ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ

ಒಂದೆರಡು ದಿನಗಳಿಂದ
ಹೊಟ್ಟೆಯಲ್ಲಿ ಚಿಟ್ಟೆಗಳ ಹಾರಾಟ
ಇನ್ನಿಲ್ಲದ ಗಲಿಬಿಲಿ..
ಏಕೆಂದು ಕೇಳುವದಿಲ್ಲ
ನಾನು ಬಲ್ಲೆ..

“ಇನ್ನು face book
ತೆಗೆಯುವದಿಲ್ಲ
ಅನವಶ್ಯಕವಾಗಿ
ಪ್ರತಿಕ್ರಿಯಿಸುವದಿಲ್ಲ
ಎಂದೆಲ್ಲ ವೀರಪ್ರತಿಜ್ಞೆಮಾಡಿ…”

ಅರ್ಧದಿನವೂ ಆಗಿಲ್ಲ
ಆಗಲೇ ತಟ್ಟೆಯಲ್ಲಿಯ
ಅನ್ನ ರುಚಿಸುತ್ತಿಲ್ಲ…
ಏನೋ ಅನ್ಯಮನಸ್ಕತೆ..

ನನಗೆ ಗೊತ್ತಾಗಿದೆ
“ಬಿಟ್ಟೇಬಿಟ್ಟೆ” ಅಂದುಕೊಂಡಷ್ಟೂ
ಬೆನ್ನೇರುವ ಬೇತಾಳವಿದು…
ಉತ್ತರವೊಂದಕ್ಕೆ ತೃಪ್ತಿಯಾಗಿ
ಇಳಿದು ಹೋಗುವದಿಲ್ಲ…

ತಲೆ ಸಹಸ್ರಹೋಳು
ಮಾಡಲೇಬೇಕೆಂದು
ಕಾದು ಕುಳಿತಿರುವ
ಸಂಚು ಇದರದು..
ಕಾದು ನೋಡಬೇಕಾಗಿದೆ
ಗೆಲುವು ವಿಕ್ರಮನದೋ?
ಬೇತಾಳನದೋ?

Leave a Comment

Your email address will not be published. Required fields are marked *

Scroll to Top