ಹೇರ್ ಸ್ಟೈಲ್

VIVIDLIPI – Kathasambhrama 2025 ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ.

ಕಥೆ : ಹೇರ್ ಸ್ಟೈಲ್
ಲೇಖಕರು : ಚೈತ್ರ ಎಲ್ ಹೆಗಡೆ

ಸುವಿ ಗಾಜಿನ ಬಾಗಿಲುಗಳನ್ನು ತೆರೆದು ಒಳಗೆ ಬಂದಳು. ತಣ್ಣನೆಯ ಎಸಿ ಅವಳನ್ನು ತಂಪಾಗಿ ಸ್ವಾಗತಿಸಿತು. ಬಾಗಿಲಿನಲ್ಲೇ ನಿಂತು ಒಮ್ಮೆ ಕಣ್ಣು ಹಾಯಿಸಿದಳು.  ಸ್ವಾಗತಕಾರಣಿ ಎಲ್ಲೂ ಕಾಣದೇ ಹೋದಾಗ ಟೇಬಲ್ ಮೇಲಿದ್ದ ಒಂದಿಷ್ಟು ಮಾಗಜೀನ್ ಹಿಡಿದು ಕುಳಿತಳು. 

ಒಳಗೆ ಕುಳಿತು ಊಟ ಮಾಡುತ್ತಿದ್ದ ಸ್ವಾಗತಕಾರಣಿ, ಗ್ರಾಹಕರು ಬಂದರೆಂತು ತಿಳಿಯುತ್ತಿದ್ದಂತೆ, ಗಬಕ್ಕನೆ ಎಲ್ಲ ಬಾಯಿಗೆ ಹಾಕಿಕೊಂಡು, ತಡಮಾಡದೇ ಬಂದು  “ಅಪಾಯಂಟ್ ಮೆಂಟ್ ಎಷ್ಟೊತ್ತಿಗೆ ಇದೆ” ಎಂದು ಕೇಳಿದಳು. 

“ಮೂರು ಗಂಟೆಗೆ ತೆಗೆದುಕೊಂಡಿದ್ದೆ, ನಂಗೆ ನಿಮ್ಮಲ್ಲಿರೋ ಬೆಸ್ಟ್ ಹೇರ್ ಕಟ್ ಮತ್ತು ಬೆಸ್ಟ್ ಹೇರ್ ಸ್ಟೈಲ್ ಮಾಡುವವರು ಬೇಕು. ಹಾಗಾಗಿ  ಒಂದು ತಾಸು ಮುಂಚೆನೇ ಬಂದೆ” ಎಂದಳು ಸುವಿ. 

ಒಮ್ಮೆ ಅವಳ ಮುಖ ನೋಡಿದ ಸ್ವಾಗತಕಾರಣಿ, “ಈಗತಾನೇ ಊಟದ ಸಮಯ ಮುಗಿದಿದೆ. ಮಧ್ಯಾಹ್ನ ಎರಡು ಗಂಟೆಗೆ ಕಸ್ಟಮರ್ ಗಳು ಸ್ವಲ್ಪ ಕಡಿಮೆಯೇ. ಹಾಗಾಗಿ ನಮ್ಮಲ್ಲಿರೋ ಬೆಸ್ಟ್ ಹೆರ್ ಸ್ಪೆಷಲಿಸ್ಟ್ ನಿಮ್ಮ ಕೂದಲನ್ನ ನಿಮಗೆ ಬೇಕಾದ ಹಾಗೇ ಕಟ್ ಮಾಡಿ, ನಿಮಗಿಷ್ಟದ ಹೇರ್ ಸ್ಟೈಲ್ ಮಾಡಿ ಕೊಡ್ತಾರೆ” ಎಂದ ಸ್ವಾಗತಕಾರಣಿ ಕುಳಿತುಕೊಳ್ಳುವಂತೆ ಹೇಳಿದಳು. ಹಾಗೇ ಒಂದಿಷ್ಟು ಬ್ಯೂಟಿ ಪ್ರೊಡಕ್ಟ್ ಎದುರು ತಂದಿಟ್ಟು ಟ್ರೈ ಮಾಡುವಂತೆ ಕೋರಿದಳು.  . 

