ಭಾರತ ಮತ್ತು…

bhaarata mattu naanu

ಲೇಖಕರು : ವಿಶ್ವನಾಥ್ ಎನ್ ನೆರಳಕಟ್ಟೆ

ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ – ಭಾರತ ಮತ್ತು…

ಮಸೀದಿಯ ಗಂಟಲಿನಾಳದಿಂದೆದ್ದ ಬಾಂಗ್ ಅದರ ನೆತ್ತಿಯನ್ನು ತಲುಪಿ ಭರತಪುರದ ದಿಶೆ ದಿಶೆಗೂ ಹರಡಿಕೊಂಡಾಗ ಖಾಸಿಂ ಸಾಹೇಬರು ತಮ್ಮ ಫಾತಿಮಾ ದುಖಾನ್‌ನ ನೈಋತ್ಯ ಮೂಲೆಯಲ್ಲಿ ಜಮಖಾನದ ತುಂಡೊಂದರ ಮೇಲೆ ನಮಾಜು ಮಾಡುತ್ತಿದ್ದರು. “ಮರೆತುಬಿಡಬೇಡಿ ಮತ್ತೆ. ನಿನ್ನೆಯ ಹಾಗೆಯೇ ಖಾಲಿ ಕೈಯ್ಯಲ್ಲಿ ಬಂದರೆ ಮಧ್ಯಾಹ್ನ ಮಾಡಿಟ್ಟ ಪಲ್ಯವನ್ನೇ ರಾತ್ರಿಗೂ ತಿನ್ನಬೇಕಾದೀತು. ನಾಳೆ ಬೆಳಗ್ಗೆಗೆ ಪಲಾವ್ ಮಾಡಬೇಕು. ಬೀನ್ಸ್ ಕ್ಯಾರೇಟ್ ಮರೆಯದೇ ತನ್ನಿ” ಎಂದು ಬೆಳಗ್ಗೆ ಮನೆ ಬಿಡುವಾಗಲೇ ಹೆಂಡತಿ ಸರೋಜಮ್ಮನಿಂದ ಎರಡೆರಡು ಸಲ ಹೇಳಿಸಿಕೊಂಡಿದ್ದ ನರಸಿಂಹ ಭಟ್ಟರು ಖಾಸಿಂ ಸಾಹೇಬರ ನಮಾಜು ಮುಗಿಯುವ ಚಣಕ್ಕಾಗಿ ಅಲ್ಲೇ ಅಂಗಡಿಯ ಎದುರು ಕಾದುನಿಂತಿದ್ದರು.

ಅಷ್ಟರಲ್ಲಿಯೇ ತುಸು ಆತುರಾತುರವಾಗಿ ಅಂಗಡಿಯ ಕಡೆಗೆ ಬಂದ ಭೋಜ ಶೆಟ್ಟರು ಅಂಗಡಿಯ ಒಳಗೊಮ್ಮೆ ಇಣುಕುಹಾಕಿ ಖಾಸಿಂ ಸಾಹೇಬರು ನಮಾಜ್ ಮಾಡುತ್ತಿದ್ದುದನ್ನು ತಿಳಿದು, ತನಗೆ ಬೇಕಾಗಿದ್ದ ಚಪಾತಿ ಪ್ಯಾಕೇಟುಗಳನ್ನು ಒಂದು ಎರಡು ಎಂದು ಲೆಕ್ಕಹಾಕಿ ತೆಗೆದುಕೊಂಡು ನೂರು ರೂಪಾಯಿಯ ನೋಟೊಂದನ್ನು ಅಲ್ಲೇ ಗಲ್ಲಾದ ಮೇಲೆ ಹಾರಿಹೋಗದಂತೆ ಇಟ್ಟು ಭಟ್ಟರೆಡೆಗೆ ನೋಡುತ್ತಾ “ಹಣ ಇಲ್ಲಿ ಇಟ್ಟಿದ್ದೇನೆ ಭಟ್ಟರೇ. ಎರಡು ಪ್ಯಾಕೆಟ್ ಚಪಾತಿ ತೆಗೆದುಕೊಂಡಿದ್ದೇನೆ. ಅವರು ನಮಾಜ್ ಮುಗಿಸಿಯಾದಮೇಲೆ ಹೇಳಿ” ಎಂದು ಹೇಳಿ, ಭಟ್ಟರು ಹ್ಞಾ ಹ್ಞೂ ಹೇಳುವುದಕ್ಕೂ ಮೊದಲೇ ಅಲ್ಲಿಂದ ಹೊರಟುಹೋದರು.  

ಇವರ ನಮಾಜ್ ಮುಗಿಯುವುದರೊಳಗೆ ಅಲ್ಲೇ ಎದುರಿದ್ದ ಬೆಂಚನ್ನೊಮ್ಮೆ ಬಿಸಿ ಮಾಡುತ್ತೇನೆ ಎಂಬಂತೆ ಭಟ್ಟರು ಕಾಲನ್ನು ಉದ್ದಕ್ಕೆ ಚಾಚಿ ಬೆಂಚಿನ ಮೇಲೆ ಕುಳಿತರು. ಅವರು ಹಾಗೆ ಕುಳಿತ ಸ್ವಲ್ಪ ಸಮಯದಲ್ಲಿ ನಮಾಜ್ ಮುಗಿಸಿ ಮೇಲೆದ್ದರು ಖಾಸಿಂ ಸಾಹೇಬರು. ಮೀಸೆ ಬೋಳಿಸಿ ಕೆಂಚನೆಯ ಗಡ್ಡವನ್ನು ಬಿಟ್ಟು ಕಟ್ಟಾ ಮುಸಲ್ಮಾನನಂತೆ ತೋರುತ್ತಿದ್ದ ಖಾಸಿಂ ಸಾಹೇಬರು ಜ್ಞಾನೋದಯಕ್ಕೆ ಒಳಗಾದವರ ರೀತಿಯ ಮುಖಭಾವವನ್ನು ಹೊತ್ತು ಬಲದ ಕರದಲ್ಲಿ ಗಡ್ಡವನ್ನು ಕೆರೆಯುತ್ತಾ ಅಂಗಡಿಯ ಎದುರು ಭಾಗಕ್ಕೆ ಬಂದು ಭಟ್ಟರನ್ನು ಕಂಡು “ಮತ್ತೆ ಏನು ವಿಶೇಷ ಭಟ್ಟರೇ? ಏನು ಬೇಕಿತ್ತು ಹೇಳಿ” ಎಂದರು.  

ಬೆಂಚಿನಿಂದ ಮೇಲೆದ್ದ ಭಟ್ಟರು ನಿಧಾನಕ್ಕೆ ಅವರ ಹತ್ತಿರಕ್ಕೆ ಬಂದು ಭೋಜ ಶೆಟ್ಟರು ಇಟ್ಟಿದ್ದ ನೋಟನ್ನು ಎತ್ತಿ ಖಾಸಿಂ ಸಾಹೇಬರಿಗೆ ಕೊಟ್ಟು “ಆ ಗುತ್ತಿನ ಮನೆಯ ಭೋಜ ಶೆಟ್ಟರು ಎರಡು ಪ್ಯಾಕೇಟ್ ಚಪಾತಿ ತೆಗೆದುಕೊಂಡಿದ್ದಾರೆ” ಎಂದರು.  

ನೋಟನ್ನು ತೆಗೆದುಕೊಂಡ ಸಾಹೇಬರು “ಇದನ್ನು ಕೊಡುವುದಕ್ಕೆ ಬಂದದ್ದಾ ನೀವು?” ಎಂದರು ತಮಾಷೆಯ ಧಾಟಿಯಲ್ಲಿ.  

“ನನ್ನ ಮನೆಗೆ ಒಂದಷ್ಟು ತರಕಾರಿ ಬೇಕಿತ್ತು ಸಾಹೇಬರೇ. ಈಗ ನಾನು ಅದನ್ನು ತೆಗೆದುಕೊಂಡು ಮನೆಗೆ ಹೋಗದಿದ್ದರೆ ನಿಮ್ಮ ಈ ಅಂಗಡಿಯ ಎದುರಿನ ಬೆಂಚಿನ ಮೇಲೆಯೇ ರಾತ್ರಿ ಕಳೆಯಬೇಕಷ್ಟೇ. ನನ್ನ ಹೆಂಡತಿ ನನ್ನನ್ನು ಮನೆಗೆ ಸೇರಿಸಲಿಕ್ಕಿಲ್ಲ” ಎಂದರು ಭಟ್ಟರು ನಗಾಡುತ್ತ.  

