ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
ಕಥೆ : ಬೆಳ್ಳಿ ಎಲ್ಲಿ?
ಲೇಖಕರು : ಕೌಂಡಿನ್ಯ ಕೂಡ್ಲುತೋಟ
ಬೆಳಗ್ಗೆ ಎದ್ದೊಡನೆಯೇ ತಾನೇ ಕಾಫೀ ಮಾಡಿಕೊಳ್ಳುವುದು ಸಮರ್ಥನಿಗೆ ರೂಢಿಯಾಗಿ ಹೋಗಿತ್ತು. ಕಾರಣ, ಇವನ ತಾಯಿ ಕಾತ್ಯಾಯಿನಿಯು ಪ್ರತಿ ನಿತ್ಯ ಇವನು ಏಳುವ ಸಮಯಕ್ಕಿಂತ ಮೊದಲೇ ದೇವರೆದುರು ಕುಳಿತು ವ್ರತಾಚರಣೆಯಲ್ಲಿ ಮಗ್ನರಾಗಿರುತ್ತಿದ್ದರು. ತನ್ನ ಮುದ್ದಿನ ಮಗನಿಗೆ ಬೇಗ ಒಂದು ಸುಸಂಸ್ಕೃತೆಯಾದ ಹೆಣ್ಣು ಸಿಗಲಿ ಎಂಬುದು ಅವರ ಆಂತರ್ಯದ ಅಪೇಕ್ಷೆಯಾಗಿತ್ತು. ಆದರೆ ಅಂದು ಅಡುಗೇ ಮನೆಗೆ ಹೋದ ಸಮರ್ಥನಿಗೆ ಕಂಡದ್ದು ಹಾಲಿನ ಬಟ್ಟಲೊಳಗೆ ತನ್ನ ಸೊಡ್ಡನ್ನು ಒಡ್ಡಿ ಕುಳಿತಿದ್ದ ಕರಿ ಮೂತಿಯ ಬಿಳಿ ಬೆಕ್ಕು. “ಹಚ್, ಹಚ್… “ಎಂದು ಅದನ್ನು ಓಡಿಸುತ್ತಾ, “ಅಮ್ಮಾ ನಿಂಗ್ ಎಷ್ಟ್ಸಾರಿ ಹೇಳಿದೀನೇ… ಈ ಮನೇಲಿ ನಾನಿರ್ಬೇಕು ಅಥಾವಾ ಈ ಸುಟ್ ಬೆಕ್ ಇರ್ಬೇಕು ಅಂತಾ… ನೀನ್ ಮಾತ್ರಾ ಮನೆಗೆ ತಾನಾಗೇ ಬೆಕ್ ಬಂದು ಸೇರಿದ್ರೆ ಮನೇಲಿ ಮಂಗಳ ಕಾರ್ಯ ಆಗತ್ತೆ ಅದೂ ಇದೂ, ಮಣ್ಣು-ಮಸ್ಕಿ ಅಂತಾ ಈ ಸುಪನಾತಿ ಬೆಕ್ಕಿಗೆ ಹಾಲ್ಸುರ್ದು ಅಭ್ಯಾಸ ಮಾಡ್ಬುಟೀದೀಯ… ನಿಂಗೆ ಗೊತ್ತಿಲ್ವಾ? ನನ್ಗೆ ಬೆಳ್ಗೆ ಎದ್ ತಕ್ಷಣ ಕಾಫಿ ಇಲ್ಲಾ ಅಂದ್ರೆ ಏನಾಗತ್ತೆ ಅಂತ… ನಾನ್ ಭಟ್ರ ಹೋಟ್ಲಿಗೆ ಹೋಗ್ಬರ್ತೀನಿ” ಎಂದು ಓಂದೇ ಸಮನೇ ಕೊಸರಾಡುತ್ತಾ ತನ್ನ ಪ್ರಾಣ ಸ್ನೇಹಿತ ರಾಘುವಿಗೆ ಫೋನಾಯಿಸಿ ಮನೆಯಿಂದ ಹೊರಟು ಹೋಗಿದ್ದನು. ಇತ್ತ ಸಮರ್ಥನ ತಾಯಿ ವಿಷ್ಣುಸಹಸ್ರನಾಮದ ಪಠಣೆಯಲ್ಲಿ ಮುಳುಗಿಹೋಗಿದ್ದರು.
“ಈ ರಾಘು ಇದ್ದಾನಲ್ರೀ ಅವ್ನು ನಮ್ಮ ಸಮರ್ಥನ ಬಲಗೈ ಎಂದು ಅವರಮ್ಮ ನೆರೆಮನೆಯವರೆದುರಿಗೆಲ್ಲಾ ಹೆಮ್ಮೆಯಿಂದ ಹೇಳುತ್ತಾ ಓಡಾಡುತ್ತಿದ್ದರೆ ಅತ್ತ ರಾಘುವಿನ ತಂದೆಯೂ ತಮ್ಮ ವಾಕಿಂಗ್ ಮಿತ್ರರೊಡನೆ, “ಈ ಸಮರ್ಥ ಇದ್ದಾನಲ್ಲಾ ಅವ್ನು ನಮ್ ರಾಘೂನ ಬಲಗೈ ಭಂಟ ಕಣ್ರೀ, ಥೇಟ್ ರಾಮನ್ ಜೊತೆ ಹನುಮಂತ ಇರ್ತಾನಲ್ಲಾ ಹಂಗೇ…” ಎನ್ನುತ್ತಿದ್ದರು! ಲರ್ನಿಂಗ್ ಸಮಯದಿಂದ ಸಿಲ್ಲೀ, ಸಿಲ್ಲೀ ಕ್ರೈಮಿಂಗ್ ತನಕ ಪಾರ್ಟನರ್ಸ್ ಆಗಿದ್ದ ಅವರುಗಳ ಮಧ್ಯೆ ಮಾತ್ರ ಅಂತಹದ್ಯಾವುದೇ ಭಾವನೆಗಳಿರಲಿಲ್ಲ.
ಅಂದು ಗೋಣೀಚೀಲದಲ್ಲಿ ಸಿಲುಕಿಕೊಂಡಿದ್ದ ಬೆಕ್ಕು, ಬೈಕ್ಕಿನ ಹಿಂಬದಿ ಕುಳಿತಿದ್ದ ರಾಘುವಿನ ಎಡ ಬುಜದಮೇಲಿದ್ದರೆ, ಸಮರ್ಥನು ತನ್ನ ಬಲಗೈನಿಂದ ಬೈಕಿನ ಆಕ್ಸಿಲರೇಟರನ್ನು ಜೋರಾಗಿ ಕೊಡುತ್ತಾ ತನ್ನ ಪ್ರಯಾಣದ ದೂರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದನು. ಆಗ ರಾಘು, “ಮೊದ್ಲೇ ನಿಂಗ್ ಹೆಣ್ ಸಿಗ್ತಿಲ್ಲ, ಅಂತಾದ್ರಲ್ ಮನೇಗ್ ಬಂದ್ ಸೇರ್ಕಂಡ ಬೆಕ್ನ ಓಡಿಸ್ತೀನಿ ಅಂತೀಯಲ್ಲ ಮಗ…” ಎಂದಿದ್ದನು. ಅದಕ್ಕೆ ಸಮರ್ಥ, “ಇದ್ನೆಲ್ಲಾ ನೀನೂ ನಂಬ್ತೀಯ? ಕೆಪ್ರೇ…” ಎಂದಿದ್ದನು. ರಾಘು,“ನಂಬ್ತೀನಿ… ಆದ್ರೆ ನಮ್ಮನೆಗ್ ಬೆಕ್ಕಿರ್ಲಿ ಒಂದ್ ಹೆಗ್ಣಾನೂ ಬಂದ್ ಸೇರ್ಕೋತಿಲ್ಲ ಮಗಾ…” ಎಂದಿದ್ದನು. ಅದಕ್ಕೆ ಸಮರ್ಥ ನಗುತ್ತಾ, “ಹಾಗಿದ್ರೆ ನಿಂಗ್ ಈ ವರ್ಷ ಮದ್ವೆ ಫಿಕ್ಸು ಬಿಡು…”ಎಂದಿದ್ದನು. ರಾಘು, “ಓ… ಯಾಕ್ ಬಂದ್ದುಡು… ನೀನ್ ವಯಸ್ಸಲ್ಲಿ ನನ್ಗಿಂತ ಮೂರ್ ವಾರ ದೊಡ್ಡವ್ನು, ಕಾಲೇಜ್ ಗೆಸ್ಟ್ ಲಕ್ಚರ್ ಬೇರೆ… ನಿಂದ್ ಆದ್ಮೇಲೇ ನಂದು…” ಎಂದಿದ್ದನು. ಅದಕ್ಕೆ ಸಮರ್ಥ, “ಈ ಬೆಕ್ಕು ತಿರ್ಗಾ ಬಂದ್ ನಿಮ್ಮನೇನೇ ಸೇರ್ಬೇಕು… ಹೆಂಗೂ ನಿನ್ ವಾಸ್ನೆ ಅದು ಹಿಡ್ದಿರುತ್ತೆ”ಎನ್ನುತ್ತಾ ನಕ್ಕಿದ್ದನು. ಹೀಗೇ ಕಾಲೆಳೆದುಕೊಳ್ಳುತ್ತಾ ಹತ್ತಿರದ ಪೊದೆಯೊಂದರ ಬಳಿ ಬೈಕನ್ನು ನಿಲ್ಲಿಸಿ ಚೀಲದ ಬಾಯಿ ಬಿಚ್ಚಿ, ಬೆಕ್ಕನ್ನು ಅದರಿಂದ ಹೊರಹಾಕಿದ್ದೇ ತಡ ಇಬ್ಬರೂ ಮತ್ತೆ ಬೈಕ್ ಹತ್ತಿ ಊರೆಡೆಗೆ ಮುಖ ಮಾಡಿದ್ದರು.
