ಲೇಖಕರು :ಶ್ರೀನಾಥ್ H.C.
ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ – “ಭವಿಷ್ಯವಾಣಿ”
ಭವಿಷ್ಯವಾಣಿ !!
ಅಂದು ಶನಿವಾರವಾಗಿದ್ದರಿಂದ ಮಾಧವ ಬೇಗನೆದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ತನ್ನ ನೆಚ್ಚಿನ ದೈವವಾದ ವೀರಾಂಜನೇಯ ಗುಡಿಗೆ ಬಂದಿದ್ದ.
ಹೇಳಿಕೇಳಿ ಶನಿವಾರ, ದೇವಸ್ಥಾನದಲ್ಲಿ ವಿಪರೀತ ಜನ ತುಂಬಿ ತುಳುಕುತ್ತಿದ್ದರು. ವೀರಾಂಜನೇಯ ಸ್ವಾಮಿಯನ್ನು ನೋಡಲು ಒಂದು ಗಂಟೆ ಸರದಿಯ ಸಾಲಿನಲ್ಲಿ ನಿಂತು ದರ್ಶನವಾದ ಮೇಲೆ ಪಂಚಾಮೃತ ಹಾಗೂ ತೀರ್ಥವನ್ನು ಸ್ವೀಕರಿಸಿ ದೇವಸ್ಥಾನದ ಒಂದು ಮೂಲೆಗೆ ಬಂದವನಿಗೆ ಕೈ ಒರೆಸಿಕೊಳ್ಳಲು ತಾನು ಕರವಸ್ತ್ರ ತರುವುದನ್ನು ಮರೆತಿದ್ದೇನೆ ಎಂಬುದು ಅರಿವಾದ ಮೇಲೆ ಅಲ್ಲೇ ಕೆಳಗೆ ಬಿದ್ದಿದ್ದ ಪತ್ರವೊಂದಕ್ಕೆ ಕೈ ಹಾಕಿದನು. ಇನ್ನೇನು ಕೈ ಒರೆಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅದರಲ್ಲಿ ಏನೋ ಬರೆದಿದೆ ಎಂಬುದು ಕಂಡು ಬಂದಿತ್ತು. ಏನೆಂದು ಓದಿದಾಗ ಆಶ್ಚರ್ಯ ಹಾಗೂ ಕುತೂಹಲ ಉಂಟಾಯಿತು. ಎರಡು ಮೂರು ಬಾರಿ ಓದಿದ ಮೇಲೆ ಒಂದು ತೀರ್ಮಾನಕ್ಕೆ ಬಂದವನಂತೆ ಕಂಡನು. ಸುತ್ತಲೂ ಗಮನಿಸಿದಾಗ ಯಾರು ಈ ಪತ್ರಕ್ಕೆ ಸಂಬಂಧಪಟ್ಟವರು ಕಾಣಲಿಲ್ಲ ಹಾಗಾಗಿ ಅಲ್ಲೇ ಬಿದ್ದಿದ್ದ ಮತ್ತೊಂದು ತುಂಡು ಕಾಗದವನ್ನು ತೆಗೆದುಕೊಂಡು ಕೈ ಒರೆಸಿಕೊಂಡು ಬಿಸಾಕಿದನು. ಈ ಪತ್ರವನ್ನು ಜೋಪಾನವಾಗಿ ತನ್ನ ಕಿಸೆಯಲ್ಲಿಟ್ಟುಕೊಂಡು ಭಟ್ಟರ ಹೋಟೆಲಿಗೆ ಹೋಗಿ ತಿಂಡಿ ತಿಂದು ಕಾಫಿ ಕುಡಿದು ರೂಮಿಗೆ ಮರಳಿದನು.
ಆಗ ಪುನಹ ಆ ಪತ್ರದಲ್ಲಿ ಬರೆಯಲಾಗಿದ್ದ ಅಕ್ಷರಗಳ ಮೇಲೆ ಕಣ್ಣು ಹಾಯಿಸಿದನು. ಎಷ್ಟು ಮುದ್ದಾಗಿ ದುಂಡಗೆ ಬರೆದಿದ್ದಾಳೆ ಈ ಹುಡುಗಿ. ಇವಳ ಅಕ್ಷರಗಳೇ ಇಷ್ಟು ಮುದ್ದಾಗಿವೆ ಅಂದರೆ ಅವಳು ಕೂಡ ಬಹುಶಹ ಮುದ್ದಾಗಿರಬಹುದು ಅಂದುಕೊಂಡು ತನ್ನ ತರ್ಕಕ್ಕೆ ತನಗೆ ನಗು ಬಂದಿತ್ತು.
ಪುನಹ ಆ ಪತ್ರದ ಒಕ್ಕಣೆಯನ್ನು ನೋಡಿದನು. ಅದರಲ್ಲಿ ‘ ನಾಳೆ ಭಾನುವಾರ ರಜಾದಿನವಾದ್ದರಿಂದ ನಿಮಗೂ ರಜಾ ಇರುತ್ತದೆ, ಹಾಗಾಗಿ ಒಂಟಿ ದಿಬ್ಬದ ಹತ್ತಿರ 10 ಗಂಟೆಗೆ ಸರಿಯಾಗಿ ತಪ್ಪದೇ ಬರಬೇಕು . ಅಲ್ಲಿರುವ ಶಿವನ ಗುಡಿಯಲ್ಲಿ ಹತ್ತನೆಯ ಕಂಬದ ಬಳಿ ನಾನು ಕುಳಿತಿರುತ್ತೇನೆ. ಗುಲಾಬಿ ಬಣ್ಣದ ಚೂಡಿದಾರ್ ಹಾಕಿರುತ್ತೇನೆ ಹಾಗಾಗಿ ನಿಮಗೆ ನನ್ನನ್ನು ಕಂಡು ಹಿಡಿಯಲು ಸುಲಭವಾಗಬಹುದು. ನೀವು ಖಂಡಿತಾ ಬರುತ್ತೀರಿ ಎಂದು ನನ್ನ ನಂಬಿಕೆ. ಇಂತಿ ನಿಮ್ಮ ಪ್ರಿಯತಮೆ’ ಮುಂದೆ ಪ್ರೇಮದ ಚಿಹ್ನೆ ನಮೂದಿಸಿದ್ದಳು.
ಈ ಪತ್ರ ಯಾವುದೋ ಹುಡುಗಿ ಬರೆದಿದ್ದಾಳೆ ಎಂಬುದಂತೂ ಖಚಿತ. ಆದರೆ ಯಾರಿಗಾಗಿ ಬರೆದಳು? ಆ ವ್ಯಕ್ತಿ ಈ ಪತ್ರವನ್ನು ದೇವಸ್ಥಾನದ ಹಿಂಭಾಗದಲ್ಲಿ ಬೀಳಿಸಿಕೊಂಡು ಹೋಗಿದ್ದಾನೋ ಏನೋ ಅಥವಾ ಅವನಿಗೆ ಸಿಗಬೇಕಾಗಿದ್ದ ಪತ್ರ ನನಗೆ ಸಿಕ್ಕಿತೋ ಏನೋ ಎಂದು ವಿಧ ವಿಧವಾಗಿ ಯೋಚಿಸಿ ನಾಳೆ ಈ ಸಮಯಕ್ಕೆ ಸರಿಯಾಗಿ ನಾನು ಅಲ್ಲಿಗೆ ಹೋಗಿ ಆ ಹುಡುಗಿ ಯಾರು ಅವಳನ್ನು ಭೇಟಿಯಾಗಲು ಬರುವ ಆ ಮೂರ್ಖ ವ್ಯಕ್ತಿ ಯಾರು ಎಂದು ನೋಡಿಯೇ ಬಿಡೋಣ ಎಂದು ನಿರ್ಧರಿಸಿದನು.
ಲೆಕ್ಕಾಚಾರದಂತೆ 10 ಗಂಟೆಗೆ 10 ನಿಮಿಷ ಮುಂಚೆ ಶಿವನ ಆಲಯವನ್ನು ಪ್ರವೇಶಿಸಿದನು. ಅಲ್ಲಿರುವ 10 ಕಂಬಗಳ ಬಳಿ ಯಾರೊಬ್ಬರೂ ಕುಳಿತಿರಲಿಲ್ಲ. ಇವನು ಅಲ್ಲಿರುವ ಒಂಭತ್ತನೇ ಕಂಬದ ಬಳಿ ಹೋಗಿ ಕುಳಿತು ಬಿಟ್ಟನು. ಮತ್ತೆ ತನ್ನ ಯೋಜನೆ ಬದಲಾಯಿಸಿ ಹತ್ತನೇ ಕಂಬದ ಬಳಿ ತಾನೆ ಕುಳಿತುಕೊಂಡನು. ಈಗ ನೋಡೋಣ ಆ ಹುಡುಗಿ ಅದು ಹೇಗೆ ನನ್ನನ್ನು ಎಬ್ಬಿಸಿ ತಾನು ಕುಳಿತುಕೊಳ್ಳುತ್ತಾಳೆ ಎಂದು ಮನಸ್ಸಿನಲ್ಲಿ ಮುಸುಮುಸಿ ನಗುತ್ತಾ ಕುಳಿತಿದ್ದನು.
