮ್ಯ ತಾನು ತಲೆಗೆ ತೋಚಿದ್ದನ್ನು ಗೀಚತೊಡಗಿದಳು. ಆಮೇಲೆ ತನ್ನದೇ ಖಾತೆಯನ್ನು ಲಿಪಿಯಲ್ಲಿ ತೆರೆದಳು. ಅದಕ್ಕೆ ‘ಘಟ್ಟದ ಹುಡುಗಿ’ ಎಂದು ಹೆಸರಿಟ್ಟು, ಬಾಗಿಲಲ್ಲಿ ಲಂಗ ದಾವಣಿ ಹಾಕಿಕೊಂಡು ತನ್ನ ಉದ್ದನೆಯ ಜಡೆಯನ್ನು ಬಲಕ್ಕೆ ಎಳೆದುಕೊಂಡು ಮುಖ ಕಾಣದಂತೆ ಬೇರೆತ್ತಲೋ ನೋಡುವ ಚಿತ್ರ ಹಾಕಿದ್ದಳು. ಮುಂದಿನ ವರ್ಷ ಮದುವೆ ಮಾಡಲು ಓಡಾಡುತ್ತಿರುವ ಅಪ್ಪಯ್ಯನಿಗೆ ತಾನು ಮೂರು ಕಾಸು ಪ್ರಯೋಜನಕ್ಕೆ ಬಾರದ ಈ ತರಹ ಬರೆಯುವುದು ಗೊತ್ತಾದರೆ ಎಂಬ ಭಯದಲ್ಲಿ ಅದನ್ನು ಹೇಳಿರಲಿಲ್ಲ. ಊರಿನ ಯಾರಿಗೂ ಸೌಮ್ಯ ನಾಯಕ್ ಎಂಬ ಹುಡುಗಿಯೇ ‘ಘಟ್ಟದ ಹುಡುಗಿ’ ಎಂದು ಗೊತ್ತಿರಲಿಲ್ಲ.

ಸೌಮ್ಯ ಊರಿನ ಪ್ರತಿ ಕತೆಗಳಿಗೂ ಕಿವಿಯಾಗುತ್ತಿದ್ದಳು. ಊರಿನ ಪೋಸ್ಟ್ ಮಾಸ್ಟರ್ ಪಳನಿಸ್ವಾಮಿ, ರಿಚಾರ್ಜ್ ಅಂಗಡಿ ರಾಜೇಶ, ರೇಷನ್ ಅಂಗಡಿ ರಮೇಶಣ್ಣ, ಊರಿಗೂ ಆಗುಂಬೆಗೂ ಓಡಾಡುವ ಬಸ್ಸಿನ ಕಂಡಕ್ಟರ್- ಡ್ರೈವರ್, ಸಮುದ್ರದ ಬಳಿ ಮೀನು ಮಾರುವ ಹಸೀನಾ, ವಾರಕ್ಕೊಮ್ಮೆ ಹತ್ತು ಚದರದಲ್ಲಿ ತಲೆ ಎತ್ತಿರುವ ಕ್ರಿಸ್ತನ ಪ್ರಾರ್ಥನಾ ಮಂದಿರಕ್ಕೆ ಕರೆದು ಮಾವಿನ ಹಣ್ಣು ಕೊಟ್ಟು ಪ್ರಾರ್ಥನೆ ಮಾಡಿಸುವ ಆನಮ್ಮಾ, ಆಟೋ ಓಡಿಸುತ್ತಿದ್ದ ಸೈಯ್ಯದ್, ದಿನೇಶ ಎಲ್ಲರ ಜೊತೆಯೂ  ಮಾತಾಡುತ್ತಿದ್ದಳು. ‘ಮತ್ತೆ ಎಂಥ ಸಮಾಚಾರ’ ಎಂದು ಅವಳು ದಾಳಿಂಬೆ ಹಲ್ಲುಗಳನ್ನು ಬಿಟ್ಟುಕೊಂಡು ನಕ್ಕು ಹಳ್ಳ ಬಿದ್ದ ಗಲ್ಲದ ಮೇಲೆ ಕೈಯಿಟ್ಟುಕೊಂಡು ಕೇಳಿದರೆ ಅವರೆಲ್ಲ ತಾವು ಕಂಡ ಊರಿನ ಕತೆಗಳನ್ನು ಹೇಳುತ್ತಿದ್ದರು. 

ಮೊನ್ನೆ ಹತ್ತನೇ ಕ್ಲಾಸು ಓದುತ್ತಿರುವ ಮಂಜುನಾಥ ಉಪಹಾರ ಮಂದಿರದ ಭಟ್ಟರ ಮಗ ಸುರೇಶ ಪ್ರಾಜೆಕ್ಟ್ ಕೆಲಸಕ್ಕೆ ಎಂದು ರಾಜೇಶನ ಸೈಬರ್ ಸೆಂಟರ್ ಗೆ ಹೋದಾಗ ಅವನಿಗೆ ಕಂಪ್ಯೂಟರಿನಲ್ಲಿ ಏನಿಲ್ಲವೆಂದರೂ ಇಪ್ಪತ್ತು ಹುಡುಗಿಯರ ಬೆತ್ತಲೆ ಫೋಟೋ ಸಿಕ್ಕಿ ಗಾಬರಿಯಾಗಿ ಓಡಿ ಬಂದದ್ದು ಅವಳು ಇತ್ತೀಚೆಗೆ ಕೇಳಿಸಿಕೊಂಡ ಹೊಸ ಕತೆ. ಅದನ್ನು ಹೇಳಿದ್ದು ಪೋಸ್ಟ್ ಮಾಸ್ಟರ್ ಪಳನಿ. ಎರಡು ದಿನಗಳ ಹಿಂದೆ ಅದನ್ನೇ ಇಟ್ಟುಕೊಂಡು ‘ಒಂದು ಕತೆ ಬರೆದರೆ ಹೇಗೆ?’ ಎಂದು ಅವಳು ಯೋಜನೆ ಹಾಕುವಾಗಲೇ ಆಗುಂಬೆಯ ಪೊಲೀಸ್ ಸ್ಟೇಷನಿನ ಹಿರಿಯ ಪೇದೆ ಶೀನ ಪೂಜಾರಿ ಸೌಮ್ಯಳಿಗೆ ಕಾಲ್ ಮಾಡಿದ್ದ.

‘ಮಗಾ ಇಲ್ಲೊಬ್ಬ ಹುಚ್ಚ ಬಂದಿದ್ದಾನೆ, ಶಿಲುಬೆ ಕಡೆಯವನು. ಕತೆ ಹೊಡೆಯುತ್ತಿದ್ದಾನೆ, ನಿನಗೊಳ್ಳೆ ಕತೆ ಸಿಗುತ್ತೆ ನೋಡ’ ಎಂದು ಹೇಳಿ ಫೋನ್ ಇಟ್ಟಿದ್ದ. ಮರುದಿನವೇ ಸೌಮ್ಯ ಶೀನಪ್ಪನನ್ನು ಮಾತಾಡಿಸುವ ನೆಪದಲ್ಲಿ ಆಗುಂಬೆ ಪೊಲೀಸ್ ಸ್ಟೇಷನಿನಲ್ಲಿದ್ದಳು.  

**

ಶೀನಪ್ಪನಿಗೆ ಅವಲಕ್ಕಿಯ ಉಪ್ಪಿಟ್ಟಿನ ಚಿಕ್ಕ ಡಬ್ಬಿಯೊಂದು ಕೊಟ್ಟು ಅವರನ್ನು ಮಾತನಾಡಿಸುವ ನೆಪ ಮಾಡಿಕೊಂಡು, ಪೊಲೀಸ್ ಇನ್ಸ್ಪೆಕ್ಟರ್ ಇನ್ನೂ ಬಂದಿರದ ಕಾರಣ ಶೀನಪ್ಪನ ಜೊತೆ ಹಿಂಗೇ ಕೆಲಸಕ್ಕೆ ಬಾರದ್ದನ್ನು ಮಾತಾಡುತ್ತ ಮಧ್ಯೆ ಮಧ್ಯೆ ಅಲ್ಲೇ ಮರದ ಬೆಂಚಿನ ಮೇಲೆ ಕತ್ತು ಬಗ್ಗಿಸಿಕೊಂಡು ಕುಳಿತ ರಿಚರ್ಡ್ ಡೇವಿಡ್ ನನ್ನು ನೋಡಿದಳು. ಅವನು ತುಂಬಾ ಹೊತ್ತು ಹಾಗೆ ಕೂತವನು ಕತ್ತು ಮೇಲಕ್ಕೆ ಎತ್ತಿದ. ಸುಮಾರು ನಲವತ್ತು-ನಲವತ್ತೈದು ವಯಸ್ಸಿರಬಹುದು, ಗಡುಸಾದ ಮುಖ, ಶೇವ್ ಮಾಡಿಕೊಂಡ ಕೆನ್ನೆ, ದಟ್ಟ ಮೀಸೆ, ಬಲಕ್ಕೆ ಕ್ರಾಪು ಬಿಟ್ಟ ಕಪ್ಪು ಕೂದಲು, ಹೂವಿನ ಪ್ರಿಂಟ್ ಇರುವ ದೊಗಳೆ ಶರ್ಟು, ಶರ್ಟಿಗೆ ಸಿಗಿಸಿಕೊಂಡ ಅರ್ಮಾನಿ ಗ್ಲಾಸು, ತೆಳು ನೀಲಿ ಜೀನ್ಸ್, ಬೆಳ್ಳನೆಯ ಶೂಗಳು.

