ರಾಣಾ ಹೆಕ್ಷಾಡಾಕ್ಟಿಲಾ

VIVIDLPI – ಕಥಾಸಂಭ್ರಮ 2025 – ದ್ವಿತೀಯ ಬಹುಮಾನ ಪಡೆದ ಕಥೆ

ಕಥೆ: ರಾಣಾ ಹೆಕ್ಷಾಡಾಕ್ಟಿಲಾ
ಲೇಖಕರು : ಲಿಂಗರಾಜ ಸೊಟ್ಟಪ್ಪನವರ್ 

ಸಿಕ್ಸರ್ ಸಿಡಿಸಿದಾಗ ಬರುವ ಟಕ್ ಎನ್ನುವ ಸದ್ದು ರಾಮ್ಜಿಗೆ ಮಹಾ ಆನಂದವನ್ನು ಉಂಟು ಮಾಡುತ್ತಿತ್ತು. ಅದನ್ನು ಕೇಳಲೆಂದೇ ಜೋರಾಗಿ ಸೌಂಡ್ ಬಿಟ್ಟು ಕ್ರಿಕೆಟ್ ನೋಡುತ್ತಾ ಕುಳಿತಿದ್ದ. ಹೀಗಾಗಿ ಅವನಿಗೆ ಹೊರಗಡೆ ಕೇಳಿ ಬರುತ್ತಲಿದ್ದ ಕೋಲಾಹಲ ಕೇಳದೆ ಹೋಯಿತು.

 ಒಂದು ಕಾಲಕ್ಕೆ ಗುಡಿಸಲು, ಚಿಮಣಿ ಬಳಸುತ್ತಿದ್ದ ನಾವು ಈಗ ಕಾಂಕ್ರೀಟ್ ಮನೆ ಟಿವಿ ಎಲ್ಲ ಕಂಡಿದ್ದೇವೆ. ಆದರೆ ದನ ಕಾಯುವುದು ತಪ್ಪಲಿಲ್ಲ. ಎಲ್ಲ ಮರತು ಹಗಲು ಬೆಳತನಕ ಟಿವಿ ನೋಡುತ್ತಾ ಕೂತ್ರ ದನ ಮೆಸೋರು ಯಾರು.. ಎಂದು ರಾಮ್ಜಿಗೆ ಅವರಪ್ಪ ದಿನಾಲು ಬಯ್ಯುತ್ತಲೇ ಇದ್ದ ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ರಾಮ್ಜಿ.. ನೋಡ್ತಿರು ಈ ಡ್ರೀಮ್ ಕ್ರಿಕೆಟಲ್ಲಿ ಕೋಟಿ ಕೋಟಿ ಗೆಲ್ತೀನಿ ಎಂದು ಕನಸು ಹಂಚುತ್ತಿದ್ದ. ಅವನಂತೆ ದನ ಕಾಯುವುದನ್ನು ಹಾಲು ಕರೆಯುವುದನ್ನು ಬಿಟ್ಟು ಬೆಟ್ಟಿಂಗ್ ನಲ್ಲಿ ತಲೆ ಹಾಕಿಕೊಂಡಿದ್ದ ಅನೇಕರು ಇದ್ದರು.

 ದೂರದಿಂದ ಓಡಿ ಬಂದಿದ್ದ ಹುಡುಗರಿಬ್ಬರೂ ತೇಗುತ್ತಾ ಬಿಯ್ಯಾ.. ಬೀಯ್ಯಾ.. ಎಂದು ಕೂಗಿದ್ದನ್ನು ಕೇಳಿದ ರಾಮ್ಜಿ ತನ್ನ ಧ್ಯಾನಕ್ಕೆ ಭಂಗ ತಂದ ಹುಡುಗರನ್ನು ಗದರಿಸಿದ. ರಾಮ್ಜೀಯ ಆಕಳನ್ನು ಹುಲಿ ಎಳೆದುಕೊಂಡು ಹೋಗಿದೆ ಎಂಬ ಸುದ್ದಿಯನ್ನು ಅವರು ತಂದಿದ್ದರು. ತಾನು ಟಿವಿ ನೋಡುವಾಗ ಕೇಳಿದಂತಾದ ಕೋಲಾಹಲ ಅದಕ್ಕೆ ಸಂಬಂಧಿಸಿದ್ದು ಎಂದುಕೊಂಡ ರಾಮ್ಜಿ.. ಹುಲಿ ತನ್ನ ದನವನ್ನು ಎಳೆದುಕೊಂಡು ಹೋಗಿರಲಿಕ್ಕಿಲ್ಲ, ಅದೊಂದು ಪುಕಾರು ಆಗಿರಲಿ ಎಂದು ಬೇಡಿಕೊಂಡ. ಮತ್ತೆ ಮೊಬೈಲ್ ನಲ್ಲಿ ತಲೆ ಹಾಕಿ ಕುಳಿತ.

 ಕಾಡಿನಲ್ಲಿ ಹುಲಿ ದನಕರಗಳನ್ನು ಎತ್ತಿಕೊಂಡು ಹೋಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚಿಗೆ ಹುಲಿ ದನವನ್ನು ಎಳೆದುಕೊಂಡು ಹೋಗಿದೆ ಎಂದು ಪುಕಾರು ಎದ್ದು ಹುಡುಕಲು ಹೋದಾಗಲೇ ಆ ಮನೆಯವರ ಟಿವಿಗೆ ಕಲ್ಲು ಬೀಳುತ್ತಲಿತ್ತು. ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಏಕೆ ಮಾಡುತ್ತಿದ್ದಾರೆ ಎಂಬುದು ಬಗೆಹರಿಯದ ಸಂಗತಿಯಾಗಿತ್ತು. ಕೆಲವರು ಇರುವನ ಕಡೆಗೆ ಬೊಟ್ಟು ಮಾಡಿದರೆ ಇನ್ನೂ ಕೆಲವರು ಮುದುಕಿ ದೆವ್ವವಾಗಿ ಹೀಗೆ ಮಾಡುತ್ತಿದ್ದಾಳೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ರಾಮ್ಜಿ ತಲೆಕೆಡಿಸಿಕೊಳ್ಳದೆ ಮೊಬೈಲ್ ನೋಡುತ್ತ ಕುಳಿತ. ಆದರೆ ಆ ಹುಡುಗರು ಅವನನ್ನು ನೋಡುತ್ತಾ ಬಾಗಿಲಲ್ಲೇ ನಿಂತಿದ್ದರು. ದೂರದಲ್ಲಿ ಜನರು ಕೂಗು ಹಾಹಾಕಾರ ಹೆಚ್ಚಾಗತೊಡಗಿದ್ದು ಕೇಳಿತು.ರಾಮ್ಜಿ ಎದ್ದವನೇ ಕಿಟಕಿ ಬಾಗಿಲು ಮುಚ್ಚಿ ಓಡುತ್ತಾ ಹೊರಟ. ಹುಡುಗರು ತಂದ ಸುದ್ದಿ ನಿಜವಾಗಿತ್ತು. ಮೂರೋತ್ತು ಟಿವಿ ಮುಂದೆ ಕುಳಿತುಕೊಳ್ಳುವ ಮಗನನ್ನು ಬಯ್ಯ ತೊಡಗಿದ್ದರು. ಎಷ್ಟೇ ಹುಡುಕಿದರೂ ದನದ ಸುಳಿವು ಸಿಗದೆ ಎಲ್ಲರೂ ಮನೆಗೆ ಮರಳಿದರು. ಕಿಡಕಿ ಬಾಗಿಲು ಮುಚ್ಚಿದಂತೆ ಇರುವುದನ್ನು ಕಂಡ ರಾಮ್ಜಿಗೆ ಸಮಾಧಾನವೆನಿಸಿತು. ಬಾಗಿಲು ತೆರೆದು ನೋಡಿದ.

ಟಿವಿಗೆ ಕಲ್ಲು ಬಿದ್ದಿತ್ತು?