ಸೌಜನ್ಯಕ್ಕಾದರೂ ಅವಳಿಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸದ ಸುವಿ, ಅವಳನ್ನು ದಿವ್ಯ ನಿರ್ಲಕ್ಷ್ಯ ಮಾಡುತ್ತ ಕಣ್ಣಲ್ಲೇ ಹೈರ್ ಸ್ಟೈಲಿಸ್ಟ್ ಅನ್ನ ಹುಡುಕತೊಡಗಿದಳು. 

ಒಂದು ಹತ್ತು ನಿಮಿಷವಾಗಿರಬೇಕು,  ಬೆಳಗಿನ ಗ್ರಾಹಕರನ್ನೆಲ್ಲ ಬೀಳ್ಕೊಟ್ಟು, ಊಟ ಮಾಡಿ ಬಂದ ಹೇರ್ ಸ್ಪಷಲಿಸ್ಟ್, ನಾನು ರೋಸಿ, “ಕಳೆದ 15 ವರ್ಷಗಳಿಂದ ಬ್ಲಾಕ್ ಎಂಡ್ ಶೈನಿ ಸಲೂನಿನಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ತನ್ನನ್ನು ತಾನು ಪರಿಚಯಿಸಿಕೊಂಡಳು. 

ನಾನು ಸುವಿ, “ ನನ್ನ ಕೂದಲಿಗೆ ಹೊಸದೊಂದು ಚಂದದ ಲುಕ್ ಕೊಡಿ. ಅದೆಷ್ಟು ಹೊತ್ತಾದರೂ ಸರಿ. ನಾನು ಕುಳಿತುಕೊಳ್ಳಲು ತಯಾರಿದ್ದೇನೆ. ಅದೆಷ್ಟು ದುಬಾರಿಯಾದರೂ ಸರಿ. ನನ್ನ ಕೂದಲು ಕಂಗೊಳಿಸಬೇಕು, ನೋಡುವವರಿಗೆಲ್ಲ ಹೊಟ್ಟೆಕಿಚ್ಚಾಗಬೇಕು” ಎಂದಳು. 

ಅಂಗೈ ಅಗಲದ ಜಡೆ ಸೊಂಟದ ಕೆಳಗೆ ಹಾಗೇ ಒಲಿದಾಡುತ್ತಿದ್ದರೂ, ಮನ ಗೆಲ್ಲುವ ಹಾಗೆ ಇತ್ತು ಸುವಿಯ ಕೂದಲು. ಒಂದು ಸಣ್ಣ ರಬ್ಬರ್ ಬ್ಯಾಂಕ್ ಹಾಕಿ ಇಳಿ ಬಿಟ್ಟರಂತೂ ಕಣ್ಣು ಕುಕ್ಕುತ್ತಿತ್ತು ಅವಳ ಕರಿ ಕೂದಲು. ಸುವಿಯ ಡಿಮಾಂಡ್ ಸರಿಯಾಗಿಯೇ ಇದೆ ಅಂದುಕೊಳ್ಳುತ್ತ ರೋಸಿ ಅವಳನ್ನು ಒಳಗೆ ಕರೆದೊಯ್ದಳು.  

ರೋಸಿ ತನ್ನ ಪಾರ್ಲರ್ ಅನ್ನ ಒಂದಿಷ್ಟು ಹೊಗಳುತ್ತ, ತಾನು ಏನೇನು ಮಾಡುತ್ತೇನೆ ಎಂದೆಲ್ಲ ಫೋಟೋ ಸಮೇತ ವಿವರಣೆ ನೀಡಿದಳು. ಪೋಟೋ ಪುಟಗಳನ್ನು ತಿರುವಿ, ಕೂದಲು ಎಷ್ಟು ತೆಗೆಯಬೇಕಾಗುತ್ತದೆ, ಏನೆಲ್ಲ ಮಾಡಬೇಕಾಗುತ್ತದೆ ಎಂದು ಇಂಚಿಂಚೂ ತಿಳಿದುಕೊಂಡು, ಒಂದು ಹೇರ್ ಕಟ್ ಆರಿಸಿಕೊಂಡಳು. ತನಗೆ ಬೇಕಾದ ಹಾಗಿದೆ ಎಂದು ಖಚಿತಪಡಿಸಿಕೊಂಡೇ, ಸುವಿ ಕನ್ನಡಿಯ ಎದುರು ಚೇರಿನಲ್ಲಿ ಕುಳಿತಳು.  

