ಗೋಡೆಗಳು

ಡಾ.ಪ್ರೇಮಲತ ಬಿ

ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ –  ಗೋಡೆಗಳು 

ಬೆಳಕಿನ ಕೋಲುಗಳು ಗಾಳಿಯಲ್ಲಿದ್ದ ಧೂಳಿನ ಕಣಗಳಿಗೆ ಚಿನ್ನದ ಬಣ್ಣವನ್ನು ಮೆತ್ತಿ ತೇಲಿಬಿಟ್ಟ ತೆಳು ಮೋಡದ ನಡುವೆ ಹಲ್ಲಿಯೊಂದು ಹಿಂಗಾಲುಗಳನ್ನು ಅಗಲಿಸಿ ಕುಪ್ಪಳಿಸಿ, ಕುಪ್ಪಳಿಸಿ ಇಳಿಯುತ್ತ ಹೋದಂತೆ ಕುಮಾರ ಮರೆಯಾಗಿ ಹೋದ. 

ಕಲ್ಲಿನ ಸುತ್ತಿನ ನಡುವೆ ಮನೆಮಾಡಿಕೊಂಡಿದ್ದ ಕಿರುಜೀವಿ ಗುಬ್ಬಚ್ಚಿಗಳು, ಆ ಕೋಟೆಯಿಂದ ಮೇಲೇರಲಾಗವೋ ಎಂಬಂತೆ ಆಗಾಗ ಸತ್ತು ಬೀಳುತ್ತಿದ್ದವು.  ಕಟ್ಟಿದ್ದ ಪಂಚೆಯನ್ನು ಪಕ್ಕಕ್ಕಿಟ್ಟು , ಪಟಾಪಟಿ ಚಡ್ಡಿಯ ಉದ್ದ ಬಲಿಷ್ಠ ಕಾಲುಗಳನ್ನು  ಅಗಲಕ್ಕೆ ಬಿಡಿಸಿ ಕುಮಾರ  ಬಾವಿಗೆ ಇಳಿಯುತ್ತಿದ್ದ. ಯಶೋದಮ್ಮ ಹಗ್ಗದಿಂದ ಇಳಿಬಿಡುತ್ತಿದ್ದ ಬಕೀಟಿಗೆ ಸತ್ತ ಗುಬ್ಬಿಗಳನ್ನು ಬಾಚಿ ತುಂಬಿ ಮೇಲಕ್ಕೆ ಕಳಿಸುತ್ತಿದ್ದ. ಅಂತಹ ದಿನಗಳಲ್ಲಿ ಮನೆಯಲ್ಲೇ ಸ್ನಾನ ಮಾಡುತ್ತಿದ್ದ. ಗಸ ಗಸ ಎಂದು ಮೈಯುಜ್ಜುವುದು, ಬೆಳ್ಳಗೆ ಹಲ್ಲುಜ್ಜುವುದು, ಗರಿ ಗರಿಯಾದ ಬಟ್ಟೆ ಹಾಕುವುದು ಇತ್ಯಾದಿ ಕುಮಾರನ ದೈಹಿಕ ಅಚ್ಚುಕಟ್ಟುತನ ಎಲ್ಲರಿಗೂ ಇಷ್ಟವಾಗುತ್ತಿದ್ದವು. 

ಅವನು ಹುಟ್ಟಿದ ಊರಿನ ಕೋಟೆಯ ಗೋಡೆಗಳು ಪುಡಿ, ಪುಡಿಯಾಗಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದವು. ಆದಕ್ಕೆಯೋ ಎಂಬಂತೆ, ಅವನ ಹೆಸರಿಗಂಟಿದ ಕೋಟೆಯ ನೆಲದ ಹುಡಿ ಅವನನ್ನು ಆವರಿಸಿ ಬಂಧಿಸುವಲ್ಲಿ ವಿಫಲವಾಗಿತ್ತು. ಅವನ ಪಾದಗಳು ಹೊಸ ನೆಲದ ಮಣ್ಣಿನ ಸ್ಪರ್ಷಕ್ಕೆ ಹಾತೊರೆದು ತನ್ನೂರಿನ ಗಡಿಯನ್ನು ಮೀರಿದ್ದವು.  

ಭೂಮಿ ಸಿಡಿದೆದ್ದು ಸಾಲು ಸಾಲು ಬೆಟ್ಟಗಳಾಗಿ ಕೋಟೆಯಂತೆ ಸುತ್ತುವರೆದಿದ್ದ ಹೊಸ ಊರೊಂದು ಕುಮಾರನನ್ನು ಆಕರ್ಷಿಸಿತ್ತು. ನಡುವಿನ ಬಯಲಿನಲ್ಲಿದ್ದ ಮನೆಯೊಂದರ ಗೋಡೆಗಳ ನಡುವೆ, ಬೆಂಕಿಯ ಜ್ವಾಲೆಯಂತೆ ಉರಿಯಲಾಗದೆ, ತಣ್ಣಗಾಗಿ ತಣಿಯಲಾಗದೆ, ಇದ್ದಲಿನ ನಿಗಿ ನಿಗಿ ಕೆಂಡದ ಶಾಖದಂತೆ ಬಂಧಿಯಾಗಿದ್ದ  ಯಶೋದಮ್ಮನ ಮನೆಯ ಬಾಗಿಲನ್ನು ಕುಮಾರ ತಟ್ಟಿದ್ದ. ಆ ದಿನ ಹೊರಗೆ ʼಧೋʼ ಎಂದು ಮಳೆ ಹುಯ್ಯುತ್ತಿತ್ತು. ಯಶೋದಮ್ಮನ ಮನಸ್ಸು ಒಲೆಯ ಮೇಲಿನ ಎಸರಿನಂತೆಯೇ ಕುದಿಯುತ್ತಿತ್ತು.  ಅದೇ ಸಮಯಕ್ಕೆ ಕಟ, ಕಟನೆಂದು ಮುಂಬಾಗಿಲು ಬಡಿದ ಶಬ್ದ ಕೇಳಿಸಿ ಅವರು ಬಾಗಿಲು ತೆರೆದರು.

“ ಅಯ್ಯೋರು ಕಳಿಸವ್ರೆ, ಕುಮಾರ ಅಂತ “ ಅಂತ ಅವನು ಪರಿಚಯಿಸಿಕೊಂಡಿದ್ದ. 

