ವಲವಿ ಹಿಟ್ನಳ್ಳಿ
ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ – ‘ವೈತರಣೀ ಶಿಕ್ಷೆ’
ನಿನ್ನೆಯಿಂದಲೂ ಹುಚ್ಚು ಕೆರಳಿದೆಯೇನೋ ಎಂಬಂತೆ ನಿರಂತರವಾಗಿ ಸುರಿಯುತ್ತಿರುವ ಗಾಳಿ, ಮಳೆ. ನಡುನಡುವೆ, ಎಂಥ ಗಟ್ಟಿಗನ ಎದೆಯನ್ನೂ ನಡುಗಿಸಿ ಬಿಡುವ ‘ಧಡಲ್!’ ಎಂಬ ಗುಡುಗು.. ಅದಕ್ಕೂ ಮುಂಚೆ, ಮತ್ತೊಬ್ಬ ಪ್ರತಿ ಸೂರ್ಯ ಉದಯಿಸಿದನೇ?! ಎಂದು ಚಕಿತವಾಗುವಂತೆ ‘ಫಳಾರ್’ ಎಂಬ ಪ್ರಖರವಾದ ಮಿಂಚು… ಇಡೀ ಊರಿನ ಚರಂಡಿಯ ಹೊಲಸೆಲ್ಲವೂ ಹರಿದು ಹೋಗುವ ಮಹಾನದಿಯಂಥ ಗಟಾರದ ಮೇಲೇ ಇದೆ ನನ್ನ ಮನೆ. ಈ ಬಿರುಮಳೆಗೆ ಗಟಾರದ ನೀರು ಮನೆಯ ತಲಬಾಗಿಲವರೆಗೂ ಬಂದಿದೆ. ಅದರಲ್ಲಿಯೇ ತೇಲಿ ಬಂದ ಮಲ ಕಣ್ಣಿಗೆ ರಾಚುತ್ತದೆ. ಅದನ್ನು ನೋಡುತ್ತಲೇ ಉಣ್ಣಬೇಕು. ಕೆಲವೊಮ್ಮೆ ಪಡಸಾಲೆಗೂ ನುಗ್ಗುತ್ತದೆ… ಅದೇ ಹೊಲಸು ನೀರು. ಮಲಮೂತ್ರದಲ್ಲಿ ನನ್ನ ವಸ್ತುಗಳು ತೇಲಾಡಿ ಹಾಸಿಗೆ ತೊಯ್ದು, ನಾನೂ ಅದರಲ್ಲೇ ಮೊಣಕಾಲ ವರೆಗೆ ಮಲ ಮೆತ್ತಿಸಿಕೊಂಡು ಓಕರಿಸುತ್ತಾ ಓಡಾಡಬೇಕಾಗುತ್ತದೆ. ಇರುವುದೇ ಹತ್ತು ಅಡಿ ಅಗಲ ಹತ್ತಡಿ ಉದ್ದದ ತಗಡಿನ ಒಂದು ಶೆಡ್. ಅದನ್ನೇ ಮನೆ ಅಂತಾ ತೋರಿಸಿ, ಪ್ರತಿ ತಿಂಗಳು 5000 ಬಾಡಿಗೆ ಪಡೆಯುತ್ತಿದ್ದಾನೆ ಮಾಲೀಕ. ಮಳೆಗಾಲದ ದಿನಗಳಲ್ಲಿ ಅಕ್ಷರಶಃ, ನರಕದಲ್ಲಿನ ವೈತರಣಿ ನದಿ ನಮ್ಮ ಮನೆಗೆ ನುಗ್ಗುತ್ತದೆ. ನಾನು ಚಿಕ್ಕವನಾಗಿದ್ದಾಗ, ನನ್ನ ಸರಕಾರಿ ಶಾಲೆಯ ಕನ್ನಡ ಮೆಡಂ, ಈ ‘ವೈತರಣಿ’ ನದಿಯ ಹೆಸರನ್ನು ಮೊಟ್ಟ ಮೊದಲು ನಮಗೆ ಪರಿಚಯಿಸಿದ್ದರು.
“ಭಾಳಷ್ಟು ಪಾಪಾ ಮಾಡಿದ್ರs ಸತ್ ಮ್ಯಾಲ… ಯಮ ದೇವರು…ಮಲ, ಮೂತ್ರ, ರಕ್ತ, ಕೀವುಗಳಿಂದ ತುಂಬಿದ ‘ವೈತರಣಿ’ ಎಂಬ ನದೀ ಒಳಗ ಮುಣಗಸ್ತಾನ”
ಮೆಡಂ ಮಾತು ಕಿವಿಯಲ್ಲಿ ಅನುರಣಿಸಿತು. ಆದ್ರ…. ನಾ ಇನಾ ಸತ್ತೇ ಇಲ್ಲಾ….. ಈಗಲೇನೇ ವೈತರಣಿಯಲ್ಲಿ ಮುಳುಗೇಳುತ್ತಿದ್ದೇನೆ. ಹಾ.. ಹಾ… ಹಾ….. ಮನದಲ್ಲೇ ನಕ್ಕು ಬಿಟ್ಟೆ.
“ಮೆಡಂ, ಪಾಪಾ ಮಾಡೂದು… ಅಂದ್ರ… ಏನರಿ?”
ಮುಗ್ಧ ಮನಸಿಗೆ ಬಂದ ಪ್ರಶ್ನೆಯನ್ನು ಧಿಡೀರನೇ ಕೇಳಿ ಬಿಟ್ಟಿದ್ದೆ.
“ಪಾಪ ಮಾಡೂದು ಅಂದ್ರ… ಸುಳ್ಳು ಹೇಳೂದು… ಇನ್ನೊಬ್ಬರ ಸಾಮಾನ…. ತುಡಗ್ ಮಾಡೂದು, ಪರೀಕ್ಷಾದಾಗ… ಕಾಪಿ ಹೊಡಿಯೂದು ಇಂತಾವ್ ಕೆಲ್ಸಾ ಮಾಡಿದ್ರ ಯಮ ವೈತರಣಿಯೊಳಗ ಮುಣಗಸ್ತಾನ. ಅದಕ್ಕss ಯಾರೂ ಇಂಥಾ ಕೆಲಸಾ ಮಾಡಬ್ಯಾಡ್ರಿ.”
ಬಾಲ್ಯದಲ್ಲಿ ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳೇ ಮಹಾ ಪಾತಕಗಳಾಗಿ ಬಿಟ್ಟಿದ್ದವು. ವೈತರಣಿಗೆ ಹೆದರಿ ಮೆಡಂ ಹೇಳುವ ಯಾವ ಪಾಪವನ್ನೂ ನಾನು ಆಗ ಮಾಡುತ್ತಿರಲಿಲ್ಲ. ಈಗಲೂ ಕೂಡ ಮೆಡಂ ಹೇಳಿದ ಕೆಟ್ಟ ಕೆಲಸ ಮಾಡಿಲ್ಲ. ಆದರೂ ಈ ವೈತರಣಿಯಲ್ಲಿ ಪ್ರತಿ ಮಳೆಗಾಲದಲ್ಲಿ ಮುಳುಗಿಸುತ್ತಿದ್ದಾನೆ… ದೇವರು!
ಎಂಥ ಚಂದದ ಬಾಲ್ಯವನ್ನು ನನಗೆ ಕರುಣಿಸಿದ್ದ ಭಗವಂತ?! ನಾನಾಗ ನಾಲ್ಕೋ-ಐದೋ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ಎಲ್ಲಾ ವಿಷಯದಲ್ಲೂ ಮೊದಲಿಗನಾಗಿದ್ದೆ. ಉದ್ದುದ್ದವಾದ ಒಂದೊಂದು ಪುಟವನ್ನೂ ಅನಾಮಾತ್ತಾಗಿ ಕಂಠಪಾಠ ಮಾಡಿ ಒಪ್ಪಿಸುವ ಆಗಾಧವಾದ ನೆನಪಿನ ಶಕ್ತಿ ಇತ್ತು. ಅದೇ ತಾನೇ ಶಾಲೆಗೆ ಕೊಟ್ಟ ಕಂಪ್ಯೂಟರಿನಲ್ಲಿ ನಮ್ಮ ಮೆಡಂ ಅವರು ‘ಎಡಬುಂಟು’ ಎಂಬ ಶಿಕ್ಷಣ ಸಂಬಂಧಿ ‘ಯಾಪ್’ ಅನ್ನು ಅಳವಡಿಸಿ ಕೊಟ್ಟಿದ್ದರು. ಶಿಕ್ಷಣ ಸಂಬಂಧಿ ಆಟಗಳನ್ನು ಲೀಲಾಜಾಲವಾಗಿ ಆಡಿ ಇನ್ನಷ್ಟು ವೇಗವಾಗಿ ಗಣಿತ, ಇತಿಹಾಸ, ಪರಿಸರಗಳನ್ನು ಕಲಿಯುತ್ತಿದ್ದೆ. 5ನೇ ತರಗತಿಯಲ್ಲೇ ಎಮ್. ಎಸ್. ವರ್ಡ್‌ನಲ್ಲಿ ಕನ್ನಡದಲ್ಲಿ ಪ್ಯಾರಾಗಳನ್ನು ಟೈಪಿಸುತ್ತಿದ್ದೆ. ನನ್ನ ಮೆಡಂ ಅವರು ಜಾಣ ವಿದ್ಯಾರ್ಥಿ ಎಂದು ನನ್ನನ್ನು ತುಂಬಾ ಪ್ರೀತಿಸುವ ಜೊತೆಗೆ, ಟೈಪಿಂಗ್ ಮಾಡುವದನ್ನು ಕಲಿಸಿದ್ದರು. ವೇಗವಾಗಿ ಟೈಪ್ ಮಾಡಲು ಬರದಿದ್ದರೂ ಕೀ ಬೋರ್ಡ್ ನೋಡದೇ ಟೈಪಿಸಲು ರೂಢಿಸಿಕೊಂಡಿದ್ದೆ. ತರಗತಿಯ ಮುಂದಾಳುವೂ ನಾನೇ ಇದ್ದುದರಿಂದ ಸದಾ ಗೆಳೆಯ, ಗೆಳತಿಯರ ವೃತ್ತ ನನ್ನ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತಿತ್ತು. ಸದಾ ಎಲ್ಲರಿಂದ ಹೊಗಳಿಸಿಕೊಳ್ಳುತ್ತಾ ಶಾಲೆಯ ಅಚ್ಚು ಮೆಚ್ಚಿನ ಹುಡುಗನಾಗಿದ್ದೆ.
ಆದರೇ…
ಅಪ್ಪನಿಗೆ ಮಾತ್ರ ಸಮಾಧಾನವಿರಲಿಲ್ಲ. ಗೆಳೆಯರ ಹಾಗೂ ಸಂಬಂಧಿಕರ ಮಕ್ಕಳು ಚಿಕ್ಕವಯಸ್ಸಿನಲ್ಲೇ ಟುಸ್-ಪುಸ್ ಅಂತಾ ಇಂಗ್ಲೀಷಿನಲ್ಲಿ ಮಾತನಾಡುವುದು ಅತೀ ಆಕರ್ಷಕವಾಗಿ ಕಂಡಿತ್ತು ಅವನಿಗೆ. ಒಂದು ದಿನ ಅವ್ವನ ಎದಿರು…
“ಅವರೌನ್ ಹ*…… ನಮ್ಮಪ್ಪಾ.. ಈ ಹಳ್ಳೀ ಸಾಲ್ಯಾಗ ತುರಕಿ ಕೂತಾ… ಚಂದಗೇ ಇಂಗ್ಲೀಷ್ ಬರಲಾರದಕ್ಕs ಮ್ಯಾಟ್ರಿಕ್ ನಪಾಸಾಗಿ, ಮೇಳೀ ಮ್ಯಾಗ್ ಕೈ ಊರಿ ಕುಂಡ್ರುವಂಗ್ಹಾತು. ಇಲ್ಲದಿದ್ರs ನಾನೂ ಸೈಬಾಗಿ ಪ್ಯಾಟ್ಯಾಗಿರ್ತಿದ್ಯಾ….. ಇವತ್ತss ನಮ್ ಇರಪ್ಯಾನ ಮಾಸ್ತರ್ ಬೇಟಿ ಆಗಿದ್ದಾ. ಇವನ್ ಗುಣಗಾನs ಹೋಗೂ… ಮಟಾ ಮಾಡಿದಾ… ‘ಹುಡಗಾ, ಭಾಳ.. ಶ್ಯಾಣ್ಯಾ ಅದಾನ್ರಿ ಗೌಡ್ರ….. ಏನ್ ಹೇಳಿದ್ರೂ ಒಂದs ದಿನದಾಗನss ಕಲಿತಾನ. ಗುಣದಾಗನೂ…. ಅಪರಂಜಿ. ನೀವ್ ಭಾಳ ಪುಣ್ಯಾ ಮಾಡೀರಿ.’ ಅಂತ್ ಎನೇನೋ ಹೇಳಿದಾ… ಅದಕ್ಕss ನಾ ಒಂದ್ ನಿರ್ಧಾರ ಮಾಡೀನಿ… ನಮ್ಮಂಗ್ ನಮ್ ಹುಡುಗಾ ಮೇಳೀ ಹಿಡಿಯೂದ್ ಬ್ಯಾಡಾ…. ಹ್ಯಾಂಗೂ ಸ್ಯಾಣ್ಯಾ ಅದಾನ….. ಪ್ಯಾಟಿ ಒಳಗಿನ್ ಚಲೋ ಸಾಲೀಗಿ ಕಳಿಸಿದ್ರs ಸೈಬ್ ಆಕ್ಕಾನ. ಏಟ್ ರೊಕ್ಕಾ ಹ್ವಾದ್ರೂ ಹೊಗೊಲ್ಯಾಕ. ಅವುನ್ನss ಪ್ಯಾಟೀ ಸಾಲೀಗಿ ಹಚ್ಚಬೇಕಂತ್ ಮಾಡೀನಿ.”
