ಸುಖಾಂತ್ಯ ಸಿಗಬಹುದೇ…?

ಲೇಖಕರು : ಮೃಣಾಲಿನಿ. ಪಿ. ಅಗರಖೇಡ್

ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಥಾಸಂಭ್ರಮ 2025 – ಸಣ್ಣ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ –  ಸುಖಾಂತ್ಯ ಸಿಗಬಹುದೇ…? 

ನಾನು ಅಜಯ್ ರಾವ್, ಶೀಘ್ರದಲ್ಲಿ ಸಂಸಾರ ಹೂಡುವ ಕನಸು ಹೆಣೆಯುತ್ತಿರುವ ಇಪ್ಪತೈದರ ನವ ತರುಣ, ಮರೆಯದ ಆ ರಾತ್ರಿಯ ಕಥೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಂದಿದ್ದೇನೆ. 

ಇದು ನಡೆದಿದ್ದು ಆರು ತಿಂಗಳ ಹಿಂದೆ. ಡಿಸೆಂಬರ್ ರಾತ್ರಿ, ಮೈಕೊರೆಯುವ ಚಳಿ ನಾನು ‘ರಾಜಧಾನಿ ಎಕ್ಸ್ಪ್ರೆಸ್ ‘ ರೈಲಿನಲ್ಲಿ ಮಧ್ಯಪ್ರದೇಶದ ಭೋಪಾಲ್ ಗೆ ಆಫೀಸ್ ಕೆಲಸದ ಮೇರೆಗೆ ಹೋಗುತ್ತಿದ್ದೆ. ನಂದು ಹೇಳಿ ಕೇಳಿ ಮಾರ್ಕೆಟಿಂಗ್ ಕೆಲಸ, ಹೀಗಾಗಿ ಅಂತರ ರಾಜ್ಯ ಪ್ರವಾಸ ಇದ್ದೇ ಇರುತ್ತದೆ. ಸಾಕಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಎಂದಿನಂತೆ ಅಂದೂ ಎಸ್ ಒನ್, ಎ.ಸಿ ಕೋಚ್ ರಿಸರ್ವ್ ಆಗಿತ್ತು, ಯಾವಾಗಲೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬೋಗಿ, ಅಂದು ಯಂಕ, ನೊಣ ಇಬ್ಬರೇ,, ಇದು ಬಲು ಅಪರೂಪವಾಗಿತ್ತು. ಬಾಗಿಲು ಹಾಕಿ ಕೊಂಡರೆ ಆಷ್ಟೇ, ನಮ್ಮದೇ ಕೋಣೆಯಂಥ ಪ್ರೈವಸಿ. ಜೊತೆಗೆ ಯಾರಾದರೂ ಮಾತಿಗೆ ಸಿಕ್ಕರಂತೂ ಇನ್ನೂ ಮಜಾ. ಹೆಚ್ಚಾಗಿ ಗಂಡಸರೇ ಇರುತ್ತಾರೆ. ಹರಟ್ಟುತ್ತಾ ಹೋಗುವುದು ಕಿವಿಗೆ ಪ್ಲಾಸ್ಟಿಕ್ ಮೊಗ್ಗು ತುರಿಕಿ, ಸಂಗೀತ ಕೇಳುತ್ತಾ ನಿಧಾನವಾಗಿ ನಿದ್ದೆಗೆ ಜಾರುವುದು ವಾಡಿಕೆ. 

ಆದರೆ ಈ ಬಾರಿ ಟ್ರೈನ್ ನಲ್ಲಿ ರಾತ್ರಿ ಪ್ರವಾಸವಿತ್ತು ಬೆಂಗಳೂರು ಸ್ಟೇಷನ್ನಿಂದ ಹತ್ತಿದಾಗ, ಆಗಲೇ ಮೂವತ್ತರ ಆಸುಪಾಸಿನ ಮಹಿಳೆಯೊಬ್ಬಳು ನನ್ನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದಳು. ಅವಳನ್ನು ನೋಡಿ ಈ ಹೆಂಗಸರ ಸಹವಾಸ ಸ್ವಲ್ಪ ಡೇಂಜರ್ ಅಜಯ! ಮೌನವೇ ಉತ್ತಮ, ಸುಮ್ಮನೆ ನಿನ್ನ ಪಾಡಿಗೆ ನೀನು ನೆಟ್ಟಫ್ಲಿಕ್ಸ್ ನೋಡು… ಎಂದಿತ್ತು ಮನಸು. ನನ್ನ ಬ್ಯಾಗ್ ಅನ್ನು ಸೀಟಿನ ಬುಡಕ್ಕ ತಳ್ಳಿ, ಲ್ಯಾಪ ಟಾಪ್ ತಗೆದು ಕುಳಿತೆ. ಬೇಡವೆಂದರೂ ನನ್ನ ದೃಷ್ಟಿ ಅವಳತ್ತ ಹೊರಳಿತು, ಓರೆ ಗಣ್ಣಿನಿಂದ ನೋಡಿದಾಗ ಅವಳು ಕಿಟಿಕಿ ಆಚೆಗೆ ಬಗ್ಗಿ ಬಗ್ಗಿ ನೋಡುತ್ತಿದ್ದಳು. ಅವಳ ಮುಖದಲ್ಲಿ ಸಣ್ಣದೊಂದು ಆತಂಕದ ಭಾವ ಇಣುಕುತ್ತಿದ್ದದ್ದು ಮಬ್ಬು ಬೆಳಕಲ್ಲಿ ಕಂಡಿತು, ಪಕ್ಕದಲ್ಲಿ ಕತ್ತು ಚೆಲ್ಲಿ, ತೆರೆದ ಬಾಯಿಯ ಅವಳ ಬ್ಯಾಗ್ ನಿಂದ, ಚಿಕ್ಕ ಮಗುವಿಗೆ ಬೇಕಾಗುವ ಹಾಲಿನ ಬಾಟಲಿ, ಸಿಪ್ಪರ್, ಡೈಪರ್ ಪ್ಯಾಕ್, ಕಾರ್ಟೂನ್ ಚಿತ್ರದ ಹೊದಿಕೆ ಮುಂತಾದ ವಸ್ತುಗಳು ತಮ್ಮ ಇರುವಿಕೆಯನ್ನು ಸಾರುತ್ತಿದ್ದವು. 

ಆದರೆ ಮಗು ಮಾತ್ರ ಕಾಣಿಸಲಿಲ್ಲ. ಕತ್ತೆತ್ತಿ ಗಮನಿಸಿದಾಗ ಮೇಲಿನ ಬರ್ತ್ ಒಂದು ನೆಟ್ ತರಹದ ಬಟ್ಟೆ ಆಕಡೆ, ಈಕಡೆ ಕಟ್ಟಿತ್ತು, ಅಲ್ಲಿಂದ ಗುಲಾಬಿ ಬಣ್ಣದ ಹೊದಿಕೆಯ ಅಂಚು ಜೋತಾಡುತ್ತಿತು, ಒಹ್ ಮಗು ಮೇಲೆ ಮಲಗಿರಬಹುದು ಎಂದು ಮನಸು ಲೆಕ್ಕ ಬರಿಯ ತೊಡಗಿತು. ತಕ್ಷಣ ನಮಗ್ಯಾಕ ಇನ್ನೊಬ್ಬರ ಉಸಾಬರಿ ಎಂದು ಮೆದುಳು ಸಿಗ್ನಲ್ ಕೊಟ್ಟಿತು, ಮತ್ತೆ ಚಿತ್ತವನ್ನು ಇತ್ತ ತಂದು ನನ್ನ ಲ್ಯಾಪ ಟಾಪ್ನಲ್ಲಿ ಮುಳುಗಿಸಿದೆ. 