ಮೊದಲು ಉದ್ದ ಕೂದಲಿನ ಸುಧೀರ್ಘ ಸ್ನಾನವಾಯಿತು. ಬಳಿಕ ದಪ್ಪನೆಯ ಕೂದಲುಗಳನ್ನು ಎಳೆ ಎಳೆಯಾಗಿ ಬಿಡಿಸಿ ಕೆರೊಟಿನ್ ಪ್ಯಾಕ್ ಹಾಕಲಾಯಿತು. ಪ್ಯಾಕ್ ತೆಗೆದು ಸ್ಟೀಮ್ ನೀಡಲಾಯಿತು. ಸ್ಟೀಮ್ ಆದ ನಂತರ ಹದವಾದ ಬಿಸಿ ಗಾಳಿಯಲ್ಲಿ ಕೂದಲನ್ನು ಒಣಿಸಲಾಯಿತು. 

ನಲವತ್ತು ದಾಟಿದ್ದರೂ ಸುವಿ, ಹಿಂದಿಯ ತುಮಾರಿ ಸುಲು ಚಿತ್ರದ ವಿದ್ಯಾ ಬಾಲನ್ನಿಗಿಂತ ತುಸು ಹೆಚ್ಚೆ ಸುಂದರವಾಗಿದ್ದಳು. ಬೆನ್ನು ತೋರಿಸುವ ಸಣ್ಣ ಪಟ್ಟಿ ರವಿಕೆ ತೊಟ್ಟಿದ್ದ ಆಕೆ, ಹೊವಿನ ಚಿತ್ತಾರ ಇರುವ ಸೀರೆ ಉಟ್ಟಿದ್ದಳು. 

ಹಿಂದೆಲ್ಲ ಅವಳ ಕೂದಲು ಮೊಣಕಾಲುದ್ದ ಬರ್ತಿತ್ತಂತೆ. ಆದರೆ ಅದನ್ನು ಸಂಭಾಳಿಸುವದೇ ದೊಡ್ಡ ಕೆಲಸವಾಗಿದ್ದರಿಂದ ಆಗಾಗ ಕೂದಲಿಕೆ ಕತ್ತರಿ ಹಾಕುವುದು ಅನಿವಾರ್ಯವಾಗಿತ್ತಂತೆ. ಹಾಗಂತ ದಪ್ಪನೆಯ ಕಪ್ಪಾಗಿರುವ ಕೂದಲನ್ನ ಎಂದೂ ಸೊಂಟದ ಮೇಲೆ ಕತ್ತರಿಸಲು ಯಾರಿಗೂ ಬಿಟ್ಟಿಲ್ಲವಂತೆ ಹೀಗೆ ಕಥೆ ಮೇಲೆ ಕಥೆ ಹೇಳುತ್ತಲೇ ಇದ್ದಳು. . 

“ಇವತ್ತು ಮಾತ್ರ ಕೂದಲ ಅಂದವನ್ನು ಹೆಚ್ಚಿಸಿ, ಒಂದಿಷ್ಟು ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಮಿಂಚುವ ಆಸೆ. ಕೆಲವರು ಟ್ರಾವೆಲ್ ಮಾಡ್ತಾರೆ, ಅಡುಗೆ ಮಾಡ್ತಾರೆ, ಕಥೆ ಹೇಳ್ತಾರೆ.. ಹಂಗೆ ನಂಗೂ ಈ ಕೂದಲಿಗೆ ಹೊಳಪು ನೀಡಿ, ರೀಲ್ಸ್ ಮಾಡಿ ಹರಿ ಬಿಡಬೇಕು ಅಂತ ಇದೆ. ಹಂಗಾಗಿ ಹೊತ್ತಲ್ಲದ ಹೊತ್ತಲ್ಲಿ ಪಾರ್ಲರ್ ಬುಕ್ ಮಾಡಿದೀನಿ” ಅಂತ ಸುವಿ ತನ್ನೊಳಗಿನ ಇಚ್ಛೆಯನ್ನೆಲ್ಲ ಹೇಳತೊಡಗಿದಳು.  

