ಹುಗ್ಗಿ ಹುಡುಗನ ಸ್ವಗತಗಳು

ಲೇಖಕರು : ಶ್ರೀನಿವಾಸ್ ಯತಿರಾಜನ್ 

ನನ್ನ ಉದ್ಯೋಗ :  ಮನೆ, ಮನೆಗಳಿಗೆ ಹೋಗಿ ಊಟದ ಪ್ಯಾಕೆಟ್ಟುಗಳನ್ನು  ಸರಿಯಾದ ಸಮಯಕ್ಕೆ ತಲಪಿಸುವುದು. ಅಂದರೆ, ‘ ಫುಡ್ ಡೆಲಿವರಿ ಬಾಯ್’ ಎಂದೇ ಹೇಳಬಹುದು. ಅದನ್ನೇ ಕನ್ನಡದಲ್ಲಿ ‘ ಹುಗ್ಗಿ ‘ ಹುಡುಗ ಎನ್ನಲೂಬಹುದು.

ಒಂದು ರೀತಿಯಲ್ಲಿ, ಮುಂಬೈನಲ್ಲಿ ಬಹಳ ಹಿಂದಿನಿಂದ, ಈಗಲೂ ಚಾಲ್ತಿಯಲ್ಲಿರುವ ‘ಡಬ್ಬಾವಾಲಾ’ ಗಳ ಹಾಗೆ.   

ಮುಂಬೈನ  ಡಬ್ಬಾವಾಲಾಗಳು  ಬೆಳಗಿನ ಹೊತ್ತು ಗೊತ್ತುಪಡಿಸಿದ ಮನೆಗಳಿಂದ ಊಟದ ಡಬ್ಬಿಗಳನ್ನು ತಮ್ಮ ಸೈಕಲ್ಲಿಗೆ ಕಟ್ಟಿ, ಅವುಗಳನ್ನು ಜೋಪಾನವಾಗಿ ಲೋಕಲ್ ಟ್ರೇನುಗಳ ಮೂಲಕ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವ ಜನರಿಗೆ ತಲುಪಿಸುತ್ತಾರೆ. ಅವರು  ಒಂದು ದೊಡ್ಡ ‘ಮಾನವ ಜಾಲ’ ವನ್ನೇ ಕಟ್ಟಿಕೊಂಡಿದ್ದಾರೆ.  ಒಂದು ಸ್ಥಳದಿಂದ  ಮತ್ತೊಂದು ಸ್ಥಳಕ್ಕೆ ನಿಗದಿತ ವೇಳೆಗೆ ಊಟದ ಡಬ್ಬಗಳನ್ನು ತಮ್ಮ ಈ ಜಾಲಗಳ ಮೂಲಕ ಎಲ್ಲರಿಗೂ   ತಲಪಿಸುತ್ತಾರೆ.  ಆ ನೌಕರಿಯನ್ನು ಮಾಡುತ್ತಾ, ಅದನ್ನೇ ನಂಬಿ, ಅದರಲ್ಲಿಯೇ ದುಡಿಯುತ್ತಾ ಸಂಸಾರವನ್ನು  ಕಟ್ಟಿ ಬದುಕನ್ನು ತೂಗಿಸುತ್ತಾರೆ  ಅವರು. 

ಅಲ್ಲಿಯ ಡಬ್ಬಾವಾಲಾಗಳು  ಮನೆಗಳಿಂದ ಊಟದ ಡಬ್ಬಿಗಳನ್ನು ಶೇಖರಿಸಿಕೊಂಡು ಕಚೇರಿಗಳಿಗೆ ತಲುಪಿಸುತ್ತಾರೆ. ಆದರೆ ಇಲ್ಲಿ, ನಾವು ವಿವಿಧ ರೆಸ್ಟೋರೆಂಟುಗಳಿಂದ ಊಟದ ಪ್ಯಾಕೆಟ್ಟುಗಳನ್ನು ಮನೆಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಗ್ರಾಹಕರು ತಮ್ಮ  ಇಚ್ಚೆಯ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಕುಳಿತು,  ಆನ್ಲೈನ್ ಮೂಲಕ ಕಾದಿರಿಸಿದರೆ, ಆಯಾ ಹೋಟೆಲ್ಲುಗಳಿಂದ ನಮಗೆ, ನಮ್ಮ ಫೋನುಗಳಲ್ಲಿ ಮೆಸೇಜ್ ಬಂದು ಬಿಡುತ್ತದೆ. ಅದರಂತೆ ನಾವು ಆ ಹೋಟೆಲ್ಲುಗಳನ್ನು ತಲುಪಿ, ತಿನಿಸಿನ ಪ್ಯಾಕೆಟ್ಟುಗಳನ್ನು ನಮ್ಮ ಚೀಲದಲ್ಲಿ ತುಂಬಿ ಗ್ರಾಹಕರ  ವಿಳಾಸಕ್ಕೆ ನಿಗದಿತ ಸಮಯಕ್ಕೆ  ಪ್ಯಾಕೆಟ್ಟನ್ನು ತಲುಪಿಸುತ್ತೇವೆ.

ಈಗ್ಯೆ ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ಮುಂಬೈನ ಡಬ್ಬಾವಾಲಗಳಂತೆ ಊಟದ ಡಬ್ಬಿಗಳನ್ನು ಸೈಕಲ್ಲಿನಲ್ಲಿ ತೂಗು ಹಾಕಿ ಕಾರ್ಪೊರೇಷನ್ನಿನ ಸುತ್ತುಮುತ್ತಲು ಕೆಲಸ  ಮಾಡುತ್ತಿದ್ದ ಉದ್ಯೋಗಿಗಳಿಗೆ ತಲುಪಿಸುವ ರೂಡಿ ಇತ್ತು. ಬೆಂಗಳೂರು ಬೆಳೆಯುತ್ತಿದ್ದಂತೆ, ಜನರು ದೂರದ ಪ್ರದೇಶಗಳಲ್ಲಿ ಮನೆ ಮಾಡಿದ ಕಾರಣಗಳಿಂದಲೋ ಅಥವಾ ಬೆಳೆದು ನಿಂತ ಊರಿನಲ್ಲಿ ಎಲ್ಲೆಂದರಲ್ಲಿ ಹುಟ್ಟಿಕೊಂಡ ರೆಸ್ಟೋರೆಂಟುಗಳಿಂದಲೋ, ಎಲ್ಲಕ್ಕಿಂತ ಮಿಗಿಲಾಗಿ ಬೆಳೆದ ಟ್ರಾಫಿಕ್ನಿಂದಲೋ  ಸೈಕಲ್ಲಿನಲ್ಲಿ ಊಟದ ಡಬ್ಬಗಳನ್ನು  ಹೊತ್ತು ತರುತ್ತಿದ್ದ ಜನರು ಹೇಳ ಹೆಸರಿಲ್ಲದೆ ಮಾಯವಾಗಿಬಿಟ್ಟರು.

ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಪಕ್ಕದ ಮನೆಯಾತ ಸರ್ಕಾರಿ ಕೆಲಸಕ್ಕೆ ಹೋಗುತ್ತಿದ್ದ. ಬೆಳಗಿನ ಉಪಹಾರ ಮಾಡಿ ಬಸ್ಸಿನಲ್ಲಿ ಕಚೇರಿ ತಲುಪುತ್ತಿದ್ದ ಆತ. ಅವನ ಹೆಂಡತಿ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿ ಲಗುಬಗೆಯಿಂದ ಊಟದ ತಯಾರಿಯಲ್ಲಿ ತೊಡುಗುತ್ತಿದ್ದಳು. ನಿಖರವಾಗಿ ೧೦.೩೦ ರ ವೇಳೆಗೆ ಊಟದ ಡಬ್ಬವನ್ನು ಕೊಂಡೊಯ್ಯಲು ತನ್ನ ಸೈಕಲ್ಲಿನಲ್ಲಿ ಬಂದು ಬಿಡುತ್ತಿದ್ದ ಆ ಕ್ಯಾರಿಯೇರ್ ವಾಲನಿಗೆ ಕಟ್ಟಿದ್ದ ಬುತ್ತಿಯ ಚೀಲವನ್ನು ನೀಡುತ್ತಿದ್ದಳು  ಆ ಹೆಂಗಸು. ಅವನು ಮತ್ತಿತರರ ಡಬ್ಬಿಗಳ ಚೀಲವನ್ನು ತನ್ನ ಸೈಕಲ್ಲಿನಲ್ಲಿ  ಹಾರಗಳ ರೀತಿ ನೇತು ಹಾಕಿರುತ್ತಿದ್ದ. ಕೆಲವೊಮ್ಮೆ ತನ್ನ ಯಜಮಾನ  ಮರೆತು ಹೋಗಿದ್ದ ಕನ್ನಡಕವನ್ನೋ, ಅಥವಾ ಮನೆಗೆ ನೆಂಟರು ಬಂದಿರುವ ಸುದ್ದಿಯನ್ನೋ ಚೀಟಿಯಲ್ಲಿ ಬರೆದು ಊಟದ ಡಬ್ಬದ ಚೀಲದಲ್ಲಿ ಅವುಗಳನ್ನು ತುರುಕಿ ಕಳುಹುತ್ತಿದ್ದಳು ಆ ಗೃಹಿಣಿ. ಆ ಕ್ಯಾರಿಯರ್ ವಾಲಾ ಅಂದಿನ ಮಟ್ಟಿಗೆ ಮೇಘದೂತನಾಗುತ್ತಿದ್ದ ಅವರಿಗೆ. ಆ ಮನುಷ್ಯನನ್ನು ನೋಡುತ್ತಿದ್ದರೆ ನನಗೆ ಒಂದು ರೀತಿಯ ಪೂಜ್ಯ ಭಾವನೆ ಬರುತ್ತಿತ್ತು.  ನಾನು ಅವನ ಸೈಕಲ್ಲಿನ ಬಳಿ ಹೋಗಿ ಅಲ್ಲಿ ಅದೆಷ್ಟು ಬ್ಯಾಗುಗಳಿವೆ ಎಂದು ಎಣಿಸುತ್ತಿದ್ದೆ. ಒಟ್ಟು ಇಪ್ಪತ್ತು ಬ್ಯಾಗುಗಳನ್ನು ತನ್ನ ಸೈಕಲ್ಲಿನಲ್ಲಿ ತೂಗು ಹಾಕಿರುತ್ತಿದ್ದ ಆ ಮನುಷ್ಯ. ಅವನು ಪ್ರತಿ ನಿತ್ಯವೂ ಕನಿಷ್ಠ ಹನ್ನೆರಡು ಕಿ.ಮೀ. ನಷ್ಟು ದೂರವನ್ನು ತನ್ನ ಸೈಕಲ್ಲಿನಲ್ಲಿ ಕ್ರಮಿಸುತ್ತಿದ್ದ.  ಆ ಪರಿಶ್ರಮದಿಂದ ಆತನ ಕಾಲಿನ ಮಾಂಸಖಂಡಗಳು ಉಬ್ಬಿರುತ್ತಿದ್ದವು. ತೋಳುಗಳು ಸೈಕಲ್ಲಿನ ಹ್ಯಾಡಲ್ಲುಗಳನ್ನು ಹಿಡಿದು ಸಬಲವಾಗಿದ್ದವು. ಒಟ್ಟಿನಲ್ಲಿ ಒಳ್ಳೆಯ ವ್ಯಾಯಾಮವನ್ನು ಮಾಡಿದ್ದ ಗರಡಿಯಾಳಿನಂತೆ ಕಾಣುತ್ತಿದ್ದ ಆತ. ನನಗೂ ಅವನಂತೆಯೇ ದೇಹವನ್ನು ದಂಡಿಸಿ ಸದೃಢವಾಗಿರಬೇಕೆಂದು ಎನಿಸುತ್ತಿತ್ತು ಆಗ.  

ಬೆಂಗಳೂರಿನಂತಹ ದೊಡ್ಡ ಹರಿನಲ್ಲಿ ನಮ್ಮ ಕೆಲಸವಂತೂ ಬಹಳ ಸವಾಲುಗಳಿಂದ ಕೂಡಿರುತ್ತದೆ. ನಾವು ಯಾವಾಗಲೂ ‘ಕಾಲ’ ನ  ಎದುರೇ ಓಡುತ್ತಿರುತ್ತೇವೆ. ನಮಗೂ ಮತ್ತು ಸಮಯಕ್ಕೂ ಯಾವಾಗಲೂ ಸ್ಪರ್ಧೆ ನಡೆಯುತ್ತಿರುತ್ತದೆ.  ನಮಗೆ ನಿಗದಿ  ಪಡಿಸಿದ ಸಮಯದಲ್ಲಿ  ತಿನಿಸಿನ ಪ್ಯಾಕೆಟ್ಟುಗಳನ್ನು ನಾವು ಗ್ರಾಹಕರಿಗೆ ತಲುಪಿಸಲೇಬೇಕಾಗಿರುವುದರಿಂದ, ನಮ್ಮ ದ್ವಿಚಕ್ರ ವಾಹನದ ವೇಗವನ್ನು ಸಮಯದ ವಿರುದ್ಧ ಚಲಿಸಲೇಬೇಕಾದ ಬದ್ಧತೆಗೆ ಸಿಲುಕಿರುತ್ತೇವೆ. ನಾವು ನಿಗದಿತ ಸಮಯಕ್ಕೆ ಗ್ರಾಹಕರಿಗೆ ತಿನಿಸುಗಳನ್ನು ತಲುಪಿಸದಿದ್ದರೆ, ಅವರು ಪಾವತಿಸಬೇಕಾದ  ಬಿಲ್ಲಿನ  ಹಣವನ್ನು ಸಂಸ್ಥೆಯ ಮಾಲೀಕರು ನಮ್ಮ  ಸಂಬಳದಿಂದ ಕತ್ತರಿಸುವ ವಿಧಾನಗಳು ಇತ್ತೀಚಿಗೆ ಚಾಲ್ತಿಗೆ ಬಂದು ನಮ್ಮನ್ನು ಬಹಳ ತೊಂದರೆಗೀಡು ಮಾಡಿದೆ. ನಾವು ನಮ್ಮ ದ್ವಿಚಕ್ರದಲ್ಲಿ ಸಂದುಗೊಂದುಗಳಲ್ಲಿ  ನುಗ್ಗಿ ಗಾಡಿ ಚಲಾಯಿಸುತ್ತಾ, ನಮ್ಮ ಗಾಡಿಯ ಹಿಂಬದಿಗೆ ಕಟ್ಟಿರುವ ಊಟದ ಪಾರ್ಸೆಲ್  ಇಡುವ ಪ್ಲಾಸ್ಟಿಕ್ ಬ್ಯಾಗುಗಳನ್ನು ಭದ್ರವಾಗಿ ಒಯ್ಯುವ ಸವಾಲು ಹಲವಾರು ಬಾರಿ; ನಾವು ರೋಡಿನ ಸಿಗ್ನಲ್ ದೀಪಗಳನ್ನು ಕಡೆಗಣಿಸಿ ಮುನ್ನುಗ್ಗುವಂತೆ ಮಾಡುತ್ತದೆ .ನಾವು,  ನಮ್ಮ ಜೀವನವನ್ನು ನುಗ್ಗಿ ಬರುವ ವಾಹನಗಳ ಟ್ರಾಫಿಕ್ಕಿನ ವಿರುದ್ಧ  ಪಣಕ್ಕಿಟ್ಟು ಗ್ರಾಹಕರೆಡೆಗೆ ಸಾಗುತ್ತೇವೆ. 