ತನ್ನ ಅಂಗಡಿಯಿಂದ ಶಿವಪ್ಪ ಆಗಾಗ  ಸಣ್ಣ ಪುಟ್ಟ ಕೆಲಸಗಳನ್ನು ಹೇಳಿ ಹುಡುಗರನ್ನು  ಮನೆಗೆ ಕಳಿಸುತ್ತಿದ್ದ.  ವಯಸ್ಸಾದ ಮೇಲಿನ ಸುಸ್ತು ಗಂಡಸರನ್ನು ನಿಧಾನವಾಗಿಸುವ ವೇಳೆಗೆ, ಉಡಿಯ ತುಂಬಾ ಜೀವರಸ ಹೊತ್ತು ಜಗತ್ತನ್ನೆಲ್ಲ ಗೆಲ್ಲುವ ಹಮ್ಮಿನಲ್ಲಿ ನಗರ ಸೇರಲು  ಹಳ್ಳಿಗಳಿಂದ ಹುಡುಗರ ಪೂರೈಕೆಯಾಗುತ್ತಿತ್ತು. ಹಳ್ಳಿಯ ಗೇಯ್ಮೆ ಮೈಗತ್ತದ, ಶಾಲೆಯ ಪಾಠಕ್ಕೆ ಬಗ್ಗದ ಈ ಪೋಕರಿಗಳು ನಗರದ ಬೆಡಗಿನ ಕನಸುಗಳನ್ನು ತಲೆಗೆ ತುಂಬಿಕೊಂಡು ಆ  ಮಂಡಿಪೇಟೆಯ ಚಲನಶೀಲತೆಗೆ  ತಮ್ಮ ಚೈತನ್ಯತೆಯ ಟಾನಿಕ್ಕನ್ನು ಕುಡಿಸಿ ನಗರದ ವಾಣಿಜ್ಯವನ್ನು ಜೀವಂತವಾಗಿಡುತ್ತಿದ್ದರು. ರಾತ್ರಿ ವೇಳೆಗೆ ಮಂಡಿಪೇಟೆ ವರ್ತಕರ ಸಂಘದ ಸದಸ್ಯರುಗಳು ಏರಿಸಿಕೊಳ್ಳುತ್ತಿದ್ದ ಅಮಲಿನಲ್ಲೂ ಆಗೀಗ  ಪಾಲು ಪಡೆಯುತ್ತಿದ್ದರು.

ಅಡಿಗೆಗೆ ಬೇಕೆಂದು ಬೆಳಿಗ್ಗೆ ಕೇಳಿದ ಸಾಮಗ್ರಿಯನ್ನು ರಾತ್ರಿ ಎಂಟರ ಸಮಯಕ್ಕೆ ಕುಮಾರನ ಮೂಲಕ ಕಳಿಸಿದ್ದ ಗಂಡನ ಮೇಲೆ ಯಶೋದಮ್ಮ ಬ್ರಂಹಾಂಡ ಕೋಪದಲ್ಲಿದ್ದರು. ಅವರ ದುಮುಗುಡುವ ಮುಖವನ್ನು ನೋಡಿದ ಕುಮಾರನಿಗೆ ಪರಿಸ್ಥಿತಿಯ ಅರಿವಾಗಿತ್ತು. 

“ ಲೇಟಾಗೋಯ್ತು ಕಣಕ್ಕ,  ಚರಂಡಿ ಒಡ್ಕೊಂಡು ಅಂಗಡಿ ತುಂಬಾ ಕೊಚ್ಚೆ ತುಂಬ್ಕೊಂಡಿತ್ತಕ್ಕ, ಇಲ್ಲೀಗಂಟ ಗುಡ್ಸಿ, ಒರ್ಸಿ ಮಾಡಿದ್ಮಾಕೆ..ಇಂಗಿಂಗೋಗು..ಮನೆ ಸಿಕ್ತದೆ ಅಂತ ಕಳ್ಸಿದ್ರಕ್ಕಾ” ಅಂದಿದ್ದ. ಯಶೋದಮ್ಮನಿಗೆ ಗಾಬರಿಯಾಯ್ತು.

ಚಳಿಯಲ್ಲಿ ಗಡ ಗಡ ನಡುಗ್ತಾ ಇದ್ದ ಅವನು ಒಂದಿಷ್ಟು ಓದಿಕೊಂಡವನಂತೆ ಕಂಡಿದ್ದ. “ಬಾ ಒಳ್ಗೆ” ಅಂತ ಕರೆದರು. ಕುಮಾರ ಕೊಡೆ ಕೊಡವಿಟ್ಟು, ಅಡಿ ಒಳಗಿಟ್ಟ. ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಕುರುಚಲು ದಾಡಿ ಬೆಳೆದಿದ್ದವನಿಗೆ ಇಪ್ಪತ್ತರ ಆಸುಪಾಸಿರಬೇಕು ಎಂದು ಅವರ ಮನಸ್ಸುಅಂದಾಜಿಸಿತು.

 ಅವನಿಗೆ ಒಂದು ಲೋಟ ಬಿಸಿ ಕಾಫಿ ಮಾಡಿಕೊಟ್ಟು ಕಳವಳದಿಂದ ಕೇಳಿದರು.

“ ಚರಂಡಿಕೊಚ್ಚೆ ಅಂಗ್ಡಿ ಒಳಗೆ ಎಂಗ್ಬಂತು ಕುಮಾರಾ?”

“ಗೊತ್ತಿಲ್ಲ ಕಣಕ್ಕಾ…ಮಳೆ ನೀರು, ಏನೇನು ತಂದಾಕ್ತೋ? ಚರಂಡಿ ಎಲ್ಲ ಕಟ್ಕೊಂಡ್ವು ಅನ್ಸುತ್ತೆ, ಆ ಪ್ರೆಶರ್ಗೆ, ಅಂಗ್ಡೀ ಮೂಲೆಲ್ಲಿರೋ ಹಳೇ ಮೋರಿ ಮುಚ್ಚಳ ಬೋ ಅಂತ ಹಾರೋಯ್ತು… ಕೊಚ್ಚೆ, ಪಚ, ಪಚ ಅಂತ ಅಂಗ್ಡೀ ನೆಲ್ದ ಮೇಲೆ ಹರಿಯೋಕತ್ತು…ಸಾಮಾನೆಲ್ಲ ಮೇಲಿಡೋದ ಅಥ್ವಾ, ಆ ಕೊಚ್ಚೆ ಕಾರಂಜಿ ಬಾಯಿ ಮುಚ್ಚೋದಾ ಒಂದೂ ಗೊತ್ತಾಗ್ದೆ ನಾನೂ, ಅಯ್ನೋರು ಶಾನೆ ಪಡಿಪಾಟ್ಲು ಪಟ್ವಿ ಕಣಕ್ಕಾ” ಅಂತ ಮುಖ ಸಪ್ಪಗೆ ಮಾಡಿಕೊಂಡು ನಕ್ಕಿದ್ದ.  ನಸುಗಂಪು ಬಣ್ಣದ ಮುಖದಲ್ಲಿ ಬೆಳ್ಳಗೆ ಹೊಳೆದ ಅವನ ದಂತ ಪಂಕ್ತಿಗಳು ಯಶೋದಕ್ಕನ ಮನಸ್ಸನ್ನು ಬೆಳಗಿದವು. ಅವರ ಮನಸ್ಸು ಚುರ್ರೆಂದಿತು. ಅವರ ಕೊನೇ ತಮ್ಮ ಇದೇ ವಯಸ್ಸಿನವನಾಗಿದ್ದ.