ಸರಿಯಾಗಿ 10 ಗಂಟೆಗೆ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ್ದ ಹುಡುಗಿ ಒಬ್ಬಳು ತನ್ನ ಮುಂದೆ ಪ್ರತ್ಯಕ್ಷವಾಗಿದ್ದಳು. ದಯವಿಟ್ಟು ನೀವು ಕುಳಿತಿರುವ ಜಾಗವನ್ನು ನನಗೆ ಬಿಟ್ಟು ಕೊಡುವಿರಾ ಎಂದು ಕೇಳಿದಳು. ಅವಳನ್ನು ನೋಡಿ ಮಾಧವ ಕಕ್ಕಾಬಿಕ್ಕಿಯಾದನು ಅರೆ ಇವಳು ನಮ್ಮ ರಮೇಶ್ ಸರ್ ಅವರ ಮಗಳಲ್ಲವೇ ಈಗ ಎಷ್ಟು ದೊಡ್ಡವಳಾಗಿದ್ದಾಳೆ ಜೊತೆಗೆ ತುಂಬಾ ಸುಂದರವಾಗಿಯೂ ಇದ್ದಾಳೆ ಎಂದು ಯೋಚಿಸುತ್ತಾ ಮರು ಮಾತನಾಡದೆ ಅವಳಿಗೆ ಜಾಗ ಬಿಟ್ಟು ಎಂಟನೇ ಕಂಬದ ಬಳಿ ಕುಳಿತನು. ಅವಳು 10ನೇ ಕಂಬದ ಬಳಿ ಕುಳಿತುಕೊಂಡು ತನ್ನ ಪ್ರಿಯಕರ ಬರುವ ಕಡೆ ಗಮನಹರಿಸಿದಳು.
ಸಮಯ ಜಾರುತ್ತಾ ಇತ್ತು ನೋಡನೋಡುತ್ತಾ 10.30 ಆಯಿತು, ಆದರೆ ಆಕೆಯ ಪ್ರಿಯತಮ ಅವಳನ್ನು ಹುಡುಕಿಕೊಂಡು ಬರಲೇ ಇಲ್ಲ. ಅವಳ ಮುಖದಲ್ಲಿ ಅಸಹನೆ ಮೂಡಿಬಂದು ಮುಖ ಕಿವುಚಿಕೊಳ್ಳುತ್ತಿದ್ದಳು. ಆದರೆ ಅವಳಲ್ಲಿಂದ ಎದ್ದು ಹೋಗಲಿಲ್ಲ ಹಾಗೆ ಕುಳಿತಿದ್ದಳು. ಬಹುಶಹ ಏನೋ ತೊಂದರೆಯಾಗಿ ತಡವಾಗಿ ಬರಬಹುದೇನೋ ಎಂಬ ನಿರೀಕ್ಷೆ ಇದ್ದರೂ ಇರಬಹುದು ಎಂದು ಮಾಧವ ಮನಸ್ಸಿನಲ್ಲಿ ಲೆಕ್ಕ ಹಾಕಿಕೊಳ್ಳುತ್ತಾ ಇದ್ದನು.
ಸಮಯ ಹನ್ನೊಂದಾಯಿತು 11.30 ಆಯಿತು 12 ಗಂಟೆಯೂ ಆಯ್ತು. ಅಷ್ಟರಲ್ಲಿ ಸಾಕಷ್ಟು ಜನ ಶಿವಾಲಯಕ್ಕೆ ಭೇಟಿ ಕೊಟ್ಟು ಹೋಗಿದ್ದು ಆಯಿತು. ಪುರೋಹಿತರು ಸೊಂಟದಲ್ಲಿ ಸಿಕ್ಕಿಸಿದ್ದ ದೇವಸ್ಥಾನದ ಕೀಲಿ ಕೈಯನ್ನು ಅಲ್ಲಾಡಿಸುತ್ತಾ ಮಾಧವ ಹಾಗೂ ಆ ಹುಡುಗಿಯ ಕಡೆ ನೋಡಿ ಈಗ ದೇವಸ್ಥಾನ ಬಾಗಿಲು ಹಾಕುವ ಸಮಯ ಹಾಗಾಗಿ ನೀವು ಹೊರಡಿ ಎಂದು ಹೇಳಿದರು.
ನಿರಾಶೆಯಿಂದ ಆ ಹುಡುಗಿ ದೇವಸ್ಥಾನದ ಹೊರಗೆ ಬಂದು ಹೊರಗಿನ ಮೆಟ್ಟಿಲುಗಳ ಮೇಲೆ ಕುಳಿತಳು. ಮಾಧವ ಕೂಡ ಹೊರಗೆ ಬಂದು ಮೆಟ್ಟಿಲುಗಳ ಇನ್ನೊಂದು ತುದಿಯಲ್ಲಿ ಕುಳಿತನು.
ಇನ್ನು ತನ್ನ ಪ್ರಿಯಕರ ಬರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ಮೇಲು ಕೂಡ ಏಕೆ ಹುಡುಗಿ ಇಲ್ಲಿಂದ ಎದ್ದು ಹೋಗುತ್ತಾ ಇಲ್ಲ ಎಂದು ಚಿಂತೆಗೆ ಬಿದ್ದನು. ಅಂತೂ ಹುಡುಗಿ ಯಾರು ಎಂದು ಗೊತ್ತಾಯಿತಲ್ಲ ಆದರೆ ಆ ಹುಡುಗ ಯಾರೋ ಗೊತ್ತಾಗಲಿಲ್ಲ ಹೋಗಲಿ ತಾನು ನನ್ನ ಪಾಡಿಗೆ ಹೊರಡೋಣ ಎಂದುಕೊಂಡನು.
ಅಷ್ಟರಲ್ಲಿ ಅವನ ತಲೆಯಲ್ಲಿ ಮತ್ತೇನೋ ಒಂದು ಗುಂಗು ಬಂದಿತು. ಅವಳು ನಮ್ಮ ರಮೇಶ್ ಸರ್ ಮಗಳು ಚಿಕ್ಕವಳಿದ್ದಾಗ ಅವಳು ತನ್ನೊಂದಿಗೆ ಆಟವಾಡಿದ್ದಾಳೆ ಹೀಗಿರುವಾಗ ನಾನೇ ಯಾಕೆ ಅವಳನ್ನು ಮಾತನಾಡಿಸಬಾರದು ಸಾಧ್ಯವಾದರೆ ಅವಳ ಸಮಸ್ಯೆ ಏನು ಎಂದು ಕೇಳಿಬಿಡೋಣ ಎಂದು ಲೆಕ್ಕ ಹಾಕಿಕೊಂಡು ಅವಳ ಬಳಿ ನಡೆದನು.
ತನ್ನ ಬಳಿ ಬಂದ ಮಾಧವನನ್ನು ಒಮ್ಮೆ ನೋಡಿ ಗಾಬರಿಗೊಂಡಳು. ಅದಕ್ಕೆ ಮಾಧವ, “ಹೆದರಬೇಡಿ ನಾನು ಮಾಧವ ನಿಮ್ಮ ಮನೆಗೆ ಹೈಸ್ಕೂಲ್ ಓದುವಾಗ ಟ್ಯೂಷನ್ ಗೆ ಬರುತ್ತಾ ಇದ್ದೆ ನೀವು ರಮೇಶ್ ಸರ್ ಅವರ ಮಗಳು ತಾನೆ. ನಿಮ್ಮ ಹೆಸರು ಮಾಳವಿಕಾ ತಾನೆ?” ಎಂದು ಪ್ರಶ್ನೆ ಮಾಡಿದನು. ಮಾಧವನನ್ನು ಅನಿರೀಕ್ಷಿತವಾಗಿ ನೋಡಿದ ಮಾಳವಿಕಾ ತಡವರಿಸುತ್ತಾ ಹೌದು ಎಂದಳು.
“ನಾವು ಟ್ಯೂಷನ್ಗೆ ಬರುವಾಗ ನಮ್ಮ ಜೊತೆ ಸೇರಿ ನೀವು ಆಟ ಆಡುತ್ತಾ ಇದ್ದಿರಿ ಆಗ ನಾಯಿ ಒಂದು ನಿಮ್ಮನ್ನು ಅಟ್ಟಿಸಿಕೊಂಡು ಬಂದಿತ್ತು. ನಾನು ಕೋಲು ತೆಗೆದುಕೊಂಡು ಅದಕ್ಕೆ ಹೊಡೆದು ಓಡಿಸಿದೆ, ಜ್ಞಾಪಕವಿಲ್ಲವೇ?” ಎಂದನು.
ಅದಕ್ಕೆ ತಡವರಿಸುತ್ತಾ “ಓಹ್ ಮಾಧವ” ಎಂದಳು.
ಅವಳ ಪಕ್ಕದಲ್ಲಿ ಕುಳಿತುಕೊಂಡು “ಈಗ ರಮೇಶ್ ಸರ್ ಹೇಗಿದ್ದಾರೆ?” ಇತ್ಯಾದಿ ಉಭಯ ಕುಶಲೋಪರಿ ಆದಮೇಲೆ
“ಏನು ಇಷ್ಟು ಹೊತ್ತಾದರೂ ಇಲ್ಲೇ ಇದ್ದೀರಾ?” ಎಂದು ಕೇಳಿದನು.