ಇದಕ್ಕೆ ಸರಿಯಾಗಿ ರೋಸಿ ಕೂಡ, “ ತುಂಬ ಒಳ್ಳೆ ಟೈಮ್ ಚೂಸ್ ಮಾಡಿದಿರಾ ನೀವು, ಇಲ್ಲಾ ಅಂದ್ರೆ ಬೆಳಗ್ಗೆ ಬೆಳಗ್ಗೆ ಯಾರನ್ನೂ ನೋಡೋಕೆ ಪುರುಸೊತ್ತೇ ಇರೊಲ್ಲ. ಹಂಗೆ ಸಂಜೆ ಅಂದ್ರೆ, ಕೆಲ್ಸ ಬಿಟ್ಟು ಮನೆಗೆ ಹೋಗೋ ಗಡಿಬಿಡಿಲಿ ಒಂದಿಷ್ಟು ಕಸ್ಟಮರ್ ಐಬ್ರೋ, ವಾಕ್ಸ್ ಅಂತ ಬಂದು ಹೋಗ್ತಾರೆ. ಈ ಟೈಂ ಮಾತ್ರ ಆಡ್ ಟೈಂ. ಇಷ್ಟೊತ್ತಿಗೆ ಯಾರಿಗೂ ಬರೋಕೆ ಇಷ್ಟ ಇರೋಲ್ಲ, ನಿಮಗೆ ಹೆಂಗ್ ಬೇಕೋ ಹಂಗೆ ಮಾಡಿ ಕೊಡ್ತಿವಿ ಬಿಡಿ” ಅಂದಳು

ಕೂದಲಿಗೆ ಆರೈಕೆಯನ್ನೆಲ್ಲ ಮುಗಿಸಿ, ಕಟ್ಟಿಂಗ್ ಗೆ ಬರೋವಷ್ಟರಲ್ಲಿ ಬರೋಬ್ಬರಿ ಎರಡು ತಾಸು ಕಳೆದುಹೋಗಿತ್ತು. ರೋಸಿ ಮತ್ತು ಸುವಿಯ ಮಾತುಕತೆ ಎಷ್ಟು ಜೋರಾಗಿ ನಡೆದಿತ್ತೆಂದರೆ, ಆ ಎರಡು ತಾಸಿನಲ್ಲಿ ಅವರಿಬ್ಬರೂ ಜನ್ಮ ಜನ್ಮಾಂತರದ ಸ್ನೇಹಿತರೇನೋ ಎನ್ನವಷ್ಟು ಸಲಿಗೆ ಉಂಟಾಗಿತ್ತು. ಸುವಿ ನಿಷ್ಕಲ್ಮಶವಾಗಿ ತಾನು ಪುಟ್ಟ ಹುಡುಗಿ ಇದ್ದಾಗಿನಿಂದ ಈ ಕೂದಲಿಗೆ ಬಂದ ಹೊಗಳಿಕೆಯನ್ನೆಲ್ಲ ಹಂಚಿಕೊಂಡಳು. ಕಾಲೇಜಿನಲ್ಲಿ ಹುಡುಗರು ತನಗಿಂತ ಹೆಚ್ಚು ಕೂದಲಿಗಾಗಿಯೇ ತನ್ನ ಹಿಂದೆ ಬಿದ್ದಿದ್ದರು ಎಂಬುದನ್ನೆಲ್ಲ ಹೇಳಿದಳು. ಅಷ್ಟೇ ಅಲ್ಲದೇ, ತನ್ನ ಪತಿರಾಜನಗೆ ಕೂಡ ಕೂದಲೆಂದರೆ ಇಷ್ಟವೋ ಇಷ್ಟ ಎನ್ನುತ್ತ ಸುವಿ ಸ್ಟೀಮ್ ತೆಗೆದುಕೊಳ್ಳುವುದರ ನಡುವೆಯೂ ನಾಚಿಕೆ ಪಟ್ಟುಕೊಂಡಿದ್ದಳು. 

ಈ ಮಾತಿನ ಮಧ್ಯೆ, ಸುವಿಯ ಉದ್ದನೆಯ ಕೂದಲನ್ನು ಹತ್ತಾರು ಬೇರೆ ಬೇರೆ ಭಾಗಗಳನ್ನಾಗಿಸಿ ರೋಸಿ ಕತ್ತರಿ ಉಪಯೋಗಿಸತೊಡಗಿದಳು. ಭುಜದಿಂದ ಸೊಂಟದವರೆಗೂ ಲೇಯರ್ಸ್ ಮೇಲೆ ಲೇಯರ್ಸ್  ಮಾಡಿ, ಡೀಪ್ ವಿ ಆಕಾರದಲ್ಲಿ ಕೂದಲನ್ನು ಕತ್ತರಿಸಿದ್ದಳು. “ನಿಮ್ಮ ಕೂದಲಿಗೆ ಹಿಂದೆಂದೂ ಇಷ್ಟು ಸುಂದರವಾದ ಹೇರ್ ಕಟ್ ನೋಡಿರಲಾರಿರಿ” ಎಂದು ಎದುರು ಇರುವ ಕನ್ನಡಿಯಲ್ಲಿ ಸುವಿಗೆ ಕಾಣುವಂತೆ ಮತ್ತೊಂದು ಕನ್ನಡಿಯನ್ನು ರೋಸಿ ಹಿಡಿದು ನಿಂತಳು. 