* * * *
ವಿನೋಭಾ ನಗರದ ಲಕ್ಷ್ಮೀಕಾಂತ ವಕೀಲರ ಮಗಳಿಗೆ ಗಂಡು ಹುಡುಕುತ್ತಾ ನಾಲ್ಕು ವರ್ಷಗಳೇ ಕಳೆದಿತ್ತು. ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳ ಹಲವಾರು ವರರ ಭಾವಚಿತ್ರ ವಕೀಲರ ಮನೆಯನ್ನು ಸೋಕಿ ಹೋಗಿತ್ತಾದರೂ ಅವರ ಮಗಳು ವಾಹಿನಿಗೆ ಕಂಕಣ ಬಲ ಕೂಡಿ ಬಂದಿರಲಿಲ್ಲ. ವಾಹಿನಿಯ ಅಮ್ಮ ಶಾರದ ಕೂಡಾ ಮಾಡದ ವ್ರತಾಚರಣೆಗಳಿರಲಿಲ್ಲ, ಹೋಗದ ದೇವಸ್ಥಾನಗಳಿರಲಿಲ್ಲ. ಹುಡುಗನ ರೂಪ, ವರಮಾನ, ಅವರ ಕುಟುಂಬದ ಆಸ್ತಿ – ಅಂತಸ್ತು ಇವುಗಳನ್ನೆಲ್ಲಾ ಬಯಸದ ವಾಹಿನಿಗೆ ತನ್ನ ಹುಡುಗ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಮತ್ತು ತನ್ನ ಮನಸ್ಥಿತಿಗೆ ಹೊಂದಿಕೆಯಾಗುವಂತಿರಬೇಕು ಎನ್ನುವ ಆಸೆಯಷ್ಟೇ ಇತ್ತು. ವಾಹಿನಿಯು ವೃತ್ತಿಯಲ್ಲಿ ಮಿಡಲ್ ಸ್ಕೂಲ್ ಸೈನ್ಸ್ ಟೀಚರ್ ಆಗಿದ್ದರೂ ಸಹಾ ಅವಳ ಸ್ನೇಹಿತೆಯ ಜೊತೆ ಸೇರಿ ಗಾಯಗೊಂಡ ಬೀದಿ ಬದಿಯ ಸಾಕು ಪ್ರಾಣಿಗಳನ್ನು ಪಾಲನೆ-ಪೋಷಣೆ ಮಾಡುವ ಎನ್.ಜಿ.ಓ ಒಂದನ್ನು ನಡೆಸುತ್ತಿದ್ದಳು. ಹಾಗಾಗಿ ಅವಳಿಗೆ ಸಹಜವೆಂಬಂತೆ ಸಾಕು ಪ್ರಾಣಿಗಳ ಮೇಲಿನ ಪ್ರೀತಿ ಅಪಾರವೇ ಆಗಿತ್ತು.
ವಕೀಲರು ತನ್ನ ಹೆಂಡತಿ ಮತ್ತು ಮಗಳೊಡನೆ ಮತನಾಡುತ್ತಾ ಕುಳಿತಿದ್ದಾಗ ಪಕ್ಕದ ಕಿಟುಕಿಯಿಂದ ಒಳ ನುಸುಳುತ್ತಾ, ವಕೀಲರ ಬುಜ ಬಳಸಿ ಒಳಬಂದ ಬಿಳಿ ಹಾಗೂ ಭೂದು ಬಣ್ಣ ಮಿಶ್ರಣದ ಬೆಕ್ಕೊಂದು ವಾಹಿನಿಯ ಕಾಲಬಳಿ ಹೋಗಿ ಕುಳಿತು “ಮಿಯಾಂ”ಎಂದಿತ್ತು. ಅದನ್ನು ಕಂಡಿದ್ದೇ ವಾಹಿನಿಯು ನಿಧಾನವಾಗಿ ಅದರ ಬಳಿ ಹೋಗಿ, ಬೆಕ್ಕು ಓಡದಂತೆ ಎಚ್ಚರ ವಹಿಸಿ ಅದನ್ನು ಎತ್ತಿ ತನ್ನ ತೊಡೆಯಮೇಲೆ ಕೂರಿಸಿಕೊಂಡಿದ್ದಳು. ಬೆಕ್ಕು ನಾಯಿಗಳೆಂದರೆ ಅಲರ್ಜಿಯಂತಾಡುವ ವಕೀಲರಿಗೆ ಇದು ಸಹ್ಯವಾಗಿರಲಿಲ್ಲ. “ಈ ಮನೆಯಲ್ಲಿ ಸಾಕು ಪ್ರಾಣಿ ನಿಷೇದ ಖಾಯ್ದೆ ಅನ್ವಯವಾಗಿದೆ, ನಾವೇನಾದರೂ ಪ್ರಾಣಿಗಳನ್ನು ಸಾಕಿದ್ರೆ ನಮ್ ವಕೀಲ್ರು ನಮ್ ಮೇಲೆ ಕೇಸ್ ಹಾಕ್ಬಿಡ್ತಾರೆ” ಎಂದು ವಾಹಿನಿ ಮತ್ತು ಅವರ ಅಮ್ಮ ಶಾರದ ಹಲವರ ಬಳಿ ಹಾಸ್ಯಮಾಡುತ್ತಿದ್ದರು. ಆದರೆ ಅಂದು ವಕೀಲರು ಬಾಯಿ ತೆರೆವ ಮೊದಲೇ ಬಾಯಿತೆರೆದ ಶಾರದಾರವರು, “ರೀ ಈ ಬೆಕ್ ಬಂದ್ ಸೇರ್ಕೊಂಡ್ರೆ ಮನೇಲಿ ಶುಭ ಕಾರ್ಯ ಆಗತ್ತಂತೆ, ನೀವ್ ಈ ಸಾರಿ ಸಾಕೋದ್ ಬೇಡ ಅನ್ನೋಹಾಗೇ ಇಲ್ಲ ಮತ್ತೆ”ಎಂದಿದ್ದೇ, ವಕೀಲರು,”ನಮ್ ಮಗ್ಳಿಗೆ ಮದ್ವೆ ಆಗತ್ತೆ ಅನ್ನೋದಾದ್ರೆ ಬೆಕ್ಕೇನು ಹುಲೀನೇ ಸಾಕಿದ್ರಾಯ್ತು ತಗೋ”ಎಂದಿದ್ದರು. ಆಗ ವಾಹಿನಿಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಲ್ಲಿಂದ ಆ ಬೆಕ್ಕು ‘ಬೆಳ್ಳಿ’ ಅನ್ನೋ ಹೆಸರಿನಿಂದ ವಕೀಲರ ಮನೆಯ ಅತ್ಯಾಪ್ತ ಆಗುತ್ತಾ ಹೋಗಿತ್ತು. ಒಡಹುಟ್ಟಿಲ್ಲದ ವಾಹಿನಿಯು ಬೆಳ್ಳಿಯನ್ನು ಸರ್ವಸ್ವದಷ್ಟು ಪ್ರೀತಿಸಲು ಪ್ರಾರಂಭಿಸಿದ್ದಳು. ಅದೂ ಸಹ ವಾಹಿನಿಯನ್ನು ಬಹಳಾ ಹಚ್ಚಿಕೊಂಡಿತ್ತು.
* * * *
ದೂರದ ಸಂಬಂಧಿಕರಿಂದ ವಾಹಿನಿಯ ಜಾತಕ ತೆಗೆದುಕೊಂಡ ಸಮರ್ಥನ ತಾಯಿಯು ಅದನ್ನು ಶಾಸ್ತಿಗಳ ಬಳಿ ನೋಡಿಸಲು ಕೊಟ್ಟಿದ್ದರು. ಅತ್ತ, ಸಮರ್ಥನ ಫೋಟೋ ಮತ್ತು ಪ್ರವರಗಳನ್ನು ನೋಡಿದ ವಾಹಿನಿಯು ಮುಂದಿನ ಮಾತುಕತೆಗೆ ಒಪ್ಪಿದ್ದಳು. ನಾಳೆ ಬರಲಿರುವ ವರನೆದುರಿಗೆ ಯಥಾಪ್ರಕಾರ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆಯಂತೆ ಅಂದು ಬ್ಯೂಟೀ ಪಾರ್ಲರಗೆ ಹೊರಟ ವಾಹಿನಿ,”ನಮ್ಮನೇಲೇ ಕಾಫಿ ಕುಡಿಯೋಕ್ ಬರ್ತಿರೋ ಎಂಟ್ನೇ ಹುಡ್ಗ ಇವ್ನು, ಹೊರ್ಗಡೆ ಸಿಕ್ಕಿದವ್ರನ್ನೂ ಸೇರ್ಸಿ ಒಟ್ಟು ಹದಿನೈದನೆಯವ್ನು” ಎಂದುಕೊಂಡಿದ್ದಳು. ಜೊತೆಗೆ, “ಇಲ್ಲೀ ತನ್ಕ ಒಬ್ಬೇ ಒಬ್ಬ ಹುಡುಗಾನು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಲಿಲ್ಲ. ಇವ್ನಾದ್ರೂ ನೋಡ್ಲಿ” ಎಂದುಕೊಂಡಿದ್ದಳು.