ನೋಡಿ ಮನಸು ಮಂಗ ಕಣ್ರೀ…ಕೆಲ ನಿಮಿಷದ ಬಳಿಕ ಮತ್ತೆ ಅವಳತ್ತ ಕಡೆಗಣ್ಣಿಂದ ನೋಡಿದೆ, ಸುಂದರವಾದ ಮುಖ, ನೀಳ ಮುಗು , ಗುಂಗುರು ಕೂದಲು. ಬಿಳಿ ಬಣ್ಣದ ಕೇರಳ ಕಾಟನ್ ಸೀರೆ ಅವಳನ್ನು ಬಲು ಆಸ್ಥೆಯಿಂದ ಅಪ್ಪಿತ್ತು, ಕೇರಳದವಳಿರಬೇಕೆಂದುಕೊಂಡೆ. ನಾನು ಅವಳನ್ನು ಗಮನಿಸುತ್ತಿದ್ದೇನೆ ಎಂದು ಗೊತ್ತಾಗಿ ಅವಳು ನನ್ನತ್ತ ನೋಡಿದಳು. ನಾನು ನೋಡಿ, ಮುಗುಳು ನಗೆ ನಕ್ಕು ‘ಹೈ ‘ ಎಂದು ಮೆಲ್ಲಗೆ ಹೇಳಿದೆ. ಅವಳು ನಕ್ಕು, ಪ್ರತಿಯಾಗಿ ಏನೂ ಹೇಳಲಿಲ್ಲ. ಅವಳು ನನ್ನತ್ತ ನೋಡಿದಾಗ ಅವಳ ಕಪ್ಪು ಕಂಗಳಲ್ಲಿ ಏನೂ ಒಂದು ಆಕರ್ಷಣೆ ಇತ್ತು. ಜೊತೆಗೆ ಕೊರಳಲ್ಲಿ ಚಿನ್ನದ ಚೈನ ಮಿನುಗುತ್ತಿತ್ತು. ಮಗು ಇದೆ ಅಂತಾದ್ರೆ ಮದುವೆ ಆಗಿದೆ ಎಂದು ಅರ್ಥ. ಮತ್ತೆ ಯಾವ ಸೌಭಾಗ್ಯದ ಚಿಹ್ನೆಗಳನ್ನು ಹುಡುಕುವುದು ಬೇಡ ಎಂದು ಮನಸ್ಸು ಹೇಳಿತು. 

ನಮ್ಮ ದೇಶದಲ್ಲೂ ಮಹಿಳೆಯರ ಸಬಲೀಕರಣವಾಗಿದೆ, ಒಬ್ಬರೇ ದೂರದ ಪ್ರವಾಸ ಮಾಡುವ ಹಂತಕ್ಕೆ ತಲುಪಿದ್ದಾರೆ. ‘ಬ್ರೇವ ಲೇಡಿ ‘ ನಮ್ಮಂತಹ ಒಳ್ಳೆಯ ಗಂಡಸರು ಇದ್ರೆ ಇವರು ಲಕ್ಕಿ, ಎಂದು ಕೊಳ್ಳುತ್ತಾ ಸ್ಕ್ರೋಲ್ ಪ್ಯಾಡ್ ಮೇಲೆ ಬೆರಳಾಡಿಸುತ್ತಿದ್ದೆ.

ನೀವು ಯಾವ ಸ್ಟೇಷನ್ ನಲ್ಲಿ ಇಳಿಯೋದು…? ಎಂಬ ಇಂಪಾದ ಧ್ವನಿ ಕೇಳಿಸಿದಾಗ ತೆಲೆ ಎತ್ತಿದೆ. ಹೌದು ಕೇರಳ ಸೀರೆ ಸುಂದರಿ ತುಟಿ ಬಿಚ್ಚಿದಳು. ‘ಭೋಪಾಲ ‘ ಎಂದು ಹೇಳಿದೆ. ‘ನೀವು? ಎಂದು ಮರು ಪ್ರಶ್ನೆ ಕೇಳಿದೆ. ” ಸಿಕಂದರಾಬಾದ ಎಂದು ಹೇಳಿದಳು. ಹಾ ಬೆಳಗ್ಗೆ ಎಲ್ಲ ನಿಮ್ಮೂರು ತಲುಪಿ ಬಿಡ್ತೀರಿ, ಹೌದು ಎಂದು ತಲೆಯಾಡಿಸಿದಳು. ಆ ಸ್ಟೇಷನಲ್ಲಿ ಟ್ರೈನ್ ನಾಲ್ಕು ನಿಮಿಷ ಮಾತ್ರ ನಿಲ್ಲುತ್ತದೆ ಬೇಗಬೇಗ ಇಳಿ ಬೇಕು, ಅವಳು ಹೌದು….ನೀವು ಭೋಪಾಲ್ ಗೆ ರೆಗ್ಯುಲರ್ ಆಗಿ ಹೋಗ್ತಾ ಇರ್ತೀರಾ ? ಅಂತ ಕೇಳಿದಳು. ಎಸ್ ಆಫೀಸ್ ವರ್ಕ್ ಅಂತ ಚುಟುಕಾಗಿ ಹೇಳಿ ಮುಗಿಸಿದ್ದೆ.

ಕೆಲವು ನಿಮಿಷಗಳ ಮೌನದ ನಂತರ ಥತ್!…. ಎಂದು ಎದ್ದು ನಿಂತು ನನ್ನ ಮಗುವಿನ ಡೈಪರ್ ಚೇಂಜ್ ಮಾಡುವ ಸಮಯ ಆಯ್ತು ಎನ್ನುತ್ತಾ ಲಗುಬಗೆಯಿಂದ ಮೇಲಿನ ಬರ್ತ್ನಲ್ಲಿದ್ದ ಮಗುವಿನ ಡೈಪರ್ ಬದಲಾಯಿಸತೊಡಗಿದ್ದಳು ಅನಿಸುತ್ತೆ, ನಾನು ಕತ್ತತೆತ್ತಿ ನೋಡುವ ಧೈರ್ಯ ಮಾಡಲಿಲ್ಲ, ” ರೀ ಮಿಸ್ಟರ್, ಆ ಬ್ಯಾಗನಲ್ಲಿ ಇರುವ ಪ್ಯಾಕ್ ಕಟ್ ಮಾಡಿ ಡೈಪರ್ ತೆಗೆದುಕೊಡ್ತೀರಾ?” ಅಂತ ನಿಂತಲ್ಲೇ ಕೇಳಿದಳು.

 ಇದೇನು ಆರ್ಡರ್ ಮಾಡ್ತಿದ್ದಾಳೆ ಅನ್ಕೊಂಡೆ, ಆದರೂ ಒಂಟಿ ತಾಯಿ ಅನ್ಕೊಂಡು ಓಕೆ, ! ಎಂದು ಕುಳಿತಲ್ಲೇ, ಅವಳ ಬ್ಯಾಗ್ ಗೆ ಕೈ ಹಾಕಿ ಡೈಪರ್ ಪ್ಯಾಕೆಟ್ ಒಂದನ್ನ ತಗೆದು ಕೊಟ್ಟೆ, ಅಷ್ಟರಲ್ಲಿ ಅದರಲ್ಲಿದ್ದ ಬಟ್ಟೆಯೊಂದು ಕೆಳಗೆ ಬಿತ್ತು. ಓಹ್ ನೋ…! ಕೆಳೆಗ್ಯಾಕೆ ಬೀಳಿಸಿದ್ರಿ, ಅದು ನನ್ನ ‘ಚಿಟ್ಟೆ’ಗೆ ಹಾಲು ಕುಡಿಸಿ, ಬಾಯಿ ಒರೆಸುವ ಬಟ್ಟೆ. ಸ್ಟೇರಿಲೈಸ್ ಮಾಡಿದ್ದು. ಛೆ… ವೇಸ್ಟ್ ಮಾಡಬಿಟ್ರಿ ಎಂದು ತುಸು ಕೋಪದಿಂದ ನುಡಿದಳು. ನಾನು ಒಂದು ಕ್ಷಣ ತಬ್ಬಿಬ್ಬು. “ಸೊ ಸಾರೀ ಮೇಡಂ”.ಎಂದು ವಿನೀತನಾಗಿ ಹೇಳಿದೆ. ಇಟ್ಸ್ ಓಕೆ…! ಇನ್ನೊಂದು ಇರಬೇಕು, ನಾಳೆ ಊರು ತಲುಪೋವರೆಗೂ ಬೇಕಾಗುತ್ತೆ ಅದಕ್ಕೆ ಹೇಳಿದೆ ಎಂದಳು.

ವಿಷಯ ಬದಲಾಯಿಸುತ್ತಾ “ಮತ್ತೆ… ಎಲ್ಲಿ ನಿಮ್ಮ ಹಸ್ಬೆಂಡ್ ಬಂದಿಲ್ವಾ ನಿಮ್ಮ ಜೊತೆ? ಅಂತ ಕೇಳಿದೆ. ಅವಳು ಇಲ್ಲಾ ಅವರು ಬಿಸಿನೆಸ್ ನಲ್ಲಿ ಬ್ಯುಸಿ,”ನಾನು ಅಮ್ಮನ ಮನೆಗೆ ಹೋಗ್ತಾ ಇದ್ದೀನಿ”. ಅಂತ ಹೇಳಿದಳು. ಕಿಟಕಿಯ ಗಾಳಿಗೆ ಅವಳು ಮುಂಗುರುಳು ಅವಳ ಕೆನ್ನೆಯನ್ನು ಕಾಡುತ್ತಿತ್ತು, ಅದನ್ನು ಆಗಾಗ ತೋರು ಬೆರಳನಿಂದ ಸರಿಸಿಕೊಳ್ಳುತ್ತಾ. ನನ್ನ ‘ಚಿಟ್ಟೆ’ ಗೆ ಹುಷಾರಿಲ್ಲ, ಲೂಸ್ ಮೋಶನ್, ಬೆಳೆಗ್ಗೆಯಿಂದ ಹೊಟ್ಟೆಗೆ ಏನೂ ತೊಗೊಂಡಿಲ್ಲ ಎಂದು ಖೇದದಿಂದ ಹೇಳಿದಳು.