ಗಡಸು ಶೈಲಿಯಲ್ಲೊಮ್ಮೆ ಜೋರಾಗಿ ನಗಾಡಿದ ಖಾಸಿಂ ಸಾಹೇಬರು “ಸರಿ ಏನು ಬೇಕಿತ್ತು ಹೇಳಿ” ಎನ್ನುತ್ತಾ ತರಕಾರಿಯನ್ನು ತೂಕಕ್ಕಿಡುವ ಉಮೇದು ತೋರಿದರು. ಕಾಲು ಕೆಜಿ ಬೀನ್ಸ್, ಅಷ್ಟೇ ಕ್ಯಾರೇಟ್, ಟೊಮ್ಯಾಟೋ ಒಂದರ್ಧ ಕೆಜಿ ಇರಲಿ ಎನ್ನುತ್ತಾ ಭಟ್ಟರು ತರಕಾರಿ ವ್ಯವಹಾರದಲ್ಲಿ ಮುಳುಗಿಹೋದರು.  

ಭರತಪುರದ ಪೇಟೆಗೆ ಬಂದು ಮಧ್ಯಭಾಗದಲ್ಲಿರುವ ವೃತ್ತವನ್ನು ದಾಟಿ ತುಸು ಮುಂದೆ ಹೋದಾಗ ಬಲಬದಿಗೆ ಸಿಗುವ ಅಂಗಡಿ ಖಾಸಿಂ ಸಾಹೇಬರದ್ದು. ತನ್ನ ದೊಡ್ಡ ಮಗಳ ಹೆಸರನ್ನು ಇಟ್ಟಿದ್ದಾರೆ ಅಂಗಡಿಗೆ. ನಲುವತ್ತು ವರ್ಷಗಳ ಹಿಂದೆ ಅಂಗಡಿ ತಲೆಯೆತ್ತಿದಾಗ ಇಷ್ಟು ದೊಡ್ಡದಾಗಿರಲಿಲ್ಲ. ನಾಲ್ಕು ಚಾಕ್ಲೇಟ್ ಬಾಕ್ಸ್, ಎರಡು ಬಣ್ಣದ ಬಿಸ್ಕೆಟ್‌ಗಳು, ಹೆಸರು ಹೇಳಲಾರಂಭಿಸಿದರೆ ಮೂವತ್ತು ಸೆಕೆಂಡುಗಳಲ್ಲಿ ಮುಗಿದುಹೋಗುವ ದಿನಸಿ ಸಾಮಾನುಗಳು ಇಷ್ಟೇ ಇದ್ದದ್ದು ಅವರ ಅಂಗಡಿಯಲ್ಲಿ. ಆದರೆ ಈಗ ಎಲ್ಲವೂ ಇದೆ. ಆಗಾಗ ರಾಜಕೀಯ ಸುದ್ದಿಯನ್ನು ನೋಡುವ ಅಭ್ಯಾಸ ಇರುವ ಸಾಹೇಬರು ತಮ್ಮ ಅನುಕೂಲಕ್ಕಾಗಿ ಎಂಬಂತೆ ಪುಟ್ಟ ಟಿ.ವಿ.ಯೊಂದನ್ನು ಅಂಗಡಿಯ ಒಂದು ಮೂಲೆಯಲ್ಲಿ ಎಲ್ಲರ ಕಣ್ಣಿಗೂ ಕಾಣುವಂತೆ ಇಟ್ಟಿದ್ದಾರೆ.  

ಖಾಸಿಂ ಸಾಹೇಬರ ಅಂಗಡಿಯಲ್ಲಿ ಇದ್ದ ತರಕಾರಿಗಳೆಲ್ಲಾ ಭಟ್ಟರ ಕೈಯ್ಯ ಚೀಲ ಸೇರಿ ಕಣ್ಣು ಮಿಟುಕಿಸತೊಡಗಿದ್ದವು. “ಎಷ್ಟಾಯಿತು ಸಾಹೇಬರೇ?” ಎಂದು ಕೇಳಿದ ಭಟ್ಟರು ಅವರು ಹೇಳಿದಷ್ಟು ಹಣವನ್ನು ಲೆಕ್ಕಮಾಡಿ ಕೊಟ್ಟವರು “ಮತ್ತೆ ಇವತ್ತು ಭಾರತ ಪಾಕಿಸ್ತಾನ ಮ್ಯಾಚ್ ಇದೆಯಲ್ಲಾ!” ಎಂದರು.  

“ಓ ಹೌದಾ?” ಎಂದು ಸಾಹೇಬರು ಅಚ್ಚರಿಯಿಂದ ಕೇಳಿದಾಗ ಭಟ್ಟರು “ಇವತ್ತು ನನ್ನ ಮಗನೂ ಊರಿಗೆ ಬರುತ್ತಿದ್ದಾನೆ. ಇಬ್ಬರೂ ಜೊತೆಯಾಗಿ ಕೂತು ಮ್ಯಾಚ್ ನೋಡುವುದು ಅಂತ ಮಾತಾಡಿಯಾಗಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮ್ಯಾಚು ಶುರುವಾಗುತ್ತದೆ” ಎಂದರು ನಗುತ್ತಾ.  

“ಜೋಪಾನ ಭಟ್ಟರೇ. ಭಾರ ಹೊರಲು ಆಗುತ್ತದಲ್ಲಾ? ಇಲ್ಲಾ ರಿಕ್ಷಾವನ್ನು ಬರಹೇಳಲೋ?” ಎಂದು ಭಟ್ಟರ ಬಗೆಗೆ ಜಾಗ್ರತೆ ವಹಿಸುತ್ತಲೇ ಅವರನ್ನು ಕಳುಹಿಸಿಕೊಟ್ಟ ಖಾಸಿಂ ಸಾಹೇಬರು ತಮ್ಮ ಅಂಗಡಿಯ ಟಿ.ವಿ.ಯನ್ನು ಚಾಲೂ ಮಾಡಿದರು.  

***  

ಬಿಹಾರದಿಂದ ಬಂದು ಭರತಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಏಳೆಂಟು ಮಂದಿ ಯುವಕರು ಖಾಸಿಂ ಸಾಹೇಬರ ಅಂಗಡಿಗೀಗ ತಾಗಿಕೊಂಡು ನಿಂತಿದ್ದರು. ಅವರೆಲ್ಲರ ಕಣ್ಣುಗಳೂ ಟಿ.ವಿ.ಯ ಕಡೆಗಿತ್ತು. ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತಕ್ಷಣವೇ ಗೆದ್ದೇಬಿಟ್ಟೆವು ಎಂಬಂತೆ ಬೊಬ್ಬೆ ಹೊಡೆದರು ಅಷ್ಟೂ ಮಂದಿ. ಇವರ ಅಟ್ಟಹಾಸ ಕೇಳಿದ ಅಕ್ಕಪಕ್ಕದ ಅಂಗಡಿಯ ಖಾದರ್, ಯೂಸುಫ್, ಇಕ್ಬಾಲ್, ಹುಸೈನಾರ್ ಇವರೆಲ್ಲಾ ಕುತೂಹಲ ತಾಳಿ, ಜಲಪಾತದಿಂದಿಳಿದ ನದಿನೀರಿನಂತೆ ಮಾಯಾಸದೃಶವಾಗಿ ಅಂಗಡಿಯ ಬಳಿಬಂದು ಸೇರಿದರು. ಸೇರಿದ್ದ ಬಿಹಾರೀ ಮಂದಿಯಲ್ಲಿ ಅಷ್ಟಿಷ್ಟು ಹಿಂದಿ ಮಾತನಾಡುತ್ತಾ, ಇವತ್ತು ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾ, ಎದೆಯುಬ್ಬಿಸಿ ನಿಂತುಕೊಂಡರು.  

ಸುಮ್ಮನೆ ಇದ್ದ ಖಾಸಿಂ ಸಾಹೇಬರ ಬಾಯಿಗೆ ಕೆಲಸ ಕೊಡುತ್ತೇನೆ ಎಂಬಂತೆ ಇಕ್ಬಾಲ್ “ಮತ್ತೆ ಸಾಹೇಬರೇ, ಇವತ್ತು ಭಾರತ ಗೆಲ್ಲುತ್ತದಾ ಹೇಗೆ?” ಎಂದರು.  

ಸಾಹೇಬರು ಏನೂ ಹೇಳಲಿಲ್ಲ. ಇಕ್ಬಾಲನ ಮಾತನ್ನು ಮರೆಸುವ ರೀತಿಯಲ್ಲಿ “ಅಲ್ಲಾ, ಈ ಯೂಸುಫ್ ಮೊನ್ನೆ ಮೊನ್ನೆ ಮದುವೆ ಮಾಡಿಕೊಂಡವನು. ಮನೆಗೆ ಹೋಗಿ ಹೆಂಡತಿಯ ಜೊತೆಗೆ ಬೆಚ್ಚಗೆ ಇರುವುದು ಬಿಟ್ಟು ಇಲ್ಲಿದ್ದಾನಲ್ಲಾ!” ಎಂದು ನಗಾಡಿದರು ಖಾಸಿಂ ಸಾಹೇಬರು.  