* * * *
ಅತ್ತ ಸಮರ್ಥ ತನ್ನ ಹದಿಮೂರನೆಯ ವಧು ಅನ್ವೇಷಣೆಗೆ ಸಜ್ಜಾಗಿದ್ದ. ಆದರೀಗ ಅವನು ಮೊದಲಿನಂತೆ ಹುಡುಗಿಯ ಮನೆಗೆ ಹೋಗುವ ಮುನ್ನಾ ದಿನ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಿಸಬೇಕು ಎಂದು ತನಗೆ ತಾನೇ ಹಾಕಿಕೊಂಡಿದ್ದ ರೂಲ್ಸನ್ನು ಬ್ರೇಕ್ ಮಾಡಲು ಪ್ರಾರಂಭಿಸಿದ್ದ. “ಯಾವುದೇ ಹುಡುಗಿಯಾದರೂ ಅಷ್ಟೇ, ಪ್ಯಾಕೇಜು, ಆಸ್ತಿ ಅಂತಸ್ತಿನ ಬಗ್ಗೆ ಕೇಳ್ತಾರೆ. ಅಪ್ಪ ಅಮ್ಮ ಇಲ್ಲ ಅಂದ್ರೆ ಮುಗುಳುನಗೆ ಬೀರ್ತಾರೆ, ಆದ್ರೆ ಯಾರೂ ಲೈಫಲ್ಲಿ ನೀವು ಎಷ್ಟು ನೆಮ್ಮದಿಯಾಗಿದ್ದೀರ? ನಿಮ್ಮನ್ನ ಮದ್ವೆ ಆದ್ರೆ ನಾನೆಷ್ಟು ನೆಮ್ಮದಿಯಾಗಿರ್ಬಹುದು ಅಂತ ಕೇಳಲ್ಲ. ಇವಳಾದ್ರೂ ಕೇಳ್ಲಿ”ಎಂದುಕೊಳ್ಳುತ್ತಾ ತೆಯಾರಾಗಿದ್ದ.
ಸಮರ್ಥ ಕಾರಿನಲ್ಲಿ ತನ್ನ ತಂದೆ-ತಾಯಿಯೊಂದಿಗೆ ವಾಹಿನಿಯ ಮನೆಯೆಡೆಗೆ ಹೊರಟಿದ್ದನು. ರಾಘು ಬೈಕಿನಲ್ಲಿ ಅವನ ಹಿಂದೆ ಹೊಗುತ್ತಿದ್ದನು. ಮೂವರೂ ವಿಘ್ನ ನಿವಾರಕ ಗಣೇಶನ ಹಾಡೊಂದನ್ನು ಕೇಳುತ್ತಾ ಹೋಗುತ್ತಿದ್ದಾಗ ಕಾರಿನ ಎದುರು ಬೆಕ್ಕೊಂದು ಹಾದು ಹೋಗಿತ್ತು. ತಕ್ಷಣಕ್ಕೆ ಸಮರ್ಥನನ್ನು ತಡೆದ ಕಾತ್ಯಾಯಿನಿಯವರು, “ಕಾರನ್ನ ರಿವರ್ಸ್ ತಗೊಂಡು ನಿಲ್ಸು ಸಮೂ… ಐದ್ ನಿಮಿಷ ಬಿಟ್ ಹೋಗೋಣ” ಎಂದಿದ್ದರು. ಅದಕ್ಕೆ ಸಮರ್ಥ, “ಅಮ್ಮಾ ನಿಂದ್ ಯಾವಾಗ್ಲೂ ಇದೇ ಆಯ್ತು… ಅದೇನ್ ಮೂಡ್ನಂಬ್ಕೇನೋ ಏನೋ ನಿಂಗೆ. ನಾನ್ ಮದ್ವೆ ಮಾಡ್ಕೋಬೇಕು ಅಂದ್ರೆ, ನಿನ್ ಇಂತ ಮೂಡ್ನಂಬ್ಕೆ ಮತ್ತೆ ಈ ತಲೆ ಬುಡಾ ಇಲ್ದಿರೋ ಶಾಸ್ತ್ರಾ ಹೇಳೋದ್ನೆಲ್ಲಾ ಬಿಡ್ಬೇಕು… ಇಲ್ಲಾ ಅಂದ್ರೆ ನನ್ ಫ್ಯೂಚರ್ ಹೆಂಡ್ತಿ ನಿನ್ ಅವತಾರ ನೋಡಿ ಬಿದ್ದು ಬಿದ್ದು ನಗ್ತಾಳೆ ಅಷ್ಟೇ… ಈಗ್ಲೇ ಹೇಳಿದೀನಿ”ಎಂದಿದ್ದನು. ಅದಕ್ಕೆ ಕಾತ್ಯಾಯಿನಿಯವರು “ಓ… ನಗ್ತಾಳೆ, ನಗ್ತಾಳೆ, ಆಗ ನೀನ್ ಚಪ್ಪಾಳೆ ತಟ್ಟಿ ಕುಣಿದ್ಬಿಡು… ಈಗಿನವಕ್ಕೆ ಇಷ್ಟೇ ತಾನೆ ಗೊತ್ತಿರೋದು. ನಮ್ ಸಂಸ್ಕೃತಿ, ಸಂಪ್ರದಾಯ ಎಲ್ಲಾ ನಿಮ್ಗೆಲ್ ಆಗತ್ತೆ… ನಾನ್ ನಿನ್ ಒಳ್ಳೇದಕ್ಕೇ ಹೇಳೋದು ಅನ್ನೋದ್ನ ಮರಿಬೇಡೋ ಸಮೂ” ಎಂದು ಕಣ್ಣನ್ನು ಒದ್ದೆ ಮಾಡಿಕೊಂಡಿದ್ದರು. ಆಗ ಸಮರ್ಥನ ತಂದೆ ರಮೇಶ್, “ಸುಮ್ನೆ ಗಾಡಿ ಓಡ್ಸೊ ಮಗ್ನೆ… ನಂದು ಟೈಂ ಅಂದ್ರೆ ಟೈಮ್… ನಿಮ್ಮಮ್ಮ ಹೇಳೋದ್ನ ನಾನ್ ನಂಬಲ್ಲ ಅಂತಲ್ಲ ಆದ್ರೆ ಕೊಟ್ ಟೈಮ್ನ ಯಾವಾಗ್ಲು ಮೀರ್ಬಾರ್ದು… ನೀನ್ ನಡಿ, ಪ್ರತೀ ತಪ್ಪಿಗೂ ಒಂದ್ ಪ್ರಾಯಶ್ಚಿತ್ತ ಅಂತ ಇದ್ದೇ ಇರತ್ತೆ ಮಾಡ್ಕೊಂಡ್ರಾಯ್ತು” ಎನ್ನುತ್ತಾ ಇಬ್ಬರನ್ನೂ ಆ ಹೊತ್ತಿಗೆ ಸಮಾದಾನಗೊಳಿಸಿದ್ದರು. ಸಮರ್ಥ,“ಅಪ್ಪಾ, ನಿಮ್ದು ಹಾವೂ ಸಾಯಬಾರ್ದು ಕೋಲೂ ಮುರಿಬಾರ್ದು ಅನ್ನೂ ನೀತಿ ಅಲ್ವಾ?”ಎಂದು ನಕ್ಕಿದ್ದನು. ಇದನ್ನು ಗಮನಿಸುತ್ತಾ ಕಾರ್ ಹಿಂದೆಯೇ ನಿಂತಿದ್ದ ರಾಘುವಿಗೆ ಸನ್ನೆ ಮಾಡಿ ಸಮರ್ಥ ಮುಂದೆ ಹೊರಟಿದ್ದನು.