***

 ಮೂರು ಕಾಲಿನ ಕಪ್ಪೆಯೊಂದು ಕಾಲು ಹೊಟ್ಟೆ ಎದೆ ದಾಟುತ್ತ ಹಣೆಯ ಮಧ್ಯಕ್ಕೆ ಬಂದು ಮುತ್ತಿಕ್ಕುತ್ತಿರುವಂತೆ ತಣ್ಣಗೆ.. ಮುಚ್ಚಿದ್ದ ಕಣ್ಣು ತೆರೆದ ಇರುವ. ಆಕಾಶ ತುಂಬಾ  ಕಪ್ಪು ಮೋಡಗಳು ಆವರಿಸಿ ಮುಗಿಲು ಗವ್ವ ಎನ್ನುತ್ತಿತ್ತು. ಆ ಕ್ಷಣಕ್ಕೆ ಮುಗಿಲನ್ನು ಸೀಳಿಕೊಂಡು ಬಂದಂತೆ  ಮಿಂಚು ಕೋರೈಸಿ ಛಟೀರ್ ಎಂದು ಬಾರಿಸಿತು. ಹುಚ್ಚು ಮಳೆ ಸುರಿಯುವುದರಲ್ಲಿತ್ತು ಕಾಡಿಗೆ ಕಾಡಿಗೆ ಕೊಚ್ಚಿ ಹೋಗುವಂತ ಮಳೆ ಇರುವನಿಗೆ ಹೊಸತೇನಲ್ಲ. ಆದರೆ ಮಳೆ ಬರುವ ಮುನ್ಸೂಚನೆ ನೀಡುವ ಈ ಕಪ್ಪೆಗಳು ಏಕೆ ವಟಗುಡುತ್ತಿಲ್ಲ, ಎಲ್ಲಿ ಹಾಳಾಗಿ ಹೋದವು. ಅಥವಾ ಅದು ಕೇಳಲಾರದಷ್ಟು ಆಳ ನಿದ್ದೆಗೆ ಜಾರಿದ್ದೆನೆ? ಇರುವನಿಗೆ ಗೊಂದಲವಾಯಿತು. ಕಪ್ಪೆಗಳ ಕುರಿತೆ ವ್ಯಾಕುಲಗೊಂಡು ಇರುವ ಈ ತೊರೆಯ ದಡಕ್ಕೆ ಬಂದು ಮಲಗಿದ್ದ. ದಣಿದಿದ್ದು ಅವನ ದೇಹವಲ್ಲ ಮನಸ್ಸು. ಅಲ್ಲಿಂದ ಎದ್ದವನೇ ದುಡು ದುಡು ಮನೆಯ ಕಡೆ ಹೆಜ್ಜೆ ಹಾಕಿದ. ಮನೆಗೆ ಹತ್ತಿರ ಬರುತ್ತಿದ್ದಂತೆ ಮುದುಕಿಯ ಎಂದಿನ ಅದೆ ಹಾಡು ಕಿವಿಗೆ ಬಿದ್ದಿತು.

 ಕಾಲೊಂದು ಕಾಲು.. ಕಾಲೆರಡು ಕಾಲು.. ಒಳ್ಳೆವರಿಗೊಂದು ಕೆಟ್ಟೋರಿಗೊಂದು.. 

ಕಾಲ್ಮೇಲ್ ಕಾಲು.. ಕೇಡಗಾಲಕ್ಕೆ ಮೂರ್ಕಾಲು..

 ಮುದುಕಿಯ ಹಾಡು ಕೇಳುತ್ತಾ ಕೂತಿದ್ದ ಜಂಬೂ ಜೂಜಾ ಬುಳ್ಳ ಡೊಂಗ್ರಿ ಮೂರ್ಕಾಲ್ .. ಮೂರ್ಕಾಲ್.. ಎಂದು ಚಪ್ಪಾಳೆ ತಟ್ಟುತ್ತಾ ಮುದುಕಿಯ ಹಾಡಿಗೆ ದನಿಗೂಡಿಸಿದರು.

ಅದೇ ಸಮಯಕ್ಕೆ ಬಂದ ಇರುವ ಗಪ್ ರೇ ಬಸ್.. ಎಂದು ಹುಡುಗರನ್ನು ಜಬರಿಸುತ್ತಾ ಮನೆಯೊಳಗೆ ಹೊಕ್ಕ. ಇರುವ ನಿನ್ನೆಯಂತೆ ಇವತ್ತಿಲ್ಲ ಎಂಬುದು ಆ ಮುದಿ ಹೆಂಗಸಿಗೆ ಅರ್ಥವಾಯಿತು.

 ಬದುಕು ಬೇಸರವೆನಿಸಿದಾಗ ತುಸು ದೂರದಲ್ಲಿ ಹರಿಯುತ್ತಿರುವ ಕಾಲು ಹೊಳೆಯಲ್ಲಿ ತನ್ನ ಕಾಲು ಬಿಟ್ಟು ಅಂಗಾತವಾಗಿ ಮುಗಿಲು ನೋಡುತ್ತಾ ಮಲಗಿಬಿಡುವ ರೂಢಿ ಇರುವನಿಗೆ. ಸಣ್ಣ ಮಕ್ಕಳು ದಾಟಿ ಹೋಗಬಹುದಾದಷ್ಟು ಆಳವಿರುವ ನೀರು ಅದರಲ್ಲಿ. ದೂರದಲ್ಲಿ ಕಾಣುತ್ತಿರುವ ಬೆಟ್ಟದಿಂದ ಹರಿದು ಬರುವ ಝರಿಯ ನೀರಿನಿಂದ ಉಂಟಾದ ಹೊಳೆಯದು. ಅದು ಬತ್ತಿದ್ದನ್ನು ಯಾವತ್ತು ಯಾರೂ ಕಂಡಿಲ್ಲ. ಈ ಝರಿಯ ಮೂಲ ಕಾಶೀಯಲ್ಲಿದೆ ಎಂಬುದನ್ನು ಹಿರೀಕರಿಂದ ಕೇಳಿಪಟ್ಟಿದ್ದ ಇರುವ ಇದ್ದರೂ ಇರಬಹುದೇನೋ ಎಂದು ನಂಬಿಕೊಂಡು ಬಂದಿದ್ದ. ಅವನ ನಂಬಿಕೆ ದೃಢವಾಗಲು ಅನೇಕ ಕಾರಣಗಳಿದ್ದವು. 