ಅದಕ್ಕೆ ಯೂಸುಫ್ “ಹೆಂಡತಿ ಜೊತೆ ಇವತ್ತೂ ಇರಬಹುದು, ನಾಳೆಯೂ ಇರಬಹುದು, ನಾಡಿದ್ದೂ ಇರಬಹುದು ಕಾಕಾ. ಆದರೆ ಈ ಮ್ಯಾಚು ಇವತ್ತು ಬಿಟ್ಟರೆ ಮತ್ತೆ ಸಿಗುತ್ತದಾ!” ಎಂದ.  

“ಇದಪ್ಪಾ ಮಾತು” ಎಂದು ಯೂಸುಫ್‌ನ ಬೆನ್ನಿನ ಮೇಲೆ ಶಬ್ದ ಬರುವಂತೆ ಬಡಿದ ಹುಸೈನಾರ್, “ಹೇಗೂ ಮದುವೆ ಮಾಡಿಕೊಂಡಾಗಿದೆ. ಮದುವೆ ಆದ ಹೊಸದು. ಹೆಂಡತಿ ತನಗಾಗಿ ಕಾದು ಕೂತುಕೊಳ್ಳುತ್ತಾಳೆ ಅಂತ ಗ್ಯಾರಂಟಿ ಇವನಿಗೆ. ಅವಳೆದುರು ಗತ್ತು ತೋರಿಸುವ ಉಮೇದು. ಇಲ್ಲವಾದರೆ ಮ್ಯಾಚು ಬಿಟ್ಟು ಈಗಲೇ ಮನೆಗೆ ಓಡಿಹೋಗುತ್ತಿದ್ದ” ಎಂದ. ನಗುವಿನ ಅಲೆಯೆದ್ದಿತು.  

ಅಷ್ಟರಲ್ಲಿ ಪಾಕಿಸ್ತಾನದ ಇಬ್ಬರು ಬ್ಯಾಟರ್‌ಗಳು ಎಲ್ಲದಕ್ಕೂ ಸಿದ್ಧ ಎಂಬಂತೆ ಪೆವಿಲಿಯನ್‌ನಿಂದ ಕ್ರೀಸ್ ಕಡೆಗೆ ಬರಲಾರಂಭಿಸಿದರು.  

ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದೆಯೆಂದರೆ ಇದ್ದಬದ್ದ ಕೆಲಸವನ್ನೂ ಬಿಟ್ಟು ಟಿ.ವಿ. ಮುಂದೆ ಕುಳಿತುಕೊಳ್ಳುತ್ತಿದ್ದ ತನ್ನಿಂದ ಆ ಬಗೆಯ ಉತ್ಸಾಹ ಕಳೆದುಹೋದದ್ದು ಯಾವಾಗ ಎಂದು ಲೆಕ್ಕ ಹಾಕತೊಡಗಿದರು ಖಾಸಿಂ ಸಾಹೇಬರು.  

***  

ಗೋಪಾಲ ರಾಯರ ಮಗಳು ಭೂಮಿಕಾ. ಭರತಪುರದ ಡಿಗ್ರಿ ಕಾಲೇಜಿನಲ್ಲಿ ಕಲಿಯುತ್ತಿದ್ದವಳು. ಪ್ರತೀದಿನ ಸಂಜೆ ಭರತಪುರದ ಬಸ್‌ಸ್ಟಾö್ಯಂಡಿನಲ್ಲಿಳಿದು ನಡೆದುಕೊಂಡೇ ಮನೆಗೆ ಹೋಗುವುದು ಅವಳ ರೂಢಿ. ಅದೊಂದು ದಿನ ಸಂಜೆ ಮನೆಗೆ ಹೋಗುತ್ತಿದ್ದಾಗ ಅಲ್ಲಿಯೇ ಗೂಡಂಗಡಿ ಪಕ್ಕ ನಿಂತಿದ್ದ ನಾಲ್ಕೈದು ಮಂದಿ ಮುಸಲ್ಮಾನ ಹುಡುಗರು ಅವಳನ್ನು ಚುಡಾಯಿಸಿದರಂತೆ. ವಿಚಾರವನ್ನು ಅವಳು ಹೋಗಿ ತಿಳಿಸಿದ್ದು ತನ್ನ ಅಪ್ಪನಲ್ಲಿ. ಅವರು ತಮ್ಮ ಪರಿಚಯದ ಗಟ್ಟಿ ಜವ್ವನಿಗರಿಗೆ ಸಮಾಚಾರ ಮುಟ್ಟಿಸಿದರು.  

“ಇದನ್ನು ಹೀಗೆಯೇ ಬಿಟ್ಟರೆ ನಾಳೆ ದಿನ ಅವಳ ಮೈಗೆ ಕೈಯ್ಯಿಡುವವರೇ” ಎಂದುಕೊಂಡ ಆ ಯುವಕರು ಕೂಡಲೇ ಆ ಗೂಡಂಗಡಿಯ ಬಳಿ ಹೋಗಿದ್ದಾರೆ. ಅಲ್ಲಿದ್ದ ಮುಸ್ಲಿಂ ಹುಡುಗರಿಗೂ ಇವರಿಗೂ ಮಾತಿನ ಚಕಮಕಿಯಾಗಿದೆ. ಅವರು ಇವರನ್ನು ಬೈದಿದ್ದಾರೆ. ಇವರು ಅವರನ್ನು ಹೊಡೆದಿದ್ದಾರೆ. ಆ ಬದಿಯ ನಾಲ್ಕು ಮಂದಿ ಈ ಬದಿಯ ಎರಡು ಮಂದಿ ಆಸ್ಪತ್ರೆ ಸೇರಿಕೊಳ್ಳುವಂತಾಗಿದೆ. ಊರಿಗೆ ಪೊಲೀಸ್ ದರ್ಶನವೂ ಆಗಿದೆ. ಇದೆಲ್ಲವೂ ನಡೆದದ್ದು ಐದು ವರ್ಷಗಳ ಹಿಂದೆ.  

***  

ಬೈಕಿನವನು ಭಕ್ಕನೆ ಬ್ರೇಕು ಹೊಡೆದದ್ದು, ಮೂಲೆಮನೆ ಕೇಶವನ ಮಗಳು ಪ್ರಣತಿ ಹೆದರಿ ಬೊಬ್ಬೆ ಹೊಡೆದು ರಸ್ತೆಗೆ ಅಪ್ಪಳಿಸಿದ್ದು ಇವೆರಡೂ ಒಂದೇ ಬಿಂದುವಿನಲ್ಲಿ ಆವೀರ್ಭವಿಸಿದವು. ಬೈಕಿನವನಿಗೆ ಸಮತೋಲನ ತಪ್ಪಿ ಅವನು ಬೈಕಿನ ಸಮೇತ ನೆಲಕ್ಕೆ ಬಿದ್ದ. ಪ್ರಣತಿಯ ಪುಟ್ಟ ದೇಹ ರಕ್ತಮಯವಾಗಿತ್ತು.  

ಖಾಸಿಂ ಸಾಹೇಬರ ಅಂಗಡಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದವರೆಲ್ಲಾ ಕೂಡಲೇ ಓಡಿಬಂದರು. ಎರಡು ವರ್ಷಗಳ ಹಿಂದೆ ವಿಪರೀತ ಸೊಂಟನೋವಿಗೆ ತುತ್ತಾಗಿರುವ ಖಾಸಿಂ ಸಾಹೇಬರಿಗೆ ಸರಿಯಾಗಿ ನಡೆಯುವುದಕ್ಕಾಗುವುದಿಲ್ಲ. ಆ ಕಾರಣಕ್ಕೆ ಅವರು ಅಂಗಡಿಯಲ್ಲಿಯೇ ಇದ್ದು ರಸ್ತೆಯ ಕಡೆಗೆ ದೃಷ್ಟಿ ನೆಟ್ಟರು. ತನ್ನಂಥ ಮುದುಕ ಅಲ್ಲಿಗೆ ಹೋಗಿ ಮಾಡುವುದಾದರೂ ಏನಿದೆ ಎಂಬ ಭಾವವೂ ಅವರಲ್ಲಿತ್ತು.  

ಪ್ರಜ್ಞೆ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದ ಹುಡುಗಿಯ ರಕ್ತ ಮೆತ್ತಿದ್ದ ಮುಖವನ್ನು ಕಂಡ ಖಾದರ್ “ಇವಳು ಆ ಕೇಶವನ ಮಗಳಲ್ವಾ?” ಎಂದು ಉಳಿದವರ ಮುಖ ನೋಡುತ್ತಾ ಕೇಳಿದ. ಅಷ್ಟರಲ್ಲಿ ಸುತ್ತಮುತ್ತ ಇದ್ದ ಜನರೆಲ್ಲಾ ಅಲ್ಲಿ ಸೇರಿಯಾಗಿತ್ತು.  