 “ಓಹ್ ಹೌದಾ, ಏನ್ ಹೆಸರು? ‘ಚಿಟ್ಟೆ’ ನಾ ಎಂದು ಆಶ್ಚರ್ಯದಿಂದ ನಾನು ಕೇಳಿದ್ದೆ. ಅದಕ್ಕೆ ಅವಳು ಹೌದು ಚಿಟ್ಟೆ ಅಂದಳು. ಮುದ್ದಾಗಿದೆ ಎಂದೆ. ಥ್ಯಾಂಕ್ಸ್ ಹೇಳುತ್ತಾ. ತಕ್ಷಣ ಮತ್ತದೇ ಆತಂಕದ ಛಾಯೆ ಹೊತ್ತ ಮುಖ, ಹಾ…, ನೆನಪಾಯ್ತು, ಚಿಟ್ಟೆಗೆ ಬೆಳಿಗ್ಗೆ ಮೈ ಬಿಸಿ ಇತ್ತು ಥರ್ಮಾಮೀಟರ್ ನಲ್ಲಿ ಚೆಕ್ ಮಾಡ್ಬಿಡ್ತೀನಿ. ಅಂತ ಮತ್ತೆ ಎದ್ದಳು. ಔಷಧಿ ಹಾಕಿದನಲ್ಲ ಎಷ್ಟು ಗಾಢನಿದ್ದೆ ಮಾಡ್ತಾ ಇದ್ದಾಳೆ ನೋಡಿ ನನ್ನ ಚಿಟ್ಟೆ ಎನ್ನುತ್ತಾ ವ್ಯಾನಿಟಿ ಬ್ಯಾಗ್ ನಿಂದ ಥರ್ಮಾಮೀಟರ್ ತೆಗೆದು ಚೆಕ್ ಮಾಡಿದಳು. ಸರಿ ಇದೆ, ಮತ್ತೆ ಜ್ವರ ಬಂದಿಲ್ಲ ಸಧ್ಯ”! ಎಂದಳು. ಅದಕ್ಕೆ ಮುಗುಳ್ನಕ್ಕು ಸುಮ್ಮನಾದೆ.

 ಯಾಕೆ ನೀವು ಅವಳನ್ನು ಪಕ್ಕದಲ್ಲಿ ಮಲಗಿಸಿಕೊಳ್ಳಬಾರ್ದು…? ರಾತ್ರಿ ಮೇಲಿನಿಂದ ಉರಳಿ ಬಿದ್ದರೆ ಏನ್ ಮಾಡ್ತೀರಾ…? ಎಂದೆ, ಅದಕ್ಕೆ ಅವಳು, ಒಮ್ಮೆಲೆ ಕೋಪಗೊಂಡು ಅದೇನು ನೀವು ಹಾಗೆಲ್ಲ ಅಶುಭವಾಗಿ ಮಾತನಾಡ್ತೀರಾ, ಇಲ್ಲಿ ನೋಡಿ ನೆಟ್ ಅಟ್ಯಾಚ್ಮೆಂಟ್ ಕಟ್ಟಿದೀನಿ. ಅದರಿಂದ ಚಿಟ್ಟೆ ಬೀಳುವುದಿಲ್ಲ. ನಾನು ಮಲಗೋ ಮಂಚಕ್ಕೂ ಹೀಗೇ ಕಟ್ಟೋದು, ಕಣ್ಣಲ್ಲಿ ಕಣ್ಣಿಟ್ಟು ಕಾಪಾಡ್ತೀನಿ, ನನ್ನ ಜೀವದ ಕುಡಿ ನನ್ನ ಮಗು, ಅವಳಿಗೆ ಏನಂದ್ರೆ ಏನೂ ಆಗದ ಹಾಗೆ ನಿಡ್ಕೋತೀನಿ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು.. ಅಯ್ಯೋ ಸೊ ಸಾರಿ…! ನಾನು ಹಾಗೆಲ್ಲ ಅನಬಾರದಿತ್ತು ತಪ್ಪಾಯ್ತು ಕ್ಷಮಿಸಿ ಎಂದು ಸುಮ್ಮನಾದೆ. ಒಂದು ನಾನು ಅತಿಯಾಗಿ ಮಾತನಾಡುತ್ತಿದ್ದೇನೆ ಅಥವಾ ಅವಳು ಅತಿಯಾಗಿ ರಿಯಾಕ್ಟ್ ಮಾಡುತ್ತಿದ್ದಾಳೆ, ಯಾವದೋ ಒಂದು ನಡೀತಿದೆ, ಯಾವ್ದು ಅಂತ ಅರ್ಥವಾಗ್ತಿರ್ಲಿಲ್ಲ. .

ಸುಮ್ಮನೆ ಇವಳ ಸಹವಾಸವೇ ಬೇಡ ಎಂದು ಮತ್ತೆ ಲ್ಯಾಪ ಟಾಪನಲ್ಲಿ ಮುಳುಗಿದೆ. ಟೀಸಿ ಬಂದು ಹೋದ ಮೇಲೆ, ಮತ್ತೆ ಅವಳೇ ಈ ಬಾರಿಯೂ ಶುರುವಿಟ್ಟಳು , ನನ್ನ ಚಿಟ್ಟೆ ತುಂಬಾ ಚೂಟಿ, ಅವಳು ನಕ್ಕರೆ ಹಾಲು ಸಕ್ಕರೆ ಗೊತ್ತಾ, ಅವಳಿಗೆ ಈಗ ಹುಷಾರಿಲ್ಲ, ಇಲ್ಲಾಂದ್ರೆ ಇಲ್ಲಿ ಎಲ್ಲ ಓಡಾಡಿ ಬಿಡುತ್ತಿದ್ಲು ಗೊತ್ತಾ. ಅವಳಿಗೆ ನನ್ನ ಅಮ್ಮ ಅಂದರೆ ಬಲು ಪ್ರೀತಿ, ಅಜ್ಜಿ ಅಜ್ಜಿ ಅಂತ ಓಡ್ತಾಳೆ, ಓಹ್ ಎಷ್ಟು ವರ್ಷ ನಿಮ್ಮ ಚಿಟ್ಟೆಗೆ..? ಎಂದು ಸಹಜತೆಯಿಂದ ಕೇಳಿದೆ, ಅಯ್ಯೋ… ನನ್ನ ಚಿಟ್ಟೆ ಈಗ ನಿಮ್ಮ ಚಿಟ್ಟೆನೂ, ನೀವು ಅವಳಿಗೆ ಡೈಪರ್ ಹಾಕಲು ಹೆಲ್ಪ್ ಮಾಡಿದ್ರಿ ಅಲ್ವಾ ಎಂದಳು. ಹೌದು, ಹೇಳಿ ಚಿಟ್ಟೆಗೆ ಎಷ್ಟು ವರ್ಷ? ಎಂದು ಮತ್ತೆ ಪ್ರಶ್ನೆಸಿದಾಗ, ಈ ಗೌರಿ ಹಬ್ಬಕ್ಕೆ ಎರಡು ವರ್ಷ ತುಂಬುತ್ತೆ ಎನ್ನುತ್ತಾ ಒಮ್ಮಲೇ ಖಿನ್ನಳಾದಳು.

ಯಾಕೆ ಏನಾಯ್ತು ಮೇಡಂ ಎಂದು ಕೇಳಿದಾಗ, ಏನಿಲ್ಲ ನೀವು ನನಗೆ ಮೇಡಂ ಅಂತ ಯಾಕೆ ಕರಿತೀರಾ, ‘ಸಾಯಿಸೋನಾ’ ನನ್ನ ಹೆಸರು. ಓಹ್.. ನಿಮ್ಮದೂ ನಿಮ್ಮ ಮಗಳ ಹಾಗೆ ಯುನಿಕ್ ಹೆಸರು ಎಂದೆ. ಅಷ್ಟರಲ್ಲಿ ಟ್ರೈನ್ ಸಿಬ್ಬಂದಿ ಊಟ ಕೊಟ್ಟು ಹೋದ, ಅದಕ್ಕೆ ಅವಳು ನಂಗೆ ಊಟ ಬೇಡ ಎಂದು ತಿರುಗಿ ಕಳುಹಿಸಿಬಿಟ್ಟಳು.

ಯಾಕೆ ಊಟ ಮಾಡಲ್ವಾ ಅಂದರೆ, ಇಲ್ಲ Iam a feeding mother, ಹೊರಗಡೆ ತಿಂದ್ರೆ ಮಗುವಿಗೆ ಇನ್ಫೆಕ್ಷನ್ ಆಗೋ ಚಾನ್ಸ ಇರತ್ತೆ ಎಂದಾಗ, ಓಹ್ಸರಿ, ನನ್ನ ಹತ್ರ ಬಾಳೆ ಹಣ್ಣು ಇದೆ ಕೊಡ್ಲಾ? ಎಂದು ಕೇಳಿದಾಗ ಹೂ ಕೊಡಿ ಎಂದಳು.