ಇನ್ಸ್ಪೆಕ್ಟರ್ ಜೀಪು ಬಂದ ಕೂಡಲೇ ಸೌಮ್ಯ ಮತ್ತು ಶೀನಪ್ಪ ಈಚೆ ಬಂದು ಕುಳಿತರು, ಶೀನಪ್ಪ ರಿಚರ್ಡ್ ಡೇವಿಡ್ ನ ಕತೆಯನ್ನು ಹೇಳತೊಡಗಿದ. ಆ ಕತೆ ಹೀಗಿತ್ತು.

“ಮೊನ್ನೆ ನಿದ್ದೆ ಬರ್ತಿದೆ ಅಂತ ಸಾಹೇಬ್ರು ಸ್ಟೇಷನ್ ನೋಡ್ಕಳ್ಳಿ ಅಂತ ಎದ್ದು ಹೋಗಿದ್ರಾ, ನಾವು ತೂಕಡಿಸಿಕೊಂಡು ಕೂತಿದ್ವ, ಇವ ಮುಂಜಾನೆ ಮೂರು ಗಂಟೆ ಹೊತ್ತಿಗೆ ತಲೇಲಿ ರಕ್ತ ಹರಿಸಿಕೊಂಡು ಸ್ಟೇಷನ್ ಮುಂದೆ ಬಂದು ನಿಂತಿದ್ದ. ನಾವೆಲ್ಲ ಗಾಬರಿಯಾಗಿ ಯಾವನೋ ಕಳ್ಳನೋ, ಕೊಲೆಗಾರನೋ ಎಂದು ಬಂದೂಕು ಹಿಡಿದು ಹೋದ್ರೆ, ಅಳುತ್ತ ಕುಸಿದು ಬಿದ್ದ. ಅವನಿಗೆ ನೀರು ಕೊಟ್ಟು ‘ಎಂತ ಆಯ್ತು?’ ಅಂದ್ರೆ ರಾತ್ರಿ ಅವನು ಅವನ ಹೆಂಡತಿ ಗೂಗಲ್ ಮ್ಯಾಪ್ ಹಾಕಿಕೊಂಡು ಕಾರ್ಕಳದಿಂದ ಆಗುಂಬೆ ರೂಟಲ್ಲಿ ಜೋಗಿಗೆ ಹೋಗ್ತಾ ಇದ್ರಂತೆ, ಕತ್ಲಲ್ಲಿ ಜಿಂಕೆಯೋ ಏನೋ ಒಮ್ಮೆಗೆ ಅಡ್ಡ ಬಂದು ಗಾಬರಿಯಾಗಿ ಕಾರು ತಿರುಗಿಸಿ ಮರಕ್ಕೆ ಬಡಿತಂತೆ, ಅಷ್ಟೇ ಆಮೇಲೆ ಪ್ರಜ್ಞೆ ಪಡ್ಚಾ ಆಗಿದೆ, ಬೆಳಗೆದ್ದು ನೋಡುದ್ರೆ ಹೆಂಡತಿ ಕಾಣೆ. ಅವಳಿಗೆ ಮೂರು ತಿಂಗಳು ಅವಳನ್ನ ಹುಡುಕಿಕೊಡಿ ಅಂತ, ಕಾರಲ್ಲಿದ್ದ ಪರ್ಸು ಮೊಬೈಲ್ ಕೂಡ ಕಾಣ್ತಿಲ್ಲ ಅಂತೆ, ಸರಿ ನಿಮ್ಮ ಹೆಂಡತಿ ಫೋಟೋ ಕೊಡಿ ಅಂದ್ರೆ ಅದು ಕೂಡ ಇಲ್ಲ, ದುಬೈಯಿಂದ ಹೋದ ವಾರ ಇಲ್ಲಿಗೆ ಬಂದಿದ್ದಂತೆ, ಕೊಡಗು ಕಡೆಯವನಂತೆ. ‘ಹಿಂಗೇ ಸುತ್ತಾಡಲಿಕ್ಕೆ ಬಂದ್ವಿ, ಆದರೆ ಹೀಗೆ ಆಯಿತು ದಯವಿಟ್ಟು ಹುಡುಕಿಕೊಡಿ’ ಎಂದು ಕೂತಿದ್ದಾನೆ. ‘ಯಾವ ವಿವರವೂ ಇಲ್ಲದೆ ಹೆಂಡತಿಯನ್ನ ಹೇಗೆ ಹುಡುಕೋದು?’ ಎಂದರೆ ಇಷ್ಟುದ್ದ, ಇಷ್ಟು ದಪ್ಪ ಕೆನ್ನೆ, ಕೆನ್ನೆ ಪಕ್ಕ ದೊಡ್ಡ ಮಚ್ಚೆ, ನವಿಲಿನ ಕಿವಿಯೋಲೆ ಎಂದು ಹೇಳುತ್ತಿದ್ದಾನೆ. ಒಂದು ಫೋಟೋ ಮಾತ್ರ ಇಲ್ಲ, ಇನ್ನೂ ಅವನ ಹೆಂಡ್ತಿಯ ಫೋಟೋಗಾಗಿ ದುಬೈ ಪೊಲೀಸರನ್ನು ಕೇಳಬೇಕು, ತಲೆ ನೋವು ಕೆಲಸ ಇದು. ಜೊತೆಗೆ ‘ಅವನು ಮಾತಾಡೋದರಲ್ಲಿ ಏನೋ ಸರಿ ಇಲ್ಲ ಸ್ವಲ್ಪ ದಿನ ಆಟ ಆಡಿಸುವ ಅವನೇ ಬಾಯಿ ಬಿಡ್ತಾನೆ’ ಎಂದು ಕಂಪ್ಲೇಂಟು ತಗೊಂಡಿಲ್ಲ. ಅವ ಬಾಯಿ ಬಿಡ್ತಿಲ್ಲ, ಫೇಸ್ಬುಕ್ಕು ವಾಟ್ಸ್ಯಾಪು ಎಂತದೂ ಇಲ್ಲ ಅಂತೆ, ಅದೆಂತದೋ ಮಿನಿಮಲಿಸ್ಟ್ ಅಂತ ಕತೆ ಹೊಡೆಯುತ್ತಿದ್ದಾನೆ’ ಎಂದು ಒಂದೇ ಉಸಿರಿನಲ್ಲಿ ಹೇಳಿ ‘ಮಿನಿಮಲಿಸ್ಟ್ ಅಂದ್ರೆ ಎಂತದೇ ಮಾರಾಯ್ತಿ?’ ಎಂದು ಕೇಳಿದ, ಸೌಮ್ಯಳಿಗೂ ಅದು ಗೊತ್ತಿರಲಿಲ್ಲ. ಪೆಚ್ಚು ನಕ್ಕಳು.