* * * *
ಲಕ್ಷ್ಮೀಕಾಂತ ವಕೀಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ವಾಹಿನಿ ಎಂದಿನಂತೆ ಸಿಂಗಾರಗೊಂಡು ಕೈಯಲ್ಲಿ ‘ಬೆಳ್ಳಿ’ಯನ್ನು ಹಿಡಿದು ನಿಂತಿದ್ದಳು. ಅವಳ ಸಹಾಯಕ್ಕೆ ಬಂದಿದ್ದ ಅವಳ ಪ್ರಾಣ ಸ್ನೇಹಿತೆ ಮೇಘ,”ಲೇ ಇದೇ ಲಾಷ್ಟು ಕಣೇ… ಈ ಹುಡ್ಗನ್ನ ಒಪ್ಪದ್ಯೋ ನೀನ್ ಬಚಾವಾಗ್ತೀಯ… ಇಲ್ಲಾ ಅಂದ್ರೆ ನೆಕ್ಸ್ಟ್ ನಾನಂತೂ ಬರಲ್ಲ ಅಷ್ಟೇ…”ಎಂದು ನಕ್ಕಿದ್ದಳು. ಅದಕ್ಕೆ ವಾಹಿನಿ”ಇನ್ನು ನೂರ್ ಹುಡುಗ್ರನ್ನ ನೋಡಿದ್ರೂ ನೀನ್ ಬರ್ತೀಯ, ಬರ್ಬೇಕು ಅಷ್ಟೇ”ಎಂದು ಆದೇಶದಂತೆ ಹೇಳಿ, ಮೇಘಳ ತೋಳನ್ನು ಚಿವುಟುದ್ದಳು. ಆ ಸಮಯಕ್ಕೆ ಸರಿಯಾಗಿ ಸಮರ್ಥನ ಕಾರು ವಾಹಿನಿಯ ಮನೆ ಮುಂದೆ ಬಂದು ನಿಂತಿತ್ತು.
ಎರೆಡೂ ಕುಟುಂಬಗಳ ಪರಸ್ಪರ ಪರಿಚಯ, ಉಭಯ ಕುಶಲೋಪರಿ, ನಡೆದ ನಂತರ ವಾಹಿನಿ ಎಲ್ಲರಿಗೂ ಕಾಫಿ ಕೊಟ್ಟಳು. ನಂತರ ಹುಡುಗ-ಹುಡುಗಿ ಇಬ್ಬರೂ ಮಾತನಾಡಿಕೊಳ್ಳಲು ಅವರ ಮನೆಯ ಹಿತ್ತಲಿಗೆ ಕಳುಹಿಸಿದ್ದರು. ವಕೀಲರ ಮನೆ ಇದ್ದ ಜಾಗ ಈಗ ಪಟ್ಟಣವಾಗಿ ಮಾರ್ಪಾಡಾಗಿದ್ದರೂ ಅವರು ಮನೆ ಕಟ್ಟುವ ಹೊತ್ತಿಗೆ ಅದು ಹಳ್ಳಿಯೇ ಆಗಿತ್ತು. ಮೂವತ್ತು ವರ್ಷದ ಹಳೆಯ ಮನೆ ಅದಾದರೂ ಬಹಳಾ ಸುಂದರವಾಗಿತ್ತು. ಮನೆಗೆ ತಾಕಿಕೊಂಡಂತಿದ್ದ ಹಿತ್ತಲಿನ ಮಧ್ಯೆ ಓಂದು ಸಣ್ಣ ಕುಠೀರವನ್ನು ನಿರ್ಮಿಸಲಾಗಿತ್ತು. ಅದು ವಕೀಲರು ಸಂಜೆಯ ಹೊತ್ತಿಗೆ ತಮ್ಮ ಸ್ನೇಹಿತರೊಂದಿಗೆ ಕುಳಿತು ಚಹಾ ಸೇವಿಸುವ ಜಾಗವಾಗಿತ್ತು. ಅಲ್ಲಿಗೆ ಸಮರ್ಥನನ್ನು ಕರೆದುಕೊಂಡು ಹೊರಟ ವಾಹಿನಿಯು ಕೈಯಲ್ಲೇ ಸ್ಥಾಪಿತವಾಗಿದ್ದ ಬೆಕ್ಕಿನ ಮೈ ಸವರುತ್ತಾ ಸಮರ್ಥನಿಂದಲೇ ಮೊದಲ ಮಾತನ್ನು ನಿರೀಕ್ಷಿಸುತ್ತಿದ್ದಳು.
ಮೌನ ಮುರಿದ ಸಮರ್ಥ, “ನಿಮ್ಗೆ ಬೆಕ್ಕು ಅಂದ್ರೆ ತುಂಬಾ ಇಷ್ಟ ಅನ್ಸತ್ತೆ ಅಲ್ವಾ?”ಎಂದಿದ್ದನು. ಅದಕ್ಕೆ ತಲೆಯಾಡಿಸಿದ ವಾಹಿನಿ,”ನಿಮಗೆ?” ಎಂದಿದ್ದಳು. ಸಮರ್ಥ ನಿಜ ಹೇಳ್ಬೇಕಾ ಅಥವಾ ಅವ್ಳ ಸಮಾದಾನಕ್ಕೆ ಸುಳ್ಳು ಹೇಳ್ಬೇಕಾ ಅನ್ನೋ ಯೋಚನೆಯಲ್ಲಿ ಮಾತು ಬದಲಿಸುತ್ತಾ “ನಿಮ್ಗೆ ನಿಮ್ ಬೆಟ್ಟರ್ ಹಾಲ್ಫ್ ಬಗ್ಗೆ ಏನ್ ನಿರೀಕ್ಷೆ ಇದೆ? ನಿಮ್ಮವ್ನು ಹೇಗಿರ್ಬೇಕು ಅಂತಿದೆ?” ಎಂದು ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ದನು. ಅದಕ್ಕೆ ವಾಹಿನಿ, “ನನಗೆ ರೂಪ, ಶ್ರೀಮಂತಿಗೆ ಎಲ್ಲಕ್ಕಿಂತ ಗುಣ ಮುಖ್ಯ. ನಾನು ಮದ್ವೆ ಆಗೋ ಹುಡುಗನಿಗೆ ಹೊಂದಿಕೊಳ್ಳುವ ಗುಣ ಇರಬೇಕು. ಇನ್ನೊಬ್ಬರ ಮನಸನ್ನು ಅರ್ಥ ಮಾಡ್ಕೊಳ್ಳೋ ಸಹನೆ ಇರ್ಬೇಕು. ಸದಾ ಖುಷಿ ಖುಷಿಯಾಗಿರ್ಬೇಕು ಅಷ್ಟೆ…” ಎಂದಿದ್ದಳು. ಅದಕ್ಕೆ ಸಮರ್ಥ, “ನೈಸ್, ನಂದೂ ಸೇಮ್ ಥಿಂಕಿಂಗ್ ಎಂದಿದ್ದ. ಹೀಗೆ ಅವರಿಬ್ಬರೂ ಬಹಳಷ್ಟು ವಿಚಾರವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆಗ ವಾಹಿನಿಯ ಅಮ್ಮ ಅವಳನ್ನು ಒಳಗೆ ಬಂದು ಹೋಗುವಂತೆ ಕರೆದಿದ್ದರು. “ಸ್ವಾರಿ… ಈಗ ಬಂದೆ” ಎನ್ನುತ್ತಾ ಬೆಳ್ಳಿಯನ್ನು ಅಲ್ಲೇ ಕೆಳಗೆ ಬಿಟ್ಟು ವಾಹಿನಿ ಒಳ ನಡೆದಿದ್ದಳು.