ಇನ್ನು ನಮ್ಮ   ಹಸಿವು ? ಅದಕ್ಕೆ ನಮ್ಮ ಈ ಉದ್ಯೋಗದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಒಮ್ಮೆ ಕರ್ತವ್ಯವನ್ನು ಪ್ರಾರಂಭಿಸಿದರೆ ನಮಗೆ ನಿಗದಿಯಾದ ಸಮಯವೇ ಇರುವುದಿಲ್ಲ. ಮದ್ಯಾಹ್ನದ ಭೋಜನದ ಸಮಯ ಬರುತ್ತಿದ್ದಂತೆ  ಗ್ರಾಹಕರಿಗಾಗಿ ಕೊಂಡೊಯ್ಯುವ ಬಗೆ ಬಗೆಯ ತಿನಿಸುಗಳು ನಮ್ಮ  ಮೂಗನ್ನು ಅಗಲವಾಗಿ ಅರಳುವಂತೆ ಮಾಡುತ್ತದೆ.

ನಾನು ಕೊಂಡೊಯ್ಯುವ ಆ ದುಬಾರಿ ಬೆಲೆಯ ತಿನಿಸುಗಳನ್ನು ನಾನು ಎಂದೂ ತಿಂದವನೇ ಅಲ್ಲ. ಮನೆಯಿಂದ ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ತೆಗೆಯಲು ಸಮಯವೇ ಸಿಗುವುದಿಲ್ಲ. ಹಾಗೊಮ್ಮೆ ಹಸಿವು ತಾಳದೆ ತಿನ್ನಲೇ ಬೇಕಾದ ಪ್ರಸಂಗ ಬಂದರೆ, ಯಾವುದಾದರೂ ರಸ್ತೆಯಂಚಿನ ಮರದ ಕೆಳಗೆ ವಾಹನವನ್ನು ನಿಲ್ಲಿಸಿಕೊಂಡು ನನ್ನ ಬುತ್ತಿಯನ್ನು ನಿಮಿಷಾರ್ಧದಲ್ಲಿ ತಿಂದು ಮುಗಿಸಿದ ಸಂದರ್ಭಗಳೂ ಇವೆ.

ಮೊನ್ನೆ ನಮ್ಮ ಸಹೋದ್ಯೋಗಿ ಹೀಗೆಯೇ ಯಾವುದೂ ಸಿಗ್ನಲ್ಲಿನಲ್ಲಿ ನುಗ್ಗಿ, ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅಸು ನೀಗಿದ್ದ. ದುರಾದೃಷ್ಟವೆಂದರೆ, ಅವನ ಕುಟುಂಬಕ್ಕೆ  ಅವನೇ  ಆಧಾರ ಕಂಬವಾಗಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬೇಕಾದ ಸಹಾಯವನ್ನು ಮಾಡಿದ್ದಾಯಿತು. ಇನ್ನು ಆ ಕುಟುಂಬದ ಪಾಡೇನು? ಎಂದು ದುಃಖ ಉಮ್ಮಳಿಸಿ ಬಂತು.   ಓ ದೇವರೇ,  ಅವನ ಆತ್ಮಕ್ಕೆ ಶಾಂತಿ ಸಿಗಲೆಂದು  ಪ್ರಾರ್ಥಿಸುವುದೊಂದೇ ನಮಗುಳಿದ  ದಾರಿ ಎಂದು ಮನಸ್ಸಿಗೆ ಬಹಳ ಖೇದವೆನ್ನಿಸಿತು. ಬೇರೆ ಕಾರ್ಮಿಕರ ಹಾಗೆ ಮಾಲೀಕರ ಕಡೆಯಿಂದ ನಮಗೆ ಯಾವುದೇ ರೀತಿಯ ಹಣಕಾಸಿನ ಸೌಲಭ್ಯ ಇಲ್ಲದೆ ಇರುವುದರಿಂದ ಬದುಕಿನ ಹಾದಿಯಲ್ಲಿ ನಡೆಯುವ ಎಡವಟ್ಟುಗಳು ಒಂದು ಸವಾಲೇ ಆಗಿರುತ್ತದೆ.  

ನಾವು ಈ ಕೆಲಸದ  ಸಂದರ್ಶನಕ್ಕೆ ಹೋದಾಗ, ‘ನಮಗೆ ದ್ವಿಚಕ್ರ ವಾಹನದ ಚಾಲನೆ ತಿಳಿದಿರಬೇಕು ಮತ್ತು ನಮ್ಮ ಬಳಿ ಒಂದು ಮೊಬೈಲ್ ಕಡ್ಡಾಯವಾಗಿ ಇರಲೇಬೇಕೆಂಬ’  ನಿಯಮಗಳನ್ನು ಎಲ್ಲ ಮಾಲೀಕರು ತಪ್ಪದೆ ಆಗ್ರಹಿಸುತ್ತಾರೆ .

ಇನ್ನು ನನ್ನ ಬಗ್ಗೆ ಒಂದಿಷ್ಟು ಹೇಳುವುದಾದರೆ;  ನನಗೀಗ ಮೂವತ್ತು ದಾಟುತ್ತಿದೆ. ನಾನು ನನ್ನ ಕುಟುಂಬದ ನಿರ್ವಹಣೆಗಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಈ ಉದ್ಯೋಗವನ್ನು ಹಿಡಿದಿದ್ದೇನೆ. ಬೆಳಗಿನ ಎಂಟಕ್ಕೆ ಕರ್ತವ್ಯದ   ಮೇಲೆ ದ್ವಿಚಕ್ರ ವಾಹನದಲ್ಲಿ ಹೊರಟರೆ, ಕೆಲವೊಮ್ಮೆ ರಾತ್ರಿ ಹನ್ನೊಂದು ಗಂಟೆಯೂ ಆಗುತ್ತದೆ, ಮನೆ ಸೇರಲು.

ನಾನು ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಿದ್ದರೂ ಅದೆಷ್ಟೋ ಬಾರಿ ನನ್ನ ಕಾಲೇಜಿನ ದಿನಗಳು ನನ್ನನ್ನು ಕಾಡುತ್ತವೆ.  