ಅಂದಾಗ ಅವ್ವನೂ ಹಿರಿ- ಹಿರಿ ಹಿಗ್ಗಿ,
“ನಾ ಶುರುವಾತ್ಗೇನೇ ನಿಮಗ್ ಬಡಕೊಂಡ್ಯಾ…. ಈ ಹಳ್ಳಿss ಸಾಲಿ ಬ್ಯಾಡಾ… ಪ್ಯಾಟೀ ಸಾಲೀಗಿ ಎಲ್ಲಾರೂ ಕಳಸ್ತಾರೂ. ನಾವೂ ಅವರ್ ಜೋಡಿ ನಮ್ ಹುಡುಗನ್ನೂ ಕಳಸೂಣು ಅಂತ.. ಈಗರss ಬುದ್ದಿ ಬೆಟ್ಟಿ ಆತಲ್ಲಾ….. ಬೇಸ್ಯಾತು.”
ಎಂದಾಗ, ನನಗೂ ಬಹಳ ಖುಷಿಯಾಗಿತ್ತು. ಸಂಬಂಧಿಕರ ಮಕ್ಕಳು ಶಿಸ್ತಿನಿಂದ ಯುನಿಫಾರ್ಮ್ , ಬೂಟು ಟೈ ಹಾಕಿಕೊಂಡು ಚಂದನೆಯ ಸ್ಕೂಲ್ ಬಸ್ಸಿನಲ್ಲಿ ಕುಳಿತು ಶಾಲೆಗೆ ಹೋಗುವದನ್ನೂ ತಮ್ಮ ಶಾಲೆಯಲ್ಲಿನ ಸೌಲಭ್ಯಗಳನ್ನು ಅಗತ್ಯಕ್ಕಿಂತ ಹೆಚ್ಚಿಗೆ ರಂಜನೀಯವಾಗಿ ವರ್ಣಿಸಿದ್ದರಿಂದ ನಾನೂ ಅಂಥದೇ ಶಾಲೆಯಲ್ಲಿ ಕಲಿಯಬೇಕೆಂಬ ಆಸೆ ಆಗಿದ್ದು ಸುಳ್ಳಲ್ಲ. ಈಗ ಅಂಥದೇ ಶಾಲೆಗೆ ಕಳಿಸುವ ಕುರಿತು ಅಪ್ಪ-ಅವ್ವ ಮಾತು ಕತೆಯಾಡುತ್ತಿದ್ದುದನ್ನ ಕೇಳಿ ಮನಸು ಗರಿಗೆದರಿ ಕುಣಿಯಹತ್ತಿತು. ಕೈಯ್ಯಲ್ಲಿದ್ದ ಶಾಲಾ ಲೈಬ್ರರಿಯಿಂದ ತಂದ ನನ್ನ ನೆಚ್ಚಿನ ಕನ್ನಡ ಕಥಾ ಪುಸ್ತಕ, ‘ನವಿಲಾದ ಕೆಂಬೂತ’ವನ್ನು ಮುಚ್ಚಿಟ್ಟು ಅಪ್ಪ ಅವ್ವನ ಮಾತಿಗೆ ಕಿವಿಗೊಟ್ಟೆ.
ಪ್ಯಾಟೀ ಸಾಲೀಗಿ ಕಳಿಸೂದು ಅಂದುಕೊಂಡಷ್ಟು ಅಪ್ಪನಿಗೆ ಸುಲಭದ್ದಾಗಿರಲಿಲ್ಲ. ಶನಿವಾರದ ಪಿ.ಟಿ.ಗೆ ಬಿಳಿ ಯುನಿಫಾರ್ಮ್, ಬುಧವಾರ ಹೌಸ್ ಬಣ್ಣದ ಯುನಿಫಾರ್ಮ್, ಉಳಿದ ದಿನ ಎರಡು ಜೊತೆ ಯುನಿಫಾರ್ಮ್ ಶಾಲೆಯಲ್ಲೇ ಕೊಳ್ಳಬೇಕಿತ್ತು. ಹಾಗೇ ಮೂರು ಬಣ್ಣದ ಶೂ ಸಾಕ್ಸ್, ಟೈಗಳು, ಬೆಲ್ಟ್‌ಗಳು, ನೋಟ್‌ಪುಸ್ತಕಗಳು, ಸ್ಕೂಲ್ ಬ್ಯಾಗು, ಪಠ್ಯಪುಸ್ತಕಗಳು ಎಲ್ಲವನ್ನು ಒಂದಕ್ಕೆರಡರಷ್ಟು ದುಡ್ಡು ಕೊಟ್ಟು ಅವರು ಹೇಳಿದಷ್ಟು ಕ್ವಾಂಟಿಟಿಯಲ್ಲಿ ಖರೀದಿಸಬೇಕಿತ್ತು. ಹೊರಗಿನವುಗಳನ್ನು ಕೊಳ್ಳುವಂತಿರಲಿಲ್ಲ. ಪ್ರೊಜೆಕ್ಟ್ ಮಾಡಲು ಹೇಳಿದಷ್ಟು ದುಡ್ಡು ಕೊಟ್ಟು ವಸ್ತುಗಳನ್ನು ಖರೀದಿಸಬೇಕು. ಇಲ್ಲ ಎನ್ನುವಂತೆಯೇ ಇಲ್ಲ. ಚಿತ್ರಕಲೆ, ಕ್ರಾಫ್ಟ್, ಸಂಗೀತ, ಕರಾಟೆ, ಡಾನ್ಸ್, ವಗೈರೆ ಅನ್ನುತ್ತಾ ದುಬಾರಿ ಬೆಲೆಯ ವಸ್ತುಗಳ ಖರೀದಿ ಮಾಡಲೇಬೇಕು. ಕ್ಲೆ ಮಾಡಲಿಂಗ್ ಮಾಡಲು, ದುಬಾರಿ ಹಣದ ಕ್ಲೇ, ದುಬಾರಿ ಬಣ್ಣಗಳು, ಹತ್ತಿ ಕೂದಲು, ಬ್ರೆಷ್ ಪೆನ್ನು, ಪೆನ್ಸಿಲ್ ಹೀಗೆ ಎಲ್ಲವನ್ನೂ ಎರಡು ಪಾಲು ಹಣ ತೆತ್ತು ಮಕ್ಕಳು ಖರೀದಿಸಬೇಕು. ಪ್ರತಿಭಾ ಕಾರಂಜಿಯಲ್ಲಿ ಶಾಲಾ ಹಂತದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಲೇಬೇಕು. ಅವರು ಹೇಳುವ ದುಬಾರಿ ಡ್ರೆಸ್‌ಗಳು, ಇನ್ನಿತರ ವಸ್ತು ಖರೀದಿಸಲೇಬೇಕು. ಹೀಗೆ ಶಾಲೆಯು ಹಣ ಸುಲಿಯುವ ಕೇಂದ್ರವಾಗಿತ್ತು. ಪುಟ್ಟ ಬಜಾರ್ ಆಗಿತ್ತು.
ಮೊದಲಿನ ಶಾಲೆಯಲ್ಲಿನ ಮುಖ್ಯ ಗುರುಗಳು ಮತ್ತು ಇತರ ಶಿಕ್ಷಕರು ತಮ್ಮ ಶಾಲೆಗೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಕಡಿಮೆಯಾಗುವನಲ್ಲಾ ಎಂದು, ಅಪ್ಪನನ್ನು ಕೂಡಿಸಿ…. ತಾವು ಕಲಿತ ಎಲ್ಲಾ ಮಾತು, ಬುದ್ಧಿ, ಜಾಣ್ಮೆಯನ್ನು ಅನೇಕ ಉದಾಹರಣೆಗಳನ್ನೆಲ್ಲಾ ಉಪಯೋಗಿಸಿ, ತಿಳಿ ಹೇಳಿ ನನ್ನನ್ನು ತಮ್ಮ ಶಾಲೆಯಲ್ಲಿಯೇ ಉಳಿಸಿಕೊಳ್ಳಬೇಕೆಂದು ಭಗೀರಥ ಪ್ರಯತ್ನವನ್ನು ಮಾಡಿದ್ದರು.
ಆದರೆ, ಅಪ್ಪ…..
ನಿಮ್ ಸಾಲ್ಯಾಗss ಎನ್ ಕಲಸ್ತೀರಿ?… ಮಣ್ಣss ಒಂದ್ ಹುಡುಗ್ಗss ಓದಾಕ್ ಬರಂಗಿಲ್ಲಾ, ಬರ್ಯಾಕ್, ಬರಂಗಿಲ್ಲಾ, ಇಂಗ್ಲೀಷಂತೂ ಹೇಳೂದss ಇಲ್ಲಾ… ಬರೇ… ಕಸ ಆರಸ್ರಲೇ, ತೊಳೀರಲೆ, ಉಡಗ್ರಲೇ, ನೀರ ತಗೊಂಬರ್ರಲೇ ತತ್ತಿ ತಗೊಂಬರ್ರಲೇ, ಇಂಥಾ ದಗದಾ ಹೇಳಕೋತ ಕುಂದರ್ತೀರಿ. ನಾವೂ ಹೀಂಗss ಮಾಸ್ತರಗೋಳ ಮು*ಳಿ ತೊಳದ್-ತೊಳದ್ ದಡ್ ಆಗಿ ಮೂರ್ಮನಿ ಹಳ್ಯಾಗ್ ಬಾಳೇ ಮಾಡಕೊಂತ್ ಕುಂತ್ವಿ. ನಮ್ ಮಕ್ಕಳರೇ ಸ್ಯಾಣೇ ಆಗಲಿ ಅಂತ್ ಕಳಸಾಕ್ ಹತ್ತೀವಿ. ನೀವ್ ಟೀಸಿ ಕೊಡಲಿಲ್ಲಂದ್ರ… ಎಮ್ಮೆಲ್ಲೆ ಸೈಬ್ರಿಗಿ ಹೇಳಿ ಪೋನ್ ಹಚ್ಚಸ್‌ಬೇಕಾಗ್ತೈತಿ…. ಸುಮ್ಮss ನಮ್ ತೆಲಿ ಕೆಡಿಸ್‌ಬ್ಯಾಡ್ರಿ… ಟೀ.ಸಿ ಕೊಡ್ರಿ.”
ಎಂದು ಅಬ್ಬರಿಸಿದ. ಅವನ ಆರ್ಭಟಕ್ಕೆ ಹೆದರಿದ ಮುಖ್ಯಗುರುಗಳು ಅವತ್ತೇ ಟೀ.ಸಿ ಕೊಟ್ಟು ಕೈ ತೊಳೆದುಕೊಂಡರು.