ಎರಡೂ ಬಾಳೆ ಹಣ್ಣು ಗಬ ಗಬನೇ ತಿಂದಳು. ಪಾಪ ಹಸಿವಾಗಿತ್ತನಿಸುತ್ತೆ. ಮಗುವಿನ ತಾಯಿ, ಅದರ ಆರೋಗ್ಯಕ್ಕೆ ಎಷ್ಟೊಂದು ತೊಂದರೆಗಳನ್ನು ಸಹಿಸಿ ಕೊಳ್ಳಬೇಕು ಎಂದು ಮನಸ್ಸಿನಲ್ಲಿ ಮರುಗಿದ್ದೆ. ಮತ್ತೊಂದು ಸೇಬು ಹಣ್ಣು ಕೊಟ್ಟೆ, ಅದನ್ನು ತನ್ನ ಬ್ಯಾಗ್ ಅಲ್ಲಿ ಇಟ್ಟುಕೊಂಡಳು. ಅಷ್ಟರಲ್ಲೇ ಅವಳು ಎರಡು ಬಾರಿ ಚಿಟ್ಟೆ, ಹೊದಿಕೆ ಸರಿ ಮಾಡಿದ್ದಳು. ಟೋಪಿ ತಗೆದು ಬ್ಯಾಗನಲ್ಲಿ ಇಟ್ಟಳು. 

 ಸಾಯಿಸೋನಾ ಕೂತಲ್ಲೇ ತೂಕಡಿಸುವ ಹಾಗೆ ಕಂಡಾಗ,” ನೀವು ಮಲಗಿಕೊಳ್ಳಿ, ನನಗೆ ನಿದ್ದೆ ಬಂದಿಲ್ಲ, ಚಿಟ್ಟೆ ಎದ್ದರೆ, ನಿಮ್ಮನ್ನ ಎಬ್ಬಿಸುತ್ತೇನೆ” ಅಂದೆ. ಅದಕ್ಕೆ ಅವಳು ಮತ್ತೆ ರೈಸ್ ಆಗಿ, ನನಗೆ ಅಪರಿಚಿತರ ಮೇಲೆ ನಂಬಿಕೆ ಇಲ್ಲ, ಚಿಟ್ಟೆ ವಿಷಯದಲ್ಲಿ, ಸ್ವತಃ ನನ್ನ ಮೇಲೆ ನನಗೆ ನಂಬಿಕೆ ಇಲ್ಲ, ಅದಕ್ಕೆ ಅಲ್ವಾ, ನಿದ್ದೆ ಬಂದರೆ ಈ ಪಿನ್ ಕೈಗೆ ಚುಚ್ಚಿ ಕೊಳ್ಳುತ್ತೇನೆ ” ಅಂತ ಕೈ ತೋರಿಸಿದಳು. ಗಾಯದ ಕಲೆ ಕಂಡಿತು, ಅದೇಕೂ ವಿಚಿತ್ರವಾಗಿದೆಯಲ್ಲಾ ಎಂದೆಣಿಸಿದೆ. ತಾಯಿ ಪ್ರೀತಿ ಅಂದ್ರೆ ಹೀಗೆ ಇರಬೇಕೇನೋ, ತಾಯಿಯ ಆರೈಕೆ ನನಗೆಲ್ಲಿ ನೆನಪಿದೆ. ಮದುವೆಯಂತಾದರೆ ಇಂಥ ಹುಡುಗಿನ್ನ ಮದುವೆಯಾಗಬೇಕು. ಶೀ ಇಸ್ ಸೋ ಕೆರಿಂಗ್… ತನ್ನ ಗಂಡನಿಗೆ ಎಷ್ಟು ಕೇರ್ ಮಾಡುತ್ತೀರಬೇಕಲ್ಲವೇ? ‘ಲಕ್ಕಿ ಮ್ಯಾನ್’ ಎಂದುಕೊಂಡೆ.

ಅಷ್ಟರಲ್ಲಿ, ಅವಳು ಮಗುವಿಗೆ ಫೀಡ್ ಮಾಡಬೇಕು, ನೀವು ಸ್ವಲ್ಪ ಆಚೆ ಹೋಗ್ತೀರಾ ಎಂದು ಕೇಳಿದಳು. ಅದಕ್ಕೆ ನಾನು, ಹೌದಾ ಸರಿ ಎಂದು, ಹೊರನಡೆದೆ. ಹತ್ತು ನಿಮಿಷ ಬಾಗಿಲ ಬಳಿ ಫೋನ್ scroll ಮಾಡ್ತಾ ನಿಂತೆ. ಸಿಳ್ಳನೇ ತಂಪಾದ ಗಾಳಿ ಮೈ ಸೋಕಿತು, ಮನದ ತುಂಬೆಲ್ಲ ಸೋನಾ ಆವರಿಸಿ, ಹಲವು ಪ್ರಶ್ನೆಗಳು ತಲೆ ಕೊರೆದವು, ಒಳ್ಗ ಹೋದ್ಮೇಲೆ ಅವಳ ಮಗುವನ್ನು ಒಮ್ಮೆ ನೋಡಬೇಕು, ಅಮ್ಮ ಇಷ್ಟು ಮುದ್ದಾಗಿದ್ದಾಳೆ ಅಂದ್ರೆ ಮಗು ಎಷ್ಟು ಮುದ್ದಾಗಿರಬೇಕಲ್ವಾ ಎಂದುಕೊಳ್ಳುತ್ತಾ ಇದ್ದಾಗ…. ಅಳುವ ಶಬ್ದ ಕೇಳಿ ಒಳ ಹೋದೆ, ಸಾಯಿಸೋನಾ ಅಳ್ತಾ ಇದ್ದಳು. ಯಾಕೆ ಏನಾಯ್ತು? ಅದಕ್ಕೆ…. ಅವ್ಳು ಮಗು ಅಳ್ತಾ ಇದೆ ವುಡ್ವರ್ಡ್ಸ್ ಕೊಡಿ ಎಂದು ನಾಟಕೀಯವಾದ ದನಿಯಲ್ಲಿ ಹೇಳಿದಳು, ನಾನು ಗಾಬರಿ ಆಗಿದ್ದು ನೋಡಿ, ಜೋರಾಗಿ ನಕ್ಕು ಬಿಟ್ಟಳು. ಎದೆ ಧಸ್ಸ್..! ಎಂದಿತು. ಓಹ್ ಏನ್ ಜೋಕ್ ಮಾಡ್ತೀರಾ ನೀವು ನಡು ರಾತ್ರಿಲಿ ಎನ್ನುತ್ತಾ ಹುಸಿ ಮುನಿಸು ತೋರಿದೆ, ನಗು ಬರಲಿಲ್ಲವಾದರೂ, ಅವಳ ನಗುವಿನಲ್ಲಿ ಜೊತೆಯಾದೆ. 

ಆಗ್ಲೇ ರಾತ್ರಿ ಮೀರಿತ್ತು, ಸಿಕಂದರಾಬಾದ ಬರಲು ಇನ್ನೆರಡು ಗಂಟೆ ಬಾಕಿ, ನನಗೆ ಬೇಡವೆಂದರೂ ನಿದ್ದೆ ಬಂದಿತು, ಕಣ್ಣು ತೆರೆದಾಗ ಕಂಡದ್ದು……….

“ ಬಿಡಿ ನನ್ನ ಬಿಡಿ ನಾನೆಲ್ಲೂ ಬರಲ್ಲ ಎಂದು ಕಿರಿಚಿ.. ಕಿರಿಚಿ ಅಳುತ್ತಿದ್ದಳು ಸೋನಾ, ಅವಳ ಧ್ವನಿ, ಅವಳ ಅವಸ್ಥೆ ನೋಡಿ ನನಗೆ ಕರಳು ಕಿವುಚಿದಂತಾಯಿತು. ನಾನು ನಿದ್ದೆಗಣ್ಣಲ್ಲಿ ಕನಸು ಕಾಣ್ತಾ ಇದ್ದೀನಾ ಒಂದು ಕ್ಷಣ ಅನಿಸಿದುಂಟು, ಆದರೆ ಅದು ಕನಸಲ್ಲ ನನ್ನ ಕಣ್ಣ ಮುಂದೆ ನಡೆಯುತ್ತಿದ್ದ ದೃಶ್ಯ .ಇಬ್ಬರು ಮಹಿಳಾ ರೈಲ್ವೆ ಪೊಲೀಸರು ಹಾಗು ಇಬ್ಬರು ನರ್ಸ್, ಒಬ್ಬ ವ್ಯದ್ಯರು ಅವಳನ್ನು ಬಲವಂತವಾಗಿ ಏಳದುಕೊಂಡು ಹೋಗುತ್ತಿದ್ದರು. ಟ್ರೈನ್ ಹೆಚ್ಚು ಹೊತ್ತು ನಿಲ್ಲೋದಿಲ್ಲ ಅಂತ ಗೊತ್ತಿತ್ತು, ಡಾಕ್ಟರ್ ಹಾಕಿಕೊಂಡ ಬ್ಯಾಡ್ಜ್ ಮೇಲೆ ಡಾ ಕನ್ನಿಕಾ ಅಂತ ಬರೆದಿತ್ತು. ಪೊಲೀಸರು ಟ್ರೈನ್ ಚೈನ್ ಏಳದು ನಿಲ್ಲಿಸಿದ್ದರು, ಯಾಕೆ ಡಾಕ್ಟರ್ ಏನಾಯ್ತು, ಬಿಡಿ ಅವರನ್ನ ಯಾಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದೀರಾ ಎಂದು ಉದ್ವೇಗದಿಂದ ಪ್ರಶ್ನೆ ಮಾಡಿದ್ದೆ. 