ಅದಕ್ಕೆ ಅವಳು “ನನಗೆ ಬೇಕಾಗಿದ್ದ ಒಬ್ಬರು ಬರಬೇಕಾಗಿತ್ತು ಅವರಿಗಾಗಿ ಕಾಯುತ್ತಾ ಇದ್ದೆ” ಎಂದಳು.
“ಬಹುಶಹ ಅವರು ಬರುವುದಿಲ್ಲವೇನು ಈಗಾಗಲೇ ದೇವಸ್ಥಾನ ಮುಚ್ಚಿದೆ, ಇನ್ನು ಹೊರಡಬಹುದು ಅಲ್ಲವೇ” ಎಂದನು.
ಅದಕ್ಕೆ ತಲೆ ಆಡಿಸಿ ಸರಿ ಎನ್ನುತ್ತಾ ಎದ್ದು ನಿಂತಳು. ಆಟೋ ಸ್ಟಾಂಡ್ ನಲ್ಲಿ ಒಂದು ಆಟೋ ಕೂಡ ಇರಲಿಲ್ಲ. ಅದನ್ನು ಗಮನಿಸಿದ ಮಾಧವ, “ಅಂದ ಹಾಗೆ ನೀವು ಹೇಗೆ ಬಂದಿದ್ದೀರಿ?” ಎಂದನು.
“ಆಟೋದಲ್ಲಿ ಬಂದಿದ್ದೆ ಆದರೆ ಈಗ ಒಂದು ಆಟೋ ಕೂಡ ಇಲ್ಲ ಪರವಾಗಿಲ್ಲ ಕಾಯುತ್ತೇನೆ “ಎಂದಳು.
ಕೂಡಲೇ ಮಾಧವ “ನಿಮಗೆ ಅಭ್ಯಂತರವಿಲ್ಲದಿದ್ದರೆ ನನ್ನ ಜೊತೆ ಬನ್ನಿ ನಾನು ಸ್ಕೂಟರ್ ನಲ್ಲಿ ಬಂದಿದ್ದೇನೆ ನಿಮ್ಮನ್ನು ನಿಮ್ಮ ಮನೆಯ ಬಳಿ ಇಳಿಸಿ ಹೋಗುತ್ತೇನೆ “ಎಂದನು.
ಆಗ ಮಾಳವಿಕಾ ಸುತ್ತಲೂ ಕಣ್ಣು ಹಾಯಿಸಿದಳು ಯಾರು ಇರಲಿಲ್ಲ. ಇನ್ನು ದೇವಸ್ಥಾನ ಬೇರೆ ಮುಚ್ಚಿದೆ ಹಾಗಾಗಿ ಆಟೋ ಕೂಡ ಸಿಗುವುದು ಅನುಮಾನ ಅಂದುಕೊಂಡು ಸರಿ ನಿಮ್ಮ ಜೊತೆ ಬರುತ್ತೇನೆ ಎಂದು ಸ್ಕೂಟರ್ ಮೇಲೆ ಅವನ ಹಿಂದೆ ಕುಳಿತಳು.
ಎಷ್ಟೋ ವರ್ಷಗಳ ಹಿಂದೆ ಅದೇ ಮನೆಗೆ ತಾನು ಟ್ಯೂಷನ್ ಗೆ ಬರ್ತಾ ಇದ್ದಿದ್ದು ಜ್ಞಾಪಕಕ್ಕೆ ಬಂತು. ಗೇಟಿನ ಬಳಿ ಮಾಳವಿಕಾಳನ್ನು ಇಳಿಸಿದನು. ಹಾಗೆ ಥ್ಯಾಂಕ್ಸ್ ಹೇಳಿದ ಅವಳು ಮುಗುಳು ನಗುತ್ತಾ ಒಳಗೆ ಬನ್ನಿ ಎಂದು ಕರೆದಳು “ಪರವಾಗಿಲ್ಲ ನಿಮಗೆ ಏಕೆ ತೊಂದರೆ?” ಎಂದು ರಾಗ ಹಾಡುತ್ತಾ ಸ್ಕೂಟರನ್ನು ನಿಲ್ಲಿಸಿ ಕೆಳಗೆ ಇಳಿದನು.
“ರಮೇಶ್ ಸರ್ ಮನೆಯಲ್ಲಿ ಇದ್ದಾರೆಯೇ?” ಎಂದು ಕೇಳಿದನು . ಅದಕ್ಕೆ ಅವಳು “ಅಪ್ಪ ಊರಿಗೆ ಹೋಗಿದ್ದಾರೆ ಇವತ್ತು ಸಾಯಂಕಾಲ ಬರುತ್ತಾರೆ. ನೀವು ಬನ್ನಿ ಕಾಫಿ ಮಾಡಿಕೊಡುತ್ತೇನೆ” ಅಂದಳು. ಅದಕ್ಕೆ ಮರು ಮಾತನಾಡದೆ ಅವಳ ಹಿಂದೆ ಸೀದಾ ನಡೆದನು.
ಐದು ನಿಮಿಷದಲ್ಲಿ ಕಾಫಿ ಹಿಡಿದು ಅವನ ಮುಂದೆ ಪ್ರತ್ಯಕ್ಷಳಾಗಿದ್ದಳು. ಕಾಫಿ ಹೀರುತ್ತಾ “ಮಾಳವಿಕಾ ಅವರೇ ನೀವು ಏನು ಮಾಡಿಕೊಂಡಿದ್ದೀರಾ?” ಎಂದು ಮಾತಿಗೆ ಎಳೆದನು. ಅದಕ್ಕೆ ಡಿಗ್ರಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿ ಇದ್ದೇನೆ ಎಂದಳು. ಅದು ಇದು ಮಾತನಾಡುತ್ತಾ “ಹೌದು ನೀವು ಯಾರಿಗಾಗಿ ಕಾಯುತ್ತಾ ಇದ್ದೀರಿ” ಅದಕ್ಕೆ ಕೊಂಚ ತಡವರಿಸಿತ್ತ “ನಾನು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟಿದ್ದೇನೆ ಅವರಿಗಾಗಿ ದೇವಸ್ಥಾನದಲ್ಲಿ ಕಾಯುತ್ತಾ ಇದ್ದೆ” ಎಂದಳು.
“ಓಹೋ ಹೌದಾ ಏನ್ರೀ ನಿಮ್ಮ ಲವ್ವರ್ ನಿಮ್ಮನ್ನು ಇಷ್ಟ ಕಾಯಿಸಿ ಬಿಟ್ಟ ನಾ ಎಂಥ ಮನುಷ್ಯ ಅವನು ಹುಡುಗಿಯರನ್ನು ಈ ರೀತಿ ಕಾಯಿಸುವುದು ಸರಿಯಲ್ಲ ಎಂದು ಅವನಿಗೆ ಗೊತ್ತಿಲ್ಲವೇ” ಎಂದು ಛೇಡಿಸಿದನು.
ಅದಕ್ಕೆ ಅವಳು “ಛೇ ಛೇ! ಅವರದು ಏನು ತಪ್ಪಿಲ್ಲ ಬಿಡಿ ಏಕೆಂದರೆ ನಾನು ಅವರನ್ನು ಪ್ರೀತಿಸುವ ವಿಷಯ ಅವರಿಗೆ ಗೊತ್ತಿಲ್ಲ. ಅದಕ್ಕೆ ಅದನ್ನೇ ತಿಳಿಸೋಣ ಎಂದು ದೇವಸ್ಥಾನಕ್ಕೆ ಬರಲು ಪತ್ರ ಬರೆದು ತಲುಪಿಸಿದ್ದೆ ಅದೇನಾಯ್ತು ಗೊತ್ತಿಲ್ಲ ಅವರು ಬಹುಶಹ ನನ್ನನ್ನು ಇಷ್ಟಪಟ್ಟಿರಲಾರರು ಅದಕ್ಕೆ ಬಂದಿಲ್ಲವೇನು ಎಂದು ಬೇಸರವಾಯಿತು “ನಿರಾಸೆಯಿಂದ ಹೇಳಿದಳು.
“ಆ ವ್ಯಕ್ತಿ ಯಾರೆಂದು ತಿಳಿದುಕೊಳ್ಳಬಹುದೇ?”