ಹೊಸ ಶಾಲೆಗೆ ಹೆಸರು ಹಚ್ಚಿದ ದಿನವೇ ಎಲ್ಲ ವಸ್ತುಗಳನ್ನು ಅಂದರೆ, ಯುನಿಫಾರ್ಮನಿಂದ ಪೆನ್ಸಿಲ್‌ವರೆಗೆ ಅವರದೇ ವಸ್ತುಗಳನ್ನು ಖರೀದಿಸಿ ತರಗತಿಗೆ ಹೋಗಬೇಕಿತ್ತು. ಅಪ್ಪ ಶಾಲೆಯ ಫೀಗಾಗಿ 25000 ರೂಗಳನ್ನು ತನ್ನ 5 ಎಕರೆ ಹೊಲವನ್ನು ಭೋಜ್ಯಕ್ಕೆ ಹಾಕಿ ಹೊಂದಿಸಿದ್ದ. ಈಗ ಪುಸ್ತಕ, ಬಟ್ಟೆ, ನೋಟ್‌ಬುಕ್ಕು, ಸ್ಕೂಲ್‌ಬಸ್ಸಿನ ಹಣ ಇತ್ಯಾದಿಗಳಿಗಾಗಿ ಪುನಃ10-12 ಸಾವಿರ ಹಣ ಹೊಂದಿಸಬೇಕಿತ್ತು. ಎಲ್ಲಿಂದ ತರಬೇಕು? ಊರಲ್ಲಿ ಬಡ್ಡಿ ಕುಳಗಳೆಂದೇ ಹೆಸರುವಾಸಿ ಆದವರ ಹತ್ತಿರ ನೂರಕ್ಕೆ… ತಿಂಗಳಿಗೆ, 3 ರೂಪಾಯಿ ಬಡ್ಡಿ ಲೆಕ್ಕದಲ್ಲಿ ಸಾಲ ಮಾಡಿ….. ಹೇಗೋ ಎಲ್ಲವನ್ನೂ ಹೊಂದಿಸಿಕೊಂಡು…. ನಾನು ಶಾಲೆಗೆ ಹೋಗುವಷ್ಟರಲ್ಲಿ ಹದಿನೈದು ದಿನಗಳು ತಡವಾಗಿತ್ತು. ಅವತ್ತು ನಾನು ಶಾಲೆಗೆ ಹೋಗುವಾಗ, ನನ್ನ ತಂಗಿ ‘ಕಿತ್ತೂರು ಚನ್ನಮ್ಮಳ ಛದ್ಮ ವೇಷ ಹಾಕಿ ಮಾತುಗಳನ್ನು ಕಂಠಪಾಠ ಮಾಡುತ್ತಿದ್ದಳು. ನನ್ನನ್ನು ನೋಡಿ,
“ನಾನೂ ನಿನಗತೇ ಮುಂದಿನ್ವರ್ಷ ಪ್ಯಾಟೀ ಸಾಲ್ಯಾಗ್ ಕಲೀತೀನಿ,”
ಅಂದಳು. ನಾನು ನಗುತ್ತಾ ಶಾಲೆಗೆ ಹೋದೆ.
ಶಾಲೆಯಲ್ಲಿ ಅದಾಗಲೇ ಪಾಠಗಳು ಪ್ರಾರಂಭವಾಗಿದ್ದವು. ಇದುವರೆಗೂ ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು. ಇಂಗ್ಲೀಷಿನ ಶಬ್ದಗಳ ಪರಿಚಯ ಬಹಳ ಕಡಿಮೆ. ಮೊದಲ ಅವಧಿ ಇಂಗ್ಲೀಷ್ ಇತ್ತು. ಒಂದು ಪದ್ಯವನ್ನು ಕಂಠಪಾಠ ಮಾಡಿ ತರಲು ಹೇಳಿದ್ದರು. ಹಿಂದಿನ ಶಾಲೆಯಲ್ಲೂ ನಾನು ಇಂಗ್ಲೀಷ್ ಪದ್ಯಗಳನ್ನು ಕಂಠಪಾಠ ಮಾಡಿ ಹೇಳುತ್ತಿದ್ದೆ. ಆದರೆ, ಇಂದೇ.. ಶಾಲೆಗೆ ಬಂದಿದ್ದರಿಂದ ಕಂಠಪಾಠವಾಗಿ ತಕ್ಷಣ ಪದ್ಯ ಹೇಳುವುದು ಹೇಗೆ? ನನ್ನ ಸರದಿ ಬಂದಾಗ ಸುಮ್ಮನೇ ನಿಂತೆ. ಇಂಗ್ಲೀಷಿನಲ್ಲಿ ಚನ್ನಾಗಿ ಬೈದ ಶಿಕ್ಷಕರು ಹೊರಗೆ ನಿಲ್ಲಲು ಹೇಳಿದರು. ನನಗೆ ತಿಳಿಯಲಿಲ್ಲ. ಸುಮ್ಮನೇ ಅವರನ್ನು ಪಿಳಿ- ಪಿಳಿ ನೋಡುತ್ತಾ ನಿಂತೆ.
ನನ್ನ ರಟ್ಟೆ ಹಿಡಿದು ದರದರನೇ ಎಳೆದು ಹೊರ ನೂಕಿದ ಶಿಕ್ಷಕರು ಮತ್ತೆ ಇಂಗ್ಲೀಷಿನಲ್ಲಿ ಏನೋ ಗೊಣಗಿದರು. ಉಳಿದ ಹುಡುಗರು ನನ್ನನ್ನು ತಮಾಷೆಯ ವಸ್ತುವಾಗಿ ನೋಡುತ್ತಿದ್ದರು. ಇದುವರೆಗೂ ಸದಾ ಹೊಗಳಿಸಿಕೊಳ್ಳುತ್ತಲೇ ಶಾಲೆ ಕಲಿತಿದ್ದ ನನಗೆ ಮೊದಲ ದಿನವೇ ಅತೀ ಅವಮಾನವಾಗಿತ್ತು. ವಿಪರೀತ ಮಾನಸಿಕ ಆಘಾತವೂ ಆಗಿತ್ತು.
ಮುಂದಿನ ತರಗತಿಗಳೆಲ್ಲಾ ಇಂಗ್ಲೀಷಿನಲ್ಲೇ ಇದ್ದವು. ಗುರುಗಳು ವರ್ತುಳದ ಭಾಗಗಳ ಬಗ್ಗೆ ಹೇಳುತ್ತಿದ್ದರು. ನನಗೆ ಈಗಾಗಲೇ ಕಲಿತಿದ್ದರಿಂದ ಎಲ್ಲಾ ಭಾಗಗಳೂ ಪರಿಚಯವೇ ಇದ್ದರೂ ಇಂಗ್ಲೀಷಿನಲ್ಲಿ ಅವುಗಳಿಗೆ ಏನನ್ನುವರೆಂದು ತಿಳಿದಿರಲಿಲ್ಲ. ಪುನರಾವರ್ತನೆಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆ ಅಲ್ಪ ಸ್ವಲ್ಪ ಅರ್ಥವಾಗಿತ್ತು. ಆದರೆ ಹೇಳಲು ಇಂಗ್ಲೀಷ್ ಪದಗಳು ಗೊತ್ತಿರಲಿಲ್ಲ. ಪೆರಿಮಿಟರ್, ಡಯಾಮಿಟರ್, ರೇಡಿಯಸ್, ಇಂತವುಗಳ ಹೆಸರೇ ಕೇಳಿರಲಿಲ್ಲ. ಮತ್ತೆ ಮೌನವಾಗಿ ಕುಳಿತೆ. ಶಿಕ್ಷಕರ ಮಾತು ತಿಳಿಯದ್ದರಿಂದ ಕಣ್-ಕಣ್ ಬಿಟ್ಟು ಶಿಕ್ಷಕರ ಮುಖ ನೋಡುತ್ತ ಕುಳಿತೆ. ಏನೂ ಅರ್ಥವಾಗದ್ದರಿಂದ ನಿದ್ದೆ ಬರತೊಡಗಿತು. ಮೊದಲಿನ ಶಾಲೆಯಲ್ಲಿ ಅತ್ಯಂತ ಕ್ರೀಯಾಶೀಲ ವಿದ್ಯಾರ್ಥಿ ಅನಿಸಿಕೊಂಡ ನನಗೆ ಇಲ್ಲಿ ಉಸಿರು ಕಟ್ಟಿದಂತೆ ಆಗತೊಡಗಿತು. ಕಣ್ಣು ಎಳೆಯತೊಡಗಿದ್ದೊಂದೇ ಗೊತ್ತು. ‘ದಬಲ್!’ ಎಂದು ಬೆನ್ನು ಮೇಲೆ ಗುದ್ದು ಬಿದ್ದಾಗಲೇ ಎಚ್ಚರವಾಗಿದ್ದು. ಬೆನ್ನು ಚುರುಗುಟ್ಟತೊಡಗಿತ್ತು. ಹೊಗಿ ಮುಖ ತೊಳೆದು ಬಾ ಎಂದು ಮೇಷ್ಟ್ರು ಚೀರಿದ್ದು, ಅವರ ಹಾವ-ಭಾವದಿಂದ ತಿಳಿದು ಹೊರಗೋಡಿದ್ದೆ. ಇಡೀ ತರಗತಿ ನಗುತ್ತಿತ್ತು. ನನಗೆ ಮುಖ ಎತ್ತದಷ್ಟು ನಾಚಿಕೆ ಆಗಿತ್ತು.
ಮಧ್ಯಾಹ್ನದ ಊಟದ ಸಮಯ. ಹೊಟ್ಟೆ ಚುರಗುಟ್ಟತೊಡಗಿತ್ತು. ಈ ಹೊಸ ಶಾಲೆಯಲ್ಲಿ ಊಟ ಕೊಡುವದಿಲ್ಲವೆಂದು ಗೊತ್ತಿದ್ದರಿಂದ ಅವ್ವ, ಹೆಸರುಕಾಳಿನ ಉದುರು ಪಲ್ಯ, ಮೆಂತೆ ಪಲ್ಯ ಸೇರಿಸಿ, ಮೆಂತೆ ಮೆಣಸಿನ ಕಾಯಿ ಹಾಕಿ ರುಚಿಯಾಗಿ ತಯಾರಿಸಿದ್ದಳು. ಮಗ ಪ್ಯಾಟ್ಯಾನ್ ಹುಡುಗೂರ ಜೋಡಿ ಉಣ್ತಾನ… ಅಂತ್ಹೇಳಿ, ಮೆತ್ತನ್ನ ಚಪಾತಿ ನನ್ನ ಪೂರ್ತೆ ಮಾತ್ರ ಮಾಡಿ… ಡಬ್ಬಿ ಕಟ್ಟಿ ಕೊಟ್ಟಿದ್ದಳು. ನನ್ನ ಪ್ರೀತಿಯ ಚಪಾತಿ ಮತ್ತು ಹೆಸರು ಕಾಳಿನ ಪಲ್ಯ ಯಾವಾಗ ತಿಂದೇನೋ ಅಂತ ಚಡಪಡಿಸ್ತಾ ಇದ್ದಾಗಲೇ ಊಟದ ಬೆಲ್ ಆಗಿತ್ತು.
ಎಲ್ಲರೂ ಗುಂಪಾಗಿ ಯಾರು ಏನೇನು ತಂದಿದ್ದಾರೆಂದು ಚರ್ಚಿಸುತ್ತಾ ನಾಕೈದು ಜನ ತಾವು ತಾವೇ ಗುಂಪಾದರು.
“ಪಿಂಟು ಏನ್ ತಂದಿ?”
“ಓ! ಪಿಜ್ಜಾನ? ವಾವ್! ನನಗೆ ಪಿಜ್ಜಾ ತುಂಬಾ ಇಷ್ಟ. ಬಿಸಿ ಇದೆಯಾ? ಏನೂ ನಿಮ್ ಡ್ರೈವರ್ ಈಗ ತಾನೇ ತಂದು ಕೊಟ್ನಾ?! “
“ಓ! ನನ್ನದೂ ಬಿಸಿ ಸ್ಯಾಂಡ್ವಿಚ್ ಅದ. ಬರ್ರಿ ನಾವು ಐದೂ ಮಂದಿ ಕೂಡೂಣು.”