ನಾವೆಲ್ಲರೂ ಕೂಡಿ ಆಡುತ್ತಿದ್ದ ಆ ‘ಕಾರ್ಕ್’ ಬಾಲಿನ  ಕ್ರಿಕೆಟ್, ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.  ನಾನು ನಮ್ಮ ಟೀಮಿನ ಉತ್ತಮ ಕ್ಷೇತ್ರ ರಕ್ಷಕ ಮತ್ತು ಅದಕ್ಕಿಂತಲೂ ಒಳ್ಳೆಯ ‘ಕ್ಯಾಚರ್’ ಎಂದೇ ಪ್ರಖ್ಯಾತಿ ಪಡೆದಿದ್ದೆ. ಬ್ಯಾಟ್ಸ್ಮನ್ ಎತ್ತರಕ್ಕೆ ಹೊಡೆದ ಚೆಂಡನ್ನು ಅದು ಯಾವ ಕೋನದಲ್ಲಿ ನೆಲವನ್ನು ತಲುಪುತ್ತದೆ ಎಂದು ಕರಾರುವಕ್ಕಾಗಿ ಅಂದಾಜಿಸಿ ಓಡುತ್ತಾ  ಬಿಡದೆ ಚೆಂಡನ್ನು ನನ್ನ ಕೈಗೆ ಹಾಕಿಕೊಳ್ಳುತ್ತಿದ್ದೆ.  ನಾನು ಇದ್ದ ಕಡೆ ಚೆಂಡನ್ನು ಹೊಡೆಯದಿರುವಂತೆ ಎದುರು ಟೀಮಿನ ಕ್ಯಾಪ್ಟನ್ ಅವನ ಬ್ಯಾಟ್ಸ್ಮನ್ಗೆ ಹೇಳುತ್ತಿದ್ದ! ನಾನಿದ್ದರೆ ಪ್ರತಿ ಪಂದ್ಯದಲ್ಲೂ ಕನಿಷ್ಠ ಎರಡು ಕ್ಯಾಚ್ಗಳನ್ನು ನನ್ನದಾಗಿಸಿಕೊಳ್ಳುತ್ತಿದ್ದೆ. 

ಸಾಮಾನ್ಯವಾಗಿ ಕ್ರಿಕೆಟ್ಟನ್ನು  ಚರ್ಮದ ಹೊದಿಕೆಯ ಚೆಂಡನ್ನು ಉಪಯೋಗಿಸಿ ಆಡುವುದು  ವಾಡಿಕೆ. ಆದರೆ ನಾವು ‘ಕಾರ್ಕ್’  ಚೆಂಡನ್ನು  ಉಪಯೋಗಿಸುತ್ತಿದ್ದ ಕಾರಣ;  ಚರ್ಮದ ಹೊದಿಕೆಯ ಚೆಂಡಿನ   ದುಪ್ಪಟ್ಟು  ಬೆಲೆಯೇ ಆಗಿತ್ತು. ಆದರೆ ಕಾರ್ಕ್ ಚೆಂಡು ಕಲ್ಲಿಗೆ ಸಮನಾಗಿ ಇರುತ್ತಿತ್ತು. ಅದು ಅಷ್ಟು ಶೀಘ್ರವಾಗಿ ಸವೆಯುತ್ತಿರಲಿಲ್ಲ.   ಆದರೆ  ಕಾಲಿಗೋ ಅಥವಾ ಕೈಗೋ ಏಟು ಬಿದ್ದರೆ ಸುಮಾರು ನಾಲ್ಕೈದು ದಿನಗಳಾದರೂ ಆ ನೋವು ಶಮನವಾಗುತ್ತಿರಲಿಲ್ಲ. 

ಒಮ್ಮೆ ಒಂದು ಸಂಜೆ ನಾವೆಲ್ಲರೂ ಕ್ರಿಕೆಟ್ ಆಡುವಾಗ ಬ್ಯಾಟ್ಸ್ಮನ್ ಹೊಡೆದ ಚೆಂಡು ನನ್ನ ಮರ್ಮ ಸ್ಥಳಕ್ಕೆ ತಗುಲಿ , ನಾನು ಜ್ಞಾನ ತಪ್ಪಿ ಬಿದ್ದಿದ್ದು ಈಗಲೂ ನೆನಪಿಗೆ ಬರುತ್ತದೆ. 

ಬೆಂಗಳೂರಿನಂತಹ ಮಹಾನಗರಗಳು ಈ ದೇಶದಲ್ಲಿ ಇರುವುದರಿಂದ ನನ್ನ ರೀತಿಯ, ಹೆಚ್ಚು ಓದಿಕೊಳ್ಳದ ಹುಡುಗರಿಗೆ ದುಡಿದು ತಿನ್ನಲು ಒಂದು ಮಹದವಕಾಶ ಒದಗಿ ಬಂದಿದೆ. ಸೋಮಾರಿಗಳಂತೆ ಮೈ ಬೆಳಸಿ ಇತರರಿಗೆ ಹೊರೆಯಾಗುವುದರ ಬದುಲು, ದುಡಿದು ತಿನ್ನುವುದು ಮನಸಿಗೆ ತೃಪ್ತಿ  ಕೊಡುತ್ತದೆ. ಇದೇ ಉದ್ಯೋಗದಲ್ಲಿ ಮುಂದುವರೆದು,ಸಂಯಮದಿಂದ ಕಾರ್ಯ ನಿರ್ವಹಿಸುತ್ತಾ ಶ್ರೀಮಂತರಾದವರಿಗೇನೂ   ಕಮ್ಮಿ ಇಲ್ಲ. ಎಲ್ಲದಕ್ಕೂ ಸಂಯಮ ಬೇಕು ಅಷ್ಟೇ. ಕಾಯಬೇಕು. ಸಮಯ ಬರುವವರೆವಿಗೂ ಕಾಯಲೇಬೇಕು. ನಾನು ನನ್ನ ಈ ಉದ್ಯೋಗವನ್ನು ಕಾಯ, ಮನಸಾ, ವಾಚಾ ಪ್ರೀತಿಸುತ್ತೇನೆ.  ಕಾರಣ; ಹಸಿದಿರುವ ಜೀವಕ್ಕೆ ಅನ್ನ ಒದಗಿಸುವ ಶ್ರೇಷ್ಟವಾದ ಕಾಯಕ ನನ್ನದು. ಆ ಊಟಕ್ಕೆ ಅವರೇ ಪಾವತಿಸಿದ್ದರೂ, ಅದನ್ನು ಅವರಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ಕಾರ್ಯ, ನನ್ನ ಪ್ರಕಾರ ಬಹಳ ಶ್ರೇಷ್ಠವಾದದ್ದು ಎಂದು.    

ನಾನು ಇನ್ನೂ ಬ್ರಹ್ಹ್ಮಚಾರಿಯಾಗಿಯೇ ಉಳಿದಿದ್ದೇನೆ ಎಂದು ಅಂದುಕೊಂಡರೂ, ನಾನೇನು ಶಪಥ ಮಾಡಿ, ಮದುವೆಯೇ ಆಗುವುದಿಲ್ಲ ಎಂದೂ ಹೇಳಿಲ್ಲ! ಭೀಷ್ಮನ ಹಾಗೆ. 

ನನಗ್ಯಾರು ಹೆಣ್ಣು ಕೊಟ್ಟಾರು? 

ಅರವತ್ತರ ಆಸುಪಾಸಿನಲ್ಲಿರುವ ಅಮ್ಮಳ ಮಾತಿಗೆ ಕಟ್ಟು ಬಿದ್ದು ವಧು-ವರರ  ಅನ್ವೇಷಣಾ ಕೇಂದ್ರದಲ್ಲಿ ನೋಂದಣಿಸಿದ್ದೆ.  

