ಕಥಾಸಂಭ್ರಮ 2025 ಪ್ರಥಮ ಬಹುಮಾನ ಪಡೆದ ಕಥೆ
ಲೇಖಕರು: ರವಿ ಶಿವರಾಯಗೊಳ
ಅಮ್ಮಕ್ಕ ಬೆಳಿಗ್ಗೆ ಎದ್ದಾಗ ಎಷ್ಟೊಂದು ರಾಶಿ ಕೆಲಸ ಇದೆಯಲ್ಲಾ ಎಂದು ತಲೆ ಬಿಸಿ ಮಾಡಿಕೊಂಡು ಕರೆಂಟಿನಿಂದ ಕಾಯ್ದ ನೀರಿಗೆ ಒಂಚೂರು ತಣ್ಣೀರು ಬೆರೆಸಿ ತಲೆ ಸ್ನಾನ ಮಾಡಿ, ಪೂಜೆ ಪುನಸ್ಕಾರ ಮುಗಿಸಿ, ಅಂಗಳಕ್ಕೆ ಬಂದು ನೋಡಿದಾಗ “ಅಯ್ಯೋ! ರಂಗೋಲಿ ಹಾಕೋದೇ ಮರೆತು ಹೋಯ್ತಲ್ಲ” ಎಂದು ಹಣೆ ಚಚ್ಚಿಕೊಂಡು ರಂಗೋಲಿ ಬಟ್ಟಲು ಹುಡುಕಿ, ರಂಗೋಲಿ ಹಾಕುವ ಜಾಗದಲ್ಲಿ ತುಂತುರು ನೀರು ಚಿಮುಕಿಸಿ ತುದಿಗಾಲಲ್ಲಿ ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಅಮ್ಮಕ್ಕನ ಮಂಡಿಯಲ್ಲಿ ನೋವು ‘ಚಳಕ್’ ಎಂದಿತು.
“ಈ ಹಾಳಾದ ಗಾಂಧಾರಿ ಎಲ್ಲೋದ್ಲೋ, ಒಂದಿನಾನೂ ಸಮಯಕ್ಕ ಬರೋದಿಲ್ಲ” ಎಂದು ತಮಗಾದ ಮಂಡಿನೋವನ್ನು ಗಾಂಧಾರಿಗಾದರೂ ಬೈಯ್ದು ಶಮನ ಮಾಡಲು ಸಾಧ್ಯವಾ ನೋಡಿದರೆ ಅದೂ ಹಾಗೆ ಆಗಲಿಲ್ಲ. ತಕ್ಷಣವೇ ಎಲ್ಲಾ ಸಮಯಕ್ಕೂ ಜೊತೆ ಇರುವ ಗಾಂಧಾರಿಗೆ ತಾನೇಕೆ ಹೀಗೆ ದೂರಿದೆ ಎಂದು ಹಳಹಳಿಕೆ ಆಯಿತು. ನೋವು ಮತ್ತಷ್ಟು ಉಲ್ಬಣಿಸುತ್ತಿದೆ ಎಂದಾಗ ನಿಧಾನವಾಗಿ ಎದ್ದು ಅಂಗಳ ದಾಟಿ ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದರೆ ಗಾಂಧಾರಿಯ ಸುಳಿವೇ ಇಲ್ಲ. ರಸ್ತೆಗುಂಟ ಬರುವ ಎಲ್ಲಾ ಆಕೃತಿಗಳು ಮಬ್ಬು ಮಬ್ಬಾಗಿ ಒಂದೇ ತರಹ ಕಾಣುತ್ತಿದ್ದಾಗ ಅಮ್ಮಕ್ಕಗೆ ತಾನು ಕನ್ನಡಕ ಹಾಕಿಕೊಂಡಿಲ್ಲ ಎಂಬುದು ಹೊಳೆದು ಹೋಯಿತು.
“ನನ್ ತಲೆ” ಎಂದು ತಮ್ಮ ಮರೆವಿನ ಖಾಯಿಲೆಗೆ ತಾವೇ ಶಪಿಸುತ್ತಾ ಒಳ ನಡೆದರು. ಅದಾದರೂ ಎಂಥಾ ಕನ್ನಡಕ? ಅದರ ಗಾಜು, ಯಾವುದೋ ನಿರ್ಜನ ಪ್ರದೇಶದಲ್ಲಿ ಸಿಡಿಲು ಬಿದ್ದು ವಕ್ರವಾಗಿ ಬಿರುಕು ಬಿಟ್ಟ ನೆಲದಂತೆ ಕಾಣುತ್ತದೆ. ಹಾಗೆ ಒಡೆದು ಹೋದ ಕನ್ನಡಕ ಇದು ಮೊದಲನೆಯದೇನು ಆಗಿರಲಿಲ್ಲ, ಕದ್ದು ಹಾಲು ಕುಡಿಯುವ ಬೆಕ್ಕಿಗೆ ಓಡಿಸುವಾಗ, ಅಂಗಳದಲ್ಲಿ ಹಾಕಿದ ಹಪ್ಪಳ ತಿನ್ನಲು ಬಂದ ಕಾಗೆ ಓಡಿಸುವಾಗ, ಕಸ ಗುಡಿಸುವಾಗ, ಬಟ್ಟೆ ತೊಳೆಯುವಾಗ, ಮುಸುರೆ ತಿಕ್ಕಿ ತೊಳೆದು ಒಪ್ಪವಾಗಿ ಜೋಡಿಸಿ ಇಡುವಾಗ, ಗೋಡೆಯ ಮೂಲೆಗಳಲ್ಲಿ ಹೆಣೆದ ಜೇಡರ ಬಲೆ ತೆಗೆಯುವಾಗ ಕಣ್ಣಿಂದ ಜಾರಿಬಿದ್ದ, ಕೈತಪ್ಪಿ ಹೋಗುವ ಪ್ರತಿ ಕನ್ನಡಕದ ಸ್ಥಿತಿಯೂ ಚಿಂತಾಜನಕವೇ ಆಗಿ ಹೋಗುತ್ತಿತ್ತು.
ಆಗೆಲ್ಲಾ ಅಮ್ಮಕ್ಕ ಯಾವ್ಯಾವುದೋ ರಾತ್ರಿಯಲ್ಲಿ ಮುಂಬೈಯಲ್ಲಿರುವ ಮಗ ಶಿಶಿರನಿಗೆ ಡಯಲ್ ಮಾಡಿ “ಶಿಶಿರಾ… ಕನ್ನಡಕ ಒಡೆದೊಯ್ತೋ ಮಗ” ಎಂದು ತಪ್ಪಿತಸ್ಥ ಭಾವನೆಯಲ್ಲಿ ಹೇಳುತ್ತಿದ್ದರೆ ಅತ್ತ ಅಮ್ಮನ ತಗ್ಗಿದ ದನಿಯಲ್ಲಿನ ದೈನ್ಯತೆ ಕಂಡು ಶಿಶಿರನಿಗೂ ಸಿಡುಕಲು ಮನಸಾಗದೇ “ಮತ್ತೊಂದು ತಂದುಕೊಂಡ್ರೆ ಆಯ್ತಮ್ಮ, ಅಲ್ಲೀವರೆಗೂ ಹುಶಾರಾಗಿ ಓಡಾಡು” ಎಂದು ಸಮಾಧಾನ ವ್ಯಕ್ತಪಡಿಸುತ್ತಾ ಹೇಳುತ್ತಿದ್ದ.
ಅವನ ಪಕ್ಕದಿಂದ ಹಾದು ಹೋಗಿರಬಹುದಾದ ರೈಲಿನ ಸದ್ದು ಅಥವಾ ರೈಲಿನ ಫ್ರಾಂ ಫ್ರಾಂ ಎಂಬ ಹಾರ್ನಿನ ಸದ್ಧು, ಪ್ಲ್ಯಾಟ್ಫಾರ್ಮಿನ ಗಿಜಿಗಿಜಿ, “ಕೃಪಯಾ ಧ್ಯಾನ್ ದೋ ಗಾಡಿ ಸಂಖ್ಯಾ 11325 ಪ್ಲ್ಯಾಟ್ಫಾರ್ಮ್ ಸಂಖ್ಯಾ ದೋ ಪರ್ ಆನೆ ವಾಲಾ ಹೈ’’ ಎಂದು ಸುಶ್ರಾವ್ಯವಾಗಿ ಪ್ರಯಾಣಿಕರಿಗೆ ಹೇಳುವ ಕಾಣದ ಹುಡುಗಿಯ ಧ್ವನಿ ಅಮ್ಮಕ್ಕಗೆ ಫೋನ್ ಮಾಡಿದಾಗೆಲ್ಲಾ ಕೇಳಿಸುತ್ತಿತ್ತು. ಆದಾಗ್ಯೂ ಅಮ್ಮಕ್ಕ ಒಂದು ಬಾರಿ “ಏನೋ ಶಿಶಿರ, ಯಾವಾಗ ನೋಡಿದ್ರೂ ರೈಲು ನಿಲ್ದಾಣದ ಹತ್ರಾನೇ ಇರ್ತೀಯಲ್ಲ” ಎಂದು ಆಶ್ಚರ್ಯವೋ ಪ್ರಶ್ನಾರ್ಥಕವೋ ಎಂಬುದು ತಿಳಿಯದ ಭಾವದಲ್ಲಿ ಕೇಳುತ್ತಿದ್ದಳು.
ತಾನೇನು ಮಾಡುತ್ತಿದ್ದೇನೆ ಎನ್ನುವುದು ಅಮ್ಮನಿಗೆ ಗುಮಾನಿ ಏಳುತ್ತಿದೆ ಅನ್ನುವ ಅನುಮಾನ ಬಂದು ಶಿಶಿರ “ಸಿನಿಮಾ ಪ್ರೋಡಕ್ಷನ್ ಟೀಮ್ ಅಲ್ಲಿ ಕೆಲ್ಸಾ ಮಾಡೋದಲ್ವೇನಮ್ಮ ನಾನು, ಹಾಗಾಗಿ ಎಷ್ಟೊತ್ತಿಗೋ ಶೂಟಿಂಗ್ ಇರುತ್ತೆ” ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ. ಸಿನಿಮಾ ಶೂಟಿಂಗ್ ಇಲ್ಲದ ದಿನ ದಾದರ್ ಸ್ಟೇಷನ್ನಲ್ಲಿ ಹೀಗೆ ಚಾಯ್ ಚಾಯ್ ಎಂದು ರಾಗಬದ್ಧವಾಗಿ ಕೂಗುವ ಶಿಶಿರನ ಅವತಾರ ಯಾವುದೋ ಹೆಸರಿಡದ ಸಿನಿಮಾದ ಯಾವುದೋ ಪಾತ್ರದಂತೆ ಇರುತ್ತದೆ. ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಕೆಲಸ ಮಾಡುವ ಶಿಶಿರನಿಗೆ ತಾನೂ ಖುದ್ದು ಒಂದು ಸಿನಿಮಾ ಮಾಡಬೇಕು ಅನ್ನುವ ಕನಸು ಒಳಗೊಳಗೇ ಬೆಳೆಯುತ್ತಲೇ ಬಂದಿದೆ.
ಕಳೆದ ಹದಿನೈದು ಇಪ್ಪತ್ತು ವರುಷದಿಂದ ರೈಲಿನ ಬೋಗಿಗಳಲ್ಲಿ ಕಥೆ ಹುಡುಕುವ ಸಾಹಸ ಮಾಡುತ್ತಲೇ ಇದ್ದಾನೆ. ದಾದರ್ ಸ್ಟೇಷನ್ನಿನ ಪ್ಲ್ಯಾಟ್ಫಾರ್ಮ್ಗಳಲ್ಲಿ, ರೈಲಿನ ಬೋಗಿಯಿಂದ ಬೋಗಿಗೆ ದಾಟುವಾಗ ಸಿಗುವಷ್ಟು ಕಥೆಗಳು ಮತ್ತೆಲ್ಲೂ ಸಿಗಲಾರದು ಎಂಬುದು ಶಿಶಿರನ ನಂಬಿಕೆ. ಹಾಗಂತಲೇ ಚಾಯ್ ಚಾಯ್ ಎಂದು ಚಹಾ ಮಾರುತ್ತಾ ಕಡು ಕತ್ತಲೆಯ ಓಡುವ ರೈಲಿನಲ್ಲಿ ಒಂದು ಪ್ಲ್ಯಾಟ್ಫಾರ್ಮ್ನಿಂದ ಇನ್ನೊಂದು ಪ್ಲ್ಯಾಟ್ಫಾರ್ಮ್ ಬರುವಷ್ಟೊತ್ತಿಗೆ ಕಥೆ ಹುಡುಕುತ್ತಾ ಸಾಗುತ್ತಾನೆ ಶಿಶಿರ. ಒಂದು ಕಾಲದಲ್ಲಿ ಸಿನಿಮಾದ ತಳಬುಡವೇ ಗೊತ್ತಿರದ ಕೇವಲ ಕನಸೊಂದೇ ಕಟ್ಟಿಕೊಂಡು ಇದೇ ದಾದರ್ ಸ್ಟೇಷನ್ನಿನ ಮಾಯಾಲೋಕಕ್ಕೆ ಇಳಿದು ನಿಂತಾಗ ಹೊಡೆದುಕೊಂಡ ಎದೆಯ ಸದ್ಧು ಈಗಲೂ ಕೇಳಿಸಿದಂತಾಗುತ್ತದೆ. ನಟನಾಗುವ, ನಿರ್ದೇಶನ ಮಾಡುವ ಕನಸು ಚಿಗುರೊಡೆಯಲು ನೀರೆರೆದಿರಬಹುದಾದ ಒಂದೇ ಒಂದು ಜೀವ ಎಂದರೆ ಬಹುಶಃ ಗಾಂಧಾರಿಯೇ ಇರಬಹುದು ಎನ್ನಿಸುತ್ತದೆ ಅವನಿಗೆ.
ಸ್ಕ್ರಿಪ್ಟ್ ರೈಟಿಂಗು, ಕ್ಯಾಮೆರಾ ಆಂಗಲ್ಸು, ದೃಶ್ಯ ಹಿಡಿದಿಡುವ ಮಜಬೂತಿ, ಎಲ್ಲವನ್ನೂ ನೋಡಿ ನೋಡಿಯೇ ಕಲಿತುಕೊಂಡಿದ್ದಾನೆ ಶಿಶಿರ. ಆಗಷ್ಟೇ ಹೊಸತರಲ್ಲಿ ಅವರಿವರ ಸಹಾಯದಿಂದ ಸಿನಿಮಾ ರಂಗಕ್ಕೆ ಬಲಗಾಲಿಟ್ಟು ಬಂದ ಶಿಶಿರನ ಮತ್ತೊಂದು ನಾಮಕರಣ ಮಾಡಿದ್ದೇ ಈ ಸಿನಿಮಾ ಮಂದಿ ‘ಚೋಟೆ ಎಕ್ ಕಪ್ ಚಹಾ ಲೇಕೆ ಆ ರೆ’ `ಚೋಟೆ ಏಕ್ ಕಾಮ್ ಕರೋ’, `ಚೋಟೆ ಏ ಪ್ರಾಪರ್ಟಿ ಲೇಕೆ ಆ’ ಹೀಗೆ ಎಲ್ಲರಿಗಿಂತ ಚಿಕ್ಕವನು ಅನ್ನೋ ಕಾರಣಕ್ಕೆ ಚೋಟೆ ಚೋಟೆ ಎಂಬ ನಾಮಧೇಯ ಬಳುವಳಿಯಾಗಿ ಕೊಟ್ಟುಬಿಟ್ಟಿದ್ದರು. ಆದ್ರೆ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಚೌಪಾಟಿ ಅಂಕಲ್ “ತು ಮೇರಿ ಜಾನ್ ಹೈ ರೆ ಚೋಟೆ” ಎಂದು ಅತಿಯಾದ ಪ್ರೀತಿ ತೋರಿಸುತ್ತಿದ್ದಾಗ ಮಾತ್ರ ಅಪ್ಪನಿಲ್ಲದ ಕೊರಗು ಈ ಚೌಪಾಟಿ ಅಂಕಲ್ನಿಂದ ದೊರೆಯುತ್ತಿದೆ ಅನ್ನಿಸಿತ್ತು ಆಗ ಶಿಶಿರನಿಗೆ, ಆದ್ರೆ ಅದೊಂದು ರಾತ್ರಿ “ಹಮಾರಾ ಘರ್ ಮೇ ಖಾನಾ ಖಾಯೇಂಗೆ ಔರ್ ವಹೀ ಸೋಯೆಂಗೆ ಚಲ್ ಚೋಟೆ” ಎಂದು ಮನೆಗೆ ಕರೆದೊಯ್ದು ನಡುರಾತ್ರಿಯ ಗಾಢ ನಿದ್ರೆಯಲ್ಲಿರುವಾಗ ಒಂದೊಂದೇ ಬಟ್ಟೆ ಬಿಚ್ಚಿ ಬೆತ್ತಲಾಗಿಸಿದಾಗಲೇ ಗೊತ್ತಾಗಿದ್ದು. ಅಲ್ಲಿಂದ ಎದ್ದು ಓಡಿದವನು ರಾತ್ರೋ ರಾತ್ರಿ ಇದೇ ದಾದರ್ ಸ್ಟೇಷನ್ನಿನ ಪ್ಲ್ಯಾಟ್ಫಾರ್ಮ್ನಲ್ಲಿ ಇಡೀ ರಾತ್ರಿ ಕಳೆದಿದ್ದ ಶಿಶಿರ. ಅಲ್ಲಿಂದ ಮುಂದೆ ಯಾರ ಪ್ರೀತಿಗೂ ಸ್ಪಂದಿಸದೆ ಬೆಳೆದುಬಿಟ್ಟ. ತನಗಿಂತ ಹಿರಿಯರು ಯಾರೇ ಅನುಕಂಪ ಪ್ರೀತಿ ತೋರಿಸಿದರೆ ಆ ರಾತ್ರಿಯ ಚೌಪಾಟಿ ಮುಖವೇ ಕಂಡಂತಾಗುತಿತ್ತು. ಅಲ್ಲಿಂದ ಮುಂಬೈ ಅನ್ನೋ ಮಾಯಾ ನಗರದ ಅಂದಾಜು ಪಡೆದು ಬೆಳೆದುಬಿಟ್ಟ ಶಿಶಿರ. ಅವನ ಮೀಸೆ ಗಡ್ಡ, ದಷ್ಟಪುಷ್ಟವಾದ ಮೈ, ಎತ್ತರದ ನಿಲುವಿನೊಂದಿಗೆ ಮುಂಬೈ ಅನ್ನೋ ಪಟ್ಟಣ ದಾಢಸಿತನವನ್ನೂ ಕಲಿಸಿಬಿಟ್ಟಿತ್ತು.
ನಿಧಾನವಾಗಿ ಎಲ್ಲಿಂದಲೋ ಈಗಷ್ಟೇ ದಾದರ್ ಸ್ಟೇಷನ್ನಿನ ತುಂಬು ಜೇನುಗೂಡಿನಂತೆ ಕಾಣುವ ನೆರೆದ ಜನರ ನಡುವೆ ಬಂದಿಳಿದ ಅನಾಮಿಕ ಪ್ರಯಾಣಿಕರ ದುಗುಡ, ಆತಂಕ ಅವರ ಚಹರೆಗಳನ್ನು ನೋಡಿದಾಗಲೇ ತಿಳಿದುಹೋಗುತ್ತದೆ ಅವನಿಗೆ. ಇಲ್ಲಿ ಯಾವ ಭಾಷೆಯೂ ಶ್ರೇಷ್ಠವಲ್ಲ ಮತ್ತೂ ಯಾವುದೂ ಕನಿಷ್ಠವಲ್ಲ ಎಲ್ಲಾ ಭಾಷೆಗಳೂ ಈಗಷ್ಟೇ ಬಂದಿಳಿದು ತಮಗೆ ಗೊತ್ತಿರುವ ಕ್ಷಣಮಾತ್ರದ ಖಾಸಗಿ ವ್ಯವಹಾರ ಮುಗಿಸಿ ನಗೆ ಬೀರಿ, ಕೈ ಕುಲುಕಿ ಮರೆಯಾಗಿಬಿಡುತ್ತವೆ. ದಟ್ಟ ಜನರ ನಡುವೆ ಚಾಣಾಕ್ಷತನದಿಂದ ವ್ಯಾಲೆಟ್ ಎಗರಿಸಿದ ಧಾರಾವಿ ಸ್ಲಮ್ಮಿನ ಹುಡುಗರ ಮುಖದಲ್ಲಿ ಕಂಡೂ ಕಾಣದ ಬಡತನದ ಗೆರೆಗಳನ್ನು ಗುರುತಿಸಿದ ಉಮೇದು ಬರುತ್ತದೆ. ಯಾವುದೋ ಹಳ್ಳಿಯಿಂದ ಬಂದು ವ್ಯಾಲೆಟ್ ಕಳೆದುಕೊಂಡು ಕಂಗಾಲಾದ ವ್ಯಕ್ತಿಯನ್ನು ನೋಡಿದಾಗ ಮಾತ್ರ ಕಳಕಳಿಗಿಂತ ಹೆಚ್ಚು ಮೂರ್ಖತನ ಎಂದು ಎದ್ದುತೋರುತ್ತದೆ ಶಿಶಿರನಿಗೆ. ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಕೆದರಿದ ಕೂದಲನ್ನು ಸರಿಪಡಿಸಿಕೊಳ್ಳುತ್ತ ಬಂದು ಕೈಯಲ್ಲಿರುವ ಅಡ್ರೆಸ್ ತಲುಪಿಬಿಟ್ಟರೆ ಈ ದಿನದ ಯಶಸ್ಸು ಸಿಕ್ಕ ಸಂತಸ ಎಂಬ ಗೊಂದಲದಲ್ಲಿರುವ ಕಾಲೇಜು ಹುಡುಗರ ಕಣ್ಣುಗಳಲ್ಲಿ ಮುಂಬೈ ಹುಟ್ಟಿಸಿದ ತಾಜಾ ಭಯ ಕಾಣುತ್ತದೆ. ಮತ್ಯಾವುದೋ ಜಿಲ್ಲೆಯಿಂದ ಮಗನೊಂದಿಗೆ ನಾಲ್ಕು ದಿನ ಇದ್ದು ಹೋಗಲು ಬಂದ ವೃದ್ಧೆಯೊಬ್ಬಳು ನೆರೆದವರ ನಡುವಿನಿಂದ ಬರುವ ತನ್ನ ಮಗನಿಗಾಗಿ ಕಾಯುವ ತವಕ ತಲ್ಲಣಗಳು ಅರ್ಥವಾಗುತ್ತದೆ.
ಊರಲ್ಲಿ ಸೀರೆ ತೊಡದೆ ಬರೀ ಲಂಗ ಮತ್ತು ಕುಪ್ಪಸ ತೊಟ್ಟು ಊರೂರು ಸಂತೆಯಲ್ಲಿ ಕಾಣುವ ಗಾಂಧಮ್ಮನಂತಹ ಹೆಂಗಸನ್ನು ಆಡಿಕೊಳ್ಳುವ ಜನ ಇಲ್ಲಿ ಎಂಥೆಂಥ ಬಟ್ಟೆ ತೊಟ್ಟವರನ್ನೂ ಸಲೀಸಾಗಿ ಅವರವರ ಪಾಡಿಗೆ ಬಿಟ್ಟು ತಾವಾಯ್ತು ತಮ್ಮ ಬದುಕಾಯ್ತು ಎಂದು ಉಳಿಯುವುದು ನಿಶ್ಚಲ ಅನಿಸುತ್ತದೆ. ಯಾರಿಗೂ ಯಾರ ಬಟ್ಟೆಯ ಕುರಿತು ತಕರಾರಿಲ್ಲ. ಯಾರು ಹೇಗೆ ಬೇಕಾದರೂ ಇದ್ದು ಬಿಡಬಹುದಾದ ಸಾರ್ವಜನಿಕ ಒಪ್ಪಂದವೊಂದು ತಾನಾಗಿಯೇ ಹುಟ್ಟಿಕೊಂಡಿದೆ. ಆಗಷ್ಟೇ ರೈಲಿಗೆ ಹತ್ತಿದ ಕನ್ನಡಿ ಮಾರುವವಳ ನೂರಾರು ಕನ್ನಡಿಯಲ್ಲಿ ತನ್ನದೇ ನೂರು ಮುಖ ಕಂಡು ಎಷ್ಟೋ ದಿನದ ಭ್ರಮಾಲೋಕವೊಂದು ಈಗಷ್ಟೇ ಕಳಚಿಬಿದ್ದಂತಾಗಿ ಹೋಗುತ್ತದೆ ಶಿಶಿರನಿಗೆ.