” ಸುರೇಶ್ ಎಂದು ಅವರ ಹೆಸರು ಎಫ್ ಡಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ”
ಇದನ್ನು ಕೇಳಿ ಮಾಧವನಿಗೆ ಹೋಹೋ! ನಮ್ಮ ಸುರೇಶ ನಾ ಎಂದು ಹಿಂದಿನ ದಿನ ನಡೆದ ಘಟನೆಯನ್ನು ಜ್ಞಾಪಕ ಮಾಡಿಕೊಂಡನು. ಅದೇ ತಾನು ಆಂಜನೇಯನ ಗುಡಿಗೆ ಹೋದಾಗ ಎದುರಿಗೆ ಸಿಕ್ಕ ಸುರೇಶ ಅವಸರವಸರವಾಗಿ ಹೊರಟಿದ್ದ ಅವನನ್ನು ತಡೆದು ಏನು ಸಮಾಚಾರ ಎಂದು ಕೇಳಲು ಅಪ್ಪನಿಗೆ ಹುಷಾರಿಲ್ಲವಂತೆ ಅದಕ್ಕೆ ಕೂಡಲೇ ಊರಿಗೆ ಬರಲು ಹೇಳಿ ಕಳಿಸಿದ್ದಾರೆ ಇವರು ನಮ್ಮ ತಂದೆಯ ಸ್ನೇಹಿತರ ಮಗ ನನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ತನ್ನ ಹಿಂದೆ ನಿಂತಿದ್ದ ವ್ಯಕ್ತಿಯನ್ನು ಪರಿಚಯ ಮಾಡಿಸಿದನು. ಮತ್ತೆ ಸಿಗುತ್ತೇನೆ ಎಂದು ಹೇಳಿ ಹೊರಟನು. ಇದನ್ನು ನೆನೆಸಿಕೊಂಡು ಪಾಪ ಅವನ ತಂದೆಗೆ ಹುಷಾರಿಲ್ಲವೆಂದು ಊರಿಗೆ ಹೋಗಿದ್ದರಿಂದ ಅವನಿಗೆ ಈ ಪತ್ರ ಸಿಕ್ಕಿದ್ದರೂ ಕೂಡ ಅದರ ಬಗ್ಗೆ ತಲೆಕೆಡಿಸಿ ಕೊಂಡಿರಲಿಕಿಲ್ಲ. ಎಂದು ಮನಸ್ಸಿನಲ್ಲಿ ಬಗೆದು, ಮಾಳವಿಕಾ ಅವರೇ ನೀವು ಹೇಳಿದ ಸುರೇಶ ನನ್ನ ಸ್ನೇಹಿತ. ಅವನ ತಂದೆಗೆ ಹುಷಾರಿಲ್ಲವೆಂದು ಊರಿಗೆ ಹೋಗಿದ್ದಾನೆ ನೆನ್ನೆ ಆಂಜನೇಯನ ಗುಡಿಯಲ್ಲಿ ನನಗೆ ಸಿಕ್ಕಿದ್ದ” ಎಂದು ತಿಳಿಸಿದನು.
ಇದನ್ನು ಕೇಳಿ ಮಾಳವಿಕಾ “ಅಯ್ಯೋ ಹೌದಾ ಹಾಗಾದರೆ ನಾನು ಕಳಿಸಿದ ಪತ್ರ ಅವರಿಗೆ ತಲುಪಿತೋ ಇಲ್ಲವೋ ಗೊತ್ತಾಗಲಿಲ್ಲ” ಚಿಂತೆಯಿಂದ ಹೇಳಿದಳು.
ಇದನ್ನು ಗಮನಿಸಿ ಪಾಪ ಎಂದುಕೊಂಡು “ಮಾಳವಿಕಾ ಅವರೇ ನಾನು ಆಂಜನೇಯನ ಗುಡಿಯಲ್ಲಿ ಹೋಗಿದ್ದಾಗ ಈ ಪತ್ರ ನನಗೆ ಸಿಕ್ಕಿತು, ನೆಲದ ಮೇಲೆ ಬಿದ್ದಿತ್ತು. ಏನು ಬರೆದಿದೆ ಎಂದು ನೋಡಿದಾಗ ನಿಮ್ಮ ಸಂದೇಶ ಕಂಡಿತ್ತು. ಇದು ಯಾರು ಇರಬಹುದು ಎಂಬ ಕುತೂಹಲದಿಂದ ನಾನು ಶಿವಾಲಯಕ್ಕೆ ಬಂದಿದ್ದೆ. ನನ್ನನ್ನು ಕ್ಷಮಿಸಿ ಅದು ನೀವು ಎಂದು ನನಗೆ ಗೊತ್ತಿರಲಿಲ್ಲ “ಎಂದು ಅವಳ ಪತ್ರವನ್ನು ಹಿಂತಿರುಗಿಸಿದನು.
ಅದನ್ನು ನೋಡಿ ಬಹಳ ಗಲಿಗಲಿಗೊಂಡಳು.
“ಮಾಧವರವರೇ ಹೇಗಿದ್ದರೂ ನನ್ನ ಎಲ್ಲ ವಿಷಯ ನಿಮಗೆ ಗೊತ್ತಾಯಿತು ನೀವು ಏನಾದರೂ ಮಾಡಿ ಸುರೇಶ್ ಗೆ ನನ್ನ ಬಗ್ಗೆ ತಿಳಿಸಿ ಅವರ ಅಭಿಪ್ರಾಯವೇನು ಎಂದು ತಿಳಿದುಕೊಂಡು ನನಗೆ ತಿಳಿಸುವಿರಾ” ಮೃದುವಾಗಿ ಬೇಡಿ ಕೊಳ್ಳುವಂತೆ ಕೇಳಿದಳು.
ಕೊಂಚ ಯೋಚಿಸಿದ ಮಾಧವ “ಆಯಿತು ಖಂಡಿತಾ ಅವನು ಊರಿಂದ ಬಂದ ಮೇಲೆ ಕೇಳಿ ತಿಳಿದು ನಿಮಗೆ ತಿಳಿಸುತ್ತೇನೆ.”
“ನನಗೆ ಮತ್ತೊಂದು ಕುತೂಹಲ ತಲೆಯಲ್ಲಿ ಕಾಡುತ್ತಿದೆ ಅದೇನೆಂದರೆ ನೀವು ಈ ಪತ್ರವನ್ನು ಸುರೇಶನಿಗೆ ಕೊಡಲು ಯಾರ ಬಳಿ ಕಳಿಸಿದ್ದು? ಅದು ಹೇಗೆ ನೆಲದ ಮೇಲೆ ಬಿದ್ದಿತ್ತು? ಎಂದು ತಿಳಿಯುತ್ತಿಲ್ಲ”
” ಅದು ನನ್ನ ಸ್ನೇಹಿತೆಯ ತಮ್ಮ ಮನುವಿನ ಕೈಯಲ್ಲಿ ಅದನ್ನು ಕೊಟ್ಟು ಸುರೇಶರಿಗೆ ತಲುಪಿಸುವಂತೆ ಕಳಿಸಿದ್ದೆ. ಅವನು ಬಂದು ಅವರಿಗೆ ತಲುಪಿಸಿರುವುದಾಗಿ ಹೇಳಿದ. ಅವನಿಗೆ ಸುರೇಶ್ ತುಂಬಾ ಚೆನ್ನಾಗಿ ಗೊತ್ತು ಹಾಗಾಗಿ ಅವನ ಬಳಿ ಕಳಿಸಿದ್ದೆ ಮುಂದೇನಾಯ್ತು ನನಗೆ ಗೊತ್ತಿಲ್ಲ” ನಿರಾಸೆ ಅವಳ ದನಿಯಲ್ಲಿ ಎದ್ದು ಕಾಣುತ್ತಿತ್ತು.
ಗಲ್ಲವನ್ನು ಸವರಿ ಕೊಳ್ಳುತ್ತಾ ಏನಾಗಿರಬಹುದು ಎಂದು ತನ್ನದೆ ಕಲ್ಪನೆಯಲ್ಲಿ ತೊಡಗಿದ್ದ ಮಾಧವ ಮತ್ತೊಮ್ಮೆ ಏನೋ ಎಚ್ಚರಗೊಂಡಂತೆ “ನೀವು ತಪ್ಪು ತಿಳಿಯುವುದಿಲ್ಲವೆಂದರೆ ಇನ್ನೂ ಕುತೂಹಲದ ವಿಷಯವೆಂದರೆ ನೀವು ಇವತ್ತು 10 ಗಂಟೆಗೆ ಶಿವಾಲಯಕ್ಕೆ ಬಂದು 10ನೇ ಕಂಬದ ಬಳಿ ನಿಮ್ಮನ್ನು ಭೇಟಿಯಾಗುವುದಾಗಿ ಬರೆದಿದ್ದೀರಿ ಅದರ ಔಚಿತ್ಯವಾದರೂ ಏನು? ಜೊತೆಗೆ ಚೀಟಿ ಕಳಿಸುವ ಬದಲು ನೀವೇ ನೇರವಾಗಿ ಆಂಜನೇಯನ ಗುಡಿಗೆ ಬಂದು ಸುರೇಶನನ್ನು ಭೇಟಿ ಮಾಡಬಹುದಿತ್ತಲ್ಲ?” ಎಂದು ಕೇಳಿದನು.
ನಿಧಾನವಾಗಿ “ಅದು.. ಅದು.. ನಾನು ನಿಜ ಹೇಳಿದರೆ ನೀವು ನಂಬದೇ ಇರಬಹುದು ಆದರೆ ನನಗೆ ಅದರಲ್ಲಿ ನಂಬಿಕೆ ಇದೆ. ನೀವು ಇದರ ಬಗ್ಗೆ ಯಾರ ಹತ್ತಿರವು ಹೇಳುವುದಿಲ್ಲ ಎಂದು ಮಾತು ಕೊಟ್ಟರೆ ಮಾತ್ರ ನಾನು ತಿಳಿಸುತ್ತೇನೆ” ಎಂದಳು.