ಕನ್ನಡಿಯೊಳಗಿನ ತನ್ನ ಕೂದಲಿನ ಸೌಂದರ್ಯ ನೋಡಿ ಸುವಿ ಕಣ್ಣುಗಳು ಅರಳಿದವು. ಕನ್ನಡಿಯ ಹತ್ತಿರ ತೆರಳಿ, ದೂರ ತೆರಳಿ ಹೀಗೆ ಹಿಂದೆ ಮುಂದೆ ಎಲ್ಲೆಡೆ ಕನ್ನಡ ಹಿಡಿದು  ತನ್ನ ಕೂದಲನ್ನು ಮತ್ತೆ ಮತ್ತೆ ನೋಡಿ ಸಮಾಧಾನಪಟ್ಟುಕೊಂಡಳು. ಏನೋ ನೆನಪಾದವಳಂತೆ, ತನ್ನ ಐಫೋನ್ ತೆಗೆದು ರೋಸಿ ಕೈಗೆ ಇಟ್ಟಳು. “ಅದೆಷ್ಟು ಸುಂದರವಾಗಿ ಹೇರ್ ಕಟ್ ಮಾಡಿ ಹೊಸ ಲುಕ್ ನೀಡಿದ್ದೀರೋ, ಹಾಗೇ ಒಂದೆರೆಡು ಹೇರ್ ಸ್ಟೈಲ್ ಮಾಡಿ, ಒಂದಿಷ್ಟು ಸುಂದರ ಫೋಟೋಗಳನ್ನು ತೆಗೆದುಕೊಡಿ ಪ್ಲೀಸ್”, ಎಂದು ಅಂಗಲಾಚಿದಳು. 

 “ಮನೆ ಕೆಲಸ ಮಾಡಿಯೇ ಸುಸ್ತಾಗುವ ಗೃಹಿಣಿಯರು, ತಮ್ಮ ಬಗ್ಗೆ ಕಾಳಜಿ ತೋರುವುದೇ ಅಪರೂಪ. ಅಂಥಹದ್ದರಲ್ಲಿ ನಿಮ್ಮ ಜೀವನೋತ್ಸಾಹ ಮೆಚ್ಚುವಂಥದ್ದೆ. ಕೊಡಿ ಮೊಬೈಲನ್ನ,” ಎಂದು ರೋಸಿ ಫೋಟೋ ವಿಡಿಯೋ ಎಲ್ಲ ಮಾಡಿ ಸುವಿಗೆ ತೋರಿಸತೊಡಗಿದಳು. ಸುವಿಯ ಬಾಯಲ್ಲಿ ಸಾಕು ಎನ್ನುವ ಪದ ಬರಲೇ ಇಲ್ಲ. ಅವಳೆಷ್ಟು ಫೋಟೋ ವಿಡಿಯೋ ಮಾಡುತ್ತಿದ್ದಳೋ, ಅದೆಲ್ಲವನ್ನೂ ಸೈ ಎನ್ನುತ್ತ ಮಾಡಿಸಿಕೊಳ್ಳತೊಡಗಿದಳು. 

ಎರಡು ಗಂಟೆಗೆ ಬಂದಿದ್ದ ಸುವಿ, ಐದು ಗಂಟೆಯ ಮೇಲಾದರೂ ಹೊರಡಲು ತಯಾರಿರಲಿಲ್ಲ. ರೋಸಿಗೆ ಇತರ ಬುಕ್ಕಿಂಗ್ ಕೂಡ ನೋಡಿಕೊಂಡು, ಬೇರೆ ಗ್ರಾಹಕರನ್ನೂ ವಿಚಾರಿಸಬೇಕಿತ್ತು. ಹಾಗೆಂದು ಸುವಿಯನ್ನು ಏಕಾಏಕಿ ಹೊರದಬ್ಬುವ ಹಾಗೂ ಇರಲಿಲ್ಲ.  “ಇನ್ನು ಹದಿನೈದು ನಿಮಿಷ ನಾನು ನಿಮ್ಮೊಂದಿಗೆ ಕಳೆಯಬಹುದು, ಏಕೆಂದರೆ ನನಗೆ ಐದು ಮೂವತ್ತಕ್ಕೆ ಸರಿಯಾಗಿ ಇನ್ನೊಬ್ಬ ಗ್ರಾಹಕರು ಬರುವುದಾಗಿ ಹೇಳಿದ್ದಾರೆ, ಅವರು ನಿಮಗಿಂತ ಮುಂಚೆಯೇ ಹೇಳಿದ್ದರಿಂದ ನಾನು ಹೋಗದೆ ಇದ್ದರೆ ಸರಿಯಾಗದು” ಎಂದು ಸಂಕೋಚದಿಂದಲೇ ರೋಸಿ ಹೇಳಿದಳು. 