ಅವರೆಲ್ಲ ಏನೂ ಉತ್ತರಿಸದೆ, ಸೋನಾಳನ್ನು ಹಿಡಿದುಕೊಂಡು ಟ್ರೈನ್ ಇಳಿದುಬಿಟ್ಟರು, ನಾನೂ ನನ್ನ ಬ್ಯಾಗ ಕುಂಕುಳದಲ್ಲಿ ಹೊತ್ತುಕೊಂಡು ಅವರನ್ನು ಹಿಂಬಾಲಿಸಿದೆ, ಅಕ್ಷರಶಃ ಓಡಿದೆ… ನನ್ನ ನೋಡಿದ ಸೋನಾ ತಕ್ಷಣವೇ ಅವರಿಂದ ಬಿಡಿಸಿಕೊಂಡು ನನ್ನನ್ನು ಬಿಗಿದಪ್ಪಿಕೊಂಡಳು. ಪ್ಲೀಸ್ ನನ್ನ ಉಳಿಸಿ, ನನ್ನನ್ನು ನನ್ನ ಚಿಟ್ಟೆಯಿಂದ ದೂರ ಮಾಡ್ತಾರಿವರು, ನನಗೆ ಇವರ ಜೊತೆ ಹೋಗೋದಕ್ಕೆ ಇಷ್ಟವಿಲ್ಲ, ನಾನು ನಿಮ್ಮ ಜೊತೆ ಬರಬಹುದಾ ಪ್ಲೀಸ್. ನನಗೆ ನಿಮ್ಮ ಮನೆಯ ಮೂಲೆಯಲ್ಲಿ ಜಾಗ ಕೊಟ್ಟರು ಪರ್ವಾಗಿಲ್ಲ, ನನ್ನ ಚಿಟ್ಟೆಗೆ ಹಾಲು ಕುಡಿಸುತ್ತ ಅಲ್ಲೆ ಇರ್ತೀನಿ, ನಾನು ಯಾರಿಗೂ ತೊಂದ್ರೆ ಕೊಡಲ್ಲ… ನಿಮ್ಮ ಕಾಲಿಗೆ ಬೀಳ್ತೀನಿ, ದಮ್ಮಯ್ಯ ಅಂತಿನಿ, ಇವರ ಜೊತೆ ಮಾತ್ರ ನನ್ನ ಕಳಿಸ್ಬೇಡಿ, ಇವರು ತುಂಬಾ ಕೆಟ್ಟವರು, ನಂಗೆ ಶಾಕ್ ಕೊಡ್ತಾರೆ, ನಂಗೆ ಸೂಜಿ ಚುಚ್ಚತ್ತಾರೆ, ನಂಗೆ ಮಂಚಕ್ಕೆ ಕಟ್ಟಿ ಹಾಕ್ತಾರೆ, . ನನ್ನ ಮತ್ತು ನನ್ನ ಎಳೆಯ ಕಂದಮ್ಮನನ್ನು ಕೊಂದು ಬಿಡುತ್ತಾರೆ ಅಂತ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳು ಇಷ್ಟೆಲ್ಲ ಹೇಳುವ ಹೊತ್ತಿಗೆ ,ಡಾ ಹಿಂದಿನಿಂದ ಅವಳ ಕೈಗೆ ಇಂಜೆಕ್ಷನ್ ಒಂದು ಚುಚ್ಚಿದ್ದರು. ಸೋನಾ ನಿಂಗೆ ಇಲ್ಲಿ ಬರೋದಕ್ಕೆ ಯಾರು ಹೆಲ್ಪ್ ಮಾಡಿದ್ರು ನಿಜ ಹೇಳು ಎಂದು ಡಾಕ್ಟರ್ ಕೇಳಿದಾಗ, ಪ್ರಸಾದ್ ನನ್ನ ಗಂಡ, ಅವನೇ ನಂಗೆ ಅಮ್ಮನ ಮನೆಗೆ ಹೋಗಿಬಿಡು ಎಂದು ಹೇಳಿದಾ ಎನ್ನುತ್ತಾ ಕಣ್ಣು ಮುಚ್ಚುತ್ತಾ… ಪ್ರಜ್ಞಹೀನ ಸ್ಥಿತಿಗೆ ಬಂದಳು, ನನಗೆ ಕೈ ಸನ್ನೆ ಮಾಡಿ, ಸಹಕರಿಸಲು ಹೇಳಿದರು. ನಾನು ಅವಳನ್ನು ನನ್ನ ತೋಳುಗಳಲ್ಲಿ ಬಂಧಿಸಿದ್ದೆ, ಅವಳ ಹಣೆಯ ಮೇಲಿನ ಮುಂಗುರುಳು ಸರಿಸಿದೆ, ಔಷಧಿಯ ಪರಿಣಾಮವಾಗುತ್ತಿದ್ದಂತೆ, ನನ್ನ ಕೈ ಮೇಲೆ ಹಾಗೆ ಕಣ್ಣು ಮುಚ್ಚಿ, ಪೂರ್ತಿಯಾಗಿ ಮಲಗಿ ಬಿಟ್ಟಳು. ಇನ್ನೂ ಸ್ಪಷ್ಟವಾಗಿ ಚಿಟ್ಟೆ ಚಿಟ್ಟೆ… ಎಂದು ಕನವರಿಸುತ್ತಿದ್ದಳು.ಸ್ಟೇಷನಲ್ಲಿ ಜನ ನೆರೆದು ನೋಡುತ್ತಿದ್ದರು

ಸ್ಟ್ರೆಚರ್ ನಲ್ಲಿ, ಸಾಯಿಸೋನಾಳನ್ನು ಮಲಗಿಸಿಕೊಳ್ಳುತ್ತಾ ವೈದ್ಯರ ಟೀಮ್ ಕಾರ್ಯಯೋನ್ಮುಖವಾಯಿತು, ಅವಳ ಕೇರಳ ಸೀರೆಯ ಬಂಗಾರ ಬಣ್ಣದ ಸೆರಗು ಗಾಳಿಗೆ ನಲಿದಾಡುತ್ತಿತ್ತು. ಮುಚ್ಚಿದ ಕಣ್ಣಂಚಿನಿಂದ, ಕಣ್ಣೀರ ಹನಿಯೊಂದು ಇಣುಕುತ್ತಿತ್ತು.

ಅವಳ ಚಿಂತಾಜನಕ ಸ್ಥಿತಿ ನೋಡಿ ಮನ ಮರುಗಿತು. ಅಲ್ಲೆ ನಿಂತಿದ್ದ ವೈದ್ಯರ ಬಳಿ ಹೋಗಿ ಮಾತನಾಡಿಸಿದೆ. ಅವರು ಒಬ್ಬ ಸೈಕಿಯಾಟ್ರಿಸ್ಟ್. ಗಾಬರಿಯಾಗಬೇಡಿ ಮಿಸ್ಟರ್…ಹಾ ನಿಮ್ಮ ಹೆಸರೆನಂದ್ರಿ… ಇವರೇ… ಎಂದು ನನ್ನ ಕೇಳಿದಾಗ ನನ್ನ ಪರಿಚಯ ಮಾಡಿಕೊಟ್ಟೆ, ಡಾಕ್ಟರ್ ಇದೆಲ್ಲ ಹೇಗಾಯಿತು, ಯಾಕೆ ಇಂತಹ ಕಾಯಿಲೆ ಬರುತ್ತದೆ. . ಎಂದಾಗ ಡಾಕ್ಟರ್, ಹೇಳಲು ನಿರಾಕರಿಸಿದರು, ಸಾರೀ ಮಿಸ್ಟಟರ್ ಇದೆಲ್ಲ ಹೇಳಬಾರದು ನಮ್ಮ ವೃತ್ತಿ ನಿಯಮದ ವಿರುದ್ಧ ಎಂದರು. ಆದರೂ ನಾನು ಪಟ್ಟು ಬಿಡದಾಗ, ಬನ್ನಿ ನನ್ನ ಜೊತೆ, ಆಸ್ಪತ್ರೆಗೆ ಹೋಗುತ್ತಾ ಕಾರಲ್ಲಿ ಮಾತ್ನಾಡೋಣ ಎಂದು ಕರೆದುಕೊಂಡು ಹೋದರು, ಆಗ ಅವರು ಸಾಯಿಸೋನಾಳ ಕಥೆಯನ್ನು ಹೇಳಿದರು.