ಯಾವ ಯಾವುದೋ ನಿರ್ಜನ ರಾತ್ರಿಗಳಲ್ಲಿ, ಶೂಟಿಂಗ್ ಸ್ಥಳದ ಮಗ್ಗುಲಲ್ಲಿ, ಗೊರಕೆ ಹೊಡೆಯುವ ಹೆಂಡತಿ ಉಳಿಸಿದ ಮಂಚದ ಒಂದು ಭಾಗದ ಜಾಗದಲ್ಲಿ ಹೀಗೆ ಎಲ್ಲೆಂದರಲ್ಲಿ ಭ್ರಮಾಲೋಕವೊಂದಕ್ಕೆ ಜಾರಿ, ತನ್ನನ್ನು ತಾನು ಹೀರೋ ಆಗಿ, ಖ್ಯಾತ ನಿರ್ದೇಶಕ ಆಗಿ, ಕ್ಯಾಮೆರಾಮ್ಯಾನ್ ಆಗಿ ಕಲ್ಪಿಸಿಕೊಳ್ಳುವ ಶಿಶಿರನಿಗೆ ಯಕಃಶ್ಚಿತ್ ಈ ನೂರು ರೂಪಾಯಿ ಕನ್ನಡಿ ಮಾತ್ರ ಒಂದೇ ಬಾರಿಗೆ ತನ್ನನ್ನು ಅತೀ ಸಾಮಾನ್ಯ ಮನುಷ್ಯನಾಗಿ ತೋರಿಸುತ್ತದೆ ಎಂಬುದು ತನಗೇ ತಾನೇ ಹೇಳಿಕೊಳ್ಳುವ ತೀರಾ ಖಾಸಗಿ ದೂರು ಅದು.
*****
ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಾಗಲೋ ಯುಗಾದಿ ಹಬ್ಬದ ದಿನ ಬಂದಾಗಲೋ ಕಣ್ಣಿನ ದವಾಖಾನೆಗೆ ಕರೆದೊಯ್ದು ಹೊಚ್ಚ ಹೊಸ ಕನ್ನಡಕ ಕೊಡಿಸಿ “ಇದಾದ್ರೂ ಜ್ವಾಕಿ ಅಮ್ಮಾ, ಮನೆತುಂಬಾ ನಿನ್ನ ಹಾಳಾದ ಕನ್ನಡಕಗಳೇ ಇವೆ, ಅವೆಲ್ಲಾ ಸೇರಿಸಿದ್ರೆ ಒಂದು ಚಸ್ಮಾ ಅಂಗಡಿನೇ ತೆಗೀಬಹುದು” ಅಂದಾಗ ಮಾತ್ರ ಎಲ್ಲೋ ಒಂದು ಕಡೆ ಮಕ್ಕಳಿಗೆ ಭಾರ ಆದ್ನೇನೋ ಅನ್ನಿಸ್ತಿತ್ತು ಅಮ್ಮಕ್ಕಗೆ. ಅದೆಲ್ಲಾ ಹೇಳಿದಮೇಲೂ ಅಮ್ಮಕ್ಕನ ಕನ್ನಡಕ ಒಂದು ಗಾಜು ಒಡೆದುಹೋಗಿತ್ತು, ಆದರೆ ಈ ಬಾರಿ ಅಮ್ಮಕ್ಕ ಮಗನಿಗೆ ಫೋನ್ ಮಾಡಿ ಹೇಳುವ ಮುನ್ನವೇ ಗಾಂಧಾರಿ “ನಾನೇ ಕೊಡಿಸ್ತೀನಿ ಬಿಡು ಅಮ್ಮಕ್ಕ” ಎಂದು ಜೋರು ಮಾಡಿದಾಗ ಮಾತ್ರ ಅಮ್ಮಕ್ಕನೂ ಸುಮ್ಮನಾಗಿದ್ದಳು. ಐದತ್ತು ವರುಷಕ್ಕೆ ದೊಡ್ಡವಳೋ ಚಿಕ್ಕವಳೋ ಇರಬಹುದಾದ ಗಾಂಧಾರಿ ಅಮ್ಮಕ್ಕನನ್ನು ಏಕವಚನದಲ್ಲಿ ಕರೆಯುವುದು ರೂಢಿ ಆಗಿ ಹೋಗಿತ್ತು.
ಈಗ ಬೆಳಗಾಗಿದ್ದೇ ಸಾಕಷ್ಟು ಕೆಲಸ ಅಮ್ಮಕ್ಕನ ತಲೆಯ ಮೇಲಿತ್ತು. ನಿನ್ನೆಯಷ್ಟೇ ಶಿವಯ್ಯ ಸ್ವಾಮಿಗಳ ಮನೆಗೆ ಹೋಗಿ “ನಾಳೆ ಸತ್ಯನಾರಾಯಣ ಪೂಜೆ ಇದೆ ನೀವು ಬರ್ಬೇಕು” ಎಂದು ಕರೆದು ಬಂದಿದ್ದಳು. ಬೆಳಗಾದರೆ ಕೊಟ್ಟಿಗೆಯಲ್ಲಿ ಕರುವಿಗೆ ಹುಲ್ಲು ತಂದುಹಾಕಬೇಕು, ಸತ್ಯನಾರಾಯಣನ ಫೋಟೋ ಒರೆಸಿ ಇಡಬೇಕು, ನಾಲಕ್ಕು ಬಾಳೆ ದಿಂಡು, ಅಂಗಳದ ತುದಿಗಿರುವ ಜಾಜಿ ಮಲ್ಲಿಗೆ ಹೂವಿನ ಮಾಲೆ ಮಾಡಬೇಕು, ಮನೆಯನ್ನು ಮಟ್ಟಸವಾಗಿ ಕಸ ಗುಡಿಸಿ, ದೇವರ ಕೋಣೆ ತೊಳೆದು, ಪೂಜೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಕಿರಾಣಿ ಅಂಗಡಿಯಿಂದ ತಂದಿಟ್ಟುಕೊಳ್ಳಬೇಕು, ನಾಲ್ಕು ಜನ ಮುತ್ತೈದೆಯರನ್ನು ಕರೆದು ಊಟ ಹಾಕಬೇಕು, ಅಭಿಷೇಕ, ಪ್ರಸಾದ ತಯಾರು ಮಾಡಬೇಕು. ಒಮ್ಮೆಲೇ ಕೆಲಸದ ಪಟ್ಟಿ ಅಮ್ಮಕ್ಕನ ತಲೆಯಲ್ಲಿ ಓಡಾಡಿದ್ದೇ ತಲೆ ಚಿಟ್ಟು ಹಿಡಿದಂತಾಯ್ತು. ಪಕ್ಕದ ಮನೆಯ ಸಾವಿತ್ರಮ್ಮರ ಮಗಳಾದ ಸಣ್ಣ ಪೋರಿ ಜಾನ್ವಿಗೆ ಕರೆದು “ಅಲ್ಲೆಲ್ಲಾದ್ರೂ ಗಾಂಧಾರಿ ಕಂಡ್ರೆ ಕರ್ಕೊಂಡು ಬಾರೆ ಪುಟ್ಟಿ, ಬಂದ್ಮೇಲೆ ಏನಾದ್ರೂ ತಿನ್ನಕ್ಕೆ ಕೊಡ್ತೀನಿ ನಿಂಗೆ” ಎಂದು ಮುದ್ದು ಮಾಡುವ ದನಿಯಲ್ಲಿ ಹೇಳಿದಳು. ಅಮ್ಮಕ್ಕ ಏನಾದ್ರೂ ಕೊಡ್ತೀನಿ ಅಂದಿದ್ದೇ ತಡ “ಆಯ್ತು ಅಮ್ಮಕ್ಕಜ್ಜಿ” ಎಂದು ಚಾವಿ ತಿರುವಿದಾಗ ಓಡುವ ಮಕ್ಕಳ ಆಟಿಕೆಯ ಗೊಂಬೆಯಂತೆ ಮನೆಯಿಂದ ರಸ್ತೆಗಿಳಿದು ಓಡೋಡಿ ಊರೊಳಗೆ ಮರೆಯಾದಳು ಜಾನ್ವಿ.
ಅಮ್ಮಕ್ಕನ ಮನೆಗೆಲಸ ಒಂದು ಹಂತಕ್ಕೆ ಬಂದು ನಿಂತಿತ್ತು. ತಾಸಾದಾರೂ ಗಾಂಧಾರಿಯ ಸುಳಿವು ಇಲ್ಲ; ಅತ್ತ ಕರೆದುಕೊಂಡು ಬರ್ತೀನಿ ಅಂತ ಹೋದ ಜಾನ್ವಿ ಪುಟ್ಟಿಯ ಸುಳಿವೂ ಇಲ್ಲ. “ಇದೊಳ್ಳೆ ಕತೆಯಾತಲ್ಲ” ಎಂದಳು ಅಮ್ಮಕ್ಕ. ಆಗಲೇ ಸತ್ಯನಾರಾಯಣ ಪೂಜೆಗೆ ಶಿವಯ್ಯ ಸ್ವಾಮಿಗಳ ಆಗಮನ ಆಗಿತ್ತು. ನೆರೆಹೊರೆಯ ಒಂದಿಷ್ಟು ಹೆಂಗಸರು ಅಡುಗೆ ಮನೆಯಲ್ಲಿ ಅಡುಗೆ ತಯಾರಿ ನಡೆಸಿದ್ದರು. ಉಳಿದವರು ತಮ್ಮ ತಮ್ಮ ವಸ್ತ್ರ ಒಡವೆಗಳ ವಿಚಾರ ವಿನಿಮಯ ಮಾಡಿಕೊಂಡು ಕುಳಿತಿದ್ದರು “ಇವ್ಳೊಬ್ಳು ಗಾಂಧಾರಿ ಎಲ್ಲೋದ್ಲು ನಾನೇ ನೋಡ್ಕೊಂಡು ಬರ್ತೀನಿ ಇರಿ” ಎಂದವಳೇ ಕನ್ನಡಕ ಹಾಕಿಕೊಂಡು ರಸ್ತೆಗಿಳಿದಳು ಅಮ್ಮಕ್ಕ. ಎಲ್ಲರೂ ಓಡಾಡುವ ಆ ದಾರಿಯಲ್ಲಿ ಕೇವಲ ಗಾಂಧಾರಿಗಾಗಿ ಹುಡುಕ ಹೊರಟ ಅಮ್ಮಕ್ಕಗೆ ಹಠಾತ್ತನೆ ಅವಳಿಲ್ಲದ ನಾನೇಕೆ ಇಷ್ಟೊಂದು ಚಡಪಡಿಸುತ್ತೇನೆ ಅನ್ನುವುದು ಗೊಂದಲವಾಯಿತು. ಅವಳೊಬ್ಬಳು ಇಲ್ಲದೆ ಹೋದರೆ ಅಮ್ಮಕ್ಕನಿಗೆ ಕೈಕಾಲೇ ಆಡುವುದಿಲ್ಲ. ಹೆಚ್ಚುಕಡಿಮೆ ತನಗಿಂತಲೂ ಒಂದಿಷ್ಟು ವರ್ಷಕ್ಕೆ ದೊಡ್ಡವಳು ಇರಬಹುದು ಏನೋ! ಆಗಷ್ಟೇ ಅಮ್ಮಕ್ಕ ಮದುವೆಯಾಗಿ ಗಂಡನ ಮನೆಗೆ ಬಂದ ಹೊಸತರಲ್ಲಿ. ಜಿಲೇಬಿ, ಮಂಡಕ್ಕಿ, ಖಾರಾ ಬೂಂದಿ, ಲಾಡು ಅಂತೆಲ್ಲಾ ಕ್ಯಾರಿಬ್ಯಾಗ್ನಲ್ಲಿ ಕಟ್ಟಿಕೊಂಡು ಮನೆತನಕ ಬಂದು ಕೊಟ್ಟು ಹೋಗೋಳು. ಊರಲ್ಲಿ ಯಾರದೇ ಮದುವೆ ನಡೆದು ಯಾವ ಊರಿನ ಹುಡುಗಿಯೇ ಈ ಊರಿಗೆ ಬರಲಿ ಗಾಂಧಾರಿ ರುಚಿಕರವಾದ ತಿನಿಸು ತೆಗೆದುಕೊಂಡು ಹೋಗಿ ಶುಭಾಶಯ ಕೋರುವಳು.
