ಮಾನವೀಯತೆಯ ಮೆರೆಯೋಣ

ಮಾನವೀಯತೆಯ ಮೆರೆಯೋಣ

ಹುಣ್ಣಿಮೆಯ ಬೆಳ್ಳಬೆಳದಿಂಗಳಿನಲಿ
ಸೂರ್ಯರಶ್ಮಿಯ ತುಣುಕೊಂದು
ಮಾಯಾದೇವಿಯ ಮಡಿಲಲಿ
ಬಂದಾಕ್ಷಣ ಯಾರಿಗರಿವಿತ್ತು
ರಾಜನಾಗಿ ಮೆರೆಯಬೇಕಾದ ಹೊತ್ತು
ಮಡಿಯುಟ್ಟು ವೈರಾಗ್ಯವೇ ಮೈಮೆತ್ತು
ಕಾಡಲಿ ಅಡಿ ಇಡುವನೆಂದು
ಜಗಕೆ ಶಾಂತಿಯ ಬೆಳಕಾಗುವನೆಂದು
ದುಃಖವೆಂದರಿಯದ ಮನನೊಂದು
ಶಾಂತಿಯನರಸುತ ನಡೆದ ವೀರ
ಯಾಕಾಗಿ? ಯಾಕಾಗಿ?
ತನ್ನಂತರಂಗದ ಕದವ ತೆರೆದು
ಹೊಸಗಾಳಿ ಮೈಮನದಿ

ಹೊಸ ಯುಗದಿ ಅಡಿಯನಿಡುತ
ಬೋಧಿಯಡಿ ಬುದ್ಧನಾದ ಅನವರತ
ಶಾಂತಿಯಾ ಚಿಲುಮೆಯಾದ
ಜಗದ ಉದ್ದಾರವಾಯಿತೇ?
ಜನರ ಬವಣೆ ಅಳಿಯಿತೇ?
ಸಿದ್ದಾರ್ಥ ಬುದ್ಧನಾದ
ಬುದ್ಧ ಮಹಾಪುರುಷನಾದ
ಧರ್ಮಗಳ ಸಮಷ್ಠಿಗಳಲಿ
ಮತ್ತೊಂದು ಧರ್ಮದ ಸೃಷ್ಟಿಯಾಯಿತಲ್ಲಿ!

ಎಲ್ಲ ಧರ್ಮಗಳ ತಿರುಳೂ ಒಂದೇ
ಶಾಂತಿ ಸೌಹಾರ್ದತೆಯ ಸೆಲೆ.
ಆದರೆ ಇದೇನಿದು? ಆದರೆ ಇದೇನಿದು?
ಆಯಾ ಧರ್ಮಗಳ ನೆರಳಲಿ
ಅಸಹನೆಯ ಬಲೆ
ಮಾನವ ನಿರ್ಮಿತ ಗೋಡೆ
ಗಿರಿಕಂದರಗಳ ತಡೆ
ನಾ ಹೆಚ್ಚು ನೀ ಹೆಚ್ಚು
ಎಂಬ ಹುಚ್ಚು ಬೇಕೆ?
ಒಂದೇ ತಾಯಿ ಮಕ್ಕಳಲಿ
ವಿಷ ಬೀಜವೇಕೆ?
ನೀಲನಭದ ಅಗಾಧತೆಯಲಿ
ಪ್ರಚ್ಛನ್ನ ಅಂಬುಧಿಯ ವಿಶಾಲತೆಯಲಿ
ನಾವೆಲ್ಲ ಒಂದಾಗೋಣ
ಮಾನವೀಯತೆಯ ಮೆರೆಯೋಣ
ಮಾನವೀಯತೆ ಮೆರೆಯೋಣ

Leave a Comment

Your email address will not be published. Required fields are marked *

Scroll to Top