ಸಾಯಿಸೋನಾ ಬೆಂಗಳೂರಿನ ಮೆಂಟಲ್ ಅಸೈಲಂನ ಇನ್ ಪೇಷಂಟ್.ದಾಖಲಾಗಿ ಒಂದು ವರ್ಷವಾಗಿತ್ತಂತೆ, ಮಾನಸಿಕ ರೋಗಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು She is suffering from Postpartum ಸೈಕಾಸಿಸ್ (depression). ಅಂದರೆ ‘ಬಾಣಂತಿ ಖಿನ್ನತೆ’ ಎಂದು ನಾವು ಆಡು ಭಾಷೆಯಲ್ಲಿ ಹೇಳುತ್ತೇವೆ. ಇವಳು, ಆಸ್ಪತ್ರೆಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಅಲ್ಲಿಂದ ಓಡಿ ಟ್ರೈನ್ ಹತ್ತಿ ಬಂದಿದ್ದಳು. ಇವಳು ಸಾಮಾನ್ಯವಾಗಿ ಆರೋಗ್ಯವಾಗಿಯೇ ಕಾಣಿಸುತ್ತಾಳೆ, ಯಾರಿಗೂ ಅವಳು ಮನೋರೋಗಿ ಅನಿಸುವುದೇ ಇಲ್ಲ. ಗುಣಮುಖರಗವಾದಗಿದ್ದಾಳೆ ಅನಿಸುವಾಗ, ಮರುಕ್ಷಣವೇ ಅವಳು ವಿಲಕ್ಷಣವಾಗಿ ಆಡುತ್ತಾಳೆ. ಅದಕ್ಕೆ ಅವಳನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತ್ತೇವೆ. ಆದರೂ ಅವಳು ತಪ್ಪಿಸಿಕೊಂಡಳು. ಇವಳು ತಪ್ಪಿಸಿಕೊಳ್ಳಲು, ಈ ಬಾರಿ ಗಂಡನ ಕೈವಾಡವಿದೆ ಅನಿಸುತ್ತೆ, ಅವಳ ಕೊರಳಲ್ಲಿ ಇರುವ ಬಂಗಾರದ ಸರಕ್ಕೆ ಒಂದು ಚಿಪ್ ಅನ್ನು ಹಾಕಿದ್ದೇವೆ, ಅದರಿಂದ ಅವಳಿರುವ ಲೊಕೇಶನ್ ಟ್ರ್ಯಾಕ್ ಮಾಡಬಹುದು. ಅದೇ ಸಿಗ್ನಲ್ ನಿಂದ ಅವಳನ್ನು ಬೆಂಬತ್ತಿ ಬಂದೆವು. ಆದರೆ, ಟ್ರೈನ್ ಬಿಟ್ಟಾಗಿತ್ತು. ರೈಲ್ವೆ ಸಿಬ್ಬಂದಿಯ ಸಹಾಯದಿಂದ. ಅವಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲು ಹೇಲ್ಪಾಯಿತು. ಒಹ್ ಹಾಗಾದ್ರೆ ಅವಳ ಚಿಟ್ಟೆ..ಆ…ಮಗು ಅದೆಲ್ಲಿ…? ಎಂದು ದಿಗಿಲಿನಿಂದ ಕೇಳಿದೆ ನೋ…! ಅವಳ ಮಗು ಅವಳಿಗೆ ದಕ್ಕಲ್ಲಿಲ್ಲ ಅಜಯ್, ಇವಳ ಪತಿ ಯಾರು ಗೊತ್ತೇ, ಬೆಂಗಳೂರಿನ ಪ್ರಸಿದ್ಧ ಉದ್ಯಮಿ ‘ಪ್ರಸಾದ್ ಭಾರದ್ವಾಜ’, ಇವಳ ಎಮ್ ಬಿ ಎ ಸಹಪಾಠಿ, ಇವಳ ರೂಪಕ್ಕೆ, ಆಸ್ತಿಗೆ ಮರಳಾಗಿ, ಪ್ರೀತಿಸಿ ಮದುವೆಯಾದವ, ಈಗ ಹುಚ್ಚು ಹಿಡಿದ ಹೆಂಡತಿಯಂದು ತಿರಸ್ಕರಿಸುತ್ತಿದ್ದಾನೆ, ಇವಳನ್ನು ಸುಧಾರಿಸಲು ಬಿಡುತ್ತಿಲ್ಲ, ಮಾನಸಿಕವಾಗಿ ಅವಳನ್ನು ಹಿಂಸಿಸುತ್ತಿದ್ದಾನೆ, ಬೇಕಂತಲೇ ಬೇರೆ ಹೆಣ್ಣುಮಕ್ಕಳ ಜೊತೆ ಸಲುಗೆಯಿಂದಿರುವ ವಿಷಯ ಹೇಳುತ್ತಾನೆ, ಅವಳನ್ನು ಟೀಕಿಸುತ್ತಾನೆ, ಬೈಯುತ್ತಾನೆ ಎಂದು ಹೇಳುತ್ತಿದ್ದ ವೈದ್ಯರನ್ನು ತಡವಿ, ಇವರ ತಂದೆ ತಾಯಿ, ತವರೂರು ಎಲ್ಲಿದೆ ಎಂದು ಕೇಳಿದಾಗ, ಇವಳಿಗೆ ಹೀಗೆಕಾಯಿತು, ಮಗು ಯಾಕೆ ಸತ್ತಿತು ಎಂದು ಕುತೂಹಲ ತುಂಬಿದ ಧ್ವನಿಯಿಂದ ಕೇಳಿದೆ, ಆಗ ವೈದ್ಯರು…

….ಸಾಯಿಸೋನಾ ತುಂಬಾ ಚಲುವೆ, ಶ್ರೀಮಂತ ಮನೆತನದ ಒಬ್ಬಳೇ ಮಗಳು, ತಮ್ಮ ಅಂತಸ್ತಿನ ತಕ್ಕಂತೆ ಶ್ರೀಮಂತ ಮನೆತನದ ಸೊಸೆಯಾಗಿ ಆಂದ್ರದಿಂದ ಬೆಂಗಳೂರಿಗೆ ಬಂದಿದ್ದಳು. ಮುದ್ದಿನ ಮಗಳು, ಮುಂದೆ ಮುದ್ದಿನ ಮಡದಿ, ಸುಖದ ಸುಪತ್ತಿಗೆಯಲ್ಲಿ ಬೆಳೆದು, ಮಹಾರಾಣಿಯಂತೆ ಗಂಡನ ಜೊತೆ ಇದ್ದಳು. ಮೂರು ನಾಲ್ಕು ವರ್ಷದ ಮೇಲೆ ತಾಯಿಯಾಗುವ ಸೌಭಾಗ್ಯ ಪ್ರಾಪ್ತಿಯಾಯಿತು. ವೈದ್ಯರು ಇವಳದು ‘ಪ್ರೇಶಿಯಸ್ಸ್ ಪ್ರೇಗನೆನ್ನ್ಸಿ’ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದ್ದರಂತೆ. ಅದರಂತೆ ಮಾಡಿದರು ಕೂಡ. ಆದರೂ ವಿಧಿ ಆಟ, ಏಳನೇ ತಿಂಗಳಿಗೆ ಹೆರಿಗೆ ನೋವು ಕಾಣಿಸಿಕೊಂಡು, ಸಿಸರಿನ್ ಮಾಡಿ ಮಗುವನ್ನು ತಗೆದರು. ತುಂಬಾ ಕಡಿಮೆ ತೂಕದ, ಇನ್ನೂ ಪೂರ್ತಿ ಬೆಳವಣಿಗೆ ಆಗದ ಪ್ರೀ ಮ್ಯಾಚ್ಯುರ್ ಹೆಣ್ಣು ಮಗು ಹುಟ್ಟಿತು. ತುಂಬಾ ಕಷ್ಟಪಟ್ಟು, ಮನೆಯನ್ನೇ ತೀವ್ರ ನೀಗಾ ಘಟಕವನ್ನಾಗಿ ಪರಿವರ್ತಿಸಿ, ಮಗುವಿಗೆ ಸಿರಿಂಜಿನಿಂದ ಹಾಲು ಕೊಟ್ಟು ಬೆಳಸಿದರು. ಮಗುವಿನ ಅವಸ್ಥೆ ನೋಡಿ, ಎಂದೂ ದುಃಖವನ್ನು ಅರಿಯದ ಸೋನಾ, ರಾತ್ರಿಯಲ್ಲ ನಿದ್ದೆ ಗೆಟ್ಟು, ಸರಿಯಾದ ಊಟ ತಿಂಡಿ ಮಾಡದೆ ಯಾವಾಗಲೂ ಮಗುವನ್ನೇ ನೋಡುತ್ತಾ ಕುಳಿತು ಬಿಡುತ್ತಿದ್ದಳು. ಎಷ್ಟು ಹೇಳಿದರು ಕೇಳದೆ ಕೊರಗುತ್ತಾ, ಸೊರಗುತ್ತಿದ್ದಳು. ಕೊನೆಗೆ ಇವರ ಪರಿಶ್ರಮದ ಪರಿಣಾಮವಾಗಿ, ಮಗುವಿಗೆ ಎರಡು ತಿಂಗಳಾಯಿತು.