“ಹೌದು ಅವಳೇ ಪಾಪ” ಎಂದ ಹುಸೈನಾರ್ ಜೋರಾಗಿ ಚಪ್ಪಾಳೆ ಹೊಡೆದು ರಿಕ್ಷಾಸ್ಟಾö್ಯಂಡಿಗೆ ಕಾಣುವಂತೆ ಕೈಯ್ಯನ್ನು ಮೇಲೆತ್ತಿ ರಿಕ್ಷಾವೊಂದನ್ನು ಬರುವುದಕ್ಕೆ ಹೇಳಿದ.  

“ನಿನಗೆ ಯಾಕೋ ಈ ಉಸಾಬರಿ! ನಾವು ಆಸ್ಪತ್ರೆಗೆ ಸೇರಿಸಿದ್ದು ಅಂತ ಗೊತ್ತಾದರೆ ಅವರು ಮತ್ತೆ ಹಾರಿಬೀಳುತ್ತಾರೆ. ಮೊದಲೇ ಅವಳ ಅಪ್ಪನಿಗೆ ನಮ್ಮ ಮುಖ ಕಂಡರಾಗುವುದಿಲ್ಲ” ಎಂದು ಪಿಸುಗುಟ್ಟಿದ ಇಕ್ಬಾಲ್.  

“ಒಂದು ಜೀವ ಹೋಗುತ್ತಿರುವಾಗ ಅದನ್ನೆಲ್ಲಾ ನೋಡಿಕೊಂಡು ಕೂರಲಿಕ್ಕಾಗುತ್ತದಾ!” ಎಂದು ಹುಸೈನಾರ್ ಹೇಳುವಷ್ಟರಲ್ಲಿ ರಿಕ್ಷಾ ಅಲ್ಲಿಗೆ ಬಂದಾಗಿತ್ತು. ಅದರಿಂದಿಳಿದ ಚಾಲಕ ರಫೀಕ್ “ಹ್ಞೂ ಸ್ವಲ್ಪ ಕೈ ಕೊಡಿ ಯಾರಾದರೂ” ಎಂದು ಹೇಳುತ್ತಾ ಪ್ರಣತಿಯ ತಲೆಗೆ ಕೈಯ್ಯಿಕ್ಕಿದ. ಹುಸೈನಾರ್, ಇಕ್ಬಾಲ್, ಯೂಸುಫ್, ಖಾದರ್ ಎಲ್ಲರೂ ಸೇರಿ ಅವಳನ್ನು ರಿಕ್ಷಾದ ಹಿಂದಿನ ಸೀಟಿನಲ್ಲಿ ಮಲಗಿಸಿದರು.  

“ನಾನು ಆಸ್ಪತ್ರೆಗೆ ಹೋಗುತ್ತೇನೆ” ಎಂದ ಹುಸೈನಾರ್, ಪ್ರಣತಿಯ ತಲೆಯನ್ನು ತನ್ನ ತೊಡೆಯ ಮೇಲೆಯೇ ಇಟ್ಟುಕೊಂಡು ಸೀಟಿನ ಮೇಲೆ ಕುಳಿತು. “ಹ್ಞೂ ಬೇಗ ಹೊರಡು” ಎಂದ ರಫೀಕ್‌ನಿಗೆ. ರಿಕ್ಷಾ ರಭಸದಿಂದ ಹೊರಟಿತು. 

*** 

ನೆಲ ಗಟ್ಟಿಯಿದೆಯೋ ನನ್ನ ಮನಸ್ಸೋ ಇಂದು ನೋಡಿಯೇಬಿಡುತ್ತೇನೆ ಎಂಬಂತೆ ನೆಲದ ಮೇಲೊಮ್ಮೆ ಬ್ಯಾಟ್‌ನಿಂದ ಕುಟ್ಟಿದ ಬ್ಯಾಟರ್ ಬೌಲರ್‌ನೆದುರು ಮುಖಾಮುಖಿಯಾಗುವವನಂತೆ ಬಂದುನಿಂತ. ಅವನ ಮುಖದಲ್ಲಿ ದೃಢತೆಯಿತ್ತು. ಮೊದಲ ಬಾಲನ್ನು ಬೌಂಡರಿಗೆ ಬಡಿದಟ್ಟಿದ. ಮತ್ತೆ ಅಂಗಡಿಯೆದುರು ಬಂದುನಿಂತಿದ್ದ ಯುವಕರು ಕೈ ಕೈ ಹಿಸುಕಿಕೊಂಡರು. ಅದಾಗಿ ಮೂರು ಬಾಲ್ ಕಳೆದಿರಲಿಲ್ಲ, ಬೌಂಡರಿ ಗೆರೆಯಾಚೆಗೆ ಬಾಲನ್ನು ಮುಟ್ಟಿಸಿದ್ದವನು ಅದೇ ಬೌಂಡರಿ ಗೆರೆಯನ್ನು ದಾಟಿ ನಿರಾಸೆಯಿಂದ ನಡೆದುಕೊಂಡು ಹೋಗುವಂತಾಯಿತು. ಮೊದಲ ಓವರಿನಲ್ಲಿ ಆರು ರನ್ ಬಂತು. ಒಂದು ವಿಕೆಟ್ ಬಿತ್ತು. “ಸರಿಯಾಗಿಯೇ ಕಂಟ್ರೋಲ್ ಮಾಡಿದ್ದಾರೆ. ಹೀಗೇ ಕಂಟಿನ್ಯೂ ಆದರೆ ಗೆದ್ದೇ ಗೆಲ್ಲುತ್ತಾರೆ ನಮ್ಮವರು” ಎಂದು ಹೇಳಿದ ಖಾದರ್. ಎಲ್ಲರೂ ಅವನ ಮಾತಿಗೆ ತಮ್ಮದೂ ಒಂದೊಂದು ಮಾತನ್ನು ಸೇರಿಸುತ್ತಾ ಹೋದರು.  

***  

ಗೂಡಂಗಡಿಯೆದುರು ನಡೆದ ಹೊಡೆದಾಟ ಭರತಪುರದ ಹಿಂದೂ ಮುಸಲ್ಮಾನರನ್ನು ಆಗಾಗ ಕೆರಳಿಸುತ್ತಲೇ ಹೋಯಿತು. ಇಲ್ಲಸಲ್ಲದ ನೆಪಹೂಡಿ ಕಲಹ ಹೂಡುವುದು ಅಲ್ಲಿನ ಯುವಕರಿಗೆ ಖಾಯಂ ಚಟವಾಯಿತು. ಮುನೀರನ ಹಣ್ಣಿನ ಅಂಗಡಿಯಲ್ಲಿ ಗುಟ್ಟಾಗಿ ಗೋಮಾಂಸ ಮಾರಾಟ ನಡೆಯುತ್ತಿದೆ ಎಂದು ಗುಮಾನಿ ಬಂದು ಹತ್ತಿಪ್ಪತ್ತು ಹಿಂದೂ ಯುವಕರು ಒಂದೇ ಸಲಕ್ಕೆ ಅಲ್ಲಿ ಸೇರಿ ಅವನನ್ನು ಹಿಡಿದು ಹೊಡೆದದ್ದು ಇದರ ಮುಂದುವರಿದ ಭಾಗ. ಆ ದಿನವಂತೂ ಗಲಾಟೆಯೋ ಗಲಾಟೆ. ತಮ್ಮವನಿಗೆ ಅವರು ಹೊಡೆದಿದ್ದಾರೆ ಎಂಬ ಸುದ್ದಿ ತಿಳಿದ ಮುಸ್ಲಿಂ ಯುವಕರೂ ಓಡಿಬಂದರು. ಎರಡೂ ಕಡೆಯವರು ಕಚ್ಚಾಡಿಕೊಂಡರು. ಗುದ್ದಾಡಿಕೊಂಡರು. ತೃಪ್ತಿಯಾಗಲಿಲ್ಲ. ದೂರದೂರದಲ್ಲಿ ನಿಂತು ಅವರ ಅಂಗಡಿಗೆ ಇವರು, ಇವರ ಅಂಗಡಿಗೆ ಅವರು ಕಲ್ಲುಗಳನ್ನೆಸೆದುಕೊಂಡರು. ಹೀಗೆ ಗಲಾಟೆ ಎಬ್ಬಿಸಿದ ಯುವಕರಲ್ಲಿ ಖಾದರ್, ಯೂಸುಫ್, ಇಕ್ಬಾಲ್, ಹುಸೈನಾರ್ ಮುಸಲ್ಮಾನರಾದರೆ ಗಿರೀಶ, ನಿತಿನ್, ಅಭಿಜಿತ್, ಮಹೇಶ ಇವರೆಲ್ಲಾ ಹಿಂದೂ ಯುವಕರಾಗಿದ್ದರು.  

ಮಿತಿಮೀರಿದ್ದ ಜಗಳವನ್ನು ಒಂದು ಹದಕ್ಕೆ ತರಬೇಕಾದರೆ ವ್ಯಾನಿನ ತುಂಬಾ ಪೊಲೀಸರು ಬರಬೇಕಾಯಿತು. ಗಲಾಟೆ ನಿಂತು ವಾರ ಕಳೆದ ಮೇಲೂ ಪೊಲೀಸರ ವ್ಯಾನು ಅಲ್ಲಿಂದ ಒಂದು ಹೆಜ್ಜೆಯೂ ಮುಂದಕ್ಕೆ ಚಲಿಸಿರಲಿಲ್ಲ.  