ಇದರಿಂದ ಮಾಧವನ ಕುತೂಹಲ ಇನ್ನೂ ಹೆಚ್ಚಾಗಿ, ತಕ್ಷಣಕ್ಕೆ ತಲೆಯಾಡಿಸಿ “ಖಂಡಿತ ನಾನು ಯಾರ ಹತ್ತಿರವು ಹೇಳುವುದಿಲ್ಲ ನೀವು ಧೈರ್ಯವಾಗಿ ನನ್ನ ಬಳಿ ಹೇಳಬಹುದು ಬೇಕಾದರೆ ಪ್ರಾಮಿಸ್ ಮಾಡುತ್ತೇನೆ “ಎಂದು ಅವಳ ಕೈಗೆ ತನ್ನ ಕೈಜೋಡಿಸಿದನು.ಅವನ ಕೈ ತಗುಲುತ್ತಿದ್ದ ಹಾಗೆ ಚಕ್ಕೆಂದು ನಾಚಿಕೆ ಮತ್ತು ಭಯದಿಂದ ಹಿಂದೆ ತೆಗೆದುಕೊಂಡಳು.
ಮಾಧವನಿಗೆ ಅವಳ ಮೃದುವಾದ ಕೈ ಸ್ಪರ್ಶವಾದಾಗ ಏನೋ ಮಧುರವಾದ ಅನುಭೂತಿ ಉಂಟಾಯಿತು.
ನಾನು ಶಿವನ ದೇವಸ್ಥಾನದ ಮುಂದೆ ಕುಳಿತು ಕೊಳ್ಳುತ್ತಾರಲ್ಲಾ ಸ್ವಾಮಿಗಳು ಅವರಿಗೆ ತುಂಬಾ ನಡೆದುಕೊಳ್ಳುತ್ತೇನೆ.ಅವರು ಹೇಳಿದ ಎಷ್ಟೋ ವಿಷಯಗಳು ನನಗೆ ನಿಜವಾಗಿವೆ. ಈಗ ಎರಡು ತಿಂಗಳ ಹಿಂದೆ ಪ್ರಾರ್ಥನೆ ಮಾಡುತ್ತಾ ಕುಳಿತಿದ್ದಾಗ, ಸ್ವಾಮಿಗಳು ನನ್ನನ್ನು ನೋಡಿ ಮಗಳೇ ಇಲ್ಲಿ ಬಾ ಎಂದು ಕರೆದರು. ನೀನು ದೇವರಲ್ಲಿ ಬೇಡಿಕೊಳ್ಳುತ್ತಿರುವ ಬಯಕೆಯೂ ಈಡೇರುವುದು ಇಲ್ಲವೋ ಎಂಬುದರ ಬಗ್ಗೆ ನಮ್ಮ ಬಳಿ ಒಂದು ಪರಿಹಾರ ಶಾಸ್ತ್ರವಿದೆ. ನಿನಗೆ ಇಷ್ಟವಿದ್ದರೆ ನಮ್ಮ ಬಳಿ ಇರುವ ಓಲೆಗರಿಯನ್ನು ಆಯ್ಕೆ ಮಾಡು, ಅದರಲ್ಲಿರುವ ಗೂಡಾರ್ಥವನ್ನು ನಾನು ವಿವರಿಸಿ ನನಗೆ ತಿಳಿಸುತ್ತೇನೆ ಮತ್ತು ಇಂತಹ ಅವಕಾಶ ಎಲ್ಲರಿಗೂ ಲಭ್ಯವಿಲ್ಲ ಎಂದು ಹೇಳಿದರು.”
“ಇದರಿಂದ ಪುಳಕಿತಳಾದ ನಾನು ಅವರು ತೋರಿಸಿದ ಪೆಟ್ಟಿಗೆಯಲ್ಲಿ ಒಂದು ಓಲೆಗರಿಯನ್ನು ನವಿಲುಗರಿಯ ಮೂಲಕ ಆಯ್ಕೆ ಮಾಡಿದೆ.”
“ಅವರು ಆ ಓಲೆಗರಿಯನ್ನು ತೆಗೆದುಕೊಂಡು ಹತ್ತು ಹತ್ತು ಹತ್ತು ಹೊತ್ತಿನಲ್ಲಿ 10 ಕಂಬಕ್ಕೆ ಸರಿ ಹೊಂದಿದರೆ ಈ ಕನ್ಯೆಯ ಕುತ್ತಿಗೆಗೆ ಮೂರ್ಗಂಟು ಬಿಗಿವ ಗಂಡು ಕಣ್ಣಿಗೆ ಬಿತ್ತು. ಬೆಟ್ಟದೊಡೆಯ ಶಿವನ ಸಾಕ್ಷಿಯಾಗಿ ಸಕಲವೂ ಸಾಧ್ಯ
ಎಂದು ಬರೆದಿದೆ ಇದರ ಅರ್ಥ ಹತ್ತನೆಯ ತಿಂಗಳು 10ನೆಯ ತಾರೀಕು 10 ಗಂಟೆಗೆ ಸರಿಯಾಗಿ ನೀನು ಇಷ್ಟಪಡುವ ಅಥವಾ ನಿನ್ನನ್ನು ಇಷ್ಟಪಡುವ ಅಥವಾ ನಿನ್ನನ್ನು ಮದುವೆಯಾಗುವ ಗಂಡು ಭೇಟಿಯಾಗುತ್ತಾನೆ ಇದಕ್ಕೆ ಬೆಟ್ಟದ ಶಿವಾಲಯದ ಹತ್ತನೇ ಕಂಬದ ಬಳಿ ಇದು ಸಂಭವ ಹಾಗೂ ಇದಕ್ಕೆ ಶಿವನೇ ಸಾಕ್ಷಿಯಾಗುತ್ತಾನೆ ಎಂದು ಬರೆದಿದೆ.”
“ಇದನ್ನು ಕೇಳಿ ನನಗೆ ಮೈಯೆಲ್ಲ ರೋಮಾಂಚನವಾಯಿತು. ಅದಕ್ಕೆ ನಾನು ಸ್ವಾಮಿಯವರಲ್ಲಿ ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೇನೆ ಆತ ಆ ಸಮಯದಲ್ಲಿ ನನ್ನನ್ನು ಆ ಸ್ಥಳದಲ್ಲಿ ಭೇಟಿಯಾದರೆ ಖಂಡಿತಾ ಆತ ನನಗೆ ದೊರೆಯುತ್ತಾನೆಯೇ ಎಂದು ಕೇಳಿದೆ.ಅದಕ್ಕೆ ಅವರು ಯೋಚನೆ ಮಾಡಿ ನಿನ್ನನ್ನು ಇಷ್ಟ ಪಡುವ ಹುಡುಗ ಖಂಡಿತವಾಗಿ ದೊರೆಯುತ್ತಾನೆ. ಹತ್ತನೇ ತಿಂಗಳು ಅಂದರೆ ಅಕ್ಟೋಬರ್ 10 ನೇ ತಾರೀಕು ಅಂದರೆ ಭಾನುವಾರ ಹತ್ತು ಗಂಟೆಗೆ ಸರಿಯಾಗಿ ಬೆಟ್ಟದ ಶಿವಾಲಯದ 10ನೇ ಕಂಬದ ಬಳಿ ಆತನನ್ನು ನೀನು ಬರುವಂತೆ ಮಾಡಿದರೆ ಅಲ್ಲಿ ನಿಮ್ಮಿಬ್ಬರ ಭೇಟಿಯಾದರೆ ನಿಜಕ್ಕೂ ಆತ ನಿನಗೆ ದಕ್ಕಿದಂತೆಯೇ ಎಂದು ತಿಳಿಸಿದ್ದರು.
ಮತ್ತು ಈ ವಿಷಯವನ್ನು ಘಟನೆಗೂ ಮುಂಚೆ ಯಾರ ಬಳಿಯು ಹೇಳಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿ ಓಲೆಗರೆಯ ಪೆಟ್ಟಿಗೆಯನ್ನು ಮುಚ್ಚಿಟ್ಟರು.
ಇದೆಲ್ಲ ನನಗೆ ಒಂದು ಕನಸಿನಂತೆ ಭಾಸವಾಗಿದೆ. ಅದಕ್ಕಾಗಿಯೇ ನಾನು ನಾನು ಇಷ್ಟಪಡುವ ಸುರೇಶ್ ರವರಿಗೆ ಪತ್ರ ಮುಖೇನ ಅಲ್ಲಿಗೆ ಬರುವಂತೆ ಆಹ್ವಾನಿಸಿದ್ದೆ ಆದರೆ ಮುಂದೆ ಏನು ನಡೆಯಿತು ಎಂದು ನಿಮಗೇ ಗೊತ್ತಲ್ಲ” ತುಂಬಾ ದುಃಖದಿಂದ ಹೇಳಿದಳು.