ನನ್ನನ್ನು ಯಾರೂ ತಮ್ಮ ಜೊತೆ ಊಟಕ್ಕೆ ಕರೆಯಲೇ ಇಲ್ಲ. ಅಸಲಿಗೆ ಅಲ್ಲಿ ಚಪಾತಿ ಇಷ್ಟಪಡುವವರೇ ಇರಲಿಲ್ಲ. ನಾನೇ ಕೀಳಿರಿಮೆಯಿಂದ ಬೆರೆಯಲಿಲ್ಲವೋ.. ಅಥವಾ ಅವರೇ ಮೇಲಿರಿಮೆಯಿಂದ ನನ್ನನ್ನು ಸೇರಿಸಿಕೊಳ್ಳಲಿಲ್ಲವೋ… ಒಟ್ಟಿನಲ್ಲಿ ಏಕಾಂಗಿ ಆಗಿ ಒಬ್ಬನೇ ಊಟ ಮಾಡಿದೆ. ಪ್ರೀತಿಯ ಹೆಸರುಕಾಳಿನ ಪಲ್ಯ ಕಹಿಯಾಗಿ ಉಂಡೆಯಂತಾಗಿ ಗಂಟಲಿನಿಂದ ಇಳಿಯದೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡೆ.
ವಾರದ ಟೆಷ್ಟು, ತಿಂಗಳ ಟೆಷ್ಟು, ಎಫ್.ಎ.1,2 ಎಲ್ಲ ಟೆಷ್ಟ್‌ಗಳಲ್ಲೂ ನಪಾಸಾಗಿದ್ದೆ. ಪ್ರತಿ ಪೇಪರ್ ಕೊಡುವಾಗಲೂ ಟೀಚರುಗಳ ಸಹಸ್ರ ನಾಮಾರ್ಚನೆ. ತರಗತಿಗೇ ಮೊದಲಿಗನಾಗಿದ್ದ ನನ್ನ ಅಹಂಗೆ ಇದು ದೊಡ್ಡ ಪೆಟ್ಟು. ನಾನಾದರೂ ಏನು ಮಾಡಲಿ? ಶಿಕ್ಷಕರು ಮಾತನಾಡುವುದು ನನಗೆ ತಿಳಿಯುತ್ತಿರಲಿಲ್ಲ. ಸಹಪಾಠಿಗಳನ್ನು ಕೇಳೋಣವೆಂದರೆ ಅವು ಹಾಸ್ಯ ಮಾಡಿ ನಗುತ್ತಿದ್ದವೇ ವಿನಃ ಟೀಚರ್ ಏನು ಹೇಳಿದರೆಂದು ತಿಳಿಸುತ್ತಿರಲಿಲ್ಲ. ಅಸಲಿಗೆ ಯಾರೂ ನನ್ನ ಜೊತೆ ಬೆರೆಯುತ್ತಲೇ ಇರಲಿಲ್ಲ. ತರಗತಿಗಳ ನಂತರ ಅಲ್ಲೇ ಟ್ಯೂಷನ್ ಕ್ಲಾಸುಗಳೂ ನಡೆಯುತ್ತಿದ್ದವು. ಆದರೆ, ದುಬಾರಿ ಹಣ ತೆತ್ತು.. ಟ್ಯೂಷನ್ ಕ್ಲಾಸಿಗೆ ಕಳಿಸುವಷ್ಟು ಅಪ್ಪ ಸ್ಥತಿವಂತನಾಗಿರಲಿಲ್ಲ. ಟ್ಯೂಷನ್‌ಗೆ ಬಾರದ ಮಕ್ಕಳ ಮೇಲೆ ಇಲ್ಲಿನ ಟೀಚರ್‌ಗಳಿಗೆ ಇನ್ನಿಲ್ಲದ ಕೋಪ. ಕೆಲವು ಮಕ್ಕಳನ್ನು ಬಿಟ್ಟರೆ, ಎಲ್ಲರೂ ಟ್ಯೂಷನ್ ಹೋಗುವಂಥ ಮಕ್ಕಳೇ ಇದ್ದರು. ಅವರಿಗೆಲ್ಲಾ ಮರುದಿನ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು ತಿಳಿದಿರುತ್ತಿದ್ದವು. ಹೀಗಾಗಿ ಎಲ್ಲರೂ ೯೦% ಮೇಲೆಯೇ ಅಂಕಗಳನ್ನು ಪಡೆಯುತ್ತಿದ್ದರು. ನಾನೋ….. ನಾನಾ ಕಾರಣಗಳಿಂದ ತರಗತಿಯಿಂದ ಹೊರಹಾಕಿಸಿಕೊಂಡು ಬಯಲಿನ ಬಿಸಿಲಲ್ಲಿ ನಿಂತಿದ್ದೇ ಹೆಚ್ಚು. ಬಾರದ ಇಂಗ್ಲೀಷು. ಮೊದಲು ಇಂಗ್ಲೀಷ್ ಭಾಷೆ ಕಲಿತು ನಂತರ ನಾನು ವಿಷಯ ಕಲಿಯಬೇಕಾಗಿತ್ತು.
ನಾಳೆ ಕ್ಲೇ ಮಾಡೆಲಿಂಗ್ ಸ್ಪರ್ಧೆ ಇದೆ. ಎಲ್ಲರೂ ಕ್ಲೆ ಹಾಗೂ ಇನ್ನಿತರ ವಸ್ತುಗಳಿಗಾಗಿ 500 ರೂಪಾಯಿ ತನ್ನಿ. ಚಿತ್ರ ಕಲಾ ಸ್ಪರ್ಧೆ ಇದೆ. ಬ್ರಷ್ ಹಾಳೆ ಬಣ್ಣಕ್ಕಾಗಿ 200ತನ್ನಿ. ಕರಾಟೆ ಕಲಿಸಲು ಬರುತ್ತಿದ್ದಾರೆ 1000ರೂ ತನ್ನಿ. ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತಿತ್ತು. ಅಪ್ಪ ಯಾವುದಕ್ಕೂ ಬೇಗನೇ ದುಡ್ಡು ಕೊಡುತ್ತಿರಲಿಲ್ಲ. ಅವನಾದರೂ ಏನು ಮಾಡಬೇಕು? ನನ್ನ ಶಾಲೆಯ ಫೀ ಕಟ್ಟಲು ಇರುವ ಐದೆಕರೆ ಹೊಲವನ್ನು ಭೋಜ್ಯಕ್ಕೆ ಹಾಕಿದ್ದ. ತನ್ನ ಪಾಲಿನ ಹೊಲ ಪಡೆಯಲು ಅಜ್ಜನೊಂದಿಗೆ ಜಗಳವಾಡಿ ಬೇರೆ ಮನೆ ಮಾಡಿದ್ದ. ಅವರಿವರ ಹೊಲಗಳಲ್ಲಿ ಕೂಲಿ ಮಾಡಲು ಗೌಡಿಕೆಯ ಅಹಂ ತಡೆಯೊಡ್ಡುತ್ತಿತ್ತು. ಅವ್ವನೇ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿ ಅಷ್ಟಿಷ್ಟು ಪಗಾರ ತಂದು ಹೇಗೋ ಮನೆ ನಡೆಸುತ್ತಿದ್ದಳು. ಊರಲ್ಲಿ ಮಾಡಿದ ಬಡ್ಡಿ ಸಾಲ ಬೆಳೆಯುತ್ತಿತ್ತು. ಸಾಲ ಕೊಟ್ಟವರು ಇನ್ನಿಲ್ಲದಂತೆ ಕಾಟ ಶುರುವಿಟ್ಟಿದ್ದರು. ಅಂಥದ್ದರಲ್ಲಿ ನಾನು ಕೇಳುವ ಹಣ ಒದಗಿಸಲು ಅಪ್ಪನಿಗಾಗದೇ….. ಬೈಯುವದು, ಹೊಡೆಯುವದು ಶುರುವಿಟ್ಟುಕೊಂಡ. ‘ಕೈಲಾಗದವನು ಮೈಯ್ಯೆಲ್ಲಾ ಪರಚಿಕೊಂಡನಂತೆ.’ ಹಾಗಾಗಿತ್ತು ಅಪ್ಪನ ಸ್ಥತಿ.
ನನ್ನ ಪುಟ್ಟ ಮನಸ್ಸಿನ ಮೇಲೆ ಇವೆಲ್ಲಾ ಗಾಢ ಪರಿಣಾಮ ಬೀರ ಹತ್ತಿದ್ದವು. ಸಾಲದ್ದಕ್ಕೆ ಒಂದಿನ ಪೇರೆಂಟ್ ಮೀಟಿಂಗ್‌ನಲ್ಲಿ ಅಪ್ಪನನ್ನು ಕರೆಸಿ ನಿಮ್ಮ ಮಗ ಓದುತ್ತಿಲ್ಲ, ಎಲ್ಲಾ ವಿಷಯದಲ್ಲೂ ಫೇಲ್ ಆಗಿದ್ದಾನೆ. ಹೀಗಾದರೆ ಅವನನ್ನು ಸ್ಕೂಲಿಂದ ಹೊರಹಾಕಬೇಕಾಗುತ್ತದೆ, ಇತ್ಯಾದಿ….. ಇತ್ಯಾದಿ ಹೇಳಿ ಅಪ್ಪನ ತಲೆ ಕೆಡಿಸಿಬಿಟ್ಟಿದ್ದರು ಟೀಚರುಗಳು. ಜಾಣ ಮಗನೆಂದು ಸದಾ ಮುದ್ದಿಸುವ ಅಪ್ಪ… ಅವತ್ತು ರೋಷಿಹೋಗಿ, ಮೂಲೆಯಲ್ಲಿ ಹಾಕಿ ಚನ್ನಾಗಿ ನನ್ನನ್ನು ಮುಖ -ಮೂತಿ ನೋಡದೇ ಜಜ್ಜಿ ಬಿಟ್ಟಿದ್ದ.
“ಸೂ* ಮಗನss ನಿನ್ ಸಲುವಾಗಿ ಇರೂ…. ಹೊಲಾ ವತ್ತಿ ಹಾಕಿ, ಉಪವಾಸ ಸಾಯಾಕತ್ತೀವಿ. ಇವ್ನ ಹೇಣ್ತಿನ್ ಹ* ಚಂದಗೆ ಸಾಲೀ ಕಲೀಲಿಕ್ಕಿ…. ನಿನಗೇನ ಧಾಡಿ ಆಗೇತಿ? ನಿನ್ ತೂಕಕ್ ತೂಕಾ ರೊಕ್ಕಾ ಸುರುವೀನಿ. ನೀ ಅರೆ ಪ್ಯಾಟಿಗ್ಹೋಗಿ ಮಜಾ ಮಾಡಿ ನಪಾಸ್ ಆಗಿ ಕುಂದರ್ತಿ….”
ಸೊಂಟದ ಕೆಳಗಿನ ಎಲ್ಲಾ ಬೈಗಳುಗಳ ಮಹಾ ಮಸ್ತಕಾಭಿಷೇಕ ತಡೆಯಿಲ್ಲದೇ ಮುಂದುವರಿಯಿತು.
ಸಾಲಗಾರರ ಕಾಟ ಒಂದೆಡೆ, ಬಂದ ಅವ್ವನ ದುಡ್ಡು ಯಾತಕ್ಕೂ ಸಾಲದು, ಯಾವುದಕ್ಕೂ ದುಡ್ಡು ಇಲ್ಲವೆಂಬ ದಯನೀಯ ಸ್ಥಿತಿ ಇನ್ನೊಂದೆಡೆ, ಗೌಡನ ಸ್ಥಿತಿ ಹದಗೆಟ್ಟಿದೆ ಎಂದು ತೋರುವಂತಿಲ್ಲವಾಗಿ ಮುಖವಾಡದ ಹೊದಿಕೆ, ‘ಬ್ಯಾರಿ ಹೋಗಿ ಏನ್ ಕಡದ್ ಗುಡ್ಡಾ ಹಾಕಿದಿ?’ ಎಂಬ ಅಜ್ಜನ ಮೂದಲಿಕೆ, ಇವೆಲ್ಲವೂ ನನ್ನಿಂದಾಗಿಯೇ ಅನುಭವಿಸುವಂತಾಗಿದೆ, ಜೊತೆಗೆ ಫಲವು ಒಂದು ಪೈಸೆಯಷ್ಟೂ ಇಲ್ಲ, ಎಂಬ ಸಿಟ್ಟಿನಿಂದ ನನ್ನನ್ನು ಸಾಯಬಡಿದಿದ್ದ ಅಪ್ಪ. ಸಕಾಲಕ್ಕೆ ನೆರೆಯವರಾರೋ ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿದ್ದೆ.