ಎರಡು ವಾರ ಕಳೆದ ಮೇಲೆ ಹಿಂದೂಗಳ ಅಂಗಡಿಗೆ ಹೋಗದಂತೆ ಮುಸ್ಲಿಮರಿಗೆ, ಮುಸ್ಲಿಮರ ಅಂಗಡಿಗೆ ಹೋಗದಂತೆ ಹಿಂದೂಗಳಿಗೆ ಗುಪ್ತ್ ಗುಪ್ತ್ ಫರ್ಮಾನೊಂದು ಹೊರಡಿತು. ಹೆಚ್ಚಿನವರು ಅದನ್ನು ಅಕ್ಷರಶಃ ಪಾಲಿಸುವವರಾದರು.   

***  

“ರಕ್ತ ಬೇಕಾಗಿದೆಯಂತೆ, ಎ ಪಾಸಿಟಿವ್ ಬ್ಲಡ್ ಗ್ರೂಪ್‌ನದ್ದು. ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಬಂದಿದೆ” ಎಂದ ಖಾದರ್ ಮೊಬೈಲ್ ನೋಡುತ್ತಾ.  

“ಈ ಸಿಕ್ಸ್ ಈಗ ಬರಲೇಬಾರದಿತ್ತು. ಇದೊಂದನ್ನು ಕಂಟ್ರೋಲ್ ಮಾಡಿದ್ದರೆ ಈ ಓವರ್‌ನಲ್ಲಿ ಅವರಿಗೆ ಏನೇನೂ ರನ್ ಇಲ್ಲದ ಹಾಗಾಗುತ್ತಿತ್ತು” ಎಂದು ಹೇಳುತ್ತಾ ತಾನೂ ಒಂದು ಸಣ್ಣಮಟ್ಟಿನ ಕ್ರಿಕೆಟ್ ಕಾಮೆಂಟ್ರಿ ಕೊಡುತ್ತಿದ್ದ ಇಕ್ಬಾಲ್ ತಕ್ಷಣವೇ ಖಾದರ್‌ನ ಮಾತಿಗೆ ಕಿವಿಗೊಟ್ಟು “ಯಾರಿಗಂತೆ ರಕ್ತ ಬೇಕಾದದ್ದು?” ಎಂದು ಕೇಳಿದ.  

“ಅದೇ ಈಗ ಆ್ಯಕ್ಸಿಡೆಂಟ್ ಆಯಿತಲ್ಲಾ, ಅದೇ ಹುಡುಗಿಗೆ. ಹುಸೈನಾರೇ ಭರತಪುರ ಬಾಯ್ಸ್ ವಾಟ್ಸಾಪ್ ಗ್ರೂಪಿನಲ್ಲಿ ಕಳಿಸಿದ್ದು” ಎಂದ ಖಾದರ್, “ನನ್ನದು ಬಿ ಪಾಸಿಟಿವ್. ಇಲ್ಲವಾದರೆ ನಾನೇ ಕೊಡುತ್ತಿದ್ದೆ” ಎಂಬ ಮಾತನ್ನೂ ಸೇರಿಸಿದ.  

“ನನ್ನದು ಎ ಪಾಸಿಟಿವ್” ಎಂದ ಇಕ್ಬಾಲ್ ಖಾದರ್‌ನ ಮುಖವನ್ನೂ ಯೂಸುಫ್‌ನ ಮುಖವನ್ನೂ ಗೊಂದಲದಿಂದ ಎಂಬಂತೆ ನೋಡಿದ. ನಾನೇ ರಕ್ತ ಕೊಟ್ಟರಾದೀತೋ ಹೇಗೆ ಎಂಬ ಪ್ರಶ್ನೆ ಅವನ ಕಣ್ಣಿನಲ್ಲಿ ಉರುಳಾಟ ನಡೆಸುತ್ತಿತ್ತು.  

ಅವನ ಚಾಂಚಲ್ಯವನ್ನು ಅರಿತವನಂತೆ ಯೂಸುಫ್ “ನೀನು ರಕ್ತ ಕೊಡುವುದಕ್ಕೆ ಹೋದರೂ ಅವರು ತೆಗೆದುಕೊಳ್ಳುವುದಕ್ಕೆ ಸಿದ್ಧ ಇರಬೇಕಲ್ಲಾ! ಆ ಹುಡುಗಿಯ ಅಪ್ಪ ಕೇಶವ ಅವತ್ತು ಗಲಾಟೆ ಆದ ನಂತರ ಎದುರು ಸಿಕ್ಕಿದರೂ ನಮ್ಮ ಮುಖ ನೋಡುವುದನ್ನೆ ಬಿಟ್ಟುಬಿಟ್ಟಿದ್ದಾನೆ. ಹಾಗಿರುವಾಗ ನೀನು ರಕ್ತ ಕೊಡುವುದಕ್ಕೆ ಅವನು ಒಪ್ಪಿಕೊಳ್ಳುತ್ತಾನಾ! ಖಂಡಿತಾ ಇಲ್ಲ” ಎಂದ ಉದಾಸೀನದಿಂದ.  

ಇಕ್ಬಾಲ್‌ನಿಗೂ ಅದು ಹೌದೆನಿಸಿತು. ಟಿ.ವಿ.ಯ ಕಡೆಗೆ ದೃಷ್ಟಿ ಹರಿಸಿದ.  

ಇನ್ನೊಂದು ವಿಕೆಟ್ ಬೀಳುವುದರೊಳಗೆ ಒಂದು ಲೋಟ ಚಹಾ ಕುಡಿದುಬರುತ್ತೇನೆ ಎಂದು ಅಂಗಡಿಯ ಹಿಂದೆಯೇ ಇದ್ದ ತಮ್ಮ ಮನೆಗೆ ಹೋಗಿದ್ದ ಖಾಸಿಂ ಸಾಹೇಬರು ಈಗ ಮತ್ತೆ ಅಂಗಡಿಯೊಳಗೆ ಬಂದು ಕುರ್ಚಿಯಲ್ಲಿ ಕೂತ ತಕ್ಷಣವೇ ಖಾದರ್ “ಸಾಹೇಬರೇ, ಹತ್ತು ಓವರ್ ಮುಗಿದಾಯಿತು. ಎವರೇಜ್ ಸ್ಕೋರ್ ಮಾಡಿದ್ದಾರಷ್ಟೇ. ನಾವೇ ಗೆಲ್ಲುವುದು” ಎಂದ. ಒಂದರ ಮೇಲಿನ್ನೊಂದು ಬಾಲ್ ಮುಗಿಯುತ್ತಲೇ ಹೋಯಿತು. ಓವರ್ ಮೇಲೆ ಮತ್ತೊಂದು ಓವರ್ ಸಾಗುತ್ತಲೇ ಇತ್ತು. ಇಪ್ಪತ್ತು ಓವರ್ ಕೊನೆಗಾಣುವಾಗ ನೂರಾ ತೊಂಭತ್ತು ರನ್ ಕಲೆಹಾಕಿದ್ದರು ಪಾಕಿಸ್ತಾನದ ಆಟಗಾರರು. 

***   

ಭರತಪುರದಲ್ಲಿ ಹಿಂದೂ ಮುಸ್ಲಿಂ ಗಲಾಟೆ ಆದದ್ದು ಬೆಂಗಳೂರಿನ ವಿಧಾನಸಭೆಯನ್ನೂ ತಲುಪಿತು. ಅಧಿವೇಶನದಲ್ಲಿ ಅದರ ಪ್ರಸ್ತಾಪವೂ ಆಯಿತು. ಮಾಧ್ಯಮದವರು ‘ಭರತಪುರ ಕೊತಕೊತ’, ‘ನಿಗಿನಿಗಿ ಕೆಂಡವಾದ ಭರತಪುರ’, ‘ಭರತಪುರದಲ್ಲಿ ಕೆರಳಿನಿಂತ ಕೋಮುಜ್ವಾಲೆ’ ಎಂಬೆಲ್ಲಾ ಶೀರ್ಷಿಕೆಯನ್ನು ಕೊಟ್ಟು ಬಗೆಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲೇ ಹೋದರು. ಇದನ್ನು ಕಂಡ ಭರತಪುರದ ಕಡು ಜವ್ವನಿಗರ ಬಿಸಿರಕ್ತ ಇನ್ನಷ್ಟು ಬೆಚ್ಚಗಾಗಿ ಕಾದಾಟ ಮುಂದುವರಿಯುತ್ತಲೇ ಹೋಯಿತು. ಮುಂದಿನ ಚುನಾವಣೆಯಲ್ಲಿ ಹೆಚ್ಚು ಓಟು ಪಡೆಯುವುದಕ್ಕೆ ಏನಿದೆ ದಾರಿ ಎಂದು ಅಂಡಲೆಯುತ್ತಿದ್ದ ಮಹಾನುಭಾವ ರಾಜಕಾರಣಿಗಳು ಇದನ್ನೇ ನೆಪವಾಗಿಟ್ಟುಕೊಂಡು ಜನರನ್ನು ಒಡೆಒಡೆದುಹಾಕುವ ಕೈಂಕರ್ಯವನ್ನೇ ತಮ್ಮದಾಗಿಸಿಕೊಂಡರು.  