ಉಂಡು ಆ ನೀರು ಕುಡಿದರೆ ತಾಸೋಪ್ಪತ್ತಿನಲ್ಲಿ ಉಂಡಿದ್ದೆಲ್ಲ ಕರಗಿ ಬರ್ ಬುಶ್ ಆಗುತ್ತಿತ್ತು. ಅಲ್ಲಿ ಸಿಗುತ್ತಿದ್ದ ರೊಳ್ಳಿ ಮೀನು ಏಡಿ ಸಿಗಡಿಗೆ ಲೋಕದಾಗ ಇಲ್ಲದ ರುಚಿ. ಹುಣ್ಣಿಮೆ ರಾತ್ರಿ ಚಂದಪ್ಪನನ್ನು ಇನ್ನಷ್ಟು ಚಂದವಾಗಿ ತೋರಿಸುವಷ್ಟು ಕನ್ನಡಿಯ ಹರಳಿನಂತಹ ತಿಳಿ ಆ ನೀರಿಗಿತ್ತು. ಆ ನೀರು ಕುಡಿದು ನೂರಾರು ವರ್ಷ ಬಾಳಿ ಬದುಕಿದವರು ಇದ್ದಾರೆ. ಕಚ್ಚಿದ ನಂಜು ಹೆಚ್ಚಿದ ನಂಜು ಚುಚ್ಚಿದ ನಂಜು ಈ ಎಲ್ಲ ನಂಜುಗಳಿಗೂ ಈ ನೀರೇ ಅಮೃತಧಾರೆ. ತೊಳೆದರೆ ಎಲ್ಲ ನಂಜಿಗೂ ಮುಕ್ತಿ. ಮುಳುಗಿ ಪಾಪ ತೊಳೆದುಕೊಳ್ಳುವಷ್ಟು ಆಳವಿರಲಿಲ್ಲವಾದರೂ ನೀರಿಗೆ ಎಂದೂ ಕೊರೆ ಇರುತ್ತಿರಲಿಲ್ಲ. ಮತ್ತೆಲ್ಲೂ ಇಲ್ಲವೇನೋ ಎಂಬಂತಹ ಕಪ್ಪೆಗಳು ಅಲ್ಲಿದ್ದವು. ಕೆಲವು ಎಷ್ಟು ದೂರವಾದರೂ ಈಸಬಲ್ಲೆವು ಎಂಬ ಹಮ್ಮಿನ ದಷ್ಟಪುಷ್ಟವಾದ ತೊಡೆಯವುಗಳು. ಇನ್ನು ಕೆಲವಕ್ಕೆ ಆರು ಬೆರಳುಗಳು ಇದ್ದವು. ಆ ತೊರೆಯಲ್ಲಿ ಆಗಾಗ ಮೂರು ಕಾಲಿನ ಕಪ್ಪೆಗಳು ಕಾಣ ಬರುತ್ತಿದ್ದವು. ಅದೃಷ್ಟವಂತರಿಗೆ ಮಾತ್ರ ಕಾಣುತ್ತವೆಯಂತಲೂ.. ಅವುಗಳು ಕಾಣುವುದೆ ಅದೃಷ್ಟವೆಂತಲೋ ಇರುವ ಮತ್ತು ಅವನ ಜನರು ನಂಬಿದ್ದರು. ಪೂರ್ಣ ಹುಣ್ಣಿವೆಯ ದಿನ ಕಣ್ಣಿಗೆ ಕಣ್ಣು ಹಚ್ಚಿ ಕಾದಿದ್ದು ಹಿಡಿದು ತರುವ ಮೂರು ಕಾಲಿನ ಕಪ್ಪೆ ಅದೃಷ್ಟ ತರುವದೆಂದು,ಅದು ಬೆಳ್ಳಿ ಬಂಗಾರ ಹಾಕುವದೆಂದು ಅಪಾರವಾಗಿ ನಂಬಿದ್ದಳು ಹಟ್ಟಿ ಲಕ್ಕವ್ವ.  ಹಟ್ಟಿಗೆ ಹಿರಿಯ ಜೀವ ಅದು.ನೂರಕ್ಕೆ ಹತ್ತಿರವಿದ್ದಾಳೆ.ಹುಣ್ಣಿಮೆ ಬಂತೆಂದರೆ ಮನೆ ಮಂದಿಯೆಲ್ಲ ಕಪ್ಪೆ ಹುಡುಕಲು ಹೋಗುತ್ತಿದ್ದರು ಯಾರಿಗೋ ಒಬ್ಬರಿಗೆ ಸಿಕ್ಕರೆ ಸಿಕ್ಕಿತು,ಇಲ್ಲವೆಂದರೆ ಇಲ್ಲ. ಎಷ್ಟೋ ಬಾರಿ ಬರಿಗೈಲೆ ಮನೆಗೆ ಬಂದಿದ್ದಿದೆ. ಆ ಮೂರು ಕಾಲಿನ ಕಪ್ಪೆಯನ್ನು ಲಕ್ಕವ್ವ ಪೂಜೆ ಮಾಡಿ ಉಳಿದೆಲ್ಲರ ಕಣ್ಣಿಗೆ ಬಟ್ಟೆ ಕಟ್ಟಿ ಮನೆಯ ಯಾವುದೋ ಒಂದು ಮೂಲೆಯಲ್ಲಿ ನೆಲ ಅಗೆದು ಹುಗಿಯುತ್ತಿದ್ದಳು. ತನ್ನ ಮುಂದಿನ ತಲೆಮಾರು ಬೆಳ್ಳಿ ಬಂಗಾರ ತಟ್ಟೆಯಲ್ಲಿ ಕೈ ತೊಳೆಯಲಿ ಎಂಬ ಹೆಬ್ಬಯಕೆ ಅವಳದು.

 ಮೊಮ್ಮಕ್ಕಳನ್ನು ಎದುರು ಕೂಡಿಸಿಕೊಂಡು ಅವಳು ಯಾವಾಗಲೂ ಮೂರು ಕಾಲಿನ ಕಪ್ಪೆಯ ಕುರಿತು ಕಾಲೋಂದ್ ಕಾಲು..ಕಾಲ್ಮೇಲೊಂದು ಕಾಲು.. ಎಂದು ಪದ ಕಟ್ಟಿ ಹಾಡುತ್ತಿದ್ದಳು. ಯಾವ ಮೂಲೆಯಲ್ಲಿ ಕಪ್ಪೆ ಹುಗಿದಿದ್ದಾಳೆ.. ಅದು ಬೆಳ್ಳಿ ಬಂಗಾರ ಹಾಕಿದೆಯೋ ಹೇಗೋ.. ಎಂದು ಹಾಕುತ್ತದೆ.. ಎಂಬ ಕುತೂಹಲ ಎಲ್ಲರಿಗೂ ಇದ್ದಿತು. ಆದರೆ ಮುದುಕಿ ತನ್ನ ಸಾವಾಗದ ಹೊರತು ಯಾರು ನೆಲ ಅಗೆಯಬಾರದು.. ಅಗೆದರೆ ಆಗಬಾರದ ಅನಾಹುತವಾಗುತ್ತದೆ.. ಎಂದು ತಾಕಿತು ಮಾಡಿ ಎಚ್ಚರಿಸಿದ್ದಳು.ಅವಳಿಗೀಗ ಇನ್ನೇನು ನೂರು ತುಂಬಲಿದೆ.

 ಇರುವ ಇರುವಾಯಿರಪ್ಪನ ಬಳಿಗೆ ಹೋದ. ಅಲ್ಲಿನ ಜನರ ಕಷ್ಟಕ್ಕೆಲ್ಲ ಅವನೇ ಬೇಕು. ಅವನಲ್ಲೆ ಪರಿಹಾರ ಬೇಡುವುದು. ಕಣ್ಣು ಮೂಗು ಬಾಯಿ ಇಲ್ಲದ ಒಂದು ಚಪ್ಪರವನ್ನು ಕಾಣದೆ ಬಯಲಲ್ಲಿ ನಿಂತಿರುವ ಮೊಂಡು ಗೂಟದಂತಹ ಕಲ್ಲು.ಅದು ಇರುವಾಯಿ ಭೂತಪ್ಪ. ಅದೇ ಹೆಸರನ್ನು ಇರುವನಿಗೂ ಇಡಲಾಗಿದೆ. ಭೂತಪ್ಪನ ಮುಂದೆ ಇರುವ ಎರಡು ದುಂಡನೆಯ ಕರಿಕಲ್ಲುಗಳು. ಅವು ಮುಂದಿನ ಆಗುಹೋಗುಗಳನ್ನು ಕೇಳಲು ಅಲ್ಲಿನ ಜನ ಬಳಸುವ ಕಲ್ಲುಗಳು. ಎತ್ತಿದರೆ ಒಂದು, ಎತ್ತದಿದ್ದರೆ ಇನ್ನೊಂದು.. ಇರುವ ಕೂಡ ಆ ಕಲ್ಲುಗಳನ್ನು ಎತ್ತಿ ಪ್ರಶ್ನೆ ಕೇಳಲು ಬಂದಿದ್ದಾನೆ. ಆದರೆ ಕೇಳಲಾಗುತ್ತಿಲ್ಲ. ಮುದುಕಿಯ ಸಾವು ಎಂದಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಬಂದಿದ್ದಾನೆ. ಅದಕ್ಕೆ ಕಾಡಿನಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆಗಳು ಸಹ ಕಾರಣವಾಗಿವೆ.ಇಲ್ಲಿಯ ಯಾರೂ ನೂರು ತುಂಬದೆ ಸತ್ತ ಉದಾಹರಣೆಗಳಿಲ್ಲ. ಆದರೆ ಮುದುಕಿಯ ಸಾವನ್ನು ತಾನು ಬಯಸುತ್ತಿರುವದು ಪಾಪವಲ್ಲವೇ ಎಂದು ಯೋಚಿಸುತ್ತಲೇ ಇರುವ ದುಂಡಿಗೆ ಕೈ ಹಚ್ಚಿದ.