 ಮಂಡಿಪೇಟೆಗೂ, ಮಳೆಗೂ ಆಗಿ ಬರುತ್ತಿರಲಿಲ್ಲ. ಕೊಚ್ಚೆಯ ರಾಡಿಗಿಂತ ಭಯಾನಕವಾದ್ದನ್ನು ಮಂಡೀಪೇಟೆಯಲ್ಲವರು  ನೋಡಿದ್ದರು. 

ಅವತ್ತು ಕೂಡ ಮಳೆ ಹುಯ್ಯುತ್ತಿತ್ತು. ಆದರೆ, ಇವತ್ತಿನಂತಲ್ಲಅವತ್ತು ಒಂದೇ ರಾತ್ರಿಯಲ್ಲಿ ಕೆರೆ ಕೋಡಿಗೆ ಬಿದ್ದಿತ್ತು. ಹಳ್ಳಗಳು ನದಿಯಂತೆ ಹರಿದಿದ್ದವು.  ದೊಡ್ಡ ಚರಂಡಿಗಳ ಮೇಲಿದ್ದ ಕಲ್ಲುಹಾಸುಗಳು ಕೆಳಗೆ ಹರಿಯುತ್ತಿದ್ದ ನೀರಿನ ರಭಸಕ್ಕೆ ʼ ಧಡ ಧಡಕ್ಕನೆಂದಿದ್ದವು.  ಊರಿನ ಚರಂಡಿಗಳು ಸೊಕ್ಕೇರಿ ರಸ್ತೆಯ ಮೇಲೆ ಹರಿದಿದ್ದವು. ಅವತ್ತು ಊಟ ಕೊಡಲು ಅಂತ ಮಂಡಿಗೆ ಬಂದಿದ್ದ ಯಶೋದಮ್ಮ ಮಳೆಯ ಕಾರಣ ಅಲ್ಲೇ ನಿಂತಿದ್ದರು.

 ರಸ್ತೆಯಲ್ಲಿ ಯಾವ ಜನಸಂಚಾರವೂ ಇರಲಿಲ್ಲ. ವ್ಯಾಪಾರಕ್ಕೆ ಬಂದಿದ್ದ ಜನರು ಅಂಗಡಿಗಳ ಮುಂದಿನ ಮೇಲಾವರಣದ ಕೆಳಗೆ ನಿಂತಿದ್ದರು. ಕಾಲ ಕೆಳಗೆ ಹರಿವ ನೀರಿನ ಮಟ್ಟವನ್ನು ಟೀಕಿಸುತ್ತ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಕುಣಿದಾಡತೊಡಗಿದರು.

 “ಹೋ…ನೋಡಲ್ಲಿ” ಅಂತ ಕೂಗಿದ ದಿಕ್ಕಿನೆಡೆ ಯಶೋದಮ್ಮನೂ ತಿರುಗಿ ನೋಡಿದರು.ನೀರಿನ ನಡುವೆ ಕಪ್ಪಗಿನದೇನೋ ಏರುತ್ತಾ, ಇಳಿಯುತ್ತ ಸಾಗಿ ಬರುತ್ತಿತ್ತು. ನೀರಿನ ಹರಿವಿನ ಗತಿಯನ್ನೂ ಮೀರಿದ ಚಲನೆಯದು. ಅದು ಹತ್ತಿರವಾದಂತೆ  ಅವರ ಕೆಳಬಾಯಿ ಕುತ್ತಿಗೆಗೆ ಬಿದ್ದಿತ್ತು. ಕಣ್ಣ ಗುಡ್ಡೆಗಳು ಭಯದಿಂದ ಉಬ್ಬಿ  ನಿಂತಿದ್ದವು.

ನೂರಾರು  ದೊಡ್ಡ, ದೊಡ್ಡ ಹೆಗ್ಗಣಗಳು, ದಪ್ಪಿಲಿ, ಕಪ್ಪಿಲಿ, ಅಮ್ಮಿಲಿ, ಅಪ್ಪಿಲಿ, ಮರಿ ಇಲಿಗಳ ದಂಡು ದಂಡೇ ರಸ್ತೆಯನ್ನು ತಮ್ಮವಾಗಿಸಿಕೊಂಡು ಓಡುತ್ತಿದ್ದವು.  ಮಂಡಿಪೇಟೆಯ ಹಳ್ಳ ಮತ್ತು ಚರಂಡಿಗಳ ಉದ್ದಕ್ಕೂ ಇದ್ದ ಬಿಲಗಳೆಲ್ಲ ಜಲಾವೃತವಾಗಿ ಅವುಗಳ ಅಸ್ತಿತ್ವಕ್ಕೆ ಕುತ್ತು ಬಂದದ್ದೇ ತಡ, ಅವು ರಸ್ತೆಗೆ ನುಗ್ಗಿ ಪ್ರಾಣ ಉಳಿಸಿಕೊಳ್ಳಲು ಓಡತೊಡಗಿದ್ದವು.  ಅವರ ನಾಲಿಗೆ ಒಣಗಿತ್ತು. 

ಮಂಡಿಯ ದಾಸ್ತಾನಿಗೆ ಬಾಯಿ ಹಾಕುತ್ತಿದ್ದ  ಇಲಿ-ಹೆಗ್ಗಣಗಳು ಅವೇ ಮಂಡಿಗಳ ವರ್ತಕರೆದುರು ಪ್ರತ್ಯಕ್ಷವಾಗಿ ಮೆರವಣಿಗೆಗೆ ಹೊರಟರೂ, ಮಳೆಯಲ್ಲಿ ನೆನೆಯುವೆವೆಂದು ಹೆದರಿದ ವರ್ತಕರು ಸುಮ್ಮನೆ ನಿಂತುಕೊಂಡಿದ್ದನ್ನು ನೋಡಿ ಯಶೋದಮ್ಮನ ಮುಖದಲ್ಲೊಂದು ಕಿರುನಗೆ ಹಾದು ಹೋಗಿತ್ತು. ನಂತರ ಮನಸ್ಸು ಯಾವುದೋ ವಿಚಿತ್ರ ಖುಷಿಗೆ ತಿರುಗಿತ್ತು. 