ಅಪ್ಪ ಹೊಡೆದ ಗಾಯಗಳು ಮಾಯುವವರೆಗೂ ಮತ್ತೆ ಹತ್ತು ದಿನ ಶಾಲೆ ತಪ್ಪಿಸಿದ್ದೆ. ಪುನಃ ಟೀಚರುಗಳ ಮೂದಲಿಕೆ ಪನಿಶ್ಮೆಂಟು. ಶಾಲೆಯೆಂದರೆ ನನ್ನ ಪಾಲಿಗದು ಯಮಯಾತನೆಯಾಗತೊಡಗಿತ್ತು. ಮೊದಲಿನ ಶಾಲೆಯಲ್ಲಿ ಆಟೋಟ, ಪ್ರತಿಭಾ ಕಾರಂಜಿ ಮುಂತಾದ ಎಲ್ಲದರಲ್ಲೂ ನನ್ನ ಹೆಸರು ಮುಂಚೂಣಿಯಲ್ಲಿದ್ದರೆ ಇವತ್ತು ಎಲ್ಲವೂ ಉಲ್ಟಾ ಆಗಿತ್ತು. ಆಟದ ಎಲ್ಲಾ ಪರಿಕರಗಳೂ ನನ್ನ ಸುಪರ್ದಿಯಲ್ಲಿದ್ದು, ನಾನು ಇಚ್ಛಿಸಿದರೆ ಮಾತ್ರ ಕೊಡುತ್ತಿದ್ದೆ. ಶಾಲೆಗೆ ತರಿಸುವ ಚಂಪಕ ಮುಂತಾದ ಮಕ್ಕಳ ಪತ್ರಿಕೆ ನನಗೆ ಮಾತ್ರ ಸಿಗುತ್ತಿದ್ದವು. ಶಾಲಾ ಗ್ರಂಥಾಲಯದ ಕತೆ ಪುಸ್ತಕಗಳು, ಟಾಕಿಂಗ್ ಟ್ರೀ, ಸ್ಮಾರ್ಟ್ ಟೀವಿ, ಕಂಪ್ಯೂಟರ್ ಬಳಕೆ ಎಲ್ಲವೂ ನನ್ನ ನಂತರವೇ ಉಳಿದವರಿಗೆ. ಎಂಥ ಸುಂದರ ದಿನಗಳಾಗಿದ್ದವವು?!!
ಈಗೀಗ ಯಾಕಾದರೂ ಈ ಶಾಲೆಗೆ ಹಚ್ಚಿದೆನೋ ಅನಿಸಲು ಶುರುವಾಗಿತ್ತು. ಸದಾ ಮಂಕಾಗಿ ಕೂಡತೊಡಗಿದೆ. ಯಾವಾಗ ಯಾವ ಟೀಚರು ಯಾವುದಕ್ಕಾಗಿ ಬೈಗುಳದ ಅಭಿಷೇಕ ಮಾಡುತ್ತಾರೋ?… ಯಾವಾಗ ಸಹಪಾಠಿಗಳು ನನ್ನೆಡೆಗೆ ಕುಹಕ ನಗು ನಗುತ್ತಾ ನೋಡುತ್ತಾರೋ?… ಎಂಬ ದಿಗಿಲಿನಲ್ಲಿ ಒಂದು ಕ್ಷಣವೂ ಪಾಠವನ್ನು ಆಸಕ್ತಿಯಿಂದ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಎರಡೆರಡು ಪುಟ ಕಂಠ ಪಾಠ ಮಾಡುವಷ್ಟು ನೆನಪಿನ ಶಕ್ತಿ ಇರುವ ನನಗೆ ಈಗ ಎರಡು ವಾಕ್ಯ ಕೂಡಾ ನೆನಪಾಗುತ್ತಿರಲಿಲ್ಲ. ಓದಲು ಕುಳಿತಾಗೆಲ್ಲ ಅಂದು ಯಾವ ಟೀಚರು ಹೇಗೆ ಅವಮಾನಿಸಿದರೆಂಬುದೇ ಕಣ್ ಮುಂದೆ ಬಂದು ಯಾರಿಗೂ ಕಾಣದಂತೆ ಬಯಲಿನಲ್ಲಿ ಹೋಗಿ ಮನಸೋ ಇಚ್ಛೆ ಅತ್ತು ಹಗುರಾಗುತ್ತಿದ್ದೆ. ಅಪ್ಪ ಒದೆಯುತ್ತಾನೆಂದು ನೆಪ ಮಾತ್ರಕ್ಕೆ ಪುಸ್ತಕ ಹಿಡಿದು ಕೂಡುತ್ತಿದ್ದೆ. ಹಿಂದಿನ ಶಾಲೆಯಲ್ಲಿನ ಒಂದು ಘಟನೆ ಈಗೀಗ ನಿತ್ಯವೂ ಮನದೆದುರು ಹಾದು ಹೋಗತೊಡಗಿತು. ……….
ಒಂದು ದಿನ ನಮ್ಮ ಮೊದಲಿನ ಶಾಲೆಯಲ್ಲಿನ ಹೆಡ್ ಮೆಡಂ ಅವರು, ಪೆರೆಂಟ್ ಮೀಟಿಂಗ್ ಅಲ್ಲಿ ಪಾಲಕರಿಗಾಗಿ ‘ತಾರೆ ಜಮೀನ್ ಪರ್’ ಎಂಬ ಅಮೀರ್ ಖಾನ್ ಅವರ ಚಿತ್ರವನ್ನು ಶಾಲಾ ಪ್ರೊಜೆಕ್ಟರ್ ಮೂಲಕ ತೋರಿಸಲು ಯೋಜಿಸಿ, ಆರಂಭದಲ್ಲಿ ಚಿತ್ರ ಯಾವುದರ ಕುರಿತಾಗಿದೆ ಎಂದು ವಿವರಣೆ ಕೊಡತೊಡಗಿದರು.
“ಸೋಲೋಮನ್ ಅನ್ನುವ ದ್ವೀಪದಲ್ಲಿನ ಜನರು ಮರಗಳಿಂದ ತಮಗೆ ತೊಂದರೆ ಆದಾಗ ಅದನ್ನು ಕತ್ತರಿಸುವದಿಲ್ಲ. ಕೇವಲ ಆ ಮರದ ಸುತ್ತಲೂ ನಿಂತು ಬೈಯುತ್ತಾರೆ. ಆಗ ಮರ ತಂತಾನೇ ಒಣಗಿ ಹೋಗುತ್ತದೆ. ಮರದಂಥ ಮರ ಕೂಡ ಬೈಗುಳನ್ನು ಸಹಿಸುವದಿಲ್ಲ. ಅಂಥದ್ದರಲ್ಲಿ ನಮ್ಮ ಮಕ್ಕಳಿಗೆ ಸದಾ ಬೈದರೆ ಅವರೂ ಮರಗಳಂತೆ ಒಣಗುತ್ತಾರೆ. ಕಾರಣ, ಯಾವ ಸಂದರ್ಭದಲ್ಲೂ ಮಕ್ಕಳನ್ನು ಬೈಯದೇ ಪ್ರೋತ್ಸಾಹಿಸಿ.”
ಎಂದು ಹೇಳುತ್ತಿದ್ದರು….. ಸಿನೇಮಾ ತೊರಿಸುತ್ತಾರೆ… ಎಂದಾಗ, ಮಕ್ಕಳಾದ ನಾವೂ ನೋಡಲು ಹಟ ಮಾಡಿ, ಅಲ್ಲಿಯೇ ಕುಳಿತಿದ್ದರಿಂದ ನಾನೂ ಈ ಮಾತುಗಳನ್ನು ಕೇಳಿಸಿಕೊಂಡಿದ್ದೆ. ಈಗ ಪ್ರತಿ ದಿನ ಅವರ ಮಾತುಗಳು ನೆನಪಿಗೆ ಬರತೊಡಗಿದ್ದವು. ನಾನು ದಿನದಿಂದ ದಿನಕ್ಕೆ ಸೋಲೋಮನ್ ದ್ವೀಪದ ಮರದಂತೆ ಕಮರಿಹೋಗತೊಡಗಿದ್ದೆ.
ಮುಂದಿನ ಬೆಂಚಿನಲ್ಲಿ ಕುಳಿತರೆ ಏನಾದರೂ ಕೇಳುತ್ತಾರೆಂದುಕೊಂಡು ಈಗೀಗ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳತೊಡಗಿದ್ದೆ. ಸದಾ ಏಕಾಂಗಿಯಾಗಿ ಮಂಕಾಗಿ ಇರುತ್ತಿದ್ದೆ. ತರಗತಿಯ ಹೊರಗಿನ ದೃಶ್ಯಗಳೇ ನನ್ನ ಗಮನವನ್ನು ವಿಪರೀತವಾಗಿ ಸೆಳೆಯುತ್ತಿದ್ದವು. ಒಂದು ದಿನ ಹೊರಗಡೆ ಕಿಟಕಿಯಲ್ಲಿ ನಾನು ನೋಡುತ್ತಿರುವಾಗ ಅನತಿ ದೂರದಲ್ಲಿ ಕೆಸರಿನಲ್ಲಿ ಸಿಕ್ಕು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಹಂದಿಯ ಮರಿಯೊಂದು ಕಾಣಿಸಿತು. ‘ಥತ್! ಕೆಸರು ಆಳವಾಗಿದೆ ಎಂದು ತಿಳಿದರೂ ಅಲ್ಲೇಕೆ ಸಾಯಲು ಹೋಗಿದೆ ಈ ಹಂದಿ?’ ಅಂತಾ ಬೈದುಕೊಳ್ಳುತ್ತಿರುವಾಗ ನನ್ನ ಹೆಗಲ ಮೇಲೊಂದು ದಪ್ಪ ಕೈ ತಾನಾಗಿ ಬಂದು ಕೂತಿತ್ತು. ನನ್ನ ವ್ಯಥೆ ಆ ಕೈಗಳ ಒಡೆಯನಿಗೆ ಅರ್ಥವಾಗಿತ್ತು. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ಆ ಕೈಗಳ ಯಜಮಾನ ನನ್ನಂತೆ ದುಃಖಿಯಾಗಿದ್ದು ಕೇಳಿ, ಮೊದಲು ವಿಪರೀತ ಆಶ್ಚರ್ಯವಾಗಿತ್ತು. ನಂತರದಲ್ಲಿ ಅವನೇ ನನ್ನ ಗುರು ಸಮಾನವಾಗಿ ಬಿಟ್ಟ. ಆ ದಿನ ಆ ದಪ್ಪ ಕೈ ನನ್ನ ಹೆಗಲ ಮೇಲೆ ಬಿದ್ದಾಗ ಆಗರ್ಭ ಶ್ರೀಮಂತ ಸಹಪಾಠಿ ನನ್ನೊಂದಿಗೆ ಮಾತನಾಡಲು ಬಯಸುತ್ತಿರುವನೇ ಎಂದು ಸಂತೋಷಾಶ್ಚರ್ಯಗಳೆರಡೂ ಏಕಕಾಲದಲ್ಲಿ ಮನದಲ್ಲಿ ನುಗ್ಗಿದ್ದವು. ಕನ್ನಡ ಶಿಕ್ಷಕರು ಕುಮಾರವ್ಯಾಸನ ಪದ್ಯ ಹೇಳುತ್ತಿದ್ದರು.
‘ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವದೊಂದು ಪುಣ್ಯವು…..’
“ಎಲ್ಲರೂ ಸೂತಪುತ್ರನೆಂದು ಅವಮಾನಿಸುತ್ತಿದ್ದಾಗ ನನ್ನನ್ನು ಅಪ್ಪಿಕೊಂಡು , ಒಪ್ಪಿಕೊಂಡು ನನ್ನನ್ನು ಅಂಗ ರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿದ ಗೆಳೆಯನ ಋಣ ಹೇಗೆ ತೀರಿಸಲಿ? ಎಂದು …….”
ಮುಂದಿನ ವಾಕ್ಯಗಳು ನನ್ನ ಕಿವಿಯಲ್ಲಿ ಹೋಗಲೇ ಇಲ್ಲ.
“ಇಬ್ರೂ ಕೂಡಿ ಉಣ್ಣೂಣಂತ ಬರ್ತಿ ಏನಲೇ?”