***

 ಹತ್ತಾರು ಮನೆಗಳಿರುವ ಊರು ಅದು. ಪ್ರತಿಯೊಂದು ಮನೆ ಮೇಲು ಸೋಲಾರ್ ಪ್ಯಾನೆಲ್.. ಟಿವಿ. ಎಲ್ಲರ ಕೈಯಲ್ಲೂ ಮೊಬೈಲ್ ಬಂದಿವೆ. ಇಷ್ಟು ಕಾಲದಿಂದ ಕಾಳ ಕತ್ತಲೆಯಲ್ಲಿ ಬದುಕು ನೂಕಿಕೊಂಡು ಬಾಳಿದ್ದ ಈ ಕಾಡಿನ ಊರುಗಳಿಗೆ ಈಗ ಬೆಳಕಿನ ಬಯಕೆ. ಸೂರ್ಯನನ್ನೇ ಧರೆಗೆ ಇಳಿಸಿಕೊಂಡಂತೆ ಸೋಲಾರ್ ಪ್ಯಾನೆಲ್ ಗಳು ಛಾವಣಿಯ ತಲೆಯೆರಿ ಕೂತಿದ್ದವು.ಈಗ ಟ್ವೆಂಟಿ ಫೋರ್ ಇಂಟೂ ಸೆವೆನ್ ಅವರ್ಸ್ ಬೆಳಕಿನ ಸರ್ವಿಸು ಭಾಗ್ಯ. ಇದನ್ನು ಕಲ್ಪಿಸಿಕೊಂಡ ಇರುವ ನಕ್ಕ. ಅವನ ಕರಿ ಮುಖದ ನಗುವು ಕನ್ನಡಿಯ ಮೇಲೆ ಬಿದ್ದ ಬೆಳಕಿನಂತೆ ಫಳ್ಳನೆ ಪ್ರತಿಫಲಿಸಿತು. ಸರ್ಕಾರ ಮಾಡಬೇಕಾಗಿದ್ದನ್ನು ಈ ಎಂ ಎನ್ ಸಿ ಕಂಪನಿಗಳು ಏಕೆ ಮಾಡುತ್ತವೋ.. ಏನು ಮಾಡುತ್ತವೋ ಎಂಬ ನಿಲುಕದ ವಿಚಾರಕ್ಕೆ ಅವನಿಗೆ ನಗು ಬಂದಿತ್ತು. 

ಅದೇನೋ ಫಂಡಂತೆ.. ಅದೇಲ್ಲಿಂದಲೋ ಬರ್ತದಂತೆ.. ಯಾವ್ದೋ ಕಂಪನಿಯಂತೆ ಅದೇತಕ್ಕೋ ಬರ್ತದಂತೆ.. ಎಂಬ ತಲೆ ಬುಡವಿಲ್ಲದ ಮಾತು ಆಡಿಕೊಂಡು ಅಲ್ಲಿನ ಜನರು ಇರುವಂತೆ ಇರುವನು ಇದ್ದ.

 ಏನಾದರೇನಂತೆ ಬೆಳಕು ಕಂಡರೆ ಸಾಕು ಎಂದುಕೊಂಡು ಎಲ್ಲರಂತೆ ಇರಲಾಗದ ಇರುವನಿಗೆ  ಈ ಬೆಳಕೆಂಬುದು ಕತ್ತಲಿಗಿಂತ ಅಪಾಯಕಾರಿ ಎನಿಸಿ ಇಲ್ಲದ ಗೊಡವೆಗೆ ಬಿದ್ದ. ಮೋಟು ಚೊಣ್ಣ ಹಾಕಿಕೊಂಡು ಹಾಲಿನ ಕ್ಯಾನ ಹಿಡಿದು ಕಾಡಿನಿಂದ ದಾಂಡೇಲಿಯ ಡೈರಿಗೆ ಹೋಗಿ ಬಂದು ಮಾಡುತ್ತಿದ್ದ ಇರುವನಿಗೆ ಪ್ಯಾಟೆ ಜನರು ರಾಜಕೀಯದವರ ಹಿಕ್ಮತ್ ಗಳ ಕುರಿತು ಆಡುವದನ್ನು ಕೇಳಿ ತಿಳಿದುಕೊಂಡಿದ್ದ. ಹೀಗಾಗಿ ಈ ಜನರು ಯಾವುದೇ ಲಾಭವಿಲ್ಲದೆ ಸುಮ್ಮನೆ ಮಾಡುವವರಲ್ಲ ಎಂಬ ಗುಮಾನಿ ತಲೆ ಒಳಗೆ ಗುದುಮುರಿಗೆ ಹಾಕತೊಡಗಿತು.

 ಸುತ್ತ ಹತ್ತು ಊರುಗಳನ್ನು ಮೂಲಸೌಕರ್ಯ ಅಭಿವೃದ್ಧಿ ಮಾಡುವ ಕಾರಣ ದತ್ತು ತೆಗೆದುಕೊಂಡಿದ್ದ ಕಂಪನಿ ಉಳಿದ ಒಂಬತ್ತು ಊರಗಳಿಗಿಂತ ತನ್ನ ಊರಿಗೆ ಹೆಚ್ಚಿನ ಒತ್ತು ಕೊಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ. ಹತ್ತು ಊರುಗಳೆಂದರೆ ಅವು ಅಕ್ಕಪಕ್ಕದ ಊರುಗಳು ಆಗಿರಲಿಲ್ಲ ಅದರ ಸುತ್ತಣದ ಪ್ರದೇಶ ಒಟ್ಟಾಗಿ ನೂರಾರು ಎಕರೆ ವಿಸ್ತೀರ್ಣ ಹೊಂದಿರುವಂತದ್ದು. ಎಲ್ಲ ಊರುಗಳಿಗೂ ಸಂಪರ್ಕಕ್ಕೆ ಸುಲಭವಾಗುವ ಹಾಗೆ, ಶಾಲೆ ಆಸ್ಪತ್ರೆ ನೀರು ಇಂತಹ ಸೌಕರ್ಯಗಳು ಸಿಗಲು ಅನುಕೂಲವಾಗುವ ಹಾಗೆ ಮಾಡಲು ಎಲ್ಲ ಊರುಗಳ ಜನರಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ  

 ಮನೆ ಕಟ್ಟಿ ಕೊಡುವ ನೀಲ ನಕ್ಷೆ ತಯಾರಾಗಿತ್ತು. ಎಲ್ಲ ಊರ ಜನರನ್ನು ಒಂದು ಕಡೆ ಒಟ್ಟು ಮಾಡುವ ಯೋಜನೆಯ ಹಿಂದೆ ದುರುಳ ಯೋಚನೆಯೊಂದು ಇರಬಹುದಾದ ಸಾಧ್ಯತೆಗಳನ್ನು ಇರುವ ಆಲೋಚಿಸಿದ.

ಇಲ್ಲಿನ ಜನರ ದೀರ್ಘಾಯುಷ್ಯದ ಗುಟ್ಟು ಅರಿಯಲು, ಇಲ್ಲಿಯ ಗಿಡಮೂಲಿಕೆಗಳನ್ನು ದೋಚಲು.. ಪರಿಶುದ್ಧವಾದ ನೀರನ್ನು ಅಪಹರಿಸಲು.. ಹೀಗೆ ಇರುವನ ತಲೆ ಕಾಡೆಲ್ಲ ಅಲೆದಾಡಿ ನಾನಾ ರೀತಿ ಯೋಚಿಸಿದರೂ ಕೊನೆಗೆ ಅವನ ಯೋಚನೆ ತನ್ನ ಮನೆಯ ಮುದುಕಿ ಲಕ್ಕವ್ವ ಹೇಳಿದ ಬೆಳ್ಳಿ ಬಂಗಾರ ನೀಡುವ ಮೂರು ಕಾಲಿನ ಕಪ್ಪೆಯ ಕತೆಗೆ ಬಂದು ನಿಲ್ಲುತ್ತಿತ್ತು. ಈ ಕಂಪನಿಗೆ ಈ ವಿಷಯ ಗೊತ್ತಾಗಿರಬಹುದೆ.. ಇದನ್ನೇ ಮುಂದು ಮಾಡಿ ಎಲ್ಲ ಜನರನ್ನು ಕಂಪನಿ ವಿರುದ್ಧ ಎತ್ತಿ ಕಟ್ಟಿದರೆ ಹೇಗೆ.. ಎಂದು ಯೋಚಿಸಿದ ಇರುವನಿಗೆ ಇದು ತನಗೆ ಮುಳುವಾಗಬಹುದಾದ ವಿಚಾರ ಎನಿಸಿತು. ಯಾಕೆಂದರೆ ಮೂರು ಕಾಲಿನ ಕಪ್ಪೆಯ ವಿಚಾರ ಈ ಊರುಗಳ ಎಲ್ಲ ಜನರಿಗೂ ಗೊತ್ತಿದೆಯೋ ಇಲ್ಲವೋ.. ತನ್ನ ಅಜ್ಜಿಯಂತೆ ಎಲ್ಲರೂ ರಹಸ್ಯ ಕಾಪಾಡಿಕೊಂಡಿದ್ದರೋ ಹೇಗೋ.. ಹೀಗೆ ತಲೆ ಕೆರೆದುಕೊಂಡ ಇರುವ ಇಂತಹ ವಿಚಾರಗಳು ನಿಜಕ್ಕೂ ಅಪಾಯಕಾರಿಯೆಂದು ಆ ಯೋಚನೆಯನ್ನು ಕೈಬಿಟ್ಟ.