ಹೀಗಿದ್ದಾಗಲೇ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚೊಂದು ನಡೆದುಹೋಯಿತು. ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು. ಖುಷಿಖುಷಿಯಾದ ಖಾಸಿಂ ಸಾಹೇಬರು ತಮ್ಮ ಅಂಗಡಿಯ ಮುಂದೆ ಹೋಗುತ್ತಿದ್ದವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದರು.  

ಹೀಗೆ ಅಂಗಡಿ ಮುಂದೆ ಹೋಗುತ್ತಿದ್ದ ಗಿರೀಶ, ನಿತಿನ್ ಅವರ ಮುಂದೆ ಸಿಹಿತಿಂಡಿಯಿದ್ದ ಬಾಕ್ಸನ್ನು ಸಾಹೇಬರು ಹಿಡಿದು ನಿಂತಾಗ ನಿತಿನ್ ಕೋಪದ ಧಾಟಿಯಲ್ಲಿ “ಎದುರಿನಿಂದ ಸಿಹಿ ಹಂಚುವುದು. ಮನಸ್ಸಿನಲ್ಲಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುವುದು. ನಿಮ್ಮದು ಇಂಥ ನಾಟಕವೆಲ್ಲಾ ಇದ್ದದ್ದೇ” ಎಂದಿದ್ದ.  

“ಲೆಕ್ಕಕ್ಕೆ ಭಾರತದಲ್ಲಿದ್ದಾರಷ್ಟೇ. ನಿಜವಾಗಿಯೂ ಇವರೆಲ್ಲಾ ಪಾಕಿಸ್ತಾನದವರು” ಎಂದು ಹೇಳಿದ್ದ ಗಿರೀಶ ಈ ಮುದುಕನಲ್ಲೇನು ಮಾತು ಎಂಬಂತೆ ದಡದಡನೆ ಅಲ್ಲಿಂದ ಮುಂದಕ್ಕೆ ಹೆಜ್ಜೆ ಹಾಕಿದ್ದ.  

ಆ ಕ್ಷಣ ಖಾಸಿಂ ಸಾಹೇಬರಿಗೆ ನಿಜಕ್ಕೂ ಆಘಾತವಾಗಿತ್ತು. ಭಾರತ ಪಾಕಿಸ್ತಾನವನ್ನು ಸೋಲಿಸಿದ ನೆಪದಲ್ಲಾದರೂ ಈ ಊರು ಒಂದಾಗಲಿ ಎಂದು ತಾನು ಬಯಸಿದ್ದೇ ತಪ್ಪಾ ಎಂದು ಅನಿಸಿಬಿಟ್ಟಿತ್ತು ಅವರಿಗೆ. ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ತೂಕ ಹಾಕುವುದು ಸರಿಯಲ್ಲ ಎಂದು ತೋರಿತ್ತು ಅವರಿಗೆ. ಇದಾದ ಬಳಿಕವೇ ಅವರು ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಬಗೆಗೆ ವೈರಾಗ್ಯ ಭಾವ ಬೆಳೆಸಿಕೊಂಡದ್ದು. 

***  

ಆಸ್ಪತ್ರೆಗೆ ಬಂದಿದ್ದ ಇಕ್ಬಾಲ್ ಎದುರು ಕಂಡ ನರ್ಸೊಬ್ಬಳಲ್ಲಿ “ಈಗ ಸ್ವಲ್ಪ ಸಮಯಕ್ಕೆ ಮೊದಲು ಪ್ರಣತಿ ಅಂತ ಆ್ಯಕ್ಸಿಡೆಂಟ್ ಆದ ಹುಡುಗಿಯೊಬ್ಬಳನ್ನು ಇಲ್ಲಿ ಸೇರಿಸಲಾಗಿದೆ. ಅವಳು ಎಲ್ಲಿದ್ದಾಳೆ ಗೊತ್ತಿದೆಯಾ?” ಎಂದು ಕೇಳಿದ.  

“ಹೋ! ಅವಳಿಗೆ ಸೀರಿಯಸ್ ಆಗಿದೆ. ಐಸಿಯುನಲ್ಲಿ ಇದ್ದಾಳೆ ಆ ಕಡೆ” ಎಂದ ನರ್ಸ್ ಆಸ್ಪತ್ರೆಯ ಬಲಭಾಗದ ಮೂಲೆಗೆ ಕೈತೋರಿಸಿದಳು.  

ಯೂಸುಫ್‌ನ ಮಾತು ಕೇಳಿ ಇಕ್ಬಾಲ್ ಒಂದುಸಲಕ್ಕೆ ಸುಮ್ಮನಾಗಿದ್ದರೂ ಸಹ ಹಾಗೆಯೇ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಅವನ ಮನಸ್ಸು ಒಪ್ಪಿರಲಿಲ್ಲ. ಅದಕ್ಕಾಗಿಯೇ ಅವನೀಗ ಆಸ್ಪತ್ರೆಗೆ ಬಂದಿದ್ದ.  

ಏನಾದರಾಗಲಿ ಒಂದು ಸಲ ಪ್ರಣತಿಯ ತಂದೆಯಲ್ಲಿ ಹೇಳಿನೋಡುತ್ತೇನೆ. ಅವರು ಒಪ್ಪಿದರೆ ಖಂಡಿತಾ ರಕ್ತ ಕೊಡುತ್ತೇನೆ ಎಂದುಕೊಳ್ಳುತ್ತಲೇ ಅವನು ಐಸಿಯು ಕಡೆಗೆ ಹೆಜ್ಜೆ ಹಾಕತೊಡಗಿದ… 

***  

ಭಾರತದ ಆಟಗಾರರು ಬ್ಯಾಟಿಂಗ್ ಶುರುವಿಟ್ಟುಕೊಂಡು ಅದಾಗಲೇ ಆರು ಓವರ್ ಕಳೆದಿತ್ತು. ಭಾರೀ ಭರವಸೆಯಿಟ್ಟಿದ್ದ ಮೂರು ಬ್ಯಾಟರ್‌ಗಳು ಅದಾಗಲೇ ತಲೆಯನ್ನು ಕೆಳಗೆ ಹಾಕಿ ಪಂದ್ಯಕ್ಕೂ ತಮಗೂ ಋಣವಿಲ್ಲ ಎಂದು ನಡೆದುಹೋಗಿಯಾಗಿತ್ತು. ನಲುವತ್ತು ರನ್ನುಗಳಷ್ಟೇ ಬಂದದ್ದು ಮೂವತ್ತಾರು ಬಾಲ್‌ಗಳಲ್ಲಿ.  

“ಥತ್! ಇವರಿವತ್ತು ಸೋಲುತ್ತಾರೆ ಮಾರಾಯ. ಇಷ್ಟು ಓವರ್ ಆದರೂ ರನ್ನೇ ಬಂದಿಲ್ಲ. ಇನ್ನೂ ನೂರಾ ಐವತ್ತೊಂದು ರನ್ ಬರಬೇಕಲ್ಲ, ಹದಿನಾಲ್ಕು ಓವರ್‌ನಲ್ಲಿ. ವಿಕೆಟ್ ಕೂಡಾ ಇಲ್ಲ. ಯಾವ ಕರ್ಮದ ಆಟವೋ ಏನೋ ಇದು!” ಎಂದು ಹೇಳಿದ ಖಾದರ್ ಅಂಗಡಿಯ ಗೋಡೆಗೊಮ್ಮೆ ಕೈಯ್ಯಿಂದ ಬಲವಾಗಿ ಬಡಿದ.  

“ಅಷ್ಟು ನಿರಾಸೆ ಆಗುವುದಕ್ಕೇನಿದೆ. ಇನ್ನು ಹೇಗೆ ರನ್ ಮಾಡುತ್ತಾರೆ ನಮ್ಮವರು ನೋಡು” ಎಂದು ಖಾಸಿಂ ಸಾಹೇಬರು ಸವಾಲಿನಿಂದ ಎಂಬಂತೆ ನುಡಿದರು.  

ಅವರ ಮಾತು ಮುಗಿದಿರಲಿಲ್ಲ, ಒಂದು ಸಿಕ್ಸ್ ಬಂತು. “ನೋಡಿದೆಯಾ! ಇನ್ನು ಆಟ ಶುರು” ಎಂದರು ಖಾಸಿಂ ಸಾಹೇಬರು, ಚಿಕ್ಕ ಮಕ್ಕಳಂತೆ.  