ಗೆಳೆಯ ಕೇಳುತ್ತಿದ್ದ. ನಾನು ಬೆಚ್ಚಿ ಬಿದ್ದಿದ್ದೆ. ಮೂರು ತಿಂಗಳುಗಳ ಕಾಲ ಒಬ್ಬನೇ ಉಣ್ಣುತ್ತಿದ್ದ ನನಗೆ ಜೊತೆಗಾರನೊಬ್ಬ ಸಿಕ್ಕಿದ್ದು ನಿಧಿ ಸಿಕ್ಕಷ್ಟು ಖುಷಿಯಾಗಿತ್ತು. ಆದರೆ…… ನನ್ನ ಚಪಾತಿ, ರೊಟ್ಟಿಗಳನ್ನು ಇವನು ತಿನ್ನುವನೇ? ಏಕೆಂದರೆ, ಮಧ್ಯಾಹ್ನ ಅವನಿಗೂ ಮನೆಯಿಂದ ಬಿಸಿ ಆಹಾರವನ್ನು ಡ್ರೈವರ್ ತಂದು ಕೊಡುತ್ತಿದ್ದುದನ್ನು ನಾನು ನೋಡಿದ್ದೆ. ಆದರೆ, ಅವನು ಇನ್ನೂ ಮೂವರು ತನ್ನ ಗೆಳೆಯರೊಡನೆ ನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಗುಂಪಿನಲ್ಲಿ ಕೂಡಿಸಿಕೊಂಡ. ಎಲ್ಲರೂ ತಮ್ಮ ತಮ್ಮದನ್ನು ಹಂಚಿಕೊಂಡು ತಿಂದೆವು. ಮೊಟ್ಟ ಮೊದಲ ಬಾರಿಗೆ ಅತೀ ಸಂತಸ ಪಟ್ಟಿದ್ದು ಈ ಶಾಲೆಯಲ್ಲಿ ಇದೇ ಮೊದಲು. ಊಟ ಮುಗಿಸಿ ಬರುವಾಗ, ಪುನಃ ಹಂದಿಯೆಡೆಗೆ ಅಪ್ರಯತ್ನವಾಗಿ ನೋಡಿದೆ. ಈಗ ಇನ್ನೂ ಎರಡು ಮೂರು ಹಂದಿಗಳು ಅದೇ ಕೊಚ್ಚೆಯಲ್ಲೆ ಆನಂದದಿಂದ ಉರುಳಾಡುತ್ತಿದ್ದುದು ಕಂಡಿತು. ಮೊದಲಿನ ಹಂದಿಯೂ ಆನಂದದಿಂದಲೇ ಹೋಗಿದೆಯೆಂದು ಅರ್ಥವಾಗಿತ್ತು. ಎಲ್ಲರೂ ಮೂಗು ಮುಚ್ಚುವ ಕೊಳಚೆಯಲ್ಲಿ ಹಂದಿಗಳಿಗೆ ಅದೇನು ಆನಂದ ಸಿಗುವದೋ ಎಂದು ಆಶ್ಚರ್ಯವಾಗಿತ್ತು.
ನನ್ನ ಹೊಸ ಗೆಳೆಯನ ಹೆಸರು ‘ಗೋಲೂ’ ಅಂತಿತ್ತು. ದಾಖಲಾತಿಯಲ್ಲಿ ಅವನ ಹೆಸರು ಪುರುಷೋತ್ತಮ ಕಳಂದಿಕರ್ ಅಂತಾ ಇದ್ದರೂ ಎಲ್ಲರೂ ಗೋಲೂ ಅಂತಾ ಕರೆಯುತ್ತಿದ್ದರು. ಗೋಲೂ ಹೆಸರಿಗೆ ತಕ್ಕಂತೆ ಗೋಳಾಕಾರದಲ್ಲೇ ಇದ್ದ. ತುಂಬಾ ಶ್ರೀಮಂತರ ಮಗನೂ ಹಾಗೂ ಶಾಸಕರ ಅತ್ಯಾಪ್ತನಾಗಿರುವ ತಂದೆಯನ್ನು ಹೊಂದಿರುವ ಗೋಲುವಿಗೆ ಶಿಕ್ಷಕ ವರ್ಗ ಎನೂ ಅನ್ನುತ್ತಿರಲಿಲ್ಲ. ಅವರಪ್ಪನಿಂದ ಅತ್ಯಧಿಕ ಡೋನೇಷನ್ ಕಿತ್ತುಕೊಂಡಿರುವ ಶಾಲಾ ಮುಖ್ಯಸ್ಥರು ಅವರಪ್ಪನಿಗಷ್ಟೇ ಅಲ್ಲದೇ… ಮಗನಿಗೂ ಹೆದರುತ್ತಿದ್ದರು.
ಗೋಲುವಿನ ಪರಿಚಯವಾದಾಗಿನಿಂದ ಅವನ ಪಕ್ಕದಲ್ಲೇ ಕೂಡುತ್ತಿದ್ದೆ. ಎರಡು ರೀತಿಯ ಲಾಭವನ್ನು ಗೋಲುವಿನಿಂದ ಪಡೆದೆ. ಗೋಲುವಿನಿಂದಾಗಿ ಅವನ ಪಟಾಲಮ್‌ಗಳಿಗೆ ಟೀಚರು ಯಾವ ಪ್ರಶ್ನೆ ಕೇಳುತ್ತಿರಲೇ ಇಲ್ಲ. ಜೊತೆಗೆ ಪನಿಶ್ಮೆಂಟ್ ಕೂಡ ಇಲ್ಲ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಕೈ ನೋಯಿಸಿಕೊಂಡು ಬೆನ್ನು ನೋಯಿಸಿಕೊಂಡು ಹೊರೆ-ಹೊರೆ ಹೋಂ ವರ್ಕ್ ಮಾಡುವ ಅಗತ್ಯವೇ ಇರಲಿಲ್ಲ. ಜತೆಗೆ ರೆಷ್ಟ್ ಪಿರ್ಡ್ ಇದ್ದಾಗ, ಹೊರಗೆ ಹೋದರೆ… ಸನಿಹದಲ್ಲೇ ಇರುವ ಪಾನಿ ಪುರಿ, ಭೇಳ ಪುರಿ ಎಲ್ಲ ತಿನ್ನುತ್ತಾ… ನೆನಪಾದಾಗ ಶಾಲೆಗೆ ಹೋಗಿ ನೆಪಮಾತ್ರಕ್ಕೆ ಹಿಂದಿನ ಬೆಂಚಿನಲ್ಲಿ ಕುಳಿತು, ಮೆಡಂ ಹೇಳಿದ್ದು ಬರೆಯುವ ನಾಟಕ ಮಾಡಿದರೆ ಮುಗೀತು. ಗೋಲುವಿನಿಂದಾಗಿ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳೂ, ಮುಂಚೆಯೇ ತಿಳಿಯುತ್ತಿದ್ದರಿಂದ ನಾಕಾರು ಪ್ರಶ್ನೆ ಉರು ಹೊಡೆದು ಪಾಸಾಗಿ ಬಿಡುತ್ತಿದ್ದೆ. ಟೀಚರುಗಳೀಗ ಅಪ್ಪನನ್ನು ಕರೆಸುತ್ತಿರಲಿಲ್ಲ. ಅವನೂ… ಮಗs ಈಗೀಗ ಚನ್ನಾಗಿ ಓದುತ್ತಿರಬಹುದೆಂದು ಬೈಗುಳನ್ನು ಕಡಿಮೆ ಮಾಡಿದ್ದ.
ಮತ್ತೆರಡು ತಿಂಗಳು ಉರುಳಿತ್ತು. ಒಂದು ದಿನ ಗೋಲೂ ಎಲ್ಲರನ್ನೂ ಕರೆದುಕೊಂಡು ಶಾಲೆಯಿಂದ ಅನತಿ ದೂರದ ಸ್ಮಶಾನದ ಕಡೆಗೆ ಕರೆದುಕೊಂಡು ಹೋದ. ಇಲ್ಲೇಕೆ ಕರೆದುಕೊಂಡು ಬಂದನೆಂದು ನಾನು ಹೆದರಿಕೆಯಿಂದ ನಡುಗುತ್ತಾ…..
“ಇದು ಸು..ಡ..ಗಾಡ ಐತಿ…. ಇಲ್ಯಾಕ್ ಕರಕೊಂಡ್ ಬಂದ್ಯಲೇ…. ಇಲ್ಲಿ ದೆವ್ವಾ… ಭೂತಾ ಇ..ಇ..ರ್ತಾವ. ಅವುಕss ಡಿಸ್ಟರ್ಬ್ ಮಾಡಿದ್ರ ನಮ್ಮ್ ರಕ್ತಾ ಕು..ಕುಡೀ..ತಾ..ವಂತ”
ಎಂದು ನಡುಗುತ್ತಾ ಹೇಳಿದಾಗ ಉಳಿದವರು ಪಕಪಕನೇ ನಗಲು ಶುರು ಮಾಡಿದರು.
“ಅಲ್ಲಲೇ ಇಷ್ಟ್ ದೊಡ್ಡಾಂವ್ ಆಗಿ… ಇನಾ.. ಎಲ್.ಕೆ.ಜಿ ಹುಡುಗೂರ್‌ಗತೆ ಅಂಜತೀಯಲ್ಲೋ? ನಮ್ ಸೈನ್ಸ್ ಸರ್ ಹೇಳಿಲ್ಲೇನು? ದೆವ್ವಾ ಭೂತಾ ಎಲ್ಲಾ ನಮ್ ಭ್ರಮೆ ಸತ್ ಮ್ಯಾಲs ಶರೀರ… ಎಲಬ್ ಒಂದ್ ಬಿಟ್ss ಎಲ್ಲಾ ಜೀರ್ಣ ಆಗಿ ಮಣ್ಣಿನೊಳಗs ಮಣ್ ಆಗ್ತದ ಅಂದಿಲ್ಲೇನು? ಬಾ….ಬಾ. ಈಗ್ ನಿನ್ನss ಸಾಯಲಾರದೇ ಸ್ವರ್ಗಕ್ಕs ಕರ್ಕೊಂಡ್ ಹೋಗ್ತೀನಿ.”
ಅನ್ನುತ್ತಾ ತನ್ನ ಕಿಸೆಯಲ್ಲಿನ ಸಿಗರೇಟನ್ನು ಹೊರಗೆಳೆದ. ಎಲ್ಲರಿಗೂ ಒಂದೊಂದು ಕೊಟ್ಟು ಲೈಟರ್ ಹೊರ ತೆಗೆದ. ನಾನು ಯಾರಾದರೂ ನೋಡಿದರೆ?…. ಅಪ್ಪನಿಗೆ ಹೇಳಿದರೆ?…. ಎಂದು ಹೆದರುತ್ತಿರುವಾಗಲೇನೆ…
“ಯಾರೂ ಬರಲಾರ್ದ್ ಜಾಗಾ ಅಂದ್ರ ಅದು ಈ ಸುಡಗಾಡ್ ಒಂದೇ ನೋಡಪಾ….. ಇಲ್ಲಿ ಬರಲಿಕ್ಕಿ ಹುಡುಗೂರು ಹೋಗಲಿ….., ದೊಡ್ಡವರು ಸೈತ, ಅಂಜಿ ಸಾಯ್ತಾವು. ಅದಕ್ಕss ಇಲ್ಲಿ ಕರಕೊಂಡ್ ಬಂದೀನಿ. ಎಲ್ಲಾರೂ ಒಂದೊಂದ್ ದಮ್ ಎಳದು…. ಸಿನಿಮಾದಾಗ ತೋರಸ್ತಾರಲಾ…. ಹಾಂಗ…. ಸುರುಳಿ ಸುರುಳಿ ಸುತ್ತಿ ಹೊಗಿ ಬಿಡ್ರೆಲೆ….. ಭಾಳ ಮಜಾ ಬರ್ತೈತಿ,”
ಎಂದಾಗ, ನನ್ನನ್ನು ಬಿಟ್ಟು, ಉಳಿದವರು ಗೋಲೂ ಹೇಳಿದಂತೆ ಸುರುಳಿ ಸುರುಳಿ ಹೊಗೆ ಬಿಡಲು ಪ್ರಯತ್ನಿಸತೊಡಗಿದರು. ನನಗೆ ಮಾತ್ರ ಹೊಗೆ ಗಂಟಲಿಗೆ ಹೋಗಿ ವಿಪರೀತ ಕೆಮ್ಮು ಬರತೊಡಗಿತು. ಗೋಲೂ ನನ್ನ ಬೆನ್ನ ಮೇಲೆ ಕೈಯಾಡಿಸಿ ಹೊಗೆ ನುಂಗದೇ ಹೇಗೆ ಸಿಗರೇಟು ಸೇದಬೇಕೆಂದು ಕಲಿಸತೊಡಗಿದ. ನಂತರದ ನಾಕೈದು ದಿನದಲ್ಲಿ ನಾನೂ ಅವರಂತೆ ದಮ್ ಎಳೆಯಲು ಕಲಿತೆ. ನಂತರದ ದಿನಗಳಲ್ಲಿ ಅವರಪ್ಪನ, ವಿಶೇಷವಾದ ಹಾಗೂ ದುಬಾರಿಯಾದ, ವಿದೇಶಗಳಿಂದ ತರಿಸಿದ ಮದ್ಯಗಳ ರುಚಿಯೂ ತೋರಿಸತೊಡಗಿದ. ಅವರಪ್ಪ ಪಾರ್ಟಿಗಳಿದ್ದಾಗ… ಕುಡಿದು, ಅರ್ಧ ಉಳಿಸಿದ.. ಸೀಸೆಗಳನ್ನು ಎತ್ತಿಟ್ಟು ತಂದು ಹಂಚಿದ್ದ. ಮೊದಮೊದಲು ಒಗರು-ಒಗರು ಇದೇನು ರುಚಿ? ಇದನ್ಯಾಕೆ ಅಷ್ಟು ಬಿದ್ದು-ಬಿದ್ದು ಕುಡಿಯಲು ಕಾತರಿಸುವರೋ? ಅನಿಸಿದರೂ…. ಮೈ-ಮನಸು ಗಾಳಿಯಲ್ಲಿ ತೇಲಾಡುವಂತೆ ಹಗುರವಾದಂತಾದಾಗ ಆ ದುಬಾರಿ ಮದ್ಯಕ್ಕಾಗಿ…. ಗೋಲುವಿನ ದಾಸಾನುದಾಸರಾಗಿ… ಅವನ ಸೇವೆ ಮಾಡಲು, ಟೊಂಕ ಕಟ್ಟಿ ನಿಂತು ಬಿಟ್ಟಿದ್ದೆವು ಎಲ್ಲರೂ.