 ತಪ್ಪದ ಮಳೆ.. ಕತ್ತರಿಸಿ ಬೀಳುವ ಮರಗಳು.. ಕುಸಿಯುವ ಗುಡ್ಡ.. ಜಿಗಣಿ ಹೇನು ಕೂರಿಗಳ ಕಾಟ.. ಒಂದು ಇದ್ದರೆ ಇನ್ನೊಂದು ಇಲ್ಲ ಎನ್ನುವಂತಹ ಊಟ.. ಶಾಲೆ ಕಾಣದ ಮಕ್ಕಳು.. ಬೆಳಕನ್ನೇ ಕಾಣದ ಬಾಳು.. ಇದೆಲ್ಲದರಿಂದ ಸಾಕು ಸಾಕಾಗಿ ಹೋಗಿದ್ದ ಜನರಿಗೆ ಕಂಪನಿಯು ವರ ಕೊಡುವ ದೇವರಂತೆ ತೋರಿತು.

 ಇರುವ ಹೇಳುವ ಯಾವ ವಿಚಾರಗಳು ಅವರ ತಲೆಗೆ ಹೋಗಲಿಲ್ಲ. ಇದರಿಂದ ಬೇಸತ್ತ ಇರುವ ಅಲ್ಲಿಂದ ಹೊರಟು ಹೋಗಿ ತೊರೆಯಲ್ಲಿ ಕಾಲು ಇಟ್ಟು ಅಂಗಾತ ಮಲಗಿ ಯೋಚಿಸತೊಡಗಿದ.

 ಮುಂದೊಂದು ದಿನ ಈ ಕಾಡು ಝರಿ ತೊರೆ ಇಲ್ಲಿಯ ಹೂವು ಬಳ್ಳಿ ಮರಗಳು ಪ್ರಾಣಿ ಪಕ್ಷಿಗಳು ಈಗಿನಂತೆ ಇರಲಾರವು ಮತ್ತೆ ನನ್ನೂರಿನ ಜನರ ಮಾತು ನಡುವಳಿಕೆ ಸಂಬಂಧ.. ಹಬ್ಬ ಆಚರಣೆ ದೇವರು ದಿಂಡಿರು.. ಈ ಇರುವಾಯಿರಪ್ಪ ಎಲ್ಲವೂ ಬದಲಾಗುತ್ತವೆ. ಮಿಕದ ಬೇಟೆಯಾಡಿ ಗುಡಿ ಮುಂದೆ ಅಡುಗೆ ಮಾಡಿ ಇರುವಾಯಿರಪ್ಪಗೆ ಎಡೆ ಮಾಡಿ.. ಎಲ್ಲರೂ ಒಂದೆಡೆ ಸೇರಿ ಕೂಡಿ ಉಂಡು ಹಾಡಿ ಕುಣಿವ ಸಂಭ್ರಮವೂ ಇಲ್ಲವಾಗುತ್ತದೆ.ಪರಸ್ಪರ ಎಲ್ಲರೂ ಅಪರಿಚಿತರಾಗಿ ಬಿಡುತ್ತೇವೆ ಎಂಬುದು ಅವನ ವ್ಯಾಕುಲತೆಗೆ ಕಾರಣವಾಗಿತ್ತು.ಹೀಗಾದಾಗ ಇರುವ ತೊರೆಗೆ ಬಂದು ಕಾಲು ಬಿಟ್ಟು ಮಲಗುತ್ತಾನೆ.

ಮುಗಿಲು ನೋಡುತ್ತಾ ಮಲಗಿದ್ದ ಇರುವನಿಗೆ ಎಲ್ಲ ನೆನಪಾಗತೊಡಗಿತು. ಹತ್ತು ವರ್ಷಗಳ ಹಿಂದೆ. ಇರುವನಿಗೆ ಇನ್ನೂ ಬಾಲ ವಯಸ್ಸು. ಅಧ್ಯಯನಕ್ಕಾಗಿ ತಂಡವೊಂದು ಊರಿಗೆ ಬಂದಿದ್ದು ನೆನಪಾಯಿತು. ಅವರೆಲ್ಲರೂ ಆರು ತಿಂಗಳ ಕಾಲ ಅಲ್ಲಿಯೇ ಇದ್ದರು. ಅಜ್ಜ ಅಜ್ಜಿ ಮತ್ತು ಅವರ ಎಲ್ಲಾ ಅನುಭವ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಅಲ್ಲಿನ ಎಲ್ಲಾ ಪ್ರಾಣಿ ಸಸ್ಯ ವರ್ಗಗಳ ಮಾಹಿತಿ ದಾಖಲಿಸಿಕೊಂಡಿದ್ದರು. ಇರುವ ಮತ್ತವನ ಗೆಳೆಯರು ಅವರ ಹಿಂದೆಯೇ ಸುತ್ತಾಡುತ್ತಿದ್ದರು. ಅವರಿಗದು ಮೋಜಿನ ಸಂಗತಿಯಾಗಿತ್ತು. ಪಟಪಟನೆ ಮರವೇರುವ, ನೀರಿಗೆ ಬಿದ್ದು ಹದ್ದಿನಂತೆ ಮೀನು ಹಿಡಿಯುವ, ಬಿದರಿನ ಬಿಲ್ಲು ಮಾಡಿ ಬಾಣ ಹೂಡಿ ಬೇಟೆಯಾಡುವ.. ಹಿಲಾಲು ಹಚ್ಚಿಕೊಂಡು ಹಂದಿ ಶಿಕಾರಿ ಮಾಡುವ.. ಗುಲಾಲು ಹಿಡಿದು ಇಣಚಿ, ಮರ ಅಳಿಲು ಹೊಡೆದು ಹಾಕುವ.. ಹೊಗೆ ಹಾಕಿ ಜೇನು ಬಿಡಿಸುವ.. ಆ ಹುಡುಗರ ಚಾಕಚಕ್ಯತೆಯು ಅಧ್ಯಯನ ತಂಡಕ್ಕೆ ಮೆಚ್ಚುಗೆಯಾಗಿತ್ತು. ಆರು ತಿಂಗಳ ಅವಧಿಯಲ್ಲಿ ತಮ್ಮ ದೇಹ ಮನಸ್ಸುಗಳಲ್ಲಿ ಆದ ಚೇತರಿಕೆಯ ಬಗ್ಗೆ ತಂಡಕ್ಕೆ ಅಚ್ಚರಿಯಾಗಿತ್ತು. ಆ ತಂಡವು ಕಾಡನ್ನು ಸುತ್ತದೆ ಹೆಚ್ಚಾಗಿ ಆ ತೊರೆಯ ಸುತ್ತಲೇ ತಮ್ಮ ಅಧ್ಯಯನವನ್ನು ಕೇಂದ್ರೀಕರಿಸಿಕೊಂಡಿದ್ದು ಇರುವನಿಗೆ ನೆನಪಿಗೆ ಬಂತು. ಅದು ಮೂರು ಕಾಲಿನ ಕಪ್ಪೆಯ ಕುರಿತಾದ್ದೆ ಅಧ್ಯಯನ ಉಳಿದೆಲ್ಲವೂ ನೆಪ ಮಾತ್ರ.. ಎಂಬ ದೃಢ ನಿಲುವು ಇರುವನದು. ಆದರೆ ಒಬ್ಬ ಅಮಾಯಕ ಕಾಡಿನ ಮನುಷ್ಯ ಕಾಡಿನಷ್ಟೇ ಅಮಾಯಕನಾಗಿರುತ್ತಾನೆ. ಅವನ ನಂಬಿಕೆಗಳೇ ಬೇರೆ. ಹೊರ ಜಗತ್ತಿನ ಶ್ರದ್ಧೆಗಳೆ ಬೇರೆ.