“ನಮ್ಮ ಖಾಸಿಂ ಸಾಹೇಬರದ್ದು ಬಾಯಿಯೇ ಬಾಯಿ. ಭಾರೀ ನಸೀಬಿನ ಬಾಯಿ” ಎಂದು ಜೋಕು ಮಾಡಿದ ಯೂಸುಫ್.  

ಬ್ಯಾಟರ್ ಸಿಡಿಯುತ್ತಲೇ ಹೋದ. ಅವನನ್ನು ತಡೆಯುವುದಕ್ಕಾಗದೆ ಸೋತುಹೋದರು ಪಾಕಿಸ್ತಾನೀ ಕ್ರಿಕೆಟಿಗರು. ಹದಿನಾರನೇ ಓವರಿನವರೆಗೂ ಅವನ ಆರ್ಭಟ ಮುಂದುವರಿಯುತ್ತಲೇ ಹೋಯಿತು. ಸ್ಕೋರ್ ನೂರಾ ಐವತ್ತಾರು ಆಗಿತ್ತು. ನಾಲ್ಕು ವಿಕೆಟ್ ಭಾರತದ ಕೈಯ್ಯಲ್ಲಿತ್ತು. ಭಾರತ ಮೂವತ್ತೇಳು ರನ್ ಹೊಡೆದರೆ ಪಾಕಿಸ್ತಾನ ಸೋಲುವುದರಲ್ಲಿತ್ತು.  

ಮುಂದಿನ ಓವರಿನಲ್ಲಿ ವಿಕೆಟ್ ಬಿತ್ತು. ಬಂದದ್ದು ಬರೀ ಏಳು ರನ್. ಇನ್ನು ಮೂರು ಓವರಿನಲ್ಲಿ ಮೂವತ್ತು ರನ್ ಬರಬೇಕಿತ್ತು.  

***  

ಇಕ್ಬಾಲ್ ಐಸಿಯು ಹತ್ತಿರ ಹೋದಾಗ ಹುಸೈನಾರ್ ಅಲ್ಲಿಯೇ ಇದ್ದ. “ಸೀರಿಯಸ್ ಆಗಿದೆ ಹುಡುಗಿಗೆ. ವಿಪರೀತ ರಕ್ತ ಹೋಗಿದೆ. ತಕ್ಷಣ ರಕ್ತ ಕೊಡದೇ ಇದ್ದರೆ ಬದುಕುತ್ತಾಳೋ ಇಲ್ಲವೋ ಗೊತ್ತಿಲ್ಲ” ಎಂದವನು “ಅದು ಸರಿ ನೀನೇಕೆ ಈಗ ಇಲ್ಲಿಗೆ ಬಂದದ್ದು?” ಎಂದು ಕೇಳಿದ.  

ಅವನು ರಕ್ತ ಕೊಡುವುದಕ್ಕೆ ಬಂದದ್ದು ಎಂದು ಗೊತ್ತಾದ ತಕ್ಷಣವೇ “ಕೇಶವಣ್ಣ ಡಾಕ್ಟರ್ ಹತ್ತಿರ ಹೋಗಿದ್ದಾನೆ. ನೀನೊಮ್ಮೆ ಅವನಲ್ಲಿ ಕೇಳಿನೋಡು” ಎಂದ ಹುಸೈನಾರ್.  

ಕೇಶವನ ಹೆಂಡತಿ ಅಲ್ಲಿಯೇ ಇದ್ದಳು. ಅಳುತ್ತಿದ್ದಳು. “ಅಕ್ಕ, ಸಮಾಧಾನ ಮಾಡಿಕೊಳ್ಳಿ. ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ದೇವರಿದ್ದಾನೆ. ಕಾಪಾಡುತ್ತಾನೆ” ಎಂದು ತನಗೆ ತೋರಿದ ಬಗೆಯಲ್ಲಿ ಸಾಂತ್ವನದ ಮಾತನ್ನು ಹೇಳಿದ ಇಕ್ಬಾಲ್ ಅವಳ ದುಃಖವನ್ನು ಕಾಣುವುದಕ್ಕಾಗದೆ ತುಸು ಆಚೆಗೆ ಹೋಗಿನಿಂತ.  

***  

ತಲೆಯನ್ನೊಮ್ಮೆ ಬಲವಾಗಿ ಕೆರೆದುಕೊಂಡ ಬಿಹಾರೀ ಯುವಕ ತಾನು ಕಟ್ಟಿದ್ದ ಮೂವತ್ತು ಸಾವಿರ ರೂಪಾಯಿ ಬೆಟ್ಟಿಂಗ್ ಹಣ ಹೋದಂತೆಯೇ ಎಂದು ಪಕ್ಕದವನಲ್ಲಿ ಹೇಳುತ್ತಾ ಕಳವಳಗೊಂಡ. ಇನ್ನೊಂದಾರು ತಿಂಗಳು ತಲೆ ತಪ್ಪಿಸಿಕೊಂಡೇ ತಿರುಗಬೇಕಷ್ಟೇ ನಾನು ಎಂದು ಬಿಹಾರೀ ಭಾಷೆಯಲ್ಲಿ ಉಸುರಿದ. ಹಾಗೇನೂ ಆಗುವುದಿಲ್ಲ ಇರು ಎಂದು ಪಕ್ಕದವನು ತತ್ವಜ್ಞಾನಿಯಂತೆ ಏನೇನೋ ಹೇಳುತ್ತಾ ಇವನನ್ನು ಸಮಾಧಾನಪಡಿಸಿದ.  

ಬಿಹಾರೀ ಯುವಕನ ಟೆನ್ಶನ್ ಹೆಚ್ಚಾಗುವಂತೆ ಮುಂದಿನ ಓವರ್‌ನಲ್ಲಿ ಭಾರತದ ಬ್ಯಾಟರ್ ರನೌಟ್ ಆದ. ಬಂದದ್ದು ಬರೀ ನಾಲ್ಕು ರನ್. ಉಳಿದಿರುವ ಹನ್ನೆರಡು ಬಾಲ್‌ನಲ್ಲಿ ಇಪ್ಪತ್ತಾರು ರನ್ ಬರಬೇಕು. ಇರುವುದು ಎರಡೇ ವಿಕೆಟ್.  

“ಇವರನ್ನು ನಂಬಿದ್ದೇ ಬಂತು. ಇವರು ಗೆಲ್ಲುವುದಿಲ್ಲ. ಈ ಮ್ಯಾಚ್ ನೋಡುವುದೇ ಬೇಡ ಎನಿಸುತ್ತಿದೆ” ಎಂದ ಖಾದರ್ ಅಂಗಡಿಯ ಗೋಡೆಗೆ ಕೈಬಡಿಯಹೋದವನು ಹಿಂದಿನ ಸಲ ಹೊಡೆದಿದ್ದಾಗ ಕೈಬೇನೆ ಆದದ್ದು ನೆನಪಾಗಿ ಹಾಗೆಯೇ ನಿಂತ.  

“ಎರಡು ಓವರಲ್ಲಿ ಇಪ್ಪತ್ತಾರು ರನ್ ಆಗದ್ದೇನಲ್ಲ. ಸರಿಯಾಗಿ ಆಡಿದರೆ ನಮ್ಮವರೇ ಗೆಲ್ಲುವುದು” ಎಂದ ಯೂಸುಫ್.  

ಆಗಲೇ ಒಂದು ಫೋರ್ ಬಂತು. “ನೋಡು ನೋಡು ನಾನು ಹೇಳಿದ್ದು ನಿಜವಾಯಿತು” ಎಂದು ಬೊಬ್ಬೆ ಹೊಡೆದ ಯೂಸುಫ್‌ನಿಗೆ ಮತ್ತೆ ಅದೇ ಬಗೆಯಲ್ಲಿ ಸಂಭ್ರಮಿಸುವ ಅವಕಾಶ ಆ ಓವರ್‌ನಲ್ಲಿ ಸಿಗಲಿಲ್ಲ. ಕೊನೆಯ ಓವರಿನಲ್ಲಿ ಇಪ್ಪತ್ತು ರನ್ ಬರಬೇಕಿತ್ತು.  

“ಇವತ್ತು ಇಂಡಿಯಾ ಗೆದ್ದರೆ ನನ್ನ ಲೆಕ್ಕದಲ್ಲಿ ನಿಮಗೆಲ್ಲಾ ಐಸ್‌ಕ್ರೀಮ್, ಹೊಟ್ಟೆತುಂಬ ತಿನ್ನುವಷ್ಟು, ಆದರೆ ಬಿಲ್ಲು ನೂರು ರೂಪಾಯಿ ದಾಟುವ ಹಾಗಿಲ್ಲ” ಎಂದು ಜೋಕೊಂದನ್ನು ಹಾರಿಬಿಟ್ಟ ಯೂಸುಫ್, ತಲೆಯೇರಿದ್ದ ಟೆನ್ಶನ್ ಚೂರು ಕಡಿಮೆಯಾಗಲಿ ಎಂದು.  