ಕಂಡ-ಕಂಡವರಿಗೆಲ್ಲ ವರ್ಷಗಳಿಂದ ಇದನ್ನು ಬಣ್ಣಿಸಿ, ಬಣ್ಣಿಸಿ ಹೇಳಿಕೊಂಡು ತಿರುಗುತ್ತಿದ್ದವರಿಗೆ ಈಗ ಕುಮಾರನ ಹೊಸ ಕಿವಿಗಳು ಸಿಕ್ಕಿದ್ದವು. ಕುಮಾರ ಬೆಕ್ಕಸ ಬೆರಗಾಗಿ ಕೇಳಿದ್ದ.  ಅವನ ಮುಗ್ಧ ವಿಸ್ಮಯ ಮತ್ತು ಪೂರ್ಣ ಗಮನದಿಂದ ಇಡೀ ದಿನದ ಜಡತ್ವ ಕಳೆದಂತಾಗಿ ಯಶೋದಮ್ಮನಿಗೆ ಖುಷಿಯಾಗಿತ್ತು. 

“ಯಾವೂರೋ ಕುಮಾರಾ?” ಎಂದು ಕೇಳಿದ್ದರು. ಅವನು ಹೇಳುತ್ತಲೇ ಹೋದ. ಇಬ್ಬರೂ ಒಬ್ಬರನ್ನೊಬ್ಬರು ಆಲಿಸಿದರು. ಖುಷಿಯಿಂದ ಮಾತಾಡಿದರು. ಅವತ್ತು ಕುಮಾರನಿಗೆ ಊಟಕ್ಕಿಟ್ಟೇ ಕಳಿಸಿದರು. ತಡರಾತ್ರಿಯವರೆಗೆ ಗಂಡ ಬರುವುದಿಲ್ಲವೆನ್ನುವುದು ಅವರಿಗೆ ತಿಳಿದಿತ್ತು.

                                                                2

ಹೀಗಿದ್ದ ಕುಮಾರ ಮನೆಗೂ, ಮಂಡಿಗೂ ಓಡಾಡುವುದು ಮುಂದುವರೆಯಿತು. ಎಲ್ಲ ಕೆಲಸಗಳಿಗೂ ಕುಮಾರನ ನೆರವು ದೊರಕತೊಡಗಿತು. 

ಬೇಕೆಂದಾಗ ತೆಂಗಿನ ಕಾಯಿ ಸುಲಿದುಕೊಡುತ್ತಿದ್ದ. ಗಂಟೆಗಟ್ಟಲೆ ಕುಳಿತು, ಬೇಸರವಿಲ್ಲದೆ ಸೀಕಲು ಕಡಲೇಕಾಯಿ ಬೀಜ ಬಿಡಿಸುತ್ತಿದ್ದ.  ತರಕಾರಿ ಹಚ್ಚಿಕೊಡುತ್ತಿದ್ದ. ಮಂಡಿಪೇಟೆಯ ವಿಚಾರಗಳೆನ್ನೆಲ್ಲ ಮನೆಗೆ ತಲುಪಿಸುತ್ತಿದ್ದ.  ಬೆಂಗಳೂರಿನಿಂದ ಆಗೀಗ ಬರುತ್ತಿದ್ದ ಯಶೋದಮ್ಮನ ಮೊಮ್ಮಗನನ್ನು ಎತ್ತಿ ಆಡಿಸುತ್ತಿದ್ದ. 

ಐದು ವರ್ಷದ ಮೊಮ್ಮಗ ಹರ್ಷ, ಜಿಮ್ಮಿ ಎನ್ನುವ ನಾಯಿಯನ್ನು ಸಾಕಿಕೊಂಡಿದ್ದ. ಶಾಲೆಗೆ ರಜಾ ಬಂದಾಗ ಅದನ್ನೂ ಕರೆತರುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಕುಮಾರ ಅವನಿಗೆ ಪರಿಚಿತನಾಗಿದ್ದ.

 ನಿನ್ನ ಹೆಸರೇನು? ನಿನ್ನ ನಿಕ್ ನೇಮ್‌ ಏನು? ಎಂಬ ಹರ್ಷನ ಎರಡೂ ಪ್ರಶ್ನೆಗಳಿಗೆ ಒಂದೇ ಉತ್ತರ ಹೇಳಿದ್ದ. ಹರ್ಷನೇ ʼಜಿಮ್ಮಿʼ ತರ ನಿನ್ನ ʼಕುಮ್ಮಿʼ ಅಂತ ಕರೀತೀನಿ ಎಂದಾಗ ಎಲ್ಲರೂ ನಕ್ಕಿದ್ದರು. ಕುಮಾರನೂ ನಕ್ಕಿದ್ದ.

ಬೆಳಿಗ್ಗೆ ತಿಂಡಿತಿಂದು ಹೋದರೆ ರಾತ್ರಿಯ ಊಟಕ್ಕೆ ಬರುತ್ತಿದ್ದ, ಆಗಾಗ ಅದನ್ನೂ ತಪ್ಪಿಸಿಕೊಂಡು ಮೌನವಾಗಿ ಮಲಗುತ್ತಿದ್ದ ಗಂಡನಿಂದ ಅರೆಸತ್ತಿದ್ದ ಯಶೋದಮ್ಮ ಒಂದು ಲೆಕ್ಕಕ್ಕೆ ತಾವೊಬ್ಬರೇ ಮನೆ ನಡೆಸುತ್ತಿದ್ದರು. ಅದಕ್ಕೀಗ ಕುಮಾರನ ಸಹಾಯ ಸಿಕ್ಕಿತ್ತು.

ಅತ್ತ ಕಡೆ ಶಿವಪ್ಪನಿಗೂ ಕುಮಾರ ಬಲಗೈಯಾದ. ಅವರಿವರಿಂದ ಬರಬೇಕಾದ ಸಾಲ ವಸೂಲಿಗೆ ಹೋಗಿ ಬರತೊಡಗಿದ. ಮಂಡಿಯ ಈರುಳ್ಳಿ ಕೊಳ್ಳಲು ಹೊಸ ಗಿರಾಕಿಗಳನ್ನುಫುಸಲಾಯಿಸುತ್ತಿದ್ದ, ರೈತರ ಫಸಲನ್ನು ಕುದುರಿಸುತ್ತಿದ್ದ. ಅವರ ನೆಂಟರಿಗೆಲ್ಲ ಪರಿಚಯದವನಾಗಿ ಓಡಾಡತೊಡಗಿದ. ಪಿ.ಯು.ಸಿ ಫೇಲಾಗಿದ್ದ ಕುಮಾರ, ವರ್ಷ ಕಳೆಯುವಲ್ಲಿ ಯಾವುದೋ ಜೀವವಿಮಾ ಕಂಪನಿಯ ಏಜೆಂಟನಾಗಿಯೂ ಕೆಲಸಮಾಡತೊಡಗಿದ. ಬಿಡುವಿನಲ್ಲಿ ಮಂಡಿಪೇಟೆಯ ವರ್ತಕರಿಗೆಲ್ಲ ವಿಮೆ ಮಾಡಿಸಲು ಓಡಾಡುತ್ತಿದ್ದ. ಅವರ ಕಂತುಗಳನ್ನು ಅವನೇ ಕಟ್ಟಿ ರಸೀದಿ ತಂದುಕೊಡುತ್ತಿದ್ದ.