 ಅಧ್ಯಯನ ತಂಡಕ್ಕೆ ಅಲ್ಲಿಯ ನದಿ ಎಂದಿಗೂ ತೆರವಾಗದ ನಿಧಿಯಂತೆ ತೋರಿತು. ನದಿಯೊಳಗೊಂದು ನದಿ ಗುಪ್ತವಾಗಿ ಪ್ರವಹಿಸುತ್ತಿರುವಂತೆ ಕಂಡಿತು. ಕಂಪನಿಯಿಂದ ಪ್ರಾಯೋಜಿತವಾದ ಅಧ್ಯಯನ ತಂಡವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

 ಸ್ವಾತಂತ್ರ್ಯ ನಂತರದ ಇಷ್ಟು ವರ್ಷಗಳವರೆಗೆ ಶಿಕ್ಷಣ ಸಾರಿಗೆ ಸಂಪರ್ಕ ಕುಡಿಯುವ ನೀರು, ನೈರ್ಮಲ್ಯ ಆರೋಗ್ಯ ಭಾಗ್ಯಗಳಿಂದ ವಂಚಿತವಾದ ಆ ಪ್ರದೇಶದ ಹತ್ತು ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವನ್ನು ಉಲ್ಲೇಖಿಸಿ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಬ್ರೈಟ್ ಫ್ಯೂಚರ್ ಎಂಎನ್‌ಸಿ ಕಂಪನಿಗೆ ವಹಿಸುವದರ ಅಗತ್ಯವನ್ನು ಕಾರಣ ಸಹಿತ ವಿವರಿಸಲಾಗಿತ್ತು.

ಆ ಪ್ರದೇಶದ ನೀರು ಕುಡಿಯಲು ಯೋಗ್ಯವಾಗಿಲ್ಲ? ಅದು ಅಗತ್ಯಕ್ಕಿಂತ ಹೆಚ್ಚಿನ ಭಾರ ಧಾತುಗಳನ್ನು ಒಳಗೊಂಡಿದೆ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಉಲ್ಲೇಖಿಸಲಾಗಿತ್ತು. ಅದರಿಂದ ಮುಂದೆ ಉದ್ಭವಿಸಬಹುದಾದ ಆರೋಗ್ಯ ಸಂಬಂಧಿತ ದುಷ್ಪರಿಣಾಮಗಳ ದೊಡ್ಡ ಪಟ್ಟಿಯನ್ನು ನಿರ್ಭಾವುಕವಾಗಿ ಓದಿದ ಸಚಿವರು..

ಹೆಚ್ಚಿನ ಅಧ್ಯಯನಕ್ಕಾಗಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಉದ್ಧೇಶಕ್ಕಾಗಿ ಆ ಪ್ರದೇಶವನ್ನು ಸದರಿ ಕಂಪನಿಗೆ ಹತ್ತು ವರ್ಷಗಳ ಅವಧಿಗೆ ಶರತ್ತು ರಹಿತವಾಗಿ ವಹಿಸಬೇಕು ಎಂಬದ್ದನ್ನು ಪೆನ್ನಿನಿಂದ ಗೆರೆ ಎಳೆದು ಫೈಲ್ ಮುಚ್ಚಿ ಅದರ ಮೇಲೆ ತಮ್ಮ ಎರಡೂ ಕೈಯಿಟ್ಟು ಸಭೆಯ ಅಧಿಕಾರಿಗಳತ್ತ ನೋಡಿ ಮುಗುಳ್ನಕ್ಕರು.

***

 ಕಾಡಿನ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಹುನ್ನಾರ.. ಎಂದು ಪರಿಸರವಾದಿಗಳು ಸತ್ಯಾಗ್ರಹ ಶುರು ಮಾಡಿದರು. ಈ ಪರಿಸರವಾದಿಗಳು ಯಾವಾಗಲೂ ಪ್ರಗತಿಯ ವಿರೋಧಿಗಳಾಗಿರುತ್ತಾರೆ ಎಂಬ ಪರಿಸರ ಖಾತೆ ಸಚಿವರು ಹೇಳಿಕೆ ದೊಡ್ಡ ಮಟ್ಟದ ಆಕ್ರೋಶವನ್ನು ಉಂಟು ಮಾಡಿತ್ತು. ಸತ್ಯಾಗ್ರಹ ಇನ್ನಷ್ಟು ತೀವ್ರವಾಯಿತು. ಕಾಡು ಬುಡುಕಟ್ಟು ಜನರಿಗೆ ದೈವ ಸಮಾನವಾದದ್ದು, ಕಾಡಿನೊಂದಿಗೆ ಅವರಿಗೆ ಕರುಳು ಬಳ್ಳಿಯ ಸಂಬಂಧವಿದೆ.ಅವರನ್ನು ಒಕ್ಕಲೆಬ್ಬಿಸಿದರೆ ಅಲ್ಲಿಯ ದೈವ ಗಿಡ ಮರಗಳೊಂದಿಗಿನ ಸಾವಯವ ಸಂಬಂಧವೇ ಕಡಿದು ಹೋಗಿ ಒಂದು ಸಾಂಸ್ಕೃತಿಯ ನಾಶವಾಗುತ್ತದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಯಿತು. ಯಂತ್ರಕ್ಕೆ ಸಂವೇದನೆಗಳು ಇರುವುದಿಲ್ಲವೆಂಬುದು ಅವರಿಗೂ ಗೊತ್ತಿರುವಂತದೆ ಆದರೂ ಇಂತಹ ಸಂದರ್ಭಗಳಲ್ಲಿ ಇಂಥವೇ ಮಾತುಗಳು ಕೇಳಿಬರುತ್ತವೆ.ಪರಿಸರವಾದಿಗಳ ಹೋರಾಟಕ್ಕೆ ಕೈಜೋಡಿಸುವಂತೆ ಇರುವ ಹತ್ತೂ ಊರುಗಳ ಜನರನ್ನು ಒಗ್ಗೂಡಿಸಲು ಪ್ರಯತ್ನ ಮಾಡತೊಡಗಿದ.

 ಅದಾಗಲೇ ಗುಡ್ಡದಾಚೆ ಇಟ್ಟಿಗೆ ಮರಳು ಕಬ್ಬಿಣದ ಸರಳುಗಳು ಬಂದು ಬಿದ್ದಿದ್ದವು. ಇದನ್ನು ಕಂಡಿದ್ದ ಜನರು ಕಾಂಕ್ರೀಟ್ ಮನೆಯಲ್ಲಿ ವಾಸಿಸುವ ಕನಸಿನಲ್ಲಿ ತೇಲತೊಡಗಿದರು. ಎಲ್ಲರಿಗೂ ಇರುವ ವಿಚಿತ್ರ ಮನುಷ್ಯನಂತೆ ಕಾಣತೊಡಗಿದ. ಕೊನೆಗೆ ಬೇಸತ್ತು ಇರುವ ತನ್ನ ಅಜ್ಜಿ ಲಕ್ಕವ್ವನನ್ನು ಕರೆದುಕೊಂಡು ಹೋಗಿ ಸತ್ಯಾಗ್ರಹಕ್ಕೆ ಕುಳಿತುಕೊಂಡ. ನೆಲಕ್ಕಾಗಿ ಮಣ್ಣಿಗಾಗಿ ಶತಾಯುಷಿಯ ಸತ್ಯಾಗ್ರಹ ಎಂದು ಮಾಧ್ಯಮಗಳು ಸುದ್ದಿ ಭಿತ್ತರಿಸಿದವು. ಟಿವಿಯಲ್ಲಿ ಪೇಪರ್ ನಲ್ಲಿ ಬಂದಿದ್ದ ಮುದುಕಿಯ ಚಿತ್ರ ಕಂಡು ಇರುವ ಸಂಕಟದ ಮಧ್ಯೆಯು ಸಂಭ್ರಮಿಸಿದ. ದಿನವೂ ಮಾಧ್ಯಮಗಳಲ್ಲಿ ಅದೇ ಸುದ್ದಿ. ಸತ್ಯಾಗ್ರಹ ಮುಂದುವರಿಯಿತು ಸರ್ಕಾರ ಬಗ್ಗುತ್ತದೆ ಅಂದುಕೊಂಡ. ದಿನಗಳೆಯತೊಡಗಿದಂತೆ ಬೇರೆ ಸುದ್ದಿಗಳು ಸ್ಥಾನ ಪಡೆದುಕೊಂಡವು. ಅರೆ ಬರೆ ದೇಹದ ಮುದುಕಿ ಗಾಂಧಿಯಂತೆ ಕಂಡಳು.

