D S Ramaswamy
ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ – “ಕತೆಯೆಂಬ ಚಿಟ್ಟೆಯ ಬೆನ್ನು ಹತ್ತಿ”
ವಿಶೇಷಾಂಕಕ್ಕೆ ಕತೆ ಕಳಿಸಿಕೊಡಿರೆಂಬ ಸಂಪಾದಕರ ಪತ್ರ ಬಂದು ತಿಂಗಳು ಕಳೆದಿದೆ. ಡೆಡ್ ಲೈನ್ ಸಮೀಪಿಸ್ತಿದೆ ಅಂತ ಮೆಸೇಜೂ ಬಂದಿದೆ. ಇಂಥ ದೊಡ್ಡ ಊರಲ್ಲಿ ಸ್ವಂತಕ್ಕೆಂದು ಅರಮನೆಯಂಥ ಮನೆ ಕಟ್ಟಿ ಐಫೋನ್ ಹಿಡಿದು ಸದಾ ಕಾರಲ್ಲೇ ಸುತ್ತುವ ಇವನು ತನ್ನೆಲ್ಲ ಮಿತಿಯಾಚೆಗೂ ಕೈ ಚಾಚಬಲ್ಲವನು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅಂಟಿ ಕೊಂಡಿರುವ ಕತೆ ಬರೆಯುವ ಚಟ ಇವನ ಜೀವಕ್ಕೊಬ್ಬ ಗೆಳತಿಯನ್ನೂ, ಹೆರುವಂಥದೇ ಕಷ್ಟದ ಬರಹದ ತೀವ್ರತೆಯನ್ನೂ ಇವನಿಗೆ ಕೊಟ್ಟಿದೆ. ಸದ್ಯ ಅಂತರಾಷ್ಟ್ರೀಯ ಔಷಧ ಕಂಪನಿಯೊಂದರ ಸೇಲ್ಸ್ ಮೇನೇಜರನಾಗಿದ್ದರೂ ತನ್ನ ಓಡಾಟಗಳ ನಡುವೆ ಕಂಡ ಸತ್ಯದ ಅನುಭವಗಳನ್ನೇ ಕತೆಯಾಗಿಸುವ ಅವನ ಶೈಲಿ ಲೋಕಪ್ರಿಯ. ಹಾಗಾಗಿ ವಿಶೇಷ ಸಂಚಿಕೆಗಳ ಕತೆಗಳಿಗಾಗಿ ಇವನಿಗೆ ಆಹ್ವಾನ ಮಾಮೂಲು.
ಸಂಪಾದಕರು ಕೊಟ್ಟಿದ್ದ ಸಮಯ ಮೀರುತ್ತ ಬಂದಿದ್ದರೂ ಇನ್ನೂ ಕತೆಗೊಂದು ವಸ್ತು ಸಿಕ್ಕದೇ ಏಕೋ ಅವನೊಳಗೇ ಅಳುಕು. ತನ್ನೆಲ್ಲ ಕ್ರಿಯಾಶೀಲತೆಯೂ ಈ ಬ್ಯುಸಿನೆಸ್ಸು, ಪಾರ್ಟಿ, ಟೂರುಗಳಲ್ಲೇ ಕಳೆದುಹೋಗುತ್ತಿದೆ ಎನ್ನಿಸಿದಾಗೆಲ್ಲ ಕೆಲಸಕ್ಕೆ ರಾಜೀನಾಮೆ ಗೀಚಿ, ತನ್ನಿಷ್ಟದಂತೆ ಬದುಕಲಾಗದ ಅಸಹಾಯಕತೆಗೆ ಒಗ್ಗಿ ಹೋಗಿದ್ದಾನೆ. ಹೆಂಡತಿಯ ಜೊತೆ ಸಣ್ಣಾತಿಸಣ್ಣ ವಿಷಯಗಳಿಗೆ ಜಗಳಾಡುವಾಗ ತನ್ನ ಅಪ್ಪನಿಗೆ ಇದ್ದ ಹಟಮಾರಿತನ,ಸ್ವಾತಂತ್ರ ಪ್ರಿಯತೆ,ಸ್ವಾಭಿಮಾನಗಳನ್ನು ಬೇಕೆಂತಲೇ ನೆನೆದು ಅವಳಿಂದಾಗಿಯೇ ಅಪ್ಪನ ಆ ಎಲ್ಲ ಗುಣಗಳೂ ತನ್ನಲ್ಲಿಲ್ಲವಾಯ್ತೆಂದು ವೃಥಾ ಆರೋಪ ಮಾಡಲು ಹೋಗಿ ಸೋಲುತ್ತಾನೆ. ಬದುಕಿನ, ಸ್ಟೇಟಸ್ಸಿನ ಕುರುಹಾಗಿ ಕಟ್ಟಿಕೊಂಡ ಹೆಂಡತಿಗಾಗಿ, ಮನೆಗಾಗಿ ಮಾಡಬೇಕಾದುದೆದೆಲ್ಲವನ್ನೂ ಮಾಡಿ, ಕೊನೆಗೆ ಹೆಂಡತಿಯನ್ನು, ಅವಳು ಮೆಚ್ಚುವ ಸಾಮಾಜಿಕ ಪ್ರತಿಷ್ಠೆಯನ್ನೂ ಶುದ್ಧ ಭೋಳೇತನವೆಂದೋ, ಅಥವ ತನ್ನೆಲ್ಲ ಕ್ರಿಯಾಶೀಲತೆಗೂ ಅಂಟಿದ ಅನಿಷ್ಟವೆಂದೋ ಜರಿದು, ತನ್ನೊಳಗೇ ಸಾಯುತ್ತಿರುವ ಕ್ರಿಯಾಶೀಲತೆಗೆ ಬೆಚ್ಚನೆಯ ಉಸಿರು ನೀಡುವ ಪ್ರಯತ್ನದಲ್ಲಿ ಮತ್ತೆ ಮತ್ತೆ ಸೋಲುತ್ತಾನೆ.