ಅವಳ ಮಾತನ್ನು ಕೇಳುತ್ತಾ ತಲೆದೂಗುತ್ತಾ ಕುಳಿತಿದ್ದ ಮಾಧವನಿಗೆ ಅವಳಿಗಾದಷ್ಟೇ ನಿರಾಸೆಯಾಯಿತು. ಅದಕ್ಕೆ ನೀವು ಏನು ಚಿಂತಿಸಬೇಡಿ “ಮಾಳವಿಕಾ ಅವರೇ ನಾನು ಸುರೇಶ ಬಂದ ಮೇಲೆ ಅವನ ಬಳಿ ಮಾತನಾಡಿ ಇದಕ್ಕೆ ಒಂದು ಪರಿಹಾರವನ್ನು ಕಂಡುಹಿಡಿಯೋಣ. ಅಲ್ಲಿವರೆಗೂ ನೀವು ಧೈರ್ಯವಾಗಿರಿ. ನಾನಿನ್ನು ಹೊರಡುತ್ತೇನೆ” ಎಂದು ಹೇಳಿ ಹೊರಟನು.
ಸುಮಾರು ಒಂದು ತಿಂಗಳಾದರೂ ಸುರೇಶ ಮಾತ್ರ ಹಿಂತಿರುಗಲೇ ಇಲ್ಲ. ಮೂರು ನಾಲ್ಕು ದಿನಕ್ಕೆ ಒಮ್ಮೆ ಮಾಳವಿಕಾಳನ್ನು ಶಿವಾಲಯದ ಬಳಿ ಭೇಟಿಯಾಗಿ ಸುರೇಶ ಇನ್ನೂ ಊರಿಗೆ ಬಂದಿಲ್ಲ ಇನ್ನು ನಾಲ್ಕು ದಿನ ಬಿಟ್ಟು ಮತ್ತೆ ಸಿಗೋಣ ಹೀಗೆ ಧಾರಾವಾಹಿಯಂತೆ ಅವರ ಭೇಟಿ ಹಾಗೂ ಅವಳ ನಿರೀಕ್ಷೆ ಸಾಗುತ್ತಾ ಇತ್ತು.
ಮಾಳವಿಕಾಗೆ ಮಾಧವ ತನಗಾಗಿ ಎಷ್ಟು ಆಸಕ್ತಿಯಿಂದ ಸಹಾಯ ಮಾಡುತ್ತಿದ್ದಾನೆ ಎಂದು ಹೆಮ್ಮೆ ಎನಿಸಿತ್ತು. ಹಾಗಾಗಿ ಅವನನ್ನು ಭೇಟಿಯಾಗಲು ಬರುವಾಗ ಏನಾದರೂ ಒಂದು ತಿನ್ನಲು ತಂದುಕೊಡುತ್ತಿದ್ದಳು. ಮಾಧವನಿಗೆ ಅವರೆಕಾಳು ಉಪ್ಪಿಟ್ಟು ಬಹಳ ಇಷ್ಟ ಎಂದು ತಿಳಿದು ತಾನೇ ಮಾಡಿಕೊಂಡು ಬಂದಿದ್ದಳು. ಅದನ್ನು ತನ್ನ ರೂಮಿಗೆ ತೆಗೆದುಕೊಂಡು ಹೋಗಿ ತಿನ್ನುತ್ತಾ ಇದ್ದ ಮಾಧವನ ಎದುರಿಗೆ ಸುರೇಶ ಬಂದು ನಿಂತಿದ್ದ. ಅವನನ್ನು ನೋಡಿ ಗಂಟಲಿನಲ್ಲಿ ಉಪ್ಪಿಟ್ಟು ಸಿಕ್ಕಿಹಾಕಿಕೊಂಡಿತು ಕೆಮ್ಮುತ್ತಾ ನೀರು ಕುಡಿದು ಸರಿ ಮಾಡಿಕೊಂಡನು.
“ಬಾ ಸುರೇಶ ಕೂತುಕೋ ಏನ್ ಸಮಾಚಾರ ಅಪ್ಪ ಹೇಗಿದ್ದಾರೆ?” ಆತ್ಮೀಯತೆಯಿಂದ ಕರೆದನು.
ಅದಕ್ಕೆ ಸುರೇಶ ಕಣ್ಣೀರು ಹಾಕಿದನು. ಅವನನ್ನು ನೋಡಿ ಗಾಬರಿಯಾದ ಮಾಧವ “ಸಮಾಧಾನ ಮಾಡಿಕೋ ಏನಾಯಿತು?ಅಪ್ಪ ಹೇಗಿದ್ದಾರೆ?”
” ಏನು ಹೇಳಲಿ ಮಾಧವ, ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟರು”ಎಂದು ಕಣ್ಣೀರು ಹಾಕುತ್ತಾ ಸುರೇಶ ನಡೆದ ವಿಷಯವನ್ನೆಲ್ಲ ಸುದೀರ್ಘವಾಗಿ ವಿವರಿಸಿ ಹೇಳಿದ.
ಅವನು ಊರು ತಲುಪಿದಾಗ ಅವರ ತಂದೆ ಮರಣ ಶಯ್ಯೆಯಲ್ಲಿದ್ದು ಅವರ ಕೊನೆಯ ಆಸೆಯಾಗಿ ಅವರ ತಂಗಿಯ ಮಗಳು ರುಕ್ಮಿಣಿ ಜೊತೆ ಕೂಡಲೇ ವಿವಾಹದ ಏರ್ಪಾಟು ಆಗಿತ್ತು. ಅವರ ಆಸೆಯಂತೆ ಅವನು ರುಕ್ಮಿಣಿಯನ್ನು ಮದುವೆಯಾದನು. ಅದಾಗಿ ಮೂರು ದಿನಗಳಲ್ಲಿ ಅವರ ತಂದೆ ಇಹಲೋಕ ತ್ಯಜಿಸಿದ್ದರು.
ನಂತರ ಒಂದು ತಿಂಗಳು ಊರಿನಲ್ಲೇ ಉಳಿದುಕೊಂಡು ತಂದೆಯ ವ್ಯವಹಾರವನ್ನೆಲ್ಲ ತಾನೇ ವಹಿಸಿಕೊಂಡು ಅದನ್ನು ಒಂದು ಹಂತಕ್ಕೆ ತಂದು ಈಗ ತಾನೇ ಊರಿಗೆ ಬಂದೆ.
ಎಲ್ಲವೂ ತರಾತುರಿಯಲ್ಲಿ ಆಗಿದ್ದರಿಂದ ಯಾರಿಗೂ ಯಾವ ವಿಷಯವನ್ನು ಹೇಳಲು ಆಗಲೇ ಇಲ್ಲ ಎಂದನು. ಅದಕ್ಕೆ ಮಾಧವ “ಚಿಂತೆ ಬೇಡ ಬಿಡು ಹೇಗಿದ್ದರೂ ನೀನು ನಿಮ್ಮ ತಂದೆಯವರ ಆಸೆಯನ್ನು ಅವರು ಸಾಯುವುದರೊಳಗೆ ಈಡೇರಿಸಿರುವುದರಿಂದ ನಿನಗೆ ಪುಣ್ಯ ಸಿಗುತ್ತದೆ ಹಾಗೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.ಅಪ್ಪನ ಕೊನೆಯ ಆಸೆ ಈಡೇರಿಸುವುದಕ್ಕಿಂತ ದೊಡ್ಡದು ಯಾವುದಿದೆ ಹೇಳು” ಎಂದು ಸಮಾಧಾನವನ್ನು ಮಾಡಿದನು.
“ದಿಕ್ಕಿಲ್ಲದ ನಿಮ್ಮ ಅತ್ತೆಯ ಮಗಳಿಗೆ ನೀನು ಎಲ್ಲವೂ ಆಗಿ ಚೆನ್ನಾಗಿ ನೋಡಿಕೋ” ಎಂದು ಸಲಹೆ ನೀಡಿದ.
ಉಪ್ಪಿಟ್ಟು ತಿಂದು ಮುಗಿಸಿ ಕೈ ತೊಳೆದುಕೊಂಡು ಮತ್ತೆ ಬಂದು ಕುಳಿತನು.
ಅದನ್ನು ಗಮನಿಸಿದ ಸುರೇಶ “ಅರೆ ಉಪ್ಪಿಟ್ಟು ಎಲ್ಲಿಂದ ತಂದೆ ನೀನು?” ಎಂದು ಕೇಳಿದನು. ಅದಕ್ಕೆ ಮುಗುಳ್ನಗುತ್ತಾ “ಅದು ಒಬ್ಬ ಸ್ನೇಹಿತರ ಮನೆಗೆ ಹೋಗಿದ್ದೆ ಅವರು ಕೊಟ್ಟರು” ಅಂದನು.
ಅದಕ್ಕೆ ಸುಮ್ಮನಾಗದೆ ಸುರೇಶ “ಅದು ಯಾವ ಫ್ರೆಂಡ್ ನಿನಗೆ ತಿಂಡಿ ಕೊಡುವವರು ನನಗೆ ಗೊತ್ತಿಲ್ಲದವರು?” ಎಂದು ಅನುಮಾನದಿಂದ ಕೆದಕಿ ಕೇಳಿದನು. ಅದಕ್ಕೆ “ಅದು ಹೊಸ ಫ್ರೆಂಡ್ ನಿನಗೆ ಗೊತ್ತಿಲ್ಲ ಬಿಡು” ಎಂದು ಹಾರಿಸಿದನು ಮಾಧವ .