ಬೆಳ್ಳಿಯು, ಮಿಯಾಂ, ಮಿಯಾಂ ಎನ್ನುತ್ತಾ ಸಮರ್ಥನ ಕಾಲು ಸುತ್ತಲು ಪ್ರಾರಂಭಿಸಿತ್ತು. ಸಮರ್ಥ ಒಂದೆರೆಡುಭಾರಿ ಅದನ್ನು ತನ್ನ ಕಾಲಿನಿಂದ ಮೃದುವಾಗಿ ದೂರ ತಳ್ಳಿದ್ದ. ಬೆಳ್ಳಿಯು ವಾಹಿನಿಯ ಕೈಲಿದ್ದಾಗ ಎಷ್ಟು ಸಭ್ಯವಾಗಿರುತ್ತಿತ್ತೋ ಹಾಗೆ ಅವಳಿಲ್ಲದಾಗ ಅಷ್ಟೇ ತರಲೆಯಂತೆ ಆಡುತ್ತಿತ್ತು. ಅದು ಸಮರ್ಥನ ಮೈ ಮೆಲೆ ಹಾರಿ ತುಸು ಪರಚಿತ್ತು. ಇದರಿಂದ ಕೋಪಗೊಂಡ ಸಮರ್ಥ ಅದನ್ನು ಕೈಯಿಂದ ಕೆಳ ತಳ್ಳಿ ಕಾಲಿನಿಂದ ಗಟ್ಟಿಯಾಗಿ ಒದ್ದುಬಿಟ್ಟಿದ್ದ! ಬೆಳ್ಳಿ ಮಿಯಾಂ ಎಂದು ಆಕ್ರಂದಿಸುತ್ತಾ ಹತ್ತಿರದ ದಾಸವಾಳ ಗಿಡದ ಬುಡದಲ್ಲಿನ ಪೊದೆಯೊಳಗೆ ಹೋಗಿ ಬಿದ್ದಿತ್ತು. ಸಮರ್ಥನ ಒಳಗೇ ಹೆಪ್ಪುಗಟ್ಟಿದ್ದ ಹಲವಾರು ಕೋಪಗಳೆಲ್ಲಾ ಅಂದು ಒಮ್ಮೆಲೇ ಅವನಲ್ಲಿ ಮೇಳೈಸಿತ್ತು. ಸೂಕ್ಷ ಪ್ರಾಣಿಯಾದ ಬೆಕ್ಕಿನ ಮೇಲೆ ತನ್ನ ಶಕ್ತಿಯನ್ನು ಗೊತ್ತಾಗದೇ ಉಪಯೋಗಿಸಿದ್ದನು. ಅಯ್ಯೋ, ತಾನು ಎಂತಹಾ ತಪ್ಪು ಮಾಡಿದೆ ನ್ನುವುದನ್ನು ಮನಗೊಂಡ ಸಮರ್ಥ, ಆ ಬೆಕ್ಕಿಗೆ ಏನಾಯಿತೆಂದು ನೋಡಲು ಹೊರಡಬೇಕು ಎನ್ನುವಷ್ಟರಲ್ಲಿ ವಾಹಿನಿ ಅಲ್ಲಿಗೆ ಮರಳಿ ಬಂದಿದ್ದಳು. ಬಂದವಳೇ ತುಸು ಬೆವೆತಂತಿದ್ದ ಸಮರ್ಥನನ್ನು ನೋಡುತ್ತಾ “ಸ್ವಾರಿ ಫಾರ್ ದಿ ಲೇಟ್… ನನ್ನ ಸೋದರ ಮಾವ ಈಗ ತಾನೇ ಬಂದ್ರು, ಅವ್ರನ್ನ ಮಾತಾಡ್ಸೋಕ್ ಅಂತ ಕರ್ದಿದ್ರು… ಸ್ವಾರೀ…, ನೀವ್ ಈ ಕೂಲ್ ವೆದರಲ್ಲೂ ಬೆವ್ರಿದೀರಾ… ಯಾಕೆ ನನ್ ನೋಡಿ ಭಯ ಆಗ್ತಿದ್ಯಾ?” ಎಂದು ನಗುತ್ತಾ ಕುಠೀರದ ಮರದ ಬೆಂಚಿನ ಮೇಲೆ ಕೂರಲು ಸೂಚಿಸಿದ್ದಳು. ಸಮರ್ಥನು ತನ್ನ ಹಣೆಯ ಮೇಲಿನ ಬೆವರ ಹನಿಯನ್ನು ಕರ್ಚಿಫ್ನಲ್ಲಿ ಒರೆಸಿಕೊಳ್ಳುತ್ತಾ, “ಹಾ, ನಿಜ ಹೇಳಬೇಕಂದ್ರೆ ನೀವು, ನಾನ್ ನೋಡ್ತಿರೋ ಮೊದಲ್ನೆ ಹುಡ್ಗಿ ಏನಲ್ಲ ಆದ್ರೆ ಆಮ್ ಸ್ವಾರಿ, ನಾನು ಇವತ್ ಫಸ್ಟ್ ಟೈಮ್ ನರ್ವೆಸ್ ಆಗ್ತಿದೀನಿ” ಎನ್ನುತ್ತಾ ಆ ಬೆಕ್ಕು ಇಲ್ಲಿಂದ ಏನಾದ್ರೂ ಕಾಣಿಸುತ್ತಿದೆಯೇ ಎಂದು ನೋಡಿ, ಅದು ಕಾಣುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದನು. ಅದಕ್ಕೆ ಗಾಯವಾಗಿದೆಯೆ ಅಥಾವ ಸತ್ತೇ ಹೋಯಿತೆ ಎಂಬೆಲ್ಲಾ ಯೋಚನೆ ಬಂದಿದ್ದೇ ಸಮರ್ಥನ ಹಣೆಯಲ್ಲಿನ ಬೆವರ ಹನಿ ಹೆಚ್ಚಾಗಿತ್ತು. ಮಾತು ಮುಂದುವರೆಸಿದ ವಾಹಿನಿ, “ಮತ್ತೆ, ಹೇಗನ್ಸ್ತು ನಮ್ ಮನೆ?”ಎಂದಿದ್ದಳು. ಅದಕ್ಕೆ ಸಮರ್ಥ,”ಓ… ನೈಸ್… ನನ್ಗೆ ನಿಮ್ ಮನೆ, ಈ ಗಾರ್ಡನ್ ತುಂಬಾನೇ ಇಷ್ಟ ಆಯ್ತು.
ಅದಕ್ಕಿಂತ ಹೆಚ್ಚು ನಿಮ್ಮ ಅಪ್ಪ ಇಷ್ಟ ಆದ್ರು… ಹೀ ಇಸ್ ನೈಸ್ ಜಂಟಲ್ ಮ್ಯಾನ್”ಎಂದಿದ್ದನು. ಅದಕ್ಕೆ ಉತ್ತರಿಸಿದ ವಾಹಿನಿ, ”ಓ ನೀವ್ ಹೀಗೆ ನಮ್ಮಪ್ಪಂಗೆ ಹೊಗ್ಳೋದನ್ನ ಅವ್ರೇನಾದ್ರೂ ಕೇಳಿಸ್ಕೊಂಡ್ರೆ ಅವ್ರು ನನ್ನ ಒಪ್ಗೇನೂ ಪಡಿದೇ ನಾಳೇನೇ ನಿಮ್ ಜೊತೆ ಮದ್ವೆ ಮಾಡಿ ಕೊಟ್ರೂ ಕೊಟ್ರೆ” ಎಂದು ನಕ್ಕಿದ್ದಳು. ಮತ್ತೆ ಏನೋ ನೆನಪಾದವಳಂತೆ,”ನನ್ ಬೆಳ್ಳಿ ಇಷ್ಟ ಆಗ್ಲಿಲ್ವ ನಿಮಗೆ?” ಎಂದು ಕೇಳಿದ್ದಳು. ಅದಕ್ಕೆ ತನ್ನ ಹಳಸಲು ಮುಖದಲ್ಲಿ ಕೃತಕ ನಗು ತರಿಸುತ್ತಾ” ಓ ತುಂಬಾ ಇಷ್ಟ ಆಯ್ತು, ನನ್ ಹತ್ರ ಆಟಾಡ್ತಿತ್ತು ಅದು ಅದ್ಯಾವ್ದೋ ಒಂದು ಮಾಳ ಬೆಕ್ಕು ಕೂಗ್ತು ನೋಡಿ, ಓಡಿದ್ದೇ ನನ್ ಕೈಗೆ ಸಿಗ್ಲೇ ಇಲ್ಲ”ಎಂಬ ಹಸಿ ಸುಳ್ಳನ್ನಾಡಿದ್ದ. ಅದಕ್ಕೆ ವಾಹಿನಿ, “ಅಯ್ಯೋ… ಹೌದ… ಬೆಳ್ಳೀ, ಬೆಳ್ಳೀ… ಎಲ್ಲೋದ್ಯೇ… ನಾ ನೋಡಿದ್ಹಾಗೆ ಈ ಸುತ್ತ ಮುತ್ತ ಅಂತ ಯಾವ್ದು ಮಾಳ ಬೆಕ್ಕಿರ್ಲಿಲ್ಲ… ಛೇ…ಬೇಳ್ಳೀ…”ಎಂದು ಕೂಗುತ್ತಾ, “ಬೇಜಾರಾಗ್ಬೇಡಿ, ಬೆಳ್ಳಿ ಎಲ್ಲೋದ್ಲು ಅಂತ ಒಂದ್ಸಾರಿ ನೋಡ್ಕೊಂಡ್ ಬಂದ್ಬಿಡ್ತೀನಿ” ಎನ್ನುತ್ತಾ ಆ ಹಿತ್ತಲ ಸುತ್ತ ಒಮ್ಮೆ ಕಣ್ಣಾಡಿಸಿ ಮನೆಯೊಳಗೆ ಹೋಗಿದ್ದಳು. ಅವಳು ಹೋದ ರೀತಿಯೇ ಅವಳು ಮನೆಯನ್ನೆಲ್ಲಾ ಜಾಲಾಡದೇ ಬರುವುದಿಲ್ಲ ಎಂಬುದನ್ನು ಸೂಚಿಸಿತ್ತು. ಇದೇ ಸಮಯವನ್ನು ಬಳಸಿಕೊಂಡ ಸಮರ್ಥ, ಗಿಡದ ಸಂದಿಯಲ್ಲಿ ಬಿದ್ದಿದ್ದ ಬೆಕ್ಕಿನತ್ತ ಓಡಿದ್ದನು. ಅದು ಸತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವನಿಗೆ ಹೆಚ್ಚು ಸಮಯ ಹಿಡಿದಿರಲಿಲ್ಲ. ತಕ್ಷಣ ಮುಂದೇನು ಮಾಡಬೇಕು ಎಂಬ ಯೋಚನೆಗೆ ಬಿದ್ದಿದ್ದನು. ಹೊಂಡ ತೋಡಿ ಹೂತುಬಿಡೋಣ ಎನ್ನುವುದು ಆ ಹೊತ್ತಿಗೆ ಅಸಾದ್ಯವಾದ ಮಾತಾಗಿತ್ತು. ಗಾರ್ಡನ್ನಿನ ಕಾಂಪೌಂಡ್ನಿಂದಾಚೆ ಎಸೆದುಬಿಡೋಣ ಎಂದುಕೊಂಡಿದ್ದನು ಆದರೆ ಅವನಿಗೆ ನಾನೀಗ ಮಾಡಿದ್ದೇ ದೊಡ್ಡ ಪಾಪದ ಕೆಲಸ, ಇನ್ನು ಈ ಮುದ್ದಿನ ಬೆಕ್ಕನ್ನು ಎಸೆದರೆ ಅದಕ್ಕಿಂತ ಪಾಪ ಇರಲಾರದು ಎಂದು ಸುಮ್ಮನಾಗಿದ್ದನು. ಬೆಕ್ಕನ್ನು ಇಲ್ಲಿಯೇ ಬಿಟ್ಟುಬಿಡಬಹುದು ಆದರೆ ವಾಹಿನಿ ಇಲ್ಲೆಲ್ಲಾ ಹುಡುಕಿ ನನ್ನೆದುರೇ ಅದು ಸಿಕ್ಕರೆ ಅವಳಿಗೆ ನನ್ನ ಮೇಲೆ ಖಂಡಿತಾ ಅನುಮಾನ ಬರುತ್ತದೆ ಎಂದುಕೊಂಡಿದ್ದನು. ಮತ್ತೇನು ಮಾಡುವುದು ಎಂದು ಆ ಕ್ಷಣಕ್ಕೆ ಅವನಿಗೆ ತಿಳಿದಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ವಾಹಿನಿ ಮತ್ತೆ ಗಾರ್ಡನ್ನಿನತ್ತ ಮರಳುತ್ತಿದ್ದಾಳೆ ಎಂಬುದು ಅವಳ ಗೆಜ್ಜೆ ಸಪ್ಪಳವೇ ಹೇಳುತ್ತಿತ್ತು. ತಡ ಮಾಡದ ಸಮರ್ಥ ಬೆಕ್ಕನ್ನು ತನ್ನ ಹೊಟ್ಟೆಯ ಭಾಗದ, ಬನಿಯನ್ ಮತ್ತು ಶರ್ಟಿನ ಮದ್ಯೆ ಇಟ್ಟು ಇನ್ಶರ್ಟ್ ಮಾಡಿ ತಾನಿದ್ದ ಜಾಗಕ್ಕೆ ಹೋಗಿ ಕುಳಿತುಕೊಂಡಿದ್ದನು. ಆಗ ಅಲ್ಲಿಗ ಬಂದ ವಾಹಿನಿ, “ಸ್ವಾರಿ, ನಾನು ಬೆಳ್ಳೀನ ತುಂಬಾ ಹಚ್ಕೊಂಡ್ಬಿಟ್ಟಿದೀನಿ… ಸೋ ಅದು ಕಾಣ್ತಿಲ್ಲ ಅಂತ ಟೆಂಕ್ಷನ್ ಆಗ್ತಿದೆ. ಬಟ್ ರಿಯಲೀ ಸ್ವಾರಿ, ನಾನು ನಿಮ್ಮ ಟೈಂನ ಸುಮ್ನೇ ವೇಸ್ಟ್ ಮಾಡತಿದೀನಿ” ಎನ್ನುತ್ತಾ ಅವರು ತಮ್ಮ ನಡುವಿನ ಮಾತುಗಳನ್ನು ಮುಂದುವರೆಸಿದ್ದರು. ಆದರೆ ವಾಹಿನಿ ಸಮರ್ಥನ ಹೊಟ್ಟೆಯನ್ನು ಮಾತ್ರಾ ಗಮನಿಸಿರಲಿಲ್ಲ.
ಇತ್ತ ಮನೆಯೊಳಗೆ, ಪುರುಷರೆಲ್ಲರೂ ಜಗುಲಿಯಲ್ಲಿ ಕುಳಿತು ರಾಜಕೀಯ, ಧರ್ಮ, ಕ್ರೀಡೆಯಂತಹಾ ಮಾತುಕತೆಗಳಲ್ಲಿ ತಲ್ಲೀನರಾಗಿದ್ದರು. ಮಹಿಳೆಯರು, ಉಪ್ಪಿಟ್ಟು- ಕೇಸರಿಬಾತುಗಳನ್ನು ತಟ್ಟೆಗೆ ಬಡಿಸುತ್ತಾ ಧಾರಾವಾಹಿ, ಹೂವಿನ ಗಿಡ, ಭಜನೆ ಇಂತಹಾ ವಿಷಯಗಳನ್ನು ಮಾತನಾಡುತ್ತಿದ್ದರು. ವಾಹಿನಿ ಮತ್ತು ಸಮರ್ಥ ಇಬ್ಬರೂ ಮನೆಯೊಳಗೆ ಹಿಂತಿರುಗುತ್ತಿರುವುದನ್ನು ಕಂಡು ಮತ್ತೆ ಎಲ್ಲಾ ಹೊರಜಗುಲಿಯಲ್ಲಿ ಸೇರಿದ್ದರು. ಇಬ್ಬರೂ ನಗು-ನಗುತ್ತಾ ಒಳ ಬಂದಿದ್ದನ್ನು ಗಮನಿಸಿದ್ದ ಇವರಿಬ್ಬರ ತಂದೇ-ತಾಯಿಯರೂ ಮನದಲ್ಲೇ ಸಂತಸಪಟ್ಟಿದ್ದರು.
ವಾಹಿನಿಯ ತಂದೆ ಲಕ್ಷ್ಮೀಕಾಂತ ವಕೀಲರು ಮಾತನ್ನಾಡುತ್ತಾ, “ಹುಡುಗ-ಹುಡುಗಿ ಇಬ್ರೂ ಎಷ್ಟ್ ಹೊತ್ ಮಾತಾಡಿದಾರೆ ಅಂದ್ರೆ ಮಾಡಿಟ್ಟ ತಿಂಡಿ ತಣಿದೋಗೋವಷ್ಟು. ಇಬ್ರು ಅವ್ರವ್ರ ಅಭಿಪ್ರಾಯ ಕೊಟ್ರೆ ಮುಂದ್ವರೀಬಹುದು ಏನಂತೀರಿ?” ಎಂದು ಎಲ್ಲರತ್ತ ನೋಡಿದ್ದರು. ಎಲ್ಲರೂ ಹೌದೆಂಬಂತೆ ತಲೆಯನ್ನಾಡಿಸಿದ್ದರು. ನಂತರ ಸಮರ್ಥ “ನನಗಂತೂ ಒಪ್ಪಿಗೆ” ಇದೆ ಎಂದು ನಾಚಿಕೆಯ ನಗೆ ನಕ್ಕಿದ್ದ ಆದರೆ ಅವನ ಎದೆಯಲ್ಲಿನ ಭಯ ಇನ್ನೂ ಆರಿರಲಿಲ್ಲ. ಬೆಳ್ಳಿಯ ಬಗೆಗಿನ ಯೋಚನೆಗಳಲ್ಲೇ ಮುಳುಗಿದ್ದ ವಾಹಿನಿಯು, “ಸಮರ್ಥ್ ನನಗೂ ಇಷ್ಟ ಆಗಿದಾರೆ ಆದ್ರೆ ನನ್ಗೆ ಯೋಚಿಸೋಕೆ ಒಂದೆರ್ಡ್ ದಿನ ಟೈಂ ಬೇಕಿತ್ತು”ಎಂದಿದ್ದಳು. ಅದಕ್ಕೆ ಎಲ್ಲರೂ ಒಪ್ಪಿದ್ದರು. ವಾಹಿನಿಯ ಸೋದರ ಮಾವ ಮಾತನಾಡುತ್ತಾ,”ಅಲ್ಲಾ ಸಮರ್ಥ್, ನೀನು ಹೊಟ್ಟೇ ಸ್ವಲ್ಪ ಕರಗಿಸ್ಬೇಕಪ್ಪಾ… ನಿನ್ ಬಾಡಿಗ್ ಹೋಲ್ಸಿದ್ರೆ ನಿನ್ ಹೊಟ್ಟೆ ಚೂರ್ ಜಾಸ್ತಿ ಆಯ್ತು, ನಾನು ಯೋಗ ಗುರು ಆದ್ರಿಂದ ಹೇಳ್ದೆ ಬೇಜಾರಾಗ್ಬೇಡಪ್ಪಾ ಎಂದಿದ್ದರು”. ಬಾವನ ಈ ಮಾತಿನಿಂದ ಬಾವಿ ಅಳಿಯಂದ್ರು ಎಲ್ಲಿ ಬೇಜಾರಾಗ್ಬಿಡ್ತಾರೋ ಎಂದು ಹೆದರಿದ ವಕೀಲರು,”ಅಯ್ಯೋ… ಅವ್ರು ಬಂದಾಗ ಗಮ್ನಿಸಿದ್ದೆ ಬಾವಾ… ಹೊಟ್ಟೆ ಎಷ್ಟ್ ಬೇಕೋ ಅಷ್ಟೇ ಇತ್ತು… ಈಗ ಸುಮಾರಹೊತ್ತಾಯ್ತಲ್ವಾ ಏನೂ ತಿನ್ದೆ ಗ್ಯಾಸ್ಟ್ರಿಕ್ ಜಾಸ್ತಿ ಆಗಿ ಹೊಟ್ಟೆ ಉಬ್ಬರ್ಸಿದೆ ಅನ್ಸತ್ತೆ… ತಿಂಡಿ ತಿಂದ್ರೆ ಎಲ್ಲಾ ಸರಿಯಾಗತ್ತೆ ಬಿಡಿ… ಬನ್ನಿ ಎಲ್ಲಾ ತಿಂಡಿಗೆ ಹೋಗೋಣ”ಎನ್ನುತ್ತಾ ಮಾತನ್ನು ಬದಲಾಯಿಸಲು ಪ್ರಯತ್ನಿಸಿದ್ದರು. ವಾಹಿನಿ ಈಗ ಸಮರ್ಥನ ಹೊಟ್ಟೆಯೆಡೆಗೊಮ್ಮೆ ಕಣ್ಣಾಡಿಸಿದಳಾದರೂ ಅವಳಿಗೆ ಅದೇನೂ ಹೆಚ್ಚು ಎನ್ನಿಸಲಿಲ್ಲವಾದ್ದರಿಂದ ಕೂಡಲೇ ಎದ್ದು ಮೇಘಳೊಂದಿಗೆ ಬೆಳ್ಳಿಯ ಹುಡುಕಾಟದಲ್ಲಿ ತೊಡಗಿದ್ದಳು. ತಿಂಡಿಯ ನಂತರ ಎರೆಡೂ ಕುಟುಂಬಗಳೂ ಪರಸ್ಪರ ತಮ್ಮ ಮನೆಗಳಿಗೆ ಕರೆಯುತ್ತಾ ಬೀಳ್ಕೊಟ್ಟಿದ್ದರು. ವಾಹಿನಿಗೂ ಸಮರ್ಥನ ಗುಣ-ನಡತೆ ಇಷ್ವಾಗಿತ್ತಾದ್ದರಿಂದ ಅವಳು ಸಮರ್ಥನನ್ನು ಓರೆಗಣ್ಣಿನಿಂದ ನೋಡುತ್ತಾ, “ಸ್ವಾರಿ, ನಿಮ್ಮನ್ನು ಒಪ್ಪಲು ಟೈಂ ತೆಗೆದುಕೊಂಡಿದ್ದಕ್ಕೆ” ಎಂಬಂತೆ ಮುಖ ಸನ್ನೆ ಮಾಡಿದ್ದಳು. ಸಮರ್ಥ ವಾಹಿನಿಯ ಕಡೆಗೆ ಮುಗುಳುನಗೆಯೊಂದಿಗೆ ಕೈ ಬೀರುತ್ತಾ ಅಲ್ಲಿಂದ ಹೊರನಡೆದಿದ್ದನು. ವಾಹಿನಿಯು ಈಗಾಗಲೇ ಅವನ ಮನಸಲ್ಲಿ ನಿಂತು ಆಗಿತ್ತು.
ಅವರಮನೆಯ ಗೇಟ್ನಿಂದ ಹೊರ ಬಂದಿದ್ದೇ ಕಾರ್ ಕೀಯನ್ನು ಅಪ್ಪನಿಗೆ ಕೊಟ್ಟ ಸಮರ್ಥ, “ಅಪ್ಪ ನೀನು ಅಮ್ಮ ಮನೇಗ್ ಹೋಗಿರಿ. ನನ್ಗೆ ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ. ನಾನು ರಾಘು ಬೈಕಲ್ಲಿ ಮುಂದಾಗಿರ್ತೀನಿ”ಎನ್ನುತ್ತಾ ಅವರ ಉತ್ತರಕ್ಕೂ ಕಾಯದೇ ರಾಘುವಿನ ಬೈಕನ್ನೇರಿ ಕುಳಿತಿದ್ದನು. ಕಾತ್ಯಾಯಿನಿಯವರು, “ಸಮೂ, ಗ್ಯಾಸ್ಟ್ರಿಕ್ ಆಗಿದ್ಯೇನೋ… ಒಂದ್ಸಾರಿ ಡಾಕ್ಟರ್ಹತ್ರ ಹೋಗಿ ತೋರ್ಸ್ಕೋ ಬಂದ್ಬಿಡಪ್ಪಾ”ಎಂದಿದ್ದರು. ಅದಕ್ಕವನು “ಹೂಂ ಅಮ್ಮಾ ಅದಕ್ಕೇ ಹೊರ್ಟೆ”ಎನ್ನುತ್ತಾ ರಾಘುವಿನ ಬುಜ ತಿವಿದಿದ್ದನು.
* * * *
ವಾಹಿನಿಯ ಮನೆಯವರಿಗೆಲ್ಲಾ ಸಮರ್ಥ ಮತ್ತವನ ಕುಟುಂಬದವರು ಹಿಡಿಸಿದ್ದರು. ವಾಹಿನಿ ಎರಡು ದಿನದ ಕಾಲಾವಕಾಶ ಕೇಳಿರದಿದ್ದರೆ ವಕೀಲರು ಸೀದಾ ಶಾಸ್ತ್ರಿಗಳ ಮನೆಗೆ ಹೋಗಿ ದಿನಾಂಕ ನಿಗದು ಮಾಡುವಷ್ಟು ಆತುರವನ್ನು ತೋರಿಸುತ್ತಿದ್ದರು. ಆದರೆ ತನ್ನ ಮುದ್ದಿನ ಬೆಕ್ಕು ಕಳೆದುಹೋದ ಬೇಸರದಲ್ಲಿದ್ದ ವಾಹಿನಿಯು ತನ್ನ ಅಮ್ಮನನ್ನು ಒಳಕೋಣೆಗೆ ಕರೆದು ಬಾಗಿಲು ಮುಚ್ಚಿಕೊಂಡಿದ್ದಳು. ವಾಹಿನಿ ಅಳುತ್ತಿದ್ದಿದ್ದನ್ನು ಗಮನಿಸಿದ ಶಾರದರವರು, “ಮಗಳೇ, ಏನಾಯ್ತೇ… ಹುಡುಗ ಏನಾದ್ರೂ ಹೇಳಿ ನಿನ್ ಮನ್ಸಿಗೆ ಬೇಜಾರ್ ಮಾಡಿದ್ನೇನೆ? ಇವ್ನು ಹಿಡ್ಸಿಲ್ಲ ಅಂದ್ರೆ ಹೇಳು, ಬೇರೆ ಹುಡ್ಗನ್ನ ನೋಡಿದ್ರಾಯ್ತು”ಎಂದಿದ್ದಳು. ಅದಕ್ಕೆ ವಾಹಿನಿ, “ಇಲ್ಲಮ್ಮಾ… ನನ್ಗೆ ಹುಡ್ಗ ತುಂಬಾ ಇಷ್ಟ ಆದ. ಅವಾಗ್ಲೇ ಒಪ್ಪಿಗೇನೂ ಕೊಟ್ಬಿಡ್ತಿದ್ದೆ. ಆದ್ರೆ ನಮ್ ಬೆಳ್ಳಿ ಕಾಣಿಸ್ತಿಲ್ಲಮ್ಮಾ. ಅವ್ನು ಈ ಮನೇಗೆ ಕಾಲಿಟ್ಟ ಗಳಿಗೇನೆ ಸರಿ ಇಲ್ಲ ಅನುಸ್ತು… ಅದ್ಕೇ ಸುಮ್ನಾದೆ”ಎಂದಿದ್ದಳು. ಸ್ವಲ್ಪ ಸಮಯ ಏನೋ ಯೋಚಿಸುತ್ತಿದ್ದ ಶಾರದಾರವರು, “ಅಯ್ಯೋ ಮಳ್ಳೀ… ಬೆಕ್ಕು ಕಾಣಿಸ್ತಿಲ್ಲ ಅಂದ್ರೆ ಅದ್ಕೆ ಕಾರಣ ಇದ್ಯಮ್ಮಾ… ನೋಡು ಈ ಬೆಕ್ಕು ಮದ್ವೆ ಆಗ್ದಿರೋಕಡೆ ಬಂದು ಸೇರ್ಕೊಂಡ್ರೆ ಅಲ್ಲಿ ಮದ್ವೆ ನಡ್ಯುತ್ತೆ ಅಂತಾರೆ… ಮುಂಚೆ ಎಷ್ಟೊಂದ್ ಹುಡುಗ್ರನ್ನ ನೋಡಿದಾಗ ಅದು ಇಲ್ಲೇ ಇತ್ತಲ್ವ? ಈಗ ಅದು ಧಿಡೀರಂತ ಕಾಣೆಯಾಗಿದೆ ಅಂದ್ರೆ ಅದು ತಾನು ಬಂದ ಕೆಲ್ಸ ಮುಗ್ಸಿದೆ ಅಂತಾನೂ ಅಂದ್ಕೊಬೋದು ಅಲ್ವಾ? ನನ್ಗಂತೂ ಈ ಸಂಬಂಧ ಆಗತ್ತೆ ಅನಿಸ್ತಿದೆ. ಯಾಕಂದ್ರೆ ಅವ್ರು ಬರೋದಕ್ಕೂ ಸರಿಯಾಗಿ ದೇವರಮನೇಲಿರೋ ಗಣಪತಿ ಫೋಟೋದಿಂದ ಪ್ರಸಾದನೂ ಆಯ್ತು.” ನಿನ್ಗೆ ಹುಡ್ಗ ಇಷ್ಟ ಆದ್ರೆ ತಡ ಮಾಡ್ದೇ ಒಪ್ಕೋ… ಹುಡ್ಗನ್ ಅಪ್ಪ ಅಮ್ಮಾನೂ ಆಸ್ತಿಕ್ರು. ನಂಗೆ ಅವ್ರು ತುಂಬಾ ಹಿಡ್ಸಿದ್ರು”ಎಂದಿದ್ದಳು. ವಾಹಿನಿ ತುಸು ಹೊತ್ತು ಯೋಚಿಸಿ, “ಬೆಳ್ಳಿ ಈ ಮನೇಗ್ ಬಂದಾಗಿಂದ ನನ್ ಬಿಟ್ಟು ಅದೆಲ್ಲಿಗು ಹೋಗಿರ್ಲಿಲ್ಲ… ಅದು ವಾಪಾಸ್ ಬರತ್ತೆ ಅಲ್ವಾ ಅಮ್ಮಾ”ಎಂದು ಅಮ್ಮಳ ಕೈ ಹಿಡಿದು ಅತ್ತಿದ್ದಳು. ಅದಕ್ಕೆ ಶಾರದಾರವರು, “ಅದು ಅದ್ರ ಕೆಲ್ಸ ಮುಗ್ಸಿದ್ರೆ ಮತ್ತೆ ಬರಲ್ಲ, ಇಲ್ಲ ಅಂದ್ರೆ ಬರಬಹುದು. ನೀನು ಇವತ್ತಲ್ಲಾ ನಾಳೆ ಬೇರೊಂದು ಮನೇನ ಬೆಳ್ಗೋಳು, ಅಲ್ಲೇ ಒಂದು ಬೆಕ್ಕನ್ನ ಸಾಕಿದ್ರಾಯ್ತು ಅಲ್ವ ಮಗ್ಳೆ… ಅದಕ್ಕಾಗಿ ಜೀವ್ನಾ ಹಾಳು ಮಾಡ್ಕೋತಾರ? ಅಪ್ಪಂಗೂ ಹುಡ್ಗ ತುಂಬಾ ಹಿಡ್ಸಿದಾನೆ. ನಿಮ್ಮಿಬ್ರ ಪ್ರೊಫೇಶನ್ಣೂ ಆಲ್ಮೋಸ್ಟ್ ಸೇಮ್ ಅಲ್ವಾ? ಯೋಚ್ನೆಮಾಡಿ ಹೇಳಮ್ಮ… ನಂಗೆ ಅಡುಗೇಮನೇಲಿ ತುಂಬಾ ಕೆಲ್ಸ ಇದೆ” ಎನ್ನುತ್ತಾ ವಾಹಿನಿಯ ಬೆನ್ನು ಸವರಿ ಅಲ್ಲಿಂದ ಎದ್ದು ಹೊರಟಿದ್ದರು.
* * * *
ಇತ್ತ ಬೈಕಿನಲ್ಲಿ ಹೋಗುತ್ತಿದ್ದ ಸಮರ್ಥನು ರಾಘುವಿಗೆ ವಾಹಿನಿಯ ಮನೆಯಲ್ಲಿ ನಡೆದಿದ್ದ ಘಟನೆಯನ್ನು ವಿವರಿಸಿದ್ದನು. ಸಮರ್ಥನ ಹೊಟ್ಟೆಯಲ್ಲಿದ್ದದ್ದು ಗ್ಯಾಸ್ ಅಲ್ಲ ಸತ್ತ ಬೆಕ್ಕು ಎಂದು ತಿಳಿದಿದ್ದೇ ಗೊಳ್ ಎಂದು ನಕ್ಕಿದ್ದ ರಾಘು, ತಕ್ಷಣವೇ ಗಂಭೀರವಾಗಿ,“ಅನ್ಯಾಯ್ವಾಗಿ ಒಂದ್ ಬೆಕ್ಕನ್ನ ಸಾಯ್ಸ್ಬಿಟ್ಯಲ್ಲೋ… ದಾರೀಲಿ ಬೆಕ್ ಅಡ್ಡಬಂದಾಗ್ಲೇ ನೀನ್ ನಿಮ್ ಅಮ್ಮನ್ ಮಾತು ಕೇಳಿದ್ರೆ ಹಿಂಗಾಗ್ತಿರ್ಲಿಲ್ಲ ನೋಡು”ಎಂದಿದ್ದದ್ದನು. ಅದಕ್ಕೆ ಸಮರ್ಥ, “ನೀನೊಳ್ಳೇ ಓಬೀರಾಯನ್ ಕಾಲ್ದವ್ನಂಗೇ ಆಡ್ತೀಯಲ್ಲೋ… ಈ ಬೆಕ್ಕನ್ನ ಎಲ್ಲಿ ಮಣ್ ಮಾಡೋದುಅಂತ ಮೊದ್ಲ್ ಯೋಚ್ನೆ ಮಾಡು” ಎಂದಿದ್ದನು.
ರಾಘು, ಜನ ನಿಭಿಡತೆ ಕಡಿಮೆ ಇದ್ದ ಹತ್ತಿರದ ಸ್ಥಳದಲ್ಲಿ ಗಾಡಿ ನಿಲ್ಲಿಸಿ, ಅಲ್ಲೆ ಇದ್ದ ಒಂದು ಸಣ್ಣ ಗುಂಡಿಯೊಳಗೆ ಬೆಳ್ಳಿಯನ್ನು ಇಟ್ಟಿದ್ದನು. ಸಮರ್ಥ, “ರಿಯಲಿ ಸ್ವಾರಿ ವಾಹಿನಿ…” ಎನ್ನುತ್ತಾ ಅದರ ಮೇಲೆ ಒಂದು ಮುಷ್ಟಿ ಮಣ್ಣನ್ನು ಸುರಿದಿದ್ದನು. ರಾಘು, ಗುಂಡಿಯನ್ನು ಮುಚ್ಚಿ, ಅಲ್ಲೇ ಹತ್ತರದ .ಬೇಲಿಯಲ್ಲಿದ್ದ ದಾಸವಾಳದ ಹೆರೆಯನ್ನು ಮುರಿದು ನೆಟ್ಟಿದ್ದನು. ರಾಘು ಸಮರ್ಥನ ಬಳಿ ವಾಹಿನಿಯ ಬಗೆಗೆ ವಿಚಾರಿಸುತ್ತಾ ತನ್ನ ಮನೆಯಕಡೆಗೇ ಬೈಕನ್ನು ಚಲಾಯಿಸಿದ್ದ. ಮನೆಯೆದುರು ನಿಂತ ರಾಘು ಮತ್ತು ಸಮರ್ಥನಿಗೆ ಅಂದು ದೂರ ಬಿಟ್ಟು ಬಂದಿದ್ದ ಕರಿ ಮೂತಿಯ ಬಿಳಿಯ ಬೆಕ್ಕು ಸ್ವಾಗತ ಕೋರಿತ್ತು!.
* * * *
ವಾಹಿನಿ ಸಮರ್ಥನನ್ನು ಒಪ್ಪಿದ್ದು, ನಿಶ್ಚಿತಾರ್ಥ ಆಗಿದ್ದು, ಮದುವೆ ವೈಭವದಿಂದ ನಡೆದದ್ದು ಈಗ ಇತಿಹಾಸ. ಅವರಿಬ್ಬರೂ ಇಂದು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಸಮರ್ಥ ಬಿಳಿಯ ಬೆಕ್ಕೊಂದನ್ನು ತಂದು ವಾಹಿನಿಯ ಹುಟ್ಟುಹಬ್ಬದಂದು ಅವಳಿಗೆ ಉಡುಗೊರೆ ನೀಡಿದ್ದಾನೆ. ಅಂದು ಬೆಳ್ಳಿಯ ಕಳೆಬರಹದ ಮೇಲೆ ರಾಘು ನೆಟ್ಟ ದಾಸವಾಳದ ಗಿಡ ಚಿಗುರಿದೆ. ಆದರೆ ವಾಹಿನಿಗೆ ಬೆಳ್ಳಿಯ ಬಗೆಗಿನ ಸತ್ಯ ಹೇಳಿ ತನ್ನ ಮನದ ಚಡಪಡಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಸಮರ್ಥನ ಆಸೆ ಮಾತ್ರಾ ಚಿಗುರಲು ಹವಣಿಸುತ್ತಲೇ ಇದೆ.
– ಕೌಂಡಿನ್ಯ ಕೊಡ್ಲುತೋಟ