ಮತ್ತೆ ಶೀನಪ್ಪ ಮಿಕ್ಕ ಕತೆ ಹೇಳತೊಡಗಿದರು. ಅದು ಹೀಗಿತ್ತು- 

“ಊಟ ಮಾಡೋಲ್ಲ” ಎಂದು ಹಠ ಹಿಡಿದ ಅವನಿಗೆ ಸ್ಟೇಷನಿನಲ್ಲೇ ಅವನು ನೆಗೆದು ಬಿದ್ದರೆ ಎಂದು ಭಯವಾಗಿ ಶೀನಪ್ಪನೇ ದಿನಕ್ಕೆ ಎರಡು ಸಲ ಭಟ್ಟರ ಹೋಟೆಲಿನಿಂದ ಊಟ ತಂದುಕೊಟ್ಟಿದ್ದ. ಇನ್ನೂ ಇವ ನಮ್ಮ ಬಿಡುವುದಿಲ್ಲ ಎಂದು ಜೊತೆಗೆ ಇವನ ವಿಷಯ ಊರಿನ ಸ್ಥಳೀಯ ಪತ್ರಿಕೆ ಅಗ್ನಿಸಂಜೆ ಪತ್ರಕರ್ತ ವಸಂತನ ಕಿವಿಗೆ ಬಿದ್ದರೆ ಸರಿ ಇಲ್ಲ ಎಂದು ಮೂರನೇ ದಿನ ಮಧ್ಯಾಹ್ನ ಅವನನ್ನು ಕರೆದುಕೊಂಡು ಗಾಡಿ ಅಪಘಾತವಾದ ಜಾಗಕ್ಕೆ ಕರೆದುಕೊಂಡು ಹೋದರು. ಅದು ಆಗುಂಬೆಯಿಂದ ಜೋಗಿಗೆ ಹೋಗುವ ಮುಖ್ಯರಸ್ತೆಯಲ್ಲಿರಲಿಲ್ಲ. ಮುಖ್ಯರಸ್ತೆಗೆ ಬದಿಯಲ್ಲಿದ್ದ ಕಾಡಿಗೆ ಹೋಗುವ ಮಣ್ಣಿನ ರಸ್ತೆಯಲ್ಲಿತ್ತು. ರಿಚರ್ಡ್ ಡೇವಿಡ್ ‘ಗೂಗಲ್ ಮ್ಯಾಪ್ ತೋರಿಸಿದ ರೋಡು ಮೊಬೈಲ್ ಇದ್ದಿದ್ರೆ ನಿಮಗೆ ತೋರಿಸ್ತಿದ್ದೆ’ ಎಂದ. ‘ಸರಿ’ ಎಂದು ಕಾರಿನ ಹತ್ತಿರ ಬಂದರು. ಅದು ಟಾಪ್ ಎಂಡ್ ಮಾಡೆಲ್ಲಿನ ಬಿಳಿಯ ಫಾರ್ಚುನರ್ ಗಾಡಿ, ರಿಚರ್ಡ್ ಡೇವಿಡ್ ತನ್ನ ಜೇಬಿನಿಂದ ಕೀ ತೆಗೆದು ಪೀ-ಪೀ ಎಂದು ಸದ್ದು ಮಾಡಿಸಿ ಅನ್-ಲಾಕ್ ಮಾಡಿದ. ಕಾರು ಅವನು ಹೇಳಿದಂತೆ ರಸ್ತೆ ಪಕ್ಕದ ಮರಕ್ಕೆ ಬಡಿದಿತ್ತು, ಒಳಗೆ ಎರಡು ಏರ್ ಬ್ಯಾಗ್ ಬಿಚ್ಚಿಕೊಂಡ್ಡಿದ್ದವು, ಗಾಜಿನ ಚೂರುಗಳು ಬಿದ್ದಿದ್ದವು, ರಕ್ತದ ಕಲೆಯಿತ್ತು, ಹಿಂದುಗಡೆ ಸೀಟಿನಲ್ಲಿ ಒಂದು ಬ್ಯಾಗು ಅದರಲ್ಲಿ ರಿಚರ್ಡ್ ಮತ್ತು ಹೆಂಡತಿಯ ಬಟ್ಟೆಗಳು, ಸೆಂಟ್ ಬಾಟಲು, ಕಾಸ್ಮೆಟಿಕ್ಸ್ ಅಷ್ಟೇ ಇತ್ತು, ‘ಅವನ್ನೆಲ್ಲ ಎತ್ಕಳಿ’ ಎಂದು ಇನ್ಸ್ಪೆಕ್ಟರ್ ಹೇಳಿದರು. ‘ಗಾಡಿ ಸ್ಟೇಷನ್ ಗೆ ತಗೊಂಡ್ ಬನ್ನಿ ಸ್ಟಾರ್ಟ್ ಆಗಿಲ್ಲ ಅಂದ್ರೆ ಆ ಮೆಕಾನಿಕ್ ನಯಾಜ್ ಗೆ ಹೇಳಿ ಸ್ಟೇಷನ್ ಒಳಗೆ ನಿಲ್ಸಿ’ ಎಂದು ಜೀಪು ಹತ್ತಿ ಹೊರಡೋ ಮುಂಚೆ ರಿಚರ್ಡ್ ಡೇವಿಡ್ ‘ಒಂದ್ನಿಮಿಷ’ ಎಂದು ಡಿಕ್ಕಿಯ ಬಾಗಿಲು ತೆಗೆದು ಸಣ್ಣ ಬ್ಯಾಗ್ ಒಂದು ಎತ್ತಿಕೊಂಡ. ಇನ್ಸ್ಪೆಕ್ಟರ್ ‘ಚೆಕ್ ಮಾಡಿ’ ಎಂದರು. ತೆಗೆದರೆ 2000 ರುಪಾಯಿಯ ನೋಟುಗಳ ಕಂತೆ…  ಇನ್ನೂ ಮುಂದಿನ ಕತೆ ಶೀನಪ್ಪ ಸಣ್ಣ ದನಿಯಲ್ಲಿ ಹೇಳುವ ಹೊತ್ತಿಗೆ ಸಾಹೇಬರು ಶೀನಪ್ಪನ ಕರೆದರು. ಶೀನಪ್ಪ ‘ನೀ ಹೊರಡು ಮಗಳೇ. ನಾ ಮಿಕ್ಕಿದ್ದು ಫೋನ್ ಮಾಡಿ ಹೇಳ್ತೆ’ ಎಂದು ಒಳಗೆ ಹೋದ. ಸೌಮ್ಯ ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತ ರಿಚರ್ಡ್ ಡೇವಿಡ್ ನ ಮುಖ ನೋಡಿದಳು ಅದೇ ಸಮಯಕ್ಕೆ ಅವನೂ ಇವಳನ್ನೇ ನೋಡಿದ. ಭಯವಾಗಿ ಅಲ್ಲಿಂದ ಹೊರಟುಹೋದಳು.   

**

ಮತ್ತೆ ರಿಚರ್ಡ್ ಡೇವಿಡ್ ವಿಷಯ ಕೇಳಬೇಕು ಎಂದುಕೊಂಡ ಸೌಮ್ಯಳಿಗೆ ರಾಜೇಶನ ಸೈಬರ್ ಅಂಗಡಿಯಲ್ಲಿ ಸಿಕ್ಕ ಬೆತ್ತಲೆ ಫೋಟೊಗಳು ಮತ್ತು ಅದನ್ನು ನೋಡಿ ಓಡಿ ಹೋದ ಸುರೇಶನ ಕತೆಯನ್ನ ಬರೆಯಲು ಶುರುಮಾಡಿದ್ದರಿಂದ ಮರೆತಿದ್ದಳು. ಧಾರವಾಹಿ ರೂಪದಲ್ಲಿ ಮೂರು ಭಾಗ ಬರೆದು ಮೊದಲ ಭಾಗವನ್ನ ಲಿಪಿಯಲ್ಲಿ ಪೋಸ್ಟ್ ಮಾಡಿದ ಮೇಲೆ ಕತೆಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದದ್ದು ನೋಡಿ ಖುಷಿಯಾಗಿದ್ದಳು. ಮಿಕ್ಕ ಎರಡು ಭಾಗಗಳನ್ನು ಇನ್ನಷ್ಟು ಮಸಾಲೆ ಸೇರಿಸಿ ರೋಚಕವಾಗಿ ಬರೆಯುತ್ತಿದ್ದಳು. 

ಒಂದು ವಾರ ಆದ ಮೇಲೆ ಶೀನಪ್ಪನೇ ಕಾಲ್ ಮಾಡಿ ರಿಚರ್ಡ್ ಡೇವಿಡ್ ಬ್ಯಾಗಿನಲ್ಲಿ ಹನ್ನೆರಡು ಲಕ್ಷ ದುಡ್ಡು ನೋಡಿದ ಮೇಲೆ ಸಾಹೇಬರು ಹೆಂಡತಿ ಹುಡುಕಲು ಒಪ್ಪಿಕೊಂಡರಂತೆ, ಅದಕ್ಕೆ ಎರಡು ಲಕ್ಷ ಲಂಚ ತಗೊಂಡರಂತೆ, ಅದಾದ ಮೇಲೆ ರಿಚರ್ಡ್ ಡೇವಿಡ್ ತನಗೆ ‘ತನ್ನವರು ಯಾರಿಲ್ಲ, ತನ್ನ ಹೆಂಡತಿ ಹುಡುಕಿಕೊಡುವವರೆಗೂ ಇಲ್ಲೇ ಹತ್ತಿರದ ಹೋಟೆಲಿನಲ್ಲಿರುವೆ, ಆಮೇಲೆ ಕೊಡಗಿಗೆ ಹೋಗುವೆ’ ಎಂದಾಗ ಶೀನಪ್ಪನೇ ಇಲ್ಲಿ ಯಾವುದು ಹೋಟೆಲ್ ಇಲ್ಲವೆಂದು ಕೇವಿಕೊಪ್ಪದ ಹೆಂಡ್ತಿಗೆ ದೆವ್ವ ಹಿಡಿದು ಸತ್ತ ಜಾನ್ಸನ್ ಕಟ್ಟಿಸಿ ಅರ್ಧಕ್ಕೆ ನಿಲ್ಲಿಸಿದ ಮನೆಯಲ್ಲಿ ಉಳಿದುಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾಗಿಯೂ, ಸದ್ಯ ಅಲ್ಲೇ ಇದ್ದಾನೆಂದು ವಿವರಿಸಿ “ಇಷ್ಟು ಆಗಿದೆ ನೋಡು ಮಾರಾಯ್ತಿ…” ಎಂದು ಮಾತು ನಿಲ್ಲಿಸಿದ. 

ಅದಾದ ಮೇಲೆ ರಿಚರ್ಡ್ ಬಗ್ಗೆ ಯಾವ ಮಾಹಿತಿಯೂ ಸೌಮ್ಯಳಿಗೆ ಸಿಕ್ಕಿರಲಿಲ್ಲ.