‘ಇಲ್ಲ ಇವತ್ತು ಬರೆದು ಮುಗಿಸಲೇಬೇಕು’ ಎಂಬ ನಿರ್ಧಾರದಲ್ಲಿ, ಅದೂ ಭಾನುವಾರವಾದ್ದರಿಂದ ಯಾವ ಎಂಗೇಜ್ಮೆಂಟ್ಗಳು ಇಲ್ಲ ಎಂದು ಖಾತರಿ ಮಾಡಿಕೊಂಡು, ಏಕಾಂತಕ್ಕಾಗಿ ತಾನೊಬ್ಬನೇ ಹೊರಬೀಳಲು ನಿಶ್ಚಯಿಸುತ್ತಾನೆ. ಪೇಪರು, ಪೆನ್ನು, ಪ್ಯಾಡು, ಜೊತೆಗೆ ಜೋಶಿ, ಚೌರಾಷಿಯಾ, ಅಡ್ನಾನ್ ಸ್ವಾಮಿ ಗಾಯನವಿದ್ದ ಪೆನ್ ಡ್ರೈವನ್ನೂ ಎತ್ತಿಟ್ಟುಕೊಳ್ಳುತ್ತಾನೆ.
ಇವನೆಲ್ಲ ತೋರಿಕೆಗಿಂತಲೂ ಇವನೊಳಗಿನ ಕತೆಗಾರನ ದೌರ್ಬಲ್ಯವನ್ನರಿತ ಹೆಂಡತಿ ಫ್ರೀಜಿನಲ್ಲಿಟ್ಟಿದ್ದ ತಣ್ಣನೆಯ ನೀರಿನ ಬಾಟಲಿ, ಚೂಡಾ ಅವಲಕ್ಕಿ, ಕೋಡುಬಳೆಗಳ ಜೊತೆ ವಾರ್ಡರೋಬಿನ ಮೂಲೆಯಲ್ಲಿದ್ದ ಮೊಘಲ್ ಮೊನಾರ್ಚಿನ ಅರ್ಧ ಬಾಟಲಿಯನ್ನು ಒಂದು ಬ್ಯಾಗಿಗಿರಿಸಿ ಕೈಗೆ ತುರುಕಿ, ಸಂಜೆ ಟಿ.ವಿ.ಯ ಸಿನಿಮಾದ ಹೊತ್ತಿಗಾದರೂ ಮನೆಯಲ್ಲಿರಲು ಸೂಚಿಸುತ್ತಾಳೆ.
ಮದುವೆಯಾದಾಗ ತೆಳ್ಳಗೆ, ಬೆಳ್ಳಗೆ, ಉದ್ದಕ್ಕಿದ್ದ ಇವಳು ಈ ಎಲ್ಲ ಆಸೆ, ಅನಿವಾರ್ಯತೆಗಳನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು ತಾನೇ ಅಲ್ಲವಾ ಎನ್ನುವ ಅಳುಕು ಮೂಡಿದ್ದೇ ತಡ ಚಪ್ಪಲಿ ಮೇಟ್ಟಿಕೊಂಡು ಕಾರೇರಿ ಕೀ ತಿರುಗಿಸುತ್ತಾನೆ.
ಏಕಾಂತದ ಹುಡುಕುವಿಕೆಯಲ್ಲೇ ಸಿಟಿ ಬಿಟ್ಟು ಏಳೆಂಟು ಮೈಲು ಬಂದರೂ ಅವನಿಗೆ ಹಿಡಿಸುವ ಅಥವಾ ಅವನೊಳಗಿನ ಕತೆಗಾರನಿಗೆ ಸ್ಪೂರ್ಥಿ ತರುವ ಯಾವ ಲಕ್ಷಣಗಳೂ ಕಾಣದೇ ಹಾಗೇ ದುಗುಡದಲ್ಲೇ, ಹೈವೇಯ ಬದಿಗೆ ಕಾರು ನಿಲ್ಲಿಸಿ, ರಣಗುಡುತ್ತಿದ್ದ ಬಿಸಿಲಿನಲ್ಲಿ ಭರ್ರನೆ ಸಾಗುವ ವಾಹನಗಳನ್ನು ನಿರುಕಿಸುತ್ತಲೇ ಸಿಗರೇಟಿಗೆ ಬೆಂಕಿ ತಾಗಿಸುತ್ತಾನೆ.