ಅವಳ ಕೈಯಿಂದ ಮೊಬೈಲನ್ನು ತೆಗೆದುಕೊಂಡ ಸವಿ, ಒಂದು ಫೋಟೋ ವಾಟ್ಸಾಪ್ ಡಿಪಿ ಮಾಡಿಕೊಂಡು, ಇನ್ನೊಂದು ವಿಡಿಯೋವನ್ನು ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿ, “ಆಯಿತು, ಆಯಿತು, ಇನ್ನೇನೂ ಬೇಡ ಕ್ಲೀನ್ ಶೇವ್ ಮಾಡಿಬಿಡಿ” ಎಂದು ಸುವಿ ಮತ್ತೆ ಚೇರಿನ ಮೇಲೆ ಬಂದು ಕುಳಿತಳು.  

ಸುವಿಯ ಮಾತನ್ನು ಅರ್ಥ ಮಾಡಿಕೊಳ್ಳಲಾಗದ ರೋಸಿ, ಸಾವಿರ ಪ್ರಶ್ನೆ ಹೊತ್ತ ಕಣ್ಣುಗಳೊಂದಿಗೆ ಅವಳ ಮುಖವನ್ನು ದಿಟ್ಟಿಸಿದಳು.  

ನನ್ನ ದೇಹವನ್ನು ಆಕ್ರಮಿಸಿಕೊಂಡಿರೋ ಕ್ಯಾನ್ಸರ್  ಮುಂದೆ ನನ್ನ ಕೂದಲುಗಳನ್ನು ಕಿತ್ತುಕೊಳ್ಳಲಿದೆಯಂತೆ. ಕಣ್ಣ ಮುಂದೆ ಈ ದಟ್ಟನೆಯ ಕೂದಲು ಆಕಾರವಿಲ್ಲದೇ ಕರಗಿ ಹೋಗುವುದನ್ನು ನೋಡುವುದಕ್ಕಿಂತ ಮುಂಚೆ ನಾನೇ ತೆಗ್ಸೋದೇ ಒಳ್ಳೇದಲ್ವಾ. ಈ ಸುಂದರ ಕೂದಲನ್ನ ಇಂದು ಸಮಾಧಾನವಾಗುವಷ್ಟು ಕಣ್ತುಂಬಿಕೊಂಡಿದ್ದೇನೆ. ಆಲ್ ಥ್ಯಾಂಕ್ಸ್ ಟು ಯೂ… ಹುಬ್ಬೊಂದು ಬಿಟ್ಟು. ಬೇರೆಲ್ಲೇ ಕೂದಲು ಕಂಡರೂ ತೆಗೆದುಬಿಡಿ ಎಂದು ಸುವಿ ಗಟ್ಟಿಯಾಗಿ ಕಣ್ಣುಮುಚ್ಚಿ ಕುಳಿತಳು. ….

……………………….

ಕಚಗುಳಿ ನೀಡುತ್ತಿದ್ದ ಪುಟ್ಟ ಪುಟ್ಟ ಕಥೆಗಳೆಲ್ಲ ಮಾಯವಾಗಿ, ಕೋಣೆಯಲ್ಲಿ ಬರುತ್ತಿದ್ದ ಇಂಪಾದ ಸಂಗೀತವೂ ಕೇಳದ ಹಾಗೇ ರೇಸರ್ ಶಬ್ಧ ಜೋರಾಗತೊಡಗಿತು. …

2 thoughts on “ಹೇರ್ ಸ್ಟೈಲ್”

Leave a Reply to A. R. Hariprasad Cancel Reply

Your email address will not be published. Required fields are marked *

Scroll to Top