**

ಪೇಟೆಗೆ ಬಸ್ಸು ಸಿಗದೇ ನಡೆದು ಹೋಗುತ್ತಿದ್ದ ರಸ್ತೆಯಲ್ಲಿ ರಿಚರ್ಡ್ ಡೇವಿಡ್ ನ ಫಾರ್ಚುನರ್ ಕಾರು ನಿಂತು, ವಿಂಡೋ ಇಳಿಸಿ, “ಸೌಮ್ಯ ಅಲ್ವ?” ಎಂದ. ಸೌಮ್ಯಳಿಗೆ ಭಯ ಮತ್ತು ಖುಷಿ ಎರಡು ಆಯಿತು. ಜೊತೆಗೆ ಗೊತ್ತು ಪರಿಚಯ ಇಲ್ಲದವರ ಜೊತೆ ಹೀಗೆ ರಸ್ತೆಯಲ್ಲಿ ನಿಂತು ಮಾತನಾಡುವುದು ಅಪ್ಪಯ್ಯನಿಗೋ ಮಾವನಿಗೋ ಆಟೋ ಓಡಿಸುವ ಸೈಯ್ಯದ್ ನೋಡಿ ಹೇಳಿಬಿಟ್ಟರೆ ಎಂಬ ಭಯವಾಗಿ “ಹೌದು” ಎಂದಷ್ಟೇ ಹೇಳಿ ಎರಡು ಹೆಜ್ಜೆ ಇಟ್ಟಳು. ಕಾರು ಮತ್ತೆ ಪಕ್ಕ ನಿಂತು “ಶೀನಪ್ಪ ಹೇಳಿದ್ರು ಈ ಊರಲ್ಲಿ ಕತೆ ಕಾದಂಬರಿ ಓದೋದು ನೀನಷ್ಟೇ ಅಂತ, ನನಗೂ ಹೊಸ ಜಾಗ ಟೈಮ್ ಪಾಸ್ ಆಗ್ತಾ ಇಲ್ಲ, ಇಲ್ಲಿ ಯಾವುದಾರೂ ಪುಸ್ತಕದ ಅಂಗಡಿ ತೋರಿಸ್ತೀಯ?” ಎಂದು ಕೇಳಿದ. ಪುಸ್ತಕ ಕೇಳಿದ್ದಕ್ಕೆ ಏನೋ ಅವಳಿಗೂ ನಿರಾಕರಿಸಲು ಆಗದೆ ಒಂದು ಸಲ ಅಕ್ಕ ಪಕ್ಕ ನೋಡಿ ಕಾರು ಹತ್ತಿದಳು.

ಆಗುಂಬೆಯಲ್ಲಿ ಪರಿಚಯವಿದ್ದ ಪುಸ್ತಕದ ಅಂಗಡಿಗೆ ಕರೆದುಕೊಂಡು ಹೋದಳು. ಸುಮಾರು ಒಂದು ಗಂಟೆ ಅಲ್ಲಿದ್ದ ಹಳೆ ಹೊಸ ಪುಸ್ತಕಗಳನ್ನು ಜಾಲಾಡಿ ಹದಿನೈದು ಸಾವಿರ ರೂಪಾಯಿಯಷ್ಟು ಪುಸ್ತಕ ತೆಗೆದುಕೊಂಡದ್ದನ್ನು ನೋಡಿ ಬಾಯಿಗೆ ಬೆರಳಿಟ್ಟುಕೊಂಡಳು. ಅದನ್ನೆಲ್ಲ ಕಾರಿಗೆ ಹಾಕಿಕೊಂಡು, ಸೌಮ್ಯಳ ಪೇಟೆ ಕೆಲಸ ಆಗುವವರೆಗೂ ಕಾದು ಮತ್ತೆ, ಅವಳನ್ನು ಕಾರಿನಲ್ಲಿ ಕೂರಿಸಿಕೊಂಡು ಆಗುಂಬೆಯಲ್ಲಿ ಒಂದು ಗಡ್ ಬಡ್ ಐಸ್ ಕ್ರೀಮ್ ಕೊಡಿಸಿ ವಾಪಸ್ಸು ಅದೇ ದಾರಿಯಲ್ಲಿ ಬಿಟ್ಟ. ಅವಳಿಗೆ ಹನ್ನೆರಡು ಪುಸ್ತಕಗಳನ್ನು ಕೊಟ್ಟ. “ನನಗೊಂದು ಮೊಬೈಲ್ ಬೇಕಿತ್ತು, ಸಿಮ್ ಬೇಕಿತ್ತು ನನ್ನ ಹತ್ರ ಡಾಕುಮೆಂಟ್ಸ್ ಬೇರೆ ಇಲ್ಲ ಎಲ್ಲ ಕಳೆದುಹೋಗಿದೆ ಪೊಲೀಸ್ ಕಂಪ್ಲೇಂಟ್ ಆಗಿದೆ. ಅವೆಲ್ಲ ಆಗೋವರೆಗೂ ಒಂದು ಫೋನ್ ಬೇಕಲ್ಲ ಊರಲ್ಲಿ ಆ ತರ ಅಂಗಡಿ ಇದ್ಯಾ?” ಎಂದು ಕೇಳಿದ. ಸೌಮ್ಯ “ಇದೆ” ಎಂದು ರಾಜೇಶನ ಅಂಗಡಿಗೆ ಕರೆದುಕೊಂಡು ಹೋದಳು. 

ರಾಜೇಶನ ‘ರಾಜೇಶ್ ಎಂಟರ್ಪ್ರೈಸೆಸ್’ ಎಲ್ಲ ಒಂದೇ ಕಡೆ ಸಿಗುವ ಅಂಗಡಿ. ಒಂದಷ್ಟು ಹೊಸ ಮಾಡೆಲ್ ಫೋನುಗಳು, ಎಲ್ಲ ಕಂಪನಿಯ ಸಿಮ್ ಗಳು, ಬೆಂಗಳೂರಿನಿಂದ ತಂದ ಡೂಪ್ಲಿಕೇಟ್ ಚಾರ್ಜರುಗಳು, ಅಡಾಪ್ಟರುಗಳು, ಮೆಮೊರಿ ಕಾರ್ಡುಗಳು, ಪೆನ್ ಡ್ರೈವುಗಳು, ಜೊತೆಗೆ ಎಂಪಿತ್ರೀ ಪ್ಲೇಯರುಗಳು, ಹೆಡ್ ಫೋನುಗಳು ಎಲ್ಲವು ಸಿಗುತ್ತೆ. ಜೊತೆಗೆ ಇಂಟರ್ನೆಟ್ಟು, ಸೈಬರ್ರು, ಗೇಮ್ಸು, ಜೆರಾಕ್ಸು, ಪ್ರಿಂಟ್ ಔಟ್ ಹೀಗೆ ಎಲ್ಲ ಸೇವೆ ಜೊತೆಗೆ ಪಾಸ್ ಪೋರ್ಟ್ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೂಡ ಮಾಡಿಕೊಡ್ತಾನೆ. ರಿಚರ್ಡ್ ಡೇವಿಡ್ ಅಲ್ಲಿದ್ದ ಜಾಸ್ತಿ ಬೆಲೆಯ ಒಪ್ಪೋ ಫೋನ್, ಒಂದು ಸಿಮ್ ಕಾರ್ಡ್, ಒಂದು ಹೆಡ್ ಫೋನ್ ತೆಗೆದುಕೊಂಡ, ರಾಜೇಶ ಅಪರೂಪಕ್ಕೆ ಆದ ವ್ಯಾಪಾರಕ್ಕೆ ಖುಷಿಯಾದ, ಜೊತೆಗೆ ರಿಚರ್ಡ್ ತನ್ನ ಪಾಸ್ ಪೋರ್ಟ್ ಆಧಾರ್ ಕಾರ್ಡ್ ಜೊತೆಗೆ ಅದು ಇದು ಚೆಕ್ ಮಾಡಬೇಕೆಂದು ಅರ್ಧ ಗಂಟೆ ಸೈಬರ್ ತೆಗೆದುಕೊಂಡ, ಅಲ್ಲಿದ್ದುದ್ದು ಒಂದೇ ಕಂಪ್ಯೂಟರ್. ಗೇಮ್ಸ್ ಆಡಲಿಕ್ಕೆ, ಪೋಲಿ ಸಿನಿಮಾ ನೋಡಲಿಕ್ಕೆ ಹುಡುಗರು ಬರ್ತಾ ಇದ್ದಿದ್ದರಿಂದ ಅದನ್ನು ನಾಲ್ಕು ಕಡೆಯಿಂದ ಮರದ ಹಲಗೆಗಳನ್ನು ಹಾಕಿ ಮುಚ್ಚಿದ್ದ. 