ಬದುಕು ಚಲನಶೀಲವಾಗಿದೆಯೆಂಬ ಭ್ರಮೆಯಲ್ಲಿ ನಿಂತಲ್ಲೇ ನಿಂತುಬಿಟ್ಟಿರುವ ಮನಸ್ಸುಗಳನ್ನು, ಉದ್ವಿಗ್ನತೆಯನ್ನು ತರುವ ಬಾಲ್ಯದ ನೆನಪುಗಳನ್ನೂ ತಾಳೆ ಹಾಕುತ್ತಿದ್ದವನು ಬಿಸಿಲಿಗೆ ಕರಗಿ ಜಿನುಗುತ್ತಿರುವ ಡಾಂಬರಿನ ಮೇಲೆ ಚಪ್ಪಲಿಯೊತ್ತಿ ಅಲ್ಲಿ ಮೂಡಿದ ಚಿತ್ರವನ್ನು ಕಂಡವನೇ ಏನೋ ಹೊಳೆದಂತೆ ಕಾರಲ್ಲಿ ಕೂತು ಸ್ಟೀರಿಯೋದ ದನಿ ಹೆಚ್ಚಿಸುತ್ತಾನೆ.
ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆನ್ನುವ ಹೇಳಿಕೆಗೆ ಅನುಭವದ ತಳುಕು ಹಾಕುತ್ತ, ತಾನು ಬರೆಯಬಹುದಾದ ಕತೆಗೆ ವಸ್ತು ಸಿಕ್ಕೇಬಿಟ್ಟಿತೆನ್ನುವ ಖುಷಿಯಲ್ಲಿ ಜಗತ್ತೆಲ್ಲವನ್ನೂ ಗೆದ್ದ ಖುಷಿಯಲ್ಲಿ ಪೆನ್ನು ಹಾಳೆಗಳನ್ನೆತ್ತಿಕೊಂಡವನು, ಹೆಂಡತಿ ಮನೆಯಿಂದ ಹೊರಟಾಗ ತುರುಕಿದ್ದ ಬ್ಯಾಗಿನ ನೆನಪಾದವನೇ ಅದರತ್ತ ಕೈ ಸರಿಸುತ್ತಾನೆ.
ತಾನು ಕೆಲಸಕ್ಕೆ ಸೇರುವ ಮೊದಲು ರೇಷ್ಮೆ ಸೀರೆಯನ್ನೇ ಕಾಣದಿದ್ದ ಅಮ್ಮ, ಮನೆಯ ಬಡತನ, ಅಸಹಾಯಕತೆಗಳ ನಡುವೆಯೇ ಮೇಲಧಿಕಾರಿಯ ಕೊಂಕು ಮಾತಿಗೆ ರೇಗಿ ಬಿದ್ದು ಕೆಲಸಕ್ಕೆ ಗುಡ್ ಬೈ ಹೇಳಿ ಊರ ಮುಂದಣ ಹನುಮ ದೇವರ ಗುಡಿಗೆ ಅರ್ಚಕನಾದ ಅಪ್ಪನ ನೆನಪು ಬಂದದ್ದೇ ತಡ, ಒಳಗಿನ ಸಂಕಟ ಒತ್ತರಿಸಿ ಬಂದು, ಜೀವನದ ಬೇರು ಅಲುಗಿಸುವಂಥದ್ದೇನೂ ನಡೆಯದಿದ್ದರೆ ಮನುಷ್ಯ ನಿಂತ ನೀರಾಗಿಬಿಡುತ್ತಾನಲ್ಲ ಅನ್ನಿಸಿ, ಜೀವನ ಕ್ರಮದ ದ್ರಾಬೆತನ ಇಲ್ಲವಾಗಿಸಲೆಂದೇ ಬಳಸುವ ಸ್ಟೇಟಸ್ಸಿನ ಮುಖವಾಡ, ಅದು ಕಳಚಿ ಬೀಳುವ ತನಕ ಯಾರೂ ಗಟ್ಟಿಯಾಗಲಾರರೆನ್ನುವ ಸತ್ಯದ ಹೊಳಹಿಗೆ ಸಿಗರೇಟಿನ ಕಾವು ತಾಗಿಸುತ್ತಾನೆ.
ಮನಸ್ಥಿತಿಯೇ ದಕ್ಕದ ಮೇಲೆ ಬದುಕಿನ ಅರ್ಥವಾದರೂ ಏನಿದ್ದೀತು? ಆದರೆ ತಾನೇನು ಮಾಡುತ್ತಿದ್ದೇನೆ? ತಾನೆಂದರೆ ಕಂಪನಿಯಲ್ಲಿ ಓಡುವ ಕುದುರೆ. ಕೈ ಕೆಳಗಿನ ಎಲ್ಲರೂ ಗುರಿ ಮುಟ್ಟುತ್ತಾರೆ. ಇನ್ಸೆಂಟೀವ್, ಬೋನಸ್ಸುಗಳ ಕಂತೆ, ಪ್ರಾಡಕ್ಟನ್ನು ಸದಾ ಮೇಲೇರಿಸಲು ಡಾಕ್ಟರರಿಗೆ ಕೊಡಮಾಡುವ ಸ್ಯಾಂಪಲ್ಲು, ಕಾಂಪ್ಲಿಮೆಂಟುಗಳ ಸಂತೆ. ಎಂಡಿಯಂತೂ ಸದಾ ಹಸನ್ಮುಖಿ. ಪ್ರತಿ ಮೀಟಿಂಗಿನಲ್ಲೂ ಇವನೊಳಗಿರುವ ಸಂಘಟನಾ ಕಲೆ, ಮಾರ್ಕೆಟಿಂಗ್ ಟ್ಯಾಕ್ಟಿಕ್ಗಳನ್ನು ಕೊಂಡಾಡುತ್ತ ಹೊಸ ಪ್ರಾಡಕ್ಟಿನ ಲಾಂಛಿಂಗ್ ಗೆ ತಯಾರಾಗಲು ಸೂಚಿಸುತ್ತಾನೆ. ಹಾಗೇ ಕಾರ್ಪೊರೇಟ್ ಆಫೀಸಿನಲ್ಲೂ ಎಂಥ ಗೌರವ?! ಎಷ್ಟು ಸಭ್ಯ, ಎಂಥ ಪ್ರಾಮಾಣಿಕ, ಎಲ್ಲರ ಬಗ್ಗೆಯೂ ಎಂಥ ಕಕ್ಕುಲತೆ..ಛೆ, ಇವರಾರಿಗೂ ತಿಳಿದಿಲ್ಲ, ಇದೆಲ್ಲ ಇವನು ಮೇಲೇರಲು ಬಳಸುವ ಉಪಾಯಗಳೆಂದು.