ಆದರೆ ಮತ್ತೆ ವಿಧಿ ತನ್ನ ಕ್ರೂರ ಕಬಂಧ ಬಾಹುವಿನಿಂದಾ ಸೋನಾಳನ್ನು ಕಬಳಿಸಿತು, ಬಳಲಿ ಬೆಂಡಾದ ತಾಯಿ ತನ್ನ ಮಗುವಿಗೆ ರಾತ್ರಿ ಮಲಗಿಕೊಂಡೇ ಎದೆ ಹಾಲು ಕುಡಿಸುವಾಗ, ನಾಜುಕಿನ ಮಗುವಿಗೆ ಉಸಿರುಗಟ್ಟಿ ನಿದ್ದೆಯಲ್ಲೇ ಕೊನೆಯುಸಿರೆಳೆಯಿತು. ತಾಯಿಗೆ ಇದರ ಪರಿವಿರದೆ ನಿದ್ದೆಗೆ ಜಾರಿದ್ದಳು. ಬೆಳೆಗ್ಗೆ ಎದ್ದು ನೋಡಿದಾಗ ಸೋನಾಗೆ ಆಘಾತವಾಗಿತ್ತು. ಅವಳಿಗೆ ಅಳುವೇ ಬರಲಿಲ್ಲ. ಆ ದೃಶ್ಯನೋಡಿ ಪ್ರಜ್ಞೆ ತಪ್ಪಿ ಬಿದ್ದಳು. ಮೊದಲೆ ದೈಹಿಕವಾಗಿ ಅಶಕ್ತಳಾಗಿದ್ದಳು, ಮಾನಸಿಕವಾಗಿಯೂ ತೀವ್ರವಾಗಿ ಬೆಂದಳು. ಮಗುವಿಗೆ ಹಾಲು ಕುಡಿಸುವಾಗ ತನ್ನದೇ ತಪ್ಪಿನಿಂದ ಮಗುವನ್ನು ಕಳೆದುಕೊಂಡೆ ಎಂದು ತಪ್ಪಿತಸ್ಥ ಭಾವನೆಯಿಂದ ಹುಚ್ಚಿಯಂತಾದಳು. ‘ಹೋ’ ಎಂದು ಅಳುವದು, ಮರುಕ್ಷಣವೇ ನಗುವದು, ಊಟ ತಿಂಡಿ ಬಿಟ್ಟು, ಬರಿ ಮಗುವಿನ ಪರಿಕರಗಳನ್ನು ಮುಟ್ಟಿ ಮುಟ್ಟಿ ನೋಡಿ ಹಲಬುತ್ತಿದ್ದಳು. ಅವಳ ದಿನಚರಿಯಲ್ಲಿ ಮಗು ಎಂಬ ಕಲ್ಪನೆಯ ಕೂಸು ಅವಳ ಜೊತೆ ಇರುತ್ತಿತ್ತು. ತನ್ನ ಮಗುವಿಗೆಂದು ತಂದಿಟ್ಟ ನಿರ್ಜೀವ ಗೊಂಬೆ, ಅವಳ ಮಡಿಲ ಮಗುವಾಗಿತ್ತು.

ಓಹ್….ಅದೇ ಗೊಂಬೆ ಚಿಟ್ಟೆಗೆ ನಾನು ಬೇಬಿ ಬ್ಯಾಗನಿಂದ ಡೈಪರ್ ಕೊಟ್ಟಿದ್ದೆ, ಎಂದು ತಿಳಿಯಿತು. ಅವಳಿಗೆ ನಿದ್ದೆ ಬರಬಾರದು ಎಂದು ಕೈಗೆ ಪಿನ್ ಚುಚ್ಚಿಕೊಳ್ಳುತ್ತಿದ್ದಳು ಎಂದು ನೆನೆದು ಬಹಳ ದುಃಖವಾಯಿತು.

ವೈದ್ಯರ ಮುಂದುವರಿಸಿ, ಈ ಕಾಯಿಲೆ ಪ್ರತಿ ಐನೂರು ಮಹಿಳೆಯರಲ್ಲಿ ಒಬ್ಬರಿಗೆ ಬರುತ್ತದೆ . ಇವರು ಹಿಂಸಾತ್ಮಕವಾಗಿಯೂ ನಡೆದುಕೊಳ್ಳಬಹುದು, ಹಾಗಾದಾಗ ವಿದ್ಯುತ್ ತರಂಗಗಳನ್ನು ಕೊಡಬೇಕಾಗುತ್ತದೆ, ಮಾತ್ರೆ ಔಷಧೀಯ ಜೊತೆಗೆ ಕೌನ್ಸಿಲಿಂಗ್ ಅಗತ್ಯವಿದೆ. ಇದು ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಅವರ ಮನೆಯವರಿಗೆ ನಾವು ಯಾವುದೇ ಹೋಪ್ಸ್ ಕೊಟ್ಟಿಲ್ಲ. ಚಿಕಿತ್ಸೆ ಮಾತ್ರ ಮುಂದುವರಿಸುತ್ತಿದ್ದೇವೆ ಅಷ್ಟೇ. 

 ಅದಕ್ಕೆ ಬಾಣಂತಿಯರ ಆರೈಕೆ ತುಂಬಾ ಮಹತ್ವದ್ದಾಗಿದೆ. ಅವರ ಶರೀದಲ್ಲಿ ಹಾರ್ಮೋನ್ಸ್ ಗಳ ಏರಿಳಿತದಿಂದ, ಇಂತಹ ಡಿಪ್ರೆಶನ್ ಗೆ ಒಳಗಾಗಬಹುದು. ಅದಕ್ಕೆ ಅವರಿಗೆ ಒಳ್ಳೆಯ ಸತ್ವಯುತ ಆಹಾರ, ವಿಶ್ರಾಂತಿ ಅಗತ್ಯ. ಯಾವುದೇ ಅಹಿತಕರ ಘಟನೆ ಆಗದಿದ್ದರೂ ಕೂಡ ಇಂತಹ ಖಿನ್ನತೆಗೆ ಒಳಗಾಗಬಹುದು. ಇದಕ್ಕೆ ಅಜ್ಜಿಯರು ಆಯುರ್ವೇದದ ಪ್ರಕಾರ ಕಸ್ತೂರಿ ಮಾತ್ರೆಗಳನ್ನು ಬಾಣಂತಿಯರಿಗೆ ಕೊಡುತ್ತಿದ್ದರು, ಅದೂ ಕೂಡ ಒಳ್ಳೆಯ ಔಷದಿ, ಹೆಣ್ಣಿಗೆ ತಾಯಿಯಾಗುವುದು ಪುನರ್ಜನ್ಮವಿದ್ದಂತೆ. ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮಗು ಗರ್ಭದಲ್ಲಿ ಮೂಡಿದಾಗಿನಿಂದ ಮಗುವಿಗೆ ಒಂದು ವರ್ಷವಾಗುವ ತನಕ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾ ಹೋದರು, ಪತಿಯ ಪ್ರೀತಿ ಇಲ್ಲದೇ, ಪೋಷಕರ ಕಾಳಜಿ ಇಲ್ಲದೇ ನನ್ನ ಪೇಷಂಟ್ ಗುಣಮುಖಳಾಗದೇ ಆಸ್ಪತ್ರೆಯಲ್ಲೂ ಇರಲಾರದೆ ಒದ್ದಾಡುತ್ತಿದ್ದಾಳೆ. ನಮ್ಮ ಕಟ್ಟೆಚ್ಚರವನ್ನು ಭೇದಿಸಿ ಇಲ್ಲಿಯವರೆಗೂ ಬಂದಿದ್ದಾಳೆ ನೋಡಿ ಎಂದು ಸೋನಾಳ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದನ್ನು ಕೇಳಿ ನಾನು ನಿಂತಲ್ಲಿಯೇ ಕುಸಿದಿದ್ದೆ, ಕಲ್ಲಿನಂತೆ ಸ್ತಬ್ಧನಾಗಿಬಿಟ್ಟಿದ್ದೆ. ಆ ರೈಲಿನ ಪ್ರಯಾಣ ನೆನೆಸಿಕೊಂಡರೆ ಇಂದಿಗೂ ಮೈ ಜುಮ್ಮೆನ್ನುತ್ತದೆ.