ರಿಚರ್ಡ್ ಹೊರಬರುವರೆಗೂ ಅವನನ್ನು ಕರೆದುಕೊಂಡು ಬಂದ ಒಳ್ಳೆ ವ್ಯಾಪಾರ ಮಾಡಿಸಿದ ಸೌಮ್ಯಳ ಜೊತೆ ಅದು ಇದು ಮಾತಾಡುತ್ತಿದ್ದ, ಸುಮಾರು ಮೂವತ್ತು ನಿಮಿಷ ರಿಚರ್ಡ್ ಡೇವಿಡ್ ಕಂಪ್ಯೂಟರಿನಲ್ಲಿ ಮುಳುಗಿ ಹೋಗಿದ್ದ, ತನ್ನ ಹೊಸ ಮೊಬೈಲನ್ನು ಕಂಪ್ಯೂಟರಿಗೆ  ಕನೆಕ್ಟ್ ಮಾಡಿದ್ದ, ಹೀಗೆ ಇನ್ನು ಇಲ್ಲೇ ನಿಂತರೆ ರಾಜೇಶನ ಜೊತೆ ಮಾತಾಡೋದು ನೋಡಿ ಜನ ಇಲ್ಲ ಸಲ್ಲದನ್ನು ಆಡಿಕೊಳ್ಳುವರೆಂದು ಸೌಮ್ಯ ಮೆಲ್ಲನೆ ರಿಚರ್ಡ್ ಡೇವಿಡ್ ಕರೆದಳು “ಸರ್ ಲೇಟಾಗೋ ಹಾಗಿದ್ರೆ ನಾನು ಹೋಗ್ತೀನಿ ನೀವು ಮುಗಿಸ್ಕೊಂಡ್ ಹೊರಡಿ” ಎಂದಳು, “ಒಂದೇ ನಿಮಿಷ” ಎಂದು ರಿಚರ್ಡ್ ಡೇವಿಡ್ ಎದ್ದು ಬಂದ. ಸಿಸ್ಟಮ್ ಬಳಸಿದ್ದಕ್ಕೆ ದುಡ್ಡು ಕೊಟ್ಟು ಅಲ್ಲಿಂದ ಸೌಮ್ಯ ಮತ್ತು ರಿಚರ್ಡ್ ಡೇವಿಡ್ ಹೊರಟರು. 

ರಾಜೇಶ ಒಳ್ಳೆ ವ್ಯಾಪಾರ ಆಗಿದ್ದಕ್ಕೆ ಅದೇ ಖುಷಿಗೆ ಅಂಗಡಿ ಬಂದ್ ಮಾಡಲು ರೆಡಿಯಾದ, ರಿಚರ್ಡ್ ಡೇವಿಡ್ ಬಳಸಿ ಹೋಗಿದ್ದ ಸಿಸ್ಟಮ್ ಶಟ್-ಡೌನ್ ಮಾಡುವಾಗ ಅದರಲ್ಲಿ ಅವನ ಸೀಕ್ರೆಟ್ ನೀಲಿ ಚಿತ್ರಗಳ ಫೋಲ್ಡರ್ ಎಲ್ಲ ಓಪನ್ ಆಗಿದ್ದು ‘ರಸಿಕ’ ಎಂದು ಬೈದುಕೊಂಡು ಸಿಸ್ಟಮ್ ಆಫ್ ಮಾಡಿ, ಅಂಗಡಿ ಬಂದ್ ಮಾಡಿದ. “ಮನೆಯವರೆಗೂ ಡ್ರಾಪ್ ಮಾಡ್ತೀನಿ” ಎಂದ ರಿಚರ್ಡ್ ಡೇವಿಡ್ ಗೆ “ಅಡ್ಡಿಯಿಲ್ಲ ನೀವು ಹೊರಡಿ ನೀವು ಬಲಕ್ಕೆ ತಿರುಗಿಸಿಕೋತಿರಲ್ಲ ಅಲ್ಲಿ ಬಿಡಿ ಅಲ್ಲಿಂದ ನಾನು ಹೋಗ್ತೀನಿ” ಎಂದಳು, “ಸರಿ” ಎಂದು ರಿಚರ್ಡ್ ಡೇವಿಡ್ ಆಕ್ಸಿಲೇಟರ್ ಒತ್ತಿದ, ಅವಳು ಹೇಳಿದಂತೆ ಗಾಡಿಯನ್ನು ನಿಲ್ಲಿಸಿ ಅವಳನ್ನು ಇಳಿಸಿ, ಗಾಡಿಯನ್ನು ಜಾನ್ಸನ್ ಮನೆಯ ದಾರಿಗೆ ತಿರುಗಿಸಿದ.

**                     

ರಿಚರ್ಡ್ ಡೇವಿಡ್ ಕೊಡಿಸಿದ್ದು ಎಲ್ಲ ಅನುವಾದದ ಪುಸ್ತಕಗಳು. ಮುರಕಾಮಿ, ಓ ಹೆನ್ರಿ, ಕಾಫ್ಕ, ದಸ್ತೋವಿಸ್ಕಿ, ಮಾರ್ಕ್ವೆಜ್, ಗಾರ್ಕಿ ಪುಸ್ತಕಗಳು. ಇವನ್ನೆಲ್ಲ ಓದುತ್ತಿದ್ದಂತೆ ಸೌಮ್ಯಳಿಗೆ ಇಷ್ಟು ದಿನ ಇವನ್ನೆಲ್ಲ ತಾನು ಯಾಕೆ ಓದಲಿಲ್ಲ ಅನಿಸಲು ಶುರುವಾಯ್ತು. ಅವಳಿಗೆ ಅವೆಲ್ಲ ಹೊಸ ಪ್ರಪಂಚ ಅಲ್ಲಿವರೆಗೂ ನೋಡಿರದ ಕೇಳಿರದ ಕಲ್ಪನೆಗೂ ದಕ್ಕಿರದ ಪ್ರಪಂಚ. ಅಲ್ಲಿವರೆಗೂ ಅವಳು ಓದಿದ್ದು ಈ ಲಿಪಿಯಲ್ಲಿ ಬರೆಯುತ್ತಿದ್ದ ಅರೆ ಬೆಂದ ಅಪಕ್ವ ಲೇಖಕರನ್ನ ಹೀಗೆ ಏಕಾಏಕಿ ವಿಶ್ವಸಾಹಿತ್ಯವನ್ನು ಓದುವಾಗ ‘ತಾನು ಇನ್ನೂ ಒಳ್ಳೆಯ ಕತೆಗಳನ್ನ ಬರೆಯಬೇಕು ಓ ಹೆನ್ರಿಗೂ ಮೀರಿಸಿದ ರೋಚಕ ಕತೆಗಳನ್ನು ಬರೆಯಬೇಕು’ ಎನಿಸಿತು. ಇಡೀ ದಿನ ಕೂತು ಓದುತ್ತಿದ್ದಳು. ಹನ್ನೆರಡು ಪುಸ್ತಕಗಳನ್ನು ಒಂದೇ ವಾರದಲ್ಲಿ ಓದಿ ಮುಗಿಸಿಬಿಟ್ಟಳು. 

ಈ ಮಧ್ಯೆ ಜಾನ್ಸನ್ ಅರ್ಧ ಕಟ್ಟಿದ ಮನೆಯ ಬಗ್ಗೆ ವಿಚಿತ್ರ ಸುದ್ದಿಗಳು ಹರಡತೊಡಗಿದವು ರಾತ್ರಿ ಪೂರ್ತಿ ಆ ಮನೆಯಲ್ಲಿ ಲೈಟ್ ಆನ್ ಆಗಿರುತ್ತೆ ಎಂದು, ಅಲ್ಲಿಂದ ಎಂತದ್ದೋ ವಿಚಿತ್ರ ಸದ್ದು ಬರುತ್ತದೆ ಎಂದು, ಬಂದು ಇಪ್ಪತ್ತು ದಿನವಾದರೂ ಊರು ಬಿಟ್ಟ ಹೋಗದ ಡೇವಿಡ್ ಸ್ಮಗ್ಲರ್ ಇಲ್ಲ ಉಗ್ರಗಾಮಿ ಇರಬೇಕು, ಕೆಲ್ಸಕ್ಕೆ ಬರೋ ಕೀಳು ಜಾತಿ ಹುಡುಗಿ ಜೊತೆ ಮಲ್ಕೊತಾನೆ ಅಂತೇ, ಹೊತ್ತಲ್ಲದ ಹೊತ್ತಲ್ಲಿ ಕಾರು ತೆಗೆದುಕೊಂಡು ಆಗುಂಬೆ- ಜೋಗಿಮನೆ- ಕಡೆಮನೆ- ವಡೂರು- ಒಲಬೈಲು- ಹಂದಲಸು- ಒಳಮಾಡಿ ಹೀಗೆ ಎಲ್ಲ ಊರಲ್ಲೂ ಕಾಣಸಿಕೊಳ್ಳುವನೆಂದು, ಜಾನ್ಸನ್ ಮನೆಯನ್ನ ಈಗಾಗಲೇ ಖರೀದಿಸಿದ್ದಾನೆ ಎಂದು, ಜಾನ್ಸನ್ ದೆವ್ವದ ಕಾಟಕ್ಕೆ ಅರ್ಧ ನಿಲ್ಲಿಸಿದ ಮನೆ ಬಗ್ಗೆ ರಿಚರ್ಡ್ ಗೆ ಇರುವ ಆಸಕ್ತಿ ನೋಡಿದ್ರೆ ಅವ ಮಂತ್ರವಾದಿ ಇರಬೇಕೆಂದು ಹೀಗೆ ಏನೇನೋ ಸುದ್ದಿಗಳು ಹರಡಿಬಿಟ್ಟಿದ್ದವು. 