ನಾನು ನೋಡಲು ಸ್ಪುರುದ್ರೂಪಿಯೇ ಸರಿ. ನನ್ನ ಫೋಟವನ್ನು ಕಂಡೊಡನೆ ಎಲ್ಲ ಹುಡುಗಿಯರು ‘ಭೇಷ್’ ಎಂದು ಮುಂದಿನ ನನ್ನ ಬಯೋಡಾಟಾದ ಪುಟ ತೆರೆಯುತ್ತಾರೆ. ನನ್ನ ವಿದ್ಯಾರ್ಹತೆ ಮತ್ತು ನನ್ನ ನೌಕರಿಯನ್ನು ಓದಿದೊಡನೆ ನನ್ನನ್ನು ಅಲ್ಲಿಯೇ ಕೈ ಬಿಡುತ್ತಾರೆ!  ಅದು ಹುಡುಗಿಯರ ತಪ್ಪು ಎಂದು ನಾನು ಎಂದೂ ತಿಳಿದವನಲ್ಲ. ಪ್ರತಿ ಹೆಣ್ಣಿನ ಆಶಯ  ಮತ್ತು ಕನಸು ಹಿರಿದಾಗಿರುತ್ತದೆ. ನಾನು ಅದನ್ನು ಗೌರವಿಸುತ್ತೇನೆ.  ಅವರು ನನ್ನನ್ನು ಬಯಸದ್ದು ನನ್ನ ದುರಾದೃಷ್ಟ ಎಂದು ಸುಮ್ಮನಿದ್ದೇನೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಮಾತ್ರ ಇರುವುದರಿಂದ ಜೀವನ  ಸರಿದೂಗಿ ಸಾಗುತ್ತಿದೆ. 

ಮದುವೆ  ಎಂದೊಡನೆ ಎಲ್ಲ ಯುವಕರಂತೆ ನನ್ನ ಮನಸ್ಸು ನವಿಲಿನಂತೆ ಗರಿಗೆದರಿ ಕುಣಿಯುತ್ತದೆ. ಆ ಸಂತಸ ಕೇವಲ ಒಂದೆರಡು ನಿಮಿಷಗಳು  ಮಾತ್ರ. ನನ್ನ ಬ್ಯಾಂಕ್ ಬ್ಯಾಲೇನ್ಸ್ ಸೊನ್ನೆಯ ಹತ್ತಿರವೇ ಸುಳಿದಾಡುತ್ತಿರುತ್ತದೆ ಎಂಬುದನ್ನು ನೆನಪಿಸಿಕೊಂಡರೆ, ಆ ಸಂತಸ, ಪಲಾಯನ ಮಾಡಿ ದಿಗಿಲು ನನ್ನ ಮೇಲೆ ಸವಾರಿ ಮಾಡುತ್ತದೆ. .  ಬರುವ ಸಂಬಳ ಮನೆಯ ಬಾಡಿಗೆ, ನನ್ನ ಮತ್ತು ಅಮ್ಮಳ ತಿಂಗಳ ಖರ್ಚುಗಳ ಬಾಬತ್ತಿಗೆ ಸರಿದೂಗುತ್ತದೆ. ಇನ್ನು ಮೂರನೆಯ ವ್ಯಕ್ತಿಯನ್ನು, ಅದರಲ್ಲಿಯೂ ಗಂಡನ ಮನೆಗೆ ಹೊಸ ಹುರುಪಿನಿಂದ ಬರುವ ಹೆಣ್ಣಿನ  ಆಶಯಗಳನ್ನು ಪೂರೈಸಲಾಗದ ನನ್ನಂತವರು ಬ್ರಹ್ಮಚಾರಿಯಾಗಿಯೇ ಮುಂದುವರೆಯುವುದು ಲೇಸು ಎನಿಸುತ್ತದೆ. 

ಹಾಗಾದರೆ ನನ್ನಂತವನಿಗೆ ಮದುವೆಯಾಗುವುದೇ ಇಲ್ಲವೇ? ಪ್ರತಿ ಗಂಡಿಗೊಂದು ಹೆಣ್ಣು, ಎಂದು ಪದೇ ಪದೇ ಹೇಳುವ ನನ್ನಮ್ಮಳ ಮಾತು ಸುಳ್ಳೇ?ಲೋಕದ ನುಡಿ ಸುಳ್ಳೇ?  

ಇನ್ನು ನನ್ನ ದಿನಚರಿಯನ್ನು ಹೇಳುವುದಾದರೆ,  

ಮೊದಲೇ ಹೇಳಿದಂತೆ ನನ್ನ ದಿನಚರಿ ಬೆಳಗಿನ ಎಂಟಕ್ಕೆ ಪ್ರಾರಂಭವಾಗಿ ತಡ ರಾತ್ರಿ ಮುಗಿಯುತ್ತದೆ. 

ನಾನು ಬೆಂಗಳೂರಿನ ಸುಮಾರು ಸ್ಥಳಗಳಿಗೆ  ಈಗಾಗಲೇ ಭೇಟಿ ಇತ್ತು ತಿನಿಸುಗಳನ್ನು ಗ್ರಾಹಕರಿಗೆ ತಲುಪಿಸಿ ನನ್ನ ಸಂಸ್ಥೆಯಿಂದ ‘ಒಳ್ಳೆಯ  ಕೆಲಸಗಾರ’ ನೆಂಬ ಪ್ರಶಸ್ತಿಯನ್ನು ಗಿಟ್ಟಿಸಿದ್ದೇನೆ. 

ನನ್ನ ನಡೆ ನುಡಿಗೆ ಗ್ರಾಹಕರೂ ನನ್ನನ್ನು ಮೆಚ್ಚುತ್ತಾರೆ. ಎಲ್ಲ ಗ್ರಾಹಕರೂ ಕೆಟ್ಟವರಲ್ಲ, ಹಾಗೆಯೇ ಎಲ್ಲರೂ ಒಳ್ಳೆಯವರಲ್ಲ. ‘ಲೋಕೋ ಭಿನ್ನರುಚಿ: ಎಂಬ ನಾಣ್ಣುಡಿಯಂತೆ ಈ ಪ್ರಪಂಚ ಇರುವುದಲ್ಲವೇ?   

ಒಮ್ಮೆ ಬಹಳ ಟ್ರಾಫಿಕ್ಕಿನಲ್ಲಿ ಸಿಲುಕಿ , ಸುಮಾರು ಅರ್ಧ ಗಂಟೆಯಷ್ಟು ತಡವಾಗಿ ಒಂದು ಗ್ರಾಹಕರ ಮನೆಯ ಬೆಲ್ ಒತ್ತಿದೆ.  ಮನೆಯಾತ ನನ್ನದೇ  ವಯಸ್ಸಿನವನು, ಊಟದ ಪ್ಯಾಕೇಟನ್ನು ತೆಗೆದುಕೊಂಡು ಹಣ ನೀಡಲು ಬಂದ. ನಾನು ನಮ್ಮ ಸಂಸ್ಥೆಯ ನಿಯಮದ ಪ್ರಕಾರ, ತಡವಾದ ಪ್ಯಾಕೆಟ್ಟಿನ ವಿತರಣೆಗೆ   ಗ್ರಾಹಕರಿಂದ ಹಣ ಪಡೆಯಬಾರದೆಂದು ತಿಳಿಸಿದೆ. ಆ ಯುವಕ ನಗುತ್ತಲೇ ನನ್ನನ್ನು ಹಣ ಪಡೆಯುವಂತೆ ಒತ್ತಾಯಿಸಿದ. ನಾನು ಆ ಹಣವನ್ನು ಪಡೆಯಲೇ ಬೇಕಾಯ್ತು.       