ಕೂಡಲೇ ಮಾಧವನ ಕಣ್ಣ ಮುಂದೆ ಮುಗ್ಧ ಸ್ನಿಗ್ಧ ಸುಂದರಿ ಮಾಳವಿಕಾಳ ಮುಖ ಹಾದುಹೋಯಿತು. ಪಾಪ ಸುರೇಶನಿಗಾಗಿ ಕಾಯುತ್ತಿದ್ದಾಳೆ ಆದರೆ ಇವನು ತಂದೆ ಮಾತು ಉಳಿಸಲು ಆಗಲೇ ಮದುವೆಯಾಗಿದ್ದಾನೆ. ಈ ವಿಷಯ ನಾನು ಅವಳಿಗೆ ಹೇಗೆ ಹೇಳಲಿ ಒಂದು ವೇಳೆ ಹೇಳಿದರೂ ಅವಳು ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾಳೆ ಅಥವಾ ದುಃಖದಿಂದ ಏನಾದರೂ ಮಾಡಿಕೊಂಡುಬಿಟ್ಟರೆ ಎಂತಹ ಇಕ್ಕಟ್ಟಿನ ಪರಿಸ್ಥಿತಿ ನನಗೆ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡನು.
ಇದಾವುದೂ ತಿಳಿಯದ ಸುರೇಶ “ಸರಿ ಬಿಡು ನಾನು ಇನ್ನು ಮುಂದೆ ಈ ಊರಿನಲ್ಲಿ ಉಳಿಯುವುದಿಲ್ಲ ಏಕೆಂದರೆ ತಂದೆಯವರ ವ್ಯವಹಾರ ಸಂಪೂರ್ಣ ನನ್ನ ಮೇಲೆ ಇದೆ ಅದು ಅಲ್ಲದೆ ರುಕ್ಮಿಣಿ ಕೂಡ ಅಲ್ಲೇ ಇರುತ್ತಾಳೆ ನಾನು ಕೊಠಡಿಯನ್ನು ಖಾಲಿ ಮಾಡಿ ಊರಿಗೆ ಹೋಗುತ್ತೇನೆ ಅದಕ್ಕೆ ನಿನಗೆ ತಿಳಿಸಿ ಹೋಗೋಣ ಎಂದು ಬಂದೆ, ಬಾ ಕೊನೆಯದಾಗಿ ಖಾನಾವಳಿಯಲ್ಲಿ ಒಮ್ಮೆ ಒಟ್ಟಿಗೆ ಊಟ ಮಾಡೋಣ ಮದುವೆ ಊಟ ಅಂತೂ ಹಾಕಿಸಲು ಆಗಲಿಲ್ಲ ಇಲ್ಲಿಯೇ ಊಟ ಕೊಡಿಸುತ್ತೇನೆ”ಎಂದನು.
“ಅರೆ ಮಹಾರಾಯ! ಈಗಿನ್ನೂ ರುಚಿಯಾದ ಅವರೆಕಾಳು ಉಪ್ಪಿಟ್ಟು ತಿಂದಿದ್ದೇನೆ ತಕ್ಷಣಕ್ಕೆ ಊಟ ಹೇಗೆ ಮಾಡಲಿ ಊಟದ ಸಮಯಕ್ಕೆ ನಾನೇ ನಿನ್ನ ಬಳಿ ಬರುತ್ತೇನೆ?” ಎಂದನು.
ತಕ್ಷಣಕ್ಕೆ ತಲೆಯಲ್ಲಿ ಏನೋ ಹೊಳೆದಂತಾಗಿ “ಸುರೇಶ ಅವತ್ತು ಆಂಜನೇಯನ ಗುಡಿಯಲ್ಲಿ ನೀನು ನನಗೆ ಸಿಕ್ಕಿದ್ದಾಗ ಅವಸರದಲ್ಲಿ ಊರಿಗೆ ಹೊರಟಿದ್ದೆ. ಆ ಸಂದರ್ಭದಲ್ಲಿ ನಿನಗೆ ಯಾರಾದರೂ ಏನಾದರೂ ಪತ್ರ ತಂದು ಕೊಟ್ಟರಾ?” ಎಂದು ಕೇಳಿದನು.
ಅದಕ್ಕೆ ತಲೆಕೆರೆದುಕೊಳ್ಳುತ್ತಾ “ಹೌದು ಒಂದು ಹುಡುಗ ನನಗೆ ಒಂದು ಪತ್ರ ತಂದುಕೊಟ್ಟ, ಅದೇ ಸಮಯಕ್ಕೆ ನಮ್ಮ ಊರಿನಿಂದ ನನ್ನನ್ನು ಕರೆಯಲು ಒಬ್ಬ ಹುಡುಗ ಕೂಡ ಬಂದಿದ್ದ. ಆ ಗಡಿಬಿಡಿಯಲ್ಲಿ ಆ ಪತ್ರ ಎಲ್ಲಿಯೋ ಕಳೆದು ಹೋಯಿತು ಹೌದು ಈ ವಿಷಯ ನೀನು ನನ್ನನ್ನು ಏಕೆ ಕೇಳುತ್ತಿರುವೆ ಆ ಪತ್ರ ಯಾರು ಕಳಿಸಿದ್ದು ಅದರಲ್ಲಿ ಏನಿತ್ತು?” ಎಂದು ಕೇಳಿದನು.
ಇದರಿಂದ ಸುಧಾರಿಸಿಕೊಂಡ ಮಾಧವ “ನನಗೂ ಗೊತ್ತಿಲ್ಲ, ಆದರೆ ನಿನ್ನ ಕೈಗೆ ಪತ್ರ ಕೊಟ್ಟ ಹುಡುಗ ನನಗೆ ಸಿಕ್ಕಿದ್ದ ಅವನು ಹೇಳಿದ್ದ, ಹಾಗಾಗಿ ನನಗೂ ಅದೇನು ಎಂದು ತಿಳಿದುಕೊಳ್ಳಲು ಕುತೂಹಲವಾಗಿ ನಿನ್ನನ್ನು ಕೇಳಿದೆ ಅಷ್ಟೇ” ಎಂದನು.
ಆ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸುರೇಶ “ಹೋಗಲಿ ಬಿಡು ಮಾರಾಯ ನನ್ನದೇ ನನಗಾಗಿದೆ ಇನ್ನು ಯಾವ ಚೀಟಿ ತೆಗೆದುಕೊಂಡು ನನಗೇನಾಗ ಬೇಕಾಗಿದೆ ಬೇಕಿದ್ದರೆ ಅವರೇ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಹಾ ಒಂದು ವೇಳೆ ಯಾರಾದರೂ ನನ್ನನ್ನು ಹುಡುಕಿಕೊಂಡು ಬಂದರೆ ನನ್ನ ಊರಿನ ವಿಳಾಸ ನಿನಗೆ ಕೊಟ್ಟಿರುತ್ತೇನೆ ಅವರನ್ನು ಅಲ್ಲಿಗೆ ಬರಲು ಹೇಳಿಬಿಡು…ನಾನೀಗ ಕೊಠಡಿಗೆ ಹೋಗಿ ಸಾಮಾನು ಎಲ್ಲಾ ಪ್ಯಾಕ್ ಮಾಡಬೇಕು ಊಟದ ಸಮಯಕ್ಕೆ ನೀನು ಅಲ್ಲಿಗೆ ಬಂದುಬಿಡು” ಎಂದು ಹೇಳಿ ಹೊರಟು ಹೋದನು.
ಛೇ ಒಂದು ನಿಮಿಷದಲ್ಲಿ ಮಾತಿನಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಿದ್ದೆ. ಅದು ಹೇಗೋ ತಪ್ಪಿತು. ಮಾಳವಿಕಾ ಬಗ್ಗೆ ಅವನಿಗೆ ಏನು ಗೊತ್ತಿಲ್ಲ ಅಂತಹವನಿಗೆ ಅವಳ ವಿಷಯ ಹೇಳಿ ಅವನನ್ನು ಮತ್ತಷ್ಟು ದುಃಖದಲ್ಲಿ ಹಾಕುವುದು ಸರಿಯಲ್ಲ.
ಈ ವಿಷಯ ಹುಷಾರಾಗಿ ನಿಭಾಯಿಸಬೇಕು. ಮಾಳವಿಕಾಗೆ ಸಮಯ ನೋಡಿ ಸುರೇಶನ ಮದುವೆಯ ವಿಷಯ ತಿಳಿಸಬೇಕು ಎಂದುಕೊಂದನು.