ಅವನ  ಈ ಗಳಿಕೆ ಶಿವಪ್ಪ ಕೊಡುತ್ತಿದ್ದ ಸಂಬಳಕ್ಕಿಂತ ಹೆಚ್ಚಾದಾಗ  ಅದುವರೆಗೂ ಇಲ್ಲದಿದ್ದ ಹುದ್ದೆಯೊಂದು ಕುಮಾರನಿಗಾಗಿ ತಯಾರಿಯಾಯಿತು. ಅವನೀಗ ಈರುಳ್ಳಿ ಮಂಡಿಯ ಮ್ಯಾನೇಜರ್‌  ಆಗಿಹೋದ. ಅವನು ಚುರುಕಾಗಿ ಕೆಲಸ ಮಾಡತೊಡಗಿದ ಮೇಲೆ ಲಾಭವೂ ಅಧಿಕವಾಗಿತ್ತು. ಮೊದಲ ಬಾರಿಗೆ ಶಿವಪ್ಪ ಬಹುತೇಕ ಸಮಯ ಗಲ್ಲಾದ ಮೇಲೆ  ಆಸೀನರಾಗಲು ಸಾಧ್ಯವಾಗಿತ್ತು. ಮಗಳು ಹರಿಣಿಯ ಮದುವೆಯಲ್ಲು ಕುಮಾರ  ಜವಾಬ್ದಾರಿಯುತ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ.

ಅವನ ಸಾಮರ್ಥ್ಯಕ್ಕೆ ತಕ್ಕ ಹಾಗೆ, ಕುಮಾರನ ವೇಷ-ಭೂಷಣಗಳು ಕ್ರಮೇಣ ಬದಲಾದವು.ಮಾತುಗಳು ಪೇಟೆಯ ನಾಜೂಕಿಗೆ ಒಗ್ಗಿಕೊಂಡಿದ್ದವು. ಸೈಕಲ್ಲಿನ ಬದಲಿಗೆ ಒಂದು ಮೋಪೆಡ್‌ ಗಾಡಿ ಕೊಂಡಿದ್ದ. ಆದರೆ, ಕುಮಾರನ ನಿಯತ್ತು ಹಾಗೇ ಉಳಿದಿತ್ತು. ತನ್ನ ದುಡಿಮೆಯಲ್ಲಿ ಆಗೀಗ ಏನೇನೋ ಕೊಂಡು ತಂದು ಅಚ್ಚರಿ ಪಡಿಸುತ್ತಿದ್ದ.ಅವನು ಮೆಸ್ಸಿನಲ್ಲಿ ಊಟಮಾಡಬಾರದೆಂದು ಯಶೋದಮ್ಮನೇ ಅವನಿಗೆ ಸಾರನ್ನು ಕೊಡುವುದು ಅಭ್ಯಾಸವಾಗಿತ್ತು. 

ಚಡಪಡಿಕೆಯ ವಾಚಾಳಿ ಯಶೋದಮ್ಮನಿಗೂ, ಆಗೀಗ ಮಾತು ತುಳುಕಿಸುವ ಮೌನಿ ಶಿವಪ್ಪನಿಗೂ  ಕುಮಾರ ಒಂದೇ ರೀತಿಯಲ್ಲಿ ಹೊಂದಿಕೊಂಡದ್ದ. ಅಲ್ಲದೆ ಎಲ್ಲರ ವಯಕ್ತಿಕ ಗುಟ್ಟುಗಳನ್ನೂ ತನ್ನಲ್ಲೇ ಅಡಗಿಸಿಟ್ಟುಕೊಂಡಿದ್ದ

ಅಂತಹ ದಿನಗಳಲ್ಲಿಯೆ ಶಿವಪ್ಪನ ಮನೆಯಲ್ಲಿ ಆಗಬಾರದ್ದು ಆಗಿಹೋಯಿತು! 

                                                              3

ಭಯದ ಬಳ್ಳಿಯೊಂದು ಅವರ ಕಶೇರುಕ ಮಣಿಗಳನ್ನು ಗಲಗಲನೆಂದು ಅಲುಗಿಸಿದಂತೆ ಯಶೋದಮ್ಮ ಒಮ್ಮೆ ನಡುಗಿದರು.  ಇದಕ್ಕೆಲ್ಲ ಮೂಲ ಕಾರಣವಾದ ಗಂಡನ ಕಡೆಗೆ ಅಸಹನೀಯ ಅಸಹ್ಯದಿಂದ  ನೋಡಿದರು. ಹೆಂಡತಿಯ ನೋಟದಲ್ಲಿದ್ದ ತಿರಸ್ಕಾರದ ತಿವಿತವನ್ನು ಶಿವಪ್ಪ ಮೌನವಾಗಿ ನುಂಗಿ ತಲೆತಗ್ಗಿಸಿದ.

ಮೌನಕ್ಕೆ ಇರುವ ನೂರು ಅರ್ಥಗಳನ್ನು ಮಾತುಗಳಲ್ಲಿ ಹೇಳುವುದು ಸುಲಭವಲ್ಲ. ಆದರೆ. ಮೂವತೈದು ವರ್ಷಗಳ ದಾಂಪತ್ಯದ ತರಗತಿಯಲ್ಲಿ ಗಂಡನ ಮೌನವನ್ನು ಆಯಾ ಸಂದರ್ಭಕ್ಕನುಗುಣವಾಗಿ ಇಂತಿಷ್ಟೇ ಎಂದು ಯಶೋದಮ್ಮ ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು.  ಆಶ್ಚರ್ಯ, ಕೋಪ, ದುಃಖದ ಜೊತೆ, ಎಂಥದ್ದೋ ಬಿಡುಗಡೆ ದೊರೆದಂತೆ  ಕುಳಿತಿದ್ದ ಶಿವಪ್ಪನ ಬಗ್ಗೆ ಅವರಿಗೆ ಅಂದು ವಿಚಿತ್ರ ಸೋಜಿಗವಾಯಿತು. ಅರೆಕ್ಷಣ ತಮ್ಮದೇ  ಮನಸ್ಸಿನ ಭಾವನೆಗಳನ್ನು ಕನ್ನಡಿಯಲ್ಲಿ ಕಂಡಂತೆ ಅವರು ಚಡಪಡಿಸುತ್ತ ಬಿಕ್ಕಳಿಸಿ ಅಳತೊಡಗಿದರು. ಹರಿಣಿ ಒಂದು ಮಾತೂ ಆಡದೆ ಮೌನವಾಗಿ ಅಮ್ಮನ ಮೈದಡವತೊಡಗಿದಳು. ಕೈಲಿದ್ದ ಚೀಟಿಯೊಂದು ಛಿದ್ರಗೊಂಡು ಅವಳ ಬಿಗಿ ಮುಷ್ಟಿಯಲ್ಲಿ ನಲುಗುತ್ತಿತ್ತು.

 “ಅಕ್ಕಾ…ಅಳ್ಬೇಡಕ್ಕಾ…ಹೋಗ್ಲಿ ಬಿಡಕ್ಕಾ” ಎಂದು ಅವರ ದುಃಖಗಳನ್ನೆಲ್ಲ ಕೇಳುತ್ತ ಸಮಾಧಾನ ಹೇಳುತ್ತಿದ್ದ ಕುಮಾರ ವಾರದಿಂದ ಯಾರ ಕೈಗೂ ಸಿಗದಂತೆ ಮಾಯವಾಗಿದ್ದ.  ಅಪರಿಚಿತ ವ್ಯಕ್ತಿಯೊಬ್ಬ  ಮನೆ ಮಂದಿಯ ಗುಟ್ಟುಗಳ ಗೋಡೆಗಳನ್ನೇ ಅವರಿಗೆ ಜೈಲಾಗಿಸಿ ಇದ್ದಕ್ಕಿದ್ದಂತೆ ಮಾಯವಾಗಿದ್ದ. ಪೋಲೀಸರವರೆಗೆ ಮುಂದುವರೆಯಲು ಯಾರೂ ಸಿದ್ಧರಿರಲಿಲ್ಲ.

                                                           2

ಮನಸ್ಸುಗಳಿಗೆ ಹಲವು ಮಾರ್ಗಗಳಿರುತ್ತವೆ. ತೆರೆಯಲಾಗದ ಕವಾಟಗಳು ಮುಚ್ಚಿದೆಡೆ  ಮನಸ್ಸಿನ ಚೈತನ್ಯದ ಬೆಳಕು ಸದ್ದೇ ಇಲ್ಲದೆ ತಿರುವು ತೆಗೆದುಕೊಳ್ಳುತ್ತದೆ. 

ಈರುಳ್ಳಿ ಮಂಡಿಯ ವಾಸನೆಯಲ್ಲೇ ಹಣದ ವಾಸನೆಯೂ ಸೇರಿಕೊಂಡು ಸುಖ ಕೊಡುತ್ತಿದ್ದುದು ಶಿವಪ್ಪನಿಗೆ ಮಾತ್ರ. ಎಲ್ಲ ತರಕಾರಿಗಳನ್ನು ತಿಂದರೂ ಈರುಳ್ಳಿಯನ್ನು ಮಾತ್ರ ತಿನ್ನದಿದ್ದ ಮಹಿಳೆ ಶಿವಪ್ಪನಿಗೆ ಮಡದಿಯಾಗಿ ಬಂದದ್ದು ವಿಪರ್ಯಾಸವೇ ಇರಬಹುದು. ಆದರೆ, ಗಂಡನ ಮೈಗಂಟಿದ್ದ ಈರುಳ್ಳಿಯ ವಾಸನೆಯ ಜೊತೆ ನಿಯಮಿತವಾಗಿ ಬರುತ್ತಿದ್ದ  ಹೆಂಡದ ವಾಸನೆ ಅವರಿಗೆ ವಾಕರಿಕೆ ತರಿಸುತ್ತಿತ್ತು. ಆಗಾಗ ಮಿಳಿತವಾಗುತ್ತಿದ್ದ ಮಲ್ಲಿಗೆಯ ಘಮದ ವಾಸನೆ ಯಶೋದಮ್ಮನನ್ನು ಮತ್ತಷ್ಟು ಮುದುಡುವಂತೆ ಮಾಡಿತ್ತು 

ಮಗಳು ಹುಟ್ಟಿದ ಕೂಡಲೆ ಮುಖ ತಿರುಗಿಸಿಕೊಂಡು ಸದಾ ಮನೆಯ ಮತ್ತು ಮಗಳ ಕೆಲಸಗಳಲ್ಲಿ ಮಗ್ನಳಾಗಿ ಹೋದ ಮಡದಿಯನ್ನು ಶಿವಪ್ಪ ಮರುಕದಿಂದ ನೋಡಿದ್ದ. ಆ ಮೌನ ನೋಟದಲ್ಲಿದ್ದ  “ನಾನು ಮುಟ್ಟದಿದ್ದರೆ ನಿನಗೇ ಪೂರ್ತಿ ನಷ್ಟ” ಎನ್ನುವಂತಹ ಅವಹೇಳನಕಾರಿ ಮರುಕ ಯಶೋದಮ್ಮನನ್ನು ಹಠಮಾರಿಯಾಗಿಸಿತ್ತು. ಹೆಣ್ಣಿಗೆ ಬಯಕೆಗಳಿರುವುದೇ ತಪ್ಪು ಎನ್ನುವ, ಹೆಂಡತಿ ಸರಿಯಿಲ್ಲದ್ದಕ್ಕೇ ಗಂಡ ತಪ್ಪು ಮಾಡುತ್ತಾನೆಂದು ತಾರತಮ್ಯ ಮಾಡುವ ಸಮಾಜದ ಎದುರು ಯಶೋದಮ್ಮ ಅಸಹಾಯಕಿಯಾಗಿದ್ದರು. 

ಮಾತು ಮಾತಿಗೆ ಸಿಡುಕುತ್ತಿದ್ದ ಹೆಂಡತಿಯ ಎದುರು ಶಿವಪ್ಪ ತನ್ನ ಮೌನದ ಆಚರಣೆಯನ್ನು ವಿಸ್ತರಿಸಿದ್ದ. ನಡುವೆ ಬೆಳೆಯುತ್ತಿದ್ದ ಮಗಳ ಮದುವೆಯವರೆಗೆ ತ್ಯಾಗ, ತ್ಯಾಗ ಮತ್ತು ಸಿಡಿಮಿಡಿಗಳಲ್ಲಿ  ನಾಶವಾಗುತ್ತಿದ್ದ ಯಶೋದಮ್ಮನ ಎಲ್ಲ ಸಂವೇದನೆಗಳು ಪಾರಿಜಾತದಂತೆ ಪ್ರತಿಸಂಜೆ ಅರಳಿ, ಬೆಳಗಿನ ಬೆಳಕಿಗೆ ದ್ವಂಸವಾಗಿ ಹೋಗುತ್ತಿದ್ದವು. ಸಂಸಾರದ ಗುಟ್ಟುಗಳು ಅವರ ಹೊಟ್ಟೆಯನ್ನು ಸೇರಿದ ವಿಷದಂತೆ ಅವರನ್ನು ಇಷ್ಟಿಷ್ಟೇ  ಆಪೋಶನ ತೆಗೆದುಕೊಳ್ಳುತ್ತಿದ್ದವು.  ನಶೆಯಲ್ಲೋ ಅಥವಾ ಮೈಗಂಟಿಸಿಕೊಂಡು ಬರುತ್ತಿದ್ದ ಹೆಂಗಸಿನ ವಾಸನೆಯ ದಿನಗಳಲ್ಲೋ ಶಿವಪ್ಪ ಮತ್ತಷ್ಟು ತೆಪ್ಪಗಿರುತ್ತಿದ್ದ. 