***

 ಸರ್ಕಾರ ತಮ್ಮ ಪ್ರಾಜೆಕ್ಟಿಗೆ ಒಪ್ಪಿಗೆ ನೀಡಿದ್ದರ ಸಂಭ್ರಮವನ್ನು ಆಚರಿಸಲು ಕಂಪನಿಯ ಸಿ ಇ ಓ ಅಧ್ಯಯನ ತಂಡವನ್ನು ಆಹ್ವಾನಿಸಿದ್ದರು. ಆ ನದಿಯ ನೀರಿನ ಔಷಧಿಯ ಮಹತ್ವದ ಕಾರಣ ಆಗಬಹುದಾದ ವ್ಯವಹಾರಿಕ ಲೆಕ್ಕಾಚಾರ ಮಾಡಿದ್ದ ಚೀಫ್ ಅದಕ್ಕೆ ನೆರವಾದ ತಂಡಕ್ಕೆ ಋಣ ಸಂದಾಯ ಮಾಡುವ ಕಾತುರದಲ್ಲಿದ್ದರು.

 ಚಂದಿರನ ಕಳೆ ಹೊತ್ತು ಕುಳಿತಿದ್ದ ಕಂಪನಿಯ ಚೀಪ್ ಎದುರಿಗೆ ಕುಳಿತಿದ್ದ ತಂಡವು ಅವರ ಮುಂದೆ ಒಂದು ಗಾಜಿನ ಜಾರ್ ಇಟ್ಟಿತು. ಋಣಕ್ಕೆ ಗುಲಾಮಿ ಮನಸ್ಥಿತಿ ಇರುತ್ತದೆ. ಅದು ಪಡೆದುಕೊಂಡಷ್ಟು ತಲೆ ತಗ್ಗಿಸುತ್ತದೆ. ತಂಡವು ಇನ್ನಷ್ಟು ಋಣ ಬಯಸಿ ಕಂಪನಿಯನ್ನು ಇನ್ನಷ್ಟು ಖುಷಿ ಪಡಿಸುವ ಗೇನಿಕೆ ಹಾಕಿಕೊಂಡಿತ್ತು. ಸರಕಾರದ ತಲೆಗೆ ಹೊಳೆಯದ ಸಂಗತಿ ಕಂಪನಿಯ ಚೀಫ್ ಗೂ ಹೊಳೆಯಲಾರದು.

ಮುಂದೆ ಇಟ್ಟಿದ್ದ ಜಾರ್ ನಲ್ಲಿ ಒಂದು ಕಪ್ಪೆ ಇತ್ತು. ಅದನ್ನು ನೋಡಿದ ಚೀಫ್ ಗೆ ಏನೂ ಅರ್ಥವಾಗಲಿಲ್ಲ.

ಓಹ್! ಕಪ್ಪೆಗಳು ಈ ಕಾಡಿನ ಜನರಿಗೆ ಅದೃಷ್ಟದ ಸಂಕೇತವಂತೆ.. 

 ಚೀಫ್ ಮಾತಿಗೆ ತಂಡ ನಕ್ಕಿತು

– ಸರ್ ಕಾಡಿನ ಜನರ ನಂಬಿಕೆಗಳು ಬೇರೆ ನಮ್ಮ ಜಿಜ್ಞಾಸೆಗಳು ಬೇರೆ.

– ಈ ಕಪ್ಪೆ ನಿಮ್ಮ ಪಾಲಿಗೆ ಅದೃಷ್ಟ ದೇವತೆ

– ಏಶಿಯಾದ ಕೆಲವೇ ಪ್ರದೇಶಗಳಲ್ಲಿ ಕಂಡುಬರುವ ಅಪರೂಪದ ಸ್ಪೀಸೀಸ್ ಇದು. ಸಾಮಾನ್ಯವಾಗಿ ಕಪ್ಪೆಯ ಮುಂಗಾಲುಗಳಲ್ಲಿ ನಾಲ್ಕು ಬೆರಳು, ಹಿಂಗಾಲುಗಳಲ್ಲಿ ಐದು ಬೆರಳುಗಳು ಇರುತ್ತವೆ.

– ಇದಕ್ಕೆ ಆರನೇ ಬೆರಳು ಇದೆ ! ಇಟ್ಸ್ ವೆರಿ ರೇರ್ ಸ್ಪೀಸಿಸ್.

 ತಂಡದ ಒಬ್ಬೊಬ್ಬರ ಮಾತುಗಳನ್ನು ಕೇಳುತ್ತಲಿದ್ದ ಚೀಪ್ ಆರನೇ ಬೆರಳು ಎಂದ ಕೂಡಲೇ ತಮ್ಮ ಮುಂದಿದ್ದ ಜಾರ್ ಕೈಗೆ ತೆಗೆದುಕೊಂಡು ತದೇಕ ಚಿತ್ತದಿಂದ ನೋಡತೊಡಗಿದರು.

– ಸರ್ ! ಲುಕ್ ಅಟ್ ದಿ ನ್ಯೂಟ್ರೀ ವ್ಯಾಲ್ಯೂ.. ವೆರಿ ರಿಚ್ ಇನ್ ಒಮೆಗಾ 3 ಅಂಡ್ ವಿಟಾ ಎ.

– ಫ್ರಾಗ್ ಲೆಗ್ ಇಸ್ ವೆರಿ ಡೆಲಿಸಿಯಸ್.. ಇದಕ್ಕೆ ವರ್ಲ್ಡ್ ವೈಡ್ ಬೇಡಿಕೆ ಇದೆ.

– ಮೇನ್ಲಿ ಕ್ರಿಕೆಟಿಗರಿಗೆ ವೇಗದ ಬಾಲ್ ಗುರುತಿಸುವ ತೀಕ್ಷ್ಣ ದೃಷ್ಟಿ.. ಬೌಂಡರಿ ದಾಟಿಸುವ ಮಸಲ್ಸ್ ಎರಡೂ ಬೇಕು.. 

– ವಿ ಹ್ಯಾವ್ ಟು ಥಿಂಕ್ ಎಬೌಟ್ ಎ ವಂಡರ್ಫುಲ್ ಸ್ಪೋರ್ಟ್ ಡ್ರಿಂಕ್ 

 ಎಲ್ಲರ ಮಾತು ಕೇಳಿದ ಚೀಫ್ ಜಾರ್ ನಲ್ಲಿದ್ದ ಕಪ್ಪೆಯ ಗಾತ್ರ, ಅದರ ಭಿರಡೆ ಕಣ್ಣುಗಳು, ಮಾಂಸಲವಾದ ತೊಡೆಗಳನ್ನು ದಿಟ್ಟಿಸಿದರು.

 ಗಾವುದ ದೂರಕ್ಕೆ ನೆಗೆಯಲು ಹೊಂಚು ಹಾಕಿ ಕುಳಿತಿರುವಂತೆ ಗಪ್ಪನೆ ಕುಳಿತುಕೊಂಡಿತ್ತು.. ರಾಣಾ..!

ರಾಣಾ ಹೆಕ್ಷಾಡಾಕ್ಟಿಲಾ.

 ಈ ಬಗ್ಗೆ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಕಾಣಿಸಿಲ್ಲವಲ್ಲ ಎಂಬ ಪ್ರಶ್ನೆ ಕೇಳುವಷ್ಟು ಮೂರ್ಖ ಚೀಪ್ ಆಗಿರಲು ಹೇಗೆ ಸಾಧ್ಯ. ಸರ್ಕಾರವನ್ನು ಯಾಮಾರಿಸಿದ ತಂಡದ ಬುದ್ಧಿವಂತಿಕೆಯ ವಂಚನೆ ಗುಣಕ್ಕೆ ಹುಬ್ಬು ಹಾರಿಸಿದ. ಸರ್ಕಾರಕ್ಕೆ ಈ ಸಂಗತಿ ತಿಳಿಯದಂತೆ ತಾವುಗಳು ನಡೆದುಕೊಳ್ಳಬೇಕಾದ ನೀತಿಸಂಹಿತೆಗೆ ಕಣ್ಣು ಕಣ್ಣಲ್ಲೇ ಎಲ್ಲರೂ ಸಹಿ ಹಾಕಿಕೊಂಡರು.