ಅದು ಹೇಗೋ ಯಾರಿಂದಲೋ ನಮ್ಮ ಅವಾಂತರಗಳೆಲ್ಲಾ ನಮ್ಮ ಟೀಚರುಗಳಿಗೆ ತಿಳಿದು ಪುನಃ ಅಪ್ಪಂದಿರನ್ನು ಕರೆಸಿ ಛೀ ಮಾರಿ ಹಾಕಿದರು. ಅಪ್ಪನಂತೂ ವಿಪರೀತ ಆಘಾತಕ್ಕೊಳಗಾಗಿದ್ದ. ದುಬಾರಿ ಹಣವನ್ನು ಸಾಲ-ಸೋಲ ಮಾಡಿ ಹೊಂದಿಸಿ, ಮಗss ಸೈಬ್ ಅಗ್ತಾನ ಅನ್ನೋ ಕನಸು ಕಟ್ಟಿಕೊಂಡು ಊರವರೆಲ್ಲರ ಮುಂದೆ ಇಂಥ ಪ್ರತಿಷ್ಟಿತ ಶಾಲೆಯಲ್ಲಿ ನಮ್ಮ ಮಗ ಕಲಿಯುತ್ತಿದ್ದಾನೆಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿರುವಾಗಲೇ…. ಮಗ ಸಂಪೂರ್ಣ ಹಾದಿ ತಪ್ಪಿದ್ದಾನೆಂದರೆ, ಎಷ್ಟು ಸಂಕಟವಾಗಿರಬೇಡ? ಒಪ್ಪತ್ತು ಊಟ ಮಾಡಿ, ಹರಿದ ಒಳ ಉಡುಪುಗಳನ್ನೇ ತೇಪೆ ಹಚ್ಚಿ ಉಡುತ್ತಾ… ಹಣ ಹೊಂದಿಸಿ… ದುಡಿದ ಎಲ್ಲವನ್ನೂ ಮಗನಿಗಾಗಿ… ಅವನ ಶಿಕ್ಷಣಕ್ಕೆ ಹೊಂದಿಸಿ ಕೊಟ್ಟು….. ಮಗ ಒಂದಿನಾ ದೊಡ್ ನೌಕರದಾರ ಆಗ್ತಾನ…… ನಮ್ ಬಡತನ ಎಲ್ಲಾ ನೀಗಸ್ತಾನ…. ಅಂತೆಲ್ಲ ಕನಸು ಕಟ್ಟಿಕೊಂಡವರಿಗೆ ಅವರ ಕನಸಿನ ಮಹಾಸೌಧ ಅವರ ಕಣ್ಣೆದುರೇ ಕುಸಿದು ಬೀಳತೊಡಗಿದರೆ, ಅದೆಂಥ ನೋವಾಗಿರಬೇಡ?
ಮತ್ತೆ.. ಹೊಡೆತ… ಬಡಿತ…, ಬೈಗುಳ ಅಭಿಷೇಕ. ಈಗೀಗ ಹೊಡೆತ ಬೈಗುಳಗಳಿಗೆ ಮೈಯೂ ಮನಸೂ ಒಗ್ಗಿಕೊಂಡಿದ್ದರಿಂದ ಏನೂ ಅನಿಸಲೇ ಇಲ್ಲ. ದಿನಗಳು ಉರುಳುತ್ತಲೇ ಇದ್ದವು.
ಪುನಃ ಮುಂದಿನ ವರ್ಷ ಮತ್ತೆ ಫೀಜು ಹೊಂದಿಸಬೇಕು. ಹಿಂದಿನಂತೆ ಹೊಲದ ಬೆಳೆ ಉಂಡು ಸಾಲ ಮುಟ್ಟಿಸಿಕೊಳ್ಳಲು ಸಾಲ ಕೊಟ್ಟವನು ಒಪ್ಪಲಿಲ್ಲ. ಕಳೆದ ಸಲ ಬೆಳೆ ಚನ್ನಾಗಿ ಬರದೇ ತನಗೆ ಬಹಳ ಹಾನಿ ಆಗಿದೆಯೆಂದು ತಕರಾರು ತೆಗೆದು…. ಸಾಲ ಹಿಂದಿರುಗಿಸುವ ವರೆಗೂ ಹೊಲವನ್ನು ಸಾಲದ ಬಡ್ಡಿ ಹಣದಲ್ಲಿ ಅನುಭೋಗಿಸುವದು…. ಯಾವಾಗ ಸಾಲ ಹಿಂದಿರುಗಿಸುವರೋ ಆಗ ಮಾತ್ರ ಹೊಲ ಹಿಂದಿರುಗಿಸುವದು ಎಂಬ ಕರಾರು ಮಾಡಿ ಸಾಲ ಕೊಟ್ಟ. ಅಂತೂ ಶಾಲೆಯ ಫೀ ಹೊಂದಿಸಿದ ಅಪ್ಪ. ಈ ಸಲ ಶಾಲೆಗೆ ಕಳಿಸುವಾಗ ಕಣ್ಣೀರು ತಂದುಕೊಂಡು… ಇನ್ನಿಲ್ಲದಂತೆ ಚನ್ನಾಗಿ ಶಾಲೆ ಕಲಿಯಲು, ಬೋಧನೆ ಮಾಡಿ ಕಳಿಸಿದ. ನಾನು ಹ್ಞೂಗುಟ್ಟಿದೆನಷ್ಟೆ. ಯಾವಾಗ ಶಾಲೆಗೆ ಹೋದೇನೋ ಯಾವಾಗ ಗೋಲುವಿನಿಂದ ಸಿಗರೇಟು ವಿದೇಶಿ ಮದ್ಯ ಇಸಿದುಕೊಂಡೇನೋ…. ಎಂದು ಮನಸು ತುಡಿಯುತ್ತಿತ್ತು. ದಿನಗಳ ಲೆಕ್ಕ ಹಾಕತೊಡಗಿದ್ದೆ. ಮನಸಿಗೆ ಯಾವುದರಲ್ಲೂ ಸೊಗಸಿಲ್ಲದಂತಾಗಿತ್ತು. ಸಿಗರೇಟಿಲ್ಲದೇ ಮದ್ಯವಿಲ್ಲದೇ ಮೆದಳು ನಿಷ್ಕ್ರೀಯವಾದಂತೆನಿಸುತ್ತಿತ್ತು. ಯಾವುದರಲ್ಲೂ ಆಸಕ್ತಿಯಿಲ್ಲದೇ ಕೊರಡಿನಂತಾಗತೊಡಗಿದ್ದೆ.
ಗೋಲುವಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅವರಪ್ಪ.. ಈಗ ಸಿಗರೇಟು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಇಡದೇ.. ಬೀರುವಿನಲ್ಲಿ ಇಡತೊಡಗಿದ್ದರಂತೆ. ಅವನೂ ನನ್ನಂತೆ ಚಡಪಡಿಸತೊಡಗಿದ್ದನಂತೆ. ಮತ್ತೆ ಶಾಲೆ ಶುರುವಾದಾಗ ನಮ್ಮ್ ಪಟಾಲಂ ಸೇರಿತ್ತು. ಎಲ್ಲರ ಪರಿಸ್ಥಿತಿಯೂ ಒಂದೇ ಆಗಿತ್ತು. ಸಿಗರೇಟು ಮದ್ಯಗಳಿಲ್ಲದೇ ಸತ್ತೇ… ಹೋಗುತ್ತೇವೆಂಬ ಭಾವ. ಏನು ಮಾಡುವುದೆಂದು ಚಿಂತಿಸುತ್ತ… ಮನೆಯಲ್ಲಿ ಅಮ್ಮಂದಿರ ಹತ್ತಿರ ಸುಳ್ಳು ಹೇಳಿ ಸ್ವಲ್ಪದಿನ ದುಡ್ಡು ಪಡೆದು ಹೇಗೋ ಹೊಂದಿಸಿದೆವು. ಅವರಿಗೂ ಸಂಶಯ ಬಂದು ದುಡ್ಡು ಕೊಡುವುದು ನಿಂತಾಗ… ಸಣ್ಣ ಪುಟ್ಟ ಕಳ್ಳತನಗಳನ್ನು ಮನೆಯಲ್ಲಿಯೂ ಹೊರಗೂ ಮಾಡತೊಡಗಿದೆವು. ಗೋಲುವಿನ ಮನೆಯಲ್ಲಿನ ದುಬಾರಿ ವಸ್ತುಗಳು, ನನ್ನ ಮನೆಯಲ್ಲಿನ ಹಿತ್ತಾಳೆ, ತಾಮ್ರ , ಕಬ್ಬಿಣ ವಸ್ತುಗಳು ಕಾಣೆಯಾಗತೊಡಗಿದವು. ಕೊನೆಗೆ ಅನ್ಯರ ವಸ್ತುಗಳ ಮೇಲೆ ನಮ್ಮ ಕಣ್ಣು ಬಿತ್ತು. ಎಷ್ಟು ದಿನ ತುಡುಗು ದಕ್ಕುತ್ತದೆ? ಸಿಕ್ಕಿ ಬೀಳುವುದು ಹೊಡೆಸಿಕೊಳ್ಳುವುದು ನಡೆಯಿತು. ಅಪ್ಪನಿಗೆ ನನ್ನ ಮೇಲಿನ ಭರವಸೆ ಸಂಪೂರ್ಣ ಹೊರಟು ಹೋಗಿತ್ತು. ತಾನು ವ್ಯರ್ಥವಾಗಿ ನೀರೊಳಗೆ ಹೋಮ ಮಾಡಿದಂತೆ ಹಣ ಸುರಿಯುತ್ತಿದ್ದೇನೆಂದು ಅರ್ಥವಾಗಿತ್ತು. ಅವನೂ ತಿಳಿ ಹೇಳಿ, ಶಿಕ್ಷೆ ನೀಡಿ ಸೋತು ಹೋಗಿದ್ದ. ಆ ಶಾಲೆ ಬಿಡಿಸಿ ಬೇರೆ ಸರ್ಕಾರಿ ಶಾಲೆಗೇನೇ ಸೇರಿಸಬೇಕೆಂದು ಯೋಚಿಸಿದ. ಆದರೆ, ಈ ವರ್ಷ ಸ್ವಲ್ಪ ಹಣ ಬಾಕಿ ಉಳಿಸಿ, ಊರಲ್ಲಿಯ ನೂರಕ್ಕೆ ಮೂರರ ಸಾಲವನ್ನು ತುಂಬಿದ್ದ. ಸಾಲದ್ದಕ್ಕೆ ಈ ವರ್ಷ ಶಾಲೆಯ ಫೀ 35000 ಮಾಡಿದ್ದರು. ಉಳಿದ ಖರ್ಚೆಲ್ಲವೂ ಸೇರಿ ಪುನಃ 20000 ಶಾಲೆಗೆ ಕೊಡಬೇಕಿತ್ತು. ಎಲ್ಲಾ ಹಣ ತುಂಬದೇ ಟೀಸಿ ಕೊಡುವದಿಲ್ಲವೆಂದು ಖಡಾ ಖಂಡಿತ ಶಾಲೆಯವರು ಹೇಳಿಬಿಟ್ಟಿದ್ದರು.