ಯಾಕೆ, ಯಾಕೆ ಮೇಲೇರಬಾರದು? ತಾನೂ ತನ್ನ ಓರಿಗೆಯ ಹುಡುಗರಂತೆ ಯಾವುದೋ ಬ್ಯಾಂಕಿನಲ್ಲೋ ಮತ್ಯಾವ ಕಛೇರಿಯಲ್ಲೋ ಗುಮಾಸ್ತನಾಗಿ ಸೇರಿಕೊಂಡಿದ್ದರೆ ಹಾಗೇ ರಿಟೈರಾಗಬೇಕಿತ್ತು. ಹೀಗೆಲ್ಲ ಕಾರು, ಐಫೋನು, ಪಾರ್ಟಿ ಅಂತ ಇರಕ್ಕಾಗುತ್ತಿತ್ತ? ಸರಿ, ಆದರೆ ಅಪ್ಪನಿಗಿದ್ದ ದಾಷ್ಟ್ಯ ಗುಣ ತನ್ನಲ್ಲೇಕೆ ಇಲ್ಲವಾಯ್ತು ಅಂತ ಮತ್ತೆ ಮತ್ತೆ ಕಾಡತೊಡಗಿ ಕತೆ ಬರೆಯಲಲ್ಲವೆ ತಾನಿಲ್ಲಿಯವರೆಗೂ ಬಂದದ್ದು ಎಂದು ನೆನಪಾಗಿ, ಕೈಯಲ್ಲೇ ಉರಿದು ಬೂದಿಯಾಗಿದ್ದ ಸಿಗರೇಟನ್ನು ಹೊರಗೆಸೆಯುತ್ತಾನೆ.
ಅಪ್ಪ ಸತ್ತ ಮೇಲೆ ಊರಲ್ಲಿ ಹೆಸರಿಗಷ್ಟೇ ಇದ್ದ ಮನೆ, ಜಮೀನು ಮಾರಿ ಜೀವನದುದ್ದಕ್ಕೂ ಸವೆದು ಹೋಗಿದ್ದ ಅಮ್ಮನನ್ನು ತನ್ನೊಡನೆ ತಂದಿಟ್ಟುಕೊಂಡು ಅವಳ ಮುದಿತನದಲ್ಲಾದರೂ ನೆಮ್ಮದಿ ಕೊಡಲು ಸಾಧ್ಯವಿತ್ತು. ಆದರೆ ಅಮ್ಮ ಸಿಟಿಯ ಢೋಂಗಿತನ ಅರಿತವಳು. ಇದ್ದೊಬ್ಬ ಮಗನ ಮನೆಯಲ್ಲಿ ಆರಾಮಾಗಿ ಇರುವ ಅವಕಾಶವನ್ನು ನಿರಾಕರಿಸಿ, ತನ್ಮೂಲಕ ತನಗೂ, ತನ್ನ ಹೆಂಡತಿಗೂ ಮುಜುಗರ ತಪ್ಪಿಸಿ ಅಂದರೆ ತಾನು ಮೇಲೇರಲು ತನಗಿಂತ ಮೇಲಿನವರನ್ನು ಮನೆಗೆ ಊಟಕ್ಕೆ ಕರೆಯಬೇಕು, ಡ್ರಿಂಕ್ಸ್ ಕೊಡಬೇಕು,ಪಾರ್ಟಿಯ ನೆವದಲ್ಲಿ ಚಿತ್ತಾಗಬೇಕು ಅಮ್ಮನಿಗೆ ಇದೆಲ್ಲ ಗೊತ್ತಿರಬೇಕು. ಹಾಗಾಗಿಯೇ ಏನೋ ಅಮ್ಮ ಊರಲ್ಲೇ ಉಳಿದು ಬಿಟ್ಟಳು.