ಎಷ್ಟೋ ದಿನಗಳ ಕಾಲ ಅಮ್ಮಕ್ಕ ಗಾಂಧಾರಿ ಈ ಮನೆಯ ಸಂಬಂಧಿಕಳೇ ಅಂದುಕೊಂಡಿದ್ದಳು, ಅದೆಲ್ಲಕ್ಕಿಂತ ಹೆಚ್ಚಾಗಿ ಗಾಂಧಾರಿ ತೊಡುತ್ತಿದ್ದ ಕೆಂಪು ಬಣ್ಣದ ಲಂಗ, ಮೇಲೊಂದು ಹಸಿರು ಕುಪ್ಪಸ, ಗಂಟು ಹಾಕಿದ ತುರುಬಿಗೆ ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ಹಳದಿ ಬಣ್ಣ ಮಾಸಿದ ರಿಬ್ಬನ್. ಈ ವಿಚಿತ್ರ ಉಡುಗೆ ತೊಡುಗೆ ಧರಿಸುವ ಗಾಂಧಾರಿಯನ್ನು ನೋಡಿದಾಗಲೆಲ್ಲ ಅಮ್ಮಕ್ಕನಿಗೆ ‘ಬುದ್ಧಿಮಾಂದ್ಯ ಇರುವ ಹೆಂಗಸೇನೋ’ ಅನ್ನಿಸುತಿತ್ತು. ಆದರೆ ಊರೂರು ಸಂತೆಯಲ್ಲಿ ಜಿಲೇಬಿ, ಪಾವು, ಖಾರಾ ಬೂಂದಿ, ಲಾಡು, ಖಾರಾ ಸೇವು ಇಟ್ಟುಕೊಂಡು ಮಾರಾಟ ಮಾಡುವವಳನ್ನು ನೋಡಿದಾಗಲೇ ಅಮ್ಮಕ್ಕಗೆ ಗಾಂಧಾರಿ ನಮ್ಮೆಲ್ಲರಿಗಿಂತ ಬುದ್ಧಿವಂತಳು ಅಂತ ಗೊತ್ತಾಗಿದ್ದು. ಶಿಶಿರನಿಗೆ ಆಗ ಹತ್ತು ವರುಷ ಇರಬಹುದೇನೋ, ಅವನ ಅಪ್ಪ ಶಾಂತಣ್ಣ ಸಾತಾರದಲ್ಲಿ ಸಾವ್ಕಾರ್ ಒಬ್ಬರ ಟ್ರಕ್ಕು ಓಡಿಸುತ್ತಿದ್ದವನು ಇದ್ದಕ್ಕಿದ್ದಂತೆ ಅದೊಂದು ದಿನ ಸತ್ತುಹೋದ ಸುದ್ದಿ ಬಂದಿತ್ತು. ಇಂತಹಾ ಅಚಾನಕ್ಕಾಗಿ ಆದ ಆಘಾತಕಾರಿ ಅಂಶ ಅಮ್ಮಕ್ಕನನ್ನು ಬಹಳಷ್ಟು ದಿನ ಹಾಸಿಗೆ ಹಿಡಿಯುವಂತೆ ಮಾಡಿತ್ತು. ಒಂದು ಸಮಯದಲ್ಲಿ ಉದ್ದ ಜಡೆಯ, ಹಣೆಯ ಮೇಲೆ ಇಷ್ಟಗಲದ ಕುಂಕುಮ ಬೊಟ್ಟು ಇಟ್ಟುಕೊಂಡು, ಕೆಂಪು ಹಸಿರು, ಹಳದಿ, ನೀಲಿ ಬಣ್ಣದ ಸೀರೆ ತೊಟ್ಟರೆ ಸಾಕ್ಷಾತ್ ನವರಾತ್ರಿ ಉತ್ಸವದ ಊರ ದೇವತೆಯಂತೆ ಕಾಣುತ್ತಿದ್ದ ಅಮ್ಮಕ್ಕನ ಹಠಾತ್ ಆ ಬದಲಾವಣೆ ಗಾಂಧಾರಿಗೆ ಎಲ್ಲಿಲ್ಲದ ಬೇಸರ ತಂದಿತ್ತು. ಸದಾ ಜಿಡ್ಡು ಹಿಡಿದು ಮಲಗಿರುತ್ತಿದ್ದ ಅಮ್ಮಕ್ಕನ ತಲೆ ಸವರಿ “ಆಗಿದ್ದ ಆಗೋಯ್ತು, ನಾನ ಜೊತೆ ಇರ್ತೀನಿ ಬಿಡು ಅಮ್ಮಕ್ಕ” ಎಂದು ಹೇಳುತ್ತಿದ್ದಳು ಗಾಂಧಾರಿ. ಅಂದಿನಿಂದ ಅಮ್ಮಕ್ಕನ ಜೊತೆಗಿದ್ದು ಧೈರ್ಯ ತುಂಬಿದವಳು, ಕೈಕೈಯಲ್ಲಿ ಕೆಲಸ ಮಾಡಿದವಳು, ಊರೂರು ಅಲೆದು ಬಂದರೂ ರಾತ್ರಿಯ ಹೊತ್ತು ಅಡುಗೆ ಮಾಡಿ ಹಾಕಿದವಳು, ಪ್ರತಿ ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಶಿಶಿರನಿಗೆ “ಹಿಂಗೆ ಮಾಡು ಮಗ, ಹಂಗಲ್ಲ ಹೀಂಗೆ” ಎಂದು ಕಾಲು ಕುಣಿಸಿ ಅಭಿನಯ ಮಾಡಿ ಯಾವುದೋ ಪುಟ್ಟ ಏಕಪಾತ್ರಾಭಿನಯದ ಸ್ಕಿಟ್ ಹೇಳಿಕೊಟ್ಟವಳು. ಲೋಕದ ಕಣ್ಣಲ್ಲಿ ಹುಚ್ಚಿಯಾಗಿರುವ ಈ ಗಾಂಧಾರಿ ಎಲ್ಲೆಲ್ಲೋ ಗಮನಿಸಿದ ವಿಷಯ ತೆಗೆದುಕೊಂಡು ಒಂದು ಸಣ್ಣ ನಾಟಕವಾಗಿ, ದೃಶ್ಯಗಳಾಗಿ ಮಾರ್ಪಾಡು ಮಾಡುವ ಕಲೆ ಹೇಗೆ ಬಂದಿರಬಹುದು? ಎಂಬುದು ಅಮ್ಮಕ್ಕನಿಗೂ ತಿಳಿಯದ ವಿಷಯ.
ಕುಪ್ಪಸದಲ್ಲಿ ಇಟ್ಟ ಸಣ್ಣದಾದ ಲೆದರ್ ಪಾಕೇಟ್ ಒಂದರಿಂದ ಎರಡೇ ಬೆರಳಲ್ಲಿ ತೆಗೆದುಕೊಂಡು ಅಂಗೈಯಲ್ಲಿ ಮಿದ್ದಿದ ತಂಬಾಕು ಒಂದು ವಸಡಿಗೆ ಹಾಕಿಕೊಂಡಳೆಂದರೆ ಮುಗೀತು ಅವಳೊಳಗೆ ನೂರು ಕಥೆಗಳು ಹುಟ್ಟಿಕೊಳ್ಳುತ್ತಿದ್ದವು. ಶಾಲಾ ವಾರ್ಷಿಕೋತ್ಸವದ ಹಿಂದಿನ ದಿನಗಳಲ್ಲಿ ಶಿಶಿರನ ಅನೇಕ ಗೆಳೆಯರು ಬಂದು “ನಮ್ಗೂ ಸ್ಕಿಟ್ ಹೇಳ್ಕೋಡೆ ಗಾಂಧಮ್ಮ ಪ್ಲೀಸ್” ಎನ್ನುತ್ತಿದ್ದರು. ಹಾಗೆ ಯಾವುದೇ ಬೇಸರ ಇಲ್ಲದೆ ಎಲ್ಲಾ ಮಕ್ಕಳಿಗೂ ಒಂದೊಂದು ಸ್ಕಿಟ್ ಹೇಳಿಕೊಟ್ಟು ಕಳುಹಿಸುತ್ತಿದ್ದಳು, ಶಾಲಾ ವಾರ್ಷಿಕೋತ್ಸವದ ದಿನ ಮುಂದಿನ ಸೀಟಿನಲ್ಲಿ ತಾನೇ ಹೇಳಿಕೊಟ್ಟ ಸ್ಕಿಟ್ಟನ್ನು ತಾನೇ ನೋಡಿ ಸಂಭ್ರಮ ಪಡುತ್ತಿದ್ದಳು. ಪಕ್ಕದಲಿ ಕುಳಿತ ಅಮ್ಮಕ್ಕನಿಗೆ “ಆ ಗೌಡರ ಪೋರ ಎಷ್ಟು ಚೆಂದ ಪಾತ್ರ ಪ್ರವೇಶ ಮಾಡದ್ನಲ್ವೇನೆ ಅಮ್ಮಕ್ಕ, ಪಾತ್ರ ಒಳಗಿಂದ್ಲೇ ಹುಟ್ಟಬೇಕು ಆಗ ಮಾತ್ರ ಸಾಧ್ಯ” ಎನ್ನುತಿದ್ದಳು. ಪ್ರೇಕ್ಷಕರ ಚಪ್ಪಾಳೆ ಸಿಳ್ಳೆಯ ಖುಷಿಗೆ ಮೈಮರೆತ ಪುಟ್ಟ ಪೋರಿಯ ಹಾಗೆ ಎದ್ದು ನಿಂತು ಬೆರಳು ಬಾಯಿಗೆ ಇಟ್ಟುಕೊಂಡು ಸಿಳ್ಳೆ ಹಾಕುತ್ತಿದ್ದಳು. ಕಾರ್ಯಕ್ರಮದ ಕೊನೆಯಲ್ಲಿ ಮರಳಿ ರಾತ್ರಿ ಮನೆಗೆ ಬರುವಾಗ “ಎಷ್ಟು ಚೆಂದ ಮಾಡ್ದಲ್ಲೋ ಶಿಶೂ” ಎಂದು ಅಕ್ಕರೆಯ ಮಾತು ಆಡುತ್ತಿದ್ದಳು. ಎಷ್ಟೋ ಸಲ ಅಮ್ಮಕ್ಕಗೆ ಮಹಾಭಾರತದ ಗಾಂಧಾರಿಯ ಪುನರ್ಜನ್ಮವಾಗಿ ಮತ್ತದೇ ಪಾತ್ರವನ್ನು ಈ ಗಾಂಧಾರಿ ನಿಭಾಯಿಸುತಿದ್ದಾಳೇನೋ ಅನ್ನಿಸುತ್ತಿತ್ತು. ಅಂತಹಾ ಗಾಂಧಾರಿ ಇದ್ದಕ್ಕಿದ್ದಂತೆ ಎಲ್ಲೋದ್ಲು ಅನ್ನೋದು ಚಿಂತೆಯಾಗಿತ್ತು ಅಮ್ಮಕ್ಕಳಿಗೆ.