ಆಗೆಲ್ಲ ಯಶೋದಮ್ಮನ ಚಡಪಡಿಕೆಯ ಕೈಗಳಲ್ಲಿ ಶಿವಪ್ಪನ  ಜೇಬಿನ ಸಾವಿರಾರು ರೂಪಾಯಿಗಳು ಮಾಯವಾಗುತ್ತಿದ್ದವು. ಯಶೋದಮ್ಮ ಬೇಕಾದಂತೆ ಖರ್ಚು ಮಾಡುತ್ತಿದ್ದರು.  ಆಗೆಲ್ಲ  ಅವರ ಮನಸ್ಸಿಗೆ ಎಲ್ಲಿಯೋ ಒಂದಿಷ್ಟು ತೃಪ್ತಿ ಸಿಗುತ್ತಿತ್ತು. ಹೀಗೆ ಗೌಪ್ಯವಾಗಿ ಎತ್ತಿಟ್ಟಿದ್ದ ಎಂಟು ಲಕ್ಷಗಳಷ್ಟು ದುಡ್ಡಿನ ಕಂತೆಯನ್ನು ಬಚ್ಚಿಡುವುದು ಅವರಿಗೆ ಕಷ್ಟವಾಗತೊಡಗಿತ್ತು. ಬಂಗಾರ ಕೊಳ್ಳಲು ಒಬ್ಬಳೇ ಅಂಗಡಿಗೆ ಹೋದರೆ, ಅದು ವರ್ತಕರ ಕ್ಲಬ್ಬಿನ  ಮೂಲಕವೋ, ಮತ್ತೊಂದು ರೀತಿಯೋ ಗಂಡನಿಗೆ ತಿಳಿಯಬಹುದೆಂಬ ಭಯವೂ ಇತ್ತು. ಈ ಬಾರಿ ಹರಿಣಿ ಬಂದಾಗ, ಯಶೋದಮ್ಮ ಅವಳೊಡನೆ ಬಂಗಾರದ ಅಂಗಡಿಗೆ ಹೋಗಿ, ನಾಲ್ಕು ಬಳೆ ಮಾಡಿಸಲು ಹಾಕಿ, ಎರಡು ಲಕ್ಷ ಮುಂಗಡ ಕೊಟ್ಟು ಬಂದಿದ್ದರು. ಮಗಳಿಗೆ ಯಾವು ಯಾವುದೋ ಸಂಪ್ರದಾಯ ಮಾಡಬೇಕೆಂದು ಗಟ್ಟಿಸಿ ಕೇಳಿ, ಮಗಳಿಗೂ ಹಣ ಕೊಡಿಸುತ್ತಲೇ ಇದ್ದರು.  ಒಮ್ಮೊಮ್ಮೆ ಅಮ್ಮನೂ -ಮಗಳೂ ಒತ್ತೊಟ್ಟಿಗೆ ಕಿಸಕ್ಕನೆ ನಕ್ಕಾಗ ಶಿವಪ್ಪನಿಗೆ ಅವರು ಯಾವುದೋ ರೀತಿಯಲ್ಲಿ ತನ್ನನ್ನು ಆಡಿಕೊಂಡು ನಗುತ್ತಿರಬಹುದೇ ಎಂದೆಲ್ಲ ಅನುಮಾನವಾಗತೊಡಗಿತ್ತು.

ಮಗಳು ಬಂದಾಗಲೆಲ್ಲ ಹೆಂಡತಿ ಇನ್ನಷ್ಟು ಜೋರಾಗುತ್ತಿದ್ದುದು ಗಮನಕ್ಕೆ ಬಂದಿತ್ತು. ಗಂಡು ಮೊಮ್ಮಗನನ್ನು ಮನೆಗೆ ಕರೆತರುತ್ತಿದ್ದ ಮಗಳ ಮುಂದೆ ಶಿವಪ್ಪ ಮತ್ತಷ್ಟು ಬಲಹೀನನಾಗುತ್ತಿದ್ದ. ಹರ್ಷನ ಐದನೇ ಹುಟ್ಟು ಹಬ್ಬಕ್ಕೆ ಹತ್ತು ತೊಲದ ಬಂಗಾರದ  ಚೈನನ್ನು ಮಾಡಿಸಿಕೊಟ್ಟಿದ್ದರು.  ತೊಡೆ ಹತ್ತಿ ಕುಳಿತು ನೇರವಾಗಿ ಜೇಬಿಗೇ ಕೈ ಹಾಕಿ ದುಡ್ಡನ್ನು ಎತ್ತುತ್ತಿದ್ದ ಮೊಮ್ಮಗ, ಕುಮ್ಮಿಯೊಡನೆ ಹೋಗಿ ಏನೇನೋ ಕೊಡಿಸಿಕೊಂಡು ಬರುತ್ತಿದ್ದ.

ಶಿವಪ್ಪ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದ. ಮನೆಯಲ್ಲಿ ಮಾಯುವಾಗುತ್ತಿದ್ದ ಹಣದ ಕಂತೆಗಳ ಬಗ್ಗೆ ಯಶೋದಮ್ಮನನ್ನು ಕೇಳಿದರೆ ಸುರಿಯುವ ಬೈಗುಳಗಳ ಮಳೆಗೆ ಹೆದರಿ ಗೊತ್ತೇ ಇಲ್ಲದಂತೆ ಸುಮ್ಮನಿರುತ್ತಿದ್ದ.  ಭಯಾನಕ ರಾದ್ದಾಂತ ಮಾಡಿ ಮಗಳನ್ನು ತನ್ನಿಷ್ಟದ್ದೇ ಗಂಡಿಗೆ ಮದುವೆ ಮಾಡಿಕೊಟ್ಟಿದ್ದರಿಂದ ಮಗಳು ಮುಂದಿದ್ದಾಗೆಲ್ಲ ಸಭ್ಯಸ್ಥನಂತೆ ನಟಿಸುತ್ತಿದ್ದ.  

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಹಳೆಪ್ರೇಯಸಿಯರ ಮೇಲೆ ಅವನು  ಹಣ ಖರ್ಚು ಮಾಡುವುದು ನಡೆದೇ ಇತ್ತು. ವಯಸ್ಸಾಗುತ್ತಿದ್ದ ಅಭದ್ರತೆಯಿಂದಾಗಿ ಇತ್ತೀಚೆಗೆ ಸಣ್ಣ  ಒಡವೆಗಳನ್ನ ಕೊಡಿಸಲು ಶುರುಮಾಡಿದ್ದ. ಅದಕ್ಕೆಲ್ಲ ಕುಮಾರ ಗುಟ್ಟಾಗಿ ಸಹಾಯ ಮಾಡುತ್ತಿದ್ದ. 