ಮದುವೆಗೆ ಮುಂಚೆ ಅಪ್ಪನ ಶ್ರಾದ್ಧಕ್ಕೆಂದು ಊರಿಗೆ ಹೋಗಿದ್ದು, ಅದೂ ಇನ್ನೋವಾ ಕಾರಿನಲ್ಲಿ, ಎಲ್ಲರಿಗೂ ಗೊತ್ತಾಗಲಿ ಅಂತ. ಶರದೃತುವಿನ ಬೋಳು ಮರಗಳ ಬದಲಾಗದ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋದ ಸುಸ್ತು. ಹೋದ ದಿನವೆಲ್ಲ ರೆಸ್ಟು. “ಉಷ್ಣಕ್ಕೆ ತಲೆಗೂದಲೆಲ್ಲ ಉದುರಿದೆಯಲ್ಲೋ, ಈಗ್ಲೇ ಹೀಗಾದ್ರೆ ಮುಂದೆ ಹ್ಯಾಗೋ?” ಎಂದ ಅಮ್ಮ ತಲೆ ತುಂಬ ಕೈ ಎಣ್ಣೆ ಮೆತ್ತಿ, ಕುದಿವ ನೀರಲ್ಲಿ ಅಭ್ಯಂಜನ ಮಾಡಿಸಿ, ಬೆಚ್ಚನೆಯ ಕಂಬಳಿ ಹೊದ್ದಿಸಿ, ನಿದ್ದೆಯ ಜೋಂಪು ಕಳೆದೆದ್ದ ಕೂಡಲೇ ಕಂಪು ಸೂಸುವ ಕಾಫಿಯ ಜೊತೆ ಕೆಂಡದಲ್ಲಿ ಸುಟ್ಟು, ಮೇಲೆ ತುಪ್ಪ ಸವರಿದ್ದ ಮರಗೆಣಸಿನ ಹಪ್ಪಳ ಕೊಟ್ಟು ಉಪಚರಿಸಿದ್ದ ಅಮ್ಮ. ಶ್ರಾದ್ಧ ಮುಗಿದ ಸಂಜೆ ಮಾತು ಮದುವೆಯ ಕಡೆ ತಿರುಗಿದ್ದೇ, ಮದುವೆಯ ಅನಿವಾರ್ಯತೆಯ ಬಗ್ಗೆಯಷ್ಟೇ ಹೇಳಿ, ಆಯ್ಕೆಯನ್ನು ತನಗೇ ಬಿಟ್ಟುಕೊಟ್ಟ ಅಮ್ಮ. ತಾನಿಷ್ಟ ಪಟ್ಟ ಹುಡುಗಿಯ ಫೋಟೋ ತೋರಿಸಿದ್ದೇ ತಡ, ಹೇಗೆ ದಾಯಾದಿಗಳ ಮನೆ ಮನೆ ಹೊಸಿಲು ತುಳಿದು ಖುಷಿ ಪಟ್ಟಳು ಮದುವೆ ಮುಗಿದ ಕೂಡಲೇ ಸಿಟಿ ಜೀವನ, ಹಳ್ಳಿಯ ಸರಳತೆ ಇತ್ಯಾದಿ ಹೇಳಿ ಹೇಳಿ ತಾನು ಹಳ್ಳಿಯಲ್ಲೇ ಉಳಿದು ಬಿಟ್ಟಳು.
ತೊಡೆಯ ಮೇಲೆ ಹಾಗೇ ಉಳಿದಿದ್ದ ಪೆನ್ನು ಹಾಳೆಗಳನ್ನು ಎತ್ತಿಕೊಂಡು, “ಊಹೂಂ, ಇನ್ನು ಸಾಧ್ಯವೇ ಇಲ್ಲ. ಆಗಲ್ಲ ಅಂತ ಸಂಪಾದಕರಿಗೆ ಮೆಸೇಜಾದರೂ ಹಾಕೋಣ” ಅಂದುಕೊಂಡವನು “ಕ್ಲಬ್ಬಿಗಾದರೂ ಹೋಗೋಣವಾ?” “ಅದಕ್ಕೂ ಮೂಡ್ ಇಲ್ಲವಲ್ಲ”. ಮತ್ತೆ ಕಾರು ಸೈಡಿಗೆ ಹಾಕಿ, ಇಳಿದು ಸಿಗರೇಟು ಹಚ್ಚಿ, ಮಧ್ಯಾಹ್ನದ ಸುಡು ಬಿಸಿಲಲ್ಲಿ ಕಾಲಿಗೆ ಸಿಕ್ಕ ಕಲ್ಲೊಂದನ್ನು ಜಾಡಿಸಿ ಒದ್ದು, ಮತ್ತೆ ಆ ಅದೇ ಚಡಪಡಿಕೆಯಲ್ಲೇ ಉಳಿಯುತ್ತಾನೆ.