ಮಲ್ಲಿಕಾರ್ಜುನ ದೇವಸ್ಥಾನದ ಹಿಂಭಾಗದಲ್ಲಿ ಇರುವ ಗಾಂಧಾರಿಯ ಸಣ್ಣ ತಗಡಿನ ಶೀಟಿನಿಂದ ಮಾಡಿದ ಮನೆಯ ಕಡೆಗೆ ತಿರುಗಬೇಕು ಅನ್ನುವಾಗ ಜಾನ್ವಿ ಪುಟ್ಟಿ ಉಳಿದ ಮಕ್ಕಳೊಂದಿಗೆ ಕುಂಟೆಬಿಲ್ಲೆ ಆಡುತಿದ್ದದ್ದು ಕಂಡಿತು. ಹತ್ತಿರ ಹೋಗಿ “ಜಾನ್ವಿ ಪುಟ್ಟಿ, ಗಾಂಧಾರಿ ಸಿಕ್ಕಿದ್ಲೇನೆ” ಎಂದು ಕೇಳಿದಳು. ಗಾಂಧಾರಿಯ ಮನೆಯವರೆಗೂ ಹೋಗಿ ಮುಚ್ಚಿದ ಬಾಗಿಲು ಕಂಡು ಮರಳಿ ಬರುವಾಗ ಆಟದಲ್ಲಿ ಮೈಮರೆತಿದ್ದಳು ಜಾನ್ವಿ. ಈಗ ಹಠಾತ್ತನೆ ಅಮ್ಮಕ್ಕ ಇಲ್ಲಿವರೆಗೂ ಬಂದಿದ್ದು ನೋಡಿ ಮುಜುಗರ ಪಟ್ಟಂತೆ ತಲೆ ಕೆರೆದುಕೊಂಡು “ಇಲ್ಲ ಅಜ್ಜಿ, ಅವ್ಳ ಮನೆ ಬಾಗ್ಲು ಮುಚ್ಚಿದೆ” ಎಂದು ವರದಿ ಒಪ್ಪಿಸಿದಳು. ನಿನ್ನೆಯ ತಡರಾತ್ರಿಯವರೆಗೂ ಜೊತೆಗಿದ್ದು “ಬೆಳಿಗ್ಗೆ ಬೇಗ ಬಂದ್ಬುಡ್ತೀನಿ ಬಿಡೇ ಅಮ್ಮಕ್ಕ” ಎಂದು ಹೇಳಿದ ಗಾಂಧಾರಿ ಎಲ್ಲೋದ್ಲೋ ಎನ್ನುವುದೇ ತಿಳಿಯದೇ ಮರಳಿ ಮನೆಗೆ ಹೊರಟಳು ಅಮ್ಮಕ್ಕ.
****
“ಆ ಸಂತೆ ಗಾಂಧಾರಿಯನ್ನ ಮದ್ವೆ ಆಗ್ತಿ ಏನೋ?” ಎಂದು ತಮ್ಮ ಪುಟ್ಟ ಪುಟ್ಟ ಅಳಿಯಂದಿರಿಗೆ ಅವರ ಅತ್ತೆಯರು ಕೇಳಿ ನಗುತ್ತಿದ್ದರು. ಅದೊಂದು ತೆರನಾದ ಖುಷಿ ಅವರಿಗೆ. ಆ ಹಾಲುಗಲ್ಲದ ಪೋರರು ನಾಚಿ ನೀರಾಗುವ ಕ್ಷಣವನ್ನು ಕಣ್ತುಂಬ ನೋಡಿ ಖುಷಿ ಪಡುವುದು ಅವರ ಎಂದಿನ ಚಾಳಿ. ಗಬಕ್ಕನೇ ಅಲ್ಲಿಂದ ಕಾಲ್ಕಿತ್ತು ಓಡುವ ಆ ಪುಟ್ಟ ಹುಡುಗರ ಮನಸಲ್ಲಿ ನಡು ವಯಸ್ಸಿನ ಗಾಂಧಾರಿಯ ಕೆಂಪು ಬಣ್ಣದ ಲಂಗ ಮತ್ತು ಹಸಿರು ಬಣ್ಣದ ಕುಪ್ಪಸ ನೆನಪಾಗುತ್ತದೆ. ಎಂದಾದರೂ ಸೀರೆ ಉಟ್ಟು ಬಂದ ಅವಳನ್ನು ಯಾರೂ ನೋಡಿಲ್ಲ. ಅವಳಿಗೆ ಸೀರೆ ಉಡುವುದು ಗೊತ್ತಿಲ್ಲವೋ ಅಥವಾ ಬೇಕು ಅಂತಲೇ ಹಾಗೆ ಇರುವಳೋ ಎಂದು ಯಾರೊಬ್ಬರಿಗೂ ಅರ್ಥವಾಗದ ವಿಷಯ ಅದು. ಖುದ್ದು ಅಮ್ಮಕ್ಕನೇ ಒಂದು ಬಾರಿ ತನ್ನ ಬೀರುವಿನಲ್ಲಿದ್ದ ಹೊಚ್ಚ ಹೊಸ ಸೀರೆ ಕೊಟ್ಟು “ಇದನ್ನ ತೊಟ್ಟುಕೋ ನೋಡೋಣ” ಎಂದದ್ದು ಇದೆ. ಅಮ್ಮಕ್ಕ ಕೊಟ್ಟ ತಿಳಿ ಹಳದಿ ಬಣ್ಣದ ಸೀರೆಯ ಘಳಿಗೆಯನ್ನೂ ಬಿಚ್ಚದೆ ತೊಡೆಯ ಮೇಲಿಟ್ಟು ಮಾತು ಮರೆಸಿದ್ದಳು ಗಾಂಧಾರಿ. ಊರಿನ ಜನರಾದರೂ ಅಷ್ಟೇ ಅವಳು ಇದ್ದಹಾಗೆ ಜನ ಸ್ವೀಕರಿಸಿದಂತೆ ಕಾಣುತ್ತಿತ್ತು. ಸಂತೆಯೊಳಗಿನ ಗಜಿಬಿಜಿಯಲ್ಲಿ ಯಾವುದೋ ಒಂದು ಮೂಲೆಯಲ್ಲಿ ನೆಲಕ್ಕೆ ತಾಡಪಾಲ ಹಾಸಿ ಅದರ ಮೇಲೆ ಜಿಲೇಬಿ, ಪಾವು, ಖಾರಾ ಸೇವಾ, ಖಾರಾ ಬೂಂದಿ, ಬಿಸ್ಕಟ್ಟಿನ ನಡುವೆ ಯಾರೋ ನಿಲ್ಲಿಸಿಹೋದ ಹಳೆಯ ಬಣ್ಣ ಮಾಸಿದ ಎತ್ತರದ ಗೊಂಬೆಯಂತೆ ಕಾಣುತ್ತಿದ್ದಳು. ಅವಳ ರೂಪ ಕುರೂಪ ಎಲ್ಲಾ ಕ್ಷಣಕಾಲ ಈ ಪೋರರ ಕಣ್ಮುಂದೆ ಪ್ರತ್ಯಕ್ಷವಾದಾಗ “ವ್ಯಾಕ್ ಥೂ” ಎಂದು ಮಕ್ಕಳು ಆಟದಲ್ಲಿ ಮೈಮರೆತು ಹೋಗುತ್ತಿದ್ದರು. ಆದರೆ ಆಗಿನ್ನೂ ಸ್ಕೂಲಿಗೆ ಹೋಗುವ ಶಿಶಿರನಿಗೆ ಮಾತ್ರ ಗಾಂಧಾರಿ ಎಂದರೆ ಬಲು ಪ್ರಾಣವಿತ್ತು. ಗಾಂಧಮ್ಮ ಅಂತಲೇ ಕರೆಯುತ್ತಿದ್ದ.
****
ಸತ್ಯನಾರಾಯಣನ ಪೂಜೆ ನೆರವೇರಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಊಟ ಉಪಚಾರ ಮಾಡಿ ಮುಗಿಸಿದ್ದ ಅಮ್ಮಕ್ಕಗೆ ಸಂಜೆಯಷ್ಟೊತ್ತಿಗೆ ಖಾಲಿಯಾದ ಮನೆಯಲ್ಲಿ ಒಬ್ಬಳೇ ಇರುವುದು ದುರ್ಲಭ ಅನಿಸಿತು. ಯಾವುದೇ ಊರ ಸಂತೆಗೆ ಹೋದರೂ ಕತ್ತಲಾಗುವ ಮುನ್ನ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಅಮ್ಮಕ್ಕನ ಮನೆಯ ಅಂಗಳದಲ್ಲಿ ಬರುತ್ತಿದ್ದವಳು ಗಾಂಧಾರಿ. ಅವಳ ನಡಿಗೆಯೇ ಒಂದು ರೀತಿಯಾದದ್ದು, ಇನ್ನೂ ಮನೆಯ ಯಾವುದೋ ಹೊರಭಾಗದಲ್ಲಿ ಬರುವವಳ ದಿಡಿಕ್ ದಿಡಿಕ್ ಎಂಬ ಹೆಜ್ಜೆ ಸದ್ದು ಮೊದಲು ಬಂದು ತಲುಪುತಿತ್ತು. “ಅದ್ಯಾಕೆ ನೆಲಕ್ಕೆ ಅಷ್ಟು ದಪ್ಪ್ ದಿಪ್ಪ್ ಹೆಜ್ಜೆ ಹಾಕ್ತೀಯೇ” ಎಂದು ಅಮ್ಮಕ್ಕ ಹಲವು ಬಾರಿ ಕೇಳಿದ್ದಾಳೆ. “ನಾನು ಹಾಂಗೆ ನಡೆಯೋದು ಅಮ್ಮಕ್ಕ” ಎಂದು ಲಕಲಕ ನಗುತಿದ್ದಳು ಗಾಂಧಾರಿ. ಆದರೆ ಇಂದೇಕೋ ಅವಳು ಬಾರದೇ ಇರುವುದರಿಂದ ಸಣ್ಣದೊಂದು ಬೇಸರ ತಂದಿತ್ತು. ನಿನ್ನೆ ತಾನೇನಾದರೂ ಬೈದುಬಿಟ್ಟೇನಾ? ಎಂದು ನೆನಪಿಸಿಕೊಂಡರು ಅಂತಹಾ ಯಾವುದೇ ಪ್ರಸಂಗ ನೆನಪಿಗೆ ಬರಲಿಲ್ಲ. ಹಿಂದೊಮ್ಮೆ “ಲಕ್ಷಣವಾಗಿ ಸೀರೆ ತೊಟ್ಕೋ ಅಂದ್ರೆ ಇದೇನೆ ಕತ್ತೆ ವಯಸ್ಸಾದರೂ ಇನ್ನೂ ಲಂಗ ತೊಟ್ಕೊಂಡೇ ಊರೂರು ತಿರುಗ್ತಿ” ಎಂದು ಬೈದಿದ್ದಕ್ಕೆ ಮೂರು ದಿನ ಅಮ್ಮಕ್ಕನ ಮನೆಗೆ ಬರುವುದನ್ನೇ ನಿಲ್ಲಿಸಿದ್ದಳು ಗಾಂಧಾರಿ. ಕೊನೆಗೊಮ್ಮೆ ಅಮ್ಮಕ್ಕನೇ ಅವಳ ಮನೆಗೆ ಹೋಗಿ “ಅಲ್ವೇ ಗಾಂಧಾರಿ ನನಗೆ ಇಷ್ಟು ಹೇಳೋದಕ್ಕೂ ಹಕ್ಕು ಇಲ್ವೇನೇ, ಆಯ್ತು ಬಿಡು ಇನ್ನೊಮ್ಮೆ ಏನು ಹೇಳೋದಿಲ್ಲ ಈಗ ಬಾ ಮನೆಗೆ ಹೋಗೋಣ” ಎಂದು ಮುಳುಮುಳು ಮುನಿಸು ಮಾಡಿ ಅಕ್ಕರೆಗೈದಾಗ ಮಾತ್ರ ಮತ್ತೆ ಯಥಾವತ್ತಾಗಿ ದಿನಾ ಮನೆಗೆ ಬರುತ್ತಿದ್ದಳು ಗಾಂಧಾರಿ. ಫೋನೆತ್ತಿಕೊಂಡು ಶಿಶಿರನಿಗೆ ಕರೆ ಮಾಡಿದರೆ “ನೀವು ಕರೆ ಮಾಡಿದ ಚಂದಾದಾರರು ಇನ್ನೊಂದು ಕರೆಯಲ್ಲಿ ನಿರತರಾಗಿದ್ದಾರೆ” ಎಂದು ಹುಡುಗಿಯೊಬ್ಬಳು ಹೇಳಿದ್ದು ಕೇಳಿ ಸುಮ್ಮನಾದಳು.