ಇದೇ ವಿಷಯವನ್ನು ಸೌಮ್ಯ ಶೀನಪ್ಪನಿಗೆ ಕಾಲ್ ಮಾಡಿ ಕೇಳಿದಾಗ “ಜನ ಮರಳು, ಅವನತ್ರ ದುಡ್ಡಿದೆ, ನಾವು ನಮ್ ಪ್ರಯತ್ನ ಮಾಡುದ್ವಿ ಅವನೆಂಡ್ತಿ ಸಿಗ್ಲಿಲ್ಲ, ಅದಕ್ಕೆ ಅವನೇ ಹುಡುಕ್ತೀನಿ ಅಂತ ಅಲ್ಲಿ ಇಲ್ಲಿ ಸುತ್ತಾಡ್ತಾನೆ, ನಿದ್ದೆ ಬರೋಲ್ಲ ಅಂತ ಲೈಟ್ ಹಾಕೊತಾನೆ ಅದನ್ನೇ ಈ ಜನ ಏನೇನೋ ಕತೆ ಕಟ್ಟಿದ್ದಾರೆ. ಪಾಪ ಯಾರು ಇಲ್ಲ ಇದ್ದ ಹೆಂಡತಿ ಕೂಡ ಹಿಂಗ್ ಮಿಸ್ ಆದಳು ಅವನ ಕಷ್ಟ ಅವನಿಗೆ” ಎಂದು ಅವನ ವಹಿಸಿ ಮಾತಾಡಿದಾಗ ಸೌಮ್ಯಳಿಗೆ ಖುಷಿಯೇ ಆಯ್ತು. ಅವನು ಊರಿನವರು ಹೇಳಿದಷ್ಟು ಕೆಟ್ಟವನಿಲ್ಲ ಎಂದು ಅವಳ ನಂಬಿಕೆ. 

ರಿಚರ್ಡ್ ಡೇವಿಡ್ ಮಾತಾಡಿಸಬೇಕೆಂದು ಸೌಮ್ಯಳಿಗೆ ಅನ್ನಿಸಿ ಒಂದೆರಡು ದಿನ ಆ ರಸ್ತೆಯಲ್ಲೇ ಅಲೆದಾಡಿದಳು. ಕಾದಳು. ಅವನು ಕಣ್ಣಿಗೆ ಕಾಣಿಸಲಿಲ್ಲ. ರಾಜೇಶನನ್ನು ರಿಚರ್ಡ್ ನಂಬರ್ ಕೇಳುವ ಅಂದುಕೊಂಡಳು ಅವನು ಐಟಂ ತರಲು ಬೆಂಗಳೂರಿಗೆ ಹೋಗಿ ಐದು ದಿನವಾದರೂ ಬಂದಿರಲಿಲ್ಲ. ಧೈರ್ಯ ಮಾಡಿ ಒಬ್ಬಳೇ ಜಾನ್ಸನ್ ಮನೆಯ ದಾರಿ ತುಳಿದಳು. 

ಬಾಗಿಲು ತಟ್ಟೋದೋ? ಬೇಡವೋ? ವಾಪಸು ಹೋಗಿಬಿಡಲ? ಎಂದು ಯೋಚಿಸುವಾಗಲೇ ಬಾಗಿಲು ತೆರೆಯಿತು. ನಗುತ್ತ ನಾಗಿ ಈಚೆ ಬಂದಳು. ಈಗಾಗಲೇ ಊರವರ ಬಾಯಿಗೆ ತುತ್ತಾಗಿದ್ದ ಹುಡುಗಿ ಅವಳೇ. ‘ಒಳಗೆ ಇದ್ದಾರೆ ಹೋಗಿ’ ಅಂದು ಕಸ ಅಂಗಳದ ಕಸ ಗುಡಿಸಲು ಶುರುಮಾಡಿದಳು. ಬಣ್ಣ ಕಾಣದ ಅರ್ಧ ಸಿಮೆಂಟ್ ಕಂಡ ಗೋಡೆಗಳು, ರಿಚರ್ಡ್ ಮಾಡಿಸಿಕೊಂಡ ಕಿಟಕಿ ಬಾಗಿಲುಗಳು, ಒಂದು ಹಳೆ ಟಿ.ವಿ, ಒಂದು ಹಳೆ ಸೋಫಾ, ಸೋಫಾ ಮುಂದೆ ಟೀಪಾಯಿ ಅದರ ಮೇಲೆ ಒಂದಷ್ಟು ಬಾಟಲಿಗಳಿದ್ದವು, ರಿಚರ್ಡ್ ಶರ್ಟು ಹಾಕಿಕೊಳ್ಳುತ್ತಾ ಈಚೆ ಬಂದ. ಸೌಮ್ಯಳನ್ನು ನೋಡಿದ. ಸೌಮ್ಯ ಅವನನ್ನು ನೋಡಿದಳು. ಎದೆ ತುಂಬಾ ಇದ್ದ ಕೂದಲು ಕಂಡು ನಾಚಿದಳು. ನಾಚದ ಹಾಗೆ ನಟಿಸಿ “ನೀವು ಕೊಡ್ಸಿದ್ದ್ ಪುಸ್ತಕಗಳನ್ನೆಲ್ಲ ಓದಿದೆ ತುಂಬಾ ಚೆನ್ನಾಗಿತ್ತು ಥ್ಯಾಂಕ್ಸ್ ಹೇಳಿ ಹೋಗೋಣ ಅಂತ ಬಂದೆ” ಎಂದಳು. “ಒಳ್ಳೆದಾಯ್ತು, ಇನ್ನೂ ಒಳ್ಳೆ ಒಳ್ಳೆ ಪುಸ್ತಕಗಳ ಕಲೆಕ್ಷನ್ ಇದೆ, ನೀನು ಓದಬೇಕು,ಅದರಲ್ಲೂ ಮುರಕಮಿಯ ಕಾಫ್ಕಾ ಆನ್ ದಿ ಶೋರ್ ಓದ್ಬೇಕು, ಈ ನನ್ನ ಒದ್ದಾಟ ಎಲ್ಲ ಮುಗಿದ ಮೇಲೆ ನಿನಗೆ ಆ ಬುಕ್ ಕಳಿಸಿಕೊಡ್ತೀನಿ. ನಾನು ಇನ್ನೊಂದೆರಡ್ ದಿನ ಇಲ್ಲಿಂದ ಹೋಗ್ತಿದ್ದೆ, ಹೆಂಡತಿ ಸಿಗೋ ತರ ಇಲ್ಲ, ಹತ್ರ ಇರೋ ಎಲ್ಲ ಕಾಡಲ್ಲಿ ಹುಡುಕಿದ್ ಆಯ್ತು, ಇನ್ನೂ ಇಲ್ಲಿದ್ದು ಪ್ರಯೋಜನ ಇಲ್ಲ, ನಾಳೆ ನಾಡಿದ್ದೋ ಕೇಸ್ ಕ್ಲೋಸ್ ಉಂಟು ಅದರ ಪ್ರೊಸೀಜರ್ ಎಲ್ಲ ಆದಮೇಲೆ ಹೊರಟು ಹೋಗ್ತೀನಿ” ಎಂದು ಹೇಳಿ ಸಿಗರೇಟ್ ಹಚ್ಚಿದ. 

ಸ್ವಲ್ಪ ಹೊತ್ತು ಏನೂ ಮಾತನಾಡಲು ತೋಚದೆ ಇಬ್ಬರು ಸುಮ್ಮನೆ ಕೂತಿದ್ದರು, ರಿಚರ್ಡ್ ಡೇವಿಡ್ ಏನೋ ಯೋಚಿಸುತ್ತ ಕೂತವನು ತಟ್ಟನೆ ನೆನಪಾಗಿ ತನ್ನ ಮೊಬೈಲ್ ತೆಗೆದು “ಇವಳೇ ನನ್ನ ಹೆಂಡ್ತಿ, ನನ್ನ ಗೂಗಲ್ ಡ್ರೈವಲಿತ್ತು. ಇದು ನಾವು ಮದ್ವೆ ಆಗಿದ್ದ ಫೋಟೋ…ಇದು…” ಎಂದು ರಿಚರ್ಡ್ ಡೇವಿಡ್ ಮತ್ತು ಅವನ ಬೆಳ್ಳನೆಯ ಗುಂಗುರು ಕೂದಲಿನ ಹೆಂಡತಿ ಇದ್ದ ಕೆಲವೇ ಫೋಟೋಗಳನ್ನು ತೋರಿಸುತ್ತಿದ್ದ, ಕೊನೆಗೆ ಅವನು ಅವನ ಹೆಂಡತಿ ಮುತ್ತು ಕೊಟ್ಟುಕೊಳ್ಳುತ್ತಿರುವ ಖಾಸಗಿ ಫೋಟೋ ಬಂದ ಕೂಡಲೇ, “ಸಾರಿ” ಎಂದು ಮೊಬೈಲ್ ಒಳಗಿಟ್ಟುಕೊಂಡ. ಸೌಮ್ಯಳಿಗೂ ಒಂದು ತರಹ ಅಹಿತ ಅನುಭವ ಆಗಿ ಗಂಟಲು ಒಣಗಿ ಏನು ಮಾತನಾಡುವುದು ತಿಳಿಯದಾಗಿ “ಸರಿ ನಾ ಬರ್ತೆ” ಎಂದು ಎಂದು ಈಚೆ ಬಂದಳು. ನಾಗಿ ಅವಳ ನೋಡಿ ನಕ್ಕಳು. 