ಊರಿಂದ ಮೈಲು ನಡೆದು ಹೈಸ್ಕೂಲಿಗೆ ಹೋಗಬೇಕು. ಕಾಲಿಗೆ ಚಪ್ಪಲಿ ಇರಲಿ, ನೋಟ್ಸ್ ಬರೆದುಕೊಳ್ಳಲು ಹಿಡಿತಕ್ಕೂ ಸಿಗದ ಉದ್ದದ ಪೆನ್ಸಿಲ್ಲು. ಮನೆಗೂ ಶಾಲೆಗೂ ನಡುವೆ ಇದ್ದ ಮಾವಿನ ತೋಪು. ಸುಗ್ಗಿಯಲ್ಲಿ ಕದ್ದು ಮನೆಗೆ ಒಯ್ಡರೆ ಬಯ್ಯುತ್ತಿದ್ದ ಅಮ್ಮ. ಲಾಂಧ್ರದ ಬೆಳಕಲ್ಲಿ ಓದಿಕೊಳ್ಳುವಾಗ ಕಿವಿಮೇಲೆ ಬೀಳುತ್ತಿದ್ದ ಅಪ್ಪ ತನಗೆ ತಾನೇ ಹಾಡಿಕೊಳ್ಳುತ್ತಿದ್ದ ಕುಮಾರ ವ್ಯಾಸ ಭಾರತದ ಸಾಲುಗಳು, ಅಡಿಕೆ, ಎಲೆ, ತಂಬಾಕು ಹದ ಮಿಶ್ರಣದ ಸುವಾಸಿತ ಘಾಟು.
ಅಪ್ಪನ ಏನೆಲ್ಲ ಭೋಳೇತನವನ್ನೂ ಅವರ ಸ್ವಾಭಿಮಾನ ಎಂದೇ ಕರೆದು ಅವನ ನಿರ್ಧಾರಗಳನ್ನೆಲ್ಲ ಒಳ್ಳಿತೆಂದೇ ಬದುಕಿ ಬಾಳುತ್ತಿರುವ ಅಮ್ಮ. ಒಮ್ಮೆ ಅಮ್ಮನಿಗೆ ಖಾಯಿಲೆ. ಬರೀ ಗಂಜಿ, ಔಷಧ ಸೀಸೆಗಳ ನಡುವೆ ಮಲಗೀ ಮಲಗೀ ಬೆನ್ನ ತುಂಬ ಹುಣ್ಣು. ತನ್ನ ಎಂದಿನ ರೀತಿಯಲ್ಲೇ ನಿರುಮ್ಮಳ ಅಪ್ಪ. ಅವಳ ಪರಿಚಾರಿಕೆಯ ನಡುವೆ ಉಪನಿಷತ್ತು, ಗೀತೆ, ಕಗ್ಗಗಳ ಉದ್ಧರಣ. ಅಂಥದೇ ಒಂದು ಮಧ್ಯಾಹ್ನ. “ಅಪ್ಪನ್ನ ಕರೆಯೋ” ಅಮ್ಮನ ನರಳುವಿಕೆ ಕೇಳಿ ಒಂದೇ ಓಟದಲ್ಲಿ ಅಪ್ಪನಿರುತ್ತಿದ್ದ ಊರ ಮುಂದಣ ಹನುಮಪ್ಪನ ಗುಡಿ ಮುಟ್ಟಿ, ಹೊರಗೆ ಸುಡು ಸುಡು ಬಿಸಿಲಿದ್ದರೂ ಒಳಗೆ ತಣ್ಣಗಿರುವ ದೇಗುಲದ ನವರಂಗದಲ್ಲಿ ತನಗೆ ತಾನೇ ಅರ್ಥ ಹೇಳಿಕೊಳ್ಳುತ್ತಿದ್ದ ಅಪ್ಪ, ಅವನ ಕಣ್ಣಂಚ ತುದಿಯಲ್ಲಿ ಹೆಪ್ಪು ಗಟ್ಟಿದ್ದ ಹನಿ ನೀರು.
ಗಡಬಡಿಸಿ ಎದ್ದು, ಏರು ಹೆಜ್ಜೆಯಲ್ಲಿ ಮನೆ ಮುಟ್ಟಿ, ಅಮ್ಮನಿಗೆ ಧೈರ್ಯ ಹೇಳಿ, ಅವಳ ಬಟ್ಟೆ ಬದಲಿಸಿ ಮತ್ತೆ ಗುಡಿಯತ್ತಲೇ ಹೆಜ್ಜೆ ಹಾಕಿದ ಅಪ್ಪನ ಹನುಮ ನಿಷ್ಠೆ ಅಥವಾ ಮಧ್ಯಾಹ್ನ ಬರಬಹುದಾದ ಮಹಾಜನರು ಮಂಗಳಾರತಿ ತಟ್ಟೆಗೆ ಹಾಕಬಹುದಾದ ಚಿಲ್ಲರೆ ಕಾಸು, ಅರ್ಧ ಹೋಳು ತೆಂಗಿನ ಕಾಯಿ, ಅಥವ ಎರಡು ಬಾಳೆ ಹಣ್ಣು? ಅಪ್ಪನ ನೆನಪು ದಟ್ಟವಾಗ ತೊಡಗಿ ಮತ್ತೆ ಸಂಕಟಕ್ಕೆ ಬೀಳುತ್ತಾನೆ.
ಸಿಗರೇಟ್ ಪ್ಯಾಕ್ ಖಾಲಿಯಾದರೂ ಬಿಡದ ಆಲೋಚನೆಯ ಸರಮಾಲೆ. ನಡೆದ ದೂರ ಅರಿವಿಗೆ ಬಂದವನೇ ಅವಸರದಲ್ಲಿ ಹಿಂದೆ ನಡೆದು, ಕಾರು ತಿರುಗಿಸಿ, ಮನೆಯತ್ತ ಹೊರಟು ಗಿಯರ್ ಬದಲಿಸುವಾಗ, ಅಪ್ಪ ಸತ್ತು ಎಷ್ಟೆಲ್ಲ ವರ್ಷವಾದ ಮೇಲೆ, ಇದುವರೆಗೂ ಅರ್ಥವಾಗದಿದ್ದ ಅವನ ಜೀವನ ಕ್ರಮವೇ ಸರಿ ಇತ್ತಲ್ಲವಾ ಅನ್ನಿಸಿ, ಕತೆಗೊಂದು ಗಟ್ಟಿ ವಸ್ತು ಸಿಗುತ್ತಿದೆ ಎಂದುಕೊಂಡ.