ಮೇಲೆ ಹೇಳಿದ ಒಳ್ಳೆಯ ನಡೆ ನುಡಿಯ ಗ್ರಾಹಕರೇ ಹೆಚ್ಚಾಗಿ ನನಗೆ ಕಂಡು ಬಂದಿದ್ದಾರೆ. ಹಾಗಾಗಿ ನನಗಿನ್ನೂ ಹೇಳಿಕೊಳ್ಳುವಂತಹ ಕಹಿ ಘಟನೆಗಳು ಇನ್ನೂ ಸಂಭವಿಸಿಲ್ಲ.  

ಅಂದು ಬೆಳಗಿನಿಂದ ಆಕಾಶದಲ್ಲಿ ಮೋಡ ಹೆಡೆಯಾಡುತ್ತಿತ್ತು. ಬೆಳಗಿನ ಉಪಹಾರದ ವಿತರಣೆಯನ್ನು ಮುಗಿಸಿ ಊಟದ ವಿತರಣೆಗೆ ನಿಗದಿತ ವಿಳಾಸಗಳನ್ನು ಅರಸಿ ಹೊರಟಿದ್ದೆ. ನಾನು ‘ಜಿಂಕ್ ಲೇಔಟಿನ’ ಒಂದು ಬಹು ಮಹಡಿಗಳ  ಮನೆಯ ವಿಳಾಸಕ್ಕೆ ಅಂದಿನ ತಿನಿಸಿನ  ಪ್ಯಾಕೆಟ್ಟನ್ನು ತಲುಪಿಸಬೇಕಿತ್ತು. 

‘ಜಿಂಕ್ ಲೇಔಟ್’ ಬೆಂಗಳೂರಿನ ಒಂದು ಹೆಸರಾಂತ ಬಹು ಮಹಡಿಗಳಿರುವ ಮನೆಗಳ ಬಡಾವಣೆ. ಆ ಬಡಾವಣೆಯ  ಒಳ ಹೊಕ್ಕರೆ ಸುಮಾರು  ನೂರು  ಬಹು ಮಹಡಿಗಳ ಕಟ್ಟಡಗಳನ್ನು   ಕಾಣಬಹುದಾಗಿದೆ.  ಆ ಬಡಾವಣೆ ಬೆಂಗಳೂರಿನ ಸಿಂಗಾಪುರ್ ಎಂದೇ ಪ್ರಖ್ಯಾತಿ ಪಡೆದಿದೆ. ಆ ಬಡಾವಣೆಯ ಮಧ್ಯದಲ್ಲಿ ನಿಂತು ತಲೆ ಎತ್ತಿ ನೋಡಿದರೆ ಸುತ್ತಲೂ ರಾಕ್ಷಸರ ಹಾಗೆ, ಬೃಹದಾಕಾರವಾದ ಪ್ಲಾಟ್ಗಳು ಕಾಣುತ್ತವೆ. ಸಾವಿರಾರು  ಕುಟುಂಬಗಳು ಅಲ್ಲಿಯ ಮನೆಗಳಲ್ಲಿ ನೆಲೆ ಬಿಟ್ಟಿವೆ.  ಆ ಬಡಾವಣೆಯ ಒಳ ನೋಟ ಹಸಿರಿನ ಗಿಡ ಮರಗಳಿಂದ ಕಂಗೊಳಿಸುವಂತೆ ಬಹಳ ಅಚ್ಚುಕಟ್ಟಾಗಿ ಮರ ಗಿಡಗಳನ್ನು ನೆಡಲಾಗಿದೆ. ಅಲ್ಲಿಯ ಜನರು ಬೆಳಗಿನ ಮತ್ತು ಸಂಜೆಯ ವೇಳೆಯಲ್ಲಿ ಸುತ್ತಾಡಲು ಕಟ್ಟಡಗಳ ಸುತ್ತಲೂ ಹುಲ್ಲಿನ ಕಾಲುದಾರಿಯನ್ನು ನಿರ್ಮಿಸಿ, ನಡೆದಾಡುವವರ ಮನ ಆಹ್ಲಾದಕರವಾಗುವಂತೆ ಮಾಡಲು ನೆರವಾಗುವಂತೆ ನಾನಾ ತೆರನಾದ ಹೂವಿನ ಗಿಡಗಳನ್ನು  ನೆಟ್ಟಿದ್ದಾರೆ. ಎಲ್ಲ ಕಟ್ಟಡಗಳಿಗೂ ವ್ಯಾಯಾಮ ಶಾಲೆ, ಟೆನಿಸ್ ಕೋರ್ಟು, ಬ್ಯಾಡ್ಮಿಂಟನ್   ಕೋರ್ಟು  ಮತ್ತು ಈಜು ಕೊಳಗಳನ್ನೂ ನಿರ್ಮಿಸಿದ್ದಾರೆ. ವಾಸಿಗರು ಒಮ್ಮೆ ಒಳಹೊಕ್ಕರೆ ಎಲ್ಲ ರೀತಿಯ ಸೌಕರ್ಯಗಳನ್ನು ಅಲ್ಲಿಯೇ ಒದಗಿಸಿ  ನಿರ್ಮಿಸಲಾಗಿರುವ ಕಟ್ಟಡಗಳ ಸಮುಚ್ಚಯ ಅದು.  

ನಾನು ‘ಜಿಂಕ್ ಲೇಔಟ್’ ತಲುಪಿದಾಗ ಸುಮಾರು ಎರಡು ಮೂವತ್ತರ ಸಮಯ. ಮಳೆ ಮೆಲ್ಲನೆ ತುಂತುರಿನ ಮೂಲಕ ತನ್ನ ಹೆಜ್ಜೆ ಊರಲು ಅಣಿಯಾಗುತ್ತಿತ್ತು.   ನಾನು ಪ್ರತಿ ಬಾರಿಯೂ ಇಲ್ಲಿಗೆ ಬರುವುದರಿಂದ ಗೇಟಿನಲ್ಲಿ ಸೆಕ್ಯೂರಿಟಿ ಯಾವುದೇ ಪ್ರಶ್ನೆಗಳನ್ನು ಕೇಳದೆ ಒಳಗೆ ಬಿಟ್ಟಿದ್ದ. ನಾನು ಬಡಾವಣೆಯ ಮಧ್ಯಕ್ಕೆ ಬಂದು, ನಾನು ವಿತರಣೆ ಮಾಡಬೇಕಿರುವ ಕಟ್ಟಡದ ಬಳಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ನಾನು ಹೋಗಿ ಸೇರಬೇಕಾದ ಆ ಹದಿಮೂರನೆಯ ಮಹಡಿಯತ್ತ ಒಮ್ಮೆ ತಲೆ ಎತ್ತಿ ನೋಡಿದೆ. ಅತ್ತ ಹೆಜ್ಜೆ ಹಾಕತೊಡಗಿದೆ.   