ಪಂಚಾಂಗ ತೆಗೆದು, ಶಿಶಿರ ಮತ್ತು ಅವನ ಹೆಂಡತಿಯ ಜನ್ಮ ಹೆಸರು, ಜನ್ಮ ದಿನ, ಹುಟ್ಟಿದ ಘಳಿಗೆ, ಎಲ್ಲವೂ ತಾಳೆ ಹಾಕಿ “ಸಂತಾನ ಭಾಗ್ಯ ಇದೆ, ಆದ್ರೆ ಒಂದೈದು ವಾರ ಮನೆ ದೇವರ ಹೆಸರಲ್ಲಿ ಉಪವಾಸ ಮಾಡು ಅಮ್ಮಕ್ಕ, ಕೊನೆಯ ವಾರ ಮಗ ಮತ್ತು ಸೊಸೆಗೆ ಕರೆಸಿಕೊಂಡು, ದೇವರ ದರ್ಶನ ಮಾಡ್ಕೊಂಡು ಬಾ” ಎಂದು ಹೇಳಿದ್ದ ಶಿವಯ್ಯ ಸ್ವಾಮಿಗಳ ಮಾತು ನೆನಪಿಗೆ ಬಂದದ್ದೆ ನಾಳೆ ಸೋಮವಾರದಿಂದ್ಲೇ ಶುರು ಮಾಡ್ಬೇಕು ಎಂದು ನಿರ್ಧರಿಸಿದಳು ಅಮ್ಮಕ್ಕ. ಇನ್ನೂ ಮಂಡಿಯಲ್ಲಿ ಗಡಿಯಾರದ ಮಳ್ಳಿನಂತೆ ಚಳಕ್ ಚಳಕ್ ಎಂದು ಹೊಡೆದುಕೊಳ್ಳುತ್ತಿದ್ದ ನೋವಿಗೆ ಅಮೃತಾಂಜನ್ ಹುಡುಕಿಕೊಂಡು ಬಂದು ಮೊಣಕಾಲಿನ ಸುತ್ತಲೂ ಮಸಾಜ್ ಮಾಡಿಕೊಂಡವಳಿಗೆ ತುಸು ನೋವು ಮಾಯ ಆದಂತನ್ನಿಸಿತು. ಗಾಂಧಾರಿ ಇದ್ದಿದ್ದರೆ ಈಗ ಏನೋ ಒಂದು ಸಂತೆಯೊಳಗಿನ ಹಕೀಕತ್ತು ಹೇಳಿಕೊಂಡು ಕೂತಿರುತ್ತಿದ್ದಳು. “ಅಯ್ಯ ಅಮ್ಮಕ್ಕ, ನಾನೇ ಮಸಾಜ್ ಮಾಡ್ತೀನಿ ತಾ, ಒಂದ್ನಿಮಿಷ ಎಲ್ಲಾ ಮಾಯ ಮಾಡಿಬಿಡ್ತೀನಿ, ಜಾದು ಜಾದು ಐತೆ ನನ್ನ ಕೈಯಲ್ಲಿ“ ಎಂದು ಅಮೃತಾಂಜನ್ ಹಚ್ಚಿರೋಳು ಎಂದು ಯೋಚಿಸಿದಳು ಅಮ್ಮಕ್ಕ. ಊರಿಗೆ ಊರೇ ಆಡಿಕೊಂಡು, ಅವಳನ್ನ ಹುಚ್ಚಿಯಂತೆ, ಈ ಸಮಾಜದಿಂದ ಬೇರ್ಪಟ್ಟ ಜೀವಿಯಂತೆ, ಆಡಿಕೊಳ್ಳುವ ಬಾಯಿಗೆ ಸದಾ ತುತ್ತಾಗುವ ಗಾಂಧಾರಿ, ತಮ್ಮ ಮನೆಗೆ ಮನಸಿಗೆ ಮಾತ್ರ ಹೇಗೆ ಆಪ್ತಳಾದಳು ಎಂದು ಯೋಚಿಸಿದಳು. “ಬಹುಶಃ ಮನುಷ್ಯನಿಗೆ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಮುಖ್ಯ, ಅದು ಹಿತಕರವಾದ ವಾತಾವರಣ ನಿರ್ಮಾಣ ಮಾಡುತ್ತದೆ” ಎಂದು ತಮಗೆ ತಾವೇ ಉತ್ತರ ಕೊಟ್ಟುಕೊಂಡರು. ಎಷ್ಟೋ ಬಾರಿ ಅಮ್ಮಕ್ಕಗೆ ಗಾಂಧಾರಿಯ ಅಂತಃಕರಣ ಕಂಡು “ತುಂಬಾ ಸ್ವಚ್ಛ ಮನಸ್ಸಿನ ಹೆಂಗ್ಸು ಕಣೆ ನೀನು” ಎಂದದ್ದು ಇದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಗಾಂಧಾರಿ “ಸುಮ್ಕಿರು ಅಮ್ಮಕ್ಕ ನೀನೊಳ್ಳೆ, ಆದ್ರೂ ಒಂದು ಮಾತು ಹೇಳ್ತೀನಿ ಅಮ್ಮಕ್ಕ. ಮನ್ಸ್ಯಾ ಹೊರಗಿಂದ ಸ್ವಚ್ಚ ಇರೋದಲ್ಲ ಒಳ್ಗಿಂದ್ಲೇ ಸ್ವಚ್ಚ ಇರಬೇಕು, ಅಂತರಂಗ ಶುದ್ಧ ಇದ್ರೆ ಆತ್ಮ ಪರಮಾತ್ಮ ಎಲ್ಲಾ ನಮ್ಮೊಳಗೆ ಇರ್ತೈತೇ ಏನಂತಿ?” ಎಂದು ಮಾತಾಡಿ ಮತ್ಯಾವುದೋ ಬೇರೆ ಮಾತಿನಲ್ಲಿ ತೊಡಗುತ್ತಿದ್ದಳು. ಇದೆಲ್ಲಾ ಮಾತು ನೆನಪಾಗಿ ಈಗ ಯಾಕೋ ಒಂಥರಾ ದುಃಖ ಅನ್ನಿಸಿತು ಅಮ್ಮಕ್ಕಗೆ.
****
ಮೂರು ದಿನವಾದರೂ ಗಾಂಧಾರಿಯ ಬರುವಿಕೆಗಾಗಿ ಕಾಯುತ್ತಾ ಕುಳಿತ ಅಮ್ಮಕ್ಕಗೆ ನಿರಾಶೆಯೇ ಎದುರಾಗಿತ್ತು. ಮಾತಿಲ್ಲದ ಕಥೆ ಇಲ್ಲದ ಗಾಂಧಾರಿಯ ದಿಡಕ್ಕ್ ದಿಡಕ್ಕ್ ಹೆಜ್ಜೆ ಸದ್ದಿಲ್ಲದೆ ಯಾವುದೋ ಸ್ಮಶಾನ ಮೌನ ತಬ್ಬಿತ್ತು ಮನೆಯಲ್ಲಿ. ಅದು ಅಮ್ಮಕ್ಕಳಿಗೆ ಮಾತ್ರ ಗಮನಕ್ಕೆ ಬಂದಿತ್ತು. ಒಬ್ಬರನ್ನು ಹಚ್ಚಿಕೊಳ್ಳುವುದು ಎಂದರೆ ಅವರ ಅನುಪಸ್ಥಿತಿಯಲ್ಲಿ ಅವರನ್ನು ಸದಾ ನೆನೆಯುವುದೋ! ಅಥವಾ ಅವರ ಉಪಸ್ಥಿತಿಯಲ್ಲಿ ಅವರನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದೋ? ಎಂಬುದು ತಿಳಿಯದೇ ಗೊಂದಲವಾಯಿತು ಅಮ್ಮಕ್ಕಗೆ. ಶಿಶಿರನಿಗೆ ಕರೆ ಮಾಡಿ “ಮೂರು ದಿನಾ ಆಯ್ತೋ ಶಿಶು ಗಾಂಧಮ್ಮ ಕಾಣ್ತಾ ಇಲ್ಲ” ಎಂದು ಒಂದು ಥರದ ಬೇಸರದಲ್ಲೇ ತಿಳಿಸಿದಳು. ಬಾಲ್ಯದಲ್ಲಿ ಗಾಂಧಮ್ಮನ ಸುತ್ತವೇ ಇರುತ್ತಿದ್ದ ಶಿಶಿರ, ಗಾಂಧಮ್ಮ ಸ್ಕಿಟ್ ಚೆಂದ ಹೇಳಿಕೊಡ್ತಾಳೆ ಅಂತಿದ್ದ ಶಿಶಿರ, ಅವಳು ತರುತ್ತಿದ್ದ ಜಿಲೇಬಿಗಾಗಿ ಕಾಯುತ್ತಾ ಕೂತು ಅವಳು ಬಂದಾಗ ಖುಷಿ ಪಡುತ್ತಿದ್ದ ಶಿಶಿರ, ಯಾವುದೋ ಒಂದು ದಿನ ಮನೆಗೆ ಬಾರದ ಗಾಂಧಾರಿಯನ್ನ “ಗಾಂಧಮ್ಮನ ಕರ್ಕೊಂಡು ಬರ್ತೇನೆ ಅಮ್ಮ” ಎಂದು ಅವಳ ಮನೆ ಕಡೆಗೆ ಓಡುತ್ತಿದ್ದ ಶಿಶಿರ, “ನನ್ನಮ್ಮ ಗಾಂಧಮ್ಮ ನೀನಲ್ಲ” ಎಂದು ಎಷ್ಟೋ ಬಾರಿ ತನ್ನನ್ನ ಗೋಳು ಹೋಯ್ದುಕೊಳ್ಳುತ್ತಿದ್ದ ಶಿಶಿರ ಈಗ ನಿರ್ಭಾವುಕನಾಗಿ “ಎಲ್ಲೋ ಬೀಗರು, ಬಿಜ್ಜರು ಅಂತೆಲ್ಲೋ ಹೋಗಿರಬೇಕು ಬಿಡಮ್ಮ ವಾಪಸ್ ಬರ್ತಾಳೆ” ಎಂದು ಹಾರೈಕೆಯ ಮಾತಾಡಿದ್ದು ಯಾಕೋ ಸರಿ ಅನಿಸಲಿಲ್ಲ. ಗಾಂಧಮ್ಮ ಕಾಣ್ತಿಲ್ಲ ಎಂದಾಗ ಅವನಿಗೆ ಆಶ್ಚರ್ಯ ಆಗಬಹುದು, ಆತಂಕ ಆಗಬಹುದು, ಎಲ್ಲೋದ್ಲು ಅನ್ನೋ ದುಗುಡ ತುಂಬಿ ಮಾತಾಡಬಹುದು ಎಂದೆನಿಸಿದ್ದ ಅಮ್ಮಕ್ಕಗೆ ಅವನ ಮಾತಿನೊಳಗಿನ ಏರಿಳಿತದಲ್ಲಿ ಅಂತಹಾ ಯಾವ ಭಾವುಕತೆಯೂ ಕಾಣಲಿಲ್ಲವಾದಾಗ ಈ ಸಿನಿಮಾ ಗಿನಿಮಾ ಅಂತ ಹೋಗಿ ಇದೂ ಒಂಥರಾ ಯಾವುದೋ ಸಿನಿಮಾ ಕಥೆಯಷ್ಟೇ ಸಲೀಸಾಗಿ ಮಾತನಾಡಿದನೇನೋ ಅನ್ನಿಸಿತು ಅಮ್ಮಕ್ಕಗೆ. “ಒಂದು ಕಾಲದಲ್ಲಿ ಗಾಂಧಾರಿ ಅನ್ನೋ ಅನಾಮಿಕಳನ್ನ ಅಷ್ಟು ಹಚ್ಚಿಕೊಂಡ ಶಿಶಿರ ಅವಳಿಂದ ಕಳಚಿಕೊಂಡದ್ದು ಯಾವಾಗ? ಯಾವ ಸಿನಿಮಾದ ಯಾವ ಶೂಟಿಂಗಿನ ಸನ್ನಿವೇಶದಲ್ಲಿ? ಅಥವಾ ಮುಂಬೈನ ಯಾವ ಬೀದಿಯ ತಿರುವಿನಲ್ಲಿ?” ಯೋಚನಾಮಗ್ನಳಾದಳು.