ಅಂತೂ ಮಾಧ್ಯಾಹ್ನವೇ ಹಿಂತಿರುಗಿ ಬಂದವನನ್ನು ಕಂಡ ಹೆಂಡತಿ, ಏನನ್ನೂ ಕೇಳದೇ, ಊಟಕ್ಕೆ ರೆಡಿ ಮಾಡಲು ಡೈನಿಂಗ್ ಟೇಬಲಿನತ್ತ ನಡೆಯುತ್ತಾಳೆ. ಬಟ್ಟೆ ಬದಲಿಸಿ, ಮುಖಕ್ಕಿಷ್ಟು ನೀರು ಚುಮುಕಿಸಿಕೊಂಡು ಬಂದ ಅವನು, ಊಟಕ್ಕೆ ಕೂರುವ ಮುನ್ನ ಫೋನಿನ ಬಳಿಯಿದ್ದ ಡೈರಿಯಿಂದ ನಾಳೆ ಇರುವ ಮಾರ್ಕೆಟಿಂಗ್ ಮ್ಯಾನೇಜರನ ವಿಸಿಟ್ ನೆನಪು ಮಾಡಿಕೊಂಡವನೇ ಲ್ಯಾಪ್ ಟಾಪ್ ತೆರೆದು ಈ ತಿಂಗಳ ಸೇಲ್ಸ್ ಪ್ರೋಗ್ರೆಸ್ ನೋಡಿ ಸಮಾಧಾನ ಗೊಳ್ಳುತ್ತಾನೆ. ಈಮೈಲ್ ಯಾವುದೂ ಇಲ್ಲವೆಂದು ಖಾತರಿಯಾದರೂ ಮತ್ತೊಮ್ಮೆ ಮೊಬೈಲಿನಲ್ಲೂ ಹಣುಕಿ, ಸೇರಿದಷ್ಟು ಅನ್ನ ಉಂಡು ರೂಮು ಸೇರುವ ಮೊದಲು “ಸಂಜೆ ಹಿಲ್ ವ್ಯೂದಲ್ಲಿ ನ್ಯಾನ್ಸಿ ಎಂಗೇಜ್ಮೆಂಟ್ ಪಾರ್ಟಿ ಇದೆ. ನೀನೂ ರೆಡಿಯಾಗಿರು” ಎಂದವನು ಅವಳ ಉತ್ತರಕ್ಕೂ ಕಾಯದೆ ನಿದ್ರೆಗಿಳಿಯುತ್ತಾನೆ.
ಸಂಜೆ ಮೈ ಮುರಿದುಕೊಂಡು ಎದ್ದು ರೂಮಿನಿಂದ ಹೊರಬಂದರೆ, ಟಿವಿಯ ಸಿನಿಮಾದಲ್ಲಿ ಮುಳುಗಿ ಹೋಗಿದ್ದ ಹೆಂಡತಿ. ಮುಖಕ್ಕಿಷ್ಟು ನೀರು ತೋರಿಸಲು ಬಚ್ಚಲಿಗೆ ಹೋದರೆ ಸಿಂಕಿನ ತುಂಬಾ ತುಂಬಿ ಹೊರಕ್ಕೂ ಚೆಲ್ಲಿದ್ದ ಪಾತ್ರೆಗಳು. ಇವಳಂತೂ ಬರುವವಳಲ್ಲ ಎಂದು ಕೊಂಡವನೇ ಮುಖ ತೊಳೆದು ಸಿದ್ಧನಾಗಿ, ತಾನಿಷ್ಟ ಪಡುವ ಕಾಟನ್ ಕುರ್ತಾ ಪೈಜಾಮ ಧರಿಸಿ, ಮೇಲೊಂದು ವೇಸ್ಟ್ ಕೋಟ್ ತೊಟ್ಟು ಕನ್ನಡಿಯಲ್ಲಿ ಕಂಡ ತನ್ನದೇ ಬಿಂಬಕ್ಕೆ ಥಮ್ಸ್ ಅಪ್ ಬೆರಳೆತ್ತಿ ಮನೆಯಿಂದ ಹೊರಬೀಳುತ್ತಾನೆ.