ಅಂದು ಮಧ್ಯಾಹ್ನ ಸುರೇಶನ ಜೊತೆ ಊಟ ಮುಗಿಸಿ ಅವನ ಲಗೇಜ್ ಅನ್ನು ಬಸ್ಸಿಗೆ ತುಂಬಿಸಿ ಅವನಿಗೆ ಕಿಟಕಿಯಲ್ಲಿ ಟಾಟಾ ಹೇಳಿ ಬೀಳ್ಕೊಟ್ಟಾಯಿತು. ಹಿಂತಿರುಗಿ ನೋಡಿದರೆ ಪಕ್ಕದಲ್ಲಿ ಬಂದು ನಿಂತ ಆಟೋದಲ್ಲಿ ಮಾಳವಿಕಾ ಕುಳಿತಿದ್ದಳು.
ಆಟೋದಿಂದ ಆತುರಾತುರವಾಗಿ ಇಳಿದು ಬಂದು “ಬಸ್ಸಿನಲ್ಲಿ ಹೋಗಿದ್ದು ಸುರೇಶ್ ತಾನೇ ?”ಎಂದು ಕೇಳಿದಳು. ಹೌದು ಎಂದು ತಲೆ ಆಡಿಸಿದ ಮಾಧವ, “ಹಾಗಾದರೆ ನನ್ನ ವಿಷಯ ತಿಳಿಸಿದ್ದೀರಾ?” ಎಂದು ಆಸೆಯಿಂದ ಕೇಳಿದಳು.
ಇದಕ್ಕೆ ಏನು ಹೇಳಬೇಕೆಂದು ಗೊತ್ತಾಗದೆ “ನಾಳೆ ಶಿವಾಲಯಕ್ಕೆ ಬನ್ನಿ ಅಲ್ಲಿ ಎಲ್ಲಾ ತಿಳಿಸುತ್ತೇನೆ” ಎಂದನು.
ಇದರಿಂದ ಸಮಾಧಾನಗೊಳ್ಳದ ಅವಳು “ಈಗಲೇ ಹೇಳಿ ನನ್ನನ್ನು ಕಾಯಿಸಬೇಡಿ” ಎಂದಳು.
ಸುತ್ತಲೂ ಜನರು ಇವರನ್ನೇ ನೋಡುತ್ತಾ ಓಡಾಡುತ್ತಾ ಇದ್ದರು. ಬನ್ನಿ ಸ್ಕೂಟರ್ ಅಲ್ಲಿ ಈಗಲೇ ಶಿವಾಲಯಕ್ಕೆ ಹೋಗೋಣ ಎಂದು ಕರೆದನು.
ಅವರು ಶಿವಾಲಯದ ಬಳಿ ಬಂದಾಗ ಸಂಜೆ 5:00 ಗಂಟೆ ಆಗಿದ್ದರಿಂದ ಶಿವಾಲಯ ತೆರೆಯಲ್ಪಟ್ಟಿತ್ತು ಒಳಗಡೆ ಹೋಗಿ ದೇವರಿಗೆ ಕೈಮುಗಿದು ನಂತರ ಹೊರಗಡೆ ಮೂಲೆಯಲ್ಲಿ ಬಂದು ಕುಳಿತರು. ಹೇಗೆ ಹೇಳುವುದು ಎಂದು ಚಟಪಡಿಸುತ್ತಿದ್ದ ಮಾಧವನ ಮುಖ ನೋಡಿ ಮಾಳವಿಕಾ “ಗಾಬರಿಯಾಗಬೇಡಿ ಅದೇನಿದ್ದರೂ ನಾನು ತಡೆದುಕೊಳ್ಳುತ್ತೇನೆ ದಯವಿಟ್ಟು ತಿಳಿಸಿ” ಎಂದು ಆಸೆಯಿಂದ ಮತ್ತು ಆತಂಕದಿಂದ ಕೇಳಿದಳು.
ಕೊನೆಗೆ ವಿಧಿ ಇಲ್ಲದೆ ಎಲ್ಲ ವಿಷಯವನ್ನು ಚಾಚು ತಪ್ಪದೇ ನಿಧಾನವಾಗಿ ತಿಳಿಸಿದನು.
ಎಲ್ಲವನ್ನು ಕೇಳಿದ ಮಾಳವಿಕಾ ದುಃಖ ತಡೆಯಲಾರದೆ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಸ್ವಾಮಿಗಳು ದೂರದಿಂದ ಈಕೆಯನ್ನು ಗುರುತು ಹಿಡಿದು ತನ್ನ ಶಿಷ್ಯರಿಗೆ ಆಕೆಯನ್ನು ತನ್ನ ಬಳಿ ಕರೆದುಕೊಂಡು ಬರುವಂತೆ ಹೇಳಿ ಒಳಗೆ ಹೋದರು.
ವಿಷಯ ತಿಳಿದು ಮಾಳವಿಕಳಿಗೆ ಗಾಬರಿಯಾಯಿತು. ಸಾವರಿಸಿಕೊಂಡು ಒಳಗಡೆ ಹೋದಳು ಅವಳ ಹಿಂದೆಯೇ ಮಾಧವ ಕೂಡ ನಡೆದನು.
ವಿಷಯವನ್ನೆಲ್ಲ ತಾಳ್ಮೆಯಿಂದ ಕೇಳಿದ ಸ್ವಾಮಿಗಳು “ನಮ್ಮ ಭವಿಷ್ಯ ಸುಳ್ಳಾಗಿಲ್ಲ ಬಾಲೆ. ನಾವು ಹೇಳಿದಂತೆ ಓಲೆಗರಿಯಲ್ಲಿ ತಿಳಿಸಿದಂತೆ ಆ ಶುಭ ಮುಹೂರ್ತದಲ್ಲಿ ನೀನು ಇಷ್ಟಪಡುವ ಅಥವಾ ನಿನ್ನನ್ನು ಇಷ್ಟಪಡುವ ವ್ಯಕ್ತಿಯು ಇದೇ ಸ್ಥಳದಲ್ಲಿ ಭೇಟಿಯಾಗುತ್ತಾನೆ ಎಂದು ತಿಳಿಸಿದ್ದೆ ತಾನೇ.?” ಅಂದರು.
“ಹೌದು ಆದರೆ ಆಗಲಿಲ್ಲವಲ್ಲ”ಎಂದು ಕುತೂಹಲದಿಂದ ಅವರ ಮುಖ ನೋಡಿದಳು. ಆಗ ಅವರು ತಮ್ಮ ಬಲಗೈಯನ್ನು ಮಾಧವನ ಕಡೆ ತಿರುಗಿಸಿ “ಈತನೇ ನಿನ್ನನ್ನು ಇಷ್ಟಪಡುವ ವ್ಯಕ್ತಿ ಮತ್ತು ನಿನ್ನ ಕೈ ಹಿಡಿಯುತ್ತಾನೆ, ಅವತ್ತು ಈ ಯುವಕ ಇಲ್ಲಿಗೆ ಬಂದಿದ್ದನು ಅಲ್ಲವೇ”ಎಂದು ಗಂಟೆ ಹೊಡೆದಂತೆ ಹೇಳಿಬಿಟ್ಟರು.
ಮಾಧವ ಬೆಚ್ಚಿಬಿದ್ದವನಂತೆ ಮಾಳವಿಕಾ ಕಡೆ ಮುಖ ನೋಡಿ “ಅದು ನೀವು ಇಷ್ಟಪಡುವುದಾದರೆ ಮಾತ್ರ” ಎಂದು ಸಂಕೋಚ ಪಟ್ಟುಕೊಂಡು ತಿಳಿಸಿದನು.
ಕಣ್ಣೀರು ಒರೆಸಿಕೊಂಡ ಮಾಳವಿಕಾ ಸ್ವಲ್ಪ ಹೊತ್ತು ಯೋಚಿಸಿದಳು.
“ನೋಡಮ್ಮ ನೀನು ಇಷ್ಟ ಪಡುವ ಹುಡುಗನಿಗಿಂತ ನಿನ್ನನ್ನು ಇಷ್ಟ ಪಡುವ ಹುಡುಗನನ್ನು ಮದುವೆಯಾಗುವುದು ಒಳ್ಳೆಯದು ಅಲ್ಲವೇ?” ಸ್ವಾಮಿಗಳು ಹೇಳಿದರು.
ಮಾಳವಿಕ ಮುಖದಲ್ಲಿ ಮಂದಹಾಸ ತೆಗೆದುಕೊಂಡು “ಈ ಒಂದು ತಿಂಗಳಲ್ಲಿ ನೀವು ನನಗೆ ಬಹಳ ಹತ್ತಿರವಾಗಿ ಬಿಟ್ಟಿರಿ” ಎಂದು ಮೆಲ್ಲಗೆ ಹೇಳಿದಳು.
ಇದನ್ನು ಕೇಳಿಸಿಕೊಂಡ ಸ್ವಾಮಿಗಳು “ಆದಷ್ಟು ಬೇಗ ನೀವಿಬ್ಬರು ಸತಿಪತಿಗಳಾಗಿ ಸಂಸಾರಿಗಳಾಗಿ ಸುಧೀರ್ಘಕಾಲ ಸುಖವಾಗಿ ಬಾಳಿರಿ” ಎಂದು ಹಾರೈಸಿದರು.ಶ್ರೀನಾಥ್ ಹೆಚ್ .ಸಿ.