ಆದ್ರೆ ಗಾಂಧಾರಿಗೆ ಬೀಗರು ಒತ್ತಟ್ಟಿಗಿರಲಿ ಹೆತ್ತವರು ಹೊತ್ತವರು ಯಾರು ಎಂಬುದೇ ಗೊತ್ತಿಲ್ಲ. ಯಾವ ಕಾಲದಲ್ಲಿ ಈ ಊರಿಗೆ ಬಂದ್ಲೋ? ಯಾರು ತಂದು ಸಾಕಿದರೋ? ಸಾಕಿದವರು ಎಲ್ಲೋದ್ರೋ? ಅದೆಲ್ಲಾ ಇರಲಿ ಅವಳ ಮದುವೆ ಕೂಡ ಯಾರೂ ಮಾಡಲಿಲ್ಲ. ಮದ್ವೆ ಆದ್ರೂ ಯಾರು ಆಗ್ತಿದ್ರು? ಬರೀ ಲಂಗ ತೊಟ್ಟು, ಕುಪ್ಪಸ ತೊಟ್ಟು, ಹಳೆ ರಿಬ್ಬನ್ ಹಾಕಿಕೊಂಡು, ಊರಿಂದ ಊರಿಗೆ ಸಂತೆಯಿಂದ ಸಂತೆಗೆ ಅಲೆಯುವ ಒಂಥರದ ವಿಚಿತ್ರವಾಗಿ ಬದುಕುವವಳನ್ನು. ಊರಿನ ಜನ ಅಷ್ಟೇ ಏಕೆ ಮಕ್ಕಳು ಸಹಿತ ಆಟವಾಡುವಾಗ ಕೆಲವು ಮಕ್ಕಳು ಒಬ್ಬ ಹುಡುಗನನ್ನ ಗುರಿಯಾಗಿಸಿಕೊಂಡು ಉಳಿದೆಲ್ಲರೂ ಒಟ್ಟಾಗಿ “ಗಾಂಧಾರಿಯ ಗಂಡ ಬಂದಾ ನೋಡು ಮೊಂಡ ಜಿಲೇಬಿ ಮಾಡೋ ಪುಂಡ ಸಂತೇಲಿ ಮಾರು ಬೋಂಡಾ ಯಾಮಾರಿದ್ರೆ ನಿನ್ನ ಪಿಂಡ” ಎಂದು ಹಾಡುತ್ತಾ ಅಣಕಿಸಿ ಚಪ್ಪಾಳೆ ಹೊಡೆದು ನಗುತ್ತಿದ್ದವು. ಆಗ ಉಳಿದ ಹುಡುಗ ಹುಡುಗಿಯರ ಸಾಮೂಹಿಕ ಗೇಲಿಗೆ ಒಳಗಾದ ಪುಟ್ಟ ಹುಡುಗ ತನ್ನಮ್ಮನ ಬಳಿ ಹೋಗಿ ಪಿಳಿಪಿಳಿ ಕಣ್ಣು ಬಿಡುತ್ತಾ “ಗಾಂಧಾರಿಯ ಗಂಡ ಅಂತಾರೆ ನಂಗೆ“ ಎಂದು ಅವಮಾನ ಆಯಿತೆಂದು ದೂರು ಸಲ್ಲಿಸುತ್ತಾ ಅಳುವೇ ಬಂದಂತೆ ಮುಖ ಮಾಡುತ್ತಿದ್ದ. ಮದುವೆಯಾಗದ ಕೆಲ ಹುಡುಗರನ್ನು ಅವರವರ ಆಸುಪಾಸಿನ ಜನರು “ಇವ್ನಿಗೆ ಯಾರು ಹೆಣ್ಣು ಕೊಡ್ತಾರೆ ಗಾಂಧಾರಿಯೇ ಗತಿ” ಎಂದು ಮಾತಿನ ಮಧ್ಯೆ ಗಾಂಧಾರಿಯನ್ನು ತಂದು ನಿಲ್ಲಿಸುತ್ತಿದ್ದರು. ಇನ್ನೂ ಸಂತೆಯಲ್ಲಿ ತನ್ನ ಕಿವಿಗೆ ಎಷ್ಟೋ ಸಲ ಎಷ್ಟು ಮಾತುಗಳು ಬಿದ್ದಿರಲಿಲ್ಲ! ಸಂತೆಯಲ್ಲಿ ಯಾವುದೋ ಪರಿಚಿತರ ಮಗುವೊಂದನ್ನು ಎತ್ತಿ ಆಡಿಸುವ ಮುದುಕನೊಬ್ಬ “ಸಂತೆ ಗಾಂಧಾರಿಯಂತೆ ಇದ್ದಾಳೆ ಬಿಡು” ಎಂದು ಆ ಮಗುವಿನ ತಾಯಿಗೆ ಅಣಕು ಮಾಡುವುದು. ಸಂತೆಯಲ್ಲಿ ಬಟ್ಟೆ ತೆಗೆದುಕೊಳ್ಳಲು ಬಂದವರು ತಮಗಿಷ್ಟವಾಗದ ಬಟ್ಟೆಯನ್ನು “ಸಂತೆ ಗಾಂಧಾರಿಯ ಸ್ಕರ್ಟು ಇದ್ದಂತಿದೆ” ಎಂದು ಹೇಳುವುದು. ಅವಳು ಹಾಕಿಕೊಳ್ಳುವ ಬಣ್ಣ ಮಾಸಿದ ರಿಬ್ಬನನ್ನು ಕಂಡವರು ಇನ್ಯಾರಿಗೋ “ಹೊಸಾ ರಿಬ್ಬನ್ ತಗೊಳ್ಳೇ, ಇದೇನಿದು ಗಾಂಧಾರಿ ರಿಬ್ಬನ್ ಆದಂಗಾಗಿದೆ” ಎನ್ನುವುದೆಲ್ಲ ಕೇಳಿಸಿಕೊಂಡು ಬಂದಿದ್ದು ಇದೆ. ಇಷ್ಟೆಲ್ಲಾ ಇರುವಾಗ ಯಾರೂ ಗತಿ ಇಲ್ಲದ ಗಾಂಧಾರಿ ಯಾರ ಮನೆಗೆ ಹೋಗಲು ಸಾಧ್ಯ ಎಂದು ಚಿಂತೆಗೀಡಾದಳು ಅಮ್ಮಕ್ಕ.
*****
ತಿಂಗಳಾಗಿ ಹೋಗಿತ್ತು ಗಾಂಧಾರಿ ತಿರುಗಿ ಬಾರದೆ. ಎಲ್ಲೋದ್ಲು.? ಏನಾದ್ಲು? ಎಂಬುದು ಯಾರಿಗೂ ತಿಳಿದಿರಲಿಲ್ಲ. ಅಲ್ಲೆಲ್ಲೋ ಸಾತಾರ ಪಟ್ಟಣದಲ್ಲಿ ದೊಡ್ಡದೊಂದು ತರಕಾರಿ ಅಂಗಡಿ ಇಟ್ಟುಕೊಂಡ್ಡಿದ್ದಾಳೆ, ಗಾಂಧಾರಿ ಮುಂಬೈ ಸೇರಿಕೊಂಡಿದ್ದಾಳಂತೆ, ಮೊನ್ನೆ ಮುಂಬೈನ ದಾದರ್ ಸ್ಟೇಷನ್ನಿನ ಬಳಿ ಹತ್ತಲು ಹೋಗಿ ಹೆಂಗಸೊಬ್ಬಳು ರೈಲು ಹಳಿಗೆ ಸಿಕ್ಕು ಸತ್ತೋದ್ಲು ಅಂತೆ ಅವಳ ಕಡೆಯವರು ಗುರುತು ಹಿಡಿಯಲಿ ಅಂತ ಅವಳು ತೊಟ್ಟುಕೊಳ್ಳುವ ಬಟ್ಟೆ ಬರೆ ಪೇಪರ್ ಅಲ್ಲಿ ಛಾಪಿಸಿದ್ದರು. ಅದರಲ್ಲಿ ಕೆಂಪು ಬಣ್ಣದ ಒಂದು ಲಂಗವೂ ಇತ್ತಂತೆ ಬಹುಶಃ ಗಾಂಧಾರಿಯೇ ಇರಬಹುದು. ರೆಡ್ ಲೈಟ್ ಏರಿಯಾದಲ್ಲಿ ಎಲ್ಲೋ ಅವಳು ಹಾದು ಹೋದಂತೆ ಕಂಡವರು ಕಂಡವರಿಗೆ ತಿಳಿಸಿದ್ದಾರಂತೆ, ಮುಂಬೈನ ಯಾವುದೋ ವೃದ್ಧಾಶ್ರಮದಲ್ಲಿ ವೃದ್ದರ ಸೇವೆ ಮಾಡ್ತಾ ಇದ್ದಾಳಂತೆ ಎಂದು ಊಹಾಪೋಹಗಳು ಕೇಳಿಬರುತ್ತಿದ್ದವೇ ವಿನಃ ಯಾವುದೂ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಅಮ್ಮಕ್ಕ ಶಿವಯ್ಯ ಸ್ವಾಮಿಗಳ ಹತ್ತಿರ ಹೋಗಿ “ಗಾಂಧಾರಿ ಬಗ್ಗೆ ನೋಡಿ ಚೂರು” ಎಂದಾಗ ಶಿವಯ್ಯ ಸ್ವಾಮಿಗಳು. “ಅವ್ಳ ಜೀವಕ್ಕೆ ಏನಾಗಿಲ್ಲ, ತಿರುಗಿ ಬಂದ್ರು ಬರಬಹುದು” ಎಂದು ಆಶಾಕಿರಣ ಮೂಡಿಸುವ ಮಾತಾಡಿದರು. ಏನು ಎತ್ತ ತಿಳಿಯದಾಗಿದ್ದ ಅಮ್ಮಕ್ಕಗೆ ಶಿವಯ್ಯ ಸ್ವಾಮಿಗಳ ಮಾತುಗಳು ಒಂದಿಷ್ಟಾದರೂ ಹಿತವಾದ ಅನುಭವ ಕೊಟ್ಟಿದ್ದವು. ಅಲ್ಲಿಂದ ತಿರುಗಿ ಬಂದವ್ಳೇ ಶಿಶಿರನಿಗೆ ಫೋನ್ ಮಾಡಿ “ಸೊಸೆನೂ ಕರ್ಕೊಂಡು ನೀನು ಬಂದ್ಬಿಡೋ ಶಿಶಿರ, ಮಕ್ಳಾಗ್ಲಿ ಅಂತ ನಾಲ್ಕು ಸೋಮವಾರ ಉಪವಾಸ ಮಾಡಿದ್ದೀನಿ. ಇದು ಕಡೆಯ ಸೋಮವಾರ, ನಿಮ್ಮಿಬ್ಬರನ್ನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬರಬೇಕು” ಎಂದು ತಿಳಿಸಿದರು. ಯಾವುದೋ ಒಂದು ದಿನ ತನ್ನ ಹೆಂಡತಿ ತಾನು “ಮಕ್ಳು ಬೇಡ” ಎಂದು ಮಾಡಿಕೊಂಡ ಸಹಮತ ನಿರ್ಧಾರವನ್ನು ಅಮ್ಮನಿಗೆ ಆಗಲೇ ಹೇಳಿಬಿಡಬೇಕಿತ್ತು ಅನ್ನಿಸಿತು. “ಮಕ್ಳು ಯಾಕೆ ಬೇಡ” ಎಂದು ಯಾರಾದರೂ ಕೇಳಿದರೂ ಸರಿಯಾದ ಒಂದು ಕಾರಣ ಇಲ್ಲದಿರುವಾಗ ಅಮ್ಮನನ್ನು ಒಪ್ಪಿಸಲಾಗದ ಸ್ಥಿತಿಯಲ್ಲಿ ಈ ವಿಷಯವನ್ನು ಮುಚ್ಚಿಟ್ಟು ತಪ್ಪು ಆಯ್ತೇನೋ ಅನ್ನಿಸಿತು ಶಿಶಿರನಿಗೆ. ಗಾಂಧಮ್ಮ ಇದ್ದಿದ್ದರೆ ಬಹುಶಃ ಎಲ್ಲವನ್ನೂ ಅಮ್ಮನಿಗೆ ಮನವೊಲಿಸಿಬಿಡೋಳು ಆದರೆ ಅವಳು ಈಗ ಪತ್ತೆ ಇಲ್ಲ ಎಂದು ತಳಮಳ ಆಯ್ತು ಶಿಶಿರನಿಗೆ. ಇಂತಹ ಸಂದರ್ಭದಲ್ಲೇ ಅಲ್ಲವಾ ಗಾಂಧಮ್ಮ ಪ್ರತಿ ಸಲ ಜೊತೆಗೆ ನಿಂತಿದ್ದು. ಅದಕ್ಕೆ ಈಗ ಮತ್ತೆ ನೆನಪಿಗೆ ಬಂದಳು ಎಂದುಕೊಂಡ. ಅತ್ತ ಮಗನಿಗೆ ಮಕ್ಳು ಆಗ್ಲಿ ಅಂತ ದೇವರಿಗೆ ಹರಕೆ ಹೊತ್ತು ಕೂರುವ ಅಮ್ಮ – ಇತ್ತ ಮಕ್ಳೇ ಬೇಡ ನಮ್ಗೆ ಎಂದು ಹೊರಲಾಗದ ನಿರ್ಧಾರ ಕೈಗೊಂಡ ತಾವು. ಎಲ್ಲರ ಪ್ರಾರ್ಥನೆಗೆ ಓಗೊಟ್ಟು ಏನನ್ನೂ ಮಾಡದ ದೇವರು ಬದುಕಿನ ವೈರುಧ್ಯಗಳ ನಡುವೆ ಕಳೆದುಹೋದ ಗಾಂಧಮ್ಮ. ಯಾವುದನ್ನೂ ಮಾಡಲಾಗದೆ ಕಡಲ ದೋಣಿ ಕೆಟ್ಟ ಗಾಳಿಯ ರಭಸಕ್ಕೆ ಅದು ಹೊತ್ತೊಯ್ಯುವ ಕಡೆಗೆ ಸಾಗುವ ನಮ್ಮೆಲ್ಲರದು ಒಂದೊಂದು ಕಥೆಗಳೇ ಎಂದುಕೊಂಡ ಶಿಶಿರ.