ಅಂತೂ ಹಿಲ್ ವ್ಯೂ ತಲುಪಿ, ಕಾರ್ ಪಾರ್ಕ್ ಮಾಡಿ, ಪಾರ್ಟಿ ಹಾಲಿನತ್ತ ಹೆಜ್ಜೆ ಹಾಕುವ ವೇಳೆಗಾಗಲೇ ಎಂಗೇಜ್ ಮೆಂಟಿನ ಉಂಗುರಗಳು ಬದಲಾಗಿ, ಸೇರಿದ್ದ ಜನವೆಲ್ಲ ಬೆಡಗಿಗೆ ತಕ್ಕ ಬೆಳಕಿರುವ ಜಾಗಗಳಲ್ಲಿ ನ್ಯಾನ್ಸಿಯ ಎಂಗೇಜ್ಮೆಂಟ್ ಸೆಲೆಬ್ರೇಷನ್ನಿನಲ್ಲಿರುವಾಗ, ಹಿಂದಿನಿಂದ ಬಂದು ಶಾಕ್ ಕೊಡುವವಳಂತೆ ಅವನ ಬೆನ್ನಿನ ಮೇಲೊಂದು ಹುಸಿ ಗುದ್ದು ಕೊಟ್ಟು, ತನ್ನ ವುಡ್ಬಿಯ ಕೈ ಕುಲುಕಿಸಿದ ನ್ಯಾನ್ಸಿಯ ರೀತಿಗೆ ಪುಳಕಗೊಂಡ. ಅಗತ್ಯಕ್ಕಿಂತ ಹೆಚ್ಚಾಗಿಯೇ ತನ್ನನ್ನು ಅವಳ ವುಡ್ಬಿಗೆ ಪರಿಚಯಿಸಿದ ಅವಳ ರೀತಿ ತಾನುಕಲಿಸಿದ ಪಾಠದಿಂದಲೇ ಬಂದದ್ದಲ್ಲವಾ? ಎನ್ನುವ ಸಮಾಧಾನದಲ್ಲಿ, ಸಿಕ್ಕವರೊಡನೆ ನೆಪಕ್ಕೆ ಬಿದ್ದು ಗುಟುಕರಿಸುತ್ತ ಹೋದ ಹಾಗೆಲ್ಲ ಹೆಚ್ಚುತ್ತ ಹೋದ ವ್ಹಿಸ್ಕಿಯ ರುಚಿಗೆ ಹುರಿದ ಗೋಡಂಬಿಯನ್ನು ಮೆಲ್ಲುತ್ತ, ಬಾಲ್ಯವನ್ನೂ, ಯೌವನವನ್ನೂ ತೂಗಿ ನೋಡುತ್ತ, ಮಧ್ಯ ವಯಸ್ಕನ ಹಪಾಹಪಿತನಗಳನ್ನು ಟೇಬಲ್ಮೇಟುಗಳೊಂದಿಗೆ ಹಂಚಿಕೊಳ್ಳುತ್ತ, ಮಧ್ಯೆ, ಮಧ್ಯೆ, ತನ್ಮಯನಾಗಿ ಅವರ ಮಾತುಗಳನ್ನೂ ಕೇಳುತ್ತ, ಅಥವ ಕೇಳಿದಂತೆ ನಟಿಸುತ್ತ, ಮತ್ತೆ ಮತ್ತೆ ಮತ್ತೆ ಆರ್ಡರುಗಳನ್ನು ಹೇಳುತ್ತ ಹೋದವನಿಗೆ ಇದ್ದಕ್ಕಿದ್ದಂತೆ ಥಟ್ಟನೆ ಕತೆ ಬರೆದು ಮುಗಿಸಲೇಬೇಕು ಎನ್ನುವ ಛಲ ಮೂಡಿದ್ದೇ ತಡ, ಪಾರ್ಟಿ ಮುಗಿಸಿ ಹೊರ ಬೀಳುತ್ತಾನೆ. ನಿರ್ಜನ ರಸ್ತೆಯಲ್ಲಿ ಕಾರು ಓಲಾಡುತ್ತ ಚಲಿಸುವಾಗ, “ಇಲ್ಲ ನಾಳೆ ಊರಿಗೆ ಹೋಗಲೇ ಬೇಕು. ತಾಸೆರಡು ತಾಸು ಅಮ್ಮನ ಜೊತೆ ಕೂತು ಮಾತಾಡಬೇಕು” ಅನ್ನಿಸಿದ್ದೇ ತಡ ಹೊಸ ಹೊಳಹಿನೊಂದಿಗೆ ಕಾರು ಚಲಾಯಿಸಿ, ಸದ್ಯ ಬರೆಯಲಿರುವ ಕತೆಗೊಂದು ಗಟ್ಟಿ ಕ್ಲೈಮಾಕ್ಸ್ ಸಿಕ್ಕಿತೆನ್ನುವ ಖುಷಿಯಲ್ಲಿ, ಇನ್ನೇನು ಸಿಕ್ಕೇ ಬಿಟ್ಟಿತೆನ್ನುವಾಗ ಫಕ್ಕನೆ ಹಾರಿ ಹೋಗುವ ಚಿಟ್ಟೆಯಂಥದೇ ಕತೆ, ತನ್ನ ಬೆರಳಿಗೆ ಅಂಟಿಸಿ ಹೋದ ಬಣ್ಣದ ಗುರುತಿಗೆ ಮುದಗೊಂಡವನು ಸ್ಟೀರಿಯೋದ ದನಿಗೆ ಬೆರಳುಗಳನ್ನು ಕುಣಿಸುತ್ತಲೇ ಪ್ಯಾಕೆಟ್ಟಿನಲ್ಲಿದ್ದ ಕಟ್ಟ ಕಡೆಯ ಸಿಗರೇಟಿಗೆ ಬೆಂಕಿ ಕೊಡುತ್ತಾನೆ.