ಸೌಮ್ಯ ಜೋರು ಜೋರಾಗಿ ನಡೆಯುತ್ತಾ ಹೊರಟಳು. ಅವಳಿಗೆ ರಿಚರ್ಡ್ ಡೇವಿಡ್ ಮತ್ತು ಅವನ ಹೆಂಡತಿಯ ಖಾಸಗಿ ಫೋಟೋನೇ ಕಣ್ಮುಂದೆ ಬರುತ್ತಿತ್ತು.  

**

ಇಷ್ಟಾದ ಮೇಲೆ ಒಂದಷ್ಟು ಸಂಗತಿಗಳು ಕೇವಿಕೊಪ್ಪದಲ್ಲಿ ನಡೆಯಿತು. 

ಆ ಸಂಜೆ ಸೌಮ್ಯ ರಿಚರ್ಡ್ ಡೇವಿಡ್ ಮನೆಯಿಂದ ಹೊರಬರುವುದನ್ನು ನೋಡಿದವರ್ಯಾರೋ ಅವಳ ಅಪ್ಪಯ್ಯನಿಗೆ ವಿಷಯ ಮುಟ್ಟಿಸಿದ್ದರು. ಈಗಾಗಲೇ ಆಗುಂಬೆಯ ಐಸ್ ಕ್ರೀಮ್ ಪಾರ್ಲರಿನಲ್ಲಿ ಅವಳು ರಿಚರ್ಡ್ ನಗುನಗುತ್ತಾ ಐಸ್ ಕ್ರೀಮ್ ತಿನ್ನುತಿದ್ದನ್ನು ನೋಡಿ ಅದು ಕೂಡ ಅಪ್ಪಯ್ಯನ, ಮಾವನ ಕಿವಿ ತಲುಪಿದ್ದವು. ಹಾಗಾಗಿ ಮನೆಗೆ ಬಂದ ಮಗಳಿಗೆ ಅಪ್ಪಯ್ಯ ಚೆನ್ನಾಗಿ ಬಾರಿಸಿದ್ದ. ಅದಾಗಿ ಒಂದು ವಾರದಲ್ಲೇ ಬೆಂಗಳೂರಿನ ಹುಡುಗನೊಬ್ಬನನ್ನ ನೋಡಿ ಮದುವೆ ನಿಶ್ಚಯಿಸಿಬಿಟ್ಟರು. ಅವಳ ಮೊಬೈಲ್ ಕಿತ್ತುಕೊಂಡರು. ಹೊರಗಡೆ ಬಿಡದೆ ಮನೆಯಲ್ಲೇ ಇರುವಂತೆ ಕಣ್ಗಾವಲು ಮಾಡಿದರು. ಐದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದ ರಾಜೇಶ ಮತ್ತೆ ಕಾಣಿಸಲೇ ಇಲ್ಲ. ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ಬೆಂಗಳೂರಿನ ಡೀಲರ್ಸುಗಳಿಗೆ ಕಾಲ್ ಮಾಡಿ ಕೇಳಿದಾಗ ‘ಅವನು ಬಂದಿದ್ದೆ ನೋಡಿಲ್ಲ’ ಎಂದರು. ಅದಕ್ಕೆ ಗಾಬರಿಯಾಗಿ ಅವರ ಮನೆಯವರು ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಹೆಂಡತಿ ಸಿಗದ ಕಾರಣ ರಿಚರ್ಡ್ ಕೇಸು ಪೊಲೀಸರೇ ಅವನಿಗೆ ಹೇಳಿ ಅವನ ಮುಂದೆ ಕ್ಲೋಸ್ ಮಾಡಿದರು. ಅದರ ಮಾರನೆಯ ದಿನವೇ ರಿಚರ್ಡ್ ಕಾಣಿಸಲಿಲ್ಲ. ಅವನು ಕೊಡಗಿಗೋ ಇಲ್ಲ ದುಬೈಗೆ ಹೋಗಿರಬೇಕೆಂದು ಶೀನಪ್ಪನ ಅಂದಾಜು. ಕೇಸು ಕ್ಲೋಸ್ ಆಗಿ ಹೋಗುವಾಗ ರಿಚರ್ಡ್ ಅಳುತ್ತಿದ್ದು, ಶೀನಪ್ಪ ಸಮಾಧಾನ ಮಾಡಿದ್ದು, ಇಷ್ಟು ದಿನದ ಉಪಕಾರಕ್ಕೆ ಶೀನಪ್ಪನಿಗೆ ಹತ್ತು ಸಾವಿರ ಬೇಡವೆಂದರೂ ಕೈಲಿ ಇಟ್ಟಿದ್ದು ಸ್ಟೇಷನಿನ್ನವರು ನೋಡಿದ್ದರು. ರಿಚರ್ಡ್ ಹೋಗುವ ಮುನ್ನ ನಾಗಿಗೂ ತುಂಬಾ ದುಡ್ಡು ಕೊಟ್ಟಿರಬೇಕೆಂದು ಸುದ್ದಿ ಹರಡಿತ್ತು.

ಒಂದು ಮಧ್ಯರಾತ್ರಿ ಜಾನ್ಸನ್ ಕಟ್ಟಿಸಿದ ಅರ್ಧ ಮನೆಯಿಂದ ಕಿರುಚುತ್ತಾ ನಾಗಿ ಓಡಿಬಂದಳು. ಅವಳು ಕಿರುಚಿದ್ದು ಕೇಳಿಸಿಕೊಂಡು ಒಂದಿಬ್ಬರು ಬಂದಾಗ ನಾಗಿ ನಡುಗುತ್ತ ಕೂತಿದ್ದಳು. ಅವಳ ಪಕ್ಕ ನಡುಗುತ್ತ ಯುವಕನೊಬ್ಬ ನಿಂತಿದ್ದ. ಕರಿಯ. 

ಸುದ್ದಿ ತಿಳಿದು ಪೊಲೀಸ್ ಜೀಪ್ ಕೂಡ ಬಂತು. ನಾಗಿಯನ್ನು ‘ಏನಾಯ್ತು?’ ಎಂದಾಗ ಆಕೆ ನಡುಗುತ್ತ ಮನೆಯ ಕಡೆ ಬೆರಳು ತೋರಿಸಿದಳು. ಪೊಲೀಸರು ಊರಿನವರು ಒಂದಿಬ್ಬರು ಒಳಗೆ ಹೋದಾಗ ಎಂತದೋ ವಾಸನೆ ಬಂದು, ವಾಸನೆ ಹುಡುಕುತ್ತ ಹೋದಾಗ ರೂಮಿನಲ್ಲಿ ಪಕ್ಕಕೆಳೆದ ಮಂಚದ ಕೆಳಗೆ ಗೋಣಿಚೀಲದಲ್ಲಿ ರಾಜೇಶನ ಕೊಳೆತ ದೇಹವಿತ್ತು. ಅವನ ಕಣ್ಣುಗುಡ್ಡೆಗಳು ಈಚೆ ಬಂದಿದ್ದವು, ಕುತ್ತಿಗೆಯ ಬಳಿ ಚಾಕುವಿನಿಂದ ಹರಿದ ಗುರುತು.

ಕರಿಯನನ್ನು ದಬಾಯಿಸಿ ಕೇಳಿದಾಗ “ಜಾನ್ಸನ್ ಮನೆಯಲ್ಲಿ ಯಾರು ಇರೋಲ್ಲ, ಕೀ ನನ್ನ ಹತ್ರ ಇದೆ, ಅಲ್ಲೇ ಹೋಗೋಣ್ವಾ?” ಎಂದು ನಾಗಿಯೇ ಕರೆದುಕೊಂಡು ಬಂದಿದ್ದಳು, ಇಬ್ಬರು ಬೆತ್ತಲಾಗಿ ಒದ್ದಾಡುವಾಗ ನಾಗಿಯೇ ಎಂತದೋ ವಾಸನೆ ಎಂದು ಎದ್ದು ರೂಮಿಗೆ ಹೋಗಿ ಮಂಚದ ಕೆಳಗೆ ವಾಸನೆ ಎಂದು ಮಂಚ ಸರಿಸಿದರೆ ಒಂದು ಗೋಣಿಚೀಲ ಅದನ್ನು ತೆಗೆದರೆ ಸತ್ತು ಕೊಳೆತು ನಾರುತ್ತಿರುವ ರಾಜೇಶ.