ಹಳೆಯ ಶಾಲೆಯ ಮುಖ್ಯಗುರುಗಳಿಗೆ ಎಮ್.ಎಲ್.ಎ ಹೆಸರು ಹೇಳಿ.. ಹೆದರಿಸಿದಂತೆ, ಈಗ ಸಾಧ್ಯವಿರಲಿಲ್ಲ. ಏಕೆಂದರೆ ಆ ಶಾಲೆಯು ಎಮ್.ಎಲ್.ಎ ಅವರದೇ ಆಗಿತ್ತು. ಫೀ ತಾರದೇ ಶಾಲೆಯಲ್ಲಿ ಕರೆದುಕೊಳ್ಳುವದಿಲ್ಲವೆಂದು ನನ್ನನ್ನು ಹೊರ ಹಾಕಿದರು.
“ಏಟ್ ದಿನಾ ಹಾಕ್ಕಾರು? ಮ್ಯಾಲಿಂದ್ss ಒತ್ತಡ ಬಂದ್ರs ತಾವೇ ಕರೀತಾರು. ನೀ ಸುಮ್ಮಿರಲೇ.’
ಅಂದ ಅಪ್ಪ. ಆದರೆ, ನನಗೆ ಸುಮ್ಮಿರುವುದು ಆಗುತ್ತಿರಲಿಲ್ಲ. ನನ್ನ ಚಟಗಳು ಸುಮ್ಮನಿರಲು ಬಿಡುತ್ತಿರಲಿಲ್ಲ. ಊರಲ್ಲಿನ ಗಾಡಿಗಳ, ಪೆಟ್ರೋಲ್ ತುಡುಗು ಮಾಡುವುದು, ಹೊಲಗಳಲ್ಲಿ ಬೆಳೆ ಕದಿಯುವುದು ಇತ್ಯಾದಿ ಮಾಡುತ್ತಿದ್ದೆ. ನನ್ನ ಶಾಲೆಯವರಿಗೆ… ಮ್ಯಾಲಿಂದss ಒತ್ತಡವೇನೂ ಬರಲಿಲ್ಲ. ಅವರು ಪುನಃ ನನ್ನನ್ನು ಕರೆಯಲಿಲ್ಲ. ಅಪ್ಪನೂ ಈಗೀಗ ನನ್ನ ಯೋಚನೆ ಬಿಟ್ಟು ಬಿಟ್ಟಿದ್ದ. 9ನೇ ತರಗತಿಯ ಆರಂಭದಲ್ಲಿ ಶಾಲೆ ಬಿಟ್ಟವನು ಪುನಃ ಶಾಲೆಗೆ ಹೋಗಲೇ ಇಲ್ಲ. ಅಸಲಿಗೆ ನನ್ನೂರಿನ ಶಾಲೆ ಬಿಟ್ಟ ಮೇಲೆ ನಾನು ಶಾಲೆ ಕಲಿತೇ ಇರಲಿಲ್ಲ. ಈಗ ಅಧಿಕೃತವಾಗಿ ಬಿಟ್ಟಿದ್ದೆ ಅಷ್ಟೆ. ಮತ್ತೆ ಎರಡು ಮೂರು ವರ್ಷ ಉರುಳಿದ್ದವು. ಮುಂಬೈನ ಕಾಮಾಟಿಪುರದ ವೇಶ್ಯೆಯರಿಗೆ ವಿಟರನ್ನು ಹುಡುಕಿ ಕೊಡುವ ಬ್ರೋಕರ್ ಒಬ್ಬ, ಊರ ಜಾತ್ರೆಗೆಂದು ನನ್ನೂರಿಗೆ ಬಂದಿದ್ದ. ಅದು ಹೇಗೋ ನನ್ನ ಪರಿಚಯವಾಗಿ… ಮುಂಬೈನ ಬಣ್ಣದ ಜಗತ್ತಿನ ವರ್ಣನೆ ಮಾಡಿ… ಜೊತೆಗೆ ಕರೆದೊಯ್ದಿದ್ದ. ನಾನು ಅಪ್ಪನಿಗೆ ಹೇಳದೇ ರಾತ್ರೋ ರಾತ್ರಿ ಅವನೊಂದಿಗೆ ಊರು ಬಿಟ್ಟು… ಅವನೇ ಕೊಡಿಸಿದ ಬ್ರೋಕರ್ ಕೆಲಸ ಮಾಡಿಕೊಂಡಿದ್ದೇನೆ. ಊರಲ್ಲಿ ಅಪ್ಪ ನನ್ನನ್ನು ಹುಡುಕಿಸಿದನಂತೆ. ಕೊನೆಗೆ ಯಾರೋ ಇಲ್ಲಿರುವ ವಿಚಾರ ಹೇಳಿದರಂತೆ. ಅವರಿವರಿಂದ… ಊರಿಗೆ ಬರಲು ಹೇಳಿ ಕಳುಹಿಸಿದ. ಊರಿಗೆ ಹೋಗಿ ಏನು ಮಾಡಲಿ? ಪುನಃ ನನ್ನ ಚಟಕ್ಕಾಗಿ ತುಡಗು ಮಾಡಬೇಕಾ? ಕೂಲಿ-ನಾಲಿ ಮಾಡಲು ನನಗೆ ಬರುತ್ತಿರಲಿಲ್ಲ. ಅಷ್ಟೇನೂ ಶ್ರಮವಿರದೇ ಕೇವಲ ಎರಡು ಮೂರು ತಾಸು ಕೆಲಸ ಮಾಡಿದರೆ, ಮೂರು ನಾಲ್ಕು ಗಿರಾಕಿಯೊದಗಿಸಿದರೆ, ಇಲ್ಲಿ ಹೊಟ್ಟೆ ತುಂಬಿ ನನ್ನ ಚಟಗಳೂ ಪೂರ್ತಿಯಾಗುತ್ತಿತ್ತು. ಇಲ್ಲಿಯೇ ಗಟಾರದ ಮೇಲೆ ಒಂದು ಗುಡಿಸಲು ವಾಸಕ್ಕೆ ಸಿಕ್ಕಿದೆ. ನನ್ನಂಥವರಿಗೆ ಸ್ವಚ್ಛ ಜಾಗ ಹೇಗೆ ಸಿಕ್ಕೀತು?… ಹೇಗೋ ವೈತರಣಿಯಲ್ಲಿ ಮುಳುಗುತ್ತಾ ಜೀವನ ಸಾಗಿದೆ.
ಹಳೆಯ ನೆನಪುಗಳು ಇಂದು ಬಹಳವಾಗಿ ಕಾಡುತ್ತಿವೆ. ನನ್ನ ಜೀವನದ ಹಳಿ ತಪ್ಪಿದ್ದೆಲ್ಲಿ?… ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ. ಇಂಗ್ಲೀಷ್ ಶಿಕ್ಷಣ ಪಡೆದರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ನಂಬಿಸಿದ ಸಮಾಜವನ್ನು ದೂರಲೇ? ಅಕ್ಷರ ಕಲಿತವರು ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಬಲ್ಲರೆಂದು ಬಿಂಬಿಸುವ ವ್ಯವಸ್ಥೆಯನ್ನು ದೂಷಿಸಬೇಕೆ? ಕನ್ನಡದಲ್ಲಿ ಯಾವುದೇ ಉನ್ನತ ಶಿಕ್ಷಣ ಕಲಿಸದ ಸರ್ಕಾರದ ತಪ್ಪನ್ನು ಹೇಳಬೇಕೇ? ಸುಲಿಗೆ ಮಾಡುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕದ ಇಲಾಖೆಯ ಅಧಿಕಾರಿಗಳ ಸ್ವಾರ್ಥವನ್ನು ತಪ್ಪೆನ್ನಲೇ? ನಮ್ಮಂತೆ ನಮ್ಮ ಮಕ್ಕಳಾಗಬಾರದು. ಅವರಾದರೂ ಉನ್ನತ ಜೀವನ ಪಡೆಯಲಿ ಎಂದು ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳನ್ನು ಹೆಸರುವಾಸಿ ಶಾಲೆಗೆ ಕಳಿಸುವ ಪಾಲಕರ ಆಸೆಯನ್ನೇ ತಪ್ಪೆನ್ನಲೇ? ಸರ್ಕಾರಿ ಶಾಲೆಯಲ್ಲಿ ಕಲಿತರೆ ತಮ್ಮ ಪ್ರತಿಷ್ಠೆಗೆ ಕುಂದೆಂಬಂತೆ ನಡೆದುಕೊಳ್ಳುವ ಕೆಲ ಪಾಲಕರ ಭಂಡತನವನ್ನು ಹಳಿಯಲೇ? ಅನ್ನದ ಭಾಷೆ ಕನ್ನಡವಾಗದೇ ಇಂಗ್ಲೀಷಾಗಿದ್ದುದಕ್ಕೆ ಕನ್ನಡಿಗರ ಹೇಡಿತನವನ್ನು ಹೀಗಳೆಯಲೇ? ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಹೆಚ್ಚಿಸಿ ಅವನ್ನೂ ಆಕರ್ಷಕವಾಗುವಂತೆ ಮಾಡಿ, ಶಿಕ್ಷಕರನ್ನು ಕಲಿಸಲು ಮಾತ್ರ ತೊಡಗಿಸಿ.. ಇನ್ನಿತರ ಕಾರ್ಯಕ್ಕೆ ಹಚ್ಚದೇ…, ಶಾಲೆಗೆ ಪಿಯೂನ್ ಒದಗಿಸಿ ಎಲ್ಲವನ್ನೂ ಮಕ್ಕಳೇ ಮಾಡುವಂಥ ಸ್ಥಿತಿ ಬರದಂತೆ ನೋಡಿಕೊಳ್ಳದ ಸರ್ಕಾರದ ತಪ್ಪೆಂದು ಹೇಳಲೇ? ಸಿರಿವಂತರು ಮಕ್ಕಳೇನು ಮಾಡುತ್ತಿದ್ದಾರೆಂದು ಗಮನಿಸದೇ ಹಣ ಗಳಿಕೆಯಲ್ಲಿ ವ್ಯಸ್ತರಾಗಿ… ಮುದ್ದಿನ ಕಂದಮ್ಮಗಳ ಮುಗ್ಧ ಮನಸುಗಳು, ದುರ್ಮಾರ್ಗದತ್ತ ಎಳೆಯಲು ಕಾರಣವಾಗುತ್ತಿದ್ದಾರೆಂದು ಶ್ರೀಮಂತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇ? ಸದಾ ಓದು ಬರೆ ಎನ್ನುತ್ತಾ ನೈತಿಕ ಮೌಲ್ಯಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದ ಶಿಕ್ಷಕರನ್ನು ಮೂದಲಿಸಲೇ? ದೇವರ ಮೇಲಿನ, ಸ್ವರ್ಗ ನರಕದ ಮೇಲಿನ ನಂಬಿಗೆಗಳನ್ನು ಮೌಢ್ಯವೆಂದು ಹೀಗಳೆದು ಪಾಪದ ಭಯವೇ ಇರದಂತೆ ಮನುಷ್ಯರನ್ನು ನಿರ್ಮಿಸುತ್ತಿರುವ ಹೊಸ ಜೀವನ ಶೈಲಿಯನ್ನು ಬೊಟ್ಟು ಮಾಡಿ ತೋರಿಸಲೇ? ನನ್ನ ಸ್ಥಿತಿಗೆ ಕಾರಣರು ಯಾರು??? ಯಾರ ತಪ್ಪಿಗಾಗಿ ನನಗೆ ವೈತರಣಿ ಶಿಕ್ಷೆ?