ನಾನು ಅತ್ತ ನಡೆಯುತ್ತಿದ್ದಂತೆ ಆ ಕಟ್ಟಡದ  ಮೂರನೆಯ ಮಹಡಿಯ ತೆರೆದ ಬಾಲ್ಕನಿಯಿಂದ ಹೆಣ್ಣಿನ ಆರ್ತನಾದವೊಂದು ನನ್ನ ಕಿವಿಗೆ ರಾಚಿತ್ತು. ನಾನು ಥಟ್ಟನೆ ಕತ್ತೆತ್ತಿ  ನೋಡಿದರೆ; ಹೆಣ್ಣೊಬ್ಬಳು ಆ ಬಾಲ್ಕನಿಯಿಂದ ಜೋರಾಗಿ ಅರುಚುತ್ತಿದ್ದಾಳೆ.  ನನಗೆ ಒಂದರೆಕ್ಷಣ ಆಕೆ ನನ್ನನ್ನು ಕುರಿತು ಏನನ್ನೋ ಹೇಳುತ್ತಿದ್ದಾಳೆಂದು ಕತ್ತನ್ನು ಮೇಲೆತ್ತಿ ನೋಡಿದರೆ; ನನ್ನ ಜಂಘಾಬಲವೇ ಉಡುಗಿದಂತಾಯ್ತು! ಮಗುವೊಂದು ಆ ಹುಡುಗಿಯಿದ್ದ ಬಾಲ್ಕನಿಯಿಂದ ಜಾರಿ ಎರಡನೆಯ ಮಹಡಿಯ ಕಿಟಕಿಗೆ ಜೋತು ಬಿದ್ದಿದೆ. ಆ ಮಗು ಇನ್ನೊಂದರೆಕ್ಷಣದಲ್ಲಿ  ಕೆಳಗೆ ಬೀಳುವ ಎಲ್ಲ ಸಾಧ್ಯತೆಗಳು ಹೆಚ್ಚಾಗುತ್ತಿತ್ತು. ಅವಳ ಆರ್ತನಾದ ಕೇಳಿ ಅಕ್ಕಪಕ್ಕದ ಮನೆಯವರೆಲ್ಲರೂ ತಮ್ಮ ಬಾಲ್ಕನಿಗೆ ಬಂದು ಜೋರಾಗಿ ಅರುಚತೊಡಗಿದರು. ಆ ಸದ್ದಿನಲ್ಲಿ, ಮಗುವಿನ ಅಳು ಕೇಳುತ್ತಲೇ ಇರಲಿಲ್ಲ. ನಾನು ಏನು ಮಾಡುವುದೆಂದು ನೋಡುತ್ತಿದ್ದ ಹಾಗೆ, ನನ್ನ ಸುತ್ತಲೂ ಜನರು ಬಂದು ನೆರೆದರು.

ನಾನು ಓಡುತ್ತಾ ಆ ಮಗು ನೇತಾಡುತ್ತಿದ್ದ ಆ ಕಿಟಕಿಯ ಕೆಳಗೆ ಹೋಗಿ ನಿಂತೆ.  ಆ ಮಗು ನೇತಾಡುತ್ತಿದ್ದ ಕೋನವನ್ನು ನೆಲದಿಂದ ನನ್ನ ಕಣ್ಣಲ್ಲೇ ಅಳೆಯುತ್ತಿರುವಾಗ, ಆ ಮಗು ನೇತಾಡುತ್ತಿದ್ದ ಕಿಟಕಿಯ ಕೆಳಗೆ ನೇರವಾಗಿ ನೀರಿನ ತೊಟ್ಟಿ ಇರುವುದನ್ನು ಕಂಡೆ. ಅದು  ಕಟ್ಟಡಗಳಿಗೆ ನೀರು ಸಬರಾಜು ಮಾಡಲು ನೆಲದಿಂದ ಹೊಂದಿಸಿರುವ ನೀರಿನ ಪೈಪು ಹಾದು ಹೋಗಿರುವ ತೊಟ್ಟಿ. ಸುಮಾರು ಐದು ಅಡಿ ಆಳದ ಆ ತೊಟ್ಟಿಯಲ್ಲಿ ಏನೋ ಸಮಸ್ಯೆ ತಲೆದೋರಿದ್ದರಿಂದ ಅದರ ಬಾರಿ ಮುಚ್ಚಳವನ್ನು ತೆಗೆದು ಇರಿಸಲಾಗಿತ್ತು. ಅದರಲ್ಲಿ ನೀರು ಸಹ ತುಂಬಿತ್ತು. ಮಗುವೇನಾದರೂ ಕೆಳಗೆ ಜಾರಿದರೆ ಅದು ಸೀದಾ ಆ ತೊಟ್ಟಿಯ ಒಳಗೆ ಬೀಳುವ ಎಲ್ಲ ಸಾಧ್ಯತೆಗಳನ್ನು ನಾನು ಮನಗೊಂಡೆ. ಎಲ್ಲದರ ಅವಲೋಕನವನ್ನು ನಾನು ಕ್ಷಣಾರ್ಧದಲ್ಲಿ ಮಾಡಿ ಮುಗಿಸಿದ್ದೆ. ಮಳೆಯಿಂದ ಅಂಚು ಜಾರುತ್ತಿದ್ದ ತೊಟ್ಟಿಯ ಮೇಲೇರಿ   ನಿಂತು ನಾನು ಮಗುವನ್ನು ಕಾಪಾಡಲು ಸಿದ್ದನಾದೆ. ನನ್ನ ಸುತ್ತಲೂ ನೆರೆದಿದ್ದ ಜನರು ಏನೊಂದೂ ತೋಚದೆ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಇದೀಗ ಫೈರ್ ಎಂಜಿನ್ ಬರುತ್ತದೆಂದು ಕಾಯುತ್ತಿದ್ದರು.

ಫೈರ್ ಎಂಜಿನ್ ಬರುವಷ್ಟು ಸಮಯ ಉಳಿದಿಲ್ಲವೆಂದು ನನ್ನ ಅಂತರಾಳ ಹೇಳುತ್ತಿತ್ತು. ನಾನೂ ನನ್ನೊಳಗೆ ನಡುಗಹತ್ತಿದೆ. ಆದರೂ ಧೈರ್ಯ ತಂದುಕೊಂಡು ಕಾರ್ಯೋನ್ಮುಖನಾದೆ!

ಜನರೆಲ್ಲರೂ ನೋಡುತ್ತಿದ್ದಂತೆಯೇ ಮಗು ಆ ಕಿಟಕಿಯಿಂದ ಕೈ ಕಾಲು ಬಡಿಯುತ್ತಾ ಜಾರಿ ಬಿಟ್ಟಿತು. ಮಗು ಕೆಳಕ್ಕೆ ಜೊಯ್ಯನೆ ಎಸೆಯಲ್ಪಟ್ಟಿತು. ನೆರೆದಿದ್ದ ಜನರೆಲ್ಲರೂ ಗಾಬರಿಯಿಂದ ಅರುಚತೊಡಗಿದರು. ಮಗು ಜೋರಾಗಿ ಜಾರುತ್ತಿದ್ದಂತೆ ನಾನು ಅದನ್ನೇ ತದೇಕಚಿತ್ತನಾಗಿ ನೋಡುತ್ತಾ ಚೆಂಡನ್ನು ಹಿಡಿಯುವಂತೆ ನನ್ನ ಕೈಗಳನ್ನು ಚಾಚಿದೆ. ನನ್ನ ಚಾಚಿದ ಕೈಗಳಿಂದ ಪುಟಿದೆದ್ದು ಮಗು ಸುಮಾರು ಒಂದು ಅಡಿಯಷ್ಟು ಮೇಲೆ ಜಿಗಿಯಿತು. ನಾನು ತೊಟ್ಟಿಯ ಅಂಚಿನಿಂದ ಡೈವ್ ಮಾಡಿ  ಮಗುವನ್ನು ಹಿಡಿದು  ನನ್ನೆದೆಗೆ  ಅಪ್ಪಿಕೊಂಡೆ. ಮಗುವನ್ನು ಅಪ್ಪಿಕೊಂಡ   ರಭಸಕ್ಕೆ ನಾನು ಆಯ ತಪ್ಪಿ ಆ ತೊಟ್ಟಿಯಲ್ಲಿ ಬಿದ್ದೆ. ನೀರಿನ ಕಂಬಿಗಳು ನನ್ನ ಬೆನ್ನನ್ನು ಒತ್ತಿದವು. ನಾನು ನೋವಿಗೆ ‘ ಹಾ ‘  ಎಂದು ಚೀರಿದೆ. ನಾನು ಮಗುವನ್ನು ನೀರಿನಿಂದ ಮೇಲಕ್ಕೆ ಎತ್ತಿ ಹಿಡಿದಿದ್ದೆ. ಮಗುವನ್ನು ನೀರಿನಲ್ಲಿ ಮುಳುಗಲು ನಾನು ಬಿಡಲಿಲ್ಲ. 

