ಸೂರಕ್ಕಿ

ಸೂರಕ್ಕಿ (ಸನ್‌ ಬರ್ಡ್‌)

ನಮ್ಮ ಮನೆಯ ಅಂಗಳಕ್ಕೆ ದಿನವೂ ಮುಂಜಾನೆ ದಾಳಿ ಇಡುವ ಸೂರಕ್ಕಿ(ಸನ್‌ ಬರ್ಡ್‌)ಗಳು, ದಾಸವಾಳ, ರತ್ನಗಂಧಿ ಹೂವಿನ ದೇಹದೊಳಗೆ ಸ್ಟ್ರಾನಂತಹ ತನ್ನ ಕೊಕ್ಕನ್ನು ಇಳಿಸಿ ‘ಸುರ್‌! ಸುರ್‌!’ ಎಂದು ಕ್ಷಣಾರ್ಧದಲ್ಲಿ ಮಧು ಹೀರಿ, ಅವಸರವಸರವಾಗಿ ಇನ್ನೊಂದು ಗಿಡದ ಹೂವಿನತ್ತ ಪುಸಕ್ಕನೇ ಜಾರಿ ಅಲ್ಲಿಯೂ ಮಧುಪಾನಗೈಯುವುದರಲ್ಲಿ ಬ್ಯುಸಿಯಾಗಿಬಿಡುತ್ತವೆ. ಈ ಹಕ್ಕಿಗಳು ಭಾರೀ ಕ್ರಿಯಾಶೀಲತೆಯಿಂದ ಅಂಗಳದೆಲ್ಲ ಹೂವಿನ ಮಕರಂದವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುವ ಪರಿ ನೋಡುವುದೇ ಚೆಂದ. ಬಹಳಷ್ಟು ಸಲ ಎಲೆಯನ್ನೋ ಪಕ್ಕದ ಹೂವನ್ನೋ ಆಸರೆಯಾಗಿರಿಸಿಕೊಂಡು ಸರ್ಕಸ್ ಮಾಡುತ್ತಾ ಮಕರಂದ ಹೀರುವ ಈ ಪಕ್ಷಿಗಳು ಕೆಲವೊಮ್ಮೆ ಗಾಳಿಯಲ್ಲಿ ರೆಕ್ಕೆಯನ್ನು ವೇಗವಾಗಿ ಬಡಿಯುತ್ತಲೇ ಮಕರಂದ ಹೀರಿ ಮತ್ತೊಂದು ಹೂವಿನ ಬಳಿ ಓಡುತ್ತವೆ. ಹೆಚ್ಚಾಗಿ ಜೋಡಿಯಾಗಿಯೇ ಬರುವ ಈ ಹಕ್ಕಿಗಳ ಚಟುವಟಿಕೆ ಗಮನಿಸುವಾಗ ನಮ್ಮೊಳಗೂ ಒಂದು ಉತ್ಸಾಹ ಮನೆ ಮಾಡುವುದಂತೂ ಖಂಡಿತ. ಈ ಚೆಂದ ನೋಡುವುದಕ್ಕಾಗಿಯೇ ಸೂರಕ್ಕಿಗಳಿಗಾಗಿ ಗಿಡದಲ್ಲಿರುವ ಹೂವೆಲ್ಲಾ ಮೀಸಲು… ಪ್ರಕೃತಿಯಲ್ಲಿ ಅವುಗಳದ್ದೂ ಪಾಲಿದೆಯಲ್ಲಾ…! ಮಕರಂದ ಹೀರಿದ ಸೂರಕ್ಕಿಯ ಹೊಟ್ಟೆ ತಣ್ಣಗಿರಲಿ…

ಹೊಸ್ಮನೆ ಮುತ್ತು

Leave a Comment

Your email address will not be published. Required fields are marked *

Scroll to Top