ಪೊಲೀಸರು ರಾಜೇಶನ ಮನೆಯವರಿಗೆ ವಿಷಯ ತಿಳಿಸಿ ರಾಜೇಶನ ಶವವನ್ನು ಟೆಸ್ಟ್ ಗೆ ಕಳಿಸಿ, ರಾಜೇಶನ ಸೈಬರ್ ಅಂಗಡಿಯನ್ನು ಬೀಗ ಒಡೆದು ಒಳಕ್ಕೆ ಹೋಗಿ ಸಿಸ್ಟಮ್ ಎತ್ತಿಕೊಂಡು ಬಂದರು. ರಾಜೇಶನ ಮೊಬೈಲ್ ಟ್ರ್ಯಾಕ್ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಕೊನೆ ಸ್ಥಳ ಕಂಬಳಿಕೊಪ್ಪದ ಕೆರೆ ಬಳಿ ತೋರಿಸುತ್ತಿತ್ತು. ಅಲ್ಲಿ ಹೋಗಿ ಕೆರೆಯ ಬಳಿ ಕೆರೆಯ ಒಳಗೆ ಹುಡುಕಾಡಿದರು ಸಿಗಲಿಲ್ಲ. ರಿಚರ್ಡ್ ಡೇವಿಡ್ ಕೂಡ ಸಿಗಲಿಲ್ಲ. ಅವನು ಇಲ್ಲಿ ತಗೊಂಡ ಮೊಬೈಲ್ ಹುಡುಕಾಡಿದಾಗ ಜಾನ್ಸನ್ ಮನೆಯಲ್ಲಿ ಸಿಕ್ಕಿತ್ತು. ಕಾರು ಕೂಡ ಬೇಳೂರು ಸಮೀಪದ ಲಕ್ಷ್ಮೀಪುರ ಕೆರೆ ಬಳಿ ಹಾಗೆ ಬಿಟ್ಟು ಹೋದ ವಿಷಯ ಬಂತು. ಪೊಲೀಸ್ ಫೈಲಿನಲ್ಲಿ ಅವನ ಸ್ಟ್ಯಾಂಪ್ ಸೈಜ್ ಫೋಟೋ ಅಷ್ಟೇ ಇದ್ದು ಮಿಕ್ಕ ಯಾವ ಫೋಟೋ ಇರಲಿಲ್ಲ, ಮೊಬೈಲಿನಲ್ಲಿ ಅವನ ಹೆಂಡತಿಯ ಫೋಟೋ ಜೊತೆಗೆ ಅವರಿಬ್ಬರ ಖಾಸಗಿಯ ಒಂದು ಫೋಟೋ ಇತ್ತು ಅಷ್ಟೇ, ರಾಜೇಶನ ಸಿಸ್ಟಮಿನಲ್ಲೂ ಎಷ್ಟೋ ಬೆತ್ತಲೆ ಫೋಟೋಗಳ ವೀಡಿಯೊಗಳ ಮಧ್ಯೆ ರಿಚರ್ಡ್ ಡೇವಿಡ್ ಮತ್ತು ನವಿಲಿನ ಕಿವಿಯೋಲೆಯಿದ್ದ ಅವನ ಹೆಂಡತಿಯ ಖಾಸಗಿ ಫೋಟೋ ಕೂಡ ಇತ್ತು. 

ರಾಜೇಶ್ ಸೈಬರ್ ಸೆಂಟರ್ ಜೊತೆಗೆ ಎಲ್ಲೆಲ್ಲೋ ಯಾವ ಯಾವ ಹೋಟೆಲಿನಲ್ಲಿ ಬೆತ್ತಲು ಕೂಡುತ್ತಿದ್ದವರ ವೀಡಿಯೊ ರೆಕಾರ್ಡ್ ಮಾಡಿ ರಾಜೇಶನ ಈ-ಮೇಲಿಗೆ, ಡ್ರೈವ್ಗೆ ಬರುತ್ತಿತ್ತು ಅದನ್ನು ಇಲ್ಲಿ ಕೂತು ಅಪ್ಲೋಡ್ ಮಾಡುತ್ತಿದ್ದ ವಿಷಯ ಪೊಲೀಸರು ಭೇದಿಸಿದರು.

ರಿಚರ್ಡ್ ಡೇವಿಡ್ ಇಲ್ಲಿ ಬರುವ ಮುಂಚೆಯೇ ತನ್ನ ಹೆಂಡತಿಯನ್ನು ಕಳೆದುಕೊಂಡಿರಬೇಕು, ಅದಕ್ಕೆ ಕಾರಣ ಅವರ ಖಾಸಗಿ ಕ್ಷಣದ ವೀಡಿಯೊ ಫೋಟೋಗಳೇ ಇರಬೇಕು, ಅದರಿಂದ ಅವನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರಬೇಕು, ಅದಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲವೋ ರಾಜೇಶನೇ ಕಾರಣವಿರಬಹುದು, ರಾಜೇಶನಿಗಾಗಿಯೇ ರಿಚರ್ಡ್ ಇಲ್ಲಿಯವರೆಗೂ ಬಂದಿದ್ದ ಎಂಬ ಅನುಮಾನ ಬಂತು. ಆದರೆ ರಿಚರ್ಡ್ ಡೇವಿಡನನ್ನ ಹಿಡಿಯುವುದು ಹೇಗೆ? ಎಂಬ ಹೊಸ ತಲೆನೋವು ಪೊಲೀಸರಿಗೆ ಶುರುವಾಯ್ತು.  

**

ಮುಂದೆ ಏನಾಯ್ತೋ ಸೌಮ್ಯಳಿಗೂ ಗೊತ್ತಿಲ್ಲ, ರಾಜೇಶನ ಶವ ಸಿಕ್ಕ ಒಂದು ತಿಂಗಳಿಗೆ ಸೌಮ್ಯಳಿಗೆ ಮದುವೆಯಾಯ್ತು. ಅವಳು ಬೆಂಗಳೂರು ಸೇರಿಕೊಂಡಳು. ಅಲ್ಲಿಂದ ಗಂಡನ ಜೊತೆ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲೇ ಸೆಟ್ಟಲ್ ಆದಳು. ಶೀನಪ್ಪನ ಸಂಪರ್ಕ ಸಿಗಲಿಲ್ಲ. ಊರಿಗೆ ವಾರಕ್ಕೋ ತಿಂಗಳಿಗೋ ಕಾಲ್ ಮಾಡಿದಾಗ ಅವರ ಮನೆಯವರು ಕೂಡ ಏನು ಹೇಳುತ್ತಿರಲಿಲ್ಲ. ಅವಳಿಗೂ ಕೇಳುವ ಮನಸಾಗದೆ ಸುಮ್ಮನಾಗುತ್ತಿದ್ದಳು. ತುಂಬಾ ದಿನಗಳವರೆಗೂ ಯಾವ ಬರಹವೂ ಅವಳ ಲಿಪಿ ಖಾತೆಯಲ್ಲಿ ಪೋಸ್ಟ್ ಆಗಲಿಲ್ಲ. ‘ಎಲ್ಲಿ ಹೋದ್ರಿ? ಯಾವಾಗ ಬರೀತೀರಾ?’ ಎಂಬ ಮೆಸೇಜುಗಳು ಬಂದು ಅವು ಕೂಡ ನಿಂತು ಹೋದವು.

ಇವನ್ನೆಲ್ಲ ನೆನಪು ಮಾಡಿಕೊಂಡು ಗಿಲ್ಲಿಯನ್ ಫ್ಲಿನ್ನಿನ ‘ಗಾನ್ ಗರ್ಲ್’ ಕಾದಂಬರಿ ಓದುವಾಗ ಅವಳಿಗೆ ಕತೆ ಬರೆಯಬೇಕು ಎನಿಸಲು ಶುರುವಾಯ್ತು. ಬರೆಯುವ ಉಮ್ಮೇದು ಉಕ್ಕಿಬಂದು ತನ್ನ ಡೆಸ್ಕ್ ಟಾಪ್ ಎದುರು ಕೂತಳು. “ಕೇವಿಕೊಪ್ಪದಲ್ಲಿ ಕಾಣಿಸಿಕೊಂಡ ಆಗಂತುಕ. ಭಾಗ – ಒಂದು” ಶೀರ್ಷಿಕೆ ಬರೆದು ”ಆಗುಂಬೆಯ ಸಮೀಪದ ಕೇವಿಕೊಪ್ಪ ಎಂಬ ಕುಗ್ರಾಮದಲ್ಲಿ ಆ ಊರಿಗೆ ಪರಿಚಯವೇ ಇಲ್ಲದ ರಿಚರ್ಡ್ ಡೇವಿಡ್ ಎಂಬ ವ್ಯಕ್ತಿ ಅರ್ಧ ಕಟ್ಟಿ ಬಿಟ್ಟ ಪಾಳುಮನೆಗೆ ಬಂದಿರುವುದು ಗೊತ್ತಿದ್ದು ಕೇವಲ ಸೌಮ್ಯ ನಾಯಕ್ ಎಂಬ ಉದ್ದ ಜಡೆಯ ಹುಡುಗಿಗೆ ಮಾತ್ರ” ಎಂದು ಟೈಪಿಸಿದಳು. 

ಬೆಲ್ ಸದ್ದಾಯ್ತು. ಎದ್ದು ಬಾಗಿಲು ತೆಗೆದಳು. ಆಸ್ಟ್ರೇಲಿಯಾ ಪೋಸ್ಟಿನವನು ಇಂಡಿಯಾದಿಂದ ಬಂದ ಪಾರ್ಸೆಲ್ ಇತ್ತು. ತೆಗೆದು ನೋಡಿದಳು. ಮುರಕಮಿಯ ‘ಕಾಫ್ಕಾ ಆನ್ ದಿ ಶೋರ್’ ಕಾದಂಬರಿ. ಫ್ರಮ್ ವಿಳಾಸ ನೋಡಿದಳು. 

‘ನವಿಲಿನ ಕಿವಿಯೋಲೆ, 

ಸೋಮವಾರ ಸಂತೆ, ಕೊಡಗು’ 

ಎಂದಿತ್ತು.

1 thought on “ಕೇವಿಕೊಪ್ಪ ”

Leave a Comment

Your email address will not be published. Required fields are marked *

Scroll to Top