ತವರೂರಿಗೆ ಬಂದಾಗಲೆಲ್ಲ ಹರಿಣಿ ನೋಡಬಯಸುವ ಮತ್ತೊಂದು ಜೀವವಿತ್ತು.  ಹಳೆಯ ಪ್ರೇಮಿ  ಸಂಕೇತ್‌ ನನ್ನು ಭೇಟಿಯಾಗಲು ಕುಮಾರ ಅವಳಿಗೆ ನಾಲ್ಕು ವರ್ಷಗಳಿಂದ ಸಹಾಯ ಮಾಡುತ್ತಿದ್ದ. ಶಿವಪ್ಪನನ್ನು ವಿರೋಧಿಸಿ ಬೇರೆ ಜಾತಿಯ ಸಂಕೇತನ ಜೊತೆ ಮದುವೆಯಾಗುವುದು ಹರಿಣಿಗೆ ಸಾಧ್ಯವಿರಲಿಲ್ಲ. ಮದುವೆಗೆ ಮುನ್ನವೇ ಅವರು ಓಡಿಹೋಗಲು  ಕುಮಾರ ವ್ಯವಸ್ಥೆ ಕಲ್ಪಿಸಿದರೂ ಅದು ನಡೆದಿರಲಿಲ್ಲ.  ಅವಳು ಸಂಕೇತನನ್ನು ಭೇಟಿಯಾಗುತ್ತಿದ್ದುದನ್ನು ಕುಮಾರ ಎಲ್ಲರಿಂದ ಸಂಪೂರ್ಣ ರಹಸ್ಯವಾಗಿಟ್ಟಿದ್ದ. ಸರಿ ಸುಮಾರು ಸಂಕೇತನ ವಯಸ್ಸಿನವನೇ ಆದ ಕುಮಾರನ ಸಹಾಯವನ್ನು ಹರಿಣಿ ಮರೆತಿರಲಿಲ್ಲ. 

ಅಷ್ಟೂ ಜನಕ್ಕೆ ಬೇಕಾಗಿದ್ದ ಕುಮಾರನನ್ನು ಕಂಡರೆ ಜಿಮ್ಮಿಗೆ ಮಾತ್ರ ಆಗುತ್ತಿರಲಿಲ್ಲ.  ಅದೆಷ್ಟೇ ಬ್ರೆಡ್ಡು, ಬನ್ನುಗಳನ್ನು ತಿನ್ನಿಸಿದರೂ ಕುಮಾರನನ್ನು ಕಂಡಾಗ ಮಾತ್ರ ಅದು  ಪ್ರತಿ ಬಾರಿ “ ಗುರ್ರ್…”ಎನ್ನುವುದನ್ನು ಬಿಟ್ಟಿರಲಿಲ್ಲ. 

“ಅಲ್ಲ ನಾಲ್ಕು ವರ್ಷದ ಪರಿಚಯ, ಆದ್ರೆ ಜಿಮ್ಮಿಗೆ  ಮಾತ್ರ ಕುಮ್ಮಿಯನ್ನು ಕಂಡರೆ ಆಗಲ್ಲ..” ಅಂತ ಹರಿಣಿ ಅಂದಾಗ ಆ ರಾತ್ರಿ ಎಲ್ಲರೂ ನಕ್ಕಿದ್ದರು. ಕುಮಾರ ಮಾತ್ರ ನಗದೆ ಸುಮ್ಮನೆ ಕುಳಿತಿದ್ದ. ಎಲ್ಲರು ತಟಕ್ಕನೆ ಸುಮ್ಮನಾಗಿದ್ದರು.

                                                               5

ಅಯ್ನೋರಿಗೆ ಗೊತ್ತಾಗದ ಹಾಗೆ ಹಣಕೊಟ್ಟು ಒಡವೆ ಬಿಡಿಸಿಕೊಂಡು ಬಾ ಅಂತ ಯಶೋದಮ್ಮ ಆರು ಲಕ್ಷ ಕೈಗಿಟ್ಟಿದ್ದರು. ಒಡವೆ ತರಲು ಹೊರಟ ಕುಮಾರನ ಜೊತೆಗೆ ಹರ್ಷನೂ ಹೋಗಿದ್ದ. ಚೀಟಿಯ ಸಮೇತ ಬಂದು ಹಣನೀಡಿದ ಕುಮಾರನಿಗೆ ಅಂಗಡಿಯವರು ಬಳೆಗಳನ್ನು ಕೊಟ್ಟಿದ್ದರು. 

ಕುಮ್ಮಿಯೇ ವಾಪಾಸ್‌ ಬಿಟ್ಟ ಎಂದು ಹಿಂತಿರುಗಿದ ಹರ್ಷ ಅಮ್ಮನ ಕೈಗೆ ಚೀಟಿಯೊಂದನ್ನು ಕೊಟ್ಟಿದ್ದ. “ಪೋಲೀಸರಿಗೆ ದೂರು ಕೊಟ್ಟರೆ ಸಂಕೇತನ ಭೇಟಿಯ ಫೋಟೋಗಳನ್ನು ನಿನ್ನ ಗಂಡ ಮತ್ತು ತಂದೆ-ತಾಯಿಗೆ ತಲುಪಿಸುತ್ತೇನೆ” ಎನ್ನುವ ಆ ಬರಹ ಓದಿದ ಹರಿಣಿ ಮಂಕಾಗಿ ಕೂತಿದ್ದಳು. ಹರ್ಷನ ಕೊರಳಿನಲ್ಲಿದ್ದ ಹತ್ತು ತೊಲದ ಚೈನು ಕಾಣೆಯಾಗಿತ್ತು. ಯಶೋದಮ್ಮ ಕೇಳಿದಾಗ ಮಗನ ಚೈನು ತನ್ನ ಬಳಿಯೇ ಇದೆ ಎಂದು ಹರಿಣಿ ವಾದಿಸಿದ್ದಳು.

 ಬಳೆಗಳು, ಚೈನು, ರೈತರಿಗೆ ಮುಂಗಡ ಕೊಡಲು ಶಿವಪ್ಪ ನೀಡಿದ್ದ ಐದು ಲಕ್ಷ ದುಡ್ಡು, ಬಿಡಿಸಿ ತಂದಿದ್ದ ಶಿವಪ್ಪನ ಪ್ರೇಯಸಿಯ ಓಲೆಗಳ ಜೊತೆಗೆ ಕುಮಾರ ಕಣ್ಮರೆಯಾಗಿಹೋಗಿದ್ದ. ಮನೆಯೊಂದರ ಮನುಷ್ಯರ ನಡುವಿನ ಗೋಡೆಗಳು ಮಾತ್ರ ಭದ್ರವಾಗಿದ್ದವು.

Leave a Comment

Your email address will not be published. Required fields are marked *

Scroll to Top