“ಭಾರತ ಗೆಲ್ಲಲಿ. ನಾನೇ ನಿಮಗೆಲ್ಲಾ ಐಸ್‌ಕ್ರೀಮ್ ಕೊಡುತ್ತೇನೆ” ಎಂದರು ಖಾಸಿಂ ಸಾಹೇಬರು ಟಿ.ವಿ.ಯ ಕಡೆಗೇ ನೋಡುತ್ತಾ.  

***  

ಮೂಲೆಮನೆ ಕೇಶವನ ತಲೆ ಕಂಡಿತು ಇಕ್ಬಾಲ್‌ನಿಗೆ. ವಿಪರೀತ ಚಿಂತೆಯಲ್ಲಿದ್ದುದು ಗೊತ್ತಾಗುತ್ತಿತ್ತು. ಏನಾದರೂ ಆಗಲಿ, ಒಮ್ಮೆ ಕೇಳಿಯೇಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ ಇಕ್ಬಾಲ್ ಕೇಶವನೆದುರು ಹೋಗಿನಿಂತ.  

ಗಲಾಟೆಗೂ ಮೊದಲು ಅವನನ್ನು ಮಾತನಾಡಿಸುತ್ತಿದ್ದ ಅದೇ ಆತ್ಮೀಯತೆಯಲ್ಲಿ, “ಕೇಶವಣ್ಣ, ನಿನ್ನ ಮಗಳಿಗೆ ಎ ಪಾಸಿಟಿವ್ ರಕ್ತ ಬೇಕು ಅಂತ ವಾಟ್ಸಾಪ್ ಗ್ರೂಪಿನಲ್ಲಿ ನೋಡಿದೆ. ಅದಕ್ಕೇ ನಾನಿಲ್ಲಿಗೆ ಬಂದದ್ದು. ನನ್ನದು ಎ ಪಾಸಿಟಿವ್. ನೀನು ಒಪ್ಪಿದರೆ ನಾನೇ ರಕ್ತ ಕೊಡುತ್ತೇನೆ” ಎಂದು ಹೇಳಿ, ಅವನು ಒಪ್ಪುತ್ತಾನೋ ಇಲ್ಲವೋ ಎಂದು ಅವನ ಮುಖವನ್ನೇ ನೋಡಿದ. ಹತ್ತಿರದಲ್ಲಿದ್ದ ಹುಸೈನಾರ್ ಸಹ ಕೇಶವನ ಮೋರೆಯನ್ನು ದಿಟ್ಟಿಸತೊಡಗಿದ. 

***  

ಮೊದಲ ಬಾಲಿನಲ್ಲಿ ಎರಡು ರನ್ ಬಂತು. ನೋಡುತ್ತಿದ್ದವರ ಎದೆಯಲ್ಲಿ ಏರಿಳಿತ. ಎರಡನೇ ಬಾಲಿನಲ್ಲಿ ಸಿಕ್ಸ್ ಬಂತು. ಮೂಡಿತು ಭರವಸೆ. ಮೂರನೇ ಬಾಲಿನಲ್ಲಿ ಒಂದು ವಿಕೆಟ್ ಬಿತ್ತು.  

ಬೆಟ್ ಕಟ್ಟಿದ್ದ ಆ ಬಿಹಾರೀ ಯುವಕ ಟೆನ್ಶನ್ ತಡೆಯುವುದಕ್ಕಾಗದೆ ಕೆಳಗೆ ಬಿದ್ದೇಹೋದ. ಅಕ್ಕಪಕ್ಕ ಇದ್ದ ಬಿಹಾರೀ ಯುವಕರು “ತಾಕತ್ತಿಲ್ಲವೇನೋ ನಿನಗೆ! ಗಂಡಸಲ್ಲವೇನೋ ನೀನು!” ಎಂದು ಬಿಹಾರೀ ಭಾಷೆಯಲ್ಲಿ ಬೈಯ್ಯುತ್ತಾ, ಅವನನ್ನು ಮೇಲಕ್ಕೆತ್ತಿ ನಿಲ್ಲಿಸಿದರು.  

ಉಳಿದ ಮೂರು ಬಾಲ್‌ನಲ್ಲಿ ಹನ್ನೆರಡು ರನ್ ಬಾರಿಸಲೇಬೇಕಿತ್ತು. ವಿಕೆಟ್ ಅಪ್ಪಿತಪ್ಪಿಯೂ ಉರುಳುವಂತಿರಲಿಲ್ಲ. ಮುಂದಿನ ಬಾಲ್‌ನಲ್ಲಿ ಬಂದದ್ದು ಸಿಕ್ಸ್. ಯೂಸುಫ್ ನೆಲದಿಂದ ಎರಡಡಿ ಮೇಲಕ್ಕೆ ಹಾರಿ ಬೊಬ್ಬೆ ಹೊಡೆದ. ಮುಂದಿನ ಬಾಲ್‌ನಲ್ಲಿಯೇ ಸಿಕ್ಸರ್ ಸಿಡಿದು ಭಾರತ ಗೆಲ್ಲುತ್ತದೆ ಎಂದು ಎಲ್ಲರೂ ಕಣ್ಣರಳಿಸಿ ಕಾದುಕುಳಿತರು. ವೇಗವಾಗಿ ಬಂದ ಬಾಲನ್ನು ಭಾರತದ ಬ್ಯಾಟರ್ ಗಗನಮುಖದೆಡೆಗೆ ಚಿಮ್ಮಿಸುವುದಕ್ಕೆ ಹೊರಟ. ಆದರೆ ಮಾಯಾವಿ ಬಾಲ್ ಅವನ ಬ್ಯಾಟಿನ ಸ್ಪರ್ಶಕ್ಕೆ ನಿಲುಕಲೇ ಇಲ್ಲ. ಹಿಂದಕ್ಕೆ ಹೋಗಿ ವಿಕೆಟ್ ಕೀಪರ್‌ನ ಕೈಸೇರಿತು. ಈ ಬದಿಯಲ್ಲಿದ್ದ ಬ್ಯಾಟರ್ ಒಂದು ರನ್ನಾದರೂ ದೊರೆಯಲಿ ಎಂಬ ಆಸೆಯಿಂದ ಅವನನ್ನು ಕರೆದ. ಅವನು ಈಚೆ ಓಡಿಬಂದವನು ಮತ್ತೆ ಹಿಂದೆ ಓಡಿಹೋದ. ಆ ಬಾಲ್‌ನಲ್ಲಿ ಒಂದು ರನ್ನೂ ಬರಲಿಲ್ಲ.   

“ಥೂ ಇವರ ಜನ್ಮಕ್ಕೆ! ಯಾವ ಪುಕ್ಕಲೋ ಅವನು. ಓಡಿಬಂದಿದ್ದರೆ ಒಂದು ರನ್ನಾದರೂ ಸಿಗುತ್ತಿತ್ತಲ್ಲಾ!” ಎಂದ ಯೂಸುಫ್. “ಕೊನೇ ಬಾಲ್‌ನಲ್ಲಿ ಸಿಕ್ಸ್ ಬರದೇ ಇದ್ದರೆ ಭಾರತದ ಕಥೆ ಅಷ್ಟೇ” ಎಂದ ಖಾದರ್.  

ಅಷ್ಟರಲ್ಲಿ ಗಿರೀಶ, ನಿತಿನ್, ಅಭಿಜಿತ್ ಮೊದಲಾದ ಆರೇಳು ಮಂದಿ ಖಾಸಿಂ ಸಾಹೇಬರ ಅಂಗಡಿಯೆಡೆಗೆ ಗುಂಪು ಕಟ್ಟಿಕೊಂಡವರಂತೆ ಬರತೊಡಗಿದರು. ಇನ್ನೇನು ಕಾದಿದೆಯೋ ಈ ಊರಿಗೆ ಎಂಬ ಭಾವದಲ್ಲಿ ಖಾಸಿಂ ಸಾಹೇಬರು ಕುಳಿತಿದ್ದ ಕುರ್ಚಿಯಿಂದ ಮೇಲೆದ್ದರು. ಇದ್ದ ಟೆನ್ಶನ್‌ನಿಂದ ಮುಖ ವಿಕಾರವಾಗಿಸಿಕೊಂಡಿದ್ದ ಮುಸ್ಲಿಂ ಯುವಕರು ಅದೇ ಸ್ಥಿತಿಯಲ್ಲಿ ನಡೆದುಬರುತ್ತಿದ್ದವರೆಡೆಗೆ ದೃಷ್ಟಿ ಹರಿಸಿದರು… 

      ಭಾರತ ಗೆದ್ದಿತು.  

Leave a Comment

Your email address will not be published. Required fields are marked *

Scroll to Top