***

 ಶತಾಯುಷಿ ವೃದ್ಧೆಯ ಸತ್ಯಾಗ್ರಹಕ್ಕೆ ನೂರು.. ಎಂದು ಪತ್ರಿಕೆಯ ಒಳಪುಟಗಳಲ್ಲಿ ಚಿಕ್ಕ ವರದಿಯಾಗಿತ್ತು. ಮುದುಕಿ ನಿತ್ರಾಣಗೊಂಡಿದ್ದಳು ಎಳನೀರು ಗಂಜಿಯ ಮೇಲೆ ಜೀವ ಹಿಡಿದಿದ್ದಳು. ಅವಳಿಂದ ಸತ್ಯಾಗ್ರಹಕ್ಕೆ ಶಕ್ತಿ ತುಂಬುತ್ತದೆ, ಸರ್ಕಾರ ನಡುಗುತ್ತದೆ ಎಂಬ ನಂಬಿಕೆಗಳು ಚಳವಳಿಗಾರರ ನಂಬಿಕೆಗಳ ಹಾಗೆ ಉಳಿದವು.ಸಂಜೆಯಾಗುತ್ತಿದ್ದಂತೆ ಅವಳ ಕಣ್ಣುಗಳು ನಿಸ್ತೇಜಗೊಳ್ಳುತ್ತಿರುವಂತೆ ಕಂಡವು. ಇರುವ ಮುದುಕಿಯ ಗಲ್ಲ ತಟ್ಟಿ ಮಾತನಾಡಿಸಿದ. ಅವಳ ಕಣ್ಣ ಆಳದಲ್ಲಿ ಹಾಳು ಬಾವಿಯಲ್ಲಿ ಉಳಿದ ನೀರಿನಂತಹ ಮಿಣುಕು. ತುಸು ದೂರದಲ್ಲಿದ್ದ ಕ್ಯಾಮೆರಾ ಕ್ಲಿಕ್ ಎಂದು ಮಿಣುಕಿತು. ಇನ್ನಷ್ಟು ಕ್ಯಾಮೆರಾಗಳ ದಂಡು ಬರುವದರೊಳಗಾಗಿ ಹೊರಡಬೇಕು. ಆಸ್ಪತ್ರೆಗೆ ಸಾಗಿಸುವುದೋ ಊರಿಗೆ ಒಯ್ಯುವುದೋ ಎಂಬುದನ್ನು ಸತ್ಯಾಗ್ರಹದ ನೂರು ದಿನಗಳು ಅರ್ಥ ಮಾಡಿಸಿದ್ದವು. ಮುದುಕಿ ತಾನು ಹುಟ್ಟಿ ಬೆಳೆದ ನೆಲದಲ್ಲಿ ಜೀವ ಬಿಡಲಿ ಎಂದು ಹೊತ್ತುಕೊಂಡು ದಡ ದಡನೆ ಅಲ್ಲಿಂದ ನಡೆಯತೊಡಗಿದ. ತಾಸು ದೀಡು ತಾಸಿನ ಹಾದಿ. ಅದಾಗಲೇ ಸೂರ್ಯ ಮುಳುಗುತ್ತಲಿದ್ದ. ದೊಡ್ಡ ದೊಡ್ಡ ಹೆಜ್ಜೆ ಇಡುತ್ತಿದ್ದ ಇರುವನ ಹೆಜ್ಜೆಗಳು ಸಣ್ಣದಾಗತೊಡಗಿದವು.ಮುದುಕಿಯ ಕಣ್ಣ ಬೆಳಕು ಆರಿತೋ ಏನೋ ಎಂಬ ಕಳವಳ. ಬೇಗ ಊರು ತಲುಪಬೇಕು ಮುದುಕಿ ತನ್ನ ನೆಲದಲ್ಲೇ ಜೀವ ಬಿಡಬೇಕು ಎಂಬ ಧಾವಂತ ಅವನ ಹೆಜ್ಜೆಗಳಲ್ಲಿತ್ತು. ಮನೆ ತಲುಪುವಷ್ಟರಲ್ಲಿ ಸೂರ್ಯ ಉಳಿದು ಹೋಗಿದ್ದ ಎಲ್ಲರೂ ಬಂದು ಸುತ್ತ ನೆರೆದರು. ಮುದುಕಿಯನ್ನು ಕೆಳಗಿಳಿಸಿ ತಟ್ಟಿ ಮಾತನಾಡಿಸಿದ ಯಾವುದೇ ಮಿಸುಗಾಟ ಇಲ್ಲ. ರೆಪ್ಪೆ ಇಲ್ಲದ ಕಪ್ಪೆಯಂತೆ ಮುದುಕಿಯ ಕಣ್ಣುಗಳು ತೆರೆದುಕೊಂಡಿವೆ. ಬಾಯಿಗೆ ನೀರು ಬಿಟ್ಟ. ನೀರು ತುಟಿಯ ಸ್ವಾಟಿಯಿಂದ ಜಾರಿತು. ಇರುವ ಎದೆ ಬಡಿದುಕೊಂಡ. ಮುದುಕಿಯ ಜೀವ ಕಣ್ಣಲ್ಲೆ ಹಾರಿ ಹೋಗಿತ್ತು.ಹಿತ್ತಿಲಲ್ಲಿ ಮಣ್ಣು ಮಾಡಿ ಬಂದ ಇರುವ ಕಂಬಕ್ಕೊರಗಿ ಕುಳಿತ. ದಿನವೂ ಅದೆ ಕತೆ. ಮುದುಕಿಯನ್ನು ಪರದೇಸಿ ಹೆಣ ಮಾಡಿದೆನಲ್ಲ.. ಎಂದು ಕೊರಗತೊಡಗಿದ್ದ.ರಾತ್ರಿಯೆಲ್ಲ ಬಡಬಡಿಸುತಿದ್ದ.

ಅದೊಂದು ರಾತ್ರಿ. ತಣ್ಣಗೆ ಹರಿಯುತ್ತಿರುವ ತೊರೆ. ನೀರೆಲ್ಲ ಕಪ್ಪಿಡುತ್ತಿದೆ. ಅಲ್ಲಿಂದ ಏರಿ ಏರಿ ಬರುತ್ತಿರುವ ಮೂರು ಕಾಲಿನ ಕಪ್ಪೆ.. ಕಾಲು ಹೊಟ್ಟೆ ಎದೆಯೆರಿ ಬರುತ್ತಿದೆ.. ಅದರ ಭಿರಡೆ ಕಣ್ಣುಗಳು! ಮೂಗಿನ ಮೇಲೆ ಕುಳಿತು ಕೆಕ್ಕರಿಸಿ ನೋಡಿತು. ಇರುವ ಅಬ್ಬರಿಸಿ ಎದ್ದ. ಅವನೊಂದಿಗೆ ಮನೆ ಮಂದಿಯೆಲ್ಲಾ ಎದ್ದು ಕುಳಿತರು.

ಸ್ವಲ್ಪ ಹೊತ್ತು ಹಾಗೆ ಕುಳಿತಿದ್ದ ಇರುವ ಛಟ್ಟನೆ ಕೊಡವಿಕೊಂಡು ಎದ್ದು ಗುದ್ದಲಿ ತಂದು ಮನೆಯ ನೆಲವನ್ನೆಲ್ಲ ಅಗೆಯತೊಡಗಿದ.ಎಲ್ಲ ಕಡೆಯೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಮೂರು ಕಾಲಿನ ಕಪ್ಪೆಯ ಅಸ್ಥಿಪಂಜರಗಳು. ಹತಾಶಗೊಂಡ ಇರುವ ನೆಲ ನೆಲ ಕೆಬರುತ್ತ ಏನೂ ಸಿಗದಂತಾಗಿ ಮೂರು ದಿಕ್ಕಿಗೂ ಮೂರು ಹಿಡಿ ಮಣ್ಣು ತೂರಿದ. ಪರಪರ ತಲೆ ಕೆರೆದುಕೊಳ್ಳುತ್ತ ದೂರ ದೂರಕ್ಕೆ ನೋಡುತ್ತಾ ಇರುವಾಯಿರಪ್ಪ ಕೂತಂತೆ ಕೂತ.

***

Leave a Comment

Your email address will not be published. Required fields are marked *

Scroll to Top