ಹೆಂಡತಿಯ ಜೊತೆಗೆ ಊರಿಗೆ ಹೊರಡಲು ತಯಾರಾಗಿ ದಾದರ್ ಸ್ಟೇಷನ್ನಿನ ಪ್ಲ್ಯಾಟ್ಫಾರ್ಮ್ನಲ್ಲಿ ಕುಳಿತಾಗ ಯಾಕೋ ತಾನೊಂದು ಬೇರೆ ತರಹದ ಮನುಷ್ಯನಾಗಿಯೇ ಕಂಡಂತಾಯಿತು. ರಾತ್ರಿಯ ಈ ಲೈಟು ಬೆಳಕಿನ ಒಳಗೆ ಚಹಾದ ಕೆಟಲ್ ಹಿಡಿದು “ಹಾಂ ಚಾಯ್ ಚಾಯ್” ಎಂದು ಕೂಗುವಾಗಿನ ಪರಿಚಿತ ಧ್ವನಿ ಇನ್ಯಾರದೋ ಬಾಯಲ್ಲಿ ಕೇಳಿಬರುತ್ತಿತ್ತು. ಈಗ ನಾನು ಪ್ರಯಾಣಿಕ ಎಂಬುದು ಅರಿವಿಗೆ ಬಂದಿದ್ದೆ ಅಚಾನಕ್ಕಾಗಿ ಒಂದು ಗತ್ತು ಬಂದಂತಾಯಿತು. ಅದ್ಯಾವ ಕ್ಷಣದಲ್ಲೋ ಹುಟ್ಟಿಕೊಂಡ ಒಂದು ಸಣ್ಣ ವಿಚಾರ ಈಗ ತಳಕು ಹಾಕಿಕೊಂಡು ಗಾಂಧಮ್ಮನ ನೆನಪುಗಳನ್ನು ತಂದು ಎದುರೇ ಗುಡ್ಡೆ ಹಾಕಿತ್ತು. ದಾದರ್ ಸ್ಟೇಷನ್ ದಾಟಿಕೊಂಡು ಓಡುವ ರೈಲಿನ ಕಿಟಕಿ ಬದಿಯಲ್ಲಿ ಕುಳಿತವನಿಗೆ ಚಕ್ಕನೆ ಹೊಳೆದದ್ದು ಗಾಂಧಮ್ಮನ ಕಥೆ. ಯಾಕೆ ಗಾಂಧಮ್ಮನ ಕಥೆಯನ್ನೇ ಸಿನಿಮಾ ಮಾಡಬಾರದು? ಎಂದುಕೊಂಡ.
ಬ್ಯಾಗಿನಲ್ಲಿ ಇಟ್ಟಿದ್ದ ಪೆನ್ನು ಪೇಪರ್ ಹಿಡಿದು ಖಾಲಿ ಇರುವ ಬಿಳಿಯ ಹಾಳೆಯ ಮೇಲೆ “ಸಂತೆ ಗಾಂಧಾರಿ” ಎಂದು ಬರೆದ. ತಾನು ಯಾವಾಗಲೂ ಗಾಂಧಮ್ಮ ಅಂತ ಕರೆಯುತ್ತಿದ್ದ ಅಮ್ಮನಂತಹ ಸಹೃದಯಿಗೆ ಈಗ ಸಂತೆ ಗಾಂಧಾರಿ ಅಂತ ಹೆಸರು ಇಟ್ಟಿದ್ದು ಕಂಡು ಹೆಮ್ಮೆ ಅನಿಸಿತು. ಮೊದಲು ಅಂತ್ಯದ ಒಂದು ರೋಚಕ ದೃಶ್ಯದಿಂದ ಶುರು ಮಾಡಬೇಕು ಎಂದು ಕಥೆಗಾಗಿ ಮುಖ್ಯವಾದ ಅಂಶಗಳನ್ನು ಬರೆಯುತ್ತಾ ಹೋದ “ಕಳೆದುಹೋದ ಸಂತೆ ಗಾಂಧಾರಿ” ಅವಳು ಈಗ ಏನಾಗಿದ್ದಾಳೆ ಎಲ್ಲಿ ಬದುಕಿದ್ದಾಳೆ, ಅಥವಾ ಅವಳು ಈಗ ಜೀವಂತವಾಗಿ ಇದ್ದಾಳ? ಇಲ್ಲವ? ಮತ್ತೆ ಈ ಮುಂಚೆ ಅವಳು ಏನಾಗಿದ್ದಳು ಎನ್ನುವುದೇ ಒಟ್ಟು ಕಥೆ.
ಈ ಸಿನಿಮಾ ತನ್ನನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯಲಿದೆ ಅಂತ ಅನಿಸಿತು. ಶಿಶಿರನಿಗೆ ಕ್ಲೈಮ್ಯಾಕ್ಸ್ನಲ್ಲಿ ಏನು ಮಾಡೋಣ ಅನಿಸಿತು. ಅವಳು ವಾಪಸ್ ಸಿಕ್ರೇ ಒಳ್ಳೇದಾ ಅಥವಾ ಸಿಗದೇ ಹೋದರೆ ಒಳ್ಳೇದಾ? ಸಿನಿಮಾದಲ್ಲಿ ಗಾಂಧಾರಿ ಸಿಕ್ಕರೆ ಪ್ರೇಕ್ಷಕರಿಗೆ ಇಷ್ಟೇನಾ ಅನ್ನಿಸಬಹುದು ಅಥವಾ ಸಿಗದೇ ಹೋದರೆ ಅದೂ ಇಷ್ಟೇನಾ ಅನ್ನಿಸಬಹುದು. ಅಥವಾ ಯಾರೋ ಒಂದಿಷ್ಟು ಜನರ ಕಣ್ಣು ಒದ್ದೆ ಆಗಬಹುದು ತನ್ನ ಅಮ್ಮನಂತೆ. ಆದರೆ ನಿಜ ಜೀವನದಲ್ಲಿ ಕಳೆದು ಹೋದವರು ಸಿಗುವುದು ಎಷ್ಟು ಮುಖ್ಯವಲ್ಲವೇ ಅನಿಸಿತು. ಸಂತೆ ಗಾಂಧಾರಿಯನ್ನು ಕೊನೆಯಲ್ಲಿ ಸತ್ತಳೆಂದು ತೋರಿಸುವುದು ಚೆಂದ ಭಾವುಕತೆ ಇರುತ್ತೆ. ಸಿನಿಮಾ, ಜನರಿಗೆ ತಲುಪಿದರೆ ದುಡ್ಡು ಆಗುತ್ತೆ ಎಂದುಕೊಂಡ. ಅಷ್ಟೊತ್ತಿಗಾಗಲೇ ಮತ್ಯಾವುದೋ ಸ್ಟೇಷನ್ನಿನ ಬಳಿ ರೈಲು ನಿಂತಿತು. ಶಿಶಿರ ಯಾವ ನಿಲ್ದಾಣ ಎಂದು ನೋಡದೇ ಕಥೆಯೊಳಗೆ ಮುಳುಗಿ ಹೋಗಿದ್ದ. ಹತ್ತುವವರು ಹತ್ತಿ ಇಳಿವವರು ಇಳಿದು ಮತ್ತೆ ರೈಲು ಫ್ರಾಂ ಎಂಬ ಹಾರ್ನಿನೊಂದಿಗೆ ಮುನ್ನಡೆಯಿತು. ಅಷ್ಟೊತ್ತಿಗಾಗಲೇ ತನಗೊಂದು ಸೀಟಿಗಾಗಿ ತಡಕಾಡುತ್ತ ಒಂದಿಷ್ಟು ಕನ್ನಡಿ ಒಂದಕ್ಕೊಂದು ದಾರದಲ್ಲಿ ಪೋಣಿಸಿ ಒಂದು ಸೈಡು ಹೆಗಲಿಗೆ ಹಾಕಿಕೊಂಡು ಕನ್ನಡಿ ಮಾರುವವಳು ಬಂದಳು. ಚಕ್ಕನೆ ತಿರುಗಿ ನೋಡಿದರೆ ಗಾಂಧಮ್ಮನೇ ಕಂಡಂತಾಯಿತು ಶಿಶಿರನಿಗೆ. ಪಕ್ಕದಿಂದ ಹಾದುಹೋದವಳ ಕನ್ನಡಿಯಲ್ಲಿ ಶಿಶಿರನಿಗೆ ತನ್ನ ನಿಜ ರೂಪ ಕಂಡಂತಾಯಿತು. ಹೈಸ್ಕೂಲು ಓದುವಾಗ ಸ್ಕಿಟ್ ಹೇಳಿಕೊಡುವಾಗ ಗಾಂಧಮ್ಮನ ಕಣ್ಣಲ್ಲಿ ತನ್ನನ್ನೇ ತಾನು ಕಂಡಂತಾಗಿ ಹೋಯಿತು. ಗಾಂಧಮ್ಮ ಸಾಯಬಾರದು ಎಂದುಕೊಂಡ. ಅತ್ತ “ತಿರುಗಿ ಬಂದ್ರೆ ಬರಬಹುದು’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ್ದ ಶಿವಯ್ಯ ಸ್ವಾಮಿಗಳ ಮಾತು ಅಮ್ಮಕ್ಕನ ತಲೆಯಲ್ಲಿ ಶಾಶ್ವತವಾಗಿ ನೆಲೆಯೂರಿತ್ತು. ಯಾರು ಇದ್ದರೂ ಇರದೇ ಹೋದರೂ ಊರೂರು ಸಂತೆಗಳು ಮಾತ್ರ ನಡೆಯುತ್ತಲೇ ಇದ್ದವು….
***
ಬಹಳ ಆಕರ್ಷಕವಾದ ಕತೆ. ಸರಳ, ಸುಂದರ ನಿರೂಪಣೆ. ಚಿತ್ತಾಲರ ನೆನಪು ತರುತ್ತದೆ