ಸುತ್ತಲೂ ನೆರೆದಿದ್ದ ಜನರೆಲ್ಲರೂ ಓಡಿ ಬಂದು ಮಗುವನ್ನು ನನ್ನ ಕೈಯಿಂದ ಪಡೆದು ನನ್ನನ್ನು ಮೇಲೆತ್ತಿದರು. ನನಗೆ ಜಯಕಾರ ಹಾಕುತ್ತ ತಮ್ಮ ಭುಜದ  ಮೇಲೆ ಸವಾರಿ ಮಾಡಿಸಿದರು. ಎಲ್ಲರ ಕಣ್ಣುಗಳಲ್ಲಿ ಆನಂದ ಬಾಷ್ಪ ಹರಿಯುತ್ತಿತ್ತು. 

ಆ ಮಗುವಿನ ತಂದೆ ಮಹಡಿಯಿಂದ ಇಳಿದು ಓಡುತ್ತಾ ಬಂದು ನನ್ನ ಕೈಯನ್ನು ಹಿಡಿದು ತಮ್ಮ ಹಣೆಗೆ ಒತ್ತಿ ನಮಸ್ಕರಿಸಿದರು. ಮಗುವಿನ ತಾಯಿ ನಡುಗುತ್ತಲೇ ಅಳುತ್ತಾ ನನ್ನ ಕಾಲನ್ನು ಮುಟ್ಟಿ ನಮಸ್ಕರಿಸಿದರು .  ಅವರೆಲ್ಲರೂ ಗದ್ಗದಿತರಾದರು.   ಯಾರಿಗೂ ಮಾತುಗಳೇ ಬರಲಿಲ್ಲ.

ಅಲ್ಲಿ ನೆರೆದಿದ್ದ ಎಲ್ಲ ನೆರೆಹೊರೆಯವರು ಆ ಮಗುವಿನ ತಂದೆಯೊಂದಿಗೆ ಸೇರಿ   ಮಗುವಿನ ಪಾಲನೆ ಮಾಡುವ ಆ ಹುಡುಗಿಯನ್ನು ಗದರಿಸಲು ಶುರು ಮಾಡಿದರು . ಅವಳನ್ನು ಪೊಲೀಸರಿಗೆ ಹಿಡಿದುಕೊಡಬೇಕೆಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದರು. ಆ ಹುಡುಗಿ ಬಿಕ್ಕುತ್ತಾ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾ  ಅಳುತ್ತಾ ನಿಂತಿದ್ದಳು. 

ಅಷ್ಟರಲ್ಲಿ  ಸ್ಥಳಕ್ಕೆ ಆಗಮಿಸಿದ  ಆಂಬ್ಯುಲೆನ್ಸ್ನಲ್ಲಿ ಮಗುವಿನ ಆರೋಗ್ಯ ಪರಿಶೀಲನೆಗಾಗಿ ಅದರ ತಾಯಿಯೊಂದಿಗೆ ಮಗುವನ್ನು  ಆಸ್ಪತ್ರೆಗೆ ರವಾನಿಸಿದರು. 

ಆ ಅಬಲೆ  ಅಳುತ್ತಾ ನನ್ನೆಡೆಗೇ ದೈನ್ಯತೆಯಿಂದ ನೋಡುತ್ತಿದ್ದಳು. ತನ್ನ ಅಜಾಗರೂಕತೆಯಿಂದ ಇಷ್ಟೆಲ್ಲಾ ಅನಾಹುತವಾಗಿ, ಮಗು ಬದುಕುಳಿದಿದ್ದು ಅವಳಿಗೆ ಜೀವ ಬಂದಂತಾಗಿತ್ತು. ಅವಳು ಪೆಚ್ಚಾಗಿ ಅಳುತ್ತಲೇ ಬಂದು ನನ್ನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದಳು. ನನಗೆ ಎಲ್ಲಿಲ್ಲದ ಮುಜುಗುರವಾಯಿತು. ನಾನು ಹಿಂದೆ ಸರಿದೆ. 

ಅವಳ ಆ ಬೇಡಿಕೆಯ ಕಣ್ಣೋಟ , ಅವಳನ್ನು ಕಾಪಾಡುವಂತೆ ನನ್ನನ್ನು ಕೇಳಿಕೊಳ್ಳುತ್ತಿತ್ತು.

ಕೊನೆಗೆ ಎಲ್ಲರೂ ಸೇರಿ ಅವಳನ್ನು ಕ್ಷಮಿಸುವಂತೆ ಮಗುವಿನ ತಂದೆಯ ಬಳಿ ಕೋರಿದರು. ಮಗು ಮತ್ತೆ ಜೀವಂತ ಸಿಕ್ಕಿದ್ದ ಹರುಷದಲ್ಲಿ ಅವರು ಆ ಹುಡುಗಿಯನ್ನು ಕ್ಷಮಿಸಿದರು. 

ನಾನು ಮಗುವನ್ನು  ಕಾಪಾಡಿದ ವಿಡಿಯೋವನ್ನು ಯಾರೋ ಪುಣ್ಯಾತ್ಮ ಸೆರೆ ಹಿಡಿದು ಅದನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದೇ  ತಡ, ನಾನು ನಿಂತಲ್ಲಿಯೇ ‘ಹೀರೊ’ ಆಗಿಬಿಟ್ಟಿದ್ದೆ. ನನಗೆ ನೂರಾರು ಕರೆಗಳು ಬರತೊಡಗಿದವು.

ನಾನು ಅವಳ ಆ ನೊಂದ   ಕಣ್ಣುಗಳೊಡನೆ ಸಾಂತ್ವನವನ್ನು ವಿನಿಮಯ ಮಾಡಿಕೊಳ್ಳುತ್ತಾ ಎಲ್ಲರಿಗೂ ವಿದಾಯ ಹೇಳುತ್ತಾ, ನನಗಾಗಿ ಕಾದು ಬೇಸತ್ತು ಹಸಿವೆಯಿಂದ ಬಳಲಿರಬಹುದಾದ  ನನ್ನ ನೆಚ್ಚಿನ ‘ಗ್ರಾಹಕರ’  ಕ್ಷಮೆ ಕೇಳುತ್ತಾ ಮನೆಯ ಕಡೆ ಹೊರಟೆ.   

ಅವಳ ಆ ಕಣ್ಣುಗಳು ನನ್ನನ್ನು ಹಿಂಬಾಲಿಸಿದ್ದವು .  

Leave a Comment

Your email address will not be published. Required fields are marked *

Scroll to Top