ಸೋನಾಳ್ ಅಳು ಇನ್ನೂ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ.

ಅವಳ ಕಣ್ಣುಗಳಲ್ಲಿ ಹರಿಯದೆ ಉಳಿದ ಕಣ್ಣೀರಿನ ಮಂಜುಗಡ್ಡೆ ನನಗೆ ಈಗಲೂ ಕಾಣಿಸುತ್ತದೆ.

ಇಂದಿಗೂ ನನಗೆ ಅವಳ ಮಾತು, ಅವಳ ಅವಸ್ಥೆ ಸತಾಯಿಸುತ್ತಿದೆ, ಅವಳು ಬೇಗ ಮೊದಲಿನಂತಾಗಲಿ ಎಂದು ದೇವರಲ್ಲಿ ನಿತ್ಯ ಬೇಡಿಕೊಳ್ಳುತ್ತೇನೆ. ಅವಳಿಗೆ ಅವಳ ಚಿಟ್ಟೆಯಂಥ ಇನ್ನೊಂದು ಮಗು ಹುಟ್ಟಬಾರದೆ ಎಂದು ಮನದಲ್ಲಿ ಮರುಕ ಹುಟ್ಟುತ್ತದೆ, ನಾನು ಅವಳಿಗೆ ಹೇಗೆ ಹೆಲ್ಪ್ ಮಾಡಬಹುದು ಎಂದು ನೀವೇ ಹೇಳಿ….? ಈ ಕಥೆಗೆ ಸುಖಾಂತ್ಯ ಕೊಡಬಹುದೇ…? 

2 thoughts on “ಸುಖಾಂತ್ಯ ಸಿಗಬಹುದೇ…?”

  1. ಕಥೆ ಮೆಚ್ಚುಗೆ ಪಡೆದದ್ದು ಸರಿ ಓದಿದವರಿಗಷ್ಟೇ ತಿಳಿಯುತ್ತದೆ. ಇದು ಒಂದು ಕಥೆ ಅಂತ ತಿಳಿದು ಓದುವ ಬದಲು ಪಾತ್ರವನ್ನು ಅನುಭವಿಸಿ ಓದಿದಾಗ ಮತ್ತಷ್ಟು ಭಾವಸಮರ ಏರ್ಪಡುತ್ತದೆ. ಕಥಾನಾಯಕ ಅಜಯ್ ಪ್ರಯಾಣ ಆಕಸ್ಮಿಕವಲ್ಲದಿದ್ದರೂ ಸೋನಾಳ ಸಂಪರ್ಕ ಆಕಸ್ಮಿಕವಾಗಿರುತ್ತೆ. ಆದರೆ ಇಬ್ಬರ ನಡುವೆ ಯಾವುದೇ ಸಂಬಂಧವಿರದಿದ್ದರೂ ಮನಸ್ಸು ಸ್ಪಂದನೆಯತ್ತ ದಾರಿ ಹುಡುಕುತ್ತೆ. ಪ್ರಾರಂಭದಲ್ಲಿ ತಾಯಿ ತನ್ನ ಮಗುವಿಗೆ ತುಸು ಹೆಚ್ಚೇ ಕೇರ್ ತಗೊತಿದಾಳೆ ಅನ್ಸುತ್ತೋ ಹೊರತು ಮಧ್ಯಂತರದವರೆಗೂ ಅವಳು ಮೆಂಟಲಿ ಅಬ್ನಾರ್ಮಲ್ ಅನ್ನೋದು ಊಹಿಸುವುದು ಕಷ್ಟ. ಒಂದು ಹಂತದಲ್ಲಿ ಚಿಟ್ಟೆಯನ್ನ ತೋರದೇ ಹಾರೈಕೆ ಮಾಡುತ್ತಿದ್ದಾಗ ಇವಳಿಗೆ ಮತಿಭ್ರಮಣೆ ಆಗಿದೆಯೇನೋ ಎನಿಸುತ್ತೆ. ತಕ್ಷಣವೇ ಅಜಯ್ ಗೆ ಅವಳು ರೇಗಿದ್ದನ್ನ ನೋಡಿ, ಅಜಯ್ ಸಹ ನಾನೇ ಓವರಾಗಿ ಮಾತಾಡಿದ್ನಾ ಅಥವಾ ಅವಳೇ ಓವರಾಗಿ ರಿಯಾಕ್ಟ್ ಮಾಡ್ತಿದಾಳಾ ಅಂತಾ ಸ್ವತಃ ಅವನೇ ಕನ್ಫ್ಯೂಜಾದಾಗ ಇತ್ತ ನಾವೂ ಕನ್ಫ್ಯೂಜಾಗ್ತೀವಿ. ಬಾಣಂತಿಯರ ಹಾರೈಕೆ ಬಗ್ಗೆ ವೈದ್ಯರು ಕೊಡುವಂತಹ ಸಲಹೆ ಅತ್ಯಮೂಲ್ಯವಾಗಿದೆ. ಅಜ್ಜಿಯರು ಅನುಭವಾಧಾರಿತ ಪಾರಂಪರಿಕ ಔಷಧಿಯ ಬಗ್ಗೆಯೂ ಮೌಲ್ಯ ದೊರಕಿಸಿಕೊಟ್ಟಿದ್ದಾರೆ ಲೇಖಕಿ. ಇಲ್ಲಿಯೂ ದರಿದ್ರ ಹಣ ಆಸ್ತಿಯೇ ಮೇಲುಗೈ ಸಾಧಿಸಿದೆ. ನಾಯಕಿಗೆ ಪರಿಸರವೇ ಜಯತಂದುಕೊಡಬೇಕು ಎಂಬುದು ನನ್ನಂತಹ ಓದುಗನ ಒತ್ತಾಯ. ನಾಯಕ ಮನಸ್ಸು ಮಾಡಿದರೆ ವೈದ್ಯರೊಂದಿಗಿದ್ದು ಅವಳು ವಂಚಿತಳಾಗಿರೋ ಕುಟುಂಬದ ಪ್ರೀತಿಯನ್ನು ನೀಡಿದ್ದಲ್ಲಿ ಅವಳು ಎಲ್ಲರಿಗೂ “ಸುಖಾಂತ್ಯ ಸಿಗುವ” ಖಚಿತ ಉತ್ತರ ನೀಡುತ್ತಾಳೆ.
    ಒಂದು ಕಥೆ ಅಂತ್ಯವಾದರೂ ಅಂತ್ಯವಾಗದಂತೆ ಬರೆಯುವುದು ಒಂದು ಚಾಣಾಕ್ಷತನ. ಅದನ್ನು ನಮ್ಮ ಲೇಖಕಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಲೇಖಕಿಯವರು ಕಥೆಯ ಮೂಲಕ ನಿಷ್ಠಾವಂತ ಸಾಹಿತ್ಯ ಸೇವೆಗೆ ಹೆಜ್ಜೆ ಇರಿಸಿರುವುದು ನಮಗೆ ಕಂಡುಬರುವುದು “ಅಂತ್ಯದಲ್ಲಿ ಉತ್ತರವನ್ನು ಓದುಗರಿಗೇ ಮೀಸಲಿರಿಸಿರುವ ಪರಿಯಿಂದ” ಕ್ಲೈಮ್ಯಾಕ್ಸ್ ಯಾವುದೇ ಲೇಖಕರಿಗೆ ಸವಾಲು ಮತ್ತು ಕ್ರೆಡಿಟ್ ಜೋ಼ನ್ ಎನ್ನಬಹುದು. ಆ ಕ್ರೆಡಿಟ್ಟನ್ನು ತಾನೇ ಕೊಳ್ಳದೇ ಸಂಪೂರ್ಣ ನಿಸ್ವಾರ್ಥಿಯಾಗಿ ಓದುಗರಿಗೆ ಬಿಟ್ಟಿದ್ದಕ್ಕೆ ಅವರನ್ನು ನಮಿಸಲೇಬೇಕು..🙏
    ಒಂದೊಳ್ಳೆ ಭಾವನಾತ್ಮಕ ರೈಲು ಪ್ರಯಾಣವನ್ನು ನೀಡಿ ಉಪಯುಕ್ತ ಮಾಹಿತಿ/ಸಲಹೆಗಳನ್ನು ನೀಡಿ ಮೆಚ್ಚುಗೆ ಪಡೆದ ನಿಮಗೆ ಅಭಿನಂದನೆಗಳು ಮೇಡಂ.💐
    -ರಜನಿಕಾಂತ್ ಮಾತೃಭೂಮಿ

Leave a Reply to Deepa Joshi Cancel Reply

Your email address will not be published. Required fields are